ವಿಭಾಗಗಳು
ಲೇಖನಗಳು

ಮುಂಬಯಿ


ಮುಂಬಯಿ ನಮ್ಮ ದೇಶದ ವಾಣಿಜ್ಯ ರಾಜಧಾನಿ. ಇದು ಮೊದಲು ಪ್ರತ್ಯೇಕ ಸಂಸ್ಥಾನವಾಗಿತ್ತು. ಆಗ ಗುಜರಾತಿನ ಕೆಲವು ಪ್ರದೇಶಗಳೂ ಇದರೊಡನೆ ಸೇರಿತ್ತು. ಆಗಿನ ಪ್ರಸಿದ್ಧ ಮುಖ್ಯಮಂತ್ರಿಗಳಾಗಿದ್ದವರಲ್ಲಿ ದಿವಂಗತ ಮೊರಾರ್ಜಿ ದೇಸಾಯಿಯವರೊಬ್ಬರು. ಮುಂಬಯಿಯ ಮತ್ತು ಕನ್ನಡಿಗರ ನಂಟು ತುಂಬಾ ಹಳೆಯದ್ದು. ಮುಂಬಯಿಗೆ ಮೊದಲು ಎಲ್ಲರೂ ಬಾಂಬೇ ಎಂದೇ ಕರೆಯುತ್ತಿದ್ದರು. ಆದರೆ ಕನ್ನಡದವರು ಮಾತ್ರವೇ ಮುಂಬಯಿ ಎಂದು ಕರೆಯುತ್ತಿದ್ದರು. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ಕೆಲಸ ಪ್ರಾರಂಭಿಸಿದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಮುಂಬಯಿನ ಜನಸಂಖ್ಯೆ ೧.೨೦ ಕೋಟಿ ಮತ್ತು ಅದರಲ್ಲಿ ಕನ್ನಡಿಗರ ಪಾಲು ಶೇಕಡ ೧೦ ಅಂದ್ರೆ ೧೨ ಲಕ್ಷ. ಆದರೂ ಹೊರಗಡೆ ಕನ್ನಡ ಮಾತನಾಡೋದು ಕಡಿಮೆ. ಇದಕ್ಕೆ ಕಾರಣ ಈ ಮುಂದೆ ಹೇಳುತ್ತಿದ್ದೀನಿ.

gateway.jpg
ಕರ್ನಾಟಕದಲ್ಲಿ ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗುವುದು – ಉಡುಪಿಯ ಅಷ್ಟ ಮಠಗಳು, ಶ್ರೀ ಕೃಷ್ಣ ದೇವಸ್ಥಾನ. ಆದರೆ ಮುಂಬಯಿಯಲ್ಲಿ ಉಡುಪಿ ಅಂದ್ರೆ ಜನಗಳಿಗೆ ಮೊದಲು ನೆನಪಾಗುವುದು ಮಸಾಲೆ ದೋಸೆ, ನಂತರ ರಾಮಾನಾಯಕರ ಉಡುಪಿ ಶ್ರೀ ಕೃಷ್ಣ ಭವನವಾದ ಊಟದ ಹೊಟೇಲು. ಇಲ್ಲಿಯ ಹೆಚ್ಚಿನ ಹೊಟೇಲುಗಳಲ್ಲಿ ನೀವು ಕಾಣಬರುವ ದೃಶ್ಯ ಅಂದ್ರೆ –
ಹೊಟೇಲಿನ ಮುಂಭಾಗದಲ್ಲಿ ಮೋಸಂಬಿ ಹಣ್ಣುಗಳ ತಳಿರು ತೋರಣ – ಬಲಭಾಗದಲ್ಲಿ ಗಲ್ಲದ ಮೇಲೆ ಕುಳಿತಿರೋ ಯಜಮಾನ – ಕೈಯಲ್ಲಿ ಉದಯವಾಣಿ ಅಥವಾ ಕರ್ನಾಟಕ ಮಲ್ಲ ವೃತ್ತಪತ್ರಿಕೆ – ಹಿಂದೆ ಯಜಮಾನರ ಊರಿನ ದೇವರ ಫೋಟೋ – ಅದರ ಮುಂದೆ ಸದಾ ಬೆಳಗುತ್ತಿರುವ ದೀಪ ಮತ್ತು ಎರಡು ಊದಿನಕಡ್ಡಿಗಳು. ಹೆಚ್ಚಿನವೆಲ್ಲಾ ಶಾಕಾಹಾರಿ ಉಪಹಾರಗೃಹಗಳು. ಮಾಂಸಾಹಾರಿ ಮತ್ತು ಡ್ಯಾನ್ಸ್ ಬಾರ್ ಗಳಿಗೇನೂ ಕಡಿಮೆ ಇಲ್ಲ – ಅಲ್ಲೂ ಇದೇ ತರಹದ ದೃಶ್ಯ. ಹೆಚ್ಚಿನ ಜನಗಳು ಇಲ್ಲಿಗೆ ಬರೋದು – ಇಡ್ಲಿ, ದೋಸೆ ಅಥವಾ ಉದ್ದಿನ ವಡೆ ತಿನ್ನಲು. ಇನ್ನೊಂದು ವಿಶೇಷತೆ ಏನಂದ್ರೆ – ನಮ್ಮ ಬೆಂಗಳೂರಿನಲ್ಲಿ ಕೊಡುವ ಹಾಗೆ ೧ ಪ್ಲೇಟ್ ಇಡ್ಲಿ ಅಂದ್ರೆ – ೨ ಇಡ್ಲಿ ಕೊಡೋದಿಲ್ಲ, ಕೊಡೋದು ಒಂದೇ. ಇಡ್ಲಿ ಜೊತೆ ವಡೆ ಇಲ್ಲ. ಕೇಳಿದ್ರೆ ಎರಡನ್ನೂ ಬೇರೆ ಬೇರೆ ತಾಟುಗಳಲ್ಲಿ ನೀಡುತ್ತಾರೆ. ಚೌಚೌ ಬಾತ್ ಅಂತೂ ಗೊತ್ತೇ ಇಲ್ಲ. ಅದೇ ಉಪ್ಮ ಅಂದ್ರೆ ಉಪ್ಪಿಟ್ಟು ಮತ್ತು ಶಿರಾ ಅಂದ್ರೆ ಸಜ್ಜಿಗೆ. ಕೇಸರಿಬಾತ್ ಮಾಡೋಲ್ಲ. ಇಲ್ಲಿ ದರ್ಶಿನಿಗಳಂಥ ಹೊಟೆಲ್ ಗಳಿಲ್ಲ. ಯಾರಾದ್ರೂ ಬಂದು ದರ್ಶಿನಿ ಶುರು ಮಾಡಿದ್ರೆ – ಬಹಳ ಬೇಗ ಶ್ರೀಮಂತರಾಗಬಹುದು. ಹಾಗೆ ಮಾಡೋದು ಕಷ್ಟ ಕೂಡಾ. ಈ ಹೊಟೆಲ್ ನವರು ರಕ್ಷಣೆಗಾಗಿ ( ಪೊಲೀಸರಿಂದ ಮತ್ತು ರೌಡಿಗಳಿಂದ ) ನಿಯಮಿತವಾಗಿ ಹಣ ನೀಡಬೇಕು. ಇದನ್ನು ಹಫ್ತಾ ಎನ್ನುತ್ತಾರೆ. ಹಿಂದಿಯಲ್ಲಿ ಹಫ್ತಾ ಅಂದ್ರೆ ವಾರ ಅಂತ. ಹಾಗೇ ಇದನ್ನು ವಾರಕ್ಕೊಮ್ಮೆ ಕೊಡಬೇಕು. ಇದೂ ಒಂದು ದೊಡ್ಡ ದಂಧೆಯೇ.

ಮುಂಬಯಿಯ ಚರಿತ್ರೆ ೧೬ನೇ ಶತಮಾನಕ್ಕೂ ಹಿಂದಿನದು. ೧೫೦೮ರಲ್ಲಿ ಫ್ರಾನ್ಸಿಸ್ ಆಲ್ಮೈಡ ಅನ್ನುವ ನಾವಿಕ ಈ ದ್ವೀಪಕ್ಕೆ ಬಂದದ್ದು. ಆಗ ಈ ಜಾಗಕ್ಕೆ ಬಾಮ್ ಬಹಿಯಾ (ಒಳ್ಳೆಯ ಬೇ ಅಥವಾ ಕೊಲ್ಲಿ) ಅಂದನಂತೆ. ಇಲ್ಲಿಯ ಮೂಲವಾಸಿಗಳಾದ ಬೆಸ್ತರರನ್ನು (ಮೀನುಗಾರರು) ಕೋಳಿಗಳು ಎಂದು ಕರೆಯುವರು. ಅವರುಗಳ ದೈವ ಮುಂಬಾದೇವಿ. ಮುಂದೆ ಇದೇ ಇಂಗ್ಲೀಷರ ಬಾಂಬೇ ಮತ್ತೆ ಮಹಾರಾಷ್ಟ್ರೀಯರ ಮುಂಬಾ ಆಯಿ (ಮುಂಬಾ ತಾಯಿ) – ಮುಂಬಯಿ ಆಯಿತು.

ಸಾಮಾನ್ಯವಾಗಿ ಜನಗಳಿಗೆ ಮುಂಬಯಿ ಅಂದರೆ ಅದೊಂದು ಕನಸಿನ ಲೋಕ
ಚಿತ್ರನಗರಿ, ಐಷಾರಾಮಿ ಜೀವನದ ಆಗರ ಎಂಬುವ ಕಲ್ಪನೆ ಬರುವುದು ಸಹಜ. ಇಲ್ಲಿ ಜಿವನ ನಡೆಸುವುದು (ಹೊಟ್ಟೆ ಹೊರೆಯುವುದು) ಬಹು ಸುಲಭ. ಆದರೆ ವಸತಿ ಮಾತ್ರ ಸ್ವಲ್ಪ ಕಷ್ಟ ಮತ್ತು ದುಬಾರಿ.
ಎಲ್ಲ ಊರುಗಳಂತೆಯೇ ಇಲ್ಲೂ ಕೊಳೆಗೇರಿ, ಹೊಲಗೇರಿಗಳಿವೆ.
ನಮ್ಮ ಬೆಂಗಳೂರನ್ನು ಇತರರಿಗೆ ಚಿತ್ರಗಳಲ್ಲಿ ತೋರಿಸುವಾಗ ಹೇಗೆ ಬರೀ ಲಾಲ್ ಬಾಗ್ ಕಬ್ಬನ್ ಪಾರ್ಕ್ ತೊರಿಸುತ್ತೇವೆಯೋ ಹಾಗೆಯೇ ಇಲ್ಲಿಯೂ ಚಿತ್ರಗಳಲ್ಲಿ ನಾರಿಮನ್ ಪಾಯಿಂಟ್, ಸುಂದರ ಜುಹು ಬೀಚ್ ಗಳನ್ನು ತೋರಿಸುತ್ತಾರೆ. ಇಲ್ಲಿಯ ಧಾರಾವಿ ಕೊಳೆಗೇರಿ ವಿಶ್ವದಲ್ಲೇ ಅತಿ ದೊಡ್ಡದಂತೆ. ಒಂದು ಮುಖ್ಯ ಅಂಶವೆಂದರೆ ಈ ಧಾರಾವಿಯಲ್ಲಿರುವವರಲ್ಲಿ ತಮಿಳರೇ ಹೆಚ್ಚು. ಈ ಹಿಂದೆ ಇವರುಗಳ ಧುರೀಣ ವರದರಾಜ ಮುದಲಿಯಾರ್ ಅಂತ ಒಬ್ಬ ಖಳನಾಯಕ ಇದ್ದ. ಇಲ್ಲಿಯ ಕೊಳೆಗೇರಿಗಳ ಜನಗಳು ತಮ್ಮ ನಿತ್ಯಕರ್ಮಗಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿ ಮುಗಿಸಿಕೊಳ್ಳುವುದು ಎಲ್ಲರೂ ನೋಡಬಹುದು. ಅದಕ್ಕೇ ಇರಬೇಕು ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ತಕ್ಷಣದ ಸಾವು ಬೇಕೆನ್ನುವವರು ಕಷ್ಟಪಡಲೇ ಬೇಕಿಲ್ಲ. ಮೂರು ನಿಮಿಷಗಳಿಗೊಮ್ಮೆ ಯಮದೂತರಂತೆ ಸದ್ದಿಲ್ಲದೇ ಬರುವ ಲೋಕಲ್ ಟ್ರೈನ್ ಗಳಿಗೆ ತಲೆ ಮೈ ಒಡ್ಡುವುದು ತುಂಬಾ ಸುಲಭ. ಈಗಿದ್ದವನು ಇನ್ನೊಂದು ಕ್ಷಣದಲ್ಲಿ ಇಲ್ಲವಾಗುವನು. ರೇಲ್ವೇ ಹಳಿಗಳ ಪಕ್ಕದಲ್ಲೇ ವಾಸ ಇರುವ ಗುಡಿಸಲುವಾಸಿಗಳಲ್ಲಿ ಕುಡಿತ ಸರ್ವೇಸಾಮಾನ್ಯ. ಎಷ್ಟೋ ಬಾರಿ ಕುಡಿತ ಅಮಲಿನಲ್ಲಿ ಬಹಿರ್ದೆಶೆಗೆ ಹೋಗುವ ವೇಳೆಗಳಲ್ಲಿ ಟ್ರೈನಿಗೆ ಆಹುತಿಯಾಗುವುದುಂಟು. ಕೆಲವು ವೇಳೆ ಬೆಳಗ್ಗೆ ಬೇಗನೆ ಲೋಕಲ್ ನಲ್ಲಿ ಪ್ರಯಾಣಮಾಡುವಾಗ ತುಂಡರಿಸಿದ ಕೈ ಅಥವಾ ಕಾಲುಗಳನ್ನು ನೋಡುವುದೂ ಉಂಟು. ಇಲ್ಲಿ ಮನುಷ್ಯನಿಗೆ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ.

local3.JPG

ಈ ಹಳಿಯ ಪಕ್ಕದಲ್ಲಿ ವಾಸಿಸುವ ಜನಗಳ ಮೌಢ್ಯತನದ ಬಗ್ಗೆ ಒಂದು ಕಿರುಪರಿಚಯ. ಇವರು ಕಡು ಬಡವರು. ಓದಿಲ್ಲ, ಬರಹವಿಲ್ಲ. ಕಷ್ಟಪಟ್ಟು ಅಂದು ದುಡಿದದ್ದು ಅಂದಿಗೇ ಖಾಲಿ ಮಾಡುವವರು. ತಿಂದು ಕುಡಿದು ಮೋಜು ಮಾಡುವವರು. ಇಂತಹವರಲ್ಲಿ ಒಬ್ಬನಿಗೆ ಮಧುವೇಹ ರೋಗ ಉಲ್ಬಣಿಸಿ, ಕಾಲಿನಲ್ಲಿ ಗ್ಯಾಂಗ್ರೀನ್ ಆಗಿ ಕೊಳೆಯಲಾರಂಭಿಸಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದರು. ಇವನಿಗೆ ಶಸ್ತ್ರಚಿಕಿತ್ಸೆ ಅಂದರೆ ಕಾಲು ಕತ್ತರಿಸುವರು ಅನ್ನೋದು ಗೊತ್ತಿತ್ತು. ಅದಕ್ಕೆ ಹಣ ಬಹಳವಾಗಿ ಖರ್ಚಾಗುವುದೆಂದು ಎಣಿಸಿ, ಒಂದು ಲೋಕಲ್ ಟ್ರೈನ್ ಬರುತ್ತಿರುವಾಗ ಕಾಲು ಕೊಟ್ಟು ಯಾಕೆ ತಾನೇ ಖರ್ಚಿಲ್ಲದೇ ಕಾಲು ಕತ್ತರಿಸಿಕೊಳ್ಳಬಾರದು ಅಂದುಕೊಂಡು ಹಾಗೇ ಮಾಡಲು ಹೋದನು. ಅಷ್ಟು ಸುಲಭದಲ್ಲಿ ರೋಗಮುಕ್ತನಾಗುವಂತಿದ್ದರೆ ಇನ್ಯಾಕೆ ಹೇಳಿ. ಹೇಗೋ ಗಟ್ಟಿ ಮನಸ್ಸು ಮಾಡಿ ರಭಸದಿಂದ ಬರುವ ಟ್ರೈನಿಗೆ ಕಾಲು ಕೊಟ್ಟ. ಟ್ರೈನ್ ಹತ್ತಿರ ಬರುವಾಗಲೇ ಇವನಿಗೆ ಬವಳಿ ಬರುವ ಹಾಗಿತ್ತು. ಇನ್ನು ಕಾಲು ತುಂಡರಿಸಿದ ಶಾಕ್ ಗೆ ಪ್ರಜ್ಞೆ ತಪ್ಪಿ ಬಿದ್ದ. ಬಳಿಕ ವಿಪರೀತ ರಕ್ತಸ್ರಾವದಿಂದಾಗಿ ಅಲ್ಲೇ ಇಹಲೋಕ ತ್ಯಜಿಸಿದ. ಹೀಗೆ ಆಕಸ್ಮಿಕಕ್ಕೆ ತುತ್ತಾದವರು ಬದುಕುವುದು ಕಷ್ಟ. ಅದೂ ಅಲ್ಲದೇ ಹಳಿಯ ತುಕ್ಕಿನ ಅಂಶ ಕೂಡಾ ಮೈ ಸೇರಿರುವುದು ಬದುಕಲು ಬಿಡುವುದೇ?
ಇಲ್ಲಿಯ ಸಂಚಾರ ವ್ಯವಸ್ಥೆಯ ಬಗ್ಗೆ ಹೇಳಬೇಕೆಂದ್ರೆ – ಊರು ಉದ್ದುದ್ದ ಇರುವುದರಿಂದ ರೈಲ್ವೇ ಸಂಚಾರ ವ್ಯವಸ್ಥೆ ಈ ಊರಿಗೆ ನರಗಳಂತಿವೆ. ಬಸ್ಸು ಕಾರು ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವಾಗ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಬಹಳ ಹೆಚ್ಚು. ಹಾಗಾಗಿ ಜನಗಳು ದುಬಾರಿಯಲ್ಲದ ಲೋಕಲ್ ಟ್ರೈನನ್ನೇ ನಂಬುವುದು ಜಾಸ್ತಿ.

ಇನ್ನು ಇಲ್ಲಿಯ ಆಕರ್ಷಣೆ ಏನು? ಇಲ್ಲಿಗೆ ದೇಶದ ಎಲ್ಲೆಡೆಯಿಂದಲೂ ಜನಗಳು ಬರಲು ಕಾರಣವೇನು ಎಂಬುದನ್ನು ತಿಳಿಯೋಣ. ಜೀವನ ಮಾಡುವುದು ಇಲ್ಲಿ ಬಲು ಸುಳಭ. ಇಲ್ಲಿ ವಸತಿ ಹಿಡಿಯುವುದೊಂದೇ ಬಹಳ ಕಷ್ಟ. ಊಟ ತಿಂಡಿಗಳಿಗೇನೂ ತೊಂದರೆ ಇಲ್ಲ. ಕೆಲಸ ಸಿಗಲು ತೊಂದರೆಯೇ ಇಲ್ಲ. ಏನೇ ಮಾಡಿದರು ಹಣ ಗಳಿಸಬಹುದು.

ಅದೇಕೆ ಹೀಗೆ? ಮುಂಬೈ ಒಂದು ದ್ವೀಪ. ಮೊದಲಿಗೆ ಇಲ್ಲಿ ಒಟ್ಟು ಏಳು ನೆಲಗಡ್ಡೆಗಳಿದ್ದವು. ಚರಿತ್ರೆಯ ಪ್ರಕಾರ ೧೬೬೧ರಲ್ಲಿ ಅವುಗಳನ್ನು ಆಂಗ್ಲ ದೊರೆ ಚಾರ್ಲ್ಸ್ ೨ ಗೆ ಮದುವೆಯಲ್ಲಿ ವರದಕ್ಷಿಣೆಯಾಗಿ ಲಭಿಸಿತ್ತಂತೆ. ನಂತರ ನಡುಗಡ್ಡೆಯ ಮಧ್ಯದಲ್ಲಿದ್ದ ಸಮುದ್ರದ ಹಿನ್ನೀರನ್ನು ಮುಚ್ಚಿ ಅಲ್ಲಿ ಊರಿನ ನಿರ್ಮಾಣಾ ಆಯಿತು. ದಕ್ಷಿಣದಲ್ಲಿರುವ ಕೊಲಾಬಾದಿಂದ ಮಾಹಿಮ್ ವರೆಗೆ ಏಕ ಪ್ರಕಾರವಾಗಿ ನೆಲ. ಅಲ್ಲಿಂದ ಮುಂದೆ ಮಾಹಿಮ್ ಮತ್ತು ಬಾಂದ್ರಾ ನಡುವೆ ಸಮುದ್ರದ ಹಿನ್ನೀರನ್ನು ದಾಟಿ ಮುಂದೆ ಹೋಗಲು ಸೇತುವೆ ಕಟ್ಟಿಹರು. ಅದಕ್ಕಾಗಿ ಮುಂಬಯಿಯನ್ನು ಎರಡು ಭಾಗಗಳಾಗಿ ವಿಂಗಡಿಸಿಹರು. ಮುಂಬಯಿ ಮತ್ತು ಹಿರಿದಾದ ಮುಂಬಯಿ ಅಂತ. ಹೀಗೆ ಹಳೆಯ ಮುಂಬಯಿಯಲ್ಲಿ ಜಾಗದ ಕೊರತೆ ಇರುವುದರಿಂದ ಮನೆಗಳು ಇಲ್ಲಿಯ ಜನಗಳಿಗೆ ಸಾಕಾಗುವುದಿಲ್ಲ. ಇಲ್ಲಿರುವೆಲ್ಲಾ ಬಹು ಮಹಡಿ ಕಟ್ಟಾಡಗಳು. ಕಡಿಮೆ ಎಂದರೆ ಆರು ಮಹಡಿಗಳಿರುವ ಕಟ್ಟಡಗಳು. ಒಂದು ಕಟ್ಟದವಂತೂ ೪೫ ಮಹಡಿಗಳನ್ನು ಹೊಂದಿದೆ. ಅದರ ಹೆಸರು ಶ್ರೀಪತಿ ಆರ್ಕೇಡ್ ಅಂತ. ಅದರ ಎತ್ತರ ೧೫೩ ಮೀಟರ್ ಗಳು. ಅದರ ವಿಶೇಷತೆ ಏನೆಂದರೆ ಅದರಲ್ಲಿ ವಾಸಿಸುವರೆಲ್ಲರೂ ಸಸ್ಯಾಹಾರಿಗಳು ಮತ್ತು ಗುಜರಾತಿಗಳು. ಯಾರಾದರೂ

mumbaiatnight.jpg
ಫ್ಲಾಟ್ ಮಾರ್‍ಆಟ ಮಾಡಿದರೆ ಸೊಸೈಟಿಯವರ ಒಪ್ಪಿಗೆ ತೆಗೆದುಕೋಬೇಕು. ಆಗ ಮಾಂಸಾಹಾರಿಗಳಿಗೆ ಮಾರಲು ನಿರ್ಬಂಧನ ಹೇರುತ್ತಾರೆ.

ಹೀಗೆ ಮುಂಬಯಿಯಲ್ಲಿ ವಸತಿಗೆ ಜಾಗ ಕಡಿಮೆ ಆಗಿ, ಹಣ ಗಳಿಸಲು ಸುಲಭ ಸಾಧನಗಳಿರುವುದರಿಂದ ಜನಗಳ ಒಳ ಹರಿವು ಹೆಚ್ಚಾಗಿದ್ದು, ವಸತಿಯ ಸಮಸ್ಯೆ ಬಹಳವಾಗಿದೆ. ಇದನ್ನು ಜಾಸ್ತಿಯಾಗಿ ಕಾಡುವುದು ಮಧ್ಯಮ ವರ್ಗದವರನ್ನೇ. ಹನವಂತರು ಎಷ್ಟೇ ದುಬಾರಿಯಾದರೂ ಫ್ಲಾಟ್ ಕೊಂಡು ಕೊಳ್ಳುವರು. ಮತ್ತು ನಿರ್ಗತಿಕರು ರಸ್ತೆಯ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವಿಸುವರು. ಮಧ್ಯಮ ವರ್ಗದವರು ಆರಕ್ಕೆ ಏರೊಕ್ಕೆ ಆಗೋದಿಲ್ಲ ಮೂರಕ್ಕೆ ಇಳಿಯೋಕ್ಕಾಗೋದಿಲ್ಲ. ಬಲವಂತವಾಗಿ ಮುಂಬಯಿ ನಗರಿಯಿಂದ ದೂರವಿರುವ ಡೊಂಭಿವಿಲಿ, ಕಲ್ಯಾಣ, ವಿರಾರ್ ಮತ್ತಿತರೇ ಜಾಗದಲ್ಲಿ ವಾಸಿಸಬೇಕಾಗುವುದು. ಇನ್ನು ಸರಕಾರಿ ಅಥವಾ ಬ್ಯಾಂಕಿನಲ್ಲಿ ಕೆಲಸ ಮಾಡುವವರ ವಸತಿ ಗೃಹಗಳು ನಗರದ ತುದಿಯ ಗೋರೆಗಾಂವ್, ಮಲಾಡ್, ಬೊರಿವಿಲಿ, ಮುಲುಂದ, ಇತ್ತೀಚೆಗೆ ಆಗಿರುವ ಹೊಸ ಮುಂಬಯಿಯ ಬೇಲಾಪುರ, ವಾಶಿ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿಯ ಇನ್ನೊಂದು ವೈಶಿಷ್ಟ್ಯ ವೇನೆಂದರೆ ಜೀವನ ಯಾಂತ್ರಿಕ. ೧೦೦೦ ಜನಗಳನ್ನು ಹೊತ್ತೊಯ್ಯುವ ಲೋಕಲ್ ಟ್ರೈನ್ ನಲ್ಲಿ ೪೦೦೦ ರಿಂದ ೫೦೦೦ ಜನಗಳು ಪ್ರಯಾಣಿಸುತ್ತಾರೆ. ಇಲ್ಲಿಯ ಜನಸಂಖ್ಯೆಗೆ ೩ ನಿಮಿಷಗಳಿಗೆ ಒಂದು ಗಾಡಿಯಂತೆ ಇದ್ದರೂ ಇಷ್ಟು ಜನಸಂದಣಿ ಇದ್ದೇ ಇರುತ್ತದೆ. ಜನಸಂದಣಿ ಹೇಗೆ ಕಾಣುವುದು ಅಂದ್ರೆ ಚರ್ಚ್ ಗೇಟ್ ಅಥವಾ ವಿ.ಟಿ. (ವಿಕ್ಟೋರಿಯಾ ಟರ್ಮಿನಸ್ – ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಸ್ಟೇಷನ್ ಗಳನ್ನು ಮೇಲುಗಡೆಯಿಂದ ನೋಡಿದರೆ ನೆಲವೇ ಕಾಣುವುದಿಲ್ಲ. ಯಾವಾಗಲೂ ತಲೆಗಳೇ ಕಾಣುವುದು. ಕಪ್ಪು ತಲೆ, ಬಿಳಿ ತಲೆ, ಬೋಳು ತಲೆ, ಕೆಂಪು ತಲೆ ಇತ್ಯಾದಿ.

