ವಿಭಾಗಗಳು
collection

ಕೆಲವು ಹನಿಗಳು

ಉರುವಲು ಇರಲು ಬೇಕು ಒಲೆ ಉರಿಸಲು
ನಿನ್ನಿರುವಿಕೆಯೇ ನನ್ನ ಮನ ತಣಿಸಲು
ಒಲೆ ಉರಿಸಲು ಉರುವಲ ಬದಲು ಏನಾದರೂ ಆದೀತು
ನನ್ನ ಮನ ತಣಿಸಲು ಬೇರೆ ಹೇಗಾದೀತು?

ನಾಲಗೆ ಇರುವುದು ನಾಯಿ ಬಾಲದಂತೆ
ಸಮಯ ಸಾಧಕ ಪೊಳ್ಳು ಮನದಂತೆ
ಬೆತ್ತ ಕಟ್ಟಿದರೂ ನೆಟ್ಟಗಾಗದು ಆ ಬಾಲ
ಆತ್ಮದಂತೆ ಗಟ್ಟಿಯಾಗದು ನಾಲಗೆಯ ಜಾಲ

ನಾನರಿಯೆನು ನಾಳಿನ ದಿನದ ಪ್ರವಾಸ
ಆದರೂ ಬೇಡುವೆನು ಅದಾಗದಿರಲಿ ಪ್ರಯಾಸ
ನಾನರಿತಿಹೆ ನಿನ್ನೆಯ ಪ್ರವಾಸದ ಪ್ರಯಾಸ
ಅದನು ಬದಲಾಯಿಸಲಾದರೆ ಎಷ್ಟು ಸಂತಸ

ರುಜುವಾತು ಆಗುವುದು ಇವಳೇ ಲಾವಣ್ಯ
ಮುಖ ನೋಡಿ ಬೇಸ್ತು ಬೀಳುವುದು ಸಾಮಾನ್ಯ
ಒಮ್ಮೆ ಬಿದ್ದವ ಮತ್ತೆ ಏಳಲಾರ
ಜೀವನದ ಹಿಂಬಾಗಿಲಿಗೆ ಬರಲಾರ

ಸುಖದ ನಿರೀಕ್ಷೆಯೇ ತಾರುಣ್ಯದಲಿ
ಅನುಭವದ ಮೆಲುಕೇ ವೃದ್ಧಾಪ್ಯದಲಿ
ಕನ್ನಡಿಯೊಳಗಿನ ಗಂಟಿನಂತೆ
ಅರಿವಾಗುವುದು ಈ ಜೀವನ ಪೊಳ್ಳಿನ ಸಂತೆ

ಸವಿಜೇನು ಸವಿಯಲು ಬಲು ಸಿಹಿ
ಕೂಡಿಸಿಟ್ಟ ಹುಳುವಿನ ಬಾಳು ಕಹಿ
ಒಂದು ಜೀವಿಯ ಕಹಿಯ ಸಿಹಿ ಎಂದೆಣಿಸುವುದು ಪ್ರಕೃತಿಯ ನಿಯಮ
ಎಲ್ಲರ ಬಾಳಲು ಬಂದು ಹೋಗುವುದು ಪರಿ ಪರಿ ಆಯಾಮ

ಆಣೆಯ ಕಾಲವಿದಲ್ಲವೇ ಅಲ್ಲ
ಯಾರಿಗಾದರೂ ಇದು ತಿಳಿದಿರುವುದಲ್ಲ
ನಾಕಾಣೆಯಾದ ನಾಲ್ಕು ಆಣೆ ಅಪೂರ್ಣವಾದ ಎಂಟಾಣೆ
ಶತ:ಪ್ರತಿಶತವೆಂದು ಅಪ್ಪಟ ಸುಳ್ಳು ಹೇಳುವ ಹದಿನಾರಾಣೆ

