ವಿಭಾಗಗಳು
ಕವನಗಳು

ನಿಸರ್ಗ

ಅಂಟಿಯೂ ಅಂಟದಂತಿಹುದು
ತನ್ನೆದೆಯ ಮೇಲಿನ ನೀರ ಗುಳ್ಳೆಯ ಹೊರುವುದು
ಹನಿ ಹನಿಯಾಗಿ ಬೀಳುವುದ ತಡೆವುದು
ತಡೆದು ಬಾಯಾರಿದವಗೆ ಉಣಿಸುವುದು

ತನಗೆ ಮಾತ್ರ ಹನಿ ಮಾತ್ರವೂ ಹಿಡಿದಿಟ್ಟುಕೊಳ್ಳದು
ಆರೈಕೆ ಇಲ್ಲದೆ ನಿಸರ್ಗದಿ ಬೆಳೆವುದು
ಮಂದಿ ಮಂದೆಗಳಿಗೆ ಉಣಿಸುವುದು
ಅನಂತ ಆಗಸ ಏರುವ ಛಾತಿ ಇದ್ದರೂ ಕೆಳಗೇ ನೋಡುತಿಹುದು

ಸ್ವಾರ್ಥಿಗೆ ನಿಸ್ವಾರ್ಥದರಿವು ಮೂಡಿಸುವುದು
ಎನಗಿಂತ ಕಿರಿಯರಿಲ್ಲ
ಎನಗೆಲ್ಲ ಹಿರಿಯರೆಲ್ಲ ಎಂದು ಸಾರುವುದು
ಇಂದಿದ್ದು ನಾಳೆಗೆ ಹೇಳಹೆಸರಿಲ್ಲದೆ ಹೋಗುವುದು

ತಡವಲು ಗಡುಸಿನಂತೆ ತೋರುವುದು
ಚಿವುಟಲು ಹಸುಗೂಸಿನಂತೆ ಕಣ್ಣೀರ್ಗರೆವುದು
ಎದುರಾಡದು, ಹಿಂಸಿಸದು
ಉತ್ತಮ ಪಾರಮಾರ್ಥಿಕ ಚಿಂತನೆಗೆ ಒತ್ತು ನೀಡುತಿಹುದು

ಅಂಟಿಯೂ ಅಂಟದಿರು
ಯಾರಿಗೆ ಯಾರೂ ಅಲ್ಲ
ಆತ್ಮಕೆ ನಂಟಿಲ್ಲ ಅಂಟಿಲ್ಲ ಎಂಬುದ
ಸುಲಭದಿ ಜೀವನ ಪರಿಯ ತಿಳಿ ಹೇಳುವುದು

ಇದರಿಂದ ಕಲಿವ ಪಾಠ ಇಹುದಲ್ಲವೇ?
ನಿಸರ್ಗದ ಅಂಶವಿದು ದೈವಾಂಶವಲ್ಲವೇ?
ಇದ ತಿಳಿವುದು ಸುಲಭವಲ್ಲವೇ
ನಿಸರ್ಗವ ರಕ್ಷಿಸೋಣ – ನಮ್ಮನು ನಾವು ರಕ್ಷಿಸೋಣ

ವಿಭಾಗಗಳು
ಕವನಗಳು

ದೈವ ಸ್ವರೂಪಿ

ಅಂತರ್ಜಾಲ ನಿಸರ್ಗವೇ?
ನಿಸರ್ಗ ದೇವರೇ?
ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ
ಅಂತೆಯೇ ಅಂತರ್ಜಾಲ ಇಂದ್ರಿಯಗಳಿಗೆ ನಿಲುಕದು
ಯಾರ ಕೈಗೂ ಸಿಲುಕದು
ಆದರೂ ತನ್ನ ಕರಾಮತ್ತು ತೋರುವುದು

ಜಾಲದಿ ಸಿಲುಕಿದವರು ಒಬ್ಬರನೊಬ್ಬರು
ನೋಡದವರು, ಅರಿಯದವರು,
ಆದರೂ ಚಿರಪರಿಚಿತರು
ಚಾಟು ಪದ್ಯ ತಿಳಿಯದ, ಚಾಟ್ ತಿನ್ನದ
ಮಂದಿಯೂ ಚಾಟಿಸುವವರು ಚಿರಪರಿಚಿತರಂತೆ

ಯಾರ ಮನೆಯನೂ ಭಿಡೆಯಿಲ್ಲದೇ ಹೊಕ್ಕುವ
ಎಲ್ಲರ ಮನದಲೂ ನೆಲೆಸಿ ನಲಿದಾಡುವ
ಹೃದಯಕೆ ಲಗ್ಗೆ ಹಾಕುವ
ತಿಳಿವಿಗೆ ಬರದೇ ಪ್ರೇಮವ ಬೆಸೆಯುವ
ತಿಳಿಯದೆಯೇ ಪರಕಾಯ ಪ್ರವೇಶಿಸುವ
ಪರಮ ಶಕ್ತನ ಸ್ವರೂಪ

ನಯವಾಗಿ ಹಿತಚಿಂತಕವಾಗಿ
ತಿಳಿವಿಗೆ ಬರದೇ ವಂಚಿಸುವ
ಎಲ್ಲರೊಳಲೊಂದಾಗಿ ಎಲ್ಲರ ಒಂದಾಗಿಸಿ
ಒಂದನು ನುಚ್ಚು ನೂರಾಗಿಸಿ
ಸಿಗಿದು ಬಗೆದು ಅಟ್ಟಹಾಸಗೈಯುವ
ವೀರ ಪರಾಕ್ರಮಿಯವತಾರ

ಕ್ಷಣಮಾತ್ರದಲಿ
ಎಲ್ಲ ವಿಷಯಗಳ ಬಲ್ಲ ಪಂಡಿತನಂತೆ
ಸೂಕ್ತ ಉತ್ತರ ಸಲಹೆ ಒದಗಿಸುವ
ಭೂತ ಭವಿಷ್ಯತ್ತನು ನಿಖರವಾಗಿ ತಿಳಿಸುವ
ಮಿತ್ರ, ತತ್ವಜ್ಞಾನಿ, ದಾರಿದೀಪ
ದೈವಾಂಶ ಸಂಭೂತನಲ್ಲದಿನ್ನೇನು?

ಕ್ಷಣ ಮಾತ್ರದಲಿ ಒಂದೆಡೆಯಿಂದ ಇನ್ನೊಂದೆಡೆಗೆ
ಹಾರುವ ಹಾರಿಸುವ ಶಕ್ತಿಯ ಸ್ವರೂಪ
ಅಶರೀರವಾಣಿ ಮೂಡಿಸುವ
ಕೂತಲ್ಲೇ ವಿಶ್ವರೂಪ ತೋರಿಸುವ
ಬಗೆ ಬಗೆ ಜ್ಞಾನಾರ್ಜನೆಯ ಸಾಧನ
ದೇವನಲ್ಲದೇ ಮತ್ತೇನು.

ಈಗ ಘಂಟಾಘೋಷವಾಗಿ ಹೇಳಬಲ್ಲಿರೇ
ಅಂತರ್ಜಾಲ ನಿಸರ್ಗದ ಅಂಶ
ದೈವತ್ವದ ಸ್ವರೂಪ.

