ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲ್ಯಾರಿಂದಲೂ ಆಗದೇ?
ಆಗದು …
ಏನೇ ಮಾಡಬಲ್ಲ, ಏನನೂ ತಡೆಯಬಲ್ಲ
ಹುಲುಮಾನವನಿಂದಂತೂ ಅದಾಗದು!
ಹದಿಮೂರರಂತಾಗಿರಲಿಲ್ಲ ಹದಿನಾಲ್ಕು
ಹದಿನಾಲ್ಕರಂತಾಗುವುದಿಲ್ಲ ಹದಿನೈದು
ಎಲ್ಲ ವರುಷಗಳಲ್ಲೂ ಏಳು ಬೀಳು
ಬರುವ ವರುಷದಲಿ ಹಾಗಾಗದಿರಲೆಂದು ಕೇಳು
ಕಣ್ಣಿಗೆ ಕಂಡುದು ನೋವು ಸಾವುಗಳು ಸಾವಿರಾರು
ಕಣ್ಣಿಗೆ ಕಾಣದದು ನಲಿವು ಜನನಗಳು ಲಕ್ಷಾಂತರ
ಕಂಡುದರಿಂದ ಮನಕೆ ದುಃಖ ದುಮ್ಮಾನ ಆತಂಕ
ಕಾಣದುದರಿಂದ ಎಲ್ಲವೂ ನಿರಾತಂಕ
ಬಲ್ಲವರು ನುಡಿದುದು
ಬದಲಾವಣೆಯೇ ಜಗದ ನಿಯಮ
ಮೋಡದಿ ಕಾಲೂರಿ ನಡೆಯುವುದೂ
ಇನ್ನೊಂದು ಆಯಾಮ
ಹರಿದು ಹಂಚಿ ಹೋಗಿಹುದು ಈ ದಿರಿಸು
ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು
ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ
ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ
ಹೊಸ ವರುಷದಾಗಮನದಿ ಮನಗಳಲಿ ಹರುಷ
ಇದೇ ಎಲ್ಲರ ನಿರೀಕ್ಷೆ
ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ
ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ
ಬಂದುದೆಲ್ಲವನೂ ಸ್ವೀಕರಿಸು
ಬರದುದಕ್ಕಾಗಿ ಹಪತಪಿಸುವುದು ಸಲ್ಲ
ಸುಖ-ದುಃಖಗಳೆಲ್ಲವೂ ಸಮಾನ
ಅದ ತಿಳಿದು ಮುನ್ನಡೆಯಲಿ ಜಮಾನ