(ಒಂದು ಆಣೆ ಎಂದರೆ ೬ ಕಾಸು. ಎಂಟಾಣೆ ಎಂದರೆ ಎಲ್ಲರ ಮನಕೆ ತೋರುವುದು ೫೦ ಪೈಸೆ. ಆದರೆ ಲೆಕ್ಕದಲಿ ಅದು ೪೮ ಪೈಸೆ. ಹಾಗೆಯೇ ರೂಪಾಯಿ ಎಂದು ಹೇಳುವ ಹದಿನಾರಾಣೆಯಲಿ ಅರ್ಧಾಣೆ ಕಾಣೆಯಾಗಿದೆ)

ನಾವಿಕ ಬೇಕು ಹೊಳೆಯ ದಾಟಿಸಲು
ಅವನಿಲ್ಲದಿರೆ ತಿಳಿದಿರಬೇಕು ಈಸಲು
ನಾವಿಕನ ತಲೆ ಕೆಡಿಸಲು ದೋಣಿಯ ಹೊಯ್ದಾಟ
ಈಸಲು ಬರದವರ ನಿರಂತರ ಅಳಲಾಟ

ಸಹಾಯ ಯಾಚಿಸುವುದು ತರವಲ್ಲ
ಸಹಾಯ ಮಾಡದಿರೆ ಉಚಿತವಲ್ಲ
ಕೈಲಾದಷ್ಟೂ ದಿನ ಸಹಾಯ ಮಾಡುತಲಿರು
ಕೈಲಾಗದಾಗ ಅನಪೇಕ್ಷಿತ ದೊರೆಯುವುದು ( ಸಹಾಯ )

ಚಂದ ಕನ್ನಡದ ಕಂದ
ಕಂದ ನನ್ನ ಮನದಾನಂದ
ಆನಂದ ತಂದ ನಿನ್ನ ಬಂಧ
ಬಂಧ ಬಿಡಿಸಲಾರದ ಅನುಬಂಧ

ವರಿಸಲು ಅಪೇಕ್ಷಿಸುವೆಯಾ ನೀ?
ಅದಕಾಗಿ ಎದುರಿಸಬೇಕೇ ಪರೀಕ್ಷೆಯ ನಾ?
ಒಲಿಯಲು ಸಲಿಲ ಮಾರ್ಗ ತೋರಿಸು ಹರಿಯೇ
ಅಲ್ಲಿಯತನಕ ಬಿದ್ದಿರುವೆ ನಿನ್ನ ಪಾದಗಳ ಬಳಿಯೇ

ಬಿಟ್ಟಿದ್ದು ಹಿಡಿಯಲಾರದ್ದು
ಹಿಡಿದದ್ದು ಬಿಡಲಾರದ್ದು
ಬಿಡಲಾರೆ ನಾ ಈ ಕಪಿತ್ವವ
ಬಿಡದೆ ಜೊತೆ ಏರುತಿಹರು ಸಹ..ಗಳು

ಬಾಲ್ಯದಿ ಆಡಿದ ಮಂಗನಾಟವೂ ಬಲು ಚೆಂದ!
ಮುದಿತನದಿ ಹುಡುಗಾಟವೇನು ಚೆಂದ?
ಒಮ್ಮೆ ಆಡಿದ ಆಟ ಮರಳಿ ಬರುವುದೇ?
ಕಾಲ ನಿಂತ ಕಡೆ ನಿಲ್ಲದೇ ಮುಂದೆ ಹೋಗುತಿರುವುದೇ!

ಬಾಳು ಬಂಗಾರವಾಯಿತು ಸಂಸಾರದಿ
ಅದ ತೊರೆಯಲು ನಾ ಹೋಗೆ ಆತುರದಿ
ಆತುರದ ನಿರ್ಧಾರ ಎಂದು ಒಳಿತಲ್ಲವಂತೆ
ಅನುಭವಿಸುತ್ತಿರುವೆ ನಾ ದುರ್ಭಾಗ್ಯದ ಕಂತೆ