ವಿಭಾಗಗಳು
ಕವನಗಳು

ನಿಶ್ಶಕ್ತ ಮುಂಜಾವು

ಮುಂಜಾವಿನ ಮಬ್ಬುಗತ್ತಲು
ಮಂಜು ಕವಿದ ಬಿಳಿಪರದೆ
ಎದುರೇನೂ ಕಾಣದು
ಕಣ್ಣು ಉಜ್ಜಿ ಉಜ್ಜಿ ಹೆಜ್ಜೆ ಇರಿಸಬೇಕು

ಕಂದೀಲಿನ ಕಿರುಗಣ್ಣ ನೋಟದಾನ
ಅಬ್ಬೇಪಾರಿ ವಿದ್ಯುತ್ತಿನ
ಯುಕ್ತಿಯಿಲ್ಲದ ಶಕ್ತಿಯ ಕಿರುದಾನ
ನೋಡುಗರಿಗೆ ದಾನದಷ್ಟೇ ದೃಷ್ಟಿ

ಶತಪಥಗಳಿಂದಾಚೆ ಕಾರ್ಗತ್ತಲು
ಎದುರಾದುದಕೆ ಚೇತನದ ಢಿಕ್ಕಿ
ಕಣ್ಣಿದ್ದೂ ಕುರುಡುತನಕೆ ಸಿಕ್ಕಿ
ರೆಕ್ಕೆಯಿದ್ದೂ ಹಾರಲಾರದಿದು ಹಕ್ಕಿ

ಗಾಡಿಯೇರಿರುವ
ಸಾಮಾನು ಸರಿರಾತ್ರಿವರೆವಿಗೆ
ಗಿರಾಕಿಗಳ ಮನ ಒಲಿಸಲು ಪ್ರಯತ್ನಿಸಿ
ಸುಸ್ತಾಗಿ
ಹೊದ್ದು ಮಲಗಿದೆ
ಛಳಿಗೆ ಅಲ್ಲಾಡಲು ಆಗದಾಗಿದೆ

ಕ್ಷಣ ಮಾತ್ರದಲಿ
ನೇಸರನ ಆಗಮನ
ಯುಕ್ತಿಯೊಡಗೂಡಿದ ಶಕ್ತಿಯ ವರದಾನ
ಮಂಜಿನ ಪಲಾಯನ
ನಿಶ್ಶಕ್ತರಿಗೂ ಶಕ್ತಿಯ ಫಲಪ್ರದಾನ

ವಿದ್ಯುತ್ತಿಗಿಹುದು ನೇಸರನ ಶಕ್ತಿ
ಆದರಿಲ್ಲ ಆತನ ಯುಕ್ತಿ
ಅಂಧಕಾರ ಜಗಕೆ ಕೊಡಬಲ್ಲ ಮುಕ್ತಿ

ಕಗ್ಗತ್ತಲು ತುಂಬಿರುವ
ಹೊರಗಣ್ಣ ತೆರೆದರೇನು
ಮುಚ್ಚಿದರೇನು
ಅಜ್ಞಾನದ ಮಂಜಿನಿಂದ
ಏನೂ ಕಾಣದು – ಅರಿವಾಗದು
ಪ್ರಕೃತಿ ದೈವ ನೇಸರನಿಂದಲ್ಲವೇ
ಒಳಗಣ್ಣು ತೆರೆವುದು?

ನೇಸರನ ನಂಬು
ಒಳಗಣ್ಣ ತೆರೆ

ವಿಭಾಗಗಳು
ಕವನಗಳು

ನನ್ನವಳು

ವಾರೆ ನೋಟದೆ ಮನಸೆಳೆದ ಚೆಲುವೆ
ಸೂಜಿಗಲ್ಲಿನ ಆ ನೋಟಕೆ ಮನಸೋತೆ
ಮಕರಂದ ತುಂಬಿದ ಅಧರದ ಬಣ್ಣ
ನೋಡುತ್ತಲೇ ನಾನಾದೆ ಬಲು ಸಣ್ಣ

ಮೊದಲ ದಿನ ಅವಳು ಅಲ್ಲಿ ಬಸ್ ಸ್ಟಾಪಿನಲಿ
ನಾನು ಅವಳ ಹಿಂದೆ ಉಗುರು ಕಡಿಯುತಲಿ
ಆ ಕೊಂಕು ನೋಟದೆ ನನ್ನ ಕೊಲ್ಲುತಿಹೆ
ಮಾಗಿಯ ಚಳಿಯಲು ನಾ ಬೆವತಿಹೆ

ಎರಡನೆಯ ದಿನ ಮತ್ತದೇ ಕುಡಿಗಣ್ಣ ನೋಟ
ಇದೇನಿದು ದಿನವೂ ಮಾದಕತೆಯ ಮಾಟ
ನೇರವಾಗಿ ನೋಡಲು ಆ ವಾರೆನೋಟದ ಕಣ್ಣ
ನಿಜವಾಯಿತು ಅವಳಿಗಿಹದು ಮಾಲ್ಗಣ್ಣ

ಮೂರನೆಯ ದಿನ ನಾ ಅಲ್ಲಿ ಹೋಗದಿರಲು
ಅವಳೇ ನನ್ನ ಮನೆಯ ಮುಂದೆ ಬಂದಿರಲು
ಹೆದರಿ ನಾ ಓಡಿದೇ ಹಿತ್ತಲ ಬಾಗಿಲಿನಿಂದ
ಅಮ್ಮ ಹೇಳಿದಳು ಅವಳೇ ನಿನ್ನ ಸುನಂದ

ವಿಭಾಗಗಳು
ಕವನಗಳು

ಬದುಕು

ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ)
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ

(ತಮಿಳಿನಲ್ಲಿ ಕೆಲವರ ತತ್ವಗಳನ್ನು ವೇಂಗಾಯ್ ಎಂದು ಆಡಿಕೊಳ್ಳುವುದಿದೆ)

ಬದುಕೂ ಬಲು ಘಾಟು,
ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ ನೀರು
ದಿನಗಳು ಸವೆಯುತ್ತಲೇ ಇರುವುದು
ಆದರೂ ಸಾರ್ಥಕ್ಯದ ದಿನಗಳು ಕಾಣಸಿಗದು
ಬದುಕೂ ಸವಿಯಲು ಬಲು ಆನಂದ
ಆ ಸವಿಯ ಹಿಂದೆಯೇ ದುರ್ವಾಸನೆ (ಕರ್ಮಫಲ ಎನ್ನೋಣವೇ)

ನನ್ನ ಬದುಕು ಒಂದು ಬ್ಯಾಲೆನ್ಸ್ ಶೀಟು
ಬರುವುದೆಷ್ಟೋ ಕಾಣುವಂತಹ ಡೆಬಿಟ್ಟುಗಳು
ಅಂತೆಯೇ ಬರುತಿಹದು ಗುಡ್ ವಿಲ್ ನಂತಹ ಕ್ರೆಡಿಟ್ಟುಗಳು
ಬದುಕಿನ ಕೊನೆಗೆ ತನಗೆ ತಾನೇ ಬ್ಯಾಲೆನ್ಸ್ ಆಗುವ ಶೀಟು (ಪತ್ರ)

ಇದರ ಮಧ್ಯೆ ಕೊಟ್ಟು ತೆಗೆದುಕೊಳ್ಳುವ
ಎಡ ಬಲದಲ್ಲಿ ಬರುವಂತಹ ಕಾಂಟ್ರಾ ಎಂಟ್ರಿಗಳು
ಈ ಶೀಟು ತಯಾರಾಗುವುದು ಒಮ್ಮೆ ಮಾತ್ರ
ಜೀವನದ ಕೊನೆಯಲ್ಲಿ ಶಿಲ್ಕು ಮಾತ್ರ ಶೂನ್ಯ

