ವಿಭಾಗಗಳು
ಲೇಖನಗಳು

ಶಾಮರಾಯರು

ಶ್ರೀರಾಮನ ಪರಮ ಭಕ್ತ, ಆಶುಕವಿ, ಶ್ರೀ ದೊಡ್ಡಸುಬ್ಬಣ್ಣನವರ ಮನೆಯೊಂದು ನಂದಗೋಕುಲ.
ಅವರ ಮಕ್ಕಳ ಹೆಸರುಗಳೆಂದರೆ ರಾಮಸ್ವಾಮಿ, ಲಕ್ಷ್ಮಣ, ಶಾಮರಾಯ, ಹನುಮಂತರಾಯ ಇತ್ಯಾದಿ. ಅವರೆಲ್ಲರೂ ಜೀವನದಲ್ಲಿಯೂ ಅದೇ ಪಾತ್ರಗಳನ್ನೇ ರೂಢಿಸಿಕೊಂಡಿದ್ದವರು. ಅವರ ದೊಡ್ಡ ಮಗ ತಳುಕಿನ ವೆಂಕಣ್ಣಯ್ಯನವರು ಕನ್ನಡ ನಾಡಿಗೆ ಚಿರಪರಿಚಿತ. ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದವರು. ಮೊತ್ತ ಮೊದಲ ಕನ್ನಡ ಎಂಎ ತರಗತಿಯಲ್ಲಿದ್ದ ಕುವೆಂಪುರವರು ಅವರ ಮೆಚ್ಚಿನ ಶಿಷ್ಯರು. ಹಾಗೆಯೇ ಎಸ್.ವಿ.ಪರಮೇಶ್ವರ ಭಟ್ಟರೂ ಕೂಡ.

ದೊಡ್ಡ ಸುಬ್ಬಣ್ಣನವರ ಇನ್ನೊಬ್ಬ ಮಗನಾದ ಶ್ರೀ ತ.ಸು.ಶಾಮರಾಯರು ಕೂಡ ಕನ್ನಡದ ಪ್ರೊಫೆಸರ್ ಆಗಿದ್ದವರು. ಇಂದು ಅವರ ಜನುಮದಿನ. ಶ್ರೀ ಕೃಷ್ಣ ಹುಟ್ಟಿದ ದಿನದಂದೇ ಹುಟ್ಟಿದವರಂತೆ. ಅದಕ್ಕೇ ಅವರಿಗೆ ಶಾಮ ಎಂಬ ಹೆಸರು ಇಟ್ಟಿದ್ದುದು. ಚಿಕ್ಕ ವಯಸ್ಸಿನಿಂದ ಬಹಳ ಕಷ್ಟದಲ್ಲಿ ಬೆಳೆದು ಬಂದವರು. ಇಂಟರ್ ಮೀಡಿಯಟ್ ನಲ್ಲಿ ಮೊತ್ತ ಮೊದಲ ಸ್ಥಾನ ಪಡೆದವರು, ಹಾಗೂ ಬಿಎ ಹಾನರ್ಸ್‍ನಲ್ಲಿ ರ‍್ಯಾಂಕ್ ಬಂದಿದ್ದು, ಭಾಸ್ಕರ ರಾಯರ ಚಿನ್ನದ ಪದಕ ಮತ್ತು ಚಾವುಂಡರಾಯ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು. ಶಾಲಾ ಮಾಸ್ತರರಾಗಿ ಮುಂದೆ ಓದಿ, ಕನ್ನಡ ಎಂಎ ಮಾಡಿದವರು. ಅವರ ಗುರುಗಳಾದ ಕುವೆಂಪುರವರಿಗೆ ಪಟ್ಟ ಶಿಷ್ಯ. ಉತ್ತಮ ಗುರುವಿಗೆ ಉತ್ತಮ ಶಿಷ್ಯ. ಕನ್ನಡದಲ್ಲಿ ವೀರಶೈವ ಸಾಹಿತ್ಯದಲ್ಲಿ ಉತ್ತಮ ಕೃತಿಗಳನ್ನು ತಂದಿತ್ತವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯ ಬಗ್ಗೆ ಬರೆಯಲು ನಾನು ಅಶಕ್ತ. ಆದರೂ ಕೆಲ ಕಾಲ ಅವರನ್ನು ದೂರದಿಂದ ನೋಡಿದವನು ಮತ್ತು ಅವರ ಮನೆಯ ಅನ್ನ ತಿಂದ ಋಣಿಯಾದ ನನಗೆ ಅವರ ಬಗ್ಗೆ ಎರಡಕ್ಷರ ಬರೆಯುವ ತವಕ.

ಶಾಮರಾಯರದ್ದು ಬಹಳ ಶಿಸ್ತಿನ ಜೀವನ. ಅವರ ಹಾಗೆಯೇ ಅವರ ಮಕ್ಕಳೂ ಅವರವರ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸಿದವರು. ಅವರು ತಮ್ಮ ಮಕ್ಕಳಿಗೆ ಜೀವ ಕೊಟ್ಟರೇ ಹೊರತು, ಕೈಲಾಗಿದ್ದರೂ ಜೀವನ ಕೊಡಲಿಲ್ಲ. ಎಲ್ಲ ಮಾನವರೂ ಕಲಿಯಬೇಕಾದ ಇದೊಂದು ಜೀವನದ ಉತ್ತಮ ಪಾಠ.

ಸಾವಿರಾರು ಮಂದಿಗೆ ತ್ರಿದಾಸೋಹದಾತರಾಗಿದ್ದವರು. ಅವರ ಬಳಿಗೆ ಬಂದವರು ಅವರ ಶಿಷ್ಯರೇ ಆಗಬೇಕೆಂದಿರಲಿಲ್ಲ. ಅವರನ್ನು ನಂಬಿ ಬಂದವರಿಗೆ ಅನ್ನ, ವಸತಿ ಮತ್ತು ವಿದ್ಯೆಯನ್ನು ಕೊಟ್ಟು ಉತ್ತಮ ಪ್ರಜೆಗಳನ್ನಾಗಿ ಮಾಡಿದವರು. ಅವರ ಶಿಷ್ಯಂದಿರಲ್ಲಿ ಹೇಳಬಹುದಾದ ಕೆಲವು ಹೆಸರುಗಳೆಂದರೆ, ಶ್ರೀ ಜಿ.ಎಸ್. ಶಿವರುದ್ರಪ್ಪನವರು, ಎನ್.ಎಸ್. ಲಕ್ಷೀನಾರಾಯಣ ಭಟ್ಟರು ಇತ್ಯಾದಿ. ಶಿವರುದ್ರಪ್ಪನವರು ಶಾಮರಾಯರಿಗೆ ಗುರುಕಾಣಿಕೆಯಾಗಿ ’ಎದೆ ತುಂಬಿ ಹಾಡಿದೆನು’ ಎನ್ನುವ ಕವನವನ್ನು ಬರೆದಿದ್ದರಂತೆ. ಇನ್ನು ಲಕ್ಷ್ಮೀನಾರಾಯಣ ಭಟ್ಟರಂತೂ ಶಾಮರಾಯರಿಗೆ ಮಗನಂತೆಯೇ ಇದ್ದರು. ನಾನು ನೋಡಿದ ಒಂದು ಘಟನೆ. ಶಾಮರಾಯರು ದೈವ ಅಧೀನರಾದ ಬಳಿಕದ 10ನೆಯ ದಿನ ಧರ್ಮೋದಕಕ್ಕೆಂದು ಅವರೂ ಬಂದಿದ್ದರು. ಪುರೋಹಿತರು ಧರ್ಮೋದಕ ಕೊಡಿಸುವಾಗ, ಮೃತರಿಗೆ ಯಾವ ರೀತಿಯ ಸಂಬಂಧಿಗಳೆಂದು ಕೇಳುತ್ತಿದ್ದರು. ಭಟ್ಟರ ಸರದಿ ಬಂದಾಗ, ಭಟ್ಟರು ಅವರು ನನ್ನ ತಂದೆ ಅಂದಿದ್ದರು. ಅಲ್ಲಿದ್ದ ನಾವೆಲ್ಲರೂ ಅವಾಕ್ಕಾಗಿದ್ದೆವು. ಇನ್ನೂ ಎಷ್ಟೊ ಮಂದಿ ಅವರಿಗೆ ಋಣಿಗಳಾಗಿದ್ದಾರೆ.

ಅವರೊಬ್ಬ ಉತ್ತಮ ಅಧ್ಯಾತ್ಮಿಕ ಚಿಂತಕ. ಅವರು ದೈವೀ ಉಪಾಸಕರು. ದೈವೀ ಶಕ್ತಿ ಅವರಿಗೆ ಸಿದ್ಧಿಸಿತ್ತಂತೆ. ಲಲಿತಾದೇವಿಯ ಬೀಜಾಕ್ಷರ ಮಂತ್ರವನ್ನು ಹಲವರಿಗೆ ಉಪದೇಶಿಸಿದ್ದರಂತೆ. ಪ್ರತಿ ನಿತ್ಯ ದೇವರ ಪೂಜೆ ಮಾಡಿ ಮಂಗಳಾರತಿ ಮಾಡಿದವರು, ತನ್ನ ಅಣ್ಣ ವೆಂಕಣ್ಣಯ್ಯನವರ ಭಾವಚಿತ್ರಕ್ಕೂ ಮಂಗಳಾರತಿ ಮಾಡುತ್ತಿದ್ದರಂತೆ. ವೆಂಕಣ್ಣಯ್ಯನವರು ಲೌಕಿಕ ಲೋಕದಿಂದ ಬಹಳ ಎತ್ತರಕ್ಕೆ ಏರಿದ ಜೀವಿ. ಯಾವ ಕೃತಿಗೂ ಅವರು ಶ್ರೇಯ ತೆಗೆದುಕೊಳ್ಳದವರು. ಅವರನ್ನು ಅವರ ಕೃತಿಗಳನ್ನು ಈ ಲೌಕಿಕ ಪ್ರಪಂಚಕ್ಕೆ ಪರಿಚಯಿಸಿದವರು, ಶಾಮರಾಯರು.

ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಹೆಚ್ಚಿನ ಕಾಲವೆಲ್ಲಾ ಅಧ್ಯಾತ್ಮ ಚಿಂತನೆಯಲ್ಲಿಯೇ ಕಳೆದರು. ಮೈಸೂರಿನ ರಾಮಕೃಷ್ಣಾಶ್ರಮ, ಗುಬ್ಬಿ ಚಿದಂಬರಾಶ್ರಮ, ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಗುರುಗಳ ಸಾನ್ನಿಧ್ಯದಲ್ಲಿದ್ದಾಗ ಕೈನಲ್ಲಿದ್ದದ್ದನ್ನೆಲ್ಲಾ ಕೊಟ್ಟುಬಿಡುತ್ತಿದ್ದರು. ಎಷ್ಟೋ ವೇಳೆ ಮನೆಯ ಖರ್ಚಿಗಿಲ್ಲದಿದ್ದರೂ ದಾನ ಕೊಡುವುದಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದರು. ಅವರ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲವಂತೆ. ಅವರಿಗೆ ತಕ್ಕಂತಿದ್ದವರು ಅವರ ಧರ್ಮಪತ್ನಿ. ಯಾರೇ ಯಾವಾಗಲೇ ಅವರ ಮನೆಗೆ ಹೋದರೂ, ಊಟ ಬಡಿಸದೇ ಕಳುಹಿಸಿದವರಲ್ಲ.

ಎತ್ತರದ ವ್ಯಕ್ತಿ – ಎತ್ತರದ ವ್ಯಕ್ತಿತ್ವ ಹೊಂದಿದ್ದ ಅಣ್ಣನ ಹೆಸರನ್ನು ಇನ್ನೂ ಎತ್ತರಕ್ಕೇರಿಸಿದವರು. ಅವರ ನೆನಪಿಗೆ ’ಸವಿನೆನಪು’ ಪ್ರಕಟಿಸಿದ್ದರು. ಅಣ್ಣನ ಸಾಹಿತ್ಯಕ ಕೃತಿಗಳು, ತಮ್ಮ ಕೃತಿಗಳೊಂದಿಗೆ ಇನ್ನೂ ಹಲವರ ಕೃತಿಗಳನ್ನು ’ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ಮುಖೇನ ಪ್ರಕಾಶಿಸಿದ್ದಾರೆ.

ಇಂತಹ ತಂಪು ಹೊತ್ತಿನಲ್ಲಿ ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯಲೇ ಬೇಕು.

ವಿಭಾಗಗಳು
ಲೇಖನಗಳು

ಶ್ರೀ ಕೃಷ್ಣ ಜನ್ಮಾಷ್ಟಮಿ

ಚಾಂದ್ರಮಾನ ಪಂಚಾಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಸೌರಮಾನ ಪಂಚಾಗ ರೀತ್ಯಾ ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು, ಪೂಜಿಸುವರು. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು. ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ. ‘ತಿಥಿತತ್ವ’ ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ – “ಜಯಂತಿ ಯೋಗವು ಒಂದು ದಿವನ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು. ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು. ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು. ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ ಆಚರಿಸಬೇಕು. ಎರಡು ದಿನಗಳಲ್ಲಿಯೂ ಅಷ್ಟಮಿಯಿದ್ದರೆ ಅಥವಾ ಅಷ್ಟಮಿಯು ಎರಡು ದಿನಗಳಲ್ಲಿಯೂ ಅರ್ಧರಾತ್ರಿಯಲ್ಲಿ ಇಲ್ಲದಿದ್ದರೆ ಆಗ ಎರಡನೆಯ ದಿನದಲ್ಲಿ ವ್ರತವನ್ನಾಚರಿಸಬೇಕು. ತಿಥಿಯೋಗವಿಲ್ಲದಿದ್ದರೂ ಕೇವಲ ರೋಹಿಣೀ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು. ರೋಹಿಣೀ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೇ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧಾನ್ಯ ಕೊಟ್ಟು ವ್ರತವನ್ನಾಚರಿಸಬೇಕು.

ಅಂದು ಶುದ್ಧವಾಗಿದ್ದು ಬೆಳಗಿನಿಂದ ಸಂಜೆಯವರೆವಿಗೆ ಉಪವಾಸವಿದ್ದು, ಭಕ್ತಿ ಶ್ರದ್ಧೆಗಳಿಂದ ಷೋಡಶಾಂಗ ಪೂಜೆಯನ್ನು ಶ್ರಿ ಕೃಷ್ಣ ಪರಮಾತ್ಮನಿಗೆ ಮಾಡಬೇಕು. ಇಲ್ಲಿ ಉಪವಾಸವು ಮುಖ್ಯವಾದುದು. ಉಪವಾಸವೆಂಬುದು ಶರೀರ ಶೋಷಣೆ ಮತ್ತು ಆತ್ಮಪೋಷಣೆಯಾಗಿರುತ್ತದೆ. ಅಂದು ಸಂಯಮದ ದಿವಸ. ಪರಮಾತ್ಮನ ಸಹವಾಸದಲ್ಲಿಯೇ ಇದ್ದು, ಅದಕ್ಕೆ ಸಹಾಯಕವಾಗುವಂತೆ ಇಂದ್ರಿಯಗಳಿಗೆ ಭೌತಿಕವಾಗಿ ಆಹಾರವನ್ನು ಕೊಡದೇ, ಪೂಜೆ ಮುಗಿಯುವವರೆವಿಗೆ ಉಪವಾಸವಿದ್ದು, ತದನಂತರ ಮಹಾಪ್ರಸಾದವನ್ನು ಸ್ವೀಕರಿಸಬೇಕು. ಪೂರ್ಣವಾಗಿ ಉಪವಾಸವನ್ನು ಮಾಡಲಾಗದ ಅಶಕ್ತರು ಲಘು ಆಹಾರವನ್ನು ಸೇವಿಸಬಹುದು. ರಾತ್ರಿಯೆಲ್ಲಾ ಜಾಗರಣೆ ಮಾದಿ ಪರಮಾತ್ಮ ಸ್ಮರಣೆಯನ್ನು ಮಾಡಬೇಕು. ಜಾಗರಣೆಯ ಸಮಯವನ್ನು ಭಗವಂತನ ಧ್ಯಾನ, ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ದಾನದಕ್ಷಿಣೆಗಳನ್ನು ಯಥಾಶಕ್ತಿ ಸತ್ಪಾತ್ರರಿಗೆ ಕೊಡಬೇಕು. ಭಗವಂತನ ಪ್ರೀತ್ಯರ್ಥವಾಗಿ ದಾನ ಮಾಡುವುದು ಉತ್ತಮ ಕಲ್ಪವಾದರೆ ಕಾಮ್ಯವಾಗಿ (ಪ್ರತಿಫಲಾರ್ಥವಾಗಿ) ದಾನ ಮಾಡುವುದು ಸಾಮಾನ್ಯಕಲ್ಪ.

ಅಂದು ಭಗವಂತನ ಪೂಜಾಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸುವರು. ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು. ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುವರು. ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸುವರು. ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋದೆ, ಗೋಪಿಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸುವರು. ಮಂಟಪದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಷೋಡಶಾಂಗ ಪೂಜಾವಿಧಾನದಲ್ಲಿ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು. ೮ ಬಗೆಯ ಖಾರ ಮತ್ತು ೮ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುವುದು ವಾಡಿಕೆ. ಈ ಹದಿನಾರು ಬಗೆಯ ತಿನಿಸುಗಳಲ್ಲಿ ಅವಲಕ್ಕಿಯಿಂದ ಮಾಡಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯ. ಈ ಸಂದರ್ಭದಲ್ಲಿ ವಿಷ್ಣು ಪುರಾಣ, ಶ್ರೀ ಮದ್ಭಾಗವತವನ್ನು ಪಾರಾಯಣ ಮಾಡುವರು. ಮಥುರೆಯ ದೇಗುಲದಲ್ಲಿ ಅಂದು ಉತ್ಸವವನ್ನಾಚರಿಸುವರು. ಇಲ್ಲಿ ನೈವೇದ್ಯಕ್ಕಾಗಿ ೬೪ ಬಗೆಯ ತಿನಿಸುಗಳನ್ನು ಅರ್ಪಿಸುವರು. ಇದರಲ್ಲಿ ವಿಶೇಷವಾದ ಒಂದು ತಿನಿಸೆಂದರೆ ಖೋವಾಪೂರಿ. ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು – ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು. ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ಎಂದಾಚರಿಸಿ, ಬೀದಿ ಬೀದಿಗಳಲ್ಲಿ ಆಲಾರೇ ಗೋವಿಂದ ಎಂದು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು ದಹಿಹಂಡಿ ಎನ್ನುವರು. ಇದರ ಬಗ್ಗೆಯೇ ಒಂದು ವಿಶೇಷ ಲೇಖನವನ್ನು ಬರೆದು ಪ್ರಕಟವಾಗಿತ್ತು.

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ. ಮಥುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ-ದೇವಕಿ ಕುಟುಂಬದ ಎಂಟನೆಯ ಮಗು ಶ್ರೀ ವಾಸುದೇವ. ಗೋಕುಲದಲ್ಲಿ ಯಶೋದೆಯ ಮುದ್ದು ಪೋರನಾಗಿ ಬೆಳೆದು, ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ. ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ. ಜಾಂಬವಂತನಿಂದ ಸ್ಯಮಂತಕಮಣಿಯನ್ನು ಪಡೆದ ದೈವರೂಪಿ. ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು. ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ. ಇವನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು. ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ. ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನೂ, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ.

ಕೆಲವರ ಪ್ರಕಾರ ಶ್ರೀ ಕೃಷ್ಣನೂ ಮತ್ತು ಏಸು ಕ್ರಿಸ್ತನೂ ಒಬ್ಬನೇ. ಆದರೆ ಏಸುಕ್ರಿಸ್ತನು ಹುಟ್ಟುವ ಮುನ್ನೂರು ವರ್ಷಗಳ ಮೊದಲೇ ಭಾರತಕ್ಕೆ ಬಂದಿದ್ದ ಮೆಗಸ್ತಾನಿಸ್ ಎಂಬ ಗ್ರೀಕ್ ಚರಿತ್ರೆಕಾರ ಶ್ರೀ ಕೃಷ್ಣನ ಪೂಜೆಯ ಬಗ್ಗೆ ಉಲ್ಲೇಖಿಸಿದ್ದಾನೆ.

ವಿಭಾಗಗಳು
ಕಥೆಗಳು

ಅತೃಪ್ತೆ

ರಾಧಿಕಾ ತುಸು ಕಂದು ಬಣ್ಣದವಳಾದರೂ ಸುಂದರ ಹೆಣ್ಣು. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಸೋದರಮಾವನ ನೆರಳಿನಲ್ಲಿ ಬೆಳೆದವಳು. ಮಂಗಳೂರಿನ ಹುಡುಗಿ ಬಿ.ಕಾಂ.ನಲ್ಲಿ ಮೊದಲನೆಯ ‍ರ‍್ಯಾಂಕ್ ಪಡೆದಿದ್ದಳು. ಎಲ್ಲರೂ ಕೆಲಸವನ್ನು ಹುಡುಕಿಕೊಂಡು ಹೋದರೆ, ಬ್ಯಾಂಕಿನ ನೌಕರಿ ಅವಳನ್ನೇ ಹುಡುಕಿ ಬಂದಿತ್ತು. ಆಫೀಸರ್ ಹುದ್ದೆಗೆ ಆಸೆಪಟ್ಟು ಬೇರೆ ರಾಜ್ಯಕ್ಕೆ ಹೋಗುವ ಬದಲು ನಮ್ಮದೇ ಕನ್ನಡ ನಾಡಿನಲ್ಲಿದ್ದರೂ ಸರಿ ಎಂದು ಗುಮಾಸ್ತೆ ಹುದ್ದೆಗೆ ಸೇರಿದ್ದಳು. ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿಯೇ ಉದ್ಯೋಗವಾಗಿತ್ತು. ಕೆಲಸ ಸಿಕ್ಕ ಒಂದೇ ವರ್ಷದಲ್ಲಿ ತನ್ನೂರಿನವನೇ ಆದ ರತ್ನಾಕರನೊಂದಿಗೆ ಮದುವೆಯೂ ಆಗಿ ಹೋಗಿತ್ತು. ಹಕ್ಕಿಯಂತೆ ಮನ ಬಂದಂತೆ ಸುತ್ತಾಡಿ, ಹಕ್ಕಿಯಂತೆ ಹಾರಾಡಬೇಕೆಂಬ ಕನಸು ಕಟ್ಟಿಕೊಂಡಿದ್ದವಳನ್ನು ಮದುವೆ ಆಗಿದ್ದವನು ಮಿನಿಸ್ಟರ್ ಅವರ ಆಪ್ತ ಕಾರ್ಯದರ್ಶಿ. ಮದುವೆಯಾದ ಒಂದು ವಾರದಲ್ಲೇ ಕೆಲಸಕ್ಕೆ ಹಾಜರಾಗಿದ್ದ. ಬೆಳಗ್ಗೆ 7ಕ್ಕೆ ಹೋದರೆ ಸಂಜೆ 10ಕ್ಕೆ ಮನೆಗೆ ವಾಪಸ್ಸು ಮನೆಗೆ ಬರುವುದು. ಮನೆಗೆ ಬರುವಾಗಲೇ ಸುಸ್ತು ಅಂತ ಊಟ ಮಾಡಿ ಮಲಗಿಬಿಡುತ್ತಿದ್ದ. ಅವರಿಗೆ ಒಂದೇ ವರ್ಷದಲ್ಲಿ ಒಂದು ಹೆಣ್ಣು ಮಗುವೂ ಆಗಿತ್ತು. ಈಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನು ಅತ್ತೆಯೇ ಅಂದ್ರೆ ಮಗುವಿನ ಅಜ್ಜಿ ನೋಡಿಕೊಳ್ಳುತ್ತಿದ್ದರು. ಮಗುವೂ ಅಜ್ಜ ಅಜ್ಜಿಗೆ ತುಂಬಾ ಹೊಂದಿಕೊಂಡುಬಿಟ್ಟಿತ್ತು. ಅಪ್ಪ ಅಮ್ಮ ಇಲ್ಲದಿದ್ದರೂ ಅದು ಅವಾಂತರ ಮಾಡುತ್ತಿರಲಿಲ್ಲ.
ಜಾಣೆ ರಾಧಿಕಾ ಎರಡೇ ವರ್ಷಗಳಲ್ಲಿ ಬ್ಯಾಂಕಿನ ಎಲ್ಲ ಕೆಲಸಗಳನ್ನೂ ಕಲಿತು, ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಬೆಳಗ್ಗೆ ಎಲ್ಲರಿಗಿಂತ ಮೊದಲೇ ಬಂದು ಎಲ್ಲ ಕೆಲಸವನ್ನೂ ಮಾಡುತ್ತಿದ್ದಳು. ಇತರರಿಗೂ ಸಹಾಯ ಮಾಡುತ್ತಿದ್ದಳು. ಮಧ್ಯಾಹ್ನ 2.30ರ ನಂತರ ಏನೂ ಕೆಲಸವಿಲ್ಲದೇ ಅವರಿವರೊಂದಿಗೆ ಹರಟೆ ಹೊಡೆಯುತ್ತಿದ್ದಳು.
ಆಗಲೇ ನಮ್ಮ ನಾಯಕ ಅಲ್ಲಿಗೆ ಎಂಟ್ರಿ ಕೊಟ್ಟ. ಸಾಂಬಮೂರ್ತಿ ತುಮಕೂರಿನ ತರುಣ. ವಯಸ್ಸಿನಲ್ಲಿ ರಾಧಿಕಾಗಿಂತ ಎರಡು ವರ್ಷ ದೊಡ್ಡವನು. ಆಗಿನ್ನೂ ಅದೇ ಬ್ಯಾಂಕಿಗೆ ಕೆಲಸಕ್ಕೆ ಸೇರಿದ್ದ. ಸ್ವಲ್ಪ ಮಂದ ಬುದ್ಧಿಯವನು. ಏನೇ ಹೇಳಿಕೊಟ್ಟರೂ, ಮೊದಲನೆ ಬಾರಿಗೆ ತಪ್ಪು ಮಾಡುತ್ತಿದ್ದ. ಎರಡೆರಡು ಬಾರಿ ಹೇಳಿಕೊಡಬೇಕು. ಅವನಿಗೆ ಕೆಲಸ ಹೇಳಿ ಕೊಡಲು ಮೇಲಧಿಕಾರಿಗಳು ರಾಧಿಕಾಗೆ ಹೇಳಿದ್ದರು. ಒಮ್ಮೆ ಲೆಡ್ಜರ್ ಪೋಸ್ಟ್ ಮಾಡಲು ತಿಳಿಸಿಕೊಟ್ಟಿದ್ದಳು. ಅದೇನೋ ಅವನು ಒಂದೇ ಸಮನೆ ಬರೀತಾನೇ ಇದ್ದ. ಊಟದ ಸಮಯದಲ್ಲೂ ಮೇಲೇಳಲಿಲ್ಲ. ಕೆಲಸ ಜಾಸ್ತಿ ಇರಬೇಕು ಅಂತ ಈಕೆ ಸುಮ್ಮನಾಗಿದ್ದಳು. ಸಂಜೆ 4ರ ವೇಳೆಗೆ ಇನ್ನೂ ಕುಳಿತೇ ಇದ್ದ. ಅದೇನು ಮಾಡ್ತಿದ್ದಾನೆ ನೋಡು ಅಂತ ಮೇಲಧಿಕಾರಿಗಳು ಹೇಳಲು, ರಾಧಿಕಾ ಹೋಗಿ ನೋಡ್ತಾಳೆ… ಎಲ್ಲ ತಪ್ಪು ತಪ್ಪಾಗಿ ಪೋಸ್ಟ್ ಮಾಡಿದ್ದಾನೆ. ಡೆಬಿಟ್ ಅಂದ್ರೆ ಏನು ಕ್ರೆಡಿಟ್ ಅಂದ್ರೆ ಏನು ಅಂತ ಗೊತ್ತಿಲ್ಲ. ಎಲ್ಲೆಲ್ಲೋ ಏನೇನನ್ನೋ ಬರೆದುಬಿಟ್ಟಿದ್ದಾನೆ. ಆ ದಿನದ ಅಕೌಂಟ್ ಬ್ಯಾಲೆನ್ಸ್ ಮಾಡದೇ ಮನೆಗೆ ಹೋಗುವಂತಿಲ್ಲ. ಏನು ಮಾಡೋದು. ಮೇಲಧಿಕಾರಿಗಳಿಗೆ ಈ ವಿಷಯವಿನ್ನೂ ಗೊತ್ತಿಲ್ಲ. ತನ್ನ ಸುಪರ್ದಿಗೆ ಕೊಟ್ಟಿರುವ ಈತನನ್ನೂ ಬೈಯುವಂತಿಲ್ಲ. ಸರಿಯಾಗಿ ಕೆಲಸ ಯಾಕೆ ಹೇಳಿಕೊಟ್ಟಲ್ಲ ಅಂತ ತನ್ನ ಮೇಲೆಯೇ ಬರುವುದು ಎಂದುಕೊಂಡು, ತಡಬಡಾಯಿಸಿಕೊಂಡು, ಎಲ್ಲ ಕೆಲಸವನ್ನೂ ಮೊದಲಿನಿಂದ ತಾನೇ ಮುಗಿಸುವ ಹೊತ್ತಿಗೆ ಸಂಜೆ 7 ಆಗಿತ್ತು. ಕೆಲಸ ಮುಗಿಸಿದೆನ್ನುವ ಸಮಾಧಾನ ಅವಳಿಗಾದರೂ, ತಪ್ಪು ಮಾಡಿದ ಭಾವ ಆತನಲ್ಲಿ ಮೂಡಿತ್ತು. ಇದಕ್ಕೆ ತಪ್ಪಿನ ಕಾಣಿಕೆ ಎಂದು ಹೊಟೆಲ್‍ಗೆ ಕರೆದೊಯ್ದು, ತಿಂಡಿ ಕಾಫಿ ಕೊಡಿಸುವೆನೆಂದಿದ್ದ. ಈಕೆ ಬೇಡ ಎಂದೂ ಮನೆಗೆ ಹೋಗಲು ಸಮಯ ಆಗಿದೆಯೆಂದರೂ ಆತ ಕೇಳದೇ ಕರೆದೊಯ್ದಿದ್ದ. ಅದೇಕೋ ಅವನ ಮಾತಿಗೆ ಮೀರಲು ಅವಳಿಂದಾಗಿರಲಿಲ್ಲ. ಅಂದು ಮನೆಗೆ ತಡವಾಗಿ ಹೋಗಿದ್ದರೂ ಯಾರೂ ಏನೂ ಕೇಳಲಿಲ್ಲ. ಮಿಗಿಲಾಗಿ ಮಾವನವರು, ಕೆಲಸ ಎಲ್ಲಾ ಹೇಗಿದೆಯಮ್ಮ, ಊಟ ಮಾಡು, ಸರಿಯಾಗಿ ವಿಶ್ರಾಂತಿ ತಗೊ ಎಂದಿದ್ದರು. ರಾತ್ರಿ ಹತ್ತು ಘಂಟೆಗೆ ಬಂದ ಗಂಡನಿಗೆ ಇದ್ಯಾವುದರ ಪರಿವೆಯೂ ಇಲ್ಲ. ಮಿನಿಸ್ಟರ್ ಟೂರ್, ಜನಗಳ ಕಂಪ್ಲೇಂಟ್ ನೋಡಿಕೊಳ್ಳುವುದು, ತನಗೆ ಬೇಕಾದವರಿಗೆ ಬೇಕಾದ ಕಡೆ ಕೆಲಸಗಳನ್ನು ಮಾಡಿಸಿಕೊಡುವುದು, ಇದೇ ಅವನ ಜೀವನವಾಗಿತ್ತು.
ಮುಂದಿನ ದಿನಗಳಲ್ಲಿ ಬ್ಯಾಂಕಿನ ಎಲ್ಲ ಕೆಲಸಗಳನ್ನೂ ಸಾಂಬಮೂರ್ತಿಗೆ ಹೇಳಿಕೊಟ್ಟಳು. ಅವನೂ ಬಹಳ ಮುತುವರ್ಜಿಯಿಂದ ಕಲಿತನು. ಇಬ್ಬರೂ ಬ್ಯಾಂಕಿನ ಆಸ್ತಿಯಂತಾದರು. ಅವನು ಒಳ್ಳೆಯ ಆಟಗಾರನೂ ಆಗಿದ್ದನು. ಬ್ಯಾಂಕಿನ ಟೀಮಿಗೆ ಟೇಬಲ್ ಟೆನ್ನಿಸ್ ಮತ್ತು ಕೇರಂ ಪಂದ್ಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದ್ದನು. ಪ್ರತಿದಿನ 4 ಘಂಟೆಯ ನಂತರ ಪ್ರಾಕ್ಟೀಸ್ ಮಾಡಲು ಅವನಿಗೆ ಅನುಮತಿ ಕೊಟ್ಟಿದ್ದರು.

ಇತ್ತ ಮನೆಯಲ್ಲಿ ಅತ್ತೆಯ ದರ್ಬಾರು ಜೋರಾಗಿತ್ತು. ಮನೆ ಕೆಲಸ, ಮನೆಯ ವ್ಯವಹಾರ ಎಲ್ಲವನ್ನೂ ತನ್ನ ಹದ್ದುಬಸ್ತಿನಲ್ಲಿಟ್ಟು ಕೊಂಡಿದ್ದಳು. ಪಾಪದ ಮಾವ, ಅತ್ತೆ ಹೇಳಿದಂತೆ ಕೇಳಿಕೊಂಡಿದ್ದನು. ಆದರೂ ಆಗೊಮ್ಮೆ ಈಗೊಮ್ಮೆ, ’ಏನಮ್ಮಾ, ಬ್ಯಾಂಕಿನಲ್ಲಿ ತುಂಬಾ ಕೆಲಸ ಅಂತ ಕೇಳಿರುವೆ, ಸಂಜೆ ಏಳಾದರೂ ಮನೆಗೆ ಬರೋದು ಕಷ್ಟವಂತೆ, ನೀನು ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡು, ಹೆಚ್ಚಿನ ಹೆಸರು ಮತ್ತು ಕೀರ್ತಿ ಗಳಿಸು’ ಎನ್ನುತ್ತಿದ್ದರು. ಆಗ ಅತ್ತೆ, ’ಮನೆ ಮತ್ತು ಮಗುವಿನ ಬಗ್ಗೆ ನಾನು ಮತ್ತು ಇವರೂ ನೋಡಿಕೊಳ್ತೀವಿ’, ಎನ್ನುತ್ತಿದ್ದರು.

ಮುಂದಿನದು ನಿರೀಕ್ಷಿಸಿ…

ಇತ್ತ ರಾಧಿಕಾಗೆ ಕೆಲಸ ಮುಗಿದ ಮೇಲೆ, ಮನೆಗೂ ಹೋಗಲು ಮನಸ್ಸಿಲ್ಲದೇ, ಏನೂ ಮಾಡಲು ತೋಚುತ್ತಿರಲಿಲ್ಲ. ಆಗ ಸಾಂಬಮೂರ್ತಿಯೇ ಅವಳಿಗೆ ದಾರಿ ತೋರಿಸಿದ್ದನು. ಸಂಜೆಯ ವೇಳೆಯಲ್ಲಿ ಒಂದು ಘಂಟೆ ಕೇರಂ ಮತ್ತು ಒಂದು ಘಂಟೆ ಟೇಬಲ್ ಟೆನ್ನಿಸ್ ಆಡುವುದನ್ನು ಹೇಳಿಕೊಡುತ್ತಿದ್ದನು. ಬಹಳ ಬೇಗ ಈಕೆಯೂ ಬ್ಯಾಂಕಿನ ಟೀಮಿನ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾವಳಿಗಳಲ್ಲಿ ಭಾಗವಹಿಸಹತ್ತಿದ್ದಳು. ಅವರಿಬ್ಬರಲ್ಲಿ ಹೆಚ್ಚಿನ ನಿಕಟತೆ ಉಂಟಾಗುತ್ತಿತ್ತು.

ಗಂಡ ನೋಡಿದ್ರೆ, ಕೆಲಸ, ಕೆಲಸ, ಹಣ, ಮ್ಯಾಕ್ರೊ ಲೆವೆಲ್ ವಿಷಯಗಳಲ್ಲೇ ತಲ್ಲೀನ, ಮನೆ, ಮಡದಿ, ಮಗುವಿನ ಕಡೆಗೆ ಗಮನವೇ ಇಲ್ಲ. ಮುಂದಿನ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ಹೊಂಚು ಹಾಕುತ್ತಿದ್ದನು. ಸುಖ, ದುಃಖ, ಏನೇ ಇದ್ದರೂ ಹೇಳಿಕೊಳ್ಳಲು ಅಥವಾ ಹಂಚಿಕೊಳ್ಳಲು ಆಕೆಗೆ ಹತ್ತಿರದವರು ಯಾರೂ ಇಲ್ಲ. ಏಕಾಂತದಲ್ಲಿ ಹೇಳಿಕೊಳ್ಳಲಂತೂ ಯಾರೂ ಇಲ್ಲವೇ ಇಲ್ಲ. ತನ್ನಲ್ಲಿನ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಒಡನಾಡಿ ಬೇಡವೇ? ಇಂತಹ ಸಮಯದಲ್ಲಿ ಅವಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಸಾಂಬಮೂರ್ತಿಯೇ ತನ್ನವನಾಗಿಬಿಟ್ಟ.

ಸಾಂಬಮೂರ್ತಿ ಉಳಿದುಕೊಳ್ಳಲು ಮಲ್ಲೇಶ್ವರದಲ್ಲಿ ಒಂದು ರೂಮು ಮಾಡಿಕೊಂಡಿದ್ದ. ಅಡುಗೆ ಮಾಡಲೂ ಬರುತ್ತಿರಲಿಲ್ಲದವನು ಪ್ರತಿನಿತ್ಯ ಮೆಸ್ಸಿನಲ್ಲಿ ಊಟ ಮಾಡುತ್ತಿದ್ದನು. ಈಕೆಯ ಸಹವಾಸವಾದ ಮೇಲೆ, ಬ್ಯಾಂಕಿನ ಕೆಲಸವಾದ ನಂತರ ಇಬ್ಬರೂ ಸ್ವಲ್ಪ ಹೊತ್ತು ಆಟವಾಡಿ ಅವನ ರೂಮಿಗೆ ಹೋಗುತ್ತಿದ್ದಳು. ಅಲ್ಲಿ ಸ್ವಲ್ಪ ಕಾಲ ಕಳೆದು ನಂತರ ರಾತ್ರಿ 8ರ ವೇಳೆಗೆ ಅವನು ಮೆಸ್ಸಿಗೆ ಊಟಕ್ಕೆ ಹೋಗುವ ಸಮಯದಲ್ಲಿ, ಆಕೆ ತನ್ನ ಮನೆಗೆ ಹೊರಡುತ್ತಿದ್ದಳು. ಎಷ್ಟೇ ಆಗಲಿ ಉಪ್ಪು ಖಾರ ತಿನ್ನುವ ದೇಹ. ದೈಹಿಕ ಆಸೆಯನ್ನು ಎಷ್ಟು ದಿನಗಳೂಂತ ಹತ್ತಿಟ್ಟುಕೊಳ್ಳಲು ಸಾಧ್ಯ. ಅವರಿಬ್ಬರ ಒಡನಾಟ ದಿನೇ ದಿನೇ ಬಹಳ ಹತ್ತಿರವಾಗುತ್ತಿತ್ತು.

ಒಮ್ಮೆ ಮಧ್ಯಾಹ್ನ ಮಗುವಿಗೆ ನಿರ್ಜಲೀಕರಣವಾಗಿ (ಡಿಹೈಡ್ರೇಷನ್) ಆಸ್ಪತ್ರೆಗೆ ದಾಖಲು ಮಾಡಬೇಕಾಯ್ತು. ಆತಂಕಗೊಂಡ ಆಕೆಯ ಮಾವ ಅವಳನ್ನು ಫೋನಿನ ಮೂಲಕ ಸಂಪರ್ಕಿಸಲು, ಅವಳು ಅಂದು ಕೆಲಸಕ್ಕೆ ಬಂದಿಲ್ಲ ಎಂದು ತಿಳಿಯಿತು. ಅರೇ! ಬೆಳಗ್ಗೆ ಮನೆಯಿಂದ ಬ್ಯಾಂಕಿಗೇಂತ ಹೊರಟವಳು, ಅದೂ ಊಟದ ಡಬ್ಬಿಯನ್ನೂ ತೆಗೆದುಕೊಂಡು ಹೋಗಿದ್ದವಳು, ಬ್ಯಾಂಕಿಗೆ ಹೋಗದೇ ಎಲ್ಲಿ ಹೋದಳು, ಅಂತ ಅಂದುಕೊಂಡೇ ಮಗನಿಗೆ ಫೋನಾಯಿಸಿದರು. ಆತ ಅಂದೇಕೋ ಪುರುಸೊತ್ತಾಗಿದ್ದ. ಹತ್ತು ನಿಮಿಷಗಳಲ್ಲಿ ತಾನೇ ಬ್ಯಾಂಕಿನ ಹತ್ತಿರಕ್ಕೆ ಬರುವೆ, ನೀವೂ ಅಲ್ಲಿಗೆ ಬನ್ನಿ ಎಂದು ಹೇಳಿದ್ದನು. ಹೇಳಿದಂತೆಯೇ, ಇಬ್ಬರೂ ಬ್ಯಾಂಕಿನ ಮುಂಭಾಗದಲ್ಲಿ ಭೇಟಿ ಆಗಿ, ಒಳ ಹೋದರು. ಅಲ್ಲಿಯ ಮೇಲಧಿಕಾರಿಗಳನ್ನು ಅವನು ಭೇಟಿ ಮಾಡಿ ರಾಧಿಕಾ ಎಲ್ಲಿಗೆ ಹೋಗಿರಬಹುದು ಎಂದು ಕೇಳಿದನು. ಮೇಲಧಿಕಾರಿಗಳು, ತಮಗೆ ತಿಳಿದ ಮಾಹಿತಿಯನ್ನೆಲ್ಲಾ ಕೊಟ್ಟರು. ಇತ್ತೀಚೆಗೆ ಸಾಂಬಮೂರ್ತಿಯೊಂದಿಗೆ ಅವಳು ನಿಕಟವಾಗುತ್ತಿದ್ದುದನ್ನೂ ಗಮನಿಸಿದರೆಂದೂ, ತಂದೆಯ ಸ್ಥಾನದಲ್ಲಿದ್ದ ತಮ್ಮ ಯಾವ ಮಾತುಗಳೂ ಅವಳ ಕಿವಿಗೆ ಹೋಗುತ್ತಿರಲಿಲ್ಲವೆಂದೂ ತಿಳಿಸಿದ್ದರು. ತಕ್ಷಣವೇ ತಂದೆ-ಮಗ ಇಬ್ಬರೂ, ಬ್ಯಾಂಕಿನಲ್ಲಿ ದೊರೆತ ವಿಳಾಸದ ಸಹಾಯದಿಂದ ಮಲ್ಲೇಶ್ವರಂನ ಸಾಂಬಮೂರ್ತಿಯ ರೂಮಿಗೆ ತಲುಪಿದರು. ರೂಮಿನ ಬಾಗಿಲು ಬಡಿಯಲು, ಒಳಗಿನಿಂದ ಯಾರು ಎಂಬ ಗಂಡಸಿನ ಶಬ್ದ ಬಂದಿತೇ ವಿನಹ ಬಾಗಿಲು ತೆರೆಯಲಿಲ್ಲ. ಅದೇನೋ ಅನುಮಾನ ಬಂದು ರತ್ನಾಕರ ಹತ್ತಿರದ ಪೊಲೀಸ್ ಸ್ಟೇಷನ್ನಿಗೆ ಫೋನಾಯಿಸಿ, ಇನ್‍ಸ್ಪೆಕ್ಟರ್ ಅವರನ್ನು ಅಲ್ಲಿಗೆ ಕರೆಸಿದನು.
’ಬಾಗಿಲು ತೆಗೆ, ಇಲ್ಲದಿದ್ದರೆ ಬಾಗಿಲು ಒಡೆಯುವೆ’ ಎಂದು ಇನ್‍ಸ್ಪೆಕ್ಟರ್ ಗುಡುಗಿದ ಮೇಲೆ ಸಾಂಬಮೂರ್ತಿ ಮೆಲ್ಲಗೆ ಬಾಗಿಲು ತೆರೆದನು. ಒಳನಡೆದ ಇನ್‍ಸ್ವ್ಪೆಕ್ಟರ್, ರಾಧಿಕಾ ಅಲ್ಲಿರುವುದನ್ನು ನೋಡಿದ. ಅವಳನ್ನು ನೋಡಿದೊಡನೆಯೇ, ರತ್ನಾಕರ ಕೂಗಾಡ ಹತ್ತಿದ. ಅದ ಕಂಡ ಇನ್‍ಸ್ಪೆಕ್ಟರ್, ’ತಾವು ಸ್ವಲ್ಪ ಸುಮ್ಮನಿರಿ, ನಾನೆಲ್ಲಾ ವಿಚಾರಿಸ್ತಿನಿ’, ಎಂದು, ರಾಧಿಕಾಳನ್ನು ಪ್ರಶ್ನಿಸತೊಡಗಿದ. ’ಯಾಕಮ್ಮಾ ಇಲ್ಲಿದ್ದೀಯೆ, ಯಾರಮ್ಮಾ ನಿನ್ನ ಜೊತೆಗಿರುವವನ’, ಎಂದು ಪ್ರಶ್ನಿಸಲು, ರಾಧಿಕಾ ಹೇಳಿದ್ದನ್ನು ಕೇಳಿ, ಅಲ್ಲಿದ್ದವರೆಲ್ಲರೂ ಸ್ಥಂಭೀಭೂತರಾಗಿದ್ದರು. ’ಸಾರ್, ಇವನು ನನ್ನ ಗಂಡ. ಈಗ ಕಂಪ್ಲೇಟ್ ಮಾಡಿಕೊಂಡು ಬಂದಿರೋವ್ರು, ಯಾರೋ ನನಗೆ ಗೊತ್ತಿಲ್ಲ. ಯಾರೋ ಬಂದು ನನ್ನ ಹೆಂಡತಿ ಅಂತ ಅಂದ್ರೆ, ನೀವೂ ಕೇಳೋದಾ?’ ಅವಳ ಆ ಮಾತುಗಳನ್ನು ಕೇಳಿ, ರತ್ನಾಕರ ಮತ್ತು ಅವನ ತಂದೆಗೆ ಮೂರ್ಛೆ ಹೋಗೋದು ಒಂದು ಬಾಕಿ ಆಗಿತ್ತು.
ಇಷ್ಟು ದಿನ ಮನೆ ಕಡೆ ಗಮನ ಕೊಡದಿದ್ದ ರತ್ನಾಕರ, ಈಗ ಭೂಮಿಗೆ ಇಳಿದಿದ್ದ. ಇಂದಿನವರೆವಿಗೆ ತಾನು ಮಾಡಿದ ತಪ್ಪಿಗೆ ಏನು ಮಾಡೋದು ಎಂದು ತೋಚದೇ, ಅಪ್ಪನ ಮುಂದೆ ಗೊಳೋ ಎಂದು ಅತ್ತುಬಿಟ್ಟನು. ಇತ್ತ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ಬಗ್ಗೆ ತಿಳಿಯಲು, ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದರು. ದೇವರ ದಯೆಯಿಂದ ಆಸ್ಪತ್ರೆ ಸೇರಿದ್ದ ಮಗು ಹುಷಾರಾಗಿ ಡಿಸ್ಚಾರ್ಜ್ ಮಾಡುವವರಿದ್ದರು. ವಯಸ್ಸಾಗಿದ್ದ ಆತನ ತಂದೆ, ಮುಂದೆ ನಿಂತು, ರಾಧಿಕಾಗೆ ಫೋನ್ ಮಾಡಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸು, ಮನೆಯ ಮರ್ಯಾದೆಯಾದರೂ ಉಳಿಯಲು ಎಂದು ಕೇಳಿಕೊಂಡಿದ್ದರು. ಅದಕ್ಕೆ ಅವಳು, ’ನಾನ್ಯಾಕೆ ವಿಚ್ಛೇದಿಸಲಿ – ಬೇಕಿದ್ರೆ ಅವನೇ ಅಪ್ಲೈ ಮಾಡ್ಲಿ – ಮನೆ ಮಾತ್ರ ತನ್ನ ಹೆಸರಿಗೆ ಬರೀಲಿ, ನಾನು ಬೇರೆ ಇನ್ನೇನೂ ಕೇಳೋದಿಲ್ಲ’ ಎಂದಿದ್ದಳು.
ಈ ಇಳಿ ವಯಸ್ಸಿನಲ್ಲಿ ಹಾಯಾಗಿರಬೇಕಾಗಿದ್ದ ರಾಯರಿಗೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು. ಲೋಕಕ್ಕೆ ಹೆದರಿ, ಸುತ್ತ ಮುತ್ತಲ ಜನಗಳನ್ನು ಎದುರಿಸಲಾರದೇ, ಮಗನಿಗೆ ವಿಚ್ಛೇದನ ಕೊಡಿಸಿ, ಇದ್ದ ಮನೆಯನ್ನು ರಾಧಿಕಾ ಹೆಸರಿಗೆ ಮಾಡಿ, ತನ್ನ ಸ್ವಂತ ಸ್ಥಳಕ್ಕೆ ಹೊರಟು ಹೋಗಿದ್ದರು. ಇತ್ತ ಮೊಮ್ಮಗಳನ್ನು ಊಟಿಯ ರೆಸಿಡೆನ್ಷಿಯಲ್ ಸ್ಕೂಲಿಗೆ ಸೇರಿಸಿದರು. ರತ್ನಾಕರ ಯಥಾಪ್ರಕಾರ ತನ್ನ ಕೆಲಸದಲ್ಲಿ ಮುಳುಗಿ ಹೋದ. ಮೊಮ್ಮಗಳು ವರುಷಕ್ಕೊಮ್ಮೆ, ಅಜ್ಜ ಅಜ್ಜಿಯರನ್ನು ನೋಡಲು ಊರಿಗೆ ಹೋಗುತ್ತಿದ್ದಳು.

ಎಷ್ಟೋ ವರ್ಷಗಳ ಮೇಲೆ ತಿಳಿದುಬಂದದ್ದೇನೆಂದರೆ, ಈ ಘಟನೆ ನಡೆದ ಸ್ವಲ್ಪ ದಿನಗಳಲ್ಲೇ ರಾಧಿಕಾ ಮತ್ತು ಸಾಂಬಮೂರ್ತಿ ಪ್ರಮೋಶನ್ ತೆಗೆದುಕೊಂಡು ಇಬ್ಬರೂ ದೂರದ ಮುಂಬಯಿಗೆ ಹೋಗಿ ನೆಲೆಸಿದ್ದರು. ಮೂರು ವರುಷಗಳಲ್ಲೇ ಸಾಂಬಮೂರ್ತಿ ಮತ್ತು ರಾಧಿಕಾಳ ನಡುವೆ ಮಗು ಮಾಡಿಕೊಳ್ಳಬೇಕೆಂಬ ವಿಷಯಕ್ಕೆ ಮನಸ್ತಾಪ ಬಂದು, ಇಬ್ಬರೂ ಬೇರೆ ಬೇರೆಯಾಗಿದ್ದರು. ರಾಧಿಕಾಳಿಗೆ ಮತ್ತೆ ಮಗು ಬೇಕಿರಲಿಲ್ಲ ಆದರೆ ಸಾಂಬಮೂರ್ತಿಗೆ ಮಗು ಬೇಕೆನಿಸುತ್ತಿತ್ತು. ರಾಧಿಕಾಳಿಗೆ ಇನ್ನೂ ಹೆಚ್ಚು ಹೆಚ್ಚು ಪ್ರಮೋಶನ್ ತೆಗೆದುಕೊಂಡು ಮಾದರಿ ಹೆಣ್ಣಾಗಬೇಕೆಂಬ ಹಂಬಲ. ಆದರೆ ಸಾಂಬಮೂರ್ತಿಗೆ ಇಲ್ಲಿಯವರೆವಿಗೆ ತಾನು ಮಾಡಿದ್ದುದು ತಪ್ಪು ಎಂದೆನಿಸಿ, ಈ ಕೂಪದಿಂದ ಹೊರಬರಬೇಕೆಂದೂ, ತಾನೂ ಸಮಾಜದಲ್ಲಿ ಬಾಳಬೇಕೆಂದೂ ಅನಿಸುತ್ತಿತ್ತು. ಇಬ್ಬರಲ್ಲೂ ಆಗಾಗ ಜಗಳವೂ ಆಗುತ್ತಿತ್ತು. ಅಕ್ಕ ಪಕ್ಕದವರ ಮನೆಯವರುಗಳ ಮುಂದೆ ತಮ್ಮ ಮಾನ ಹೋಗುತ್ತಿದೆ, ಅದರ ಬದಲಿಗೆ ಇಬ್ಬರೂ ಬೇರೆ ಬೇರೆ ಇರುವುದೇ ಲೇಸೆಂದು, ಸಾಂಬಮೂರ್ತಿ ಮತ್ತೆ ಬೆಂಗಳೂರಿಗೆ ವರ್ಗ ತೆಗೆದುಕೊಂಡು ಬಂದಿದ್ದನು. ಆದರೆ ರಾಧಿಕಾ ಮಾತ್ರ ಮುಂಬಯಿಯಲ್ಲೇ ಇದ್ದಳು.

ಒಬ್ಬಂಟಿಯಾದ್ದವಳಿಗೆ ಆಗಾಗ, ಹಳೆಯದೆಲ್ಲಾ ನೆನಪಾಗಿ, ತಾನು ಮಾಡಿದುದು ತಪ್ಪೆನಿಸುತ್ತಿತ್ತು. ಅದೂ ಅಲ್ಲದೇ ಎಳೆಯ ಮಗುವನ್ನು ಬಿಟ್ಟು ಬಂದಿದ್ದ ಅವಳಿಗೆ, ಮಗುವಿನ ನೆನಪಾಗಿ ಆಗಾಗ್ಯೆ ಅಪಸ್ಮಾರ ಬರುತ್ತಿತ್ತು. ಎಲ್ಲೆಂದರಲ್ಲಿ ಬಿದ್ದುಬಿಡುತ್ತಿದ್ದಳು. ಅವಳನ್ನು ನೋಡುವವರು ಯಾರೂ ಇರಲಿಲ್ಲ. ಜೊತೆಗೆ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದಳಂತೆ. ಮೊದಲನೆಯ ಬಾರಿಗೆ ಕೆಮೋಥೆರಪಿ ನಡೆದ ನಂತರ, ಜೀವನದಲ್ಲಿ ಜಿಗುಪ್ಸೆ ಬಂದು ನೇಣಿಗೆ ಶರಣಾಗಿದ್ದಳು.

ಇದೂ ಒಂದು ಜೀವನವೇ! ಹುಹ್

ಟಿಪ್ಪಣಿ :

ನಾವು ಈ ಜಗತ್ತಿಗೆ ಬಂದಿರುವುದೇಕೆ? ಜಗತ್ತನ್ನು ಚಾಲ್ತಿಯಲ್ಲಿಡಲು ನಾವು ವಾಹಕವಷ್ಟೇ. ಎಲ್ಲಿಂದಲೋ ಬಂದು ಎಲ್ಲೋ ಹೋಗುವವರು, ನಾವು. ಇಂತಹ ಅವಘಡಗಳು ಸಂಭವಿಸಬಾರದು. ಅದಕ್ಕಾಗಿಯೇ ಒಂದು ಚೌಕಟ್ಟಿನಲ್ಲಿ ಬದುಕಬೇಕು. ಒಂದು ಕ್ಷಣ ಯಾ ದಿನ ಯಾ ಕಾಲದ ಸುಖಕ್ಕಾಗಿ ಸಮಾಜಕಂಟಕ ಆಗಬಾರದು. ಈ ಕಥೆಯಲ್ಲಿ ಬರುವ ಆ ಮಗುವಿನ ಮುಂದಿನ ಜೀವನದ ಬಗ್ಗೆ ಯೋಚಿಸಿ ನೋಡಿ. ಜೀವಿತ ಪೂರ್ತಿ ಒಂದು ಪಟ್ಟಿಯನ್ನು ಕಟ್ಟಿಕೊಂಡೇ ಆ ಮಗು ಈ ಸಮಾಜವನ್ನು ಎದುರಿಸಬೇಕು.

ವಿಭಾಗಗಳು
ಕವನಗಳು

ನಿಶ್ಶಕ್ತ ಮುಂಜಾವು

ಮುಂಜಾವಿನ ಮಬ್ಬುಗತ್ತಲು
ಮಂಜು ಕವಿದ ಬಿಳಿಪರದೆ
ಎದುರೇನೂ ಕಾಣದು
ಕಣ್ಣು ಉಜ್ಜಿ ಉಜ್ಜಿ ಹೆಜ್ಜೆ ಇರಿಸಬೇಕು

ಕಂದೀಲಿನ ಕಿರುಗಣ್ಣ ನೋಟದಾನ
ಅಬ್ಬೇಪಾರಿ ವಿದ್ಯುತ್ತಿನ
ಯುಕ್ತಿಯಿಲ್ಲದ ಶಕ್ತಿಯ ಕಿರುದಾನ
ನೋಡುಗರಿಗೆ ದಾನದಷ್ಟೇ ದೃಷ್ಟಿ

ಶತಪಥಗಳಿಂದಾಚೆ ಕಾರ್ಗತ್ತಲು
ಎದುರಾದುದಕೆ ಚೇತನದ ಢಿಕ್ಕಿ
ಕಣ್ಣಿದ್ದೂ ಕುರುಡುತನಕೆ ಸಿಕ್ಕಿ
ರೆಕ್ಕೆಯಿದ್ದೂ ಹಾರಲಾರದಿದು ಹಕ್ಕಿ

ಗಾಡಿಯೇರಿರುವ
ಸಾಮಾನು ಸರಿರಾತ್ರಿವರೆವಿಗೆ
ಗಿರಾಕಿಗಳ ಮನ ಒಲಿಸಲು ಪ್ರಯತ್ನಿಸಿ
ಸುಸ್ತಾಗಿ
ಹೊದ್ದು ಮಲಗಿದೆ
ಛಳಿಗೆ ಅಲ್ಲಾಡಲು ಆಗದಾಗಿದೆ

ಕ್ಷಣ ಮಾತ್ರದಲಿ
ನೇಸರನ ಆಗಮನ
ಯುಕ್ತಿಯೊಡಗೂಡಿದ ಶಕ್ತಿಯ ವರದಾನ
ಮಂಜಿನ ಪಲಾಯನ
ನಿಶ್ಶಕ್ತರಿಗೂ ಶಕ್ತಿಯ ಫಲಪ್ರದಾನ

ವಿದ್ಯುತ್ತಿಗಿಹುದು ನೇಸರನ ಶಕ್ತಿ
ಆದರಿಲ್ಲ ಆತನ ಯುಕ್ತಿ
ಅಂಧಕಾರ ಜಗಕೆ ಕೊಡಬಲ್ಲ ಮುಕ್ತಿ

ಕಗ್ಗತ್ತಲು ತುಂಬಿರುವ
ಹೊರಗಣ್ಣ ತೆರೆದರೇನು
ಮುಚ್ಚಿದರೇನು
ಅಜ್ಞಾನದ ಮಂಜಿನಿಂದ
ಏನೂ ಕಾಣದು – ಅರಿವಾಗದು
ಪ್ರಕೃತಿ ದೈವ ನೇಸರನಿಂದಲ್ಲವೇ
ಒಳಗಣ್ಣು ತೆರೆವುದು?

ನೇಸರನ ನಂಬು
ಒಳಗಣ್ಣ ತೆರೆ

ವಿಭಾಗಗಳು
ಲೇಖನಗಳು

ಕುಂಕುಮ ಪುರಾಣ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.

ಆಶ್ವಯುಜ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳು ದಸರಾ ಹಬ್ಬ. ಆಗಿನ ದಿನಗಳಲ್ಲಿ ಬೆಳಗ್ಗೆ ಪೂಜೆ ಮಾಡುವಾಗ ಲಲಿತಾ ಪರಮೇಶ್ವರಿ ಮೂರ್ತಿಗೆ ಅಥವಾ ಭಾವಚಿತ್ರಕ್ಕೆ ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ ಮಾಡಿದರೆ ಒಳ್ಳೆಯದು ಆಗುವುದು ಎಂಬ ಪ್ರತೀತಿ ಇದೆ.
ಆಗ ಮನೆಗಳಲ್ಲಿ (ಹೆಚ್ಚಿನದಾಗಿ ದಕ್ಷಿಣ ಕರ್ನಾಟಕದಲ್ಲಿ) ಗೊಂಬೆಗಳನ್ನು ಕೂರಿಸಿ ಅವುಗಳೊಡನೆ ಮುಖ್ಯವಾಗಿ ರಾಜ ರಾಣಿ ಗೊಂಬೆಗಳನ್ನಿಟ್ಟು ಜೊತೆಗೆ ಕಲಶವನ್ನಿಟ್ಟು ಪೂಜಿಸುವರು.
ಅಲ್ಲೇ ಲಲಿತಾಮಾತೆ ಅಥವಾ ದೇವಿಗೆ ಕುಂಕುಮಾರ್ಚನೆ ಮಾಡುವರು.

ಪತ್ರಗಳನ್ನು ಬರೆಯುವಾಗ ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ| ಸೌ| ಹ| ಕುಂ| ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಮ್ದೂ ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.

ಈ ಕುಂಕುಮ ಅನ್ನುವುದು ಏನು?

ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.

ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಡುವರು. ಇದು ಬುದ್ಧಿಶಕ್ತಿ, ವಿವೇಕ ಇರುವ ತಲೆಯ ಮುಂಭಾಗ. ಈ ಜಾಗ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು. ತುಂಬಾ ಯೋಚಿಸುವವರು ತಲೆ ಬಿಸಿ ಆಗಿದೆ ಎನ್ನುವರು.
ಹಾಗೂ ಕೆಲವರು ಭ್ರೂಮಧ್ಯ ಭಾಗದಲ್ಲಿ ಇಟ್ಟುಕೊಳ್ಳುವರು. ಏಕಾಗ್ರತೆಗೆ ಇದು ತುಂಬಾ ಸಹಾಯಕಾರಿ.
ಇನ್ನೂ ಒಂದು ವಿಷಯವೆಂದರೆ, ಯೋಗಿಗಳು ಧ್ಯಾನದ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿ ಸುಪ್ತವಾದ ಕುಂಡಲಿನೀ ಶಕ್ತಿಯ ಪ್ರಚೋದನೆ ಮಾಡುವರು. ಆ ಶಕ್ತಿ ಮೇಲೆ ಮಿದುಳಿಗೆ ಏರುವುದು. ಆಗ ಭ್ರೂ ಮಧ್ಯ ಭಾಗದಿಂದ ಹೊರ ಹೋಗುವ ಸಾಧ್ಯತೆಗಳಿರುವುದು. ಅದನ್ನು ತಡೆಯಲು ಆ ಭಾಗದಲ್ಲಿರುವ ಅಜ್ಞ ಚಕ್ರವನ್ನು ಪ್ರಚೋದಿಸುವರು. ಇದನ್ನು ಪ್ರಚೋದಿಸಲನ್ವಯ ಉಂಗುರದ ಬೆರಳಿನಿಂದ ಕುಂಕುಮವನ್ನು ಆ ಭಾಗದಲ್ಲಿ ಇಡುವರು. ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.

ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ. ನಮ್ಮ ಪೂರ್ವಜರು ಕುಂಕುಮವಿಡಲು ಹೇಳುತ್ತಿದ್ದಕ್ಕೆ ಇದೂ ಒಂದು ಕಾರಣ.

ಹಿಂದೂ ಹೆಂಗಸಿನ ಜೀವನದಲ್ಲಿ ಅರಿಶಿನ ಕುಂಕುಮದ ಮಹತ್ವ ಪತಿ ಜೀವತ್ಯಾಗದ ನಂತರ ಇದನ್ನು ಯಾಕೆ ಧರಿಸಬಾರದು ಎಂಬ ಪ್ರಶ್ನೆ ಉದ್ಭಸುವುದು. ಕುಂಕುಮ ಪತಿಯ ಇರುವಿಕೆಯನ್ನು ಸೂಚಿಸುವ ಒಂದು ದ್ಯೋತಕವಷ್ಟೇ ಅಲ್ಲ. ಅದಕ್ಕೆ ಇನ್ನೂ ವಿಶೇಷ ಮಹತ್ವವಿದೆ.
ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು. ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ. ರಾಮಾಯಣದ ಕಥೆಯಲ್ಲಿ ಹೇಳಿರುವಂತೆ, ಸೀತಾದೇವಿ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿರುವಾಗ ಆಂಜನೇಯ ರಾಮನ ಮುದ್ರಿಕೆಯನ್ನು ತೆಗೆದುಕೊಂಡು ಹೋದ. ಅಲ್ಲಿ ಸೀತೆ ಯಾರೆಂದು ಗುರುತಿಸಲಾಗಲಿಲ್ಲ. ಆದರೆ ಅವನಿಗೆ ದಿವ್ಯ ದೃಷ್ಟಿ ಇದ್ದದ್ದರಿಂದ ಸೀತೆಯ ತಾಳಿ ಗೋಚರವಾಯಿತು. ಈಗ ಕಣ್ಣಿದ್ದೇ ನಮಗೆ ಕಾಣಿಸುವುದಿಲ್ಲ, ಇನ್ನು ದಿವ್ಯದೃಷ್ಟಿ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಸೂಚ್ಯವಾಗಿ ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯ. ಆದರೂ ಆಗೋದು ಆಗೇ ಆಗತ್ತೆ, ತಡೆಯಲಾಗತ್ಯೇ?

ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ. ಇದರ ಬಣ್ಣ ಹಲವಾರು. ಈಗೀಗಂತು ಬಿಂದಿಗಳು ಬಂದು ತರಹಾವರಿ ಚಿತ್ರ ವೈಚಿತ್ರವಾದ ಕುಂಕುಮಗಳನ್ನು ನೋಡಬಹುದು. ಆದರೆ ಇಂದಿನ ಹೆಣ್ಣುಮಕ್ಕಳಲ್ಲಿ ಇದನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಮತ್ತು ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ. ಹಾಗು ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.

ವಿದೇಶೀಯರು ಇದನ್ನು ನೋಡಿ ಅಯ್ಯೋ ಇದೇನು ನಿನ್ನ ಹಣೆಯಲ್ಲಿ ರಕ್ತ ಎಂದು ಕೇಳಿದ ಸಂದರ್ಭವೂ ಇದೆ. ಈಗೀಗ ಅವರುಗಳೂ ಇದೊಂದು ಫ್ಯಾಷನ್ ಎಂದು ಉಪಯೋಗಿಸುತ್ತಿದ್ದಾರೆ.

ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆಯೊಂದಿಗೆ ಕುಂಕುಮವನ್ನು ಹಚ್ಚುವರು. ಇದನ್ನು ಅವರು ಸಿಂಧೂರ ಎನ್ನುವರು.

ಮೊದಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಕುಂಕುಮ ಬಿದ್ದು ಹೋಗುತ್ತಿರಲಿಲ್ಲ ಅಥವಾ ಅಳಿಸಿ ಹೋಗುತ್ತಿರಲಿಲ್ಲ. ಈಗೀಗ ಕುಂಕುಮವಿಡುವುದ ಕಡಿಮೆಯಾಗಿ ಬಿಂದಿ ಸಂಸ್ಕೃತಿ ಬಂದಿದೆ. ಹಾಗೇ ಹಿಂದೂಗಳಲ್ಲಿ ಇದೂ ಮಾಯವಾಗುತ್ತಿದೆ, ಆದರೆ ಕಿರಿಸ್ತಾನೀಯರಲ್ಲಿ ಮತ್ತು ಮುಸ್ಲಿಮರಲ್ಲಿ ಇದನ್ನು ಉಪಯೋಗಿಸುತ್ತಿರುವರು. ಕಿರಿಸ್ತಾನೀಯರಿಗೆ ವ್ಯಾಟಿಕನ್ ನಿಂದ ಬಂದಿರುವ ಆದೇಶ – ನೀವು ಎಲ್ಲಿರುವಿರೋ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರಲ್ಲಿ ಒಂದಾಗಿ. ಆದ್ದರಿಂದ ಭಾರತೀಯರ ಸಂಸ್ಕೃತಿಯಾದ ಕುಂಕುಮ ಇಡುವುದನ್ನು ಅವರಲ್ಲಿ ಕಾಣಬಹುದು.

ಪತಿ ವಿಯೋಗವಾದ ಹೆಣ್ಣುಮಕ್ಕಳು, ಕಪ್ಪು ಬಣ್ಣದ ಸಾಧು ಅಥವಾ ವಿಭೂತಿಯನ್ನು ಇಡುವರು. ಇದೊಂದು ಸೂಚಕ ಅಷ್ಟೆ.

ಕುಂಕುಮದ ಮಹಿಮೆಯ ಬಗ್ಗೆ ನೃಸಿಂಹ ಸ್ತೋತ್ರದಲ್ಲೂ ಹೀಗೆ ತಿಳಿಸಿದೆ.
ಚಂದನಂ ಶೀತಲಮ್ ದಿವ್ಯಮ್ ಚಂದ್ರ ಕುಂಕುಮ ಮಿಶ್ರಿತಂ. ಆಯುರ್ವೇದದ ಪ್ರಕಾರ ಕುಂಕುಮದಲ್ಲಿ ಅರಿಶಿನದ ಗುಣವಿರುದರಿಂದ ಅದನ್ನು ಔಷಧಿಯಾಗಿ ಉಪಯೋಗಿಸುವರು. ಇದರಲ್ಲಿ ಶಮನ ಶಕ್ತಿ ಇದೆ. ಅದಕ್ಕೋಸ್ಕರವಾಗಿಯೇ ಹುಣ್ಣುಗಳಾದಾಗ ಚಂದನೊಂದಿಗೆ ಕುಂಕುಮ ಮಿಶ್ರನ ಮಾಡಿ ಹಚ್ಚುವರು.

ಇನ್ನು ಗಂಡಸರೂ – ಕುಂಕುಮ, ಚಂದನ, ವಿಭೂತಿ ಗಳನ್ನಿಡುವ ಸಂಪ್ರದಾಯವಿದೆ. ಅದಕ್ಕೆ ಕಾರಣ ಮೇಲೆ ತಿಳಿಸಿರುವಂತೆ ಧ್ಯಾನದಿಂದ ಉಂಟಾಗುವ ಶಕ್ತಿಯನ್ನು ಉಳಿಸಿಕೊಳ್ಳುವುದೂ ಒಂದಾಗಿದೆ. ಹಾಗೇ ಪೂಜೆ ಮಾಡಿ ದೇವರಿಗೆ ಅರ್ಪಿಸಿದ ಕುಂಕುಮವನ್ನೇ ಪ್ರಸಾದವೆಂದು ಇಟ್ಟುಕೊಳ್ಳುವರು.

ಮಲ್ಲೇಶ್ವರಂ ಮತ್ತು ಗಾಂಧಿಬಜಾರಿನಲ್ಲಿ ಗ್ರಂಧಿಗೆ ಅಂಗಡಿಗಳಲ್ಲಿ ಕುಂಕುಮದ ರಾಶಿಯನ್ನು ದೊಡ್ಡ ದೊಡ್ಡ ಬೋಗುಣಿಯಲ್ಲಿ ಚೊಕ್ಕವಾಗಿ ತುಂಬಿಟ್ಟುರುವುದನ್ನು ಕಾಣುವೆವು. ಅದರಲ್ಲೂ ಹಲವಾರು ಬಣ್ಣಗಳಿರುವುವು. ಜಾಸ್ತಿಯಾಗಿ ಉಪಯೋಗಿಸುವುದು ಕೆಂಪು ಬಣ್ಣದ ಕುಂಕುಮ.

ಆಶ್ವಯುಜ ಮಾಸದಲ್ಲಿ ಲಲಿತಾ ಮಾತೆಗೆ ಕುಂಕುಮಾರ್ಚನೆ ಮಾಡಿ ಹತ್ತನೆಯ ದಿನ ಕಲಶ ವಿಸರ್ಜಿಸಿದ ಮೇಲೆ ಅರ್ಚಿಸಿದ ಕುಂಕುಮವನ್ನು ಸಣ್ಣ ಪೊಟ್ಟಣಗಳಾಗಿ ಮಾಡಿ ಪ್ರಸಾದವೆಂದು ಇತರರಿಗೆ ಕೊಡುವ ಸಂಪ್ರದಾಯವೂ ಇದೆ. ನೀವು ಮಾಡುವಿರಾ? ನಮ್ಮ ಮನೆಯಲ್ಲಿ ಹೀಗೆ ಕುಂಕುಮಾರ್ಚನೆ ಮಾಡಿದ ಕುಂಕುಮದ ಒಂದು ದೊಡ್ಡ ಡಬ್ಬಿಯೇ ಇದೆ. ಕುಂಕುಮವನ್ನು ಚೆಲ್ಲಿದರೆ ಅಶುಭ ಅನ್ನುವ ಕಾರಣದಿಂದ ಮನೆಗಳಲ್ಲಿ ಕುಂಕುಮದ ಶೇಖರಣೆ ಜಾಸ್ತಿಯಾಗುತ್ತಲೇ ಇದೆ.

ವಿಭಾಗಗಳು
ಲೇಖನಗಳು

ಬಾಯಿ ಇದ್ದವನಿಗೆ ಬರಗಾಲವಿಲ್ಲ

ಬಾಯಿ ಇದ್ದವನಿಗೆ ಬರಗಾಲವಿಲ್ಲ

ಇದೊಂದು ನಾಡುನುಡಿ (ನಾಣ್ನುಡಿ).  ಇಂದು ಬೆಳಗ್ಗೆ ನನ್ನ ಬಾಸು ನನ್ನನ್ನು ಕರೆದು ಹಳೆಯ ಕೆಲಸವೊಂದು ಬಾಕಿ ಇದ್ದು ಇಂದೇ ಮುಗಿಸಬೇಕೆಂದು ಅಣತಿ ಇತ್ತರು.  ೫ ನಕ್ಷತ್ರಗಳ ಹೊಟೆಲ್ ಒಂದರ ಪಾವತಿಯಲ್ಲಿ ಸ್ವಲ್ಪ ತೊಂದರೆ ಇದ್ದು, ಅಲ್ಲಿಗೆ ಹೋಗಿಯೇ ಇತ್ಯರ್ಥಗೊಳಿಸಬೇಕಿತ್ತು.  ಅದಕ್ಕಾಗಿ ಸಹಾಯಕ ಅಧಿಕಾರಿಯನ್ನು ಕಳುಹಿಸಿದ್ದೆವು.  ಅವರಿಂದ ಕೆಲಸ ಆಗಿರಲಿಲ್ಲ.  ನನಗೇ ಹೋಗಲು ನನ್ನ ಮೇಲಧಿಕಾರಿಗಳು ಅಣತಿ ಇತ್ತರು.  ನಾನೇ ಯಾಕೆ ಹೋಗಬೇಕು, ವಯಸ್ಸಿನಲ್ಲಿ ಹಿರಿಯರಾದ ಸಹಾಯಕ ಅಧಿಕಾರಿಗಳಿಗೇ ಈ ಕೆಲಸ ಆಗ್ಲಿಲ್ಲ ಅಂದ ಮೇಲೆ ನಾನು ಹೋಗಿ ಏನು ಪ್ರಯೋಜನ ಎನ್ನಲು, ಅವರು – ’ನೀನು ಹೋಗಿ ಬಾ.  ಆಮೇಲೆ ನಿನಗೇ ಗೊತ್ತಾಗುತ್ತದೆ, ನಿನ್ನಿಂದ ಈ ಕೆಲಸ ಆಗುವುದೋ ಇಲ್ಲವೋ’ ಎಂದು, ಎಂದು ಹೇಳಿದರು.  ಆ ಹೊಟೆಲ್ ಬಗ್ಗೆ ನನಗೆ ಪರಿಚಯವಿರದ ಕಾರಣ ಸಹಾಯಕ ಅಧಿಕಾರಿಯನ್ನೂ ಜೊತೆಗೆ ಕರೆದೊಯ್ದೆ. 

ಒಬೆರಾಯ್ ಹೊಟೆಲ್‍ನವರ ಸಹೋದರ ಸಂಸ್ಥೆ ಹಿಲ್ಟನ್ ಹೊಟೆಲ್.  ವೈಭವವಾದ ಕಟ್ಟಡದೊಳಗೆ ಕಾಲಿಡುತ್ತಿದ್ದಂತೆಯೇ, ಯಾವುದೋ ಯಕ್ಷ ಲೋಕಕ್ಕೆ ಬಂದಂತಹ ಅನುಭವವಾಯಿತು.   ಆ ಹೊಟೆಲ್ ಒಳಗೆ ಹೋಗುತ್ತಿದ್ದಂತೆಯೇ, ಮೊದಲು ಎದುರಾದದ್ದು ಆತಿಥೇಯ ವಿಭಾಗ.  ನಮ್ಮ ಕೆಲಸ ಆಗಬೇಕಿದ್ದ ಲೆಕ್ಕಪತ್ರದ ವಿಭಾಗ ಎಲ್ಲಿದೆಯೆಂದು ಹುಡುಕುವುದೇ ಒಂದು ದೊಡ್ಡ ಕಷ್ಟವಾಯಿತು. ಹೊಟೆಲ್‍ನ ಹಿಂಭಾಗದಲ್ಲಿರುವ ಗೋಡೌನ್ ತರಹದ ಪ್ರದೇಶದಲ್ಲಿ ಲೆಕ್ಕ ಪತ್ರ ವಿಭಾಗವಿದೆ. ನಮ್ಮ ಕೆಲಸವನ್ನು ನೋಡಿಕೊಳ್ಳುವವರ ಹತ್ತಿರ ಹೋದೆವು.  ನನ್ನ ಸ್ನೇಹಿತರು ನನ್ನನ್ನು ಅವರಿಗೆ ಪರಿಚಯಿಸಿದ ಕೂಡಲೇ, ಅವರು ಎದ್ದು ನಿಂತು ಕುಳಿತುಕೊಳ್ಳಲು ತಿಳಿಸಿ, ತಾವೇನು ಸಹಾಯ ಮಾಡಬಹುದೆಂದು ಕೇಳಿದರು.  ಇಷ್ಟು ಮರ್ಯಾದೆ ಕೊಟ್ಟದ್ದೇ ಸಾಕೆಂದು, ನಾನು ಬಂದ ಕೆಲಸದ ಬಗ್ಗೆ ಉಪನ್ಯಾಸ ಕೊಡಲಾರಂಭಿಸಿದೆ.  ನನ್ನ ಭೈರಿಗೆಯ ಕೊರೆತ ಕೇಳಿಯೇ ಏನೋ, ತಕ್ಷಣ ನಮ್ಮೆಲ್ಲಾ ಮಾತುಗಳಿಗೂ ಒಪ್ಪಿಗೆಯನ್ನು ನೀಡಿದರು.  ನನ್ನ ಕೆಲಸ ಬಹಳ ಸುಲಭದಲ್ಲಿ ಮಿಂಚಿನಂತೆ ಮುಗಿದುಹೋಗಿತ್ತು.  ನಂತರ ನನ್ನ ಸ್ನೇಹಿತರು ತಿಳಿಸಿದ್ದೇನೆಂದರೆ, ನಿರರ್ಗಳವಾಗಿ ನಾನು ಆ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾಗ, ಹೊಟೆಲ್‍ನ ಆತನಿಗೆ ತಮ್ಮ ತಪ್ಪು ಹಾದಿಯ ಬಗ್ಗೆ ತಿಳುವಳಿಕೆ ಆಯಿತಂತೆ.  ಹಾಗಾಗಿ ಅವರು ನಮ್ಮ ಮಾತುಗಳಿಗೆ ಮಣಿದು, ನಮ್ಮ ನಿಲುವನ್ನು ಸರಿ ಎಂದು ಒಪ್ಪಿಕೊಂಡರಂತೆ.  ಆ ತಕ್ಷಣದಲ್ಲಿ ನನಗೆ ಇದರ ಅನುಭವವೇ ಆಗಿರಲಿಲ್ಲ.  ಅವರಿಂದ ಬೀಳ್ಕೊಂಡು ಹೊರಡುವ ಸಮಯಕ್ಕೆ ಸರಿಯಾಗಿ, ಅವರ ಮೇಲಧಿಕಾರಿಗಳು ಅಲ್ಲಿಗೆ ಬಂದು ನಮ್ಮನ್ನು ಪರಿಚಯಿಸಿಕೊಂಡು ತಮ್ಮಲ್ಲಿಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದರು.  ನಾನು ಹೊರಗಡೆ ಎಲ್ಲಿಯೂ ಏನನ್ನೂ ತಿನ್ನುವುದಿಲ್ಲವೆಂದು ಹೇಳಲು, ಅವರಿಗೆ ಅತಿಯಾದ ಆಶ್ಚರ್ಯವಾಯಿತು.  ಅದೇ ನನ್ನ ಸ್ನೇಹಿತರು, ಅವರೊಂದಿಗೆ ಹೊರಟು ನಿಂತರು.  ಬಹಳ ಒಳ್ಳೆಯ ಊಟ ನೀಡಿದ್ದರಂತೆ.  ನಂತರ ನಾನು ಬ್ಯಾಂಕಿಗೆ ಬಂದು ಕೆಲಸವಾದುದರ ಬಗ್ಗೆ ಹೇಳಿದ ಕೂಡಲೇ ನನ್ನ ಮೇಲಧಿಕಾರಿ ಹೇಳಿದರು, ’ನಾನು ಮೊದಲೇ ಹೇಳಿರಲಿಲ್ವೇ?  ನೀನು ಹೋದರೆ ಕೆಲಸ ಖಂಡಿತವಾಗಿ ಆಗುವುದು ಎಂದು’.   ತಕ್ಷಣ ನನಗೆ ನೆನಪಾದದ್ದು ‘ಬಾಯಿಯಿದ್ದವನು ಬರಗಾಲದಲ್ಲಿಯೂ ಬದುಕಿಯಾನು’ ಎಂದ ಕನ್ನಡದ ನಾಣ್ನುಡಿ. 

ಇದೇ ಸಂದರ್ಭದಲ್ಲಿ ನನ್ನ ಹಳೆಯ ಒಂದು ನೆನಪನ್ನು ಕೆದಕಿ ನಿಮ್ಮ ಮುಂದಿಡುತ್ತಿರುವೆ.  ನನ್ನ ತಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದವರು. ಹಾಗಾಗಿ ಅವರಿಗೆ ಸರಕಾರದಿಂದ ಪಿಂಚಣಿ ಬರುತ್ತಿದ್ದಂತೆಯೇ ನನಗೂ ಕಾಲೇಜಿನ ಫೀ ಮಾಫಿ, ಹಾಸ್ಟೆಲಿನ ಖರ್ಚು, ಪುಸ್ತಿಕೆಗಳ ಖರ್ಚು ಇತ್ಯಾದಿ ಎಂದು ಸ್ಕಾಲರ್ ಶಿಪ್ ಬರುತ್ತಿತ್ತು. ೧೯೭೯-೮೦ರಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ಓದುತ್ತಿದ್ದ ಸಮಯ.    ಪದವಿಯ ಎರಡನೆಯ ವರ್ಷದಲ್ಲಿ ಅರ್ಜಿ ಸಲ್ಲಿಸಿದ ಹಣ ಯಾಕೋ ಇನ್ನೂ ಬಂದಿರಲಿಲ್ಲ.  ಮೂರನೆಯ (ಕಡೆಯ) ವರ್ಷದ ಅರ್ಜಿಯನ್ನು ಸಲ್ಲಿಸಿದ ಸ್ವಲ್ಪ ದಿನಗಳಲ್ಲಿಯೇ, ಅದರ ಬಾಬ್ತು ಹಣ ಬಂದಿತ್ತು.  ಈ ಮೊದಲು ಮೊದಲ ವರ್ಷದ ಬಾಬ್ತು ಕೂಡಾ ಸರಿಯಾದ ಸಮಯಕ್ಕೆ ಬಂದಿತ್ತು. ಎರಡನೆಯ ವರ್ಷದ ಹಣ ಮಾತ್ರ ಏಕೆ ಬಂದಿಲ್ಲ ಎಂದು ಕಾಲೇಜಿನ ಸಿಬ್ಬಂದಿಗಳಲ್ಲಿ ವಿಚಾರಿಸಲು, ಸರ್ಕಾರದ ಆ ವಿಭಾಗಕ್ಕೇ ಹೋಗಿ ವಿಚಾರಿಸು ಎಂದಿದ್ದರು.  ಒಂದು ದಿನ ಆ ವಿಭಾಗಕ್ಕೆ ಹೋಗಿ ವಿಚಾರಿಸಲು, ಕಿರಿಯ ಅಧಿಕಾರಿಗಳು ತಮಗೇನೂ ಗೊತ್ತಿಲ್ಲ,  ನಿನಗೆ ಎಷ್ಟು ಬಂದಿದೆಯೋ ಅದರಲ್ಲೇ ಸಂತೋಷಪಟ್ಟುಕೋ ಎಂದಿದ್ದರು.  ಸುಮ್ಮನಿರದ ನಾನು ಪಕ್ಕದಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿದ್ದ ಹಿರಿಯ ಅಧಿಕಾರಿಗಳ ಬಳಿ ಹೋಗಿ ನನ್ನ ಅಳಲನ್ನು ತೋಡಿಕೊಂಡೆ.  ನನ್ನ ತಂದೆ ಸ್ವಾತಂತ್ರ್ಯ ಯೋಧರು.  ಈಗ ಅವರು ಕೆಲಸದಿಂದ ನಿವೃತ್ತರಾಗಿರುವುದರಿಂದ ಮತ್ತು ನಾನು ವಸತಿನಿಲಯದಲ್ಲಿದ್ದು ಓದುತ್ತಿರುವುದರಿಂದ, ಜೀವನ ನಡೆಸುವುದು ಸ್ವಲ್ಪ ದುಸ್ತರವಾಗಿದೆ ಎಂದಿದ್ದೆ.  ಅಷ್ಟಲ್ಲದೇ ನಾನು ಕೊಂಡು ಹೋಗಿದ್ದ ನನ್ನ ಹಳೆಯ ಅಂಕಪಟ್ಟಿಗಳೆಲ್ಲವನ್ನೂ ಅವರ ಮುಂದಿಟ್ಟಿದ್ದೆ.  ಅದನ್ನು ನೋಡಿಯೋ ಏನೋ, ಆ ಹಿರಿಯ ಅಧಿಕಾರಿಗಳು, ಅರ್ಜಿ ತಮಗೆ ಬಂದಿಲ್ಲವೆಂದೂ ಮತ್ತೊಂದು ಅರ್ಜಿ ಸಲ್ಲಿಸಿದರೆ ತಕ್ಷಣವೇ ಮಂಜೂರು ಮಾಡಿ ಹಣ ಸಂದಾಯಿಸುವುದಾಗಿಯೂ ಹೇಳಿದ್ದರು.  ಅಲ್ಲಿಯೇ ಕುಳಿತು ಸ್ಕಾಲರ್‌ಶಿಪ್‍ಗಾಗಿ ಇನ್ನೊಂದು ಅರ್ಜಿಯನ್ನು ಸಲ್ಲಿಸಿದೆ.  ಅದಾದ ನಂತರ ಸ್ವಲ್ಪ ಕಾಲ ಆ ವಿಷಯವೇ ನನಗೆ ಮರೆತು ಹೋಗಿತ್ತು. ಬಿ.ಕಾಂ ಪದವಿ ದೊರೆತ ಸ್ವಲ್ಪ ದಿನಗಳ ಮೇಲೆ, ಒಮ್ಮೆ ಕಾಲೇಜಿನಿಂದ ಕರೆ ಬಂದಿತು.  ಅಲ್ಲಿಗೆ ಹೋಗುತ್ತಿದ್ದಂತೆಯೇ ಕಾಲೇಜಿನ ಲೆಕ್ಕಾಧಿಕಾರಿಗಳು, ನಿನಗೆ ಚೆಕ್ ಕೊಡಬೇಕೋ ಅಥವಾ ನಗದು ಹಣ ಕೊಡಬೇಕೋ ಎಂದು ಕೇಳಿದರು.  ವಿಷಯವೇನೆಂದು ತಿಳಿಯದ ನಾನು, ಯಾವುದರ ಬಗ್ಗೆ ಕೇಳ್ತಿದ್ದೀರಿ, ನನಗೆ ನಗದು ಹಣ ಕೊಟ್ಟರೇ ಒಳ್ಳೆಯದು ಎಂದು ಹೇಳಿದೆ.  ಒಟ್ಟಿಗೆ ಎರಡು ವರ್ಷಗಳ ಸ್ಕಾಲರ್‌ಶಿಪ್ ಹಣವನ್ನು ನಗದಾಗಿ ಕೊಟ್ಟರು.  ನನಗೆ ಸಖೇದಾಶ್ಚರ್ಯವಾಯಿತು.  ಒಂದು ವರ್ಷದ್ದೇ ಸರಿಯಾಗಿ ಬರದಿದ್ದ ಸಮಯದಲ್ಲಿ ಎರಡು ವರ್ಷಗಳ ಹಣ ಅದು ಹೇಗೆ ಬಂದಿತು ಎಂದು.  ಲೆಕ್ಕಾಧಿಕಾರಿಗಳು ವಯಸ್ಸಿನಲ್ಲಿ ಬಹಳ ಹಿರಿಯರಾಗಿದ್ದರು.  ಅವರನ್ನು ಈ ಬಗ್ಗೆ ಕೇಳಿದೆ. ಅದಕ್ಕವರು, ನೀನು ಸರ್ಕಾರದ ಕಛೇರಿಗೆ ಹೋಗಿದ್ದೆಯಾ?  ಅಲ್ಲಿ ಏನು ನಡೆಯಿತು ಹೇಳು?  ಎಂದು ಹೇಳಿದರು.  ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ಚಾಚೂ ತಪ್ಪದೇ ಅವರ ಮುಂದೆ ಹರಿಯಬಿಟ್ಟೆ.  ಅದಕ್ಕವರು, ‘ನೋಡಿದೆಯಾ, ಇದಕ್ಕೇ ಹೇಳುವುದು, ಬಾಯಿ ಇದ್ದವನಿಗೆ ಬರಗಾಲವಿಲ್ಲ’.  ನೀನು ಹಿರಿಯ ಅಧಿಕಾರಿಗಳನ್ನು ಕಂಡುದುದು, ಅಂಕ ಪಟ್ಟಿಯನ್ನು ತೋರಿಸಿದುದು, ಇನ್ನೊಂದು ಅರ್ಜಿಯನ್ನು ಸಲ್ಲಿಸಿದುದು ಒಳ್ಳೆಯದೇ ಆಯಿತು.  ನೋಡು ಅವರೀಗ ಹಳೆಯ ಅರ್ಜಿಯನ್ನೂ ತೆಗೆಸಿ, ಎರಡನ್ನೂ ಮಂಜೂರು ಮಾಡಿ ಕಳುಹಿಸಿದ್ದಾರೆ.  ಒಂದು ವರ್ಷದ ಹಣ ಜಾಸ್ತಿಯಾಗಿಯೇ ಬಂದಿದೆ ಎಂದು ಯಾರಲ್ಲಿಯೂ ಹೇಳಬೇಡ. ಹಿಂದೊಮ್ಮೆ ಮೊದಲ ಪಿಯುಸಿಯಲ್ಲಿ ಸ್ಕಾಲರ್ ಶಿಪ್ ಬಂದಿರಲಿಲ್ಲ.  ದೇವರು ಕೊಟ್ಟ ವರವೆಂದು ಕಣ್ಣಿಗೊತ್ತಿಕೊಂಡು ತೆಗೆದುಕೋ.  ನಿನಗೆ ಬದುಕಿನಲ್ಲಿ ಒಳ್ಳೆಯದೇ ಆಗುವುದು ಎಂದು ಹರಸಿದರು. ಆ ಹಿರಿಯರಿಗೆ ಅಲ್ಲಿಯೇ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದೆ.  ಈಗವರು ಎಲ್ಲಿಹರೋ ಏನೋ ತಿಳಿಯದು. ಆದರೆ ಅವರ ಆತ್ಮ ಮಾತ್ರ ನನ್ನನ್ನು ಹರಸುತ್ತಲೇ ಇದೆ.  ಅವರ ಇಂತಹ ಮಾತುಗಳನ್ನು ಮರೆಯಲಾಗುವುದೇ? ನನ್ನ ಜೀವನದಲ್ಲಿ ಕಂಡ ಎಂದುರೋ ಮಹಾನುಭಾವುಲುಗಳಲ್ಲಿ ಅವರೂ ಒಬ್ಬರು.

ವಿಭಾಗಗಳು
ಕವನಗಳು

ನನ್ನವಳು

ವಾರೆ ನೋಟದೆ ಮನಸೆಳೆದ ಚೆಲುವೆ
ಸೂಜಿಗಲ್ಲಿನ ಆ ನೋಟಕೆ ಮನಸೋತೆ
ಮಕರಂದ ತುಂಬಿದ ಅಧರದ ಬಣ್ಣ
ನೋಡುತ್ತಲೇ ನಾನಾದೆ ಬಲು ಸಣ್ಣ

ಮೊದಲ ದಿನ ಅವಳು ಅಲ್ಲಿ ಬಸ್ ಸ್ಟಾಪಿನಲಿ
ನಾನು ಅವಳ ಹಿಂದೆ ಉಗುರು ಕಡಿಯುತಲಿ
ಆ ಕೊಂಕು ನೋಟದೆ ನನ್ನ ಕೊಲ್ಲುತಿಹೆ
ಮಾಗಿಯ ಚಳಿಯಲು ನಾ ಬೆವತಿಹೆ

ಎರಡನೆಯ ದಿನ ಮತ್ತದೇ ಕುಡಿಗಣ್ಣ ನೋಟ
ಇದೇನಿದು ದಿನವೂ ಮಾದಕತೆಯ ಮಾಟ
ನೇರವಾಗಿ ನೋಡಲು ಆ ವಾರೆನೋಟದ ಕಣ್ಣ
ನಿಜವಾಯಿತು ಅವಳಿಗಿಹದು ಮಾಲ್ಗಣ್ಣ

ಮೂರನೆಯ ದಿನ ನಾ ಅಲ್ಲಿ ಹೋಗದಿರಲು
ಅವಳೇ ನನ್ನ ಮನೆಯ ಮುಂದೆ ಬಂದಿರಲು
ಹೆದರಿ ನಾ ಓಡಿದೇ ಹಿತ್ತಲ ಬಾಗಿಲಿನಿಂದ
ಅಮ್ಮ ಹೇಳಿದಳು ಅವಳೇ ನಿನ್ನ ಸುನಂದ

ವಿಭಾಗಗಳು
ಕವನಗಳು

ಬದುಕು

ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ)
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ

(ತಮಿಳಿನಲ್ಲಿ ಕೆಲವರ ತತ್ವಗಳನ್ನು ವೇಂಗಾಯ್ ಎಂದು ಆಡಿಕೊಳ್ಳುವುದಿದೆ)

ಬದುಕೂ ಬಲು ಘಾಟು,
ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ ನೀರು
ದಿನಗಳು ಸವೆಯುತ್ತಲೇ ಇರುವುದು
ಆದರೂ ಸಾರ್ಥಕ್ಯದ ದಿನಗಳು ಕಾಣಸಿಗದು
ಬದುಕೂ ಸವಿಯಲು ಬಲು ಆನಂದ
ಆ ಸವಿಯ ಹಿಂದೆಯೇ ದುರ್ವಾಸನೆ (ಕರ್ಮಫಲ ಎನ್ನೋಣವೇ)

ನನ್ನ ಬದುಕು ಒಂದು ಬ್ಯಾಲೆನ್ಸ್ ಶೀಟು
ಬರುವುದೆಷ್ಟೋ ಕಾಣುವಂತಹ ಡೆಬಿಟ್ಟುಗಳು
ಅಂತೆಯೇ ಬರುತಿಹದು ಗುಡ್ ವಿಲ್ ನಂತಹ ಕ್ರೆಡಿಟ್ಟುಗಳು
ಬದುಕಿನ ಕೊನೆಗೆ ತನಗೆ ತಾನೇ ಬ್ಯಾಲೆನ್ಸ್ ಆಗುವ ಶೀಟು (ಪತ್ರ)

ಇದರ ಮಧ್ಯೆ ಕೊಟ್ಟು ತೆಗೆದುಕೊಳ್ಳುವ
ಎಡ ಬಲದಲ್ಲಿ ಬರುವಂತಹ ಕಾಂಟ್ರಾ ಎಂಟ್ರಿಗಳು
ಈ ಶೀಟು ತಯಾರಾಗುವುದು ಒಮ್ಮೆ ಮಾತ್ರ
ಜೀವನದ ಕೊನೆಯಲ್ಲಿ ಶಿಲ್ಕು ಮಾತ್ರ ಶೂನ್ಯ

ವಿಭಾಗಗಳು
ಲೇಖನಗಳು

ಸುಬ್ಬಮ್ಮ ದೊಡ್ಡಮ್ಮ

ಗೃಹಿಣೀ ಗೃಹಮುಚ್ಯತೇ ಎಂಬುದೊಂದು ನಾಣ್ನುಡಿ. ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿ ಜಗತ್ತಿನಲ್ಲಿ ಶ್ರೇಷ್ಠ ಎನಿಸಿಕೊಳ್ಳಬೇಕಾದರೆ, ಅದರ ಹಿಂದೆ ಒಂದು ಹೆಣ್ಣಿನ ಅನವರತ ನಿಷ್ಕಾಮ ಸೇವೆ ಇರುವುದು ಸತ್ಯ.
ನನ್ನ ದೊಡ್ಡಮ್ಮ ಅಂದ್ರೆ ದಿವಂಗತ ತ.ಸು.ಶಾಮರಾಯರ ಪತ್ನಿ ಸುಬ್ಬಮ್ಮನವರು ಈ ಪದಗಳಿಗೊಂದು ಸೂಕ್ತ ಉದಾಹರಣೆ. ಆಕೆ 2006ರಲ್ಲಿ ದೈವ ಅಧೀನರಾದಾಗ, ೯೨-೯೩ ವರ್ಷವಾಗಿತ್ತು. ಜೀವನದುದ್ದಕ್ಕೂ ಒಂದೇ ಸಮನೆ ದುಡಿದ ಜೀವ. ನನ್ನ ತಾಯಿಯ ಕಡೆಯೂ ಸಂಬಂಧಿಯೇ. ನನ್ನ ತಾಯಿಗೆ ಚಿಕ್ಕಮ್ಮ ಆಗ್ಬೇಕಿತ್ತು. ೧೯೭೨ರಲ್ಲಿ ನಾವು ಮೈಸೂರಿಗೆ ಬಂದು ನೆಲೆಸಿದಾಗಿನಿಂದ ನನಗೆ ಅವರ ನೆನಪಿದೆ. ಅಲ್ಲಿಯವರೆವಿಗೆ ನಾನು ಅವರ ಮನೆಗೆ ಅಷ್ಟಾಗಿ ಹೋಗಿರಲಿಲ್ಲ.

೧೯೭೨ರಲ್ಲಿ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ. ಚಾಮರಾಜನಗರದಿಂದ ಮೈಸೂರಿಗೆ ಬಂದ ಹೊಸತು. ನಾವು ಇದ್ದದ್ದು ಚಾಮುಂಡಿಪುರದಲ್ಲಿ. ಆಗಾಗ ನನ್ನ ತಾಯಿ ನನ್ನನ್ನು ಮತ್ತು ನನ್ನ ತಂಗಿಯನ್ನು ಕರೆದುಕೊಂಡು ಕೃಷ್ಣಮೂರ್ತಿಪುರಂನಲ್ಲಿದ್ದ ನನ್ನ ದೊಡ್ಡಪ್ಪನವರ ಮನೆಗೆ ಕರೆದೊಯ್ಯುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲಾ ದೊಡ್ಡಮ್ಮ ಏನಾದರು ತಿನ್ನಲು ಕೊಡುತ್ತಿದ್ದರು. ಸಾಮಾನ್ಯವಾಗಿ ಕೊಡುಬಳೆ ಅಥವಾ ಚಕ್ಕುಲಿಯಂತೂ ಕೊಡ್ತಾನೇ ಇದ್ದರು. ಅವರ ಮನೆಯ ಕಾಂಪೌಂಡಿನಲ್ಲಿದ್ದ ಸೀಬೆ ಗಿಡದಲ್ಲಿ ಕಾಯಿ ಬಿಟ್ಟಿರುತ್ತಿತ್ತು. ದೊಡ್ಡಮ್ಮನ ಮಕ್ಕಳೆಲ್ಲ ಬಹಳ ದೊಡ್ಡವರಾಗಿದ್ದರು. ನಾವುಗಳು ಹೋದಾಗ ಸಾಮಾನ್ಯವಾಗಿ ಯಾರೂ ಮನೆಯಲ್ಲಿ ಇರುತ್ತಿರಲಿಲ್ಲ. ನಮ್ಮಮ್ಮ ಮತ್ತು ದೊಡ್ಡಮ್ಮ ಮಾತನಾಡುತ್ತಿದ್ದಾಗ ನಾನೂ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನಮ್ಮ ದೊಡ್ಡಪ್ಪನವರು ನಮ್ಮೊಂದಿಗೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಕಾರಣವೆಂದರೆ ವಯಸ್ಸಿನಲ್ಲಿ ಇರುವ ವ್ಯತ್ಯಾಸ. ನನಗಿನ್ನೂ ೧೨ ವರ್ಷ, ಆಗ ದೊಡ್ಡಪ್ಪನವರಿಗೆ ೬೬-೬೭ ವರ್ಷ ವಯಸ್ಸು. ಮಾತನಾಡೋಕ್ಕೆ ಅದೆಲ್ಲಿಯ ಸಾಮ್ಯತೆ. ಆದ್ರೆ ದೊಡ್ಡಮ್ಮ ಮಾತ್ರ ಹಾಗಲ್ಲ. ಅವರಿಗೆ ಹಿರಿಯ ಕಿರಿಯ ಎಂಬ ಭೇದಭಾವವಿಲ್ಲ. ಎಲ್ಲರೊಂದಿಗೂ ಅವರ ಸಮವಾಗಿ ಬೆರೆಯುತ್ತಿದ್ದರು. ನನ್ನನ್ನು ಆಗಾಗ ’ಏನೋ ಛತ್ರಿ ಮುಂಡೇದೇ’ ಎಂದು ತಲೆ ನೇವರಿಸಿ ಹಾಗೆಯೇ, ’ಪೋ ಆಡವಾಣ್ಳು ಮಾಟ್ಲಾಡೇ ಸಮಯಂಲೋ ನೀಕೇಮಿ ಪನಿ’ ಎಂದು ಆಚೆಗೆ ಹೋಗಲು ಕಳುಹಿಸುತ್ತಿದ್ದರು. ನನ್ನ ತಾಯಿ ದೊಡ್ಡಮ್ಮನೊಂದಿಗೆ ಮನೆಯಂಗಳದಲ್ಲಿ ಕುಳಿತು ಮಾತನಾಡುತ್ತಿದ್ದರೆ, ನಾನು ಸೀಬೆಗಿಡವನ್ನು ಹತ್ತಿ, ಸಣ್ಣ ಕಾಯಿ ಹೀಚನ್ನೂ ಬಿಡದೇ ಎಲ್ಲವನ್ನೂ ಕಿತ್ತು ತಿನ್ನುತ್ತಿದೆ. ದೊಡ್ಡಮ್ಮನಿಗೆ ಈ ವಿಷಯ ಗೊತ್ತಾಗುತ್ತಿದ್ದರೂ ಎಂದೂ ಬೈಯ್ಯುತ್ತಿರಲಿಲ್ಲ. ಆದರೇನು ವಾಪಸ್ಸು ಮನೆಗೆ ಹೋಗುವ ವೇಳೆಗೆ ನನ್ನ ಹೊಟ್ಟೆಯಲ್ಲಿ ನೋವು ಶುರುವಾಗುತ್ತಿತ್ತು ಮತ್ತು ಅಮ್ಮನಿಂದ ಎರಡೇಟು ಬೀಳುತ್ತಿತ್ತು. ಇದು ಮಾಮೂಲಿ ವಿಷಯವಾಗಿತ್ತು.

ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಬಹಳ ಕಷ್ಟವಿದ್ದು, ನನ್ನ ತಾಯಿಗೆ ನನ್ನ ದೊಡ್ಡಪ್ಪನವರು ಲಲಿತಾ ಸಹಸ್ರನಾಮದ ಬೀಜ ಮಂತ್ರದ ದೀಕ್ಷೆಯನ್ನು ನೀಡಿದ್ದರು (ದೊಡ್ಡಪ್ಪನವರಿಗೆ ಅದು ಸಿದ್ಧಿಸಿತ್ತಂತೆ). ಹಾಗೆಯೇ ನನ್ನ ದೊಡ್ಡಮ್ಮ ಹದಿನಾರು ಸೋಮವಾರ ವ್ರತವನ್ನೂ ಮತ್ತು ದತ್ತಾತ್ರೇಯ ಆರಾಧನೆಯನ್ನೂ ಮಾಡಲು ಹೇಳಿಕೊಟ್ಟಿದ್ದರು. ಆಗ ನನ್ನ ದೊಡ್ಡಪ್ಪನವರು ಗುಬ್ಬಿ ಚಿದಂಬರಾಶ್ರಮದಲ್ಲಿ ಅಧ್ಯಕ್ಷರಾಗಿದ್ದರು. ಅಲ್ಲಿ ಒಂದು ಕೋಣೆಯನ್ನೂ ಕಟ್ಟಿದ್ದರು. ನನ್ನ ತಂದೆ ಮತ್ತು ತಾಯಿಯರನ್ನು ಪ್ರತಿವರ್ಷ ಆರಾಧನೆಯ ಸಮಯದಲ್ಲಿ ಬಂದು ಹೋಗುವಂತೆ ಹೇಳುತ್ತಿದ್ದರು. ನನ್ನ ಮೂರನೆಯ ಅಣ್ಣನ ಉಪನಯನವೂ ಅಲ್ಲಿಯೇ ನಡೆದಿತ್ತು.

ದೊಡ್ಡಮ್ಮನ ಎರಡನೆಯ ಮಗ ಛಾಯಾಪತಿ ಪುಸ್ತಕ ಪ್ರಕಟಣೆಯ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರ ಹೆಸರು ತ.ವೆಂ.ಸ್ಮಾರಕ ಗ್ರಂಥಮಾಲೆ. ಅವರಿಗೆ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು. ಆಗ ನಾನು ಓದುತ್ತಿದ್ದುದು ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ. ಒಮ್ಮೆ ನಮ್ಮ ಶಾಲೆಯ ಕನ್ನಡ (ನಾನು ಸಂಸ್ಕೃತ ಭಾಷೆಯನ್ನು ತೆಗೆದುಕೊಂಡಿದ್ದು) ಮೇಡಂ ನನಗೆ ಅವರನ್ನು ಭೇಟಿಯಾಗಲು ಹೇಳಿ ಕಳುಹಿಸಿದ್ದರು. ನಾನು ಅವರಲ್ಲಿಗೆ ಹೋದಾಗ ಇತರ ಟೀಚರುಗಳಿಗೆ ನಾನು ತ.ಸು.ಶಾಮರಾಯರ ತಮ್ಮನ ಮಗನೆಂದು ಪರಿಚಯಿಸಿದ್ದರು. ನನಗೆ ಏಕೆ ಕನ್ನಡ ವಿಷಯವನ್ನು ಅಭ್ಯಸಿಸಲು ಇಚ್ಛೆಯಿಲ್ಲವೆಂದು ಕೇಳಿದ್ದರು. ಸಂಸ್ಕೃತದಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆಂದೂ ಕನ್ನಡದಲ್ಲಿ ಹೆಚ್ಚು ಅಂಕ ಸಿಗುವುದಿಲ್ಲವೆಂದೂ ನಾನು ಹೇಳಿದ್ದೆ. ಜೊತೆಗೇ ಅವರ ತಂಗಿಯ ಭಾವಚಿತ್ರವನ್ನು ಕೊಟ್ಟು ನನ್ನ ದೊಡ್ಡಮ್ಮನಿಗೆ ಕೊಡಬೇಕೆಂದೂ, ತಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಬೇಕೆಂದೂ ತಿಳಿಸಿದ್ದರು. ನಾನು ಹಾಗೆಯೇ ದೊಡ್ಡಮ್ಮನಿಗೆ ತಿಳಿಸಿದ್ದೆ. ಅದಕ್ಕವರು ಹೋಗೋ ನಿನಗ್ಯಾಕೆ ಅದೆಲ್ಲಾ, ನಿನಗೇನೂ ಅರ್ಥ ಆಗೋಲ್ಲ, ಎಂದು ಹೇಳಿದ್ದರು. ನಾನ್ಯಾವ ದೊಡ್ಡ ಮನುಷ್ಯ ಅಂತ ನನ್ನ ದೊಡ್ಡಮ್ಮ ನನಗೆ ಮರ್ಯಾದೆ ಕೊಡ್ಬೇಕಿತ್ತು. ಅಲ್ವೇ? ಆ ಮೇಡಂಗೆ ಈ ವಿಷಯ ಗೊತ್ತಾಗಿತ್ತು ಅನ್ಸತ್ತೆ, ಮತ್ತೆ ಅವರೇನೂ ನನ್ನನ್ನು ಕರೆದಿರಲಿಲ್ಲ, ಮತ್ತು ಮಾತನಾಡಿಸಲೂ ಇಲ್ಲ, ಮದುವೆಯ ಪ್ರಸ್ತಾಪವಂತೂ ಮುಂದುವರೆಯಲೇ ಇಲ್ಲ.

ಸ್ವಲ್ಪ ಕಾಲದಲ್ಲಿ, ನಮಗೆ ಬಾಡಿಗೆಗಾಗಿ ಒಂದು ಮನೆ ಕೃಷ್ಣಮೂರ್ತಿಪುರಂನಲ್ಲೇ, ಅದೂ ದೊಡ್ಡಪ್ಪನವರ ಮನೆಯ ಹಿಂದೆಯೇ ಸಿಕ್ಕಿತ್ತು. ಆಗಂತೂ ನನ್ನ ತಾಯಿ ಪ್ರತಿದಿನ ಮಧ್ಯಾಹ್ನವೂ ದೊಡ್ಡಮ್ಮನನ್ನು ನೋಡಲು ಹೋಗುತ್ತಿದ್ದರು. ನನ್ನ ದೊಡ್ಡಮ್ಮನ ಅಡುಗೆಯ ರುಚಿಯೇ ಬೇರೆ. ಆಹಾ! ಇಂದಿಗೂ ನೆನೆಸಿಕೊಂಡ್ರೆ ಬಾಯಲ್ಲಿ ನೀರೂರುತ್ತದೆ. ಆಗಾಗ ದೊಡ್ಡಮ್ಮ ಅವರ ಅಡುಗೆ ಬಗ್ಗೆ ದೊಡ್ಡಪ್ಪನವರ ಶಿಷ್ಯಂದಿರಾಗಿ ಮನೆಗೆ ಊಟಕ್ಕೆ ಬರುತ್ತಿದ್ದ ಜಿ.ಎಸ್.ಶಿವರುದ್ರಪ್ಪ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ (ವಾರಾನ್ನ) ಅವರು ಹೊಗಳುತ್ತಿದ್ದ ಮಾತಗಳನ್ನು ಹೇಳುತ್ತಿದ್ದರು. ಆಗಲೇ ಒಮ್ಮೆ ಕವಿ ಜಿ.ಎಸ್.ಎಸ್. ಅವರು ದೊಡ್ಡಪ್ಪನವರ ಬಗ್ಗೆ ಬರೆದ ’ಎದೆ ತುಂಬಿ ಹಾಡಿದೆನು ಅಂದು ನಾನು’ ಕವನದ ಬಗ್ಗೆಯೂ ತಿಳಿಸಿದ್ದರು. ದೊಡ್ಡಪ್ಪನವರ ಶ್ರೇಯದ ಹಿಂದೆ ದೊಡ್ಡಮ್ಮ ಇದ್ದೇ ಇದ್ದಾರೆ. ಆ ಶ್ರೇಯಕ್ಕೆ ಮಾತ್ರ ಸಾವಿಲ್ಲ. ಅದು ಚಿರಂತನ.

ನನ್ನ ದೊಡ್ಡಮ್ಮನ ತಮ್ಮ ಅಂದರೆ ನನ್ನ ತಾಯಿಯ ಸೋದರಮಾವ, ನನ್ನ ಚಿಕ್ಕಮ್ಮನನ್ನು ಮದುವೆಯಾಗಿದ್ದರು. ಇದೆಲ್ಲಾ ಗೋಜಲಿನ ವಿಷಯ. ನಮ್ಮ ಮನೆಯಲ್ಲಿ ಹೆಚ್ಚಿನವರೆಲ್ಲರೂ ಸಂಬಂಧದಲ್ಲಿಯೇ ಮದುವೆಯಾಗಿರುವುದು. ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಬೇಡಿ. ಆ ಚಿಕ್ಕಮ್ಮನ ಮಗ ಅಂದ್ರೆ ನನ್ನ ಅಣ್ಣ ನಾಗೇಶ ದೊಡ್ಡಪ್ಪವರ ಮನೆಯಲ್ಲಿಯೇ ಇದ್ದು ಯುವರಾಜಾ ಕಾಲೇಜಿನಲ್ಲಿ ಪಿ.ಯೂ.ಸಿ. ಓದುತ್ತಿದ್ದ. ಅವನಿಗೆ ಮನೆಯಲ್ಲಿ ಕೊಡುತ್ತಿದ್ದ ಕೆಲಸವೆಂದರೆ, ಆಗಾಗ ಕೃಷ್ಣರಾಜಾ ಮಾರ್ಕೆಟ್ಟಿಗೆ ಹೋಗಿ ದೊಡ್ಡಪ್ಪನಿಗೆ ನಶ್ಯದ ಪುಡಿ (ಅಂಬಾಳ ಅಂತಿರಬೇಕು) ತರುವುದು ಮತ್ತು ಮನೆಗೆ ಆಗಾಗ ಕಾಫೀಪುಡಿ ತರಬೇಕು ಅಷ್ಟೆ. ಅವನು ಜೊತೆಗೆ ನನ್ನನ್ನೂ ಕರೆದೊಯ್ಯುತ್ತಿದ್ದ. ಪ್ರತಿ ದಿನ ಸಂಜೆ ದೊಡ್ಡಪ್ಪನವರು ಅವರ ಅಣ್ಣನ ಮಗ (ವೆಂಕಣ್ಣಯ್ಯನವರ ಎರಡನೆಯ ಮಗ) ರಾಘವ ಅವರೊಂದಿಗೆ ಚಾಮುಂಡಿ ಬೆಟ್ಟದ ಕಡೆಗೆ ವಾಕಿಂಗ್ ಹೋಗುತ್ತಿದ್ದರು. ದೊಡ್ಡಪ್ಪನ ಸಂಪೂರ್ಣ ಆರೈಕೆಯನ್ನು ದೊಡ್ಡಮ್ಮನೇ ಮಾಡಬೇಕಿತ್ತು. ಬೇರೆ ಯಾರನ್ನೂ ಅವರು ಹತ್ತಿರಕ್ಕೆ ಬರಗೊಡುತ್ತಿರಲಿಲ್ಲ.

೧೯೯೭ರಲ್ಲಿ ನಾನು ಬೆಂಗಳೂರಿಗೆ ಬಂದ ನಂತರ ಒಂದು ದಿನ ನನ್ನ ಅಣ್ಣನೊಂದಿಗೆ ನಾನು ದೊಡ್ಡಪ್ಪ ದೊಡ್ಡಮ್ಮನನ್ನು ನೋಡಲು ಮೈಸೂರಿಗೆ ಹೋಗಿದ್ದೆವು. ಆಗ ದೊಡ್ಡಪ್ಪನವರ ಆರೋಗ್ಯವು ಹದಗೆಡುತ್ತಿತ್ತು. ಅದೇ ಮೊದಲ ಬಾರಿಗೆ ಅವರು ನನ್ನೊಂದಿಗೂ ಮನ ಬಿಚ್ಚಿ ಮಾತನಾಡಿದ್ದರು. ಅಂದೂ ಅವರ ಮನೆಯಲ್ಲಿ ಅದೇ ದೊಡ್ಡಮ್ಮನ ಕೈಯ ಊಟವಾಗಿತ್ತು. ಮತ್ತೆ ಅಲ್ಲಿಗೆ ಹೋಗಿದ್ದು ಇನ್ನೊಂದು ವರ್ಷದ ನಂತರ, ದೊಡ್ಡಪ್ಪನವರು ದೈವಾಧೀನರಾದ ನಂತರ. ಹತ್ತನೆಯ ದಿನದ ಧರ್ಮೋದಕಕ್ಕೆ ಹೋಗಿದ್ದ ನಾವು, ದೊಡ್ಡಮ್ಮನನ್ನು ನೋಡಲು ಮನೆಗೆ ಹೋಗಿದ್ದೆವು. ಆಗಲೇ ಅವರ ಮೈ ಅರ್ಧ ಕಮಾನಿನಂತೆ ಬಗ್ಗಿ ಹೋಗಿತ್ತು. ಆಗಲೂ ಕೂಡಾ, ಊಟ ಮಾಡುತ್ತಿದ್ದ ದೊಡ್ಡಮ್ಮ ಮತ್ತು ಅಕ್ಕ (ಲಕ್ಷ್ಮೀದೇವಿ) ಹತ್ತಿರಕ್ಕೆ ಕರೆದು ನನ್ನ ತಲೆ ನೇವರಿಸಿ, ’ಏನೋ, ನಮ್ಮ ಮುಂದೆ ಚಡ್ಡಿ ಹಾಕಿ ಓಡಾಡುತ್ತಿದ್ದ ಹುಡುಗ, ಮನೆಯ ಸೀಬೇಕಾಯಿ ಕಿತ್ತು ತಿನ್ನುತ್ತಿದ್ದವನು, ಈಗ ಬ್ಯಾಂಕಿನಲ್ಲಿ ಮ್ಯಾನೇಜರಾಗಿ ನಮ್ಮನ್ನೆಲ್ಲಾ ಮರೆತಿದ್ದೀಯಾ? ಇಲ್ಲ ಅನ್ಸತ್ತೆ, ಅದಕ್ಕೇ ನೋಡು ನೋಡೋಕ್ಕೆ ಬಂದಿರೋದು, ದೇವರು ನಿಮ್ಮನ್ನೆಲ್ಲಾ ಚೆನ್ನಾಗಿಟ್ಟಿರಲಿ’ ಎಂದಿದ್ದರು. ಈಗಲೂ ಆ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಇನ್ನೆಲ್ಲೀ ಆ ದೊಡ್ಡಮ್ಮ. ಆ ಆಪ್ಯಾಯತೆಯ ಮಾತುಗಳನ್ನು ಇನ್ಯಾರಿಂದ ನಿರೀಕ್ಷಿಸಲಾಗುತ್ತದೆ. ಇನ್ನೂ ನಾನು ಇತರ ಮಕ್ಕಳಿಗೆ ಹೇಳಬೇಕಷ್ಟೆ.

ಏನು ಮಾಡುವುದು. ವಿಧಿಯಾಟ. ಈಗ ಆ ದೊಡ್ಡಮ್ಮನ ಬಗ್ಗೆ ನೆನಪು ಮಾತ್ರವೇ ನನ್ನಲ್ಲಿ ಚಿರಂತನ. ನಾನು ದೂರದಲ್ಲಿರುವವನು, ಆದರೂ ನನ್ನ ನೆನಪುಗಳು ಮಾತ್ರ ಆ ದೈವಸ್ವರೂಪಿ ದೊಡ್ಡಮ್ಮನೊಂದಿಗೇ ಇದೆ. ನಾನೇನು ಮಾಡಬಲ್ಲೆ. ಒಂದು ಕೆಲಸವನ್ನಂತೂ ಮಾಡಬಲ್ಲೆ. ಅದನ್ನು ಮಾಡಲೇಬೇಕು. ಅದೆಂದರೆ ಆ ಸರ್ವಶಕ್ತನಲ್ಲಿ ನಾನು ಪ್ರಾರ್ಥಿಸಿಕೊಳ್ಳಬಲ್ಲೆ. ಜೀವನದಲ್ಲಿ ಎಲ್ಲ ಮಜಲುಗಳನ್ನೂ ಕಂಡ ಆ ಹಿರಿಯ ಚೇತನಕ್ಕೆ ಮರು ಜನ್ಮವೀಯದಿರಲು ಆತನಲ್ಲಿ ಪ್ರಾರ್ಥಿಸುವೆ.

ವಿಭಾಗಗಳು
ಹಾಸ್ಯ

ಪೆದ್ದ ಗುಂಡ

ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ ಬಳಿಕ ಸಿಗುವ ಅಸ್ಥಿಯನ್ನು (ಬೂದಿ, ಮೂಳೆ) ನದಿಯಲ್ಲೋ ಅಥವಾ ಸಮುದ್ರದಲ್ಲೋ ಬಿಡುವರು. ನಂತರ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗದೇ ಅಲ್ಲೇ ಓಡಾಡುತ್ತಿದೆ ಎನ್ನುವ ನಂಬಿಕೆಯಿಂದ ಆ ಆತ್ಮವನ್ನು ಒಂದು ಕಲ್ಲಿಗೆ ಆವಾಹನೆ (ಆಹ್ವಾನೆ – ಕರೆಯುವುದು) ಮಾಡುವರು. ಆ ಕಲ್ಲನ್ನು ಒಂದು ಕಡೆ ಇಟ್ಟು ಅದೇ ಸ್ಥಳದಲ್ಲಿಯೇ ಐದನೆಯ ಅಥವಾ ಆರನೆಯ ದಿನದಿಂದ ಆ ಪ್ರೇತಾತ್ಮಕ್ಕೆ ಶಾಂತಿ ದೊರಕಿಸಲು, ಮತ್ತು ದೇವ ಸ್ಥಾನಕ್ಕೆ ಕಳುಹಿಸಲು ಪ್ರಾರ್ಥಿಸುವರು. ಅದನ್ನೇ ಅಪರ ಕರ್ಮ ಎನ್ನುವರು. ಹತ್ತನೆಯ ದಿನ ನೆಂಟರುಗಳೆಲ್ಲರೂ ಆ ಕಲ್ಲಿಗೆ ನೀರು ಹಾಕುವರು. ಇದನ್ನು ಧರ್ಮೋದಕ ಎನ್ನುವರು. ಈ ಕ್ರಿಯೆಯಿಂದ ತಮಗೂ ಆ ಪ್ರೇತಾತ್ಮಕ್ಕೂ ಸಂಬಂಧ ಕಳೆದುಕೊಳ್ಳುವರು. ಸಮಾಜದಲ್ಲಿ ಈ ಕಾರ್ಯ ನಡೆಯಲೇ ಬೇಕೆಂಬ ಮೂಢ ನಂಬಿಕೆ ಬಂದಿರುವ ಕಾರಣಕ್ಕೋ ಏನೋ ಈ ಕ್ರಿಯೆ ಮಾಡಿಸುವ ಪುರೋಹಿತರು (ಪುರದ ಹಿತ ಬಯಸುವವರು?) ಹೆಚ್ಚಾಗಿ ಹಣ ಸುಲಿಯುವವರು. ಇನ್ನು ಪೂರ್ವ ಪ್ರಯೋಗ ಎಂದರೆ ದೇವತಾ ಕಾರ್ಯ ಮತ್ತು ನಾಮಕರಣ, ಮುಂಜಿ, ಮದುವೆ ಇತ್ಯಾದಿಗಳು. ಇದನ್ನು ಮಾಡಿಸಲು ಬಹಳಷ್ಟು ಪುರೋಹಿತರು ಸಿಗುವರು.

ಅಪರ ಭಟ್ಟರ ಹತ್ತಿರ ನೀವು ಹೋಗುತ್ತಿದ್ದಂತೆಯೇ ಅವರು ನಿಮ್ಮನ್ನು ಅಳೆದು ಸುರಿದು ನಿಮ್ಮ ಮುಖ ನೋಡಿಯೇ ಯಾವ ಕೆಲಸಕ್ಕೆ ಬಂದಿದ್ದೀರಿ (ಅಪ್ಪನ ಕರ್ಮವೋ ಅಮ್ಮನ ಕರ್ಮವೋ ಇತ್ಯಾದಿ), ಎಷ್ಟು ದಿನಗಳ ಕೆಲಸ ಎಂದು ಹೇಳುವರು . ಹಾಗೇ ನಿಮ್ಮ ಜೇಬಿನಲ್ಲಿ ಎಷ್ಟು ಹಣವಿದೆ ಎಂದು ತಿಳಿಯುವ ಶಕ್ತಿ ಇವರಿಗಿದ್ದಿತು. ಇವರ ಕಮಾಯಿ ಬಹಳ ಸಮೃದ್ಧಿಯಾಗಿದ್ದಿತು. ಆದರೆ ಅದೇಕೋ ಇವರ ಮನೆಯಲ್ಲಿ ಏಳಿಗೆಯೇ ಇರಲಿಲ್ಲ. ಇದ್ದ ಒಬ್ಬನೇ ಮಗ ಮೊದ್ದು ಮೊದ್ದಾಗಿದ್ದ. ಅವನ ಹೆಸರು ಗುಂಡ. ಅವನಿಗೆ ಹದಿನಾರು ತುಂಬಲು ಎಲ್ಲರೂ ಅವನನ್ನು ಗುಂಡಾಭಟ್ಟ ಎಂದು ಕರೆಯುತ್ತಿದ್ದರು. ಅಷ್ಟು ಹೊತ್ತಿಗೆ ಅಪರ ಭಟ್ಟರಿಗೆ ವಯಸ್ಸಾಗಿ ಶ್ರಾದ್ಧದೂಟ ಜೀರ್ಣಿಸಿಕೊಳ್ಳಲೂ ಶಕ್ತಿ ಇರಲಿಲ್ಲ. ಅವರ ಕೆಲಸಗಳನ್ನೆಲ್ಲಾ ಶಿಷ್ಯ ಸುಬ್ಬಾಭಟ್ಟರಿಗೆ ವಹಿಸಿದ್ದರು. ಸುಬ್ಬಾಭಟ್ಟರು ಗುರುಗಳಿಗೆ ಆಗಾಗ ಕಾಣಿಕೆ ಸಲ್ಲಿಸುತ್ತಿದ್ದರೂ ತಮ್ಮ ವರಮಾನ

ಕಡಿಮೆ ಆಯಿತೆಂದು ಆಲೋಚಿಸಿ, ತಮ್ಮ ಮಗನನ್ನು ಈ ಕಾರ್ಯಕ್ಕೆ ತಳ್ಳಲು ನಿರ್ಧರಿಸಿದರು. (ತಂದೆ ಇರುವವರು ಅಪರ ಮತ್ತು ಶ್ರಾದ್ಧ ಕರ್ಮಗಳನ್ನು ಮಾಡಿಸಬಾರದು).

ಈಗ ವಿಷಯಕ್ಕೆ ಬರುತ್ತಾ ಒಂದು ಸಣ್ಣ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಮೊತ್ತ ಮೊದಲಾಗಿ ಅಪರ ಭಟ್ಟರು ಗುಂಡಾಭಟ್ಟನನ್ನು ಸುಬ್ಬಾಭಟ್ಟರೊಂದಿಗೆ ಒಂದು ಶ್ರಾದ್ಧಕ್ಕೆ ಅಪ್ರೆಂಟಿಸ್ ಆಗಿ ಕಳುಹಿಸಿದರು. ಗುಂಡಾ ಬಹಳ ಖುಷಿಯಿಂದಲೇ ಹೋದ. ಮಧ್ಯಾಹ್ನ ನಾಲ್ಕಕ್ಕೆ ಸರಿಯಾಗಿ ವಾಪಸ್ಸು ಬಂದ. ಅದೇಕೋ ಅವನ ಮುಖದಲ್ಲಿ ಕಳೆಯೇ ಇರಲಿಲ್ಲ. ಅಪರ ಭಟ್ಟರು ಮತ್ತು ಅವರ ಮಗನ ನಡುವೆ ನಡೆದ ಸಂವಾದ ಹೀಗಿದೆ.

ಯಾಕೋ? ಸುಬ್ಬ ಸರಿಯಾಗಿ ನಿನಗೆ ಸಂಭಾವನೆ ಕೊಡಿಸಲಿಲ್ವಾ?

ಮಾಮ ಸಂಭಾವನೆ ೫ ರೂಪಾಯಿ ಕೊಡಿಸಿದ್ರು. ಅದನ್ನು ನಿಂಗೆ ಕೊಡಲ್ಲ. ಇವತ್ತು ಅಣ್ಣಾವ್ರ ಪಿಚ್ಚರ್ ನೋಡ್ತೀನಿ.

ಆಂ! ಅಣ್ಣಾವ್ರ ಪಿಚ್ಚರ್ರಾ. ಕೂತ್ಕೊಂಡು ಸರಿಯಾಗಿ ಸಂಧ್ಯಾವಂದನೆ ಮಾಡೋಕ್ಕೆ ಬರೋಲ್ಲ. ಇನ್ನೂ ದುಡಿಯೋದು ಅಂದ್ರೇನೂ ಅನ್ನೋದೇ ಗೊತ್ತಿಲ್ಲ. ಪಿಚ್ಚರ್ರಂತೆ ಪಿಚ್ಚರ್. ಅದಿರ್ಲಿ ಮತ್ತೆ

ಏನಾಯ್ತು, ಯಾಕೆ ಉಟ ಮಾಡ್ಲಿಲ್ಲ? ಅಡುಗೆ ಚೆನ್ನಾಗಿರ್ಲಿಲ್ವಾ?

ಹಾಗೇನೂ ಇಲ್ಲ ಅಡುಗೆಯೇನೋ ಚೆನ್ನಾಗಿತ್ತು, ಅನ್ಸತ್ತೆ.

ಏನು ಅನ್ಸತ್ತೆ ಅಂದ್ರೆ, ಊಟ ಮಾಡಿದ್ಯೋ ಇಲ್ವೋ? ಯಾಕೋ ಪೆದ್ದ ಮುಂಡೇದೇ. ಮನೆಯಲ್ಲಿ ಮಾತ್ರ ಮೂರು ಸೇರು ಅನ್ನ ಕತ್ತರಿಸ್ತೀಯ. ಅಲ್ಲಿ ತಿನ್ನಕ್ಕೆ ನಿನಗೇನಾಗಿತ್ತು ರೋಗ.

ಬಾಯಲ್ಯಾಕೋ ರುಚಿಯೇ ಇರ್ಲಿಲ್ಲ.

ಹೋಗ್ಲಿ ಅದೇನಾಯ್ತೋ ಸರಿಯಾಗಿ ಹೇಳು.

ನಾನೂ ಮಾಮ ಜೊತೆ ಕೂತಿದ್ನಾ. ಆಗ ಮಾಮ ತರ್ಪಣ ಬಿಡಿಸ್ತಿದ್ರು. ಹೊಟ್ಟೆ ಬಹಳ ಹಸೀತಿತ್ತು. ಅಲ್ಲೇ ಬಾಗಿಲ ಹತ್ರ ಬಾಳೆ‍ಎಲೆ ಮೇಲೆ ಅದೇನೋ ಹಸುರಾಗಿರೋದು ಇಟ್ಟಿದ್ರು. ಹಳದಿ ಲಾಡು ನೋಡಿದ್ದೆ. ಆದ್ರೆ ಇದ್ಯಾವುದಿದು ಹಸುರು ಲಾಡು, ಅಂತ ಯಾರಿಗೂ ಕಾಣದೇ ಬಾಯಿಗೆ ಹಾಕಿಕೊಂಡೆ, ಅಷ್ಟೇ ವಾಂತಿ ಬಂದಿತ್ತು. ಆದರೂ ನಿನ್ನ ಮಗನಲ್ವಾ. ವಾಂತಿ ಮಾಡ್ಕೊಂಡ್ರೆ ಎಲ್ಲರೆದುರ್ಗೆ ಅವಮಾನ ಅಂತ ಹಾಗೇ ನುಂಗಿಬಿಟ್ಟೆ. ಯಾಕೋ ಬಾಯಲ್ಲಿ ರುಚಿಯೇ ಇರ್ಲಿಲ್ಲ.

ಈ ಪೆದ್ದ ಗುಂಡ ತಿಂದದ್ದು ಏನು ಗೊತ್ತೇ? …

ಸಗಣಿ ಉಂಡೆ.