ಸುಖ ಕಾಣುವರು ಅನ್ಯರು ದು:ಖಿಸುವಾಗ
ದು:ಖಿಸುವರು ಅನ್ಯರು ಸುಖಿಸುವಾಗ
ಇವರಿಗಿರುವುದು ವಿಕೃತ ಮನಸು
ಇವರ ಅನಿಸಿಕೆ ಆಗಿರಲಿ ಎಂದಿಗು ಕನಸು

ಅವರವರ ಚಿಂತೆ ಅವರವರಿಗಲ್ಲ
ಅವರ ಕಣ್ಣೆಲ್ಲಾ ಇನ್ನೊಬ್ಬರ ಮನೆಯೊಳಗೇ ಅಲ್ಲ
ತನ್ನ ಮನೆ ಹೊತ್ತಿ ಉರಿದರೇನಂತೆ
ಪಕ್ಕದಲಿ ಏನಾಗುವುದೆಂಬ ಚಿಂತೆ

ಎಡೆ ಇಡುವುದು ದೇವರಿಗೆ ( ನೈವೇದ್ಯ )
ಎಡಗಡೆಗಿಡುವುದು ವಾಮಾಚಾರಿಗೆ
ಎಡತಾಕುವುದು ಕಾಲಿಗೆ
ಎಡಬಿಡದೆ ಕಾಡುವೆ ನಾ ನಿನಗೆ ( ಸುಮ್ನೆ ತಮಾಷೆಗೆ ಬರೆದದ್ದು )

ಆಮಂತ್ರಣ ಇಲ್ಲದೇ ಹೋಗುವುದು ತರವಲ್ಲ
ಕರೆಯಲು ಹೋದರೂ ಮನ್ನಣೆ ಸಿಗುವುದಿಲ್ಲ
ಅತಿಥಿಯಾಗುವವನು ಮೊದಲು ಮೂರುದಿನ
ನಂತರ ಆಗುವವನು ಮನೆಯ ಜವಾನ

ಕವನದ ಮುಂದೆ ಬೇರೆಲ್ಲಿದೆ ಆ ಶಕ್ತಿ
ಶಕ್ತಿ ಒಲಿಸಿಕೊಳ್ಳಲು ಬೇಕು ಯುಕ್ತಿ
ನಿಸ್ರಗವ ರಮಿಸಲು ಬೇಕಿಲ್ಲ ಹವನ ಹೋಮ
ನಿನದಾಗಲಿ ಅದಕೆ ವಿರುದ್ಧ ಹೋಗದಿರುವ ಕರ್ಮ

ವಿರಾಮ ಕೊಡಲಾಗುವುದು ಕೈ ಕಾಲು ಮನಗಳಿಗೆ
ಚೇತನಕೆ ಸುಪ್ತಾವಸ್ತೆಗೆ ವಿರಾಮ ಕೊಡಲಾದೀತೇ?
ಆದೀತಾದರೆ ಮರಳಿ ಬರುವುದೇ ಅದು ನನ್ನಿನಿತು
ಅಂತಹ ಶಕ್ತಿ ಇಲ್ಲವೇ, ನಾನೊಂದು ಪುಟ್ಟ ಜಂತು

ಇಲ್ಲವೇ ದೇವಾ ನೀ ಗುಡಿಯಲಿಲ್ಲವೇ
ಎಲ್ಲರೂ ನಿನ್ನನು ಹುಡುಕುತ್ತಿರುವುದು ವ್ಯರ್ಥವೇ
ಅಲ್ಲಿ ಇಲ್ಲಿ ಹುಡುಕುವುದೇ ಕಾಣದ ದೇವರ
ಒಳಗಣ್ಣ ತೆರೆದರೆ ಕಾಣುವೆ ಎಲ್ಲ ಜಿವಿಗಳಲ್ಲೂ ದೇವರಾ