ವಿಭಾಗಗಳು
ಕವನಗಳು

ಪತ್ತೇದಾರಿಕೆ

ಪತ್ತೇದಾರಿಕೆ

18/09/2005

ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ್ಗೆಯ 8.15ಕ್ಕೆ. ಸಾಮಾನ್ಯವಾಗಿ ನಾನು 8.10ಕ್ಕೆ ಅಲ್ಲಿಯ ಕ್ಯೂನಲ್ಲಿ ನಿಲ್ಲುವೆ. ನಾನು ಹೋಗಿ ನಿಲ್ಲುವ ವೇಳೆಗೆ ಸರಿಯಾಗಿ ಒಂದು ನಾಯಿ ಎಲ್ಲಿಂದಲೋ ಬಂದು ನನ್ನ ಮುಂದೆ ಮಲಗಿಕೊಳ್ಳುವುದು. ನಾನು ಇಲ್ಲಿಯವರೆವಿಗೂ ಇದನ್ನು ಗಮನಿಸಿರಲಿಲ್ಲ.
ಮೊನ್ನೆ ಒಂದು ದಿನ ಆ ನಾಯಿ ನನ್ನ ಮುಂದೆ ಬಂದು ಮಲಗಲು, ನನ್ನ ಜೊತೆ ಇದ್ದ ಎಸ್.ಬಿ.ಐ.ನ ಸ್ನೇಹಿತರು (ಇದನ್ನೆಲ್ಲಾ ಬಹಳ ದಿನಗಳಿಂದ ಗಮನಿಸಿದ್ದರು) ಆ ನಾಯಿಗೆ ನಾನು ಯಾವತ್ತಾದರೂ ಬಿಸ್ಕತ್ ಅಥವಾ ಇನ್ನೇನಾದರೂ ತಿಂಡಿ ಹಾಕಿದ್ದೆನಾ ಎಂದು ಕೇಳಿದರು.
ಇಲ್ಲವಲ್ಲಾ, ಎಂದು ನಾನು ಮರುತ್ತರಿಸಿದೆ.
ಮುಂದೆ ಹೆಚ್ಚಿನ ಮಾತನಾಡದೇ ಅವರು ಹೀಗೆ ಹೇಳಿದರು, ‘ಆ ನಾಯಿಯನ್ನು ನೀವು ಹಾಗೇ ಗಮನಿಸಿ ನೋಡಿ’.
ನೋಡಿದೆ, ಅದು ಮಾಮೂಲಿಯಂತಹ ಬೀದಿ ನಾಯಿ. ನಡೆಯುವಾಗ ಒಂದು ಕಾಲು ಕುಂಟುತ್ತಿತ್ತು. ಕುತ್ತಿಯ ಭಾಗದಲ್ಲಿ ಗಾಯವಾಗಿ ರಕ್ತ ಒಸರುತ್ತಿತ್ತು. ಸ್ವಲ್ಪ ಅಸಹ್ಯ ತರಿಸುವಂತಹ ಪ್ರಾಣಿ.
ನನ್ನ ಬಸ್ ಬಂದ ಕೂಡಲೇ ನನ್ನ ಪಾಡಿಗೆ ನಾನು ಹೊರಟು ಹೋಗುತ್ತಿದ್ದೆ. ಮತ್ತೆ ಸಂಜೆ ಮನೆಗೆ ಬರುವಾಗ ಅದೇ ಹಾದಿಯಲ್ಲಿ ಬಂದರೂ ಆ ನಾಯಿಯನ್ನು ಮತ್ತೆ ನೋಡುತ್ತಿರಲಿಲ್ಲ ಹಾಗೂ ಅದರ ನೆನಪೂ ಬರುತ್ತಿರಲಿಲ್ಲ. ಮೊನ್ನೆ ಬೆಳಗ್ಗೆ ನಡೆದ ನನ್ನ ಸ್ನೇಹಿತರು ಹೇಳಿದ ಮೇಲೆ ಅದೇಕೋ ಆ ನಾಯಿಯ ಮೇಲೆ ವಿಪರೀತ ಕುತೂಹಲವಾಗಿ, ಸಂಜೆ ಆ ನಾಯಿಗಾಗಿ ಸ್ಟೇಷನ್ನಿನ ಅತ್ತಿತ್ತ ಹುಡುಕಿದೆ. ಉಂಹೂಂ, ಎಲ್ಲಿಯೂ ಅದರ ಸುಳಿವೇ ಇಲ್ಲ.

20/09/2005

ನಿನ್ನೆಯ ದಿನ ಬೆಳಗ್ಗೆ ಬೆಂಗಳೂರಿಗೆ ಹೋಗುವ ಸಲುವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಿಸಲು ಹೋಗಿ, ಬಸ್ ನಿಲ್ದಾಣದ ಬಳಿಗೆ 15 ನಿಮಿಷಗಳು ತಡವಾಗಿ ಬಂದೆ. ನನ್ನ ಸ್ನೇಹಿತರು ಮುಂಚಿನ ಬಸ್ನಲ್ಲಿ ಹೋಗಿದ್ದರಾಗಿ, ಎಲ್ಲ ಅಪರಿಚಿತರೇ ಇದ್ದರು. ಬಹುಶ: ಆ ನಾಯಿ ಎಲ್ಲೋ ಹೋಗಿದೆ ಎಂದೆಣಿಸಿದ್ದೆ. ಆದರೆ ನನ್ನೆಣಿಕೆ ಸುಳ್ಳಾಗಿತ್ತು. ನಾನು ಸರತಿ ಸಾಲಿಗೆ ಬಂದು ನಿಲ್ಲುವ ಸಮಯಕ್ಕೆ ಸರಿಯಾಗಿ, ಆ ನಾಯಿ ನನ್ನ ಮುಂದೆ ಬಂದು ಮಲಗಿತು. ಅರ್ರೇ! ಇದೇನಿದು ಕಾಕತಾಳೀಯ ಎಂದು ಅನ್ನಿಸಿತು. ಮತ್ತೆ ಹೆಚ್ಚಿನದೇನನ್ನೂ ಯೋಚಿಸದೇ ಕಛೇರಿಗೆ ಹೋದೆ. ಸಂಜೆ ವಾಪಸ್ಸಾಗುವಾಗ ಆ ನಾಯಿಗಾಗಿ ಮತ್ತೆ ಹುಡುಕಾಟ ಪ್ರಾರಂಭಿಸಿದೆ. ಮತ್ತೆ ಅದರ ಪತ್ತೆಯೇ ಇಲ್ಲ.
ಇಂದು ಬೆಳಗ್ಗೆ ಬೇಕೆಂತಲೇ ಅರ್ಧ ಘಂಟೆ ತಡವಾಗಿ ಬಸ್ ನಿಲ್ದಾಣಕ್ಕೆ ಬಂದೆ. ಸರತಿ ಸಾಲಿಗೆ ಬಂದಾಕ್ಷಣ ನಾಯಿ ಮತ್ತೆ ನನ್ನ ಮುಂದೆ ಬಂದು ಮಲಗಿತು. ಇದ್ಯಾವ ಜನ್ಮದ ಸಂಬಂಧವಪ್ಪ, ಎಂದು ಚಿಂತಿಸ ಹತ್ತಿದೆ. ತಲೆಗೆ ಮೊದಲು ಹೊಳೆದದ್ದು, ಇದೇನು ಸತ್ತ ನನ್ನಪ್ಪನಾ ಅಥವಾ ನನ್ನಮ್ಮನಾ. ಅಥವಾ ಈ ಹಿಂದಿನ ಜನ್ಮದಲ್ಲಿ ನಾವಿಬ್ಬರೂ ಒಟ್ಟಿಗೇ ಇದ್ದೆವಾ? ಸರಿ ಬಸ್ ಬಂದ ತಕ್ಷಣ ಎಲ್ಲವನ್ನೂ ಮರೆತು ಕಛೇರಿಗೆ ಹೋದೆ. ಅಲ್ಲಿ ನನ್ನ ಸ್ನೇಹಿತನ ಹತ್ತಿರ ಈ ವಿಷಯದ ಬಗ್ಗೆ ಚರ್ಚಿಸಿದೆ. ಅವನು ಹೇಳಿದ,
‘ಯಾವುದೋ ಬಾದರಾಯಣ ಸಂಬಂಧವಿರಬೇಕು. ಹಿಂದಿನ ಜನ್ಮದಲ್ಲಿ ನೀನು ಅದನ್ನು ಕಾಪಾಡಿರಬೇಕು, ಅಥವಾ ಅದು ನಿನ್ನನ್ನು ಮುಂದಿನ ಜನ್ಮದಲ್ಲೂ ರಕ್ಷಿಸುವೆನೆಂದು ಪಣ ತೊಟ್ಟಿರಬೇಕು. ಅದಕ್ಕೇ ಅದು ಹೀಗೆ ನಿನ್ನ ಮುಂದೆ ಬಂದು ಮಲಗುತ್ತಿದೆ. ಅದಕ್ಕೆ ಪ್ರತಿ ದಿನ ಬಿಸ್ಕತ್ ಅಥವಾ ತಿಂಡಿಯನ್ನಾದರೂ ಹಾಕು, ಮಾರಾಯ’.
ನಾನು ಅದಕ್ಕೆ ತಿಂಡಿ ಹಾಕಿದರೆ ಜನ ಸುಮ್ಮನಿದ್ದಾರೆಯೇ? ಮೊದಲೇ ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿ. ಪ್ರಾಣಿಗಳನ್ನು ಅದರಲ್ಲೂ ಬೀದಿ ಪ್ರಾಣಿಗಳನ್ನು ದೂರವಿಡಿ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು ಎಂದೇ ತೋಚುತ್ತಿಲ್ಲ. ಇನ್ನೂ ಒಂದೆರಡು ದಿನ ಹೀಗೆಯೇ ಆಗುವುದಾ ಎಂದು ಕಾದು ನೋಡುವೆ.

ಮತ್ತೆ ಇಂದು ಸಂಜೆ ಹದಿನೈದು ನಿಮಿಷಗಳ ಕಾಲ ಆ ನಾಯಿಗಾಗಿ ಅಲ್ಲಿ ಇಲ್ಲಿ ಹುಡುಕಿದೆ. ಅದರ ಪತ್ತೆಯಿಲ್ಲ. ನನ್ನ ಸ್ನೇಹಿತನ ಅಣಕು ಮಾತಿಗೆ ಗುರಿಯಾದೆ, ‘ಎಲ್ಲ ಕಡೆಯಲ್ಲೂ ನಾಯಿ ತನ್ನ ಯಜಮಾನನಿಗಾಗಿ ಹುಡುಕಿದರೆ, ನೀನು ಆ ನಾಯಿಗಾಗಿ ಹುಡುಕಾಟ ನಡೆಸಿದ್ದೇಯಲ್ಲ, ಬಹುಶ: ಹಿಂದಿನ ಜನ್ಮದಲ್ಲಿ ನೀನು ನಾಯಿಯಾಗಿ ಅದು ನಿನ್ನ ಯಜಮಾನನಾಗಿದ್ದರಬೇಕು’.

ನಿಮಗೇನಾದರೂ ಇಂತಹ ಅನುಭವವಾಗಿದೆಯೇ?

22/09/2005

ಇವತ್ತಿನ ನನ್ನ ಅನುಭವ.
ಇವತ್ತು ಇನ್ನೂ 5 ನಿಮಿಷಗಳು ಮುಂಚಿತವಾಗಿ ಚರ್ಚ್‍ಗೇಟ್‍ಗೆ ಬಂದೆ. ಸ್ಟೇಷನ್ನಿನ ಆಚೆ ಬರುವ ಬಾಗಿಲಿನಿಂದ ಒಮ್ಮೆ ಇಣುಕಿ ನೋಡಿದೆ. ಅದೇ ನಾಯಿ ಅಲ್ಲಿ ಹತ್ತಿರದ ಒಂದು ಡಬ್ಬ ಅಂಗಡಿಯ ಮುಂದೆ ಕುಳಿತಿತ್ತು. ನಾನು ಆ ಅಂಗಡಿಯ ಕಡೆ ಹೊರಟೆ. ಆಗ ಆ ನಾಯಿ ಬಸ್ ನಿಲ್ದಾಣದ ಕಡೆಗೇ ಹೊರಟಿತು. ನನ್ನ ಮುಖ ಒಮ್ಮೆ ನೋಡಿ, ನನ್ನನ್ನೇ ಹಿಂಬಾಲಿಸಿತು. ಆ ಅಂಗಡಿಯವನನ್ನು ಕೇಳಿದೆ, ‘ಈ ನಾಯಿ ಎಷ್ಟು ದಿನಗಳಿಂದ ಇಲ್ಲಿದೆ, ಎಲ್ಲಿಂದ ಬರತ್ತೆ, ಎಲ್ಲಿ ಹೋಗತ್ತೆ, ಇದಕ್ಕೆ ಆಹಾರ ಯಾರು ಕೊಡ್ತಿದ್ದಾರೆ’ ಅಂತ.
ಅವನು ಹೇಳಿದ್ದು, ‘ಯೇಹ್ ಮಾಲೂಮ್ ನಹಿನ್ ಸಾಬ್, ದೋ ಮಹೀನೇ ಸೆ ದೇಖ್ ರಹಾ ಹೂನ್ ರೋಜ್ ಸುಬಹ್ ಆಟ್ ಬಜೆ ಇದರ್ ಆಕೆ ಬೈಠಾ ರಹ್ತ ಹೈ. ಬಾದ್ ಮೇ ಓ ಬಸ್ ಸ್ಟಾಪ್ ಪರ್ ಜಾತ ಹೈ, ಫಿರ್ ಕಲ್ ಸುಬಹ್ ತಕ್ ನಹಿನ್ ದಿಖ್ತಾ ಹೈ, ಬಸ್ ಇತ್ನಾಹಿ ಮಾಲೂಮ್ ಹೈ’. (ಇದು ನನಗೆ ಗೊತ್ತಿಲ್ಲ ಸ್ವಾಮಿ, ಎರಡು ತಿಂಗಳಿಂದ ನಾನು ನೋಡ್ತಾ ಇದ್ದೀನಿ, ಪ್ರತಿ ದಿನ 8 ಘಂಟೆಗೆ ಇದು ಇಲ್ಲಿ ಬಂದು ಕುಳಿತುಕೊಳ್ಳತ್ತೆ. ನಂತರ ಆ ಬಸ್ ನಿಲ್ದಾಣದ ಹತ್ತಿರ ಹೋಗತ್ತೆ. ಮತ್ತೆ ಮರುದಿನದ ಬೆಳಗ್ಗೆಯ ತನಕ ಕಾಣಿಸುವುದಿಲ್ಲ ).
ನಂತರ ನಾನು ಬಸ್ ನಿಲ್ದಾಣಕ್ಕೆ ಹೋದೆ. ಅದೂ ನನ್ನ ಹಿಂದೆಯೇ ಬಂದು ಬಸ್ ನಿಲ್ದಾಣದ ತನ್ನ ಮಾಮೂಲೀ ಜಾಗದಲ್ಲಿ ಕುಳಿತಿತು. ಬಸ್ ಬಂದ ಮೇಲೆ, ಹಿಂದಿನಿಂದ ಹತ್ತಿದವನು, ಮುಂದಿನಿಂದ ಇಳಿದು, ಸ್ವಲ್ಪ ದೂರ ಮರೆಯಲ್ಲಿ ನಿಂತು ನೋಡ್ತಿದ್ದೆ. ಬಸ್ ಹೊರಟು ಹೋದಮೇಲೆ, ಆ ನಾಯಿ ಸ್ವಲ್ಪ ದೂರದವರೆವಿಗೆ, ಬಸ್ಸನ್ನು ಹಿಂಬಾಲಿಸಿ ಮತ್ತೊಂದು ಅಂಗಡಿಯ ಮುಂದೆ ಹೋಗಿ ಕುಳಿತಿತು. ಆ ಅಂಗಡಿಯಾತನ ಬಳಿ ಹೋಗಿ ವಿಚಾರಿಸಲಾಗಿ, ಅವನು ಹೇಳಿದ್ದು ಇದು ಪ್ರತಿ ದಿನ ಬರತ್ತೆ, ತಾನು ಬಿಸ್ಕತ್ ಹಾಕ್ತೀನಿ. 5-10 ನಿಮಿಷಗಳವರೆವಿಗೆ ಇಲ್ಲೇ ಇದ್ದು ನಂತರ ಸಮುದ್ರದ ಕಡೇ ಹೋಗತ್ತೆ. ಮತ್ತೆ ಅದನ್ನು ನೋಡಿಲ್ಲ ಎಂದ. ನಂತರ ಆಫೀಸಿಗೆ ತಡ‌ ಆಗುವುದೆಂದು ಹೊರಟು ಬಂದೆ. ಹೊರಡುವ ಮೊದಲು ಆ ಅಂಗಡಿಯವನಿಗೆ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಜೆ ನನಗೆ ತಿಳಿಸಲು ಕೇಳಿಕೊಂಡಿರುವೆ.