ಬೆಳಗ್ಗೆ ಎದ್ದು ಕೆಲಸಕ್ಕೆಂದು ಹೊರಟರೆ, ಎಲ್ಲಿಗೇ ಹೋದರೂ, ಅತಿ ಕಡಿಮೆ ಎಂದರೂ ಒಂದು ಘಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಹಾಗೇ ಸಂಜೆ ಒಂದು ಘಂಟೆಯ ಪ್ರಯಾಣ. ಮಧ್ಯೆ ತಮ್ಮ ತಮ್ಮ ಉದ್ಯಮದಲ್ಲಿ ವೃತ್ತಿ. ಸಂಜೆ ಮನೆಗೆ ಬಂದು ಸೇರುವುದರೊಳಗೆ ಏನೂ ಯೋಚಿಸಲಾಗದಷ್ಟು ಸೋತಿರುತ್ತಾರೆ. ಮತ್ತೆ ಮರುದಿನ ಇದೇ ತರಹದ ದಿನಚರಿ. ಹಾಗಾಗಿ ಇಲ್ಲಿ ವರ್ಷಗಳು ದಿನಗಳಾಗಿಯೂ ದಿನಗಳು ಕ್ಷಣಗಳಾಗಿಯೂ ಸರಿದು ಹೋಗುವುದು. ಒಬ್ಬ ವ್ಯಕ್ತಿಯನ್ನು ಕಾಣಬೇಕೆಂದರೆ ಅವನ ದಿನಚರಿಯ ನಿಯಮಿತ ವೇಳೆಯಲ್ಲಿ ಅದೇ ಸ್ಥಾನದಲ್ಲಿ ಕಾಣಬಹುದು. ದುಬಾರಿ ಜೀವನ ಪ್ರವೃತ್ತಿಯಿಂದಾಗೆ ಪತಿ ಪತ್ನಿ ಇಬ್ಬರೂ ದುಡಿಯ ಬೇಕಾದ ಪರಸ್ಥಿತಿ ಆವಶ್ಯಕ. ಇಲ್ಲಿ ಇವರ ಮುಖ್ಯ ಧ್ಯೇಯ ಒಂದು ಫ್ಲಾಟ್ ಮಾಡಿಕೊಳ್ಳುವುದು. ನಂತರ ಸಂಸಾರ ಮಾಡಿಕೊಳ್ಳುವುದು. ಇವರ ದುಡ್ಡು ಮಾಡುವ ಪರಿಯಿಂದಾಗಿ ಸಮಾಜಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುವುದೇ ಹೆಚ್ಚು. ಅದು ಹೇಗೆ ಎಂಬುದನ್ನು ಇಲ್ಲಿ ನೋಡಿ. ಇಬ್ಬರೂ ದುಡಿಯುವ ಕಡೆ ಗಮನ ಕೊಟ್ಟು ಬೆಳಗ್ಗೆ ಬೇಗ ಮನೆ ಬಿಡುವುದು ಮತ್ತು ಸಂಜೆ ಬರುವುದು ನಿಧಾನವಾಗಿ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುವುದು ಕಡಿಮೆ. ಮಕ್ಕಳಿಗೆ ತಂದೆ ತಾಯಿಗಳ ಅತ್ಯಾವಶ್ಯಕ ಪ್ರೀತೆ ಪ್ರೇಮ ಮಮತೆ ಸಿಗುವುದು ದುಸ್ಸರ. ಕೈಗೆ ದುಡ್ಡು ಸಿಗುವುದು ಸುಲಭ. ತಂದೆ ತಾಯಿಗಳು ಹೇಳುವುದೂ ಏನೆಂದರೆ ನಿನಗೆ ಎಷ್ಟು ದುಡ್ಡು ಬೇಕು ಕೇಳು ಆದರೆ ನಮ್ಮನ್ನು ಮನೆಯಲ್ಲೇ ಇರು ಎಮ್ದು ಹೇಳಬಾಡ. ಹೀಗಾಗಿ ಮಕ್ಕಳು ಜಾಸ್ತಿ ಸಮಯ ಮನೆಯಿಂದಾಚೆಗೇ ಉಳಿಯುವರು. ಊರಿನಲ್ಲಿ ವಸತಿಯ ಸಮಸ್ಯೆಯಿಂದಾಗಿ ಒಳಗೆ ನಡೆಯಬೇಕಾದ ಲಲ್ಲೆ ಮುದ್ದುಗಳೆಲ್ಲಾ ಬೀದಿಯಲ್ಲೇ ಆಗಿ ಈ ಮಕ್ಕಳೆಲ್ಲರಿಗೂ ಅವುಗಳ ರುಚಿ ಹತ್ತುವುದು. ಹಾಗಾಗಿ ಇಲ್ಲಿ ಬಹು ಮಕ್ಕಳು ಹಾಳಗುವುದು ಸಹಜ. ಪಾರ್ಕ್, ಬೀಚು, ಸಾರ್ವಜನಿಕ ವಾಹನಗಳು, ಸಾರ್ವಜನಿಕ ಕ್ಷೇತ್ರಗಳಲ್ಲೆಲ್ಲಾ ಇದೇ ದೃಶ್ಯ ಕಂಡುಬರುವುದು ಸಾಮಾನ್ಯ. ಕೇಳಿದರೆ ಇದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುವರು. ಅದೂ ಅಲ್ಲದೇ ಕಾಲೇಜು ಮೆಟ್ಟಿಲು ಹತ್ತಿದೊಡನೆ ಖಾಸಗಿ ಸಂಸ್ಥೆಗಳು ಹೊಸ ಹೊಸ ಪದಾರ್ಥಗಳ ಮಾರಾಟಕ್ಕೆ ದಿನಕ್ಕೆ ಒಂದು ಅಥವಾ ಎರಡು ಗಂಟೆಗಳಿಗೆ ಹುಡುಗ ಹುಡುಗಿಯರನ್ನು ಸೇಲ್ಸ್ ಪ್ರಮೋಷನ್ ಗೆಂದು ತೆಗೆದುಕೊಳ್ಳುವರು. ರಜೆ ದಿನಗಳಲ್ಲಿ ಮಾರಾಟ ಮಳಿಗೆಗಳಲ್ಲಿಯೂ ಇವರುಗಳಿಗೆ ಸುಲಭವಾಗಿ ಹಣ ಮಾಡುವ ಸಂದರ್ಭ ಸಿಗುವುದು.

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಗುರುದೇವ

ಗುರುದೇವ

gurudev1.JPG
ಶ್ರೀ ದೇವೇಂದ್ರನಾಥ ಮಜುಮ್ದಾರ ವಿರಚಿತ ಶ್ರೀ ಗುರು: ತವಾಷ್ಟಕ

ಭವ ಸಾಗರ ತಾರಣ ಕಾರಣ ಹೇ ರವಿ ನಂದನ ಬಂಧನ ಖಂಡನ ಹೇ
ಶರಣಾಗತ ಕಿಂಕರ ಭೀತಮನೆ ಗುರುದೇವ ದಯಾಕರ ದೀನಜನೆ

ಹೃದಿಕಂದರ-ತಾಮಸ-ಭಾಸ್ಕರ ಹೇ, ತುಮಿ ವಿಷ್ಟು ಪ್ರಜಾಪತಿ ಶಂಕರ ಹೇ
ಪರಬ್ರಹ್ಮ ಪರಾತ್ಪರ ವೇದ ಭಣೇ, ಗುರುದೇವ ದಯಾಕರ ದೀನಜನೆ

ಮನ-ವಾರಣ-ಶಾಸನ-ಅಂಕುಶ ಹೇ, ನರತ್ರಾಣ ತರೇ ಹರಿ ಚಾಕ್ಷುಷ ಹೇ
ಗುಣಗಾನ-ಪರಾಯಣ ದೇವಗಣೇ, ಗುರುದೇವ ದಯಾಕರ ದೀನಜನೆ

ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ
ಮಮ ಮಾನಸ ಚಂಚಲ ರಾತ್ರ ದಿನೇ, ಗುರುದೇವ ದಯಾಕರ ದೀನಜನೆ

ರಿಪು-ಸೂದನ ಮಂಗಲ ನಾಯಕ ಹೇ ಸುಖಶಾಂತಿ ವರಾಭಯ-ದಾಯಕ ಹೇ
ತ್ರಯ ತಾಪ ಹರೇ ತವ ನಾಮಗುಣೇ, ಗುರುದೇವ ದಯಾಕರ ದೀನಜನೆ

ಅಭಿಮಾನ-ಪ್ರಭಾವ-ವಿಮರ್ಧಕ ಹೇ ಗತಿಹೀನ ಜನೇ ತುಮಿ ರಕ್ಷಕ ಹೇ
ಚಿತಶಂಕಿತ ವಂಚಿತ ಭಕ್ತಿಧನೇ, ಗುರುದೇವ ದಯಾಕರ ದೀನಜನೆ

ತವನಾಮ ಸದಾ ಶುಭ-ಸಾಧಕ ಹೇ ಪತಿತಾಧಮ-ಮಾನವ-ಪಾವಕ ಹೇ
ಮಹಿಮಾ ತವ ಗೋಚರ ಶುದ್ಧಮನೇ, ಗುರುದೇವ ದಯಾಕರ ದೀನಜನೆ

ಜಯ ಸದ್ಗುರು ಈಶ್ವರ-ಪ್ರಾಪಕ ಹೇ ಭವ-ರೋಗ-ವಿಕಾರ ವಿನಾಶಕ ಹೇ
ಮನ ಯೇನ ರಹೇ ತವ ಶ್ರೀಚರಣೇ, ಗುರುದೇವ ದಯಾಕರ ದೀನಜನೆ

ಗುರುವಿನ ಅವಶ್ಯಕತೆ (ವಿನೋಬಾಜೀ ಚಿಂತನೆಗಳು)

ನಿಸ್ಸಂದೇಹವಾಗಿಯೂ ಮಕ್ಕಳಿಗೆ ಯಾವ ಭೌತವಿಜ್ಞಾನವೂ ಗುರುವಿನ ಸಹಾಯವಿಲ್ಲದೇ ದೊರಕಲಾರದು. ತಾಯಿ, ತಂದೆ, ಗುರು ತಿಳಿಸಿ ಹೇಳಿದರೆ ಮಕ್ಕಳು ಜ್ಞಾನ ಪಡೆಯುತ್ತಾರೆ. ಈ ಬಗೆಯ ಗುರು ಸಿಕ್ಕದೆಯೇ ಜ್ಞಾನ ಬೆಳೆಯಿತೆಂಬ ಅನುಭವ ಮಾತ್ರ ಬಂದುದಿಲ್ಲ. ಪ್ರಾಣಿಗಳಿಗೂ ಗುರು ಇರುತ್ತಾರೆ. ಅವುಗಳಿಗೆ ಮಾರ್ಗದರ್ಶನ ಮಾಡುತ್ತವೆ. ತಾಯಿ ತಂದೆಯರು ಪ್ರತ್ಯಕ್ಷ ಆಚರಣೆಯಿಂದ ಮಕ್ಕಳಿಗೆ ಕಲಿಸುತ್ತಾರೆ. ಅದರಿಂದ ಕೆಲವು ಪರಂಪರೆಗಳು ಬೆಳೆಯುತ್ತವೆ ಮತ್ತು ನಡೆದುಕೊಂಡು ಹೋಗುತ್ತಿರುತ್ತವೆ.

ಆದರೆ ಆತ್ಮಜ್ಞಾನದ ಸಂಬಂಧದಲ್ಲಿ ಹೇಳಬೇಕಾದರೆ ಗುರುವಿಲ್ಲದೆ ಅದು ದೊರೆಯದು ಎಂದು ತಿಳಿಯುವುದು ತಪ್ಪು. ಕಾರಣ ಆತ್ಮ ಎನ್ನುವ ವಸ್ತುವೇ ಹಾಗಿದೆ. ಅದು ನಮ್ಮೊಳಗಿನದೇ ಹೊರತು ಹೊರಗಿನದಲ್ಲ. ಯೋಗ್ಯ ಗುರು ದೊರಕಿದರೆ ಆತನ ಮಾರ್ಗದರ್ಶನದಿಂದ ಆತ್ಮದರ್ಶನ ಸರಳವಾಗುವುದು. ಆದರೆ ಇದರೆಲ್ಲಿ ‘ರೆ’ಯೇ ದೊಡ್ಡದು. ಅಂತಹ ಗುರುವಿನ ನೆರವಿಲ್ಲದೆಯೇ ಮಾರ್ಗ ದೂರವಾಗಬಹುದು ಮತ್ತು ಹೆಚ್ಚು ಕಷ್ಟವೂ ಆಗಬಹುದು. ಆದರೂ ಗುರುವಿಲ್ಲದೆ ಆತ್ಮ ಜ್ಞಾನ ದೊರಕದು ಎಂದು ಮಾತ್ರ ಹೇಳಬರುವುದಿಲ್ಲ. ಆತ್ಮ ಆಂತರಿಕ ವಸ್ತುವಾದುದರಿಂದ ಅದರ ಪ್ರಾಪ್ತಿಗೆ ಹೊರಗಣ ಗುರು ಬೇಕು ಎಂದು ತಿಳಿಯುವುದು ತಪ್ಪಾಗುವುದು. ಆದುದರಿಂದ ಆತ್ಮಜ್ಞಾನಕ್ಕೆ ಗುರು ಅನಿವಾರ್ಯವೆಂದು ಭಾವಿಸಬಾರದು.

ಗುರುವಿನ ಬಗ್ಗೆ

ದೃಷ್ಟಿದಾತನೇ ಎಲ್ಲಕ್ಕಿಂತ ಶ್ರೇಷ್ಠಗುರು. ದೃಷ್ಟಿಮಾತ್ರ, ಸ್ಪರ್ಶಮಾತ್ರ, ಆಲಿಂಗನ ಮಾತ್ರ ಮತ್ತು ಕಥನ ಮಾತ್ರದಿಂದಲೇ ಶಿಷ್ಯ ಬ್ರಹ್ಮನಾಗುವಂತಹ ಗುರುಗಳು ಇದ್ದಾರೆ. ಯಾಜ್ಞವಲ್ಕ್ಯರು ಜನಕನಿಗೆ ಜ್ಞಾನವನ್ನು ಕೊಟ್ಟರು ಮತ್ತು ಕೊನೆಯಲ್ಲಿ ಆತನ ಮುಖವು ತೇಜಸ್ಸಿನಿಂದ ಹೊಳೆಯುತ್ತಿದ್ದುದನ್ನು ಕಂಡರು. ಅವನು ಹೇಳಿದನು – ‘ಎಲೈ ಜನಕನೇ, ನೀನು ನಿರ್ಭೀತನಾದೆ. ಹೀಗೆ ಶ್ರವಣ ಮಾತ್ರದಿಂದ ಆತನಿಗೆ ಜ್ಞಾನ ದೊರಕಿತು. ಇದರಲ್ಲಿ ಶಿಷ್ಯನ ಗ್ರಹಣ ಸಾಮರ್ಥ್ಯವಂತೂ ಎದ್ದು ಕಾಣುತ್ತದೆ. ಆದರೆ ತನ್ನ ಶಬ್ದದಿಂದಲೇ ಅಷ್ಟೊಂದು ದೊಡ್ಡ ಕಾರ್ಯವನ್ನು ಸಾಧಿಸಿದ ಗುರುವಿನ ಶಕ್ತಿಯೂ ಸ್ಪಷ್ಟವಾಗಿ ತೋರುತ್ತದೆ. ಇಂತಹ ಗುರು ಇರುವುದು ಸಾಧ್ಯ.

ಗುರು ಮತ್ತು ಗುರು ಶಿಷ್ಯರ ಜೊತೆಗಳು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾರ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು. ಯಾರ ಶಿಷ್ಯರು ಗುರುವಿಗಿಂತ ದುರ್ಬಲರಾದಾರೋ ಅವರು ದುರ್ಬಲ ಗುರು. ಅದೇ ರೀತಿ ತಂದೆಯ ಲಕ್ಷಣವೆಂದರೆ ತನಗಿಂತ ತನ್ನ ಮಗ ಮುಂದೆ ಹೋಗುವಂತಾಗಬೇಕು. ದಶರಥನಿಗಿಂತ ರಾಮ ಮುಂದೆ ಹೋದನಾದ್ದರಿಂದ ದಶರಥ ಉತ್ತಮ ತಂದೆಯಾದನು. ರಾಮನು ಉತ್ತಮ ತಂದೆಯಾಗಲಿಲ್ಲ. ಏಕೆಂದರೆ ಅವನ ಮಕ್ಕಳು ಅವನಿಗಿಂತ ಮುಂದೆ ಹೋಗಲಿಲ್ಲ. ಹಿಂದೂಸ್ಥಾನದಲ್ಲಿ ಇಂತಹ ಗುರುಶಿಷ್ಯರ ಜೊತೆಗಳು ಎಲ್ಲೆಲ್ಲೂ ನೋಡಲು ಸಿಗುತ್ತವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಶಂಕರದೇವ – ಮಾಧವದೇವ. ಮಾಧವದೇವ ಶಂಕರದೇವರಿಗಿಂತ ಮುಂದೆ ಹೋದರು. ಅಸ್ಸಾಮಿನಲ್ಲೆಲ್ಲಾ ಭಕ್ತಿಮಾರ್ಗ ಬಹಳವಾಗಿ ವ್ಯಾಪಿಸಿದುದು ಮಾಧವದೇವರಿಂದಲೇ. ಇತ್ತ ಬಂಗಾಲದಲ್ಲಿ ರಾಮಕೃಷ್ಣ – ವಿವೇಕಾನಂದರಂತಹ ಗುರು ಶಿಷ್ಯರ ಆದರ್ಶ ಜೋಡಿ ಇತ್ತು. ಮಾಧವದೇವರು ತಾವು ಶಂಕರದೇವರಿಗಿಂತ ಮುಂದೆ ಹೋದೆನೆಂದು ಖಂಡಿತ ಒಪ್ಪುತ್ತಿರಲಿಲ್ಲ. ವಿವೇಕಾನಂದರೂ ತಾವು ರಾಮಕೃಷ್ಣರಿಗಿಂದ ಮುಂದೆ ಹೋದೆನೆಂದು ಒಪ್ಪುತ್ತಿರಲಿಲ್ಲ. ಆದರೂ ವಿವೇಕಾನಂದರಿಲ್ಲದೇ ಇದ್ದಿದ್ದರೆ ರಾಮಕೃಷ್ಣರ ಪರಿಚಯ ಜಗತ್ತಿಗೆ ಆಗುತ್ತಿರಲಿಲ್ಲ. ಮಚ್ಛೀಂದ್ರನಾಥ – ಗೋರಖನಾಥರ ಜೊತೆಯೂ ಅಂತಹದ್ದೇ. ‘ಮಗುವನ್ನು ತೊಳೆದುಕೊಂಡು ಬಾ’ ಎಂದು ಮಚ್ಛೀಂದ್ರನಾಥರು ಹೇಳಿದಾಗ, ಗೋರಖನಾಥರು ಮಗುವಿನ ಕಾಲುಗಳನ್ನು ಹಿಡಿದು ಬಟ್ಟೆಯನ್ನು ಒಗೆಯುವಂತೆ ಎತ್ತೆತ್ತಿ ಒಗೆದರು. ಮಚ್ಛೀಂದ್ರನಾಥರಿಗೆ ವಿಷಯ ತಿಳಿದಾಗ – ‘ಏನಯ್ಯಾ! ಬಟ್ಟೆಯನ್ನು ಒಗೆಯುವ ಬಗೆ ಬೇರೆ. ಹುಡುಗನನ್ನು ತೊಳೆಯುವ ಬಗೆ ಬೇರೆ ಎಂದು ತಿಳಿಯದೇ?’ ಎನ್ನಲು, ಗೋರಖನಾಥರು ‘ನೀವು ಎರಡು ಬಗೆಗಳನ್ನು ತೋರಿಸಿದ್ದೀರ’, ಎಂದರು ಗುರುವು ಚೇತನ ಅಚೇತನಗಳ ನಡುವಿನ ಭೇದವನ್ನು ಇಟ್ಟಿದ್ದರೂ, ಶಿಷ್ಯನು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದನು.

ಅದೇ ರೀತಿ ಶಂಕರಾಚಾರ್ಯರನ್ನು ತೆಗೆದುಕೊಳ್ಳಿ. ಯಾರೂ ಅವರ ಗುರುವನ್ನು ತಿಳಿಯರು. ಆದರ ಅವರು ಕುಶಲತೆಯಿಂದ ತನ್ನ ಗುರುವಿನ ಹೆಸರನ್ನು ಜನರಿಂದ ಹಾಡಿಸಿದರು. ‘ಭಜ ಗೋವಿಂದ’ ಇದು ಅವರ ಗುರುವಿನ ಹೆಸರೆಂದು ತಿಳಿಯುವುದಿಲ್ಲ. ಭಗವಂತನ ಹೆಸರೆಂದೇ ತಿಳಿಯುವರು. ಆದರೆ ಶಂಕರಾಚಾರ್ಯರ ನಾಲ್ಕು ಶಿಷ್ಯರೂ ಅವರಿಗಿಂತ ಮುಂದೆ ಹೋಗಲಿಲ್ಲ. ಹೀಗೆ ಶಂಕರಾಚಾರ್ಯರು ಉತ್ತಮ ಶಿಷ್ಯರೂ ಮತ್ತು ದುರ್ಬಲ ಗುರುವೂ ಆಗಿ ಕಾಣಬರುತ್ತಾರೆ.

ಮಹಾರಾಷ್ಟ್ರದಲ್ಲಿ ಮೂರು ಜೊತೆಗಳ ಗುರು ಶಿಷ್ಯರು ನೆನಪಾಗುವರು. ಮೊದಲನೆಯದು – ನಿವೃತ್ತಿನಾಥ – ಜ್ಞಾನದೇವರು. ಅವರಿಬ್ಬರೂ ಅಣ್ಣತಮ್ಮಂದಿರು. ಜ್ಞಾನೇಶ್ವರಿಯನ್ನು ಬರೆದವರು ಜ್ಞಾನದೇವರು. ಎರಡನೆಯ ಜೊತೆ – ಏಕನಾಥ ಮತ್ತು ಜನಾರ್ಧನರದ್ದು. ಮೂರನೆಯ ಜೋಡಿ ರಾನಡೆ ಮತ್ತು ಗೋಖಲೆಯವರದ್ದು. ಇವರೆಲ್ಲರಲ್ಲೂ ಗುರುವಿಗಿಂತ ಶಿಷ್ಯ ಮುಂದೆ ಹೋದಂತಹ ಉದಾಹರಣೆಗಳು.

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ನವರಾತ್ರಿ / ದಸರಾ ಉತ್ಸವ

durge1.JPG

ಶ್ರೀದೇವೀ ನಮನ (ದೇವೀ ಮಹಾತ್ಮೆ 11-9-10.11)

ಓಂ ಸರ್ವ ಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ

ಸೃಷ್ಟಿ ಸ್ಥಿತಿ ವಿನಾಶಾನಾಂ
ಶಕ್ತಿಭೂತೇ ಸನಾತನಿ
ಗುಣಾಶ್ರಯೇ ಗುಣಮಯೇ
ನಾರಾಯಣಿ ನಮೋಸ್ತು ತೇ

ಶರಣಾಗತ ದೀನಾರ್ತ
ಪರಿತ್ರಾಣ ಪರಾಯಣೀ
ಸರ್ವಸ್ಯಾರ್ತಿಹರೇ ದೇವಿ
ನಾರಾಯಣಿ ನಮೋಸ್ತು ತೇ

ನವರಾತ್ರಿ ಅಥವಾ ದಸರಾ (ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು ಆಚರಿಸಿದರೆ, ಆಶ್ವಯುಜ ಮಾಸದಲ್ಲಿ ಶರನ್ನವರಾತ್ರಿ ಎಂದು ಆಚರಿಸುವರು.

ಭವಿಷ್ಯೋತ್ತರಪುರಾಣದಲ್ಲಿ ಹೀಗೆ ಹೇಳಿದೆ –

ಸ್ನಾತೈಃ ಪ್ರಮುದಿತೈರ್ಹೃಷ್ಟೈಃ ಬ್ರಾಹ್ಮಣೈಃ ಕ್ಷತ್ರಿಯೈರ್ನೃಪೈಃ
ವೈಶ್ಯೈಃ ಶೂದ್ರೈರ್ಭಕ್ತಿಯುಕ್ತೈಃ ಮ್ಲೇಚ್ಛೈರನ್ಯೈಶ್ಚ ಮಾನವೈಃ
ಏವಂ ನಾನಾಮ್ಲೇಚ್ಛಗಣೈಃ ಪೂಜ್ಯತೇ ಸರ್ವದಸ್ಯುಭಿಃ
ಅಂಗವಂಗಕಲಿಂಗೈಶ್ಚ ಕಿನ್ನರೈಃ ಬರ್ಬರೈಃ ಶಕೈಃ

ಅರ್ಥ –
ಶೈವ, ವೈಷ್ಣವ, ಶಾಕ್ತ, ಸೌರ, ಗಾಣಪತ್ಯ ಮತ್ತು ಕೌಮಾರ ಎಂದು ಭಕ್ತದರ್ಶನಕ್ಕೆ ಸಂಬಂಧಪಟ್ಟಂತೆ ಆರು ಬೇರೆ ಬೇರೆ ದರ್ಶನಗಳಿವೆ. ಆದರೆ ಆ ಎಲ್ಲ ಪಂಥದವರೂ ಕೂಡಾ ಆಚರಣೆ ಮಾಡಲು ಬರುವ ಹಬ್ಬ ನವರಾತ್ರಿ. ಏಕೆಂದರೆ ಈ ಪರ್ವದಲ್ಲಿ ವಿಶೇಷವಾಗಿ ಶಕ್ತಿ ದೇವತೆ ಪೂಜಿಸಲ್ಪಡುವಳು.

durge3.JPG

ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ. ಈ ಸಮಯದಲ್ಲಿ ವಿವಾಹ, ಉಪನಯನ ಇತ್ಯಾದಿ ಶುಭಕರ್ಮಗಳಿಗೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಗ್ರಹಮೈತ್ರಿ ಇತ್ಯಾದಿ ಯಾವು ಕೂಟಗಳನ್ನೂ ಗಮನಿಸದಿರುವುದು ಪರಿಪಾಠ. ಇದಲ್ಲದೇ ವರ್ಷದಲ್ಲಿ ಆಚರಿಸಲಾಗದ ಯಾವುದೇ ವ್ರತ, ಹಬ್ಬಗಳನ್ನೂ ಈ ಸಮಯದಲ್ಲಿ ಆಚರಿಸುವರು. ಮನೆ ಕಟ್ಟಲು ಅಡಿಪಾಯವನ್ನೂ ಇದೇ ಸಮಯದಲ್ಲಿ ಹಾಕುವರು.

ಈ ದಿನಗಳಲ್ಲಿ ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳು ಲಕ್ಷ್ಮಿಯೆಂದೂ, ನಂತರದ ಮೂರುದಿನಗಳಲ್ಲಿ ಸರಸ್ವತಿಯೆಂದೂ ಮತ್ತು ಕಡೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸುವರು.

ಪ್ರಥಮಾ ತಿಥಿಯಂದು ಪ್ರಾತಃಕಾಲದಲ್ಲಿ ಅಭ್ಯಂಜನ ಸ್ನಾನ ಮಾಡಿ ಕಲಶ ಸ್ಥಾಪನೆ ಮಾಡಿ, ಷೋಡಶಾಂಗ ಪೂಜೆಯನ್ನು ದೇವಿಗೆ ಅರ್ಪಿಸುವರು. ಬಲಿ ಕೊಡುವುದರ ಸಂಕೇತವಾಗಿ ಉದ್ದಿನ ಅನ್ನ ಅಥವಾ ಬೂದುಗುಂಬಳಕಾಯಿಯನ್ನು ಮೊದಲನೆಯ ದಿನ ಅಥವಾ ಕೊನೆಯ ದಿನದಂದು ಅರ್ಪಿಸುವರು. ಈ ಸಮಯದಲ್ಲಿ ಚಂಡೀ ಸಪ್ತಶತಿ, ನಾರಾಯಣಹೃದಯ ಪಾಠ, ಲಕ್ಷ್ಮೀ ಹೃದಯ ಪಾಠ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆಯನ್ನೂ ಮಾಡುವ ಪದ್ಧತಿ ಇದೆ.

durge4.JPG

ಎರಡು ವರ್ಷದಿಂದ ಹತ್ತು ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಕೌಮಾರಿಯೆಂದು ಪೂಜಿಸುವ ಸಂಪ್ರದಾಯವೂ ಇದೆ. ಕುಮಾರಿ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ ಮತ್ತು ಭದ್ರಾ ಎಂದ ಹೆಸರುಗಳಿಂದ ಆವಾಹಿಸಿ ಭವಾನೀ ಸಹಸ್ರನಾಮವನ್ನು ಪಾರಾಯಣ ಮಾಡುವರು. ಪಂಚಮೀ ತಿಥಿಯಂದು ಉಪಾಂಗ ಲಲಿತಾ ದೇವಿಯನ್ನು ಪೂಜಿಸಿದರೆ, ಮೂಲಾನಕ್ಷತ್ರದಂದು ಸರಸ್ವತೀ ದೇವಿಯನ್ನು ಪೂಜಿಸಿ, ಅಷ್ಟಮಿಯಂದು ದುರ್ಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಮಹಾನವಮಿಯಂದು ಶತಚಂಡೀ ಹೋಮವನ್ನೂ ಮಾಡುವರು. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರನೆಂಬ ರಕ್ಕಸನನ್ನು ಕೊಂದು ಬಡಪಾಯಿಗಳನ್ನು ಕಾಪಾಡಿದ ಚಾಮುಂಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.

ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ಮೈಸೂರಿನ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ದಕ್ಷಿಣ ಕರ್ನಾಟಕ (ಹಳೆಯ ಮೈಸೂರು ಪ್ರಾಂತ್ಯ) ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಅದರ ಮೇಲೆ ಪಟ್ಟದ ಗೊಂಬೆ, ಕಲಶ, ಶೆಟ್ಟಿ ಶೆಟ್ಟಮ್ಮ ದಂಪತಿಗಳು, ಡೊಳ್ಳುಹೊಟ್ಟೆ ಮಾನವ, ಮಣಿ ಸಾಮಾನು, ಪ್ಲಾಸ್ಟಿಕ್ ವೈರಿನ ಸಾಮಾನು ಮತ್ತು ಇತರೆ ಗೊಂಬೆಗಳನ್ನು ಕೂರಿಸುವರು. ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ಪಟ್ಟದ ಗೊಂಬೆಗಳನ್ನು (ತೇಗ ಅಥವಾ ಚಂದನದ ಮರದಿಂದ ಮಾಡಿದ) ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಇಲ್ಲಿ ವಿಶೇಷವೇನೆಂದರೆ, ಈ ಎಲ್ಲ ತಿಂಡಿಗಳು ಸಣ್ಣ ಸಣ್ಣ ಸ್ವರೂಪದಲ್ಲಿರುವುವು. durge6.JPGವಿಜಯದಶಮಿಯಂದು ಪಟ್ಟದ ಗೊಂಬೆಗಳನ್ನು ಮಲಗಿಸಿ ಇಟ್ಟು ಮಾರನೆಯ ದಿನ ಬೆಳಗ್ಗೆ ಕಲಶವನ್ನು ವಿಸರ್ಜಿಸುವರು. ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ – ವಿಜಯದಶಮಿಯಂದು ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿ.

durge5.JPG

ಬಂಗಾಳದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ ಕೊಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು. ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ತಗೊಳಿಸಿಕೊಳ್ಳಬಹುದು.

ಮುಂಬಯಿಯ ಶಿವಾಜಿ ಪಾರ್ಕಿನಲ್ಲಿ ಬೆಂಗಾಳೀ ಕ್ಲಬ್ಬಿನವರು ಬಹಳ ವಿಜೃಂಭಣೆಯಿಂದ ದುರ್ಗಾ ಪೂಜೆ ಮಹೋತ್ಸವವನ್ನು ಆಚರಿಸುವರು. ಆ ಸಮಯದಲ್ಲಿ ಬಂಗಾಳದ ತಿನಿಸುಗಳು, ದಿರಿಸುಗಳು, ಇತ್ಯಾದಿ ವಿಶೇಷ ಸಾಮಗ್ರಿಗಳನ್ನು ಮಾರಾಟ ಮಾಡುವ ಮಳಿಗೆಗಳು ಅಲ್ಲಿ ಕಂಡುಬಂದರೆ, ನಗರದಲ್ಲಿರುವ ಬಂಗಾಳಿಗಳು ಒಂದುಗೂಡಿ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುವರು. ಅಲ್ಲಿ ದೊರೆಯುವ ತಿನಿಸುಗಳನ್ನು (ಮುಖ್ಯವಾಗಿ ರೊಶಗುಲ್ಲ, ಸಂದೇಶ) ಮತ್ತು ದಿರಿಸುಗಳನ್ನು ಕೊಳ್ಳಲೆಂದೇ ಇತರರು ಹೋಗುವರು. ಇಲ್ಲಿಯ ಗುಜರಾತಿಗಳು ಗರ್ಬಾ ನೃತ್ಯವನ್ನು ಆಡುವರು. ಈ ಸಂದರ್ಭದಲ್ಲಿ ಮೈದಾನಗಳಲ್ಲಿ ಕೋಲಾಟವನ್ನು ಆಡುವರು. ಇದಕ್ಕೆ ದಾಂಡಿಯಾ ಎಂದು ಹೆಸರಿಸುತ್ತಾರೆ.

durge2.JPG

ಮೈದಾನಗಳಲ್ಲಿ ಒಂದೆಡೆ ಹಾಡುಗಾರರು ಹಾಡುತ್ತಿದ್ದರೆ ಇನ್ನೊಂದೆಡೆ ಗಂಡಸರು, ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಬಣ್ಣ ಬಣ್ಣದ ದಿರಿಸುಗಳನ್ನು ಧರಿಸಿ, ಬಣ್ಣ ಬಣ್ಣದ ಕೋಲುಗಳಲ್ಲಿ ಇತರರ ಕೋಲುಗಳಿಗೆ ತಾಗಿಸುತ್ತಾ ಸುತ್ತುತ್ತಿರುತ್ತಾರೆ. ಈ ಮೋಜಿನ ಕಾರ್ಯಕ್ರಮಕ್ಕೆ ಕೆಲವೆಡೆ ಪ್ರವೇಶ ಶುಲ್ಕವೂ ಇರುತ್ತದೆ. ಇಂತಹ ಸಂದರ್ಭಕ್ಕೇ ಹಾಡುವ ಪ್ರಸಿದ್ಧ ಶ್ರೀಮತಿ ಫಲ್ಗುಣೀ ಫಾಟಕ್ ಅವರ ಗಾಯನ ಕಿವಿಗಿಂಪಾಗಿರುತ್ತದೆ. ಈ ನೃತ್ಯ ಗುಜರಾತಿನ ಮೂಲದ್ದಾಗಿದ್ದು, ಮುಂಬಯಿಯ ಮಲಾಡ ಪ್ರದೇಶದ ಒಂದು ಚೌಕಕ್ಕೆ ‘ನವರಾತ್ರಿ ಕಾಠಿಯಾವಾಡ ಚೌಕ’ ಎಂದೇ ಹೆಸರಿಸಿದ್ದಾರೆ.

ನಾನು ನೋಡಿರುವ ಶೃಂಗೇರಿ ಮತ್ತು ಬೆಂಗಳೂರಿನ ಶಂಕರಮಠಗಳಲ್ಲಿ ಶಾರದಾ ಮಾತೆಗೆ ವಿಶೇಷ ಅಲಂಕಾರದಿಂದೊಡಗೂಡಿದ ಪೂಜೆ ನಡೆಯುವುದು. ದೇವಿಗೆ ದಿನಕ್ಕೊಂದು ತರಹದ ಅಲಂಕಾರವನ್ನು ಮಾಡುವರು. ಆ ಅಲಂಕಾರವನ್ನು ನೋಡಲು ಎರಡು ಕಣ್ಣುಗಳು ಸಾಲದು. ಶಾಕಾಂಬರೀ ಅಲಂಕಾರದಂದು ತೋರಣವಾಗಿ ಹುರುಳಿಕಾಯಿಗಳ ಹಾರ ಮಾಡಿ ಹಾಕಿದ್ದರೆ, ಹಣ್ಣುಗಳಿಂದ ಒಂದು ದಿನದ ಅಲಂಕಾರ ಮತ್ತು ಹೂವುಗಳಿಂದಲೇ ಪೂರ್ಣ ಅಲಂಕಾರವನ್ನು ಮತ್ತೊಂದು ದಿನ ಶಾರದಾ ಮಾತೆಗೆ ಮಾಡುವರು. ಆ ಅಲಂಕಾರವನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಈ ಉತ್ಸವದಲ್ಲಿ ಸಂಜೆಯ ವೇಳೆಯಲ್ಲಿ ಸಂಗೀತ ಕಾರ್ಯಕ್ರಮವೂ ಇರುವುದು. ಒಟ್ಟಿನಲ್ಲಿ ಹತ್ತು ದಿನಗಳು ತನು ಮನಗಳನ್ನು ತಣಿಸುವ ಈ ನಾಡ ಹಬ್ಬವನ್ನು ಆಬಾಲವೃದ್ಧರಾದಿಯಾಗಿ ಎಲ್ಲರೂ ಆನಂದಿಸುವರು.

ಈ ಸಂದರ್ಭದಲ್ಲಿ ದೇವಿಯ ಬಗ್ಗೆ ದುರ್ಗಿಯ ಆರತಿಯ ಸಮಯದಲ್ಲಿ ಹಾಡುವ ಒಂದು ಮರಾಠೀ ಭಜನೆ ಹೀಗಿದೆ.

ಆರತಿ ಭಜನೆಗಳು

ದುರ್ಗೇ ದುರ್ಘಟ ಭಾರೀ ತುಜವೀಣ ಸಂಸಾರೀ
ಅನಾಥನಾಥೇ ಅಂಬೇ ಕರುಣಾ ವಿಸ್ತಾರೀ
ವಾರೀ ವಾರೀ ಜನ್ಮಮರಣಾತೇ ವಾರೀ
ಹಾರೀ ಪಡಲೋ ಆತಾ ಸಂಕಟ ನೀವಾರೀ
ಜಯ ದೇವಿ ಜಯ ದೇವಿ
ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ
ಸುರುವರ ಈಶ್ವರ ವರದೇ ತಾರಕ ಸಂಜೀವನೀ
ಜಯ ದೇವಿ ಜಯ ದೇವಿ

ತ್ರಿಭುವನ ಭುವನೀ ಪಹತಾಂ ತುಜಾಐಸೀ ನಾಂಹೀ
ಚಾರೀ ಶ್ರಮಲೇ ಪರಂತು ನ ಬೋಲವೇ ಕಾಂಹೀ
ಸಾಹೀ ವಿವಾದ ಕರಿತಾ ಪಡಲೋ ಪ್ರವಾಹೀ
ತೆ ತೂಂ ಭಕ್ತಾಲಾಗೀ ಪಾವಸೀ ಲವಲಾಹೀ
ಜಯ ದೇವಿ ಜಯ ದೇವಿ
ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ
ಸುರುವರ ಈಶ್ವರ ವರದೇ ತಾರಕ ಸಂಜೀವನೀ
ಜಯ ದೇವಿ ಜಯ ದೇವಿ

ಪ್ರಸನ್ನವದನೇ ಪ್ರಸನ್ನ ಹೋಸೀ ನಿಜದಾಸಾ
ಕ್ಲೇಶಾಪಾಸುನೀ ಸೋಡವೀ ತೋಡೀ ಭವಪಾಶೀ
ಅಂಬೇ ತುಜವಾಚೂನ್ ಕೋಣ್ ಪುರವಿಲ ಆಶಾ
ನರಹರಿ ತಲ್ಲಿನ ಝಾಲಾ ಪದಪಂಕಜ ಲೇಶಾ
ಜಯ ದೇವಿ ಜಯ ದೇವಿ
ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ
ಸುರುವರ ಈಶ್ವರ ವರದೇ ತಾರಕ ಸಂಜೀವನೀ
ಜಯ ದೇವಿ ಜಯ ದೇವಿ

ವಿಭಾಗಗಳು
ಆಚಾರ-ವಿಚಾರ - Rituals ಲೇಖನಗಳು

ಸತ್ಯನಾರಾಯಣ ವ್ರತ

ಸತ್ಯನಾರಾಯಣ ಸ್ವಾಮಿ
ಇಂದು ಭಾನುವಾರ. ನಾಳೆಗೆ ಆಶ್ರಯಕ್ಕೆ ಒಂದು ವರುಷ ಪೂರ್ಣವಾಗುತ್ತಿದೆ. ಕೈ ಕಾಲು ಆಡದ ಆ ಮಗುವು ಕಣ್ಣು ಬಿಡಲಾಗುತ್ತಿಲ್ಲ. ಅದರೆ ಒಳಿತಿಗೆ ಮತ್ತು ಇನ್ನುಳಿದ ಮಕ್ಕಳ ಸೌಖ್ಯಕ್ಕಾಗಿ ಇ-ಸತ್ಯನಾರಾಯಣ ವ್ರತವನ್ನು ಮಾಡುತ್ತಿರುವೆ.

ಎಲ್ಲರಿಂದಲೂ ಸರ್ವ ಕಾಲದಲ್ಲಿಯೂ ಪೂಜಿಸುವ ದೇವರು ಮೊದಲಿಗೆ ಗಣಪತಿಯಾದರೆ, ನಂತರ ಬರುವುದು ಸತ್ಯನಾರಾಯಣ ಸ್ವಾಮಿ. ಹೇಗೆ ಗಣಪತಿ ಪೂಜೆ ಮಾಡಲು ಕಾಲ, ದಿನ, ನಕ್ಷತ್ರ, ತಿಥಿ ನೋಡಬೇಕಿಲ್ಲವೋ ಹಾಗೆಯೇ ಈ ವ್ರತವನ್ನು ಮಾಡಲೂ ಏನನ್ನೂ ನೋಡಬೇಕಿಲ್ಲ. ಕೆಲವರು ಪ್ರತಿ ಹುಣ್ಣಿಮೆಯ ದಿನಗಳಲ್ಲಿ ಸತ್ಯನಾರಾಯಣ ವ್ರತವನ್ನು ಮಾಡಿದರೆ, ಇನ್ನು ಕೆಲವರು ಪ್ರತಿ ಭಾನುವಾರವೂ ಮಾಡುವರು. ಹಲವಾರು ಜನಗಳು ಏನೇ ವಿಶೇಷವಿದ್ದರೂ ಆ ದಿನಗಳಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡುವರು. ಗುರುಪೂರ್ಣಿಮೆ, ಷಷ್ಠ್ಯಬ್ಧಿ ಪೂರ್ತಿ ಶಾಂತಿ, ಹುಟ್ಟಿದ ಹಬ್ಬದ ದಿನ – ಹೀಗೆ ಏನೇ ಶುಭ ಕಾರ್ಯಗಳಿದ್ದರೂ ಅಂದು ಸತ್ಯನಾರಾಯಣಸ್ವಾಮಿಯ ಪೂಜೆಯನ್ನು ಮಾಡುವರು. ಪೂಜಿಸುವ ದಿನದಂದು ಪ್ರದೋಷಕಾಲದಲ್ಲಿ ಮನೆಯೊಳಗೆ, ನದೀ ತೀರದಲ್ಲಿ, ದೇವಸ್ಥಾನ, ಅಶ್ವತ್ಥ ವೃಕ್ಷದ ಕೆಳಗೆ ಅಥವಾ ಉದ್ಯಾನವನದಲ್ಲಿ ಬಂಧು ಮಿತ್ರರೊಡಗೂಡಿ ಪೂಜೆ ಮಾಡುವುದು ವಾಡಿಕೆಯಲ್ಲಿದೆ.

ಮದುವೆಯಾದ ಹೊಸತರಲ್ಲಿ ಮೊದಲು ಮಾಡುವ ವ್ರತವಿದು. ಕೆಲವರು ಸ್ವಾಮಿಯ ಚಿತ್ರಕೆ ಪೂಜಿಸಿದರೆ, ಇನ್ನು ಕೆಲವರು ಒಂಟಿ ಕಲಶವನ್ನೂ ಮತ್ತೂ ಕೆಲವರು ಜೋಡಿ ಕಲಶಗಳನ್ನೂ ಇಟ್ಟು ಪೂಜಿಸುವರು. ಪೂಜಿಸುವವರು ಶುಚಿರ್ಭೂತರಾಗಿ, ಮೊದಲು ಪೂಜಾ ಸ್ಥಳವನ್ನು ಶುಭ್ರವಾಗಿಸಿ, ಶ್ರೀ ಗಣಪತಿಯನ್ನು ಆರಾಧಿಸಿ, ಈ ವ್ರತವನ್ನು ನಿರ್ವಿಘ್ನವಾಗಿ ನಡೆಸಿಕೊಡಬೇಕೆಂದು ಕೇಳಿಕೊಳ್ಳುವರು. ಗಣಪತಿ ಆರಾಧನೆಯ ನಂತರ ನವಗ್ರಹಗಳಿಗೆ ಅರ್ಚಿಸುವರು. ಅದಾದ ನಂತರ ಶ್ರೀ ಸತ್ಯನಾರಾಯಣ ಸ್ವಾಮಿಗೆ ಪೂಜೆಯನ್ನು ಮಾಡುವರು.

ನವಗ್ರಹ ಪೂಜಾ ವಿಧಾನ

navagraha.jpg

ನವಗ್ರಹಗಳನ್ನು ಜೋಡಿಸಿಡುವ ಬಗೆ

ವಾಯುವ್ಯ ದಿಕ್ಕಿಗೆ ಬುಧ ಗ್ರಹದ ಸೂಚನೆಯಾಗಿ ಹೆಸರು ಕಾಳು ಅಥವಾ ಬೇಳೆ
ಉತ್ತರ ದಿಕ್ಕಿಗೆ ಶುಕ್ರ ಗ್ರಹವಾಗಿ ಅವರೆಕಾಲು ಅಥವಾ ಬೇಳೆ
ಈಶಾನ್ಯ ದಿಕ್ಕಿಗೆ ಚಂದ್ರ ಗ್ರಹವಾಗಿ ಅಕ್ಕಿ
ಪೂರ್ವ ದಿಕ್ಕಿಗೆ ಕುಜಗ್ರಹವಾಗಿ ತೊಗರಿಬೇಳೆ
ಆಗ್ನೇಯ ದಿಕ್ಕಿಗೆ ಕೇತು ಗ್ರಹವಾಗಿ ಹುರುಳಿ
ದಕ್ಷಿನ ದಿಕ್ಕಿಗೆ ಶನಿಗ್ರಹವಾಗಿ ಕರಿ ಎಳ್ಳು
ನೈಋತ್ಯ ದಿಕ್ಕಿಗೆ ರಾಹುಗ್ರಹವಾಗಿ ಉದ್ದಿನ ಕಾಳು ಅಥವಾ ಬೇಳೆ
ಪಶ್ಚಿಮ ದಿಕ್ಕಿಗೆ ಗುರುಗ್ರಹವಾಗಿ ಕಡಲೆ ಕಾಳು ಅಥವಾ ಬೇಳೆ
ಮತ್ತು ಮಧ್ಯ ಭಾಗದಲ್ಲಿ ಸೂರ್ಯನಾಗಿ ಗೋಧಿಯನ್ನೂ ಇಡುವುದು ಸಂಪ್ರದಾಯ.
ಮಧ್ಯ ಬಾಗದಲ್ಲಿ ಬೆಲ್ಲದ ಅಚ್ಚನ್ನೂ ಇಡುವರು.
ಇವುಗಳಿಗೆ ಪೂಜಿಸಿ ದಕ್ಷಿಣೆಯ ಸಮೇತವಾಗಿ ದಾನ ಮಾಡುವುದರಿಂದ ನವಗ್ರಹಗಳಿಗೆ ಶಾಂತಿ ಮಾಡಿದಂತೆ ಎಂಬ ನಂಬಿಕೆ ಇದೆ.
ಮುಂದೆ ಧೂಪ, ದೀಪಗಳನ್ನು ಅರ್ಪಿಸಿ, ನೈವೇದ್ಯ ಇಟ್ಟು ಮಹಾಮಂಗಳಾರತಿಯನ್ನು ಮಾಡುವುದು ರೂಢಿ. ಹೀಗೆ ಮಾಡಿದ ಮೇಲೆ ಬ್ರಾಹ್ಮಣರಿಗೆ ದಾನ ಕೊಡುವುದು.

ಫಲ ಪುಷ್ಪ ತಳಿರು ತೋರಣಗಳಿಂದ ಮಂಟಪವನ್ನು ಸಿಂಗರಿಸಿ, ಅದರಲ್ಲಿ ಒಂದು ದೊಡ್ಡ ಬೆಳ್ಳಿಯ ತಟ್ಟೆಯಲ್ಲಿ ಕಲಶವನ್ನು ಇಡುವರು.

pooja-samagri.jpg

ಕಲಶ ಪೂಜೆಯ ಸಂದರ್ಭದಲ್ಲಿ ಹೇಳುವ ಮಂತ್ರ :
ಈ ಕಲಶವನ್ನು ಈಶಾನ್ಯ ದಿಕ್ಕಿಗೆ (ವರುಣನ ಸ್ಥಾನ) ಇಟ್ಟು, ಮೊದಲು ಅದಕ್ಕೆ ಪೂಜಿಸುವರು. ಅದರೊಳಗೆ ಪೂಜೆಗೆ ಮುಖ್ಯವಾಗಿ ಬೇಕಾಗಿರುವ ನೀರು ಅಂದ್ರೆ ತೀರ್ಥವನ್ನು ಇರಿಸುವರು. ಕಲಶ ಎಲ್ಲವನ್ನು ಬಂಧಿಸಿಡುವ ಸಂಕೇತ. ಪೂಜೆ ಅಥವಾ ಹೋಮಗಳಲ್ಲಿ ಹೊರ ಹೊಮ್ಮುವ ಎಲ್ಲ ಶಕ್ತಿಗಳನ್ನೂ ಸೆಳೆದುಕೊಳ್ಳುವ ಶಕ್ತಿ ಅದಕ್ಕಿರುತ್ತದೆ. ಅದರಿಂದಲೇ ಅದರಲ್ಲಿ ಹಾಕಿದ ನೀರನ್ನು ಎಲ್ಲ ಸಾಮಗ್ರಿ ಮತ್ತು ಜನರ ಮೇಲೂ ಸಿಂಪಡಿಸುವರು. ಇನ್ನು ಮಾವಿನ ಎಲೆ ಮತ್ತು ತೆಂಗಿನಕಾಯಿಗಳು ವೃದ್ಧಿಯ ಸಂಕೇತವಾಗಿ ಅವುಗಳನ್ನು ಉಪಯೋಗಿಸುವರು. ಜುಟ್ಟು ಇರೋ ತೆಂಗಿನಕಾಯಿ ಬೇಕು ಅನ್ನೋದು ಅದು ಕಲಶದ ಮೇಲೆ ಭದ್ರವಾಗಿ ಕುಳಿತುಕೊಳ್ಳಲಿ ಅಂತಷ್ಟೇ ಹೊರತು ಇನ್ಯಾವ ಅರ್ಥವೂ ಇಲ್ಲ, ಅನ್ಸತ್ತೆ. ೫ ಅಥವಾ ೭ ಮಾವಿನ ಎಲೆಗಳನ್ನು ಇರಿಸುವರು. ಬೆಸ ಸಂಖ್ಯೆಗಳು ಶ್ರೇಷ್ಟ ಅನ್ನುವರು. ಒಂದು ಅಥವಾ ಮೂರು ಅಶುಭದ ಸಂಕೇತ. ಹೆಣ್ಣು ಮಕ್ಕಳು ಮನೆ ಬಿಡುವಾಗ ಪಂಚಮಿ ಮತ್ತು ಸಪ್ತಮಿ ದಿನಗಳು ಒಳ್ಳೆಯದು ಅನ್ನುತ್ತಾರಲ್ಲ ಹಾಗೆ. ಇನ್ನು ಕಲಶದಲ್ಲಿ ಕಲ್ಲುಸಕ್ಕರೆ, ಬಾದಾಮಿ, ಖರ್ಜೂರ ಇತ್ಯಾದಿ ಒಣ ಹಣ್ಣುಗಳನ್ನು ಹಾಕುವರು. ಯಾಕೆ ಅಂದ್ರೆ ಹನ್ನುಗಳನ್ನು ಅದರಲ್ಲಿ ಹಾಕಿದರೆ ಅದು ಬೆಳೆಯಲಿ ಅಂತ ಅಷ್ಟೆ. ಹಸಿ ಹಣ್ಣು ಹಾಕಿದರೆ ಕೊಳೆಯಬಹುದು ಅಂತ ಒಣ ಹಣ್ಣುಗಳನ್ನು ಹಾಕುವರು. (ಕಳಶವನ್ನು ಕಲ್ಪವೃಕ್ಷಕ್ಕೂ ಹೋಲಿಸಬಹುದು – ಅದಕ್ಕೇ ತೆಂಗಿನಕಾಯಿ ಉಪಯೋಗಿಸುವುದು). ಕಲಶವನ್ನು ಅಕ್ಷಯ ಪಾತ್ರೆ ಎಂದೂ ತಿಳಿಯುವರು. ದೇವತಾ ಪೂಜೆಗೆ ಮುನ್ನ ಕಲಶದಲ್ಲಿ ಹಾಕುವ ನೀರನ್ನು ಗಂಗೆ ಎಂದು ತಿಳಿಯುವರು. ಏಕೆಂದರೆ ಗಂಗಾನದಿ ಜೀವಂತ ನದಿ. ಅದು ಎಂದೂ ಬತ್ತುವುದಿಲ್ಲ. ಮಾನವ ಕುಲಕ್ಕೆ ಶಕ್ತಿ ನೀಡುವ ಪಂಚ ಭೂತಗಳಲ್ಲಿ ಒಂದು. ಅದಕ್ಕೇ ನಿಸರ್ಗವೇ ದೈವ ಎಂತಲೂ ಹೇಳಬಹುದು.

ಕಲಶ ಪ್ರತಿಷ್ಠಾಪನೆ ಆದ ನಂತರ ದ್ವಾರಪಾಲಕರಿಗೆ ಪೂಜಿಸುವರು. ಆ ಸಮಯದಲ್ಲಿ ಹೇಳುವ ಮಂತ್ರ.
ಪೂರ್ವದ್ವಾರೇ – ದ್ವಾರಶ್ರಿಯೇ ನಮ: – ಜಯಾಯ ನಮ:, ವಿಜಯಾಯ ನಮ:
ದಕ್ಷಿಣದ್ವಾರೇ – ದ್ವಾರಶ್ರಿಯೇ ನಮ: – ನಂದಾಯ ನಮ:, ಸುನಂದಾಯ ನಮ:
ಪಶ್ಚಿಮದ್ವಾರೇ – ದ್ವಾರಶ್ರಿಯೇ ನಮ: – ಬಲಾಯ ನಮ:, ಪ್ರಬಲಾಯ ನಮ:
ಉತ್ತರದ್ವಾರೇ – ದ್ವಾರಶ್ರಿಯೇ ನಮ: – ಕುಮುದಾಯ ನಮ:, ಕುಮುದಾಕ್ಷಾಯ ನಮ:
ಮಧ್ಯೇ ನವರತ್ನ ಖಚಿತ ದಿವ್ಯ ಸಿಂಹಾಸನೋಪರಿ ಶ್ರೀ ಸತ್ಯನಾರಾಯಣಸ್ವಾಮಿನೇ ನಮ: – ದ್ವಾರಪಾಲಕ ಪೂಜಾಂ ಸಮರ್ಪಯಾಮಿ.

