ವಿಭಾಗಗಳು
ಕವನಗಳು

ಆತ್ಮ ಚಿರಾಯು

ಆತ್ಮ ಚಿರಾಯು
ಅದಕಿಲ್ಲ ಸಾವು ನೋವಿನ ಅಂಟು
ಆತ್ಮ ಅಪರಂಜಿ
ಲವಲೇಶ ಕಲುಷಿತವಲ್ಲದ ಚಿನ್ನ

ಕಬ್ಬಿಣಕ್ಕೆ ತಗುಲುವುದು ತುಕ್ಕು
ದೇಹಕೆ ಬರುವುದು ಸುಕ್ಕು
ಜಡ ವಸ್ತುಗಳೂ ಕುಗ್ಗುವುದು
ಹಿಗ್ಗು ಕುಗ್ಗು ಅಗೋಚರವಿದು

ಪಂಚಭೂತಗಳಿಗಿಲ್ಲ ರೂಪ
ಆದರೂ ತೋರಿಸುವುದು ಪ್ರತಾಪ
ಗಿಂಡಿ ಹೇಗಿದ್ದರೇನಂತೆ
ಉಳಿಯುವುದು ಆಕಾರದಂತೆ

ಪಂಚಭೂತಗಳಲ್ಲೂ ಆತ್ಮ
ತಿಳಿ ಅದರಲಿರುವುದೇ ಪರಮಾತ್ಮ
ಈ ಜೀವಾತ್ಮಕೆ ಹೊರತಾದುದೆಲ್ಲವೂ ಪರಮಾತ್ಮ
ಅದನು ಅರಿಯುವವನೇ ಮಹಾತ್ಮ

ವಿಭಾಗಗಳು
ಲೇಖನಗಳು

ಬೆಸ್ಟಾದ ಬೀಸ್ಟೀ ಬೆಸ್ಟ್

ಮುಂಬಯಿ ನಗರಿಗೆ ಬೇಕಿರುವ ಎರಡು ಅತ್ಯಾವಶ್ಯಕ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯ ಹೆಸರು ಬೆಸ್ಟ್, ಎಂದರೆ ಬಾಂಬೇ ಎಲೆಕ್ಟ್ರಿಕಲ್ ಸಪ್ಲೈ ಅಂಡ್ ಟ್ರಾನ್ಸ್‍ಪೋರ್ಟ್.   ಇದರಲ್ಲಿ ಎರಡು ವಿಭಾಗಗಳಿವೆ.  ಒಂದು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ನೋಡಿಕೊಂಡರೆ ಇನ್ನೊಂದು ನಗರ ಸಂಚಾರಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದು.  ಎರಡೂ ವ್ಯವಸ್ಥೆಗಳನ್ನು ಸುವ್ಯವಸ್ಥೆಯಾಗಿಟ್ಟಿರುವುದಕ್ಕೆ ಸರಿಯಾಗಿ ಆಂಗ್ಲದಲ್ಲಿ ಇದನ್ನು ಬೆಸ್ಟ್ ಎಂದು ಕರೆಯುವರೇನೋ ತಿಳಿಯದು.

ಈ ನಗರ ಸಂಚಾರದ ಬಸ್ಸುಗಳ ವಿಭಾಗದ ಬಗ್ಗೆ ನನ್ನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬಯಸುವೆ. 

ಒಟ್ಟು ೨೫ ಬಸ್ ಡಿಪೋಗಳಿರುವ ಈ ಸಂಸ್ಥೆಯು ೩೩೫ ರೂಟ್‍ಗಳಲ್ಲಿ ೩,೩೮೦ ಬಸ್ಸುಗಳನ್ನು ಓಡಿಸುತ್ತಿದೆ. 