23/09/2005

ನಾಯಿ ಹಿಂದೆ ಅಲೆಯುವ ನನ್ನ ನಾಯಿ ಪಾಡು ಇಂದಿಗೆ ಮುಕ್ತಾಯ ಆಯ್ತು. ಆದ್ರೆ ಅದು ನನ್ನನ್ನು ಹಿಂಬಾಲಿಸೋದು ತಪ್ಪಲ್ಲ. ಬೇಡ ಬಿಡಿ – ಅದರ ಪಾಡಿಗೆ ಅದು ಬರತ್ತೆ. ಅದಿರೋವರೆಗೂ ಅದಕ್ಕೆ ಆಹಾರ ಹಾಕಲು ಆ ಅಂಗಡಿಯವನನ್ನು ಕೇಳಿಕೊಂಡಿರುವೆ.

ಇಂದಿನ ನನ್ನ ಪತ್ತೇದಾರಿ ಕೆಲಸ ಹೀಗಿತ್ತು.

ಎಂದಿಗಿಂತ ಮುಂಚಿತವಾಗಿ 7.30ಕ್ಕೇ ಸ್ಟೇಷನ್ನಿಗೆ ಬಂದೆ. ಆ ಕಡೆ ಈ ಕಡೆ ನೋಡಿದೆ. ಎಲ್ಲೂ ನಾಯಿ ಕಾಣಿಸಲಿಲ್ಲ. ಸ್ಟೇಷನ್ನಿನ ಮುಂಭಾಗದಲ್ಲಿರುವ ಸಬ್-ವೇ ಕಡೆಗೆ ಹೋಗುತ್ತಿದ್ದಾಗ ಅಲ್ಲಿಯೇ ಮೂಲೆಯಲ್ಲಿ ಆ ನಾಯಿ ಮಲಗಿದ್ದು ಕಂಡೆ. ಅದು ನನ್ನನ್ನು ಕಂಡ ತಕ್ಷಣ ನನ್ನ ಹಿಂದೆಯೇ ಬಂದಿತು. ಅನತಿ ದೂರದಲ್ಲಿ ಹಾಕರ್ ಒಬ್ಬನಿದ್ದ. ಅವನ ಹತ್ತಿರ ಹೋಗಿ – ಈ ನಾಯಿಯ ಬಗ್ಗೆ ನಿನಗೇನಾದರೂ ತಿಳಿದಿದೆಯೇ ಎಂದು ಕೇಳಿದೆ. ಅವನಿಂದ ದೊರೆತ ಮಾಹಿತಿ –

ಇದೇ ಜಾಗದಲ್ಲಿ ಒಬ್ಬ ಅಬ್ಬೇಪಾರಿ ಮುದುಕನಿದ್ದ. ಅವನು ಈ ನಾಯಿಯ ಯಜಮಾನ. ಎರಡು ತಿಂಗಳುಗಳ ಹಿಂದೆ ಆತ ಸತ್ತು ಹೋದ. ಅವನ ಮೃತ ಶರೀರವನ್ನು ಕಾರ್ಪೋರೇಷನ್ನಿನವರು ಎತ್ತೊಯ್ದಿದ್ದರು. ಈ ನಾಯಿ ಮಾತ್ರ ಆ ಜಾಗವನ್ನು ಬಿಟ್ಟು ಹೋಗಿಲ್ಲ. ಪ್ರತಿ ದಿನ 8 ಘಂಟೆಗೆ ಸ್ಟೇಷನ್ನಿನ ಹತ್ತಿರದ ಬಸ್ ಸ್ಟಾಪಿಗೆ ಬರುವುದು. ಎರಡು ಘಂಟೆಗಳ ಕಾಲ ಅಲ್ಲಿದ್ದು ನಂತರ ವಾಪಸ್ಸು ತನ್ನ ಜಾಗ ಸೇರುವುದು. ಯಾರಾದ್ರೂ ಏನಾದ್ರೂ ಕೊಟ್ರೆ ತಿನ್ನುವುದು ಅಷ್ಟೇ. ಯಾವತ್ತೂ ಅದು ಬೊಗಳಿದ್ದಿಲ್ಲ, ಇತರರಿಗೆ ತೊಂದರೆ ಮಾಡಿದ್ದಿಲ್ಲ.

ಮತ್ತೆ ನಾನು ಬಸ್ ನಿಲ್ದಾಣದ ಬಳಿಯ ಅಂಗಡಿಯವನ ಹತ್ತಿರ ಹೋಗಿ, ಈ ನಾಯಿಗೆ ಅದು ಇರುವವರೆವಿಗೂ ಬಿಸ್ಕತ್ತು ಬನ್ನು ಬ್ರೆಡ್ಡು ಹಾಕಲು ಕೇಳಿಕೊಂಡಿರುವೆ.

ಇಂದಿಗೆ ನನ್ನ ಮನಸ್ಸಿಗೆ ಸಮಾಧಾನವಾಯ್ತು. ಬಹುಶ: ಈ ನಾಯಿಯು ಆ ಮುದುಕನ ವಾಸನೆಯನ್ನು ನನ್ನಲ್ಲಿ ಕಂಡಿರಬೇಕು.