ನಂಬೂ ನೀ ಎಲ್ಲರನೂ ನಂಬು
ಮೇಲೇರಲು ಆಗುವುದು ಅದು ಹಂಬು (ಕನ್ನಡದಲ್ಲಿ ಹಂಬು ಅಂದ್ರೆ ಬಳ್ಳಿ)
ಯಾರೇ ಮೋಸಿಸಿದರೂ ನೀ ಅವರನು ನಂಬು
ಅವರಿಗೇ ಪಶ್ಚಾತ್ತಾಪವಾಗೆ ಮರುಗುವರು ನನ್ನ ನಂಬು

ಕಾರ್ಯ ನಿರತನಾಗಿರೆ ಮನಕಾನಂದ
ಇಲ್ಲದಿರೆ ಮನವಾಗುವುದು ಮಂದ
ಮಂದ ಮತಿಯ ಒಳ್ಳೆಯ ಕಾರ್ಯಕೆ ಮನ್ನಣೆ ಇಲ್ಲ
ಮೋಸಿಸಿದರೂ ತೀಕ್ಷ್ಣ ಮತಿಗೆ ಮನ್ನಣೆ ಎಲ್ಲ

ಧಾರಾಕಾರದಿ ಸುರಿಯುತಿಹುದು ವರ್ಷಧಾರೆ
ಜೀವಿತಕೆ ಬೇಕಿದೆ ಜಲಧಾರೆ ಆಸರೆ
ಅತಿವೃಷ್ಟಿಕಾಲದಿ ಜಲಕಂಟಕ ಆದರೆ
ಅನಾವೃಷ್ಟಿಕಾಲದಿ ಇದಕಾಗಿ ಹಾತೊರೆ

ಕನ್ನಡವೇ ನನ ದಮನಿಯಲಿ ಹರಿಯುತಿಹ ರಕುತ
ಕನ್ನಡವೇ ನನ ಮನದಲಿ ಉಗಮಿಸುವ ಚಿಂತನ
ಮೈಯಲಿಹ ಮಾಂಸಖಂಡ ಆ ತಾಯಿಯ ಭಾಗ
ಅವಳ ಮರೆತೊಡೆ ನಾ ಹೊಗುವೆ ನರಕದೊಳಗ

ಐಡಿ ಕಾರ್ಡು ಎಲ್ಲೂ ರಕ್ಷಿಸುವ ಗಾರ್ಡು
ತೋರಿಕೆಗೆ ಇಡಲು ನಮ್ಮೆದೆಯೇ ಬೋರ್ಡು
ಬೋರ್ಡಿನ ಮೇಲೆ ಗೀಚುವುದೇ ಮಾಸ್ತರರ ಕೆಲಸ
ಗೀಚುವಾಗ ಅವರಣಕಿಸುವುದೇ ಮಕ್ಕಳ ಕೆಲಸ

ಕಾವ್ಯದ ರಸಧಾರೆ ಹರಿಯುತಿದೆ ಅಪರಿಮಿತ
ಅದ ಆಸ್ವಾದಿಸಲು ಇರುವವರು ಸೀಮಿತ
ಸೀಮಿತದೊಳಿರಲು ನಮ್ಮ ಕೃತ್ಯಗಳು
ಯಾರಿಗೂ ಆಗದು ತೊಂದರೆಗಳು

ಕಾವ್ಯ ಓಡಿದುದು ನಿಮ್ಮ ಬಾಧೆಯಿಂದಲ್ಲ
ಅಮ್ಮನ ತಮ್ಮನ ಆಸ್ತಿ ಕಣ್ಣಿಗೆ ಬಿದ್ದಿತ್ತಲ್ಲ
ಕಣ್ಣಿಗೆ ಕಂಡು ನಡೆಯುವುದೆಲ್ಲ ನಿಜವಲ್ಲ
ಕಾವ್ಯಳ ಬದಲು ಸುಶ್ರಾವ್ಯ ನಿಮಗಾಗಿ ಕಾದಿಹಳಲ್ಲ

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ಜಟ್ಟಿ
ಇವನ ಮೈ ಕೈ ಕಲ್ಲಿನಂತೆ ಬಲು ಗಟ್ಟಿ
ಮೈ ಕೈ ಗಟ್ಟಿಯಾಗಿದ್ದರೇನಂತೆ
ಮನಸು ಮಾತ್ರ ಬಲು ಮೃದುವಂತೆ

