1975-76ರಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ನನ್ನ ಮುಂದಿನ ಶಿಕ್ಷಣದ ಬಗ್ಗೆ ಆಗ ತಾನೇ ನಿವೃತ್ತರಾಗಿದ್ದ ನನ್ನ ತಂದೆಗೆ ಚಿಂತೆಯಾಗಿತ್ತು. ಅವರ ಸೋದರಮಾವನವರಾಗಿದ್ದ (ಕನ್ನಡ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು) ಕೆ.ವೆಂಕಟರಾಮಪ್ಪನವರ ಬಳಿಯಲ್ಲಿ ಸಹಾಯಕ್ಕೆಂದು ಹೋಗಿದ್ದರು. ಅವರಲ್ಲಿ ವಿಷಯವನ್ನು ಅರುಹಿದಾಗ, ಅವರು ಮೊದಲಿಗೆ ತಮ್ಮ ಮನೆಯಲ್ಲಿಯೇ ಬಿಟ್ಟಿರಲು ಹೇಳಿದ್ದರು. ಅದಕ್ಕೆ ನನ್ನ ತಂದೆ ಒಪ್ಪದಿದ್ದಾಗ, ಹೊಯ್ಸಳ ಕರ್ನಾಟಕ ಹಾಸ್ಟೆಲ್‍ಗೆ ಸೇರಿಸು, ಕೃಷ್ಣ ವಟ್ಟಂ ಅವರಿಗೆ ಪತ್ರ ಬರೆದುಕೊಡ್ತೀನಿ ಅಂದಿದ್ದರು. ಇವನ ಓದಿಗೆ ಹೇಗಪ್ಪಾ ಹಣ ಹೊಂದಿಸುವುದು ಅಂತ ಯೋಚಿಸ್ತಿದ್ದಾಗ, ವೆಂಕಟರಾಮಪ್ಪನವರೇ ಮತ್ತೆ ಕೇಳಿದರು. ’ಅಲ್ಲಯ್ಯಾ! ಈಗ ನಿನಗೆ ಪಿಂಚಣಿಯೂ ಇಲ್ಲ. ಇನ್ನೂ ಎರಡು ಮಕ್ಕಳ ಓದು, ಮಗಳ ಮದುವೆ ಅಂತೆಲ್ಲಾ ಬಹಳ ಖರ್ಚಿದೆ. ಮುಂದೆ ಹೇಗೆ ಜೀವನ ನಡೆಸ್ತಿಯಾ? ಅದರ ಬಗ್ಗೆ ಏನಾದರೂ ಯೋಚಿಸಿದ್ದೀಯಾ?’ ಅದಕ್ಕೆ ನಮ್ಮ ಅಪ್ಪನಿಂದ ನಕಾರ ಬರಲು, ಅವರೇ ಮತ್ತೆ ಕೇಳಿದರು, ’1941-42ರ ಸಮಯದಲ್ಲಿ ನೀನು ಮನೆ ಬಿಟ್ಟು ಹೋಗಿದ್ದೆ ಅಲ್ವ’? [(3 ತಿಂಗಳ ಮಗುವಿನಿಂದ ನಮ್ಮ ತಂದೆ ಬೆಳೆದದ್ದೇ ಅವರ ಮನೆಯಲ್ಲಿ). ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ಅದಾಗಿದ್ದು, ಆಗ ನಮ್ಮ ತಂದೆ ತಮ್ಮ ಮಿತ್ರರೊಂದಿಗೆ ಪೆನುಕೊಂಡೆಯ ಗಗನಮಹಲ್ ಸುಟ್ಟಿದ್ದರು. ಆ ಘಟನೆ ಪೊಲೀಸ್ ಕೇಸ್ ಆಗಿ, ಇವರೆಲ್ಲರನ್ನೂ ಜೈಲಿಗೆ ತಳ್ಳಿದ್ದರು.] ’ಅದರ ಬಗ್ಗೆ ಸ್ವಲ್ಪ ಹೇಳು’ ಎನ್ನಲು, ನಮ್ಮ ತಂದೆ ಆ ಘಟನೆ ಎಲ್ಲವನ್ನೂ ಹೇಳಿದರು (ಆ ಘಟನೆ ಬಗ್ಗೆ ನಮ್ಮ ತಂದೆ ಹೇಳ್ತಿದ್ದದ್ದು, ಅದೊಂದು ಪುಂಡಾಟಿಕೆ. ಅದರ ಬಗ್ಗೆ ಸವಿಸ್ತಾರವಾಗಿ ಈ ಕೆಳಗೆ ಬರೆದಿರುವೆ). ಆಗ ಅವರು ಪ್ರತಿಯಾಗಿ, ’ಅಲ್ಲಯ್ಯಾ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೀಯ. ನಿನಗೇನಾದರೂ ಪಿಂಚಣಿ, ಮರ್ಯಾದೆ ಏನಾದರೂ ಸಿಕ್ಕಿದೆಯಾ? ಇಲ್ಲ. ಇದರ ಬಗ್ಗೆ ನೀನ್ಯಾಕೆ ