ನನ್ನ ಬಗ್ಗೆ

ನನ್ನ ಮೂಲ ತಳುಕಿನ ವಂಶ. ತಳುಕು ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕಿನಲ್ಲಿ. ಚಳ್ಳಕೆರೆಯಿಂದ ಬಳ್ಳಾರಿಯ ರಸ್ತೆಯಲ್ಲಿ ೧೫ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ.


ನಮ್ಮ ಮನೆಯ ಮಾತು ತೆಲುಗು. ಆದರೂ ಕನ್ನಡ ಭಾಷೆಗೆ ನಮ್ಮ ಕುಟುಂಬದೊಂದಿಗಿರುವ ನಂಟಿನ ಮುಂದೆ, ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ. ನನ್ನ ಮೊದಲನೆಯ ದೊಡ್ಡಪ್ಪನವರು ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರು. ಪ್ರಸಿದ್ಧ ಕಾದಂಬರಿಕಾರರಾಗಿದ್ದ ತ.ರಾ.ಸುಬ್ಬರಾಯರು ಇನ್ನೊಬ್ಬ ದೊಡ್ಡಪ್ಪನವರ ಮಗ, ಅಂದರೆ ನನಗೆ ಅಣ್ಣ. ಮತ್ತೊಬ್ಬ ದೊಡ್ಡಪ್ಪನವರಾದ ತ.ಸು.ಶಾಮರಾಯರೂ ಕನ್ನಡದ ಪ್ರೊಫೆಸರ್ ಆಗಿದ್ದವರು. ಇದು ನನ್ನ ತಂದೆಯ ತಂದೆಯ ಕಡೆಯ ಕನ್ನಡ ಸಾಹಿತ್ಯ ಲೋಕದ ಸಂಬಂಧವಾದರೆ, ನನ್ನ ತಂದೆಯ ತಾಯಿಯ ತಮ್ಮ ಅಂದರೆ ಸೋದರಮಾವನವರಾಗಿದ್ದ ಕನ್ನಡ ಪ್ರೊಫೆಸರ್ ಕೆ.ವೆಂಕಟರಾಮಪ್ಪನವರು ನನಗೆ ತಾತನವರು. ಅವರು ತೆಲುಗುವಿನ ಹಲವು ಪ್ರಸಿದ್ಧ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ ಹಳಗನ್ನಡದಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು. ಇನ್ನು ನನ್ನ ತಂದೆಯ ತಂಗಿಯವರಲ್ಲೊಬ್ಬರಾದ ವಿಶಾಲಾಕ್ಷಿ ದಕ್ಷಿಣಾಮೂರ್ತಿ ನನ್ನ ಸೋದರತ್ತೆ. ಆಕೆಯೂ ಪ್ರಸಿದ್ಧ ಕಾದಂಬರಿಗಾರ್ತಿ.

 

ನನ್ನ ಬಗ್ಗೆ ಹೇಳಬೇಕೆಂದರೆ,ನನ್ನ ಹೆಸರು ತಳುಕು ವಿಶ್ವೇಶ್ವರಯ್ಯ ಶ್ರೀನಿವಾಸ ಎಂದು.
ಹುಟ್ಟಿದ್ದು ಜೋಗದ ಹತ್ತಿರದ ಲಿಂಗನಮಕ್ಕಿಯಲ್ಲಿ (೧೯೬೦ ರ ಮೇ ೨ರಂದು).
ನನ್ನ ತಂದೆಯ ಹೆಸರು ವಿಶ್ವೇಶ್ವರಯ್ಯ ಮತ್ತು ತಾಯಿ ಗಂಗಭಾಗೀರಥಮ್ಮ. ೧೯೭೮ರಿಂದ ೧೯೮೦ ರವರೆವಿಗೆ ಬೆಂಗಳೂರಿನ ಶಂಕರಮಠದ ಶಂಕರ ಸ್ಕೂಲ್ ಆಫ್ ಕಲ್ಚರ್ ನಲ್ಲಿ ವಾಸ. ಅಲ್ಲಿ ಗುರುಗಳ ಸನ್ನಿಹಿತದಲ್ಲಿ ವೇದಾಧ್ಯಯನ ಮಾಡಿದೆ. ಹಾಗೆಯೇ ಆಚಾರ್ಯ ಪಾಠಶಾಲೆಯಲ್ಲಿ ಬಿ.ಕಾಂ. ಪದವಿಗಾಗಿ ಓದಿದೆ. ಬಿ.ಕಾಂ ಪದವಿಯನ್ನು ಮೊದಲ ದರ್ಜೆಯಲ್ಲಿ ೧೯೮೦ರಲ್ಲಿ ಪಡೆದೆ. ಮುಂದೆ ೧೯೮೦ರಲ್ಲಿ ಸ್ವಲ್ಪ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದು ೧೯೮೧ ನವೆಂಬರ್ ನಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸ ಮಾಡಿದೆ. ೧೯೮೨ರಲ್ಲಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ನಾಣ್ಯ ಪರೀಕ್ಷಕನಾಗಿ ಸೇರಿದೆ. ೧೯೮೯ರಲ್ಲಿ ಅಸಿಸ್ಟೆಂಟ್ ಮ್ಯಾನೇಜರಾಗಿ ಮುಂಬಯಿಗೆ ವರ್ಗವಾಗಿ ಹೋಗಿದ್ದೆನು. ೧೯೯೭ರಲ್ಲಿ ಮ್ಯಾನೇಜರಾಗಿ ಬೆಂಗಳೂರಿಗೆ ವರ್ಗವಾಗಿ ಬಂದು, ತದನಂತರ, ೨೦೦೨ರಲ್ಲಿ ಮುಂಬಯಿಗೆ ಮರುವರ್ಗವಾಗಿ ಬಂದು, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದೆನು. ೨೦೧೨ರಲ್ಲಿ ಚೆನ್ನೈಗೆ ವರ್ಗವಾಗಿ, ೨೦೧೩ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ ಬಡ್ತಿ ದೊರೆಯಿತು. ೨೦೧೬ರಲ್ಲಿ ತಿರುವನಂತಪುರಕ್ಕೆ ವರ್ಗವಾಗಿ ಹೋದವನಿಗೆ, ೨೦೧೮ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ತದ ನಂತರ ೨೦೧೯ರಲ್ಲಿ ಬೆಂಗಳೂರಿಗೆ ವರ್ಗವಾಗಿ ಬಂದು, ಇದೇ ಮೇ ೩೧ರಂದು (೨೦೨೦) ಸೇವೆಯಿಂದ ನಿವೃತ್ತನಾಗುತ್ತಿರುವೆ. ಬ್ಯಾಂಕಿನಲ್ಲಿ ೩೮ ವರ್ಷ ೪ ತಿಂಗಳು ಮತ್ತು ೫ ದಿನಗಳ ಸೇವೆ ಮಾಡಿದೆನು.

 

ನಾನೊಬ್ಬ ಸಾಹಿತ್ಯಾಭಿಲಾಷಿ. ನನ್ನ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಬರೆಯುವುದು ನನ್ನ ಹುಚ್ಚುತನಗಳಲ್ಲಿ ಒಂದು. ಅಲ್ಲಿಲ್ಲಿ ಕಥೆ, ಕವನ, ಲೇಖನಗಳನ್ನು ಪ್ರಕಟಿಸುತ್ತಿರುವೆ.

What People Say

The way to get started is to quit talking and begin doing.

Walt Disney

It is our choices, Harry, that show what we truly are, far more than our abilities.

J. K. Rowling

Don’t cry because it’s over, smile because it happened.

Dr. Seuss

Let’s build something together.