ವಿಭಾಗಗಳು
ಲೇಖನಗಳು

ಕಾಲೋನಿ ಗಣೇಶೋತ್ಸವ

2006ರಲ್ಲಿ ಬರೆದಿದ್ದ ಲೇಖನ – ಮರುಪ್ರಕಟಣೆ

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್.

ಇದು ಗಣೇಶಾಥರ್ವಶೀರ್ಷದಲ್ಲಿ ಬರುವ ಒಂದು ಶ್ಲೋಕ. (ಒಂದು ದಂತ ಉಳ್ಳವನೂ ಬಗ್ಗಿರುವ ಸೊಂಡಿಲಿನವನೂ ಆದ ಆ ಭಗವಂತ ಬುದ್ಧಿಯನ್ನೂ ಮತ್ತು ಸ್ಫೂರ್ತಿಯನ್ನೂ ನೀಡಲಿ ಎಂದರ್ಥ).

ಗಣಪತಿ ಬಾಪ್ಪಾ ಮೋರಿಯಾ
ಪುಡಚ್ಯಾ ವರ್ಷೀ ಲವಕರ್ ಯಾ
ಇದು ಮರಾಠಿಯಲ್ಲಿ ಗಣಪತಿಗಾಗಿ ಹೇಳುವ ಹಾಡು.

ಇದರರ್ಥ, ’ಓ ಗಣಪತಿ ದೇವನೇ ಮುಂದಿನ ವರ್ಷ ಬೇಗ ಬಾ’ ಎಂದು. ಮರಾಠಿ ಭಾಷಿಗರಿಗೆ ಮನೆಯಲ್ಲಿ ಎಂದೂ ಗಣಪತಿ ಇರಲಿ ಎಂಬ ಆಶಯ. ಆದರೇನೂ ಹಬ್ಬದ ದಿನದಿಂದ ಹತ್ತು ದಿನಗಳು ಮಾತ್ರ ಇದ್ದು ನಂತರ ಅನಂತ ಚತುರ್ದಶಿಯ ದಿನ ಆತ ಹೊರಟು ಬಿಡುವನು.
ಅವನ ಮೇಲೆ ಅತಿಯಾದ ಪ್ರೇಮದಿಂದ ಭಕ್ತಾದಿಗಳು ಹಾಡಿ ಹೊಗಳುವರು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಎಂತಹ ಅವಘಡವಾದರೂ ಸಾರ್ವಜನಿಕ ಗಣೇಶೋತ್ಸವದ ಕಳೆ ಮಾತ್ರ ಕುಂದುವುದಿಲ್ಲ. ಆದರೆ ಈ ವರ್ಷ ಮಾತ್ರ ಸರಕಾರವು ಕೆಲವು ನಿಬಂಧನೆಗಳ ಮೇರೆಗೆ ಸಾರ್ವಜನಿಕ ಉತ್ಸವವನ್ನು ನಡೆಸಲು ನಿರ್ಧರಿಸಿದೆ. ನಮ್ಮಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಚಿಕ್ಕ ಗಣಪತಿಗಳನ್ನು ಪೂಜಿಸುವೆವು. ಸಾರ್ವಜನಿಕ ಗಣೇಶೋತ್ಸವ ಅಲ್ಲಲ್ಲಿ ನಡೆಯುವುದು. ಆದರಿಲ್ಲಿ ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ (೧೮೯೪) ಜನರನ್ನು ಒಗ್ಗೂಡಿಸಲು ಈ ಉತ್ಸವದ ಆಚರಣೆಯನ್ನು ಬಾಲ ಗಂಗಾಧರ ತಿಲಕರು ಪುಣೆಯಲ್ಲಿ ಪ್ರಾರಂಭಿಸಿದರು. ಅವರ ಕಾರ್ಯದಿಂದ ರಾಷ್ಟ್ರದಲ್ಲಿ ಆ ಕಾಲಕ್ಕೆ ಅವಶ್ಯವಾದ ಜನಬಲವೆಂಬ ಒಂದು ದೊಡ್ಡ ಶಕ್ತಿಯ ನಿರ್ಮಾಣವಾಯಿತು. ಹಾಗೇ ೧೯೦೬ರಲ್ಲಿ ಸ್ವಾತಂತ್ರ್ಯ ಹೋರಾಟದ ವೀರ ಸಹೋದರರಾದ ಗಣೇಶ್ ಮತ್ತು ವಿನಾಯಕ್ ಸಾವರ್ಕರ್ ಅವರುಗಳು ಇದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳನ್ನು ಉಪಯೋಗಿಸಿಕೊಂಡು ಬ್ರಿಟಿಷರ ವಿರುದ್ಧ ಸಿಡಿದೇಳುವಂತೆ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದರು. ಪುಣೆ ಮಹಾರಾಷ್ತ್ರದ ಸಾಂಸ್ಕೃತಿಕ ರಾಜಧಾನಿ ಎಂದು ಕರೆದರೂ ತಪ್ಪಾಗಲಾರದು. ಅಲ್ಲಿಯ ದಗಡೂ ಶೇಟ್ ಗಣಪತಿ ವಿಶ್ವ ಪ್ರಸಿದ್ಧ.