ನೋವಿನಲೂ ನಲಿವ ಕಾಣುವನೇ ಯೋಗಿ
ನಲಿವನು ಸ್ವಾದಿಸದವನೇ ರೋಗಿ
ರೋಗಿಯಿಂದ ಎಲ್ಲರಿಗೂ ಆಗುವುದು ತೊಂದರೆ
ಎಲ್ಲರಿಗೆ ಬೇಕಿದೆ ಯೋಗಿಯ ಆಸರೆ

ನಿಮಗೀಗ ಬೇಕಿದೆ ನಿಮ್ಮವಳ ಸಖ್ಯ
ನನ್ನವಳ ಜೊತೆ ಏಗುವುದೇ ಅಶಕ್ಯ
ದಿನವೂ ಮನೆಯಲ್ಲಿ ಒಂದಲ್ಲ ಒಂದು ರಗಳೆ
ನಿಮ್ಮ ಮನ ಕೆಡಿಸುವುದು ಬೇಡ ಈಗಲೇ

ರಥ ಎಳೆಯುವುದೆನ್ನ ಕಾಯಕ
ಸವಾರಿ ಮಾಡುವನು ನನ್ನ ನಾಯಕ
ನಾಯಕ ಎಂದು ಹಿಂಬಾಲಕರ ಮುನ್ನಡೆಸುವನು
ತನ್ನ ಕರ್ತವ್ಯ ತಪ್ಪಿದರೆ ನೆಲ ಹಿಡಿಯುವನು

ನೆಲವನ್ನು ಉತ್ತು ಬಿತ್ತು ಬೆಳೆಯುವವನೇ ಯೋಗಿ
ನೆಲಕಾಗಿ ಹೊಡೆದಾಡಿ ವಂಚಿಸುವನೇ ರೋಗಿ
ರೋಗಿಯ ತನು ಮನವೆಂದೂ ಅಸ್ವಸ್ಥ
ಯೋಗಿ, ನಂಬಿದವರೆಲ್ಲರನೂ ಇಡುವನು ಸ್ವಸ್ಥ

ಅಚಲವಾಗಲು ಈಚಲ ರಸವೂ ಅಮೃತ
ವಿಚಲವಾಗಲು ಆಗುವೆ ಪಾನಮತ್ತ
ಪಾನಮತ್ತನಾಗಲು ಮನಕೆ ಕಡಿವಾಣವಿಲ್ಲ
ಪ್ರೀತಿಸು ಎಲ್ಲರನು, ಸಂಪಾದಿಸು ಪ್ರೇಮವನು, ಕಾಮನೆಗಳಲ್ಲ

ಎಲ್ಲ ಭಾಷೆಗಳೂ ತಾಯಿಯರಂತೆ
ಯಾವ ತಾಯಿಯೂ ಕೆಟ್ಟವಳಲ್ಲ
ತನ್ನ ಮಕ್ಕಳ ಹಿತ ಕಾಪಾಡುವಳಲ್ಲ
ಎಲ್ಲ ಭಾಷೆಗಳೂ ಒಳಿತು ಮಾಡುವುದಲ್ಲ.

ತೇರಾ ಜಾನ್ ಕಿ ಬೀಮಾರೀ ಮೈ ಸುಲಾವೂಂಗ
ಜಬ್ ತಕ್ ತುಮ್ ಮೇರಾ ಖ್ಯಾಲ್ ಕರೇಗಾ
ಜಬ ತುಮ್ ಮುಝೆ ಭೂಲ್ ಜಾಯೇಗಾ
ಮೈ ತೇರಾ ನಾಮ ನ ಲೂಂಗಾ

