ವಿರಾರ ಪಶ್ಚಿಮ ರೈಲ್ವೇಯ ಲೋಕಲ್ ಟ್ರೈನ್‍ಗಳ ಕೊನೆಯ ಸ್ಥಾನಕ. ಚರ್ಚ್‍ಗೆಟಿನಿಂದ ಸುಮಾರು ೬೦ ಕಿಲೋಮೀಟರುಗಳ ದೂರವಿರುವ ಈ ಸ್ಥಾನಕ ತಲುಪಲು ಕನಿಷ್ಠ ಒಂದೂವರೆ ತಾಸು ಆಗುವುದು. ಬೆಳಗ್ಗೆ ೭ರಿಂದ ರಾತ್ರಿ ೧೧ರವರೆವಿಗೆ ಮುಂಬಯಿಯ ಲೋಕಲ್ ಟ್ರೈನ್‍ಗಳು ಡುಮ್ಮ ಹೊಟ್ಟೆಯಂತೆಯೇ ಕಾಣುತ್ತಿರುತ್ತವೆ. ಮೊದಲ ಸ್ಥಾನದಿಂದಲೇ ಒಂದಡಿ ಜಾಗವೂ ಇಲ್ಲದಷ್ಟು ಜನನಿಬಿಡವಾಗುರಿತ್ತದೆ. ಅದೆಲ್ಲಿಂದ ಜನ ಬರ್ತಾರೋ ಅದೆಲ್ಲಿಗೆ ಹೋಗ್ತಾರೋ ಆ ದೇವರಿಗೇ ಗೊತ್ತಾಗಬೇಕು. ಅಷ್ಟು ಜನಗಳಲ್ಲಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುವವರು ಯಾರು ಎಂದು ಕಂಡು ಹಿಡಿಯುವುದೂ ಬಲು ಕಷ್ಟ.
ಪಶ್ಚಿಮ ರೈಲ್ವೇಯಲ್ಲಿ ಚರ್ಚ್‌ಗೇಟ್ ಮತ್ತು ಕೇಂದ್ರ ರೈಲ್ವೇಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್‍ನಿಂದ ಹೊರಡುವ ಗಾಡಿಗಳು ಅಲ್ಲಿಯೇ ತುಂಬಿರುತ್ತದೆ. ಮುಂದಿನ ಸ್ಟೇಷನ್‍ಗಳಲ್ಲಿ ಹೇಗೆ ಜನಗಳು ಹತ್ತಬಹುದು ಮತ್ತು ಇಳಿಯಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಉಹುಂ! ಮುಂಬಯಿ ನೋಡದವರು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟ ಆಗಬಹುದು. ಹತ್ತುವಾಗ, ಹಿಂದಿನವರು ’ಚಲೋ ಚಲೋ, ಆಗೇ ಪೂರಾ ಖಾಲಿ ಹೈ, ಇಧರ್ ಹೀ ಕ್ಯೋಂ ಖಡೆ ಹೋಗಯಾ’ ಎಂದು ಹೇಳುತ್ತಿದ್ದರೆ, ಇಳಿಯುವಾಗ ’ಪ್ಯಾರ್ ಸೆ ಔರ್ ಪ್ರೆಮ್ ಸೆ ಧಕ್ಕಾ ಮಾರೊ ಭಾಯಿ, ಹಮ್ ಸಬ್ ಲೋಗ್ ಏಕ್ ಸಾಥ್ ಉತರೇಂಗೆ’ ಎಂದು ಹೇಳುತ್ತಾ ಬಾಗಿಲ ಹತ್ತಿರ ನಿಂತಿರೋವ್ರನ್ನೆಲ್ಲಾ ತಳ್ಳಿ ಇಳಿಸಿಬಿಡುವರು. ಮುಂದೆ ಹೋಗುವವರು ಅಲ್ಲೇನಾದರೂ ನಿಂತಿದ್ದರೆ, ಅವರನ್ನೂ ತಳ್ಳಿ ಇಳಿಸಿಬಿಡುವರು. ಸ್ಟೇಷನ್‍ನ ಪ್ಲಾಟ್‍ಫಾರಂ ಬಂದಾಗ ಬಾಗಿಲ ಬಳಿ ಏನಾದರೂ ನಿಂತಿದ್ದರೆ, ಎಸ್ಕಲೇಟರ್ ಮೇಲೆ ನಿಂತಂತಿರುತ್ತದೆ. ನಿರಾಯಾಸವಾಗಿ ಕೆಳಗಿಳಿರುತ್ತೇವೆ. ಇವರೆಲ್ಲಾ ಇಳಿದು ಮತ್ತೆ ಹತ್ತಲು ಹೋಗುವಷ್ಟರಲ್ಲಿ ಗಾಡಿ ಮುಂದೆ ಹೋಗಿರುತ್ತದೆ. ಏಕೆಂದರೆ, ಗಾಡಿ ೨೦ ಸೆಕೆಂಡುಗಳಷ್ಟೇ ನಿಲ್ಲುವುದು. ಅಷ್ಟರೊಳಗೆ ನೂರಾರು ಜನಗಳು ಇಳಿಯಬೇಕು, ಅವರು ಇಳಿಯುವುದರೊಳಗೇ ಹತ್ತುವವರು ಹತ್ತಬೇಕು.
ಇಲ್ಲಿಯವರಿಗೇನಾದ್ರೂ ಕನ್ನಡ ಅರ್ಥ ಆಗೋ ಹಾಗಿದ್ರೆ, ನಾನು ಹೀಗೆ ಹೇಳಿ ಛೇಡಿಸಬೇಕೆಂದಿರುವೆ – ಆಪ್ ಸೆ ಜೋ ಲೇಗಾ ಪಂಗಾ ಹೋ ಜಾಯೆಗಾ ಮಂಗಾ 😛 – ನಾಲ್ಗೆ ಹೊರಚಾಚ್ಬೇಡ್ವೋ ಮಂಗ್ಯಾ – ಮಂಗ್ಯಾನ ಮೋರೆಯ ನೋಡು ನರಸಿಂಗಾನ ಕೋರೆಯ ನೋಡು
ಸುಮ್ಮನೆ ಕುಳಿತುಕೊಳ್ಳಲಾಗದ ಮಂದಿ ಪಕ್ಕದವನ ಕೂದಲು ಸವರುವುದು, ಆತನ ಬ್ಯಾಗಿನ ಜಿಪ್ ಎಳೆದು ಗಟ್ಟಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸುವುದು, ಅಕ್ಕ ಪಕ್ಕದಲ್ಲಿರುವವರ ಅಂಗಿಯ ಗುಂಡಿಯನ್ನು ತಿರುವುದು, ಉಗುರಿನಲ್ಲಿ ಬಟ್ಟೆ ತೀಡುವುದು, ಇತ್ಯಾದಿ ಕುಚೇಷ್ಟೆಗಳನ್ನು ಮಾಡುತ್ತಿರುತ್ತಾರೆ. ಒಬ್ಬನನ್ನು ಕೇಳಿದೆ, ಏಕೆ ಹೀಗೆ ಮಾಡುತ್ತಿರುವೆ? ಅದಕ್ಕವನ ಉತ್ತರ, ’ಕ್ಯಾ ಕರೇಂಗೆ, ಆಫೀಸ್ ಮೇ ತೊ ಕಾಮ್ ಹೀ ಕಾಮ್ – ಘರ್ ಗಯಾ ತೋ ಜಂಜಟ್ – ಥೋಡ ಸಾ ಮಜಾ ಚಾಹಿಯೇ ನ (ಏನ್ಮಾಡೋದು, ಕಛೇರಿಯಲ್ಲಿ ಕೆಲಸವೇ ಕೆಲಸ, ಮನೆಗೆ ಹೋದರೆ ತೊಂದರೆ, ಸ್ವಲ್ಪ ತಮಾಷೆ ಬೇಕಲ್ಲ’) – ಅಲ್ಲ ಇವರಿಗೆ ತಮಾಷೆ ಬೇಕಂತೆ, ಅದಕ್ಕೆ ಸುಸ್ತಾಗಿ, ವಿರಮಿಸುತ್ತಿರುವ ಸಹ ಪ್ರಯಾಣಿಕರೇ ಬಲಿಪಶುಗಳಾಗಬೇಕಾ? ಮತ್ತೆ ಜಗಳ ಕೂಗಾಟ ಶುರು. ಬಾಗಿಲ ಹತ್ತಿರ ನಿಂತಿದ್ದರೆ, ಕುಳಿತಿದ್ದವರ ಮೇಲಿರುವ ಕಿಂಡಿಯಿಂದ ಮೆತ್ತಗೆ ತಲೆಗೆ ಬಬ್ಬಲ್‍ಗಮ್ ಅಥವಾ ಇನ್ನೇನನ್ನೋ ಅಂಟಿಸಿಬಿಡುವರು, ಅಥವಾ ಗಾಡಿ ಏರುತ್ತಿದ್ದ ಹಾಗೆಯೇ, ಅದೆಲ್ಲಿಂದ ಇವರುಗಳಿಗೆ ನಿದ್ರೆ ಬರುವುದೋ ಏನೋ ನಾಕಾಣೆ. ಕುಳಿತಿದ್ದರಂತೂ ಪರವಾಗಿಲ್ಲ, ನಿಂತಿದ್ದರೂ ಕಣ್ಮುಚ್ಚಿ ಇಹ ಲೋಕ ಮರೆವರು, ಮರೆತು ಪಕ್ಕದಲ್ಲಿರುವವನ ಮೇಲೆ ಓಲುವರು. ನನ್ನಂತಹ ದ್ರಾಬೆಯಾದರೆ, ಸುಮ್ಮನಿರುತ್ತೇನೆ, ಮತ್ತಿತರು ಯಾರೇ ಆದರೂ, ಅವರಿಬ್ಬರಲ್ಲಿ ಯಾರೊಬ್ಬರು ಇಳಿಯುವವರೆವಿಗೆ ಜಗಳ ಇದ್ದೇ ಇರುತ್ತದೆ. ಜಗಳ ಅಂದ್ರೆ ಹೊಡೆದಾಟ ಆಡೋಕ್ಕೆ ಅವರಿಗೆ ಇಷ್ಟವಿಲ್ಲ, ಸುಮ್ನೆ ಬಾಯಿಗೆ ಬಂದಂತೆ ಬೈಯುವುದು, ಪರರಾಜ್ಯದವರಾಗಿದ್ದರೆ, ಇಲ್ಲಿನ ಲೋಕಲ್ ಜನಗಳು, ಅವರನ್ನ ಕಸಿಯೋದಕ್ಕೆ ಬಂದ ಕಳ್ಳರು ಎಂದು ಹೇಳಿಸಿಕೊಳ್ಳಬೇಕಾಗುವುದು. ಇವರೇನು ಸುಮ್ಮನಿರೋಲ್ಲ, ಮಾತಿಗೆ ತಕ್ಕ ಹಾಗೆ ಪ್ರತಿ ಮಾತು ಆಡುವರು, ಅಕ್ಕ ಪಕ್ಕದಲ್ಲಿರುವವರಿಗೆ ತೊಂದರೆ ಮಾಡುವರು. ಅವರ ಸ್ಥಳದವರೇ ಇನ್ಯಾರು ಅಕ್ಕ ಪಕ್ಕದಲ್ಲಿದ್ದರೂ, ಪರಿಚಯವಿಲ್ಲದಿದ್ದರೆ, ಏನೂ ಸಂಬಂಧವಿಲ್ಲದಂತೆ ನಿಂತಿರುತ್ತಾರೆ. ಸ್ನೇಹಿತರಾಗಿದ್ದರೆ ಮಾತ್ರ, ಅವರೂ ಈ ಜಗಳದಲ್ಲಿ ಭಾಗಿಯಾಗುವರು. ಅಷ್ಟಲ್ಲದೇ ಇಳಿಯುವಾಗ ಅಥವಾ ಹತ್ತುವಾಗ ಜಾಗವಿರಲಿ ಇಲ್ಲದಿರಲಿ, ಇತರರ ಕಾಲು ತುಳಿದುಕೊಂಡೇ ಹೋಗುವರು. ಮುಖ ನೋಡಿದ್ರೆ, ಸ್ಸಾರಿ ಎಂಬ ಪದ ಇದ್ದೇ ಇದೆಯಲ್ಲ. ಹೆಚ್ಚೇನಾದರೂ ಮಾತನಾಡಿದ್ರೆ, ಅಕ್ಕ ಪಕ್ಕದವರು, ’ಅರ್ರೇ! ವೊ ತೋ ಸ್ಸಾರಿ ಬೋಲಾನ – ತುಮ್ ಕಾಯ್ ಕೊ ಚಿಲ್ಲಾತೇ ಹೋ – ಕಿಧರ್ ಸೆ ಆಯಾ ರೇ?’ ಜಾಸ್ತಿ ಮಾತನಾಡೋದು ಥರವಲ್ಲ ಅಂತ ಸುಮ್ಮನಾಗುವುದು ಲೇಸು. ಮಾರನೆಯ ದಿನ ಮತ್ತೆ ಅದೇ ಮನುಷ್ಯ ಬರ್ತಾನೋ ಇಲ್ವೋ ಅಂತ ಕಾಯ್ತಿರ್ತಾರೆ. ಅಲ್ಲ! ಅವರಿಬ್ಬರಲ್ಲಿ ವೈಮನಸ್ಯವಿಲ್ಲ. ಜಗಳ ಆಡೋದ್ರಲ್ಲಿ ಅದೇನೋ ಅತೀವ ಪ್ರೇಮ ಉಂಟಾಗುವುದಂತೆ. ಲೋಕಲ್ ಟ್ರೈನ್‍ನಲ್ಲಿ ಒಮ್ಮೆ ಓಡಾಡಿದರೆ, ಅಲ್ಲಿ ಬರುವ ಹೋಗುವವರೆಲ್ಲರೂ ನಮ್ಮವರೇ ಎಂದೆನ್ನಿಸುತ್ತದೆ. ಏನಾದರೂ ತೊಂದರೆ ಆದರೆ, ಆಗ ಎಲ್ಲರೂ ಒಟ್ಟಾಗಿ ಸಹಾಯಿಸುವ ದೃಶ್ಯ ಮಾತ್ರ ಅವರ್ಣನೀಯ. ಹೀಗಿದೆ ಇಲ್ಲಿಯ ಮಾನವ ಸಂಬಂಧ, ಅತೀತ attachment.
ಈ ಲೋಕಲ್ ಬಗ್ಗೆ ನಾನು ಹಿಂದೆ ಬರೆದಿದ್ದ ಒಂದು ಕವನ ಮತ್ತೆ ನೆನಪಿಗೆ ತರುವೆ
ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ
ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ
ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ
ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ
ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ
ಅದರ ಅನುಭವ ನಿಮಗೇನು ಗೊತ್ತು ಬಿಡಿ
ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು
’ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ’
ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ
ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ
ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ
ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ
ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ
ಅವರ್ನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ
ನಿಯತಕಾಲದಂತೆ dutyಗೆ ಬರುವನು ಆ ಭಿಕ್ಷುಕ
ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ್)
ಹೊಸಬರಿಗೆ ಇಲ್ಲಿಯಾಗುವುದು ಪರದಾಟ
ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