ಅತಿಯಾದ ಮಳೆಯಿಂದಾದ ಜಲಪ್ರಳಯದ ಹಿಂದೆಯೇ ಸಾಂಕ್ರಾಮಿಕ ರೋಗದ ಭೀತಿ, ಅದರ ಹಿಂದೆಯೇ ಹಳೆಯ ಕಟ್ಟಡಗಳ ಕುಸಿತ ಮತ್ತು ಸಾವಿರಾರು ಜನಗಳ ಸಾವು. ಹೀಗೆ ಒಂದರ ಹಿಂದೊಂದರಂತೆ ಕೆಟ್ಟದ್ದನ್ನೇ ಎದುರಿಸುತ್ತಿರುವ ಮುಂಬಯೀಕರರು ಇವೆಲ್ಲವನ್ನೂ ಕೆಟ್ಟ ಕನಸನ್ನು ಮರೆಯುವಂತೆ ಮರೆತು ಗಣೇಶೋತ್ಸವವನ್ನು ಆಚರಿಸಲು ಪ್ರಯತ್ನಿಸುತ್ತಿರುವುದು ಮಾನವ ಜನಾಂಗಕ್ಕೆ ಒಂದು ದೊಡ್ಡ ನೀತಿ ಪಾಠ. ತಲೆಯ ಮೇಲೆ ಕೈ ಹೊತ್ತು ಕೂರದೇ ಮುನ್ನಡೆಯುವುದರಲ್ಲೇ ಜೀವನ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.

ಯಾವುದೇ ದೇವರಿಗೆ ಪೂಜಿಸುವ ಮೊದಲು ಗಣಪನಿಗೆ ಪೂಜಿಸುವ ನಿಯಮವಿದೆ. ಎಲ್ಲ ವಿಘ್ನಗಳನ್ನು ನಿವಾರಿಸುವ ದೈವ ಆದ್ದರಿಂದ ಅವನಿಗೇ ಅಗ್ರ ಪೂಜೆ. ಗಣಪತಿ ತಿಳುವಳಿಕೆ ಮತ್ತು ಅದೃಷ್ಟವನ್ನು ತಂದುಕೊಡುವ ದೈವ. ಆ ಸಿದ್ಧಿ ಬುದ್ಧಿಯರನ್ನೇ ಆತನ ಪತ್ನಿಯರೆಂದೂ ತಿಳಿಯುವೆವು.

