
ಗೌರಿ ಎಂಬ ಪದ ಪಾರ್ವತೀದೇವಿಗೆ ಪರ್ಯಾಯವಾದ ಪದ. ಆಕೆಯು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಕೊನೆಯದನ್ನು ತನ್ನ ಅಧಿಕಾರದಲ್ಲಿ ಪ್ರಧಾನವಾಗಿ ಹೊಂದಿರುವ ಮಹಾದೇವನ ಅರ್ಧಾಂಗಿ, ಮಹಾದೇವಿ. ಆಕೆಯು ಸಂಹಾರ ಮಾಡುವಾಗ ಕೃಷ್ಣವರ್ಣವನ್ನು ಅಲಂಕರಿಸಿರುವ ಕಾಳೀ ಮಾತೆ, ವಿದ್ಯಾಪ್ರದಾನ ಮಾಡುವಾಗ ಶ್ಯಾಮಲ ವರ್ಣದ ಶ್ಯಾಮಲಾಂಬಿಕೆಯಂತೆ, ಸೌಮಂಗಲ್ಯ, ಸೌಭಾಗ್ಯ ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣದಿಂದ ಮತ್ತು ಕೆಲವೊಮ್ಮೆ ಹಿಮ ಶುಭ್ರ ವರ್ಣದಿಂದ ಕಂಗೊಳಿಸುವ ಗೌರೀಮಾತೆ.
ಭಾದ್ರಪದ ಶುಕ್ಲ ತೃತೀಯ ತಿಥಿಯಂದ (ತದಿಗೆ) ಶ್ರೀ ಗೌರಿ ಹಬ್ಬ. ಅಂದು ಸೂರ್ಯೋದಯ ಸಮಯದಲ್ಲಿ ತೃತೀಯ ತಿಥಿ ಇರಬೇಕು. ಗಣಪತಿಯ ಪೂಜೆಗೆ ಯೋಗ್ಯವಾಗಿರುವ ಚತುರ್ಥೀ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯದೊಡನೆ ಚತುರ್ಥೀ ಯೋಗವು ಕೂಡಿ ಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿದೇವಿಯು ಪರ್ವತ ಸಾರ್ವಭೌಮನಾದ ಹಿಮವಂತನ ಮಗಳು. ವರುಷಕ್ಕೊಮ್ಮೆ ತವರಿಗೆ ಬರುವ ಅವಳಿಗಾಗಿ ಹಬ್ಬವನ್ನು ಮಾಡುವುದು.
ಗೌರೀ ದೇವಿಯನ್ನು ಹೃದಯದಲ್ಲಿ ಧ್ಯಾನ ಮಾಡಿ ಅನಂತರ ಮಾತೆಗೆ ಬಾಹ್ಯಪೂಜೆ ಅರ್ಪಿಸಬೇಕು. ಗೌರಿದೇವಿಯ ಪ್ರತಿಮೆಯನ್ನು ಸುವರ್ಣ ರೂಪದಲ್ಲಿ, ಕಲಶ ರೂಪದಲ್ಲಿ, ಅರಿಶಿನ ರೂಪದಲ್ಲಿ ಅಥವಾ ಮಣ್ಣಿನ ರೂಪದಲ್ಲಿ ನಿರ್ಮಿಸಿ ಪೂಜೆ ಸಲ್ಲಿಸಬೇಕು. ಮರಳಿನಲ್ಲೂ ಗೌರಿಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವಿದೆ. ನದಿತಟದಲ್ಲಿರುವ ಮರಳನ್ನು ಅರಿಶಿನದ ಬಟ್ಟೆಯಲ್ಲಿ ಇರಿಸಿ ಗಂಟು ಹಾಕಿ ಷೋಡಶೋಪಚಾರ ಪೂಜೆಯನ್ನು ಅರ್ಪಿಸಿ, ಮನೆಗೆ ಅಥವಾ ದೇಗುಲಕ್ಕೆ ತಂದು ಪೂಜಿಸುವರು. ಆಚಮನ, ಸಂಕಲ್ಪ, ಕಳಸ ಪೂಜೆಯ ನಂತರ ಮಹಾಗಣಪತಿಗೆ ಪೂಜಿಸಿ, ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಬೇಕು.
ಪುಷ್ಪಾಕ್ಷತೆಯಿಂದ ಆವಾಹಿಸಿ, ರತ್ನಸಿಂಹಾಸನವನ್ನು ಸಮರ್ಪಿಸಬೇಕು. ಹೊಸದಾದ ಹದಿನಾರು ಗಂಟುಗಳ ದಾರವನ್ನೂ ದೇವಿಯೊಂದಿಗೆ ಪೂಜೆಗಿಡಬೇಕು. ಯಥಾವತ್ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಮತ್ತಿತರೇ ಸೌಭಾಗ್ಯ ದ್ರವ್ಯಗಳನ್ನು ದೇವಿಗೆ ಅರ್ಪಿಸಬೇಕು. ಆಭರಣವೆಂದು ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವನ್ನು ಅರ್ಪಿಸುವುದು ಈಗಿನ ರೂಢಿ. ಹದಿನಾರು ಗಂಟುಗಳ ದಾರಕ್ಕೆ (ದೋರ) ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌವರಿ, ಭದ್ರಾ, ವಿಷ್ಣು ಸೋದರೀ, ಮಂಗಳ ದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರಪತ್ನೀ, ದಾಕ್ಷಾಯಣೀ, ಕೃಷ್ಣವೇಣೀ, ಭವಾನೀ, ಲೋಲೇಕ್ಷಣಾ, ಮೇನಕಾತ್ಮಜಾ, ಸ್ವರ್ಣಗೌರೀ ಎಂಬ ಹದಿನಾರು ಹೆಸರುಗಳಿಂದ ಪೂಜಿಸಬೇಕು. ನಂತರ ದೇವಿಗೆ ಅಷ್ಟೋತ್ತರ ಶತನಾಮಾವಳಿ ಪೂರ್ವಕ ಕುಂಕುಮಾರ್ಚನೆ ಮಾಡಿ, ಧೂಪ, ದೀಪ, ನೈವೇದ್ಯ, ತಾಂಬೂಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ ಮತ್ತು ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಬೇಕು. ಅಂದು ವಿಶೇಷವಾದ ಅನ್ನ ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸುವುದೂ ವಾಡಿಕೆ. ನಂತರ ಪೂಜಿಸಿದ ದಾರವನ್ನು ಹೂವಿನೊಂದಿಗೆ ಕೈಗೆ ಹಿರಿಯರಿಂದ ಕಟ್ಟಿಸಿಕೊಂಡು ಅವರಿಗೆ ನಮಸ್ಕಾರವನ್ನು ಸಲ್ಲಿಸಬೇಕು.
ಮಾರನೆಯದಿನ ಮಗನಾದ ಗಣಪತಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಬರುವನು. ಅವನಿಗೆ ಪೂಜೆ ಸಲ್ಲಿಸುವುದೇ ಗಣಪತಿ ಹಬ್ಬ. ಮನೆಯ ಮಗಳಾದ ಗೌರಿಯನ್ನು ಕಳುಹಿಸಿಕೊಡುವಾಗ ಸೋಬಲಕ್ಕಿ ಇಡುವರು. ಅವಳನ್ನು ಕಳುಹಿಸುವದಕ್ಕೆ ವಿಶೇಷದಿನವನ್ನು ನೋಡುವುದು ಪರಿಪಾಠ. ಮಂಗಳವಾರ, ಶುಕ್ರವಾರ, ಪಂಚಮೀ, ನವಮೀ ತಿಥಿಗಳಂದು ಮನೆಯ ಮಗಳನ್ನು ಕಳುಹಿಸುವುದಿಲ್ಲ.
ಗಣಪತಿ ಪೂಜೆ
ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ|
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: ಸೀದ ಸಾದನಮ್
ಇದು ವೇದ ಮಂತ್ರವಾದರೆ, ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂಬುದು ಬೀಜಾಕ್ಷರ ಮಂತ್ರ.
ತ್ವಮೇವ ಕೇವಲಂ ಕರ್ತಾಸಿ
ತ್ವಮೇವ ಕೇವಲಂ ಧರ್ತಾಸಿ
ತ್ವಮೇವ ಕೇವಲಂ ಹರ್ತಾಸಿ
ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ
ತ್ವಂ ಸಾಕ್ಷಾದಾತ್ಮಾಸಿ ಆತ್ಮಂ
ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್.
ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ.
ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ.
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು.
ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ.
ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.
ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.
ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್