ಆ ಮುದುಕನ ಆತ್ಮ ನನ್ನೊಳಗೆ ಸೇರಿದೆ ಅಂತೀರಾ? ಅಯ್ಯೋ ಹಾಗಾಗಿರೋಕ್ಕೆ ಸಾಧ್ಯವೇ ಇಲ್ಲ. ಯಾಕೇಂದ್ರೆ ಅವನು ಸತ್ತ ದಿನದಿಂದ ನನ್ನಲ್ಲಿ ಏನೊಂದೂ ಬದಲಾವಣೆ ಆಗಿಲ್ಲ.

ಹೋಗ್ಲಿ ಯಾವ ಜನ್ಮದ ಋಣಾನುಬಂಧವೋ ಏನೋ ಆ ನಾಯಿ ನನ್ನ ಹಿಂದೆ ಬಿದ್ದಿದೆ.

ಎಲ್ಲ ಆತ್ಮಗಳೂ ಒಂದೇ ಅಲ್ಲವೇ? ಕೆಲವು ಸಲ ಅದು ಪ್ರಾಣಿಗಳ ದೇಹ ಸೇರಬಹುದು, ಕೆಲವು ಸಲ ಮಾನವನ ದೇಹ (ಮಾನವನೂ ಪ್ರಾಣಿಯಲ್ವೇ ).

ವಿಭಾಗಗಳು
ಕವನಗಳು

ಕೊಕ್ಕಿಗೊಂದು ಗುಕ್ಕು (ಗುಟುಕು)

ಏನೋ ಕುಕ್ಕಿ ಘಾಸಿಕೊಳಿಸುವೆಯಾ?
ನಿನ್ನ ಕೊಕ್ಕಿಂದೇನೂ ಆಗದು

ನಾ ನಿನಗಿಂತ ಹಿರಿಯ, ಬಲಿಷ್ಟ, ದೊಡ್ಡವನು

ಇಲ್ಲ ಗೆಳೆಯಾ –

ನಿನ್ನ ಕೊಕ್ಕಿಗೊಂದು ಎನ್ನ ಗುಕ್ಕು
ಎನ್ನ ಕೊಕ್ಕಿಗೊಂದು ನಿನ್ನ ಗುಕ್ಕು

ಯಾರು ಹಿರಿಯ, ಯಾರು ಕಿರಿಯ?
ನಿನಗಿಂತ ಹಿರಿಯರು, ದೊಡ್ಡವರು, ಬಲಿಷ್ಟರಿಲ್ಲವೇ?
ನನಗಿಂತ ಕಿರಿಯರು, ಬಲ ಹೀನರಿಲ್ಲವೇ?
ಅದೋ ನೋಡು, ಅಂಗುಲದ ಹುಳು
ಎನಗಿಂತ ಕಿರಿಯ, ನಮಗೆಲ್ಲರಿಗಿಂತ ಬಲಿಷ್ಟ
ದಣಿವಿಲ್ಲದೇ ಅಳೆದು ಅಳೆದು ನಡೆಯುತ್ತಿರುತ್ತದೆ

ಮತ್ತೆ ಬಂತದೇ ವಸಂತ
ನೋಡ ನೋಡತಿರುವಂತೆಯೇ
ಗೊಡ್ಡು ಮರವೂ ಚಿಗುರಿತು
ಸರ್ವಶಕ್ತನ ಲೀಲೆಯ ಮುಂದಿನ್ನೊಂದಿಲ್ಲ

ಹಂಚಿ ತಿನ್ನಲು ಸ್ವರ್ಗ ಸುಖ
ಉಳಿದದ್ದು ಇನ್ನೊಬ್ಬರಿಗೆ, ಮಗದೊಬ್ಬರಿಗೆ
ಮಾನವರಂತೆ ನಮ್ಮಲ್ಲಿಲ್ಲ ಕೃತ್ರಿಮತೆ
ನಿಸರ್ಗದಂತೆ ಸಹಜ ಜೀವನ, ಕೊಟ್ಟು ತಿನ್ನು – ಇಟ್ಟು ತಿನ್ನು
ಚಿಕ್ಕವನಾದರೇನಂತೆ ನೀ ಕೊಡುತಿಹೆ ಸಮಪಾಲು
ನೀ ಎನಗಿದ್ದರೆ ನಾ ನಿನಗೆ

ತುಣುಕು ಅಣಬೆ ಬಾಯಿಗೆ ತಕ್ಕಂತೆ ಮುಕ್ಕು
ಅವರಂತೆ ಎಮಗಿಲ್ಲ ಅನ್ನ ನೀರಿನ ಸಮಸ್ಯೆ
ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು
ಇಲ್ಲದಾಗ ಕೊಡರೆಂದು ಹಾಹಾಕರಿಸುವರು

ಎಮಗಿಲ್ಲ ಇವರಂತೆ ಗಡಿಬಿಡಿಯ ಗಡಿಯ ಸಮಸ್ಯೆ
ನಮ್ಮೋರಿಹರು ಜಗದೊಳಗೆ ಅಲ್ಲಿ ಇಲ್ಲಿ
ನಮಗೆಲ್ಲರೂ ಒಂದೇ ನಾವೆಲ್ಲರೂ ಒಂದೇ
ಎಲ್ಲರೊಂದಾಗಿರುವುದೇ ನಮ್ಮ ಜೀವನ

ನಮಗಿಲ್ಲ ಭಾಷೆಯ ಮೇಲಿನ ಜಗಳ
ಎಲ್ಲ ಭಾಷೆಗೂ ಮೂಲವರಿಯದವ ಬಾಳ
ಎಲ್ಲರ ಮನದೊಳಗಿಹ ಚಿಂತೆಯೂ ಅರಿವೆನು
ನನ್ನ ಮನದಿಂಗಿತ ನಿಮಗರ್ಥವಾಯಿತೇನು?

ವಿಭಾಗಗಳು
ಕವನಗಳು

ಲೋಹ – ಮೋಹ

ಹಳದೀ ಲೋಹ
ಅದರ ಮೇಲೆ ಬೇಡ ಮೋಹ
ಎಷ್ಟು ಹೇಳಿದರೇನಂತೆ
ನನ್ನ ಮನ ಮಾತ ಕೇಳೀತೇ
ಮನದೊಂದು ಮಾತಾದರೇ
ಕರದೊಂದು ಕೃತಿ
ಕೂಡಿಸಿಡುವುದೇ ಕರ್ಮದ ಗತಿ
ಕಳೆದುಹೋಗುವುದೆಂಬ ಭೀತಿ
ಅದಕಾಗೇ ಪೆಠಾರಿಗಳ ಖರೀದಿ
ಮತ್ತದರಮೇಲೆ ಭಾರೀ ಬೀಗ
ಸೊಂಟದಲಿ ಅದರ ಕೀಲಿಕೈ
ಇನ್ಶೂರೆನ್ಸ್, ಲಾಕರ್‍ಗಳಿಗಾಗಿ ಪರದಾಟ

ಎಲ್ಲರಿಗೂ ಹೊಟ್ಟೆಪಾಡಿನದ್ದೇ ಚಿಂತೆ
ಇಂದಾದರೆ, ನಾಳೆಗೆ, ನಾಡದ್ದಕ್ಕೆ
ಮುಂದಿನ ಪೀಳಿಗೆಗೆ, ಅದರ ಮುಂದದ್ದಕ್ಕೆ
ಎಂಬುದರದ್ದೇ ಚಿಂತೆ

ಒಟ್ಟಿ ಒಟ್ಟಿ ಗುಡ್ಡೇ ಹಾಕುವುದು

ಎಲ್ಲ ಜೀವಿಗಳಿಗೂ ತೋರಿಸಿಹ
ಅನ್ನದ ಹಾದಿ
ಹೊಟ್ಟೆ ತುಂಬುವ ಪರಿ

ಕಳ್ಳನಾದರೇನು?
ನನ್ನಿಂದ ಭಿನ್ನನೇ?
ಅವನೇಕೆ ಮಾಡಿಯಾನು?