ಕನಸಿಗೆ ಕೊನೆಯಿಲ್ಲ ಮೊದಲಿಲ್ಲ
ನಿನ್ನೆ ಬಂದ ಕನಸು ಇಂದು ಮುಂದುವರೆಯದಲ್ಲ
ಮತ್ತೆ ಮತ್ತೆ ಕನಸ ಕಾಣುವ ಸರದಿ
’ಎಷ್ಟೊತ್ರೀ ಮಲಗೋದು’ ಗುಡುಗಿದಳು ನನ ಮಡದಿ

ಮನೆಯ ಮಾರಾಟವಾದರೇನೂ ಚಿಂತಿಲ್ಲ
ಮಾನವನ್ನು ಮಾತ್ರ ಎಂದಿಗೂ ಬಿಡಬಾರದಲ್ಲ
ಹೊನ್ನು ಕೊಟ್ಟರೆ ಸಿಗುವುದು ಇನ್ನೊಂದು ವಿಲ್ಲ
ಇಂದಿಲ್ಲದಾ ಹೊನ್ನು ನಾಳೆ ಬಂದೇ ಬರುವುದಲ್ಲ

ಭ್ಹೀತಿಯಿಂದ ಕಂಗಾಲಗಬೇಕಿಲ್ಲ
ಮನ ಗಟ್ಟಿಯಾಗಿರಲು ಏನೂ ಭಯವಿಲ್ಲ
ಗಟ್ಟಿ ಮನದೆದುರು ಯಾರೂ ನಿಲ್ಲಲಾರರು
ಶಕ್ತಿಹೀನರೂ ಜಗವನು ಗೆಲ್ಲಬಲ್ಲರು

ಅಮ್ಮನೇ ಪ್ರತ್ಯಕ್ಷ ದೈವ
ಅವಳ ಮುಂದಿನ್ಯಾವ ದೊಡ್ಡ ದೈವ
ಎಂದಿಗೂ ಶ್ರೇಯ ಹಾರೈಸುವ ದೇವತೆ ಅವಳೇ
ಅವಳ ಸ್ಥಾನ ಬೇರಿನ್ಯಾರು ತುಂಬಬಲ್ಲರೇ?

ನಿಜ ಅರಿವಾಗುವುದು ಅವರವ ಕಾಲಕ್ಕೆ ತಕ್ಕಂತೆ
ಬ್ರಹ್ಮಚಾರಿಗೆ ಮದುವೆಯ ಚಿಂತೆ
ಮದುವೆಯಾದವರಿಗೆ ಮಕ್ಕಳು ಸಂಸಾರದ ಚಿಂತೆ
ಸಂಸಾರದಲಿ ಮುಳುಗಿ ದಡ ಮುಟ್ಟುವವರಿಗೆ ಚಿತೆಯ ಚಿಂತೆ
ಸುಖದಲ್ಲಿ ನೀ ಸಂತೊಷ ಕಾಣುವಂತೆ
ದು:ಖದಲ್ಲಿ ನಾ ಸಂತೃಪ್ತಿ ಪಡೆಯುವೆನಂತೆ

ಶಾಲೆಯ ಮಧ್ಯಾಹ್ನದ ಉಪ್ಪಿಟ್ಟು
ನೋಡುತ್ತಲೇ ಎಲ್ಲರ ಹೊಟ್ಟೆ ಚುರುಗುಟ್ಟು
ಮೇಷ್ಟಿಗೆ ಮಾತ್ರ ಅಷ್ಟಷ್ಟು
ಮಕ್ಕಳಿಗೆ ಮಾತ್ರ ಇಷ್ಟೇ ಇಷ್ಟು

ಅಚಲವಾಗಲು ಈಚಲ ರಸವೂ ಅಮೃತ
ವಿಚಲನಾಗಲು ಆಗುವೆ ಪಾನಮತ್ತ
ಪಾನಮತ್ತನಾಗಲು ಮನಕೆ ಕಡಿವಾಣವಿಲ್ಲ
ಪ್ರೀತಿಸು ಎಲ್ಲರನೂ, ಸಂಪಾದಿಸು ಪ್ರೇಮವನು, ಕಾಮನೆಗಳಲ್ಲ