ಹತ್ತು ದಿನಗಳು ಮೂರ್ತಿಯನ್ನು ಕುಳ್ಳಿರಿಸಿ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಹತ್ತನೆಯ ದಿನ ಅನಂತಚತುರ್ದಶಿಯೂ ಆಗಿದ್ದು, ಅಂದು ಗಜಾನನ ಮೂರ್ತಿಯನ್ನು ಹತ್ತಿರದ ಕೆರೆ ಕೋಡಿ ಅಥವಾ ಸಮುದ್ರದ ಪಾಲು ಮಾಡುವರು. ಮನೆಗಳಲ್ಲಿ ಚಿಕ್ಕ ಚಿಕ್ಕ ಮೂರ್ತಿಗಳನ್ನೂ ಸೊಸೈಟಿ ಕಾಲೋನಿಗಳಲ್ಲಿ (ಇಲ್ಲೆಲ್ಲಾ ಬಹು ಮಹಡಿ ಕಟ್ಟಡಗಳಿದ್ದು, ಎಲ್ಲರೂ ಸೊಸೈಟಿ ಮಾಡಿಕೊಂಡಿರುವರು), ದೊಡ್ಡ ದೊಡ್ಡ ಗಣಪತಿಗಳನ್ನೂ ಇಟ್ಟು ಪೂಜಿಸುವರು. ಮೂರ್ತಿಯನ್ನು ಹಬ್ಬದ ದಿನದಂದೇ ತರುವರು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸುತ್ತಿದ್ದ ಮೂರ್ತಿಯಿಂದ ವಾತಾವರಣ ಕಲುಷಿತವಾಗುವುದೆಂದು ಈಗೀಗ ಎಲ್ಲ ಕಡೆಗಳಲ್ಲೂ ಮಣ್ಣಿನ ಮೂರ್ತಿಗೆ ಬೇಡಿಕೆ ಜಾಸ್ತಿಯಾಗಿದೆ. ಜನರು ಗಣಪತಿ ತಯಾರಿಸುವ ಸ್ಥಳಕ್ಕೆ ಬಾಜಾ ಭಜಂತ್ರಿಗಳೊಡನೆ ಗುಂಪು ಗುಂಪಾಗಿ ಹೋಗಿ ಚೌತಿಯಂದೇ (ಹಬ್ಬದ ದಿನ) ಗಣೇಶನ ಮೂರ್ತಿಯನ್ನು ಖರೀದಿಸುವರು. ಇದಕ್ಕಾಗಿ ಮುಂಗಡವಾಗಿ ಬುಕಿಂಗ್ ಮಾಡಿರುವರು. ಅಲ್ಲಿ ಸ್ವಾಮಿಯ ಮೂರ್ತಿಗೆ ಪೂಜೆ ಸಲ್ಲಿಸಿ ಆ ಮೂರ್ತಿ ನಿರ್ಮಿಸಿದವನಿಗೆ ತಾಂಬೂಲ ಸಹಿತ ಹಣ ಕೊಡುವ ಪದ್ಧತಿ ಇದೆ. ನಮ್ಮಲ್ಲಿಯ ಹಾಗೆ ಒಂದು ವಾರದ ಮೊದಲೇ ದೇವರು ಕೊಂಡರೆ ಬೆಲೆ ಕಡಿಮೆ – ಹಬ್ಬದ ದಿನ ಜಾಸ್ತಿ ಎಂಬುದು ಇಲ್ಲಿ ಇಲ್ಲವೇ ಇಲ್ಲ. ಎಲ್ಲ ದಿನಗಳಲ್ಲೂ ಒಂದೇ ಬೆಲೆ. ಮೂರ್ತಿಯನ್ನು ತರುವಾಗ ಅದರ ತಲೆಯ ಮೇಲೆ ಒಂದು ಬಟ್ಟೆ ಹಾಕಿರುವರು ಮತ್ತು ತರುವವರು ತಲೆಗೆ ಬಿಳಿ ಟೊಪ್ಪಿಗೆಯನ್ನು ಧರಿಸಿರುವುದು ವೈಶಿಷ್ಟ್ಯ.
ಮೂರ್ತಿಯ ತಲೆಯ ಮೇಲೆ ಬಟ್ಟೆ ಏಕೆ ಹಾಕುವರೆಂದು ನನಗಿನ್ನೂ ತಿಳಿಯದಾಗಿದೆ. ಕೆಲವರು ಹೇಳುತ್ತಾರೆ ದೇವ ಆಚೆ ಕಡೆಗೆ ನೋಡಬಾರದು – ನೋಡಿದ್ರೆ ಓಡಿ ಹೋಗ್ತಾನೆ ಅಂತ. ದೇವರನ್ನು
ಹಿಡಿದಿಡುವಷ್ಟು ಶಕ್ತಿ ನಮ್ಮಲ್ಲಿದೆಯೇ? ಆ ದೇವರು ಯಾರು ಅನ್ನೋದೇ ತಿಳಿದುಕೊಳ್ಳಕ್ಕೆ
ಇನ್ನೂ ಆಗಿಲ್ಲ. ಆದರಿದು ಇಲ್ಲಿ ನಡೆದು ಬಂದ ಪದ್ಧತಿ.

ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಸಾಂಗವಾಗಿ ಪೂಜೆ ನಡೆಯುವುದು. ಸಂಜೆಯ ಆರತಿ ನೋಡಲು ಎರಡು ಕಣ್ಣುಗಳು ಸಾಲದು. ಮರಾಠಿಯಲ್ಲಿರುವ ಭಜನೆಯನ್ನು ಬೇರಿನ್ಯಾವ ಭಾಷೆಯಲ್ಲೂ
ಆನಂದಿಸಲಾಗುವುದಿಲ್ಲ. ಅದರದೇ ಆದ ವೈಶಿಷ್ಟ್ಯ. ಆರತಿ ೧೫ ನಿಮಿಷಗಳಿಂದ ಅರ್ಧ
ತಾಸಿನವರೆವಿಗೂ ನಡೆಯುವುದು. ಆರತಿಯ ಸಮಯದಲ್ಲಿ ಹಾಡುವ ಭಜನೆ ತುಂಬಾ ಶ್ರಾವ್ಯವಾಗಿರುತ್ತದೆ. ಆರತಿಯಲ್ಲಿ ಹಾಡುವ ಕೆಲವು ತುಣುಕುಗಳು ಹೀಗಿವೆ –

