ವಿಭಾಗಗಳು
ಲೇಖನಗಳು

ವೇದಾಂತ ಸಾರಗಳು

ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರುವ ‘ವೇದಾಂತ ಸಾರಗಳು’ ಎನ್ನುವ ಪುಸ್ತಕದಿಂದ ಆಯ್ದ
ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ

೧೬ನೇ ಶತಮಾನದ ಸದಾನಂದರು ವೇದಾಂತದ ಸಾರಗಳ ಬಗ್ಗೆ ಬರೆಯುತ್ತಾ ಮಾನವನು ಮಾಡಬೇಕಾದ ಕರ್ಮಗಳ ಬಗ್ಗೆ ಹೀಗೆ ತಿಳಿಸಿದ್ದಾರೆ.

ಮಾನವರು ಮಾಡಬೇಕಾದ ಕರ್ಮಗಳನ್ನು ವಿಹಿತ (ಮಾಡಬೇಕಾದದ್ದು) ಮತ್ತು ನಿಷಿದ್ಧ (ಮಾಡಬಾರದ್ದು) ಎಂದು ವಿಭಾಗಿಸಬಹುದು.

ವಿಹಿತ ಕರ್ಮವನ್ನು ಆಚರಿಸುವುದರ ಫಲ ಪುಣ್ಯ. ನಿಷಿದ್ಧ ಕರ್ಮದ ಫಲ ಪಾಪ.

ವಿಹಿತ ಕರ್ಮಗಳನ್ನು ನಿತ್ಯ, ನೈಮಿತ್ತಿಕ, ಕಾಮ್ಯ ಮತ್ತು ಪ್ರಾಯಶ್ಚಿತ್ತ ಎಂದು ನಾಲ್ಕು ಬಗೆಯಾಗಿ ವಿಂಗಡಿಸಬಹುದು. ನಿತ್ಯ ಎಂದರೆ ಆವಶ್ಯಕವಾಗಿ ಮಾಡಬೇಕಾದ ಕೆಲಸ, ಸಂಧ್ಯಾವಂದನೆ ಮುಂತಾದವುಗಳು. ಇದರ ಫಲ ಚಿತ್ತ ಶುದ್ಧಿ. ನೈಮಿತ್ತಿಕ ಎಂದರೆ ಕೆಲವು ನಿಮಿತ್ತಗಳಾದ ಮಾಡಲೇಬೇಕಾದ ಕಾರ್ಯಗಳು. ಮಕ್ಕಳು ಹುಟ್ಟಿದಾಗ ಮಾಡುವ ಜಾತಕರ್ಮ, ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಮಾಡಬೇಕಾದ ವಿವಾಹ ಇತ್ಯಾದಿ. ಕಾಮ್ಯ ಎಂದರೆ ಯಾವುದಾದರೂ ಕೆಲಸ ಆಗಲಿ ಎಂಬ ಇಚ್ಛೆಯಿಂದ ಮಾಡುವುದು. ದೇವರ ವಿಶೇಷ ಪೂಜೆ, ವ್ರತ, ಯಜ್ಞ ಯಾಗಾದಿಗಳನ್ನು ಈ ಗುಂಪಿಗೆ ಸೇರಿಸಬಹುದು. ಕರ್ಮಗಳು ಪುರುಷಾಯತ್ತವಾದುದರಿಂದ ಅವನ್ನು ಮಾಡುವಾಗ ಮಾನವ ಸಹಜವಾದ ಯಾವುದಾದರೂ ಕೆಲವು ದೋಷಗಳು ಸಂಭವಿಸಬಹುದು. ಇದರ ನಿವಾರಣೆಗಾಗಿ ಮಾಡುವುದೇ ಪ್ರಾಯಶ್ಚಿತ್ತಗಳು.

ಕರ್ಮಾನುಷ್ಟಾನವು ಸಫಲವಾಗಿ ಚಿತ್ತದ ಶುದ್ಧಿ ಏಕಾಗ್ರತೆಗಳು ಒದಗಿದುದಕ್ಕೆ ಸಾಕ್ಷಿಯಾಗಿ ವ್ಯಕ್ತಿಯಲ್ಲಿ ತೇಜಸ್ಸಿನಂತಹ ಪ್ರವೃತ್ತಿಗಳು ಕಾಣಿಸಿಕೊಳ್ಳುತ್ತವೆ. ಅವು ಕಾಣುವವರೆಗೂ ಕರ್ಮೋಪಾಸನೆಗಳನ್ನು ಮಾಡುತ್ತಿರಬೇಕು. ಇದನ್ನು ಸಾಧನ ಚತುಷ್ಟಯ ಎಂದು ಶಾಸ್ತ್ರಕಾರರು ನಾಲ್ಕು ವಿಭಾಗವನ್ನಾಗಿಸಿದ್ದಾರೆ. ಅವು ಯಾವುವೆಂದರೆ – ನಿತ್ಯಾನಿತ್ಯವಸ್ತು ವಿವೇಕ, ಇಹಾಮುತ್ರಾರ್ಥ ಫಲ ಭೋಗವಿರಾಗ, ಶಮಾದಿ ಸಾಧನ ಸಂಪತ್ತು ಮತ್ತು ಮುಮುಕ್ಷತ್ವ.

ನಿತ್ಯಾನಿತ್ಯವಸ್ತು ವಿವೇಕ – ವಸ್ತುಗಳಲ್ಲಿ ಯಾವುದು ನಿತ್ಯ, ಅನಿತ್ಯ, ಸತ್ಯ, ಅಸತ್ಯ, ಶಾಶ್ವತ, ನಶ್ವರ, ಸ್ಥಿರ, ಕ್ಷಣಿಕ ಎಂಬ ವಿವೇಚನೆ.

ಇಹಾಮುತ್ರಾರ್ಥ ಫಲ ಭೋಗವಿರಾಗ – ಇಹ ಲೋಕ ಮತ್ತು ಪರ ಲೋಕಗಳ ಸುಖಗಳಲ್ಲಿ ಆಸೆಯಿಲ್ಲದಿರುವುದು.

ಶಮಾದಿ ಸಾಧನ ಸಂಪತ್ತು – ಮನಸ್ಸು ಮತ್ತು ಬಾಹ್ಯೇಂದ್ರಿಯಗಳ ನಿಗ್ರಹರೂಪವಾದ ಶಮ ಮತ್ತು ದಮ. ಬಾಹ್ಯ ವಿಷಯಗಳಲ್ಲಿ ಎಲ್ಲ ಆಸಕ್ತಿಯನ್ನೂ ತ್ಯಜಿಸಿದುದರಿಂದ ಹುಟ್ಟುವ ಮನಶಾಂತಿ ರೂಪವಾದ, ಅಥವಾ ಹಾಗೆ ತ್ಯಜಿಸಿದವನು ಸ್ವೀಕರಿಸುವ ಸನ್ಯಾಸಾಶ್ರಮ ರೂಪವಾದ ಉಪರತಿ, ಬಿಸಿಲು, ಛಳಿ ಮೊದಲಾದ ದ್ವಂದ್ವವನ್ನು ಸಹಿಸುವ ತಿತಿಕ್ಷೆ.

ಮುಮುಕ್ಷತ್ವ – ಮೋಕ್ಷವನ್ನು ಪಡೆಯಬೇಕೆಂಬ ಆಸೆ.

ತತ್ವ ಶಾಸ್ತ್ರದ ವಿಷಯ ತತ್ವ, ಪ್ರಮಾಣ, ಯುಕ್ತಿಗಳ ಮೂಲಕ ವಿಚಾರ ವಿಮರ್ಶೆ ಮತ್ತು ಅದರ ಸಾಧನೆ. ಅದರ ಗುರಿ ಜ್ಞಾನ ಮತ್ತು ಅನುಭವ. ಆ ಜ್ಞಾನದಿಂದ ಒದಗುವ ಲಾಭ ಅದರ ಫಲ. ತತ್ವ ಎಂದರೆ ಸ್ವರೂಪ. ವಸ್ತು ಒಂದರ ನಿಜವಾದ ಸ್ವಾಭಾವಿಕವಾದ ರೂಪ. ಆ ಸ್ವರೂಪವನ್ನು ಅರಿಯುವುದರ ಉದ್ದೇಶ ಯಾವುದೋ ಒಂದು ಆಕಾಂಕ್ಷೆಯ ತೃಪ್ತಿ ಮತ್ತು ಪುರುಷಾರ್ಥದ ಲಾಭ. ಆ ಆಕಾಂಕ್ಷೆ ಕ್ಷಣಿಕವಾದ ಐಹಿಕ ಸುಖವಾಗಬಹುದು, ಚಿರಕಾಲದ ಸ್ವರ್ಗಭೋಗವಾಗಬಹುದು ಅಥವಾ ಶಾಶ್ವತವಾದ ಮೋಕ್ಷಾನಂದವಾಗಬಹುದು. ಆದರೆ ಅದರ ಸಾಧನೆ ಮಾತ್ರ ಒಂದೇ – ತತ್ವಜ್ಞಾನ.

ವಿಚಾರಕ್ಕೆ ಅನುಭವಕ್ಕೆ ಗೋಚರವಾಗುವ ಶಾಸ್ತ್ರಗಳ ಎಲ್ಲವೂ ವಿಷಯಗಳಾಗಿರುತ್ತವೆ. ತತ್ವ ಶಾಸ್ತ್ರಕ್ಕೂ ಅದೇ ತರಹದ ವಿಷಯಗಳೇ. ಇತರ ಶಾಸ್ತ್ರಗಳು ವಸ್ತುಗಳನ್ನು ಯಾವುದೋ ವಿಶಿಷ್ಟ ಕೋನಗಳಿಂದ ಪರೀಕ್ಷಿಸಿ ಅವುಗಳ ಪಾಕ್ಷಿಕ ಸ್ವರೂಪವನ್ನು ನಿರೂಪಿಸುತ್ತವೆ. ಆದರೆ ತತ್ವಶಾಸ್ತ್ರ ಅವುಗಳನ್ನು ಎಲ್ಲ ಕೋನಗಳಿಂದಲೂ ಪರಿಶೀಲಿಸಿ ಅವುಗಳ ಪೂರ್ಣ ರೂಪವನ್ನು ನಿರ್ಣಯಿಸುತ್ತದೆ. ಈ ದೃಷ್ಟಿಯಲ್ಲಿ ಇತರ ಶಾಸ್ತ್ರಗಳು ಆಂಶಿಕ ಪುರುಷಾರ್ಥ ಸಾಧಕಗಳಾದರೆ ತತ್ವಶಾಸ್ತ್ರ ಸಕಲಪುರುಷಾರ್ಥ ಸಾಧಕವಾಗಿದೆ. ಆದ್ದರಿಂದಲೇ ವಿದ್ಯೆಗಳಲ್ಲೆಲ್ಲಾ ಶ್ರೇಷ್ಟವಾದುದು ಅಧ್ಯಾತ್ಮ ವಿದ್ಯೆ.

ಪದಾರ್ಥಗಳನ್ನು ಅವುಗಳಲ್ಲಿ ಕಂಡುಬರುವ ಸದೃಶ ಗುಣಗಳ ಆಧಾರದ ಮೇಲೆ ವರ್ಗೀಕರಿಸುವುದು ಸಾಮಾನ್ಯ ವಿಧಾನ. ಈ ದೃಷ್ಟಿಯಿಂದ ಜಗತ್ತನ್ನು ನೋಡಿದಾಗ ಅದು ನಾನಾ ಬಗೆಯ ಅಸಂಖ್ಯಾತ ಭಿನ್ನ ಭಿನ್ನ ಸ್ವತಂತ್ರ ವಸ್ತುಗಳಿಂದ ಕೂಡಿರುವಂತೆ ಕಂಡರೂ ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅದು ಕೆಲವೇ ಪದಾರ್ಥಗಳಿಂದ ಅಥವಾ ಅವುಗಳ ವಿವಿಧ ಸಂಯೋಗಗಳಿಂದ ರಚಿತವಾಗಿರುವುದು ಕಂಡುಬರುತ್ತದೆ. ಹೆಸರು, ಆಕಾರ, ಕಾರ್ಯ ಫಲದಿಂದ, ಮಣ್ಣು, ಕಲ್ಲು, ಮರ ಮುಂತಾದವು ಪರಸ್ಪರ ಭಿನ್ನವಾಗಿದ್ದರೂ ಅವೆಲ್ಲವೂ ಪೃಥ್ವಿಯಿಂದ ರಚಿತವಾಗಿವೆ. ಆದ್ದರಿಂದ ಅವನ್ನು ಸ್ವತಂತ್ರ ಪದಾರ್ಥಗಳು ಅಥವಾ ಪೃಥಿವಿ ಇಂದ ರಚಿತವಾದುದು ಎನ್ನುವುದಕ್ಕಿಂತ ಅವೆಲ್ಲವೂ ಒಂದೇ ಪೃಥ್ವಿಯ ವಿಭಿನ್ನ ಪ್ರಕಾರಗಳು ಅಥವಾ ರೂಪಗಳು ಎನ್ನುವುದು ಯುಕ್ತ. ಇದೇ ರೀತಿ ಜಗತ್ತಿನಲ್ಲಿ ಇನ್ನೂ ನಾಲ್ಕು ಪದಾರ್ಥಗಳನ್ನು ಗುರುತಿಸಬಹುದು. ಅವು ಜಲ, ತೇಜಸ್ಸು (ಸೂರ್ಯ), ವಾಯು ಮತ್ತು ಆಕಾಶ. ಇವೆಲ್ಲವುಗಳ ನಡುವೆಯೂ ಒಂದು ಸಮಾನ ಗುಣವಿದೆ. ಇವೆಲ್ಲವೂ ಜಡ ಅಥವಾ ಅಚೇತನ. ಈ ಜಡವನ್ನು ಅಜ್ಞಾನ, ಮಾಯಾ, ಪ್ರಕೃತಿ ಎಂದು ಕರೆದು ಅವು ಪಾರಮಾರ್ಥಿಕವಾಗಿ ಸತ್ಯವಲ್ಲ ಎನ್ನುವರು. ಶರೀರ ಜಗತ್ತಿನ ಒಂದು ಅಂಶವಾದುದರಿಂದ ಅದೂ ಜಗತ್ತಿನಂತೆಯೇ ಮಿಥ್ಯೆ. ಆದರೆ ಚೈತನ್ಯ ಶಾಶ್ವತವಾದ ಸತ್ಯ ವಸ್ತು. ಆದ್ದರಿಂದ ಅವೆರಡರ ಸಂಬಂಧ ವಸ್ತು ಭೂತವಾಗಲಾರದು. ಜೀವದ ನಿಜವಾದ ಸ್ವರೂಪ ಶುದ್ಧ ಚೈತನ್ಯ. ಅದು ಸತ್ಯ, ನಿತ್ಯ, ಅಖಂಡ, ವಿಭು, ಆನಂದಾತ್ಮಕವೂ ಆಗಿದೆ ಎಂದು ಶೃತಿ ನಿರೂಪಿಸುತ್ತದೆ.

ಬ್ರಹ್ಮ ಒಂದೇ ಸತ್ಯ ಎಂಬ ವೇದಾಂತದ ಪ್ರತಿಪಾದನೆಯು ನಮಗೆ ಬ್ರಹ್ಮದ ವಿಷಯದಲ್ಲಿ ಪರೋಕ್ಷವಾದ, ಶಾಬ್ದಿಕವಾದ ವರ್ಣನೆ ನೀಡುತ್ತದೆ. ಇದು ಒಂದು ದೃಢವಾದ ಬೌದ್ಧಿಕ ಸಿದ್ಧಾಂತವನ್ನು ಒದಗಿಸಲು ಸಾಕಾದರೂ ವೇದಾಂತದ ಗುರಿಯಾದ ಮುಕ್ತಿಯನ್ನು ನೀಡಲು ಇದಿಷ್ಟೇ ಸಾಲದು. ಏಕೆಂದರೆ, ಅಪರೋಕ್ಷವಾದ ಅನುಭವಾವಸಾನವಾದ ಬ್ರಹ್ಮ ಜ್ಞಾನ ಅವಿದ್ಯೆಯ ನಿವರ್ತಕೆ ಮತ್ತು ಮೋಕ್ಷದ ಸಾಧನವೇ ವಿನಾ ಅದರ ಪರೋಕ್ಷ ಶಬ್ದ ಜ್ಞಾನವಲ್ಲ.

ಆತ್ಮದರ್ಶನಕ್ಕೆ ಶ್ರವಣ, ಮನನ, ನಿದಿಧ್ಯಾಸನಗಳು ಸಾಧನವಾಗಿವೆ.

ಶ್ರವಣ ಎಂದರೆ ಎಲ್ಲ ವೇದಾಂತ ವಾಕ್ಯಗಳ ತಾತ್ಪರ್ಯಾರ್ಥಗಳನ್ನು ವಿಚಾರಪೂರ್ವಕವಾಗಿ ಗ್ರಹಿಸುವುದು. ವೇದಾಂತ ವಾಕ್ಯ ಎಂದರೆ ಕೇವಲ ಉಪನಿಷತ್ತುಗಳು ಆಗಿರದೇ, ಇತರ ಶಾಸ್ತ್ರಗಳೂ ಅದರಲ್ಲಿ ಸೇರಿವೆ ಮತ್ತು ಅವುಗಳ ತಾತ್ಪರ್ಯವೂ ವೇದಾಂತದ ತಾತ್ಪರ್ಯವೇ. ಶ್ರವಣದಿಂದ ಆತ್ಮದ ಅಸ್ತಿತ್ವ ಮತ್ತು ಸ್ವರೂಪದ ಬಗ್ಗೆ ಯಾವುದಾದರೂ ಪ್ರಮಾಣ ಇದೆಯೇ ಎಂಬ ಸಂದೇಹ ನಿವಾರಣೆ ಆಗುವುದು.

ಮನನ ಎಂದರೆ ತಾರ್ಕಿಕ ಚಿಂತನೆ. ಶ್ರವಣವು ವೇದಾಂತ ವಾಕ್ಯದ ವಿಚಾರವಾದರೆ ಮನನವು ಅದರ ಅರ್ಥದ ಚಿಂತನೆ. ಈ ಅರ್ಥ ಯುಕ್ತಿಯುಕ್ತವಾಗಿದೆಯೇ, ತರ್ಕಬದ್ಧವಾಗಿದೆಯೇ, ನ್ಯಾಯಸಮ್ಮತವಾಗಿದೆಯೇ, ಲೋಕಾನುಭವಕ್ಕೆ ಅನುಗುಣವಾಗಿದೆಯೇ ಎಂಬುದರ ಆಲೋಚನೆಯೇ ಮನನ. ಜಗತ್ತಿನಲ್ಲಿ ಶಾಸ್ತ್ರವೆನಿಸಿರುವುದು ವೇದಾಂತವೊಂದೇ ಅಲ್ಲ. ಸಾಂಖ್ಯ, ನ್ಯಾಯ, ಮೀಮಾಂಸ ಮುಂತಾದ ಅನೇಕ ಶಾಸ್ತ್ರಗಳಿವೆ.

ನಿಧಿಧ್ಯಾಸನ ಎಂದರೆ ಧ್ಯಾನ. ಒಂದು ವಿಷಯದ ಬಗ್ಗೆ ಮನಸ್ಸಿನ ಏಕರೂಪವಾದ ಅವಿಚ್ಛಿನ್ನ ವೃತ್ತಿ. ಶ್ರವಣದಿಂದ ದೊರೆತ ತತ್ವ, ಮನನದಿಂದ ತರ್ಕಪುಷ್ಟಿ ಪಡೆದರೂ ಅದು ಸಾಕ್ಷಾತ್ಕಾರವಾಗುವುದಿಲ್ಲ. ನಮ್ಮ ಜನ್ಮಾಂತರೀಯ ವಾಸನೆಗಳು, ಅಭ್ಯಾಸದ ರೂಢಿಗಳು ನಮ್ಮ ಮನಸ್ಸು ಏಕಾಗ್ರವಾಗಿ ಆ ವಿಷಯದಲ್ಲಿ ನಿಲ್ಲದಂತೆ ಅಡ್ಡಿ ಮಾಡುತ್ತವೆ. ಇವೇ ವಿಪರೀತ ಭಾವನೆಗಳು. ನಿದಿಧ್ಯಾಸನದಿಂದ ಇವು ನಿವೃತ್ತಿಯಾಗುತ್ತವೆ. ಅನಂತರ ಆತ್ಮಚೈತನ್ಯವು ತಾನಾಗಿಯೇ ಸ್ಫುರಿಸುತ್ತದೆ. ಅದು ಆಗದಿದ್ದಲ್ಲಿ ಸ್ಫುರಿಸುವವರೆಗೂ ನಿದಿಧ್ಯಾಸನವನ್ನು ಮಾಡುತ್ತಲೇ ಇರಬೇಕು.

ವೇದಾಂತದ ಫಲ ಪರಮಪುರುಷಾರ್ಥವಾದ ಮೋಕ್ಷ. ಇದು ಸ್ವರ್ಗದಂತೆ ಒಂದು ಪ್ರದೇಶವಲ್ಲ. ಕಾಲವಿಶೇಷವನ್ನು ಅವಲಂಬಿಸಿಲ್ಲ. ಹೊಸದಾಗಿ ಉತ್ಪನ್ನವಾಗುವುದೂ ಅಲ್ಲ. ಬ್ರಹ್ಮ ರೂಪ ಅದು. ಆದ್ದರಿಂದಲೇ ಆತ್ಮ ರೂಪ ಮತ್ತು ನಿತ್ಯ. ಈ ಕಾಲದಲ್ಲಿಯೇ, ಈ ಲೋಕದಲ್ಲಿಯೇ, ಈ ಶರೀರದಲ್ಲಿಯೇ ಅದು ಸಾಧ್ಯ.

ಜ್ಞಾನವು ಮುಕ್ತಿಯ ಏಕಮಾತ್ರ ಸಾಧನವಾಗಿ ಹೇಳಿರುವುದಿಂದ ಮೋಕ್ಷಕ್ಕೆ ಅಡ್ಡಿಯಾಗಿರುವುದು ಅವಿದ್ಯೆಯೇ ವಿನಹ ಬೇರೆ ಯಾವುದೂ ಅಲ್ಲ. ಅದರ ನಿವೃತ್ತಿಗೆ ಜ್ಞಾನದ ಮಾತ್ರ ಉದಯ ಸಾಕು. ಇನ್ಯಾವ ಕ್ರಿಯಾಂತರವೂ ಬೇಕಾಗಿಲ್ಲ. ವಸ್ತುವು ಸಿದ್ಧವಾಗಿದ್ದು, ಅದಕ್ಕೆ ಪ್ರಮಾಣ ಸಿಕ್ಕಿ, ಕರಣ ನಿರ್ದಿಷ್ಟವಾಗಿದ್ದಲ್ಲಿ ಜ್ಞಾನವು ಅವಶ್ಯವಾಗಿ ತಾನಾಗಿಯೇ ಉದಿಸುತ್ತದೆ.

ಬ್ರಹ್ಮ ಸಾಕ್ಷಾತ್ಕಾರದಿಂದ ಜೀವನ್ಮುಕ್ತನ ಸಕಲ ಕರ್ಮಗಳು ನಾಶವಾದರೂ, ಸಾಕ್ಷಾತ್ಕಾರವಾಗುವ ಮೊದಲೇ ಫಲ ನೀಡಲು ಆರಂಭಿಸಿದ ಪ್ರಾರಬ್ಧ ಕರ್ಮಗಳು ಅವು ಮುಗಿಯುವವರೆಗೂ ಇರುತ್ತವೆ. ಇದರಿಂದ ಜೀವನ್ಮುಕ್ತನಿಗೆ ಶರೀರಧಾರಣ, ಲೋಕವ್ಯವಹಾರ ನಡೆಯುತ್ತಿರುತ್ತದೆ. ಆದರೆ ಇವೆಲ್ಲ ಶರೀರ ಇತ್ಯಾದಿ ಅಭಿಮಾನದಿಂದ ನಡೆಯದೆ ಪ್ರಾರಬ್ಧ ಕರ್ಮವಶಾತ್ ನಡೆಯುವುದರಿಂದ ಜೀವನ್ಮುಕ್ತನಿಗೆ ಇವು ಬಂಧಕವಾಗುವುದಿಲ್ಲ. ಅವರಲ್ಲಿ ಅವಿದ್ಯೆಯ ಆವರಣರೂಪ ನಾಶವಾಗಿ ಕೇವಲ ವಿಕ್ಷೇಪರೂಪ ಮಾತ್ರ ಇರುತ್ತವೆ. ಇದರಿಂದ ಅವನು ಶರೀರ ಯಾತ್ರಾದಿ ಸಕಲ ವ್ಯವಹಾರಗಳನ್ನೂ ಕೇವಲ ಸಾಕ್ಷೀಭೂತನಾಗಿ ನೋಡುತ್ತಿರುತ್ತಾನೆ. ಹೀಗೆ ಅವನು ಎಷ್ಟು ಕಾಲ ಧರಿಸುತ್ತಾನೆ, ಹಾಗೆ ಧರಿಸಲು ಸಾಧ್ಯವೇ ಎಂಬ ಸಮಸ್ಯೆಗಳನ್ನು ಬಾಹ್ಯತರ್ಕದಿಂದ ನಿರ್ಣಯಿಸಲಾಗುವುದಿಲ್ಲ. ಅದು ಜ್ಞಾನಿಯ ಅನುಭವಕ್ಕೆ ಮಾತ್ರ ವೇದ್ಯ. ಶಾಸ್ತ್ರ ಮತ್ತು ಲೋಕ ಅದಕ್ಕೆ ದೃಷ್ಟಾಂತಗಳನ್ನು ಮಾತ್ರವೇ ನೀಡಬಲ್ಲವು.

ಎಲ್ಲ ಆಶ್ರಮದವರಿಗೂ ಜ್ಞಾನಕ್ಕೆ ಅಧಿಕಾರವಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.