ದಾಸರ ದಾಸನಾಗಿ
ಇಂದು ನಾಳೆ ಎಂಬುದರ ಮರೆ
ಇದ್ದುದ ತಿಂದು
ಹೆಚ್ಚಾದುದ ಹಂಚು
ಅದ ನಿನ್ನದಲ್ಲವೆಂದು ತಿಳಿ
ಇಲ್ಲದುದಕೆ ಹಲುಬದಿರು
ಶ್ರೀಹರಿಯ ನೆನೆಯುತಿರು

ವಿಭಾಗಗಳು
ಕವನಗಳು

+1-1=0

ಇದೊಂದು ನಿಜವಾಗಿ ನಡೆದ ಘಟನೆ. ಜೀವನ ಅಂದ್ರೆ +೧ – ೧ = ೦ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ.

ಪೂರ್ಣವಾಗಿ ಓದಿದ ಮೇಲೆ ನೀವು ಈ ಸ್ಥಿತಿಯಲ್ಲಿದ್ದರೆ ( ಅಂತಹ ಪರಿಸ್ಥಿತಿ ಬರುವುದು ಬೇಡ ಎಂದು ನನ್ನ ಆಶಯ – ಆದರೆ ವಿಧಿಯ ಮುಂದೆ ನಾವೆಲ್ಲಿಯವರು ) ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.

೧೯೪೪ ರಲ್ಲಿ ಮದುವೆಯಾದ ವಿಶ್ವನಾಥರಾಯರ ಸಂಸಾರದಲಿ ೧೯೫೭ರವರೆವಿಗೆ ೫ ಗಂಡು ಮಕ್ಕಳ ಸರತಿ. ಅಂದು ಹೆಣ್ಣು ಮಗುವಿನ ಜನನದಿಂದ ಮನೆಯ ಬೆಳಕು ಬೆಳಗಿತ್ತು. ರಾಯರಿಗೆ ಮೊದಲಿನಿಂದಲೂ ಹೆಣ್ಣು ಮಕ್ಕಳೆಂದರೆ ಪಂಚ ಪ್ರಾಣ. ತನ್ನದೇ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಮೇಲೆ ಅವರನ್ನು ಹಿಡಿಯುವವಯಾರು? ಮಗು ಅತ್ತರೆ ಎಲ್ಲಿ ಉಸಿರು ಹಿಡಿಯಬಹುದೆಂದು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡಂತೆ ಬಹಳ ಸೂಕ್ಷ್ಮದಿಂದ ಸಾಕುತ್ತಿದ್ದರು. ಮಗು ಶುಕ್ಲ ಪಕ್ಷದ ಚಂದ್ರಮನಂತೆ ಬಹಳ ಮುದ್ದಾಗಿ, ಚೆನ್ನಾಗಿ ಬೆಳೆಯುತ್ತಿತ್ತು.

ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿನೊಡನೆ ಆಡುವುದರಲ್ಲಿ ದಿನದ ಕಷ್ಟಗಳೆಲ್ಲವನ್ನೂ ಮರೆಯುತ್ತಿದ್ದರು. ಮಗಳು ಇಂದಿರೆ ಮನೆಯಲ್ಲಿರುವವರೆಲ್ಲರಿಗೂ ಚೈತನ್ಯದ ಚಿಲುಮೆಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ತಾಯಿಯ ಕೈಗಂತೂ ಮಗು ಸಿಗುತ್ತಲೇ ಇರಲಿಲ್ಲ. ಅಣ್ಣಂದಿರು ಅವಳನ್ನು ಕೆಳಗೆ ಬಿಡದೇ ಒಬ್ಬರಲ್ಲದೇ ಒಬ್ಬರು ಸದಾ ಕಾಲವೂ ಅವಳನ್ನು ಎತ್ತಿಕೊಂಡೇ ಇರುತ್ತಿದ್ದರು. ಹೀಗೆ ಯಾರಾದರೂ ಎತ್ತಿಕೊಂಡಿರುವಾಗಲೇ ಮಗುವಿಗೆ ಅವರಮ್ಮ ಊಟ ಮಾಡಿಸುತ್ತಿದ್ದರು. ಸಂಜೆ ರಾಯರು ಮನೆಗೆ ಬಂದೊಡನೆ ಅವಳನ್ನು ಯಾರೂ ಮುಟ್ಟಗೊಡುತ್ತಿರಲಿಲ್ಲ. ಮಗುವಿಗೂ ಅಪ್ಪ ಎಂದರೆ ಬಲು ಪ್ರಾಣ. ಅವರ ಹೆಗಲ ಮೇಲೆಯೇ ನಿದ್ರೆ ಮಾಡಿಬಿಡುತ್ತಿದ್ದಳು. ನಿದ್ರೆಯಲ್ಲಿಯೂ ಅವಳಿಗೆ ಅಪ್ಪನ ವಾಸನೆ ಇರಬೇಕಿತ್ತೇನೋ ಅದಕ್ಕೇ ನಿದ್ರೆಯಲ್ಲಿರುವ ಮಗುವಿನ ಕೈನಲ್ಲಿ ಎಂದಿಗೂ ಅವರಪ್ಪನ ಒಂದು ಷರ್ಟಿನ ತುಂಡು ಇದ್ದೇ ಇರುತ್ತಿತ್ತು. ಅದಿಲ್ಲದಿದ್ದರೆ ಅರ್ಧ ನಿದ್ರೆಯಲ್ಲಿಯೇ ಮಗು ಎದ್ದು, ಗಲಾಟೆ ಮಾಡುತ್ತಿತ್ತು.