ತದನಂತರ ಪೀಠಪೂಜೆ –

ಪೀಠಸ್ಯಧೋಭಾಗೇ – ಆಧಾರ ಶಕ್ತೈನಮ: – ಕೂರ್ಮಾನ ನಮ:
ದಕ್ಷಿಣೇ ಕ್ಷೀರೋದಧಿಯೇ ನಮ: – ಸಿಂಹಾಯ ನಮ:
ಸಿಂಹಾನಸ್ಯ ಆಗ್ನೇಯ ಕೋಣೇ – ಕೂರ್ಮಾಯ ನಮ:
ನೈಋತಿಕೋಣೇ – ಜ್ಞಾನಾಯ ನಮ:
ವಾಯವ್ಯಕೋಣೇ – ವೈರಾಗ್ಯಾಯ ನಮ:
ಈಶಾನ್ಯ ಕೋಣೇ – ಐಶ್ವರ್ಯಾಯ ನಮ:
ಪೂರ್ವದಿಶಿ – ಧರ್ಮಾಯ ನಮ:
ದಕ್ಷಿಣದಿಶಿ – ಜ್ಞಾನಾಯ ನಮ:
ಪಶ್ಚಿಮದಿಶಿ – ವೈರಾಗ್ಯಾಯ ನಮ:
ಉತ್ತರದಿಶಿ – ಅನೈಶ್ಚರಾಯ ನಮ:
ಪೀಠಮಧ್ಯೇ – ಮೂಲಾಯ ನಮ: – ನಾಳಾಯ ನಮ: – ಪತ್ಯೇಭ್ಯೋ ನಮ: – ಕೇಸರೇಭ್ಯೋ ನಮ: – ಕರ್ಣಿಕಾಯೈ ನಮ:
ಕರ್ಣಿಕಾ ಮಧ್ಯೇ – ಸಂ ಸತ್ವಾಯ ನಮ: – ರಂ ರಂಜಸೇ ನಮ: – ತಂ ತಮಸೇ ನಮ:
ಸೂರ್ಯಮಂಡಲಾಯ ನಮ: – ಸೂರ್ಯಮಂಡಲಾಧಿಪತಯೇ – ಬ್ರಹ್ಮಣೇ ನಮ:
ಸೋಮಮಂಡಲಾಯ ನಮ: – ಸೋಮಮಂಡಲಾಧಿಪತಯೇ – ವಿಷ್ಣವೇ ನಮ:
ವಹ್ನಿಮಂಡಲಾಯ ನಮ: – ವಹ್ನಿಮಂಡಲಾಧಿಪತಯೇ – ಈಶ್ವರಾಯ ನಮ:
ಮಧ್ಯೇ ಶ್ರೀ ಸತ್ಯನಾರಾಯಣ ಸ್ವಾಮಿನೇ ನಮ: – ಪೀಠಪೂಜಾಂ ಸಮರ್ಪಯಾಮಿ

ನಂತರ ದಿಕ್ಪಾಲಕರಿಗೆ ಪೂಜೆ – ಇಂದ್ರಾಯ ನಮ: – ಅಗ್ನಯೇ ನಮ: – ಯಮುನಾಯ ನಮ: – ನೈಋತ್ಯಾಯ ನಮ: – ವರುಣಾಯ ನಮ: – ವಾಯವೇ ನಮ: – ಕುಬೇರಾಯ ನಮ: – ಈಶಾನಾಯ ನಮ:

ತದನಂತರ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯೊಂದಿಗೆ ಎಳನೀರು, ಗಂಧದ ನೀರು, ಶುದ್ಧ ನೀರಿನಿಂದ ಪಂಚಾಮೃತ ಅಭಿಷೇಕವನ್ನು ಮಾಡುವುದು. ಇದರ ನಂತರ ಶುದ್ಧೋದಕವನ್ನು ಹೂವಿನಿಂದ ಸ್ವಾಮಿಯ ಕಲಶದ ಮೇಲೆ ಪ್ರೋಕ್ಷಿಸುವುದು (ಚಿಮುಕಿಸುವುದು). ಇದಾದ ನಂತರ ಪುರುಷಸೂಕ್ತ ಪಠಿಸುತ್ತಾ ದೇವರಿಗೆ ಮಂತ್ರಾಕ್ಷತೆ, ಹೂವುಗಳ ಪೂಜೆ. ಇದಾದ ನಂತರ ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ, ಸಿಂಧೂರ ಮತ್ತು ಹೂವಿನ ಹಾರವನ್ನು ಸ್ವಾಮಿಯ ಕಲಶಕ್ಕೆ ಏರಿಸುವುದು. ಆಮೇಲೆ, ಹೂವು ಅಕ್ಷತೆ, ಪತ್ರೆಗಳೊಂದಿಗೆ ಅಂಗ ಪೂಜೆ, ಪುಷ್ಪ ಪೂಜೆ, ಪತ್ರೆ ಪೂಜೆಗಳನ್ನು ಸಮರ್ಪಿಸುವುದು. ನಂತರ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ ಪೂಜಿಸಿ, ಲಕ್ಷ್ಮೀದೇವಿಯನ್ನು ಪೂಜಿಸುವುದು. ಇದಾದ ನಂತರ ಧೂಪ, ದೀಪಗಳನ್ನು ಅರ್ಪಿಸಿ, ಫಲ ತಾಂಬೂಲವನ್ನು ದೇವರಿಗಿಡುವುದು. ನಂತರ ಮಹಾನೈವೇದ್ಯವನ್ನು ಅರ್ಪಿಸಿ, ಮಹಾಮಂಗಳಾರತಿಯನ್ನು ಮಾಡುವುದು. ಸಾಷ್ಟಾಂಗ ನಮಸ್ಕಾರವನ್ನು ಅರ್ಪಿಸಿ, ಆರತಿಯನ್ನು ಎಲ್ಲರಿಗೆ ನೀಡಿ, ತೀರ್ಥ ಪ್ರಸಾದಗಳನ್ನು ವಿತರಿಸುವುದು. ಇಂದು ಪ್ರಸಾದವೆಂದು ಮಾಡುವ ಸಜ್ಜಿಗೆಯನ್ನು ಸಪಾದ ಭಕ್ಷ್ಯವೆನ್ನುವರು.

sheera1.jpg
ಮಾರನೆಯ ದಿನ ಪುನ:ಪೂಜೆಯನ್ನು ಅರ್ಪಿಸಿ, ದೇವರನ್ನು ಕದಲಿಸುವುದು (ಕಲಶವನ್ನು ಅಲ್ಲಾಡಿಸುವುದು).

ದೇಶದ ಎಲ್ಲ ಕಡೆ ಮಾಡುವ ಸರ್ವತ್ರ ಸರ್ವಕಾಲಿಕ ವ್ರತವಿದು

ಓದುಗರೆಲ್ಲರೂ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುವೆ.

ವಿಭಾಗಗಳು
ಲೇಖನಗಳು

ಪವಾಡಗಳು

ಜನಮರುಳೋ ಜಾತ್ರೆ ಮರುಳೋ!  ಸಮುದ್ರದ ನೀರು ಸಿಹಿ!  ಕಲ್ಲಿನ ಗಣಪತಿ ಹಾಲು ಕುಡಿಯುತ್ತಿದ್ದಾನೆ!  ಕಲಿಯುಗ ಸ್ವಾಮಿ, ಕಲಿಯುಗ.  ಇಲ್ಲಿ ಏನು ಬೇಕಾದರೂ ನಡೆಯುವುದು.  ನಡೆಯಲಾಗದ್ದನ್ನು ನಡೆಸುವರು.  ಕೆಳಗೆ ನೋಡೆಂದು ಕೈಲಾಸ ತೋರುವರು.  ಮೇಲೆ ಪಾತಾಳ ನೋಡೆಂಬುವರು.  ಮರೀಚಿಕೆಯಲ್ಲಿ ಮೀನು ಹಿಡಿಯುವರು.  ಎಲ್ಲ ಕೃತ್ರಿಮತೆಯನ್ನೂ ಒಳಿತು ಕೆಡಕುಗಳನ್ನು ವಿವೇಚಿಸದೇ ಸುಲಭದಲ್ಲಿ ಕೈಗೊಳ್ಳುವರು. 

ಹಿಂದೊಮ್ಮೆ ದೇಶದಲ್ಲೆಲ್ಲಾ ಗಣಪತಿ ವಿಗ್ರಹ ಹಾಲು ಕುಡಿಯಲು ತೊಡಗಿತು.  ಬೆಳೆಯುವ ಮಕ್ಕಳಿಗೆಂದು ಮೀಸಲಾದ ಹಾಲನ್ನೂ ನಿರಾತ್ಮಕ ಕಲ್ಲು, ಲೋಹದ ವಿಗ್ರಹಗಳಿಗೆ ಸುರಿದರು.   ಈ ಲೋಕದಲ್ಲಿ ಎಲ್ಲರೂ ಬುದ್ಧಿವಂತರೇ.  ಅವರ ಕೆಲಸಗಳಿಗೆ ಪ್ರತಿಕ್ರಿಯಿಸಿದರೆ, ಅದು ಅವರಿಗೆ ಕೆಡುಕೆನಿಸಿದರೆ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಿಬಿಡುವರು.  ಅಲ್ಲ ಎಲ್ಲಾದರೂ ಕಲ್ಲು ಬಂಡೆ ಹಾಲು ಕುಡಿಯಬಲ್ಲದೇ.  ಮಂತ್ರದಿಂದ ಮಾವಿನಕಾಯಿ ಉದುರಬಲ್ಲುದೇ?  ಈ ಸಮಯವನ್ನು ಉಪಯೋಗಿಸಿಕೊಂಡು ರಾತ್ರೋರಾತ್ರಿ ಹಣ ಮಾಡಿದ ಧೀರರು ಬಹಳ.  ಎಷ್ಟೋ ಜನಗಳು ಧರ್ಮಭೀರುಗಳೂ, ದೇವರ ಏಜೆಂಟರುಗಳೂ ಆದರು.  ವಿಜ್ಞಾನ ತಿಳಿದವರು ಈ ವಿಷಯವನ್ನು ಪರಾಮರ್ಶಿಸಿ, ಜಗತ್ತಿಗೆ ಕನ್ನಡಿ ತೋರಿದ ಮೇಲೆ, ವಿಗ್ರಹ ಹಾಲು ಕುಡಿಯುವಂತೆ ಮಾಡಿದವರೂ ಮತ್ತು ಹಾಲು ಕುಡಿಸಿದವರು ನಾಪತ್ತೆ. 

ಇಂತಹದ್ದೇ ಇನ್ನೊಂದು ಪವಾಡವನ್ನು ಈಗ ಜನಗಳ ಮುಂದಿಟ್ಟಿದ್ದಾರೆ.  ಮೊನ್ನೆ ಶುಕ್ರವಾರ ಮಧ್ಯರಾತ್ರಿಯಲ್ಲಿ (೧೮/೦೮/೨೦೦೬) ಮುಂಬಯಿಯ ಒಂದು ಬಡಾವಣೆಯಾದ ಮಾಹಿಮ್ ಪ್ರದೇಶದ ಸಮುದ್ರದಲ್ಲಿಯ ನೀರು ಉಪ್ಪಾಗಿರದೇ ಸಿಹಿಯಾಗಿದೆ ಎಂದು ಸುದ್ದಿ ಹಬ್ಬಿತು.  ಆ ಪ್ರದೇಶದ ಹತ್ತಿರದಲ್ಲೇ ಇದ್ದ ಒಂದು ಧರ್ಮ ಸ್ಥಳದವರು ಇದನ್ನು ಭಗವಂತನ ಪವಾಡವೆಂದು ಘೋಷಿಸಹತ್ತಿದರು.  ಸುತ್ತ ಮುತ್ತಲಿನ ಪ್ರದೇಶದ ಜನಗಳೆಲ್ಲರೂ ಕೈಗೆ ಸಿಕ್ಕಿದ ಪಾತ್ರೆ, ಖಾಲಿ ಬಾಟಲು, ಕ್ಯಾನ್, ಟಿನ್‍ಗಳನ್ನು ತಂದು ನೀರು ತುಂಬಿಕೊಂಡು ಹೋಗುತ್ತಿದ್ದರು.  ಕೆಲವರಂತೂ ಬಿಸ್ಲೇರಿ ಬಾಟಲನ್ನು ಕೊಂಡು ತಂದು ಅದರಲ್ಲಿಯ ನೀರನ್ನು ಹೊರ ಸುರಿದು, ಈ ಸಮುದ್ರದ ನೀರನ್ನು ತುಂಬಿಕೊಳ್ಳುತ್ತಿದ್ದರು.  ನೆರೆದ ಸಾವಿರಾರು ಮಂದಿ ಜನಗಳು ಅಲ್ಲಿಯೇ ನೀರು ಕುಡಿದರು, ಪವಿತ್ರ ಜಲಸ್ಥಾನವೆಂದು ಸ್ನಾನವನ್ನೂ ಮಾಡಿದರು.  ಅಲ್ಲಿಯೇ ವಿಶೇಷ ನಮಾಜನ್ನೂ ಮಾಡಿದರು.  ಸುದ್ದಿ ಹಬ್ಬಿ ಆ ಸ್ಥಳವೊಂದು ವಿಶೇಷ ಪವಿತ್ರಾ ಸ್ಥಳವಾಗಹತ್ತಿತು.  ಜನಗಳನ್ನು ನಿಯಂತ್ರಿಸಲು ಪೊಲೀಸರು ಬರಬೇಕಾಯಿತು.  ಲಕ್ಷಾಂತರ ಜನಗಳು ಜಮಾಯಿಸಿದ ಕಡೆ ನೀರು ತುಂಬಲು ಸಾಧ್ಯವಾಗದವರು, ಈ ಮೊದಲೇ ನೀರನ್ನು ತಂದವರ ಹತ್ತಿರ ಪವಿತ್ರ ತೀರ್ಥವೆಂದು ಸ್ವಲ್ಪ ಪಡೆದು, ಆ ನೀರು ಸಿಹಿಯೆಂದು ನಿಷ್ಕರ್ಶಿಸಿ, ಅವರಿಂದಲೇ ಬಾಟಲು, ಪಾತ್ರೆಗಟ್ಟಲೆ ನೀರನ್ನು ಕೊಂಡರು.  ಬೆಳಗಾಗುವವರೆವಿಗೆ ನಿದ್ರೆ ಮಾಡುತ್ತಿದ್ದ (ಯಥಾಪ್ರಕಾರದ ಸನ್ನಿವೇಶ) ಮುನಿಸಿಪಾಲಿಟಿಯವರು ತದನಂತರ ಬಂದು, ‘ಈ ನೀರನ್ನು ಪರೀಕ್ಷೆಗೆ ಒಳಪಡಿಸುತ್ತಿರುವೆವು, ಅಲ್ಲಿಯವರೆವಿಗೆ ಯಾರೂ ಕುಡಿಯಬಾರದು’ ಎಂದು ಎಚ್ಚರಿಕೆಯನ್ನು ಘೋಷಿಸಿದರು.  ಆರೋಗ್ಯ ಇಲಾಖೆಯವರೂ ಬಂದು ಅಲ್ಲಿ ಮೊಕ್ಕಾಂ ಹೂಡಿದರು.  (ಅವರಲ್ಲಿಯೂ ಕೆಲವರು ನೀರು ತುಂಬಿಕೊಂಡರೆಂಬುದು ಬೇರೆ ಮಾತು).  ಸುದ್ದಿ ಮಾಧ್ಯಮಗಳು ಅನವರತ ಈ ಸುದ್ದಿಯನ್ನು ಬೀರುತ್ತಿದ್ದರು. ನಂತರ ಪರೀಕ್ಷಿಸಿದ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿತು.  ಅಷ್ಟು ಹೊತ್ತಿಗಾಗಲೇ ಧರ್ಮಭೀರುಗಳು ಕೆಲಸ ಮಾಡಿಯಾಗಿತ್ತು.  ಸರಕಾರದ ಈ ಕಿವಿಮಾತು ಯಾರ ಕಿವಿಯನ್ನೂ  ಮುಟ್ಟಲಿಲ್ಲ ಅನಾರೋಗ್ಯದ ಭೀತಿ ಅವರಿಗೆ ತಟ್ಟಲಿಲ್ಲ.  ವಿಜ್ಞಾನಿಗಳೂ ಕೂಡ ಈ ನೀರು ಕಲುಷಿತವಾಗಿದೆ, ಕುಡಿಯಬಾರದೆಂದು ಹೇಳಿದರು.  ಇದಾಗಿದ್ದಿಷ್ಟೇ.  ಈ ವರ್ಷ ಎಲ್ಲೆಡೆ ಮಳೆ ಹೆಚ್ಚಾಗಿ, ಮಳೆಯ ನೀರು ಸಮುದ್ರಕ್ಕೆ ಹೊಕ್ಕಿ, ಸಮುದ್ರದ ನೀರಿನ ಲವಣಾಂಶ ಸ್ವಲ್ಪ ಕಡಿಮೆಯಾಗಿತ್ತು.  ಅದೂ ಅಲ್ಲದೇ ಸಮುದ್ರಕ್ಕೆ ಸೇರಿದ ಮುಂಬಯಿ ಮಹಾನಗರಿಯ ಗಲೀಜು ನೀರು ಇದರೊಂದಿಗೆ ಮಿಲಿತವಾಗಿ, ಸಮುದ್ರದ ಉಪ್ಪುನೀರಿಗೆ ವಿಭಿನ್ನ ರುಚಿಯನ್ನು ಒದಗಿಸಿತು.  ಇನ್ನು ಸ್ವಲ್ಪ ಹೊತ್ತು, ಸರಕಾರದವರು (ಮುನಿಸಿಪಾಲಿಟಿ) ಅಥವಾ ವಿಜ್ಞಾನಿಗಳು ಸುಮ್ಮನಿದ್ದರೆ, ತೀರ್ಥ ಜೊತೆಗೆ ಪ್ರಸಾದವನ್ನೂ ಈ ಧರ್ಮಭೀರುಗಳು ಕರುಣಿಸಿ, ಅಸಂಖ್ಯ ಮುಗ್ಧ ಜನಗಳಿಗೆ ಪರಮಾತ್ಮನ ಸ್ವರೂಪವನ್ನು ತೋರಿಸಿಬಿಡುತ್ತಿದ್ದರೇನೋ? 

