ವಿಭಾಗಗಳು
ಲೇಖನಗಳು

ಶಾಮರಾಯರು

ಶ್ರೀರಾಮನ ಪರಮ ಭಕ್ತ, ಆಶುಕವಿ, ಶ್ರೀ ದೊಡ್ಡಸುಬ್ಬಣ್ಣನವರ ಮನೆಯೊಂದು ನಂದಗೋಕುಲ.
ಅವರ ಮಕ್ಕಳ ಹೆಸರುಗಳೆಂದರೆ ರಾಮಸ್ವಾಮಿ, ಲಕ್ಷ್ಮಣ, ಶಾಮರಾಯ, ಹನುಮಂತರಾಯ ಇತ್ಯಾದಿ. ಅವರೆಲ್ಲರೂ ಜೀವನದಲ್ಲಿಯೂ ಅದೇ ಪಾತ್ರಗಳನ್ನೇ ರೂಢಿಸಿಕೊಂಡಿದ್ದವರು. ಅವರ ದೊಡ್ಡ ಮಗ ತಳುಕಿನ ವೆಂಕಣ್ಣಯ್ಯನವರು ಕನ್ನಡ ನಾಡಿಗೆ ಚಿರಪರಿಚಿತ. ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದವರು. ಮೊತ್ತ ಮೊದಲ ಕನ್ನಡ ಎಂಎ ತರಗತಿಯಲ್ಲಿದ್ದ ಕುವೆಂಪುರವರು ಅವರ ಮೆಚ್ಚಿನ ಶಿಷ್ಯರು. ಹಾಗೆಯೇ ಎಸ್.ವಿ.ಪರಮೇಶ್ವರ ಭಟ್ಟರೂ ಕೂಡ.

ದೊಡ್ಡ ಸುಬ್ಬಣ್ಣನವರ ಇನ್ನೊಬ್ಬ ಮಗನಾದ ಶ್ರೀ ತ.ಸು.ಶಾಮರಾಯರು ಕೂಡ ಕನ್ನಡದ ಪ್ರೊಫೆಸರ್ ಆಗಿದ್ದವರು. ಇಂದು ಅವರ ಜನುಮದಿನ. ಶ್ರೀ ಕೃಷ್ಣ ಹುಟ್ಟಿದ ದಿನದಂದೇ ಹುಟ್ಟಿದವರಂತೆ. ಅದಕ್ಕೇ ಅವರಿಗೆ ಶಾಮ ಎಂಬ ಹೆಸರು ಇಟ್ಟಿದ್ದುದು. ಚಿಕ್ಕ ವಯಸ್ಸಿನಿಂದ ಬಹಳ ಕಷ್ಟದಲ್ಲಿ ಬೆಳೆದು ಬಂದವರು. ಇಂಟರ್ ಮೀಡಿಯಟ್ ನಲ್ಲಿ ಮೊತ್ತ ಮೊದಲ ಸ್ಥಾನ ಪಡೆದವರು, ಹಾಗೂ ಬಿಎ ಹಾನರ್ಸ್‍ನಲ್ಲಿ ರ‍್ಯಾಂಕ್ ಬಂದಿದ್ದು, ಭಾಸ್ಕರ ರಾಯರ ಚಿನ್ನದ ಪದಕ ಮತ್ತು ಚಾವುಂಡರಾಯ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು. ಶಾಲಾ ಮಾಸ್ತರರಾಗಿ ಮುಂದೆ ಓದಿ, ಕನ್ನಡ ಎಂಎ ಮಾಡಿದವರು. ಅವರ ಗುರುಗಳಾದ ಕುವೆಂಪುರವರಿಗೆ ಪಟ್ಟ ಶಿಷ್ಯ. ಉತ್ತಮ ಗುರುವಿಗೆ ಉತ್ತಮ ಶಿಷ್ಯ. ಕನ್ನಡದಲ್ಲಿ ವೀರಶೈವ ಸಾಹಿತ್ಯದಲ್ಲಿ ಉತ್ತಮ ಕೃತಿಗಳನ್ನು ತಂದಿತ್ತವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯ ಬಗ್ಗೆ ಬರೆಯಲು ನಾನು ಅಶಕ್ತ. ಆದರೂ ಕೆಲ ಕಾಲ ಅವರನ್ನು ದೂರದಿಂದ ನೋಡಿದವನು ಮತ್ತು ಅವರ ಮನೆಯ ಅನ್ನ ತಿಂದ ಋಣಿಯಾದ ನನಗೆ ಅವರ ಬಗ್ಗೆ ಎರಡಕ್ಷರ ಬರೆಯುವ ತವಕ.

ಶಾಮರಾಯರದ್ದು ಬಹಳ ಶಿಸ್ತಿನ ಜೀವನ. ಅವರ ಹಾಗೆಯೇ ಅವರ ಮಕ್ಕಳೂ ಅವರವರ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸಿದವರು. ಅವರು ತಮ್ಮ ಮಕ್ಕಳಿಗೆ ಜೀವ ಕೊಟ್ಟರೇ ಹೊರತು, ಕೈಲಾಗಿದ್ದರೂ ಜೀವನ ಕೊಡಲಿಲ್ಲ. ಎಲ್ಲ ಮಾನವರೂ ಕಲಿಯಬೇಕಾದ ಇದೊಂದು ಜೀವನದ ಉತ್ತಮ ಪಾಠ.

ಸಾವಿರಾರು ಮಂದಿಗೆ ತ್ರಿದಾಸೋಹದಾತರಾಗಿದ್ದವರು. ಅವರ ಬಳಿಗೆ ಬಂದವರು ಅವರ ಶಿಷ್ಯರೇ ಆಗಬೇಕೆಂದಿರಲಿಲ್ಲ. ಅವರನ್ನು ನಂಬಿ ಬಂದವರಿಗೆ ಅನ್ನ, ವಸತಿ ಮತ್ತು ವಿದ್ಯೆಯನ್ನು ಕೊಟ್ಟು ಉತ್ತಮ ಪ್ರಜೆಗಳನ್ನಾಗಿ ಮಾಡಿದವರು. ಅವರ ಶಿಷ್ಯಂದಿರಲ್ಲಿ ಹೇಳಬಹುದಾದ ಕೆಲವು ಹೆಸರುಗಳೆಂದರೆ, ಶ್ರೀ ಜಿ.ಎಸ್. ಶಿವರುದ್ರಪ್ಪನವರು, ಎನ್.ಎಸ್. ಲಕ್ಷೀನಾರಾಯಣ ಭಟ್ಟರು ಇತ್ಯಾದಿ. ಶಿವರುದ್ರಪ್ಪನವರು ಶಾಮರಾಯರಿಗೆ ಗುರುಕಾಣಿಕೆಯಾಗಿ ’ಎದೆ ತುಂಬಿ ಹಾಡಿದೆನು’ ಎನ್ನುವ ಕವನವನ್ನು ಬರೆದಿದ್ದರಂತೆ. ಇನ್ನು ಲಕ್ಷ್ಮೀನಾರಾಯಣ ಭಟ್ಟರಂತೂ ಶಾಮರಾಯರಿಗೆ ಮಗನಂತೆಯೇ ಇದ್ದರು. ನಾನು ನೋಡಿದ ಒಂದು ಘಟನೆ. ಶಾಮರಾಯರು ದೈವ ಅಧೀನರಾದ ಬಳಿಕದ 10ನೆಯ ದಿನ ಧರ್ಮೋದಕಕ್ಕೆಂದು ಅವರೂ ಬಂದಿದ್ದರು. ಪುರೋಹಿತರು ಧರ್ಮೋದಕ ಕೊಡಿಸುವಾಗ, ಮೃತರಿಗೆ ಯಾವ ರೀತಿಯ ಸಂಬಂಧಿಗಳೆಂದು ಕೇಳುತ್ತಿದ್ದರು. ಭಟ್ಟರ ಸರದಿ ಬಂದಾಗ, ಭಟ್ಟರು ಅವರು ನನ್ನ ತಂದೆ ಅಂದಿದ್ದರು. ಅಲ್ಲಿದ್ದ ನಾವೆಲ್ಲರೂ ಅವಾಕ್ಕಾಗಿದ್ದೆವು. ಇನ್ನೂ ಎಷ್ಟೊ ಮಂದಿ ಅವರಿಗೆ ಋಣಿಗಳಾಗಿದ್ದಾರೆ.

ಅವರೊಬ್ಬ ಉತ್ತಮ ಅಧ್ಯಾತ್ಮಿಕ ಚಿಂತಕ. ಅವರು ದೈವೀ ಉಪಾಸಕರು. ದೈವೀ ಶಕ್ತಿ ಅವರಿಗೆ ಸಿದ್ಧಿಸಿತ್ತಂತೆ. ಲಲಿತಾದೇವಿಯ ಬೀಜಾಕ್ಷರ ಮಂತ್ರವನ್ನು ಹಲವರಿಗೆ ಉಪದೇಶಿಸಿದ್ದರಂತೆ. ಪ್ರತಿ ನಿತ್ಯ ದೇವರ ಪೂಜೆ ಮಾಡಿ ಮಂಗಳಾರತಿ ಮಾಡಿದವರು, ತನ್ನ ಅಣ್ಣ ವೆಂಕಣ್ಣಯ್ಯನವರ ಭಾವಚಿತ್ರಕ್ಕೂ ಮಂಗಳಾರತಿ ಮಾಡುತ್ತಿದ್ದರಂತೆ. ವೆಂಕಣ್ಣಯ್ಯನವರು ಲೌಕಿಕ ಲೋಕದಿಂದ ಬಹಳ ಎತ್ತರಕ್ಕೆ ಏರಿದ ಜೀವಿ. ಯಾವ ಕೃತಿಗೂ ಅವರು ಶ್ರೇಯ ತೆಗೆದುಕೊಳ್ಳದವರು. ಅವರನ್ನು ಅವರ ಕೃತಿಗಳನ್ನು ಈ ಲೌಕಿಕ ಪ್ರಪಂಚಕ್ಕೆ ಪರಿಚಯಿಸಿದವರು, ಶಾಮರಾಯರು.

ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಹೆಚ್ಚಿನ ಕಾಲವೆಲ್ಲಾ ಅಧ್ಯಾತ್ಮ ಚಿಂತನೆಯಲ್ಲಿಯೇ ಕಳೆದರು. ಮೈಸೂರಿನ ರಾಮಕೃಷ್ಣಾಶ್ರಮ, ಗುಬ್ಬಿ ಚಿದಂಬರಾಶ್ರಮ, ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಗುರುಗಳ ಸಾನ್ನಿಧ್ಯದಲ್ಲಿದ್ದಾಗ ಕೈನಲ್ಲಿದ್ದದ್ದನ್ನೆಲ್ಲಾ ಕೊಟ್ಟುಬಿಡುತ್ತಿದ್ದರು. ಎಷ್ಟೋ ವೇಳೆ ಮನೆಯ ಖರ್ಚಿಗಿಲ್ಲದಿದ್ದರೂ ದಾನ ಕೊಡುವುದಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದರು. ಅವರ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲವಂತೆ. ಅವರಿಗೆ ತಕ್ಕಂತಿದ್ದವರು ಅವರ ಧರ್ಮಪತ್ನಿ. ಯಾರೇ ಯಾವಾಗಲೇ ಅವರ ಮನೆಗೆ ಹೋದರೂ, ಊಟ ಬಡಿಸದೇ ಕಳುಹಿಸಿದವರಲ್ಲ.

ಎತ್ತರದ ವ್ಯಕ್ತಿ – ಎತ್ತರದ ವ್ಯಕ್ತಿತ್ವ ಹೊಂದಿದ್ದ ಅಣ್ಣನ ಹೆಸರನ್ನು ಇನ್ನೂ ಎತ್ತರಕ್ಕೇರಿಸಿದವರು. ಅವರ ನೆನಪಿಗೆ ’ಸವಿನೆನಪು’ ಪ್ರಕಟಿಸಿದ್ದರು. ಅಣ್ಣನ ಸಾಹಿತ್ಯಕ ಕೃತಿಗಳು, ತಮ್ಮ ಕೃತಿಗಳೊಂದಿಗೆ ಇನ್ನೂ ಹಲವರ ಕೃತಿಗಳನ್ನು ’ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ಮುಖೇನ ಪ್ರಕಾಶಿಸಿದ್ದಾರೆ.

ಇಂತಹ ತಂಪು ಹೊತ್ತಿನಲ್ಲಿ ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯಲೇ ಬೇಕು.