ಹೀಗೆಯೇ ಮಗು ಮೂರು ವರುಷ ಕಳೆಯುವವರೆವಿಗೆ ಏನೂ ತೊಂದರೆ ಇರಲಿಲ್ಲ. ಅಂದೊಂದು ದಿನ ( ೧೯೬೦ರ ಮೇ ೧ನೇ ತಾರೀಖು ) ಮಗುವಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತು. ಆಗ ರಾಯರ ಪತ್ನಿ ಗಂಗಮ್ಮ ತುಂಬಿದ ಬಸುರಿ. ಈ ಮಗುವಿನೆಡೆಗೆ ಸಾಕಷ್ಟು ಗಮನ ಕೊಡಲಾಗುತ್ತಿರಲಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳಿಗೆ ಜ್ವರ ತಪ್ತ ಮಗುವಿಗೆ ಏನು ಮಾಡಬೇಕೆಂಬುದು ತಿಳಿಯದು. ರಾಯರು ಮನೆಗೆ ಬಂದ ಕೂಡಲೇ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿಸಿದರು. ಇವರಿದ್ದ ಹಳ್ಳಿ ಕೊಂಪೆಯಲ್ಲಿ ವೈದ್ಯರೇ ಇರಲಿಲ್ಲ. ಹತ್ತಿರದ ಜೋಗದ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿದ್ದ ಅಂತೋಣಿಯೇ ಈ ಊರಿನವರಿಗೆ ವೈದ್ಯನಂತೆ ತೋರುತ್ತಿದ್ದ. ರಾಯರು ಸಂಜೆ ಕೆಲಸದಿಂದ ಬಂದೊಡನೆ ಮಗುವಿಗೆ ಜ್ವರ ಬಂದಿರುವ ವಿಷಯ ತಿಳಿದು ನಿಂತಲ್ಲಿ ನಿಲಲಾರದೇ ಅಂತೋಣಿಯೆಡೆಗೆ ಓಡಿದರು. ಅವನ್ಯಾವುದೋ ಮಾತ್ರೆಯನ್ನು ಕೊಟ್ಟು ಜೇನುತುಪ್ಪದೊಡನೆ ಸೇರಿಸಿ ಮಗುವಿಗೆ ನೆಕ್ಕಿಸಿ ಎಂದು ಹೇಳಿದ. ಸರಿ ಹಾಗೇ ಮಾಡಿದರು. ಅಂತಹ ಸಮಯದಲ್ಲಿ ಯಾರು ಏನೇ ಸಲಹೆ ಕೊಟ್ಟರೂ ನಾವು ಸ್ವೀಕರಿಸುತ್ತೇವೆ. ನಮ್ಮ ಪರಿಸ್ಥಿತಿ ಹಾಗಿರತ್ತೆ. ಮಗುವಿನ ಜ್ವರ ಮಾತ್ರ ಕಡಿಮೆಯಾಗದೇ ಇನ್ನೂ ಹೆಚ್ಚುತ್ತಲೇ ಹೋಯಿತು. ರಾಯರು ಪಕ್ಕದಲ್ಲೇ ವಾಸವಿದ್ದ ಜೀಪಿನ ಪಿಡಬ್ಲ್ಯುಡಿ ಡ್ರೈವರ್ ರಾಮಣ್ಣನ ಮೊರೆ ಹೊಕ್ಕರು. ರಾಮಣ್ಣನ ಹೆಂಡತಿ ವಿಶಾಲಾಕ್ಷಮ್ಮ ಮಗುವಿಗೆ ವಿಷಮಸೀತ ಜ್ವರ ಬಂದಿರಬಹುದೆಂದೂ ತಕ್ಷಣ ಜೋಗದ ಆಸ್ಪತ್ರೆ ಕರೆದೊಯ್ಯಿರೆಂದೂ ತಿಳಿಸಿದರು. ರಾಮಣ್ಣನೊಂದಿಗೆ ಜೀಪಿನಲ್ಲಿ ರಾಯರು ಮಗುವನ್ನು ಕರೆದುಕೊಂಡು ಜೋಗಕ್ಕೆ ಹೊರಟರು. ಆಗ ಸಮಯ ರಾತ್ರಿಯ ೧೧ ಘಂಟೆ. ರಸ್ತೆಯೇ ಸರಿ ಇಲ್ಲದ ಆ ಊರಿನಿಂದ ಜೋಗ ಸುಮಾರು ೩ ತಾಸುಗಳ ಪ್ರಯಾಣ. ಸರಿರಾತ್ರಿಯ ೧ ಘಂಟೆಗೆ ಮಗು ’ಕಾಫಿ ಕೊಡಿಸಪ್ಪ’ ಎಂದು ಕೇಳಿತು. ಆ ಕಾಡಿನಲ್ಲಿ ಕಾಫಿ ಎಲ್ಲಿ ಸಿಗಬೇಕು. ರಾಯರು, ’ಆಗ್ಲಮ್ಮ, ಇನ್ನೇನು ಊರು ಬಂದೇ ಬಿಡ್ತು. ಕೊಡಿಸ್ತೀನಿ ಅಂದ್ರು’. ಅಷ್ಟೇ ಅದೇ ಕಡೆಯ ಮಾತಾಗಿತ್ತು. ಮಗು ತನ್ನ ಕತ್ತನ್ನು ಹೊರಳಿಸಿತು. ಮೈಯೆಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು. ಇದನ್ನು ಅಷ್ಟಾಗಿ ರಾಯರು ಗಮನಿಸಿಲಿಲ್ಲ. ಆದರೆ ಅಪ್ಪ ಮಗಳ ಸಂಭಾಷಣೆಯನ್ನು ಗಮನಿಸುತ್ತಿದ್ದ ರಾಮಣ್ಣನಿಗೆ ವಿಷಯ ತಕ್ಷಣ ತಿಳಿದುಹೋಯಿತು. ಜೀಪನ್ನು ವಾಪಸ್ಸು ಊರಿನೆಡೆಗೆ ಓಡಿಸಿದ್ದ. ವಿಷಯವನರಿತ ರಾಯರನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯವರಿಗೊಮ್ಮೆ ಶವವನ್ನು ತೋರಿಸಿ ನಂತರ ಅಂತ್ಯಕ್ರಿಯೆ ಮುಗಿಸಲು ನಿರ್ಧರಿಸಿ ಮನೆಗೆ ಹೊರಟರು.

ಇನ್ನೇನು ಮನೆಯ ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ, ಆಚೆ ಮನೆಯ ಮೃಣಾಲಿನಿಯವರು ಸಂತೋಷದಿಂದ ಮನೆಯ ಒಳಗಿನಿಂದ ಬರುತ್ತಿದ್ದವರು ರಾಯರನ್ನು ಕಂಡು ಒಳಗೆ ಗಂಡು ಮಗು ಹುಟ್ಟಿದೆ ಎಂದರು. ರಾಯರ ಬಾಯಿಯಿಂದ ಬಂದದ್ದು ಹ್ಹುಹ್! ಎನ್ನುವ ಉದ್ಗಾರ ಮಾತ್ರ. ಮನೆಯ ಲಕ್ಷ್ಮಿ ಆಚೆಗೆ ಹೋಗಿ ಇನ್ನೊಬ್ಬ ಕೃಷ್ಣ ಮನೆ ಒಳ ಸೇರಿದ್ದ.

ವಿಭಾಗಗಳು
ಕವನಗಳು

ಹುಡುಕಾಟ

ಸಾಧಿಸಲೇನು ಇಹುದು
ಇಂದು ಅಸಾಧ್ಯವಾದುದು ನಾಳೆ ಸಾಧ್ಯವು
ಮರುದಿನ ಸುಲಭಸಾಧ್ಯವು

ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ?
ಹೊಸದಾವುದದು ನಾವು ಹುಡುಕುವುದು

ಹುಡುಕುವವರೆಗೂ ಅದು ಹೊಸದು
ಮರುಕ್ಷಣ ಅರಿಯುವೆವು
ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ

ಹಾಗಿದ್ದಲ್ಲಿ ನಾವು ಹುಡುಕುವುದು
ಕತ್ತಲೆಯಲ್ಲಿ ತಡಕಾಡಿದಂತಲ್ಲವೇ?

ಇದಕೆ ಬೇಕೆ ಬುದ್ಧಿವಂತಿಕೆ
ಬೆಳಕು ಸಾಕಲ್ಲವೇ?

ತೆರೆಯಿರಿ ನಿಮ್ಮ ಮನದ ಕಣ್ಣುಗಳನು
ಎಲ್ಲ ಇಹುದು ಇಲ್ಲಿ