ವಿಷಯವನ್ನು ವಿವೇಚಿಸಿದೇ, ಈ ಅಂಧಶ್ರದ್ಧೆಯನ್ನು ಜಗಜ್ಜಾಹೀರು ಮಾಡಿಸುವುದೇ ಈ ದೇಶದ ವಿಶೇಷತೆಯಲ್ಲವೇ?  ಸ್ವಾಮೀಜಿಗಳು ಗ್ಯಾರಂಟಿ ಕಾರ್ಡ್ ಇಲ್ಲದ ಹೆಚ್.ಎಮ್.ಟಿ ವಾಚನ್ನು ಕರುಣಿಸಬಲ್ಲರು, ಬರಿಗೈನಿಂದ ವಿಭೂತಿಯನ್ನು ತರಿಸಿ ಮುಗ್ದಜನಗಳಿಗೆ ಮಂಕು ಬೂದಿ ಚೆಲ್ಲಬಲ್ಲರು.  ಇವರ ಹಿಂದೆ ಅಸಂಖ್ಯಾತ ಶಕ್ತಿಗಳು ಸೇರಿ, ತಮ್ಮ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳಬಲ್ಲರು.  ಇಂತಹ ಕೃತ್ಯವನ್ನು ಪ್ರಶ್ನಿಸಿದ, ಡಾ|| ಕೊವೂರ್ ಅಥವಾ ನರಸಿಂಹಯ್ಯನವರಂತಹ ವಿಜ್ಞಾನಿಗಳನ್ನು ಬಲಿಪಶುವನ್ನಾಗಿ ಮಾಡುವರು.

ಹೇಳೋರು ಹೆಡ್ಡರಾದರೆ ಕೇಳೋರು ಕಿವುಡರೇ!  ಇನ್ನೂ ಅಂಧ ಶ್ರದ್ಧೆಯಲ್ಲಿಯೇ ಮುಳುಗಿದ್ದಾರಾ?  ರಾಜಕೀಯ ಶಕ್ತಿಗಳು, ಧಾರ್ಮಿಕ ಸಂಸ್ಥೆಗಳು ಜನಗಳಲ್ಲಿ ಸತ್ಯರೂಪವನ್ನು ತೋರಿಸುವುದರ ಬದಲಾಗಿ, ಇಂತಹ ಊಹಾಪೋಹಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸರಿಯೇ?  ಅದೇನು ಒಳ್ಳೆಯ ನೀರೇ?  ಮೋರಿ ನೀರು, ಮಹಾನಗರದ ಗಲೀಜನ್ನೆಲ್ಲಾ ತುಂಬಿರುವ ನೀರು ಕುಡಿಯಲು ಯೋಗ್ಯವಾದ ಸಿಹಿನೀರಾಗಲು ಸಾಧ್ಯವೇ?  ಜನಗಳಿಗೆ ಇದನ್ನು ತಿಳಿಯಲು ಸ್ವಲ್ಪವೂ ವಿವೇಚನೆ ಬರಬಾರದೇ?

ಮೇರಾ ಭಾರತ್ ಮಹಾನ್.

ವಿಭಾಗಗಳು
ಲೇಖನಗಳು

ಬೆಸ್ಟಾದ ಬೀಸ್ಟೀ ಬೆಸ್ಟ್

ಮುಂಬಯಿ ನಗರಿಗೆ ಬೇಕಿರುವ ಎರಡು ಅತ್ಯಾವಶ್ಯಕ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯ ಹೆಸರು ಬೆಸ್ಟ್, ಎಂದರೆ ಬಾಂಬೇ ಎಲೆಕ್ಟ್ರಿಕಲ್ ಸಪ್ಲೈ ಅಂಡ್ ಟ್ರಾನ್ಸ್‍ಪೋರ್ಟ್.   ಇದರಲ್ಲಿ ಎರಡು ವಿಭಾಗಗಳಿವೆ.  ಒಂದು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ನೋಡಿಕೊಂಡರೆ ಇನ್ನೊಂದು ನಗರ ಸಂಚಾರಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದು.  ಎರಡೂ ವ್ಯವಸ್ಥೆಗಳನ್ನು ಸುವ್ಯವಸ್ಥೆಯಾಗಿಟ್ಟಿರುವುದಕ್ಕೆ ಸರಿಯಾಗಿ ಆಂಗ್ಲದಲ್ಲಿ ಇದನ್ನು ಬೆಸ್ಟ್ ಎಂದು ಕರೆಯುವರೇನೋ ತಿಳಿಯದು.

ಈ ನಗರ ಸಂಚಾರದ ಬಸ್ಸುಗಳ ವಿಭಾಗದ ಬಗ್ಗೆ ನನ್ನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬಯಸುವೆ. 

ಒಟ್ಟು ೨೫ ಬಸ್ ಡಿಪೋಗಳಿರುವ ಈ ಸಂಸ್ಥೆಯು ೩೩೫ ರೂಟ್‍ಗಳಲ್ಲಿ ೩,೩೮೦ ಬಸ್ಸುಗಳನ್ನು ಓಡಿಸುತ್ತಿದೆ. 

ತಮಾಷೆಯಾದ ಒಂದು ವಿಷಯವೆಂದರೆ – ಇಲ್ಲಿ ಓಡುವ ರೂಟ್ ನಂ ೧೬೬ ನೇ ಬಸ್ಸು ಹೆಚ್ಚಿನ ಆಸ್ಪತ್ರೆಗಳನ್ನು ಹಾದು ಹೋದರೆ, ರೂಟ್ ನಂ ೧೬೧ ತೈಲಾಗಾರಗಳು ಮತ್ತು ಮುಂಬಯಿ ಜನನಿಬಿಡ ಪೂರ್ವಪ್ರದೇಶದಲ್ಲಿ ಹಾದು ಹೋಗುವುದು.  ಇದೇ ತರಹ ರೂಟ್ ನಂ ೯ ಹೆಚ್ಚಿನ ಶಾಲಾಕಾಲೇಜುಗಳನ್ನು ಹಾಯ್ದುಹೋದರೆ, ರೂಟ್ ನಂ ೧, ೬೬, ಮತ್ತು ೨೦೨ ದಿನದ ೨೪ ಘಂಟೆಗಳೂ ಸೇವಾನಿರತವಾಗಿರುವುದು. 

ಇಂತಹ ಬೆಸ್ಟ್ ಬಸ್ಸುಗಳಲ್ಲಿ ಬಹಳ ಮಹಡಿ ಬಸ್ಸುಗಳಿದ್ದವು (ಡಬಲ್ ಡೆಕರ್).  ಆದರೆ ಈಗ್ಯೆ ೫-೬ ತಿಂಗಳುಗಳಿಂದ ಡಬಲ್ ಡೆಕರ್‍ಗಳು ಮಾಯವಾಗುತ್ತಿವೆ.  ಅದರ ಬದಲಿಗೆ ಹೊಸ ಹೊಸ ಬಸ್ಸುಗಳು ಬಂದಿವೆ.  ಅಂಗವಿಕಲರೂ ಬಹಳ ಸುಲಭದಲ್ಲಿ ಹತ್ತುವಂತೆ ಕೆಳಮಟ್ಟದಲ್ಲಿವೆ.  ಇವುಗಳಲ್ಲಿ ಎಫ್‍ಎಮ್ ಚಾನೆಲ್ ಸಂಗೀತವನ್ನು ಹಾಕುವರು.  ಅದಲ್ಲದೇ ಬಸ್ಸಿನಿಂದಲೇ ದೂರವಾಣಿ ಕರೆಯನ್ನೂ ಮಾಡಬಹುದು.  ಈ ಬಸ್ಸುಗಳಿಗೆ ಇಂಜಿನ್ ಹಿಂಭಾಗದಲ್ಲಿರುವುದು.  ಗ್ಯಾಸ್ ಮೂಲಕ ಓಡಿಸುವ ಬಸ್ಸುಗಳೂ ಬಹಳ ಇವೆ. 

ಕೆಲವು ಬಸ್ಸುಗಳ ನಂಬರ್ ಕೆಂಪು ಬಣ್ಣದ್ದಿದ್ದರೆ ಇನ್ನು ಕೆಲವದ್ದು ಬಿಳಿ ಬಣ್ಣದ್ದಿರುವುದು.  ಬಿಳಿ ಬಣ್ಣದ ಸಂಖ್ಯೆ ಸಾಧಾರಣ ಬಸ್ಸುಗಳದ್ದಾದರೆ, ಕೆಂಪು ಬಣ್ಣಗಳದ್ದು, ವಿಶೇಷ, ನಿಯಮಿತ ಮತ್ತು ಪಾಯಿಂಟ್ ಟು ಪಾಯಿಂಟ್ ಓಡುವ ಬಸ್ಸುಗಳು.    ಕೆಲವು ರೂಟ್‍ಗಳಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನೂ ಓಡಿಸುವರು. 

ಬೇರೆಯ ಊರುಗಳಿಗೆ ಹೋಲಿಸಿದರೆ ಇಲ್ಲಿಯ ಬಸ್ಸುಗಳ ದರ ಬಹಳ ಹೆಚ್ಚಿರುವುದು.  ಅತಿ ಕಡಿಮೆ ದರ ರೂಪಾಯಿ ೪ ಆದರೆ, ದೂರಕ್ಕೆ ತಕ್ಕಂತೆ ೧೬ ರಿಂದ ಇಪ್ಪತ್ತು ರೂಪಾಯಿಗಳವರೆವಿಗೂ ದರವಿರುವುದು.  ಹವಾ ನಿಯಂತ್ರಿತ ಬಸ್ಸುಗಳಲ್ಲಿ ರೂಪಾಯಿ ೩೫ ರಿಂದ ೬೫-೭೦ ರೂಪಾಯಿಗಳವರೆವಿಗೆ ದರವಿರುವುದು. 

ಇತ್ತೀಚೆಗೆ ಬಿಂಡಿ ಬಜಾರಿನಲ್ಲಿ ಒಂದು ಬಸ್ಸು ಒಬ್ಬ ಮುದುಕಿಗೆ ಡಿಕ್ಕಿ ಹೊಡೆದು ಅವಳು ಸಾವನ್ನಪ್ಪಿದಳು.  ಕೆಲವು ದಿನಗಳ ಹಿಂದೆ ಕೊಲಾಬಾದ ಬದ್‍ವಾರ್ ಪಾರ್ಕಿನ ಬಳಿ ಬೆಳಗಿನ ಜಾವ ಹೋಗುತ್ತಿದ್ದ ಬಸ್ಸೊಂದು ಹಾದಿ ತಪ್ಪಿ ಫುಟ್‍ಪಾತ್ ಹತ್ತಿ ರಸ್ತೆಯಲ್ಲಿ ಮಲಗಿದ್ದ ೪ ಜನಗಳ ಕಾಲುಗಳ ಮೇಲೆ ಹಾದು ಹೋಗಿತ್ತು.  ಈ ಸುದ್ದಿಯನ್ನು ಕೇಳಿದ ಕೂಡಲೇ ನನಗೆ ನೆನಪಾದದ್ದು ಶಂಕರನಾಗ್ ಅವರ ಆಕ್ಸಿಡೆಂಟ್ ಚಿತ್ರ. 

ಬಿಟಿಎಸ್‍ಗೂ ಮತ್ತು ಬೆಸ್ಟ್‍ಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