ಸಾಕ್ರಟೀಸನ ಕೊನೆ – ಪ್ಲೇಟೋವಿನ ಕಣ್ಣಿನಲ್ಲಿ
ಕ್ರಿಸ್ತಪೂರ್ವ ೪೬೯ರಿಂದ ೩೯೯ರವರೆವಿಗೆ ಜೀವಿಸಿದ್ದ ಪ್ರಸಿದ್ಧ ತತ್ವಜ್ಞಾನಿ, ಮೇಧಾವಿ ಸಾಕ್ರಟೀಸ. ಅವನ ತತ್ವಗಳಿಗೆ ವಿರುದ್ಧವಾದ ಸರಕಾರದವರು ಅವನಿಗೆ ಕ್ಷಮಾಪಣೆಯನ್ನು ಕೇಳಲು ಆಗ್ರಹಿಸಿದರು. ಅದಕ್ಕೆ ವಿರೋಧಿಸಿದ ಆತನನ್ನು ಸೆರೆಮನೆಗೆ ತಳ್ಳಲಾಯಿತು. ಅವನನ್ನು ವಿಷವುಣಿಸಿ ಕೊಲ್ಲಲಾಯಿತು. ಆ ಸಮಯದಲ್ಲಿ ಅವನೆದುರು ಅವನ ಶಿಷ್ಯರುಗಳು ಇದ್ದರು. ಆ ಕೊನೆಯ ಸಮಯದಲ್ಲಿ ಸಾಕ್ರಟೀಸನಿದ್ದ ಸೆರೆಮನೆಯಲ್ಲಿ ಪ್ಲೇಟೊ ಮತ್ತಿತರ ಶಿಷ್ಯರೂ ಅವನೊಂದಿಗಿದ್ದರು. ಸಾವಿನ ಬಗ್ಗೆ ಎಳ್ಳಷ್ಟೂ ಉದ್ವೇಗ ತೋರದ ಸಾಕ್ರಟೀಸನ ಬಗ್ಗೆ, ಆತನ ಮೆಚ್ಚಿನ ಶಿಷ್ಯರಲ್ಲೊಬ್ಬನಾದ ಪ್ಲೇಟೋ ಕೊನೆಯ ಕ್ಷಣಗಳನ್ನು ಹೀಗೆ ನಿರೂಪಿಸಿದ್ದಾನೆ. ಆ ಸಮಯದಲ್ಲಿ ಸಾಕ್ರಟೀಸನ ವಯಸ್ಸು ೭೦ ವರುಷಗಳಾದರೆ, ಪ್ಲೇಟೋವಿನ ವಯಸ್ಸು ೨೨.
“ಅವನೆದ್ದು ಕ್ರಿಟೋವಿನೊಂದಿಗೆ ಸ್ನಾನದ ಕೋಣೆಗೆ ಹೋಗುವಾಗ, ಬಾಗಿಲಿನಲ್ಲೇ ನಮ್ಮೆಲ್ಲರಿಗೂ ಕಾಯಲು ತಿಳಿಸಿದನು. ಹಾಗೆ ಕಾಯುವಾಗ ಆ ಮಹಾನ್ ಮನುಷ್ಯನ ಮನದಲ್ಲಿರಬಹುದಾದ ನೋವಿನ ಕ್ಷಣಗಳ ಬಗ್ಗೆ ಯೋಚಿಸಿ, ಚರ್ಚಿಸುತ್ತಿದ್ದೆವು. ಅನಾಥರಾಗುತ್ತಿದ್ದ ನಮ್ಮಂಥ ಹಸುಳೆಗಳನ್ನು ಬಿಟ್ಟು ಹೋಗುತ್ತಿದ್ದ ತಂದೆಯಂತೆ ಗೋಚರವಾಗುತ್ತಿತ್ತು. ಸೂರ್ಯಾಸ್ತದ ಸಮಯ ಸಮೀಪಿಸುತ್ತಿದ್ದಂತೆ, ಆತ ಒಳಗೆ ಬಂದನು. ಮತ್ತೆ ನಮ್ಮೊಡನೆ ಬಂದು ಕುಳಿತವನು ಏನನ್ನೂ ಹೇಳಲಿಲ್ಲ. ಅಷ್ಟು ಹೊತ್ತಿಗೆ ಸೆರೆಮನೆಯಧಿಕಾರಿ ಒಳಗೆ ಬಂದು, ‘ಎಲೈ ಸಾಕ್ರಟೀಸನೇ, ನಿನ್ನನ್ನು ಮಹಾನ್ ಮೇಧಾವಿಯೆಂದೂ, ಸೂಕ್ಷ್ಮಗ್ರಾಹಿಯೆಂದೂ ಮತ್ತು ಇಲ್ಲಿಗೆ ಬಂದವರೆಲ್ಲರಿಗಿಂತಲೂ ಉತ್ತಮ ಮನುಷ್ಯನೆಂದೂ ನಾನು ತಿಳಿದಿರುವೆ, ಇಲ್ಲಿ ಬಂದವರೆಲ್ಲರಲ್ಲೂ ಸರಕಾರಕ್ಕೆ ಮಣಿಯದೇ ಕೋಪ, ಆಕ್ರೋಶ, ತಿರಸ್ಕಾರ ತೋರಿಸಿದವರು. ಇಂತಹವರೆಲ್ಲರನ್ನೂ ವಿಷವುಣಿಸಿ, ಕೊಂದಿರುವೆನು. ಆ ಸಮಯದಲ್ಲಿ ಅವರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ನೀನು ಮಾತ್ರ ಇವರೆಲ್ಲರಿಗೂ ವ್ಯತಿರಿಕ್ತನಾದವನು. ನಿನ್ನಂತಹವನಿಗೂ ನಾನು ವಿಷವುಣಿಸಿ ಕೊಲ್ಲುವ ಕಾಲ ಬಂದಿದೆ, ನಿನಗೆ ಒಳ್ಳೆಯದಾಗಲಿ’, ಎಂದು ಹೇಳಿ ಗಳಗಳನೆ ಅತ್ತು ಹಿಂತಿರುಗಿ ನೋಡದೇ ಹೊರಗೆ ಹೋದನು.
ಅವನತ್ತ ನೋಡಿದ ಸಾಕ್ರಟೀಸನು ಇಂತೆಂದನು, ‘ನಿನಗೂ ಒಳ್ಳೆಯದಾಗಲಿ, ನಿನ್ನ ಕೆಲಸ ನೀನು ಮಾಡುತ್ತಿರುವೆ’. ಮತ್ತೆ ನಮ್ಮ ಕಡೆಗೆ ತಿರುಗಿ, ‘ಎಂತಹ ಒಳ್ಳೆಯ ಮನುಷ್ಯನಾತ, ಪ್ರತಿನಿತ್ಯವೂ ನನ್ನನ್ನು ನೋಡಲು ಬರುತ್ತಾನೆ, ನೋಡಿ ನನ್ನ ಸ್ಥಿತಿಯನ್ನು ನೋಡಿ ಹೇಗೆ ದು:ಖಿಸುತ್ತಿದ್ದಾನೆ. ನಾನು ಬೇಗ ನನ್ನ ಕೆಲಸ ಮುಗಿಸಬೇಕು. ಕ್ರಿಟೋ, ವಿಷವು ತಯಾರಾಗಿದ್ದರೆ ತಾ, ತಯಾರಿಲ್ಲದಿದ್ದರೆ ಬೇಗನೆ ತಯಾರಿಸಿ ತರಲು ತಿಳಿಸು’, ಎಂದನು.
ಅದಕ್ಕೆ ಉತ್ತರವಾಗಿ ಅವನ ಶಿಷ್ಯ ಕ್ರಿಟೋ, ‘ಇನ್ನೂ ಸೂರ್ಯನು ಬೆಟ್ಟದ ಮೇಲಿರುವನು, ಹಲವಾರು ಜನರಿನ್ನೂ ಊಟ ಮಾಡಬೇಕಾಗಿರುವುದು, ಅದಾದ ಮೇಲೆ ಘೋಷಣೆಯಾಗಬೇಕಿದೆ. ಅದರ ನಂತರ ತನ್ನೆಲ್ಲ ಅವಶ್ಯಕತೆಗಳನ್ನು ಪೂರೈಸಿಕೊಂಡು, ವಿಷವುಣಿಸುವವನು ಬರಬೇಕಿದೆ’, ಎಂದನು.
ಸಾಕ್ರಟೀಸನು ಪ್ರತಿಯಾಗಿ, ‘ಸರಿ ಕ್ರಿಟೋ, ಅವರೆಲ್ಲರೂ ಸರಿಯೇ, ಹೀಗೆ ನನಗೆ ಸಮಯ ಕೊಡುವುದು ಸರಿ ಎಂದೆಣಿಸುತ್ತಿದ್ದಾರೆ, ಆದರೆ ಹಾಗೆ ಮಾಡುವುದು ನನಗೆ ಸರಿಯಿಲ್ಲ ಎಂದೆನಿಸುತ್ತಿದೆ. ನಿಧಾನವಾಗಿ ವಿಷ ಕುಡಿಯುವುದರಿಂದ ನಾನೇನನ್ನೂ ಗಳಿಸಿದಂತಾಗುವುದಿಲ್ಲ. ಈಗಾಗಲೇ ಹೋಗಿರುವ ಜೀವವನ್ನು ನಾನು ತಡೆ ಹಿಡಿಯಲಾದೀತೇ, ದಯವಿಟ್ಟು ನಾನು ಹೇಳಿದಂತೆ ಮಾಡು’, ಎಂದನು.
ಈ ಮಾತುಗಳನ್ನು ಕೇಳಿದ ಕ್ರಿಟೋ, ಸೇವಕನಿಗೆ ಸನ್ನೆ ಮಾಡಿದನು. ಆಗ ಸೇವಕನು ಒಳ ಹೋಗಿ ಸ್ವಲ್ಪ ಹೊತ್ತು ನಿಂತಿದ್ದು, ಮರಳಿ ಸೆರೆಮನೆಯಧಿಕಾರಿಯೊಂದಿಗೆ, ವಿಷದ ಪಾತ್ರೆಯನ್ನು ತಂದನು. ಆ ಸೇವಕನನ್ನು ಕುರಿತು ಸಾಕ್ರಟೀಸನು, ‘ನೀನು ನನ್ನ ನೆಚ್ಚಿನ ಸ್ನೇಹಿತ, ಈ ವಿಷಯದಲ್ಲಿ ಹೆಚ್ಚಿನ ಪರಿಣಿತಿ ಪಡೆದಿರುವವನು. ನಾನು ಹೇಗೆ ಮುಂದುವರೆಯಬೇಕೆಂದು ತಿಳಿಸಿಕೊಡು’, ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಆ ಸೇವಕನು, ‘ಇದನ್ನು ಕುಡಿದು ಕಾಲು ಸೋಲುವವರೆವಿಗೂ ನೀನು ನಡೆಯುತ್ತಿರಬೇಕು, ನಂತರ ಮಲಗಿಕೋ, ವಿಷ ತನ್ನ ಕೆಲಸವನ್ನು ಮಾಡುವುದು’, ಎಂದು, ವಿಷದ ಪಾತ್ರೆಯನ್ನು ಸಾಕ್ರಟೀಸನ ಕೈಗಿತ್ತನು. ಸ್ವಲ್ಪ ಅಳುಕದ ಸಾಕ್ರಟೀಸನು ಆ ಸೇವಕನ ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಿ ಪಾತ್ರೆಯನ್ನು ಕೈಗೆತ್ತಿಕೊಂಡು, ‘ಇಂತಹ ನೈವೇದ್ಯವನ್ನು ದೇವರಿಗರ್ಪಿಸುವ ಸಂದರ್ಭ ಬಂದರೆ, ನೀನು ತಯಾರಿರುವೆಯೋ ಅಥವಾ ಇಲ್ಲವೋ’, ಎಂದು ಕೇಳಿದನು. ಅದಕ್ಕಾತನು, ‘ನನ್ನ ಕೆಲಸ ತಯಾರು ಮಾಡಿಕೊಡುವುದಷ್ಟೇ, ಹೆಚ್ಚಿನದೇನೂ ತಿಳಿಯದು’ ಎಂದನು. ಅದಕ್ಕೆ ಸಾಕ್ರಟೀಸನು, ‘ನನಗರ್ಥವಾಯಿತು, ಆದರೂ ನಾನು ಈ ಲೋಕದಿಂದ ಪರಲೋಕಕ್ಕೆ ಮಾಡುವ ಪ್ರಯಾಣ ಸುಖದಾಯಕವಾಗಿರಲೆಂದು ಆ ದೇವರನ್ನು ಪ್ರಾರ್ಥಿಸುವೆ,’ ಎಂದು ಸ್ವಲ್ಪವೂ ಆವೇಶವಿಲ್ಲದೇ, ಆತಂಕವಿಲ್ಲದೇ, ನಗುಮೊಗದಿಂದ ವಿಷದ ಪಾತ್ರೆಯನ್ನು ತುಟಿಗೆ ತಗುಲಿಸಿಕೊಂಡು ಕುಡಿದನು.
ಅಲ್ಲಿಯವರೆವಿಗೆ ನಾವೆಲ್ಲರೂ ತಡೆಹಿಡಿದಿದ್ದ ದು:ಖ ಕಟ್ಟೆಯೊಡೆದಿತ್ತು. ಸಾಕ್ರಟೀಸನು ವಿಷವನ್ನು ಕುಡಿದದ್ದನ್ನು ನೋಡಿ, ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ. ನಾನಂತೂ ಮುಖ ಮುಚ್ಚಿಕೊಂಡು ದು:ಖಿಸಿದೆ. ಆದರೆ ಅದು ಆತನ ಸಾವಿನ ಬಗೆಗಿನ ಅಳುವಲ್ಲ, ಅಂತಹ ಮಿತ್ರನನ್ನು ಕಳೆದುಕೊಂಡ ದು:ಖಕ್ಕಾಗಿ. ನಾವೆಲ್ಲರೂ ಆ ಕ್ಷಣದಲ್ಲಿ ಹೇಡಿಗಳಂತೆ ಅತ್ತೆವು. ಶಾಂತನಾಗಿದ್ದ ಸಾಕ್ರಟೀಸನು, ‘ಏನಿದು ವಿಚಿತ್ರವಾದ ಅಳು? ಸಾಯುವವನು ಶಾಂತವಾಗಿ ಸಾಯಬೇಕೆಂದೇ, ಹೆಂಗಸರೆಲ್ಲರನ್ನೂ ನಾನು ಇಲ್ಲಿಂದ ಆಚೆಗೆ ಕಳುಹಿಸಿದೆ, ಈಗ ನೋಡಿದರೆ, ಗಂಡಸರಾದ ನೀವು ಹೆಂಗಸರಂತೆ ಅಳುತ್ತಿರುವಿರಿ. ನೀವುಗಳು ಶಾಂತರಾಗಿರಿ’, ಎಂದನು. ಈ ಮಾತುಗಳನ್ನು ಕೇಳಿ ನಮಗೆಲ್ಲರಿಗೂ ನಾಚಿಕೆಯಾಯಿತು. ಕಣ್ಣೀರನ್ನು ತಡೆಹಿಡಿದೆವು. ಆತನು ಕಾಲು ಸೋಲುವವರೆವಿಗೂ ಮುನ್ನಡೆಯುತ್ತಿದ್ದನು, ನಂತರ ಹಾಗೆಯೇ ಅಂಗಾತ ಮಲಗಿಕೊಂಡನು. ಆಗ ಸೇವಕನು, ಅವನ ಕಾಲುಗಳನ್ನು ಒತ್ತಿ ಹಿಡಿದು, ಅರಿವಾಗುತ್ತಿದೆಯೇ ಎಂದು ಕೇಳಿದನು. ಇಲ್ಲವೆನ್ನಲು ಮೆಲ್ಲ ಮೆಲ್ಲನೆ ಮೇಲಕ್ಕೆ ಒತ್ತಿ ಹಿಡಿದು, ಅರಿವಾಗುತ್ತಿದೆಯೇ ಎಂದು ಕೇಳುತ್ತಿದ್ದನು. ಆಗ ಸಾಕ್ರಟೀಸನು, ‘ವಿಷವು ಹೃದಯವನ್ನು ಮುಟ್ಟಲು ಎಲ್ಲ ಕೊನೆಗೊಳ್ಳುವುದು, ಹೆಚ್ಚಿನ ಶ್ರಮ ತೆಗೆದುಕೊಳ್ಳಬೇಡ’ ಎಂದು ಹೇಳಿದನು. ಕೊನೆಯದಾಗಿ, ಸಾಕ್ರಟೀಸನು ತನ್ನ ಶಿಷ್ಯ ಕ್ರಿಟೋವನ್ನು ಉದ್ದೇಶಿಸಿ, ‘ಕ್ರಿಟೋ, ಅಸ್ಕ್ಲೆಪಿಯಸ್ಸನಿಗೆ ನಾನೊಂದು ಕೋಳಿಯನ್ನು ಕೊಡಬೇಕಿದೆ, ಆ ಸಾಲವನ್ನು ನೀನು ತೀರಿಸುವೆಯಾ?’ ಎಂದು ಕೇಳಿದನು. ಕ್ರಿಟೋ ‘ಆಗಲಿ’, ಎಂದು, ‘ಇನ್ನೇನಾದರೂ ಹೇಳಲು ಇದೆಯೇ’ ಎನ್ನಲು, ಆತನಿಂದ ಉತ್ತರ ಬರಲಿಲ್ಲ. ಪ್ರಪಂಚದಲ್ಲೇ ಮೇಧಾವಿಯಾದ ಇಂತಹ ಮಹಾನ್ ಆತ್ಮವನ್ನು ನಾನೆಂದಿಗೂ ಮತ್ತೆ ನೋಡಲೇ ಇಲ್ಲ”.
One reply on “ಸಾಕ್ರಟೀಸನ ಕೊನೆ – ಪ್ಲೇಟೋವಿನ ಕಣ್ಣಿನಲ್ಲಿ”
Nice blog