೧) ಸುಖಕರ್ತಾ ದು:ಖಹರ್ತಾ ವಾರ್ತಾ ವಿಘ್ನಾಚೀ
ನುರವೀ ಪುರವೀ ಪ್ರೇಮ್ ಕೃಪಾ ಜಯಾಚೀ

೨) ಜಯ ಗಣೇಶ್ ಜಯ ಗಣೇಶ್ ಜಯ ಗಣೇಶ ದೇವಾ
ಮಾತಾ ಜಾಕೀ ಪಾರ್ವತೀ ಪಿತಾ ಮಹದೇವಾ

ಆರತಿ ಮಾಡುವಾಗ ದೇವಿ, ಅಂಬೆ, ಶಂಕರ, ವಿಠ್ಠಲರ ಭಜನೆಗಳನ್ನೂ ಹಾಡುವರು. ಹಾಡುತ್ತಾ
ಕೇಳುತ್ತಾ ಜನ ಮಂತ್ರಮುಗ್ಧರಾಗುವರು. ತಿಲಕರು ಎಂತಹ ಘನಕಾರ್ಯ ಮಾಡಿದರು. ಇಂತಹ ಕಾರ್ಯಗಳಿಂದ ಜನರನ್ನು ಒಗ್ಗೂಡಿಸುವುದು ಸುಲಭಸಾಧ್ಯವಲ್ಲವೇ? ನಗರದಲ್ಲೇ ಹೀಗಿದ್ದ
ಮೇಲೆ ಇನ್ನು ಹಳ್ಳಿಗಳಲ್ಲಿ ಈ ಹಬ್ಬದ ಸಂಭ್ರಮ ಹೇಳಲಸಾಧ್ಯ.

ಮುಂಬೈನಲ್ಲಿ ಲಾಲ್ಬಾಗ್ ಪ್ರದೇಶ ಇದಕ್ಕೆ ಬಹಳ ಪ್ರಸಿದ್ಧ. ಇಲ್ಲಿ ಬಹು ದೊಡ್ಡ ದೊಡ್ಡ ಗಣಪತಿಯ ಮೂರ್ತಿಗಳನ್ನು ನೋಡಬಹುದು. ಹಾಗೇ ವಡಾಲಾ ಮತ್ತು ಥಾಣೆ ಪ್ರದೇಶಗಳೂ ಗಣಪತಿ ಹಾಗೇ ಮಹಾರಾಷ್ಟ್ರದಲ್ಲಿ ಪುಣೆ ಮತ್ತು ಕೊಂಕಣ ಪ್ರದೇಶಗಳು ವಿಜೃಂಭಣೆಯಿಂದ ಹಬ್ಬವನ್ನಾಚರಿಸುವರು. ಮುಂಬೈ ನಗರದಲ್ಲಿ ೮೨೦೦ ಗಣಪತಿ ಮಂಡಳಿಗಳಿವೆ ಎಂದು ಸುದ್ದಿ ಪತ್ರಿಕೆಗಳು ತಿಳಿಸಿವೆ. ಗಲ್ಲಿ ಗಲ್ಲಿಗಳಲ್ಲೂ ಸಾರ್ವಜನಿಕ ಗಣೇಶನನ್ನು ಕೂರಿಸಿ ಸಂಭ್ರಮದಿಂದ ನಲಿಯುವರು. ಮೈಕ್ ಹಾಕಿಕೊಂಡು ಅಬ್ಬರ ಮಾಡುವ ಆ ನಲಿದಾಟ ಕೆಲವರಿಗೆ ಕಿರುಕುಳ ಆಗಿ ಕೋರ್ಟಿನ ಮೆಟ್ಟಲನ್ನೂ ಹತ್ತಿದ್ದಾರೆ. ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ ಹತ್ತರ ಮೇಲೆ ಮೈಕ್ ಹಾಕಬಾರದೆಂದು ನಿರ್ದೇಶಿಸಲಾಗಿದೆ. ಇನ್ನು ಮನೆಗಳಲ್ಲಿ, ಇರುವ ಸಣ್ಣ ಜಾಗದಲ್ಲಿ ಗಣಪತಿಗೆ ಪ್ರತ್ಯೇಕ ಮಂಟಪ ಮಾಡಿ ಅದರಲ್ಲಿ ಮೂರ್ತಿಯನ್ನಿಟ್ಟು ಪೂಜಿಸುವರು. ಯಾವಾಗಲೂ ಮನೆಯಲ್ಲಿ ಒಬ್ಬರಾದರೂ ಇದ್ದೇ ತೀರಬೇಕು. ಗಣಪನನ್ನು ಒಂಟಿಯಾಗಿ ಬಿಡಲು ತಯಾರಿಲ್ಲ. ಮೋದಕ, ಕರ್ಜಿಕಾಯಿ, ಪಂಚ ಕಜ್ಜಾಯದ ನೈವೇದ್ಯ ಮಾಡಿ ಪ್ರಸಾದವೆಂದು ಎಲ್ಲರಿಗೂ ಹಂಚುವರು. ಪುಣೆಯಲ್ಲಂತೂ ಇದು ಒಂದು ನಾಡ ಹಬ್ಬದಂತೆಯೇ. ಮೈಸೂರಿನ ದಸರಾ ಸಂಭ್ರಮವನ್ನು ನೋಡಲು ಹೇಗೆ ವಿದೇಶದಿಂದೆಲ್ಲಾ ಪ್ರವಾಸಿಗರು ಬರುವರೋ ಹಾಗೆ ಇಲ್ಲಿ ಗಣೇಶೋತ್ಸವವನ್ನು ನೋಡಲು ಬರುವರು.

ಇನ್ನು ಎಂತೆಂತಹ ಗಣಪತಿಗಳನ್ನು ನೋಡಬಹುದು ಎಂದರೆ – ಶ್ರೀಮಂತ ಗಣಪತಿ, ಎತ್ತರದ ಗಣಪತಿ, ಜಾತ್ಯಾತೀತ ಗಣಪತಿ, ಇಂದಿನ ಸಮಾಜದ ಸ್ಥಿತಿ ಬಿಂಬಿಸುವ ಎಲ್ಲ ರೀತಿಯ ಗಣಪತಿಗಳನ್ನು ನೋಡಬಹುದು. ಎತ್ತರದ ಗಣಪತಿ ೧೨ ಅಡಿ ಎತ್ತರದವರೆವಿಗೆ ಇರುವುದನ್ನು ಕಂಡಿರುವೆ. ಹಾಗೇ ಅತ್ಯಂತ ಶ್ರೀಮಂತ ಗಣಪತಿ ಕನ್ನಡಿಗರದ್ದೇ ಆದ ವಡಾಲಾದಲ್ಲಿಯ ಗೌಡ ಸಾರಸ್ವತ ಬ್ರಾಹ್ಮಣರ ಸಮಾಜದ ಗಣಪತಿಯ ಚಿನ್ನದ ಕಿರೀಟದ ತೂಕ ೨೨ ಕಿಲೋಗ್ರಾಂಗಳು. ಆ ಮೂರ್ತಿಯ ಮೈ ಮೇಲೆ ೫೦ ಕಿಲೋಗ್ರಾಂ ಚಿನ್ನ ಮತ್ತು ೪೦೦ ಕಿಲೋಗ್ರಾಂಗಳ ಬೆಳ್ಳಿಯ ಆಭರಣ ತೊಡಿಸುವರು. ಆ ಮೂರ್ತಿಯ ಕೈ ಮತ್ತು ಮೋದಕದ ತೂಕ ೬ ಕಿಲೋಗ್ರಾಂ ಚಿನ್ನದ್ದಾಗಿರುತ್ತದೆ. ಸಿಂಹಾಸನವನ್ನು ೪೦೦ ಕಿಲೋಗ್ರಾಂ ಬೆಳ್ಳಿಯಿಂದ ಮಾಡಲಾಗಿದೆ. ಆ ಗಣಪತಿಯ ಒಂದು ಭಾವಚಿತ್ರವನ್ನು ಇಲ್ಲಿ ಹಾಕಲಾಗಿದೆ. ಈ ಗಣಪತಿಯ ರಕ್ಷಣೆಗೇ ಹಗಲಿರುಳೂ ವಿಶೇಷ ಕಾವಲು ಕಾಯುವುದು.

ಇನ್ನು ಗಣಪತಿ ಮಂಡಲಿಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪಾತ್ರವೇನೂ ಕಡಿಮೆಯದ್ದಲ್ಲ. ಕಿಂಗ್ಸ್ ಸರ್ಕಲ್ ನಲ್ಲಿರುವ ಒಂದು ಗಣಪತಿ ಮಂಡಳಿಯಲ್ಲನ್ನು ಆರಂಭಿಸಿದವರು ಕ್ರಿಶ್ಚಿಯನ್ನರು ಮತ್ತು ನಡೆಸುತ್ತಿರುವ ೧೨ ಜನಗಳಲ್ಲಿ ೪ ಜನ ಮುಸ್ಲಿಮರು ಇದ್ದಾರೆ.

ಅಂತೆಯೇ ನಮ್ಮ ಕ್ವಾರ್ಟರ್ಸಿನಲ್ಲಿಯೂ ದೊಡ್ಡದಾದ ಗಣಪತಿಯನ್ನು ಕುಳ್ಳಿರಿಸಿ ಪೂಜೆಗೈಯುವರು. ಈ ವರ್ಷ ನಮ್ಮ ಕಾಲೋನಿಗೆ ಮತ್ತೆ ಗಣಪತಿ ಬರುತ್ತಿದ್ದಾನೆ. ಅವನನ್ನು ಎದುರುಗೊಳ್ಳಲು ಎಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿವೆ. ೨೫೦ಕ್ಕೂ ಹೆಚ್ಚಿನ ಮನೆಯವರೆಲ್ಲರೂ ಒಂದು ಕುಟುಂಬದವರಂತೆ ವರ್ತಿಸುತ್ತಾ ೧೦ ದಿನಗಳವರೆವಿಗೆ ಗಣಪತಿಯನ್ನು ಪೂಜಿಸುವರು. ೧೯೮೫ರಲ್ಲಿ ರಿಸರ್ವ್ ಬ್ಯಾಂಕ್ ಆಫೀಸರ್ ಕಾಲೋನಿಯಲ್ಲಿ ಗೋರೆಗಾಂವಿನ ಗೋಕುಲಧಾಮದಲ್ಲಿ ಗಣೇಶೋತ್ಸವ ಪ್ರಾರಂಭವಾಯಿತು. ಮೊದಲ ವರ್ಷದಿಂದಲೇ ಗಣಪತಿಯನ್ನು ಕುಳ್ಳಿರಿಸುತ್ತಿದ್ದಾರೆ. ಆಗ ಚೆನ್ನೈನಿಂದ ವರ್ಗವಾಗಿ ಬಂದಿದ್ದ ಕೆಲವು ಉತ್ಸಾಹ ವೈದಿಕ ಸಂಪ್ರದಾಯಸ್ಥ ಗೆಳೆಯರ ಬಳಗ ಈ ಉತ್ಸವವನ್ನು ಪ್ರಾರಂಭಿಸಿತು. ಪ್ರತಿವರ್ಷವೂ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ದೇಣಿಗೆ ಸ್ವೀಕಾರ ಮತ್ತು ಉತ್ಸವದ ಆಚರಣೆಗೆ ಸಕಲ ಸಿದ್ಧತೆಗಳ ಕೆಲಸ ಪ್ರಾರಂಭಿಸುತ್ತಾರೆ. ಮೊದಲೇ ನಿಗದಿಸಿದಂತೆ ಒಂದು ವರ್ಷದ ಗಣಪತಿಯ ದರವನ್ನು ಒಬ್ಬರು ಭರಿಸುತ್ತಾರೆ. ಸಾಮಾನ್ಯವಾಗಿ ೫ ಅಡಿ ಎತ್ತರವಿರುವ ಈ ಗಣಪತಿಗೆ ಕೊಡಬೇಕಿರುವ ದರ ೫,೦೦೦ ರೂಪಾಯಿಗಳು (ವರ್ಷ ವರ್ಷಕ್ಕೆ ಅದರ ದರ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಿರುತ್ತದೆ). ಇಲ್ಲಿಯ ವಾಡಿಕೆಯ ಪ್ರಕಾರ ಗಣಪತಿಯನ್ನು ಹಬ್ಬದ ದಿನದಂದೇ ತಯಾರಕರಿಂದ ಕೊಂಡು ತರುವುದರಿಂದ ಮತ್ತು ಈ ವರ್ಷ ಗಣಪತಿಯ ಬೆಲೆ ತುಟ್ಟಿಯಾಗುವುದೆಂಬ ವದಂತಿಗಳ ಪ್ರಕಾರ ದರ ಸ್ವಲ್ಪ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹಬ್ಬದ ದಿನ ಬೆಳಗಿನ ಜಾವದಲ್ಲಿ ತಯಾರಕರಿಂದ ಗಣಪತಿಯ ಮೂರ್ತಿಯನ್ನು ಕೊಂಡು ಲಾರಿಯ ಮೂಲಕ ಕಾಲೋನಿಗೆ ತರುವರು. ಕಾಲೋನಿಯ ಮಧ್ಯ ಭಾಗದಲ್ಲಿರುವ ಪಾರ್ಕಿನ ಮುಂಭಾಗದ ಮುಕ್ತ ಸಭಾಂಗಣದಲ್ಲಿರುವ ಸ್ಟೇಜಿನ ಮೇಲೆ ಮೂರ್ತಿಯನ್ನಿರಿಸುವರು. ಹತ್ತೂ ದಿನಗಳ ಬೆಳಗ್ಗೆ ಮತ್ತು ಸಂಜೆಯ ಪೂಜೆ ಮತ್ತಿತರೇ ಕಾರ್ಯಕ್ರಮಗಳನ್ನು ವೀಕ್ಷಿಸಲು ದೊಡ್ಡ ಚಪ್ಪರವನ್ನು ಹಾಕಿ, ಕುರ್ಚಿಗಳನ್ನು ಹಾಕುವರು. ಮನೆಗಳಲ್ಲಿ ಗಣಪತಿಯನ್ನು ಇಡುವವರು ಪೂಜೆಯನ್ನು ಮುಗಿಸಿ ಈ ಬೃಹತ್ ಮೂರ್ತಿಯ ಪೂಜೆಗೆ ಎಲ್ಲರೂ ಸೇರುವರು. ಮನೆಗಳಿಂದ ಪ್ರಸಾದವನ್ನೂ ತಂದು ನೈವೇದ್ಯಕ್ಕರ್ಪಿಸುವರು. ಪೂಜೆ ನೈವೇದ್ಯಗಳಾದ ಬಳಿಕೆ ನೆರೆದ ಎಲ್ಲರಿಗೂ ಅದನ್ನು ವಿತರಿಸುವರು. ಸುತ್ತ ಮುತ್ತಲಿರುವ ಭಾರತ್ ಪೆಟ್ರೋಲಿಯಂ, ಓಎನ್‍ಜಿಸಿ, ಹಿಂದುಸ್ತಾನ್ ಪೆಟ್ರೋಲಿಯಂ ಕಾಲೋನಿಗಳ ನಿವಾಸಿಗಳಲ್ಲದೇ ಖಾಸಗೀ ನಿವಾಸ ಸಂಕುಲವಾದ ಲಕ್ಷಚಂಡಿಯ ನಿವಾಸಿಗಳೂ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವರು. ಈ ಪ್ರದೇಶದಲ್ಲಿ ಹಾಲಿನ ವಿತರಕರು, ನಿತ್ಯಬಳಕೆಯ ವಸ್ತುಗಳ ವಿತರಕರು, ಅಂಗಡಿಯವರು ಮತ್ತಿತರು ದೇಣಿಗೆಯನ್ನೂ ಕೊಡುವರು. ಕಾಲೋನಿಯಲ್ಲಿರುವ ನಿವಾಸಿಗಳೆಲ್ಲರೂ ದೇಣಿಗೆಯನ್ನು ಕೊಡುವುದಲ್ಲದೇ, ಪ್ರತಿನಿತ್ಯದ ಪೂಜೆಗೆ ಬೇಕಿರುವ ಹೂವು, ತೆಂಗಿನಕಾಯಿ ಮತ್ತು ಪ್ರಸಾದ ವಿತರಣೆಗೆ ತಿನಿಸುಗಳನ್ನೂ ತಂದಿಡುವರು. ಅವಶ್ಯಕತೆ ಇರುವ ಇನ್ನಿತರೇ ವಸ್ತುಗಳನ್ನು ಸಂಘಟಕರು ಖರೀದಿಸಿ ಪೂಜೆಯನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುವರು.

ಪೂಜೆಯಲ್ಲಿ ಗಣಪತಿಯೊಂದಿಗೆ ಲಲಿತಾ ದೇವಿ, ಅಯ್ಯಪ್ಪ ಸ್ವಾಮಿ, ನವಗ್ರಹ, ಲಕ್ಷ್ಮಿಯಲ್ಲದೇ ನಿವಾಸಿಗಳ ಇಷ್ಟ ದೈವಗಳ ಮೂರ್ತಿ ಅಥವಾ ಚಿತ್ರಪಟಗಳಿಗೂ ಪೂಜೆಯು ಸಲ್ಲುವುದು. ಪ್ರತಿನಿತ್ಯ ಬೆಳಗ್ಗೆ ೬ ಘಂಟೆಗೆ ಲಲಿತಾಸಹಸ್ರನಾಮದೊಂದಿಗೆ ಗಣಪತಿಯ ಪೂಜೆಯಾದರೆ, ಸಂಜೆ ೭ ಘಂಟೆಗೆ ವಿಷ್ಣುಸಹಸ್ರನಾಮ, ರುದ್ರ ನಮಕ ಚಮಕಗಳೊಂದಿಗೆ ಉಪನಿಷತ್ತುಗಳ ಪಾರಾಯಣವಾಗುವುದು. ಶನಿವಾರ ಭಾನುವಾರಗಳಂದು ವಿಶೇಷವಾಗಿ ಅಯ್ಯಪ್ಪ ಭಜನೆ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ, ನವಗ್ರಹ ಹೋಮ, ನಕ್ಷತ್ರ ಹೋಮಗಳನ್ನು ನಡೆಸುವರು. ಈ ಮಧ್ಯೆ ಒಂದು ಭಾನುವಾರ ಬೆಳಗ್ಗೆ ಗಣಹೋಮವನ್ನೂ ನಡೆಸುವರು. ನಮ್ಮ ಕಾಲೋನಿಯಲ್ಲಿರುವ ಮಕ್ಕಳಿಗಂತೂ ಈ ಹತ್ತೂ ದಿನಗಳು ಹಬ್ಬವಿದ್ದಂತೆ. ದಿನ ಸಂಜೆ ವಿತರಿಸುವ ಕಾಲೋನಿಯಲ್ಲಿನ ಮನೆಗಳಿಂದ ನೈವೇದ್ಯಕ್ಕಿರಿಸುವ ೧೫-೨೦ ಬಗೆಯ ಪ್ರಸಾದದ ರುಚಿ, ಈ ಹತ್ತೂ ದಿನಗಳ ಅವರುಗಳ ಸಂಜೆಯಾಟಕ್ಕೆ ಕಡಿವಾಣ ಹಾಕಿದಂತಿದೆ.

ಮಹಾರಾಷ್ಟ್ರದಲ್ಲಿರುವ ಪುಣೆ ಮತ್ತು ಅಹಮದ್‍ನಗರಗಳ ಸುತ್ತುಮುತ್ತಲಿನಲ್ಲಿರುವ ಅಷ್ಟ ವಿನಾಯಕ ಮಂದಿರಗಳು ಬಹಳ ಪ್ರಸಿದ್ಧ ಪುಣ್ಯಕ್ಷೇತ್ರವಾಗಿವೆ. (ಎಂಟು ಗಣಪತಿಗಳು) –

೧. ಮೋರೆಗಾಂವಿನ ಮಯೂರೇಶ್ವರ
೨. ತೇವೂರಿನ ಶ್ರೀ ಚಿಂತಾಮಣಿ
೩. ರಂಜನಗಾಂವಿನ ಶ್ರೀ ಮಹಾಗಣಪತಿ
೪. ಸಿದ್ಧಟೇಕಿನ ಸಿದ್ಧಿ ವಿನಾಯಕ
೫. ಓಝಾರಿನ ಶ್ರೀ ವಿಘ್ನೇಶ್ವರ
೬. ಲೇಣ್ಯಾದ್ರಿಯ ಶ್ರೀ ಗಿರಿಜಾತ್ಮಕ
೭. ಪಾಲಿಯ ಹತ್ತಿರದ ಶ್ರೀ ಬಲ್ಲಾರೇಶ್ವರ
೮. ಮಹಾಡಿನ ಶ್ರೀ ವರದ ವಿನಾಯಕ

ಗಣಪತಿಯನ್ನು ಹತ್ತು ದಿನಗಳು ಇಟ್ಟು ನಂತರ ಹತ್ತನೆಯ ದಿನ ಅದನ್ನು ಭಾರೀ ಮೆರವಣಿಗೆಯಲ್ಲಿ ಸಮುದ್ರ ಅಥವಾ ಹತ್ತಿರದ ಕೆರೆ ಕೋಡಿಗಳಲ್ಲಿ ಬಿಡುವರು. ಅಂದು ನಗರದಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್ ಆಗಿ ಜನಜೀವನ ಸ್ಥಬ್ಧವಾಗುವುದು. ಎಲ್ಲ ಕಛೇರಿಗಳಿಗೂ ಅರ್ಧ ದಿನದ ರಜೆ ಘೋಷಿಸುವರು. ಸಾಮಾನ್ಯವಾಗಿ ಎಲ್ಲ ಗಣಪತಿಗಳನ್ನೂ ಸಮುದ್ರದ ನೀರಿಗೆ ಬಿಡುವುದರಿಂದ ಸಮುದ್ರ ತೀರದಲ್ಲೀ ಭಾರೀ ಜನಸಂದಣಿ. ಪತ್ರಿಕೆಗಳ ಪ್ರಕಾರ ೩೧೦೦೦ ದೊಡ್ಡ ಗಣಪತಿಗಳನ್ನೂ ಮತ್ತು ೧.೫ ಲಕ್ಷ ಚಿಕ್ಕ ಗಣಪತಿಗಳನ್ನೂ ವಿಸರ್ಜನೆ ಮಾಡುವರು. ಅದರ ಚಿತ್ರವನ್ನು ನೀವು ನೋಡಿರಬಹುದು.

ಒಟ್ಟಿನಲ್ಲಿ ಈ ಸಾರ್ವಜನಿಕ ಗಣೇಶೋತ್ಸವ ಜಾತಿ ಮತ ಭೇದವಿಲ್ಲದೇ ಎಲ್ಲರೂ ಒಗ್ಗೂಡಿ
ಸಂಭ್ರಮದಿಂದ ಆಚರಿಸುವ ಒಂದು ನಾಡ ಹಬ್ಬ. ಇಂತಹ ಹಬ್ಬಗಳು ಇನ್ನೂ ಹೆಚ್ಚಾಗಿ ದೇಶ ಒಂದಾಗಿರಲಿ ಎಂದು ಆಶಿಸೋಣವೇ?

‍ತಳುಕು ಶ್ರೀನಿವಾಸ ಮೂಲಕ

ನಾನೊಬ್ಬ ಸಾಹಿತ್ಯಾಭಿಲಾಷಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s