ತಮಾಷೆಯಾದ ಒಂದು ವಿಷಯವೆಂದರೆ – ಇಲ್ಲಿ ಓಡುವ ರೂಟ್ ನಂ ೧೬೬ ನೇ ಬಸ್ಸು ಹೆಚ್ಚಿನ ಆಸ್ಪತ್ರೆಗಳನ್ನು ಹಾದು ಹೋದರೆ, ರೂಟ್ ನಂ ೧೬೧ ತೈಲಾಗಾರಗಳು ಮತ್ತು ಮುಂಬಯಿ ಜನನಿಬಿಡ ಪೂರ್ವಪ್ರದೇಶದಲ್ಲಿ ಹಾದು ಹೋಗುವುದು.  ಇದೇ ತರಹ ರೂಟ್ ನಂ ೯ ಹೆಚ್ಚಿನ ಶಾಲಾಕಾಲೇಜುಗಳನ್ನು ಹಾಯ್ದುಹೋದರೆ, ರೂಟ್ ನಂ ೧, ೬೬, ಮತ್ತು ೨೦೨ ದಿನದ ೨೪ ಘಂಟೆಗಳೂ ಸೇವಾನಿರತವಾಗಿರುವುದು. 

ಇಂತಹ ಬೆಸ್ಟ್ ಬಸ್ಸುಗಳಲ್ಲಿ ಬಹಳ ಮಹಡಿ ಬಸ್ಸುಗಳಿದ್ದವು (ಡಬಲ್ ಡೆಕರ್).  ಆದರೆ ಈಗ್ಯೆ ೫-೬ ತಿಂಗಳುಗಳಿಂದ ಡಬಲ್ ಡೆಕರ್‍ಗಳು ಮಾಯವಾಗುತ್ತಿವೆ.  ಅದರ ಬದಲಿಗೆ ಹೊಸ ಹೊಸ ಬಸ್ಸುಗಳು ಬಂದಿವೆ.  ಅಂಗವಿಕಲರೂ ಬಹಳ ಸುಲಭದಲ್ಲಿ ಹತ್ತುವಂತೆ ಕೆಳಮಟ್ಟದಲ್ಲಿವೆ.  ಇವುಗಳಲ್ಲಿ ಎಫ್‍ಎಮ್ ಚಾನೆಲ್ ಸಂಗೀತವನ್ನು ಹಾಕುವರು.  ಅದಲ್ಲದೇ ಬಸ್ಸಿನಿಂದಲೇ ದೂರವಾಣಿ ಕರೆಯನ್ನೂ ಮಾಡಬಹುದು.  ಈ ಬಸ್ಸುಗಳಿಗೆ ಇಂಜಿನ್ ಹಿಂಭಾಗದಲ್ಲಿರುವುದು.  ಗ್ಯಾಸ್ ಮೂಲಕ ಓಡಿಸುವ ಬಸ್ಸುಗಳೂ ಬಹಳ ಇವೆ. 

ಕೆಲವು ಬಸ್ಸುಗಳ ನಂಬರ್ ಕೆಂಪು ಬಣ್ಣದ್ದಿದ್ದರೆ ಇನ್ನು ಕೆಲವದ್ದು ಬಿಳಿ ಬಣ್ಣದ್ದಿರುವುದು.  ಬಿಳಿ ಬಣ್ಣದ ಸಂಖ್ಯೆ ಸಾಧಾರಣ ಬಸ್ಸುಗಳದ್ದಾದರೆ, ಕೆಂಪು ಬಣ್ಣಗಳದ್ದು, ವಿಶೇಷ, ನಿಯಮಿತ ಮತ್ತು ಪಾಯಿಂಟ್ ಟು ಪಾಯಿಂಟ್ ಓಡುವ ಬಸ್ಸುಗಳು.    ಕೆಲವು ರೂಟ್‍ಗಳಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನೂ ಓಡಿಸುವರು. 

ಬೇರೆಯ ಊರುಗಳಿಗೆ ಹೋಲಿಸಿದರೆ ಇಲ್ಲಿಯ ಬಸ್ಸುಗಳ ದರ ಬಹಳ ಹೆಚ್ಚಿರುವುದು.  ಅತಿ ಕಡಿಮೆ ದರ ರೂಪಾಯಿ ೪ ಆದರೆ, ದೂರಕ್ಕೆ ತಕ್ಕಂತೆ ೧೬ ರಿಂದ ಇಪ್ಪತ್ತು ರೂಪಾಯಿಗಳವರೆವಿಗೂ ದರವಿರುವುದು.  ಹವಾ ನಿಯಂತ್ರಿತ ಬಸ್ಸುಗಳಲ್ಲಿ ರೂಪಾಯಿ ೩೫ ರಿಂದ ೬೫-೭೦ ರೂಪಾಯಿಗಳವರೆವಿಗೆ ದರವಿರುವುದು. 

ಇತ್ತೀಚೆಗೆ ಬಿಂಡಿ ಬಜಾರಿನಲ್ಲಿ ಒಂದು ಬಸ್ಸು ಒಬ್ಬ ಮುದುಕಿಗೆ ಡಿಕ್ಕಿ ಹೊಡೆದು ಅವಳು ಸಾವನ್ನಪ್ಪಿದಳು.  ಕೆಲವು ದಿನಗಳ ಹಿಂದೆ ಕೊಲಾಬಾದ ಬದ್‍ವಾರ್ ಪಾರ್ಕಿನ ಬಳಿ ಬೆಳಗಿನ ಜಾವ ಹೋಗುತ್ತಿದ್ದ ಬಸ್ಸೊಂದು ಹಾದಿ ತಪ್ಪಿ ಫುಟ್‍ಪಾತ್ ಹತ್ತಿ ರಸ್ತೆಯಲ್ಲಿ ಮಲಗಿದ್ದ ೪ ಜನಗಳ ಕಾಲುಗಳ ಮೇಲೆ ಹಾದು ಹೋಗಿತ್ತು.  ಈ ಸುದ್ದಿಯನ್ನು ಕೇಳಿದ ಕೂಡಲೇ ನನಗೆ ನೆನಪಾದದ್ದು ಶಂಕರನಾಗ್ ಅವರ ಆಕ್ಸಿಡೆಂಟ್ ಚಿತ್ರ. 

ಬಿಟಿಎಸ್‍ಗೂ ಮತ್ತು ಬೆಸ್ಟ್‍ಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆ

ವಿಭಾಗಗಳು
ಕವನಗಳು

ಕನ್ನಡಮ್ಮ

ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ
ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ

೫೦ ವಸಂತಗಳ ಕಳೆಯುತಿಹ ತಾಯಿ
ಇವಳ ಬಹು ಮಕ್ಕಳದು ಬರಿಯ ಬಡಾಯಿ
ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು
ಬಹು ಮಕ್ಕಳು ಸೇರಿಹರು ಬೆಚ್ಚನೆ ಗೂಡು

ಇವಳ ಸೆರಗಂಚೆಲ್ಲಾ ಹರಿದು ಹಂಚಿದೆ
ನೋಡಿದಲ್ಲೆಲ್ಲಾ ತೇಪೆ ಹಚ್ಚಿದೆ
ಪರರ ಮಕ್ಕಳು ಊಳಿದಿಹ ಸೀರೆ ಹರಿಯುತಿಹರು
ಬಹು ಮಕ್ಕಳೆಲ್ಲಾ ಸುಮ್ಮನೆ ನೋಡುತಿಹರು

ಪರರ ಮಕ್ಕಳದೇ ಎಲ್ಲಾ ಕಾರುಬಾರು
ಬಹು ಮಕ್ಕಳೆಲ್ಲಾ ಇವರ ದಾಸರು
ಕೆಲ ಮಕ್ಕಳಷ್ಟೇ ತಾಯ ಮಾನ ಕಾಪಾಡಹತ್ತಿಹರು
ಆಗಲಿ ಇವರ ಕೈ ಬಲ ಪಡಿಸುವುದಕ್ಕೆ ನಮ್ಮ ಕರಾರು

ಇಂದಿನ ಕನ್ನಡದ ಸ್ಥಿತಿ ನೋಡಿಯೂ ನೋಡದಂತಿರುವವರೇ ಬಹು ಮಕ್ಕಳು
ಅವಳ ಕಷ್ಟವರಿತು ಕಾಪಾಡಲು ಮುಂದೆ ಬಂದಿರುವವರೇ ಕೆಲ ಮಕ್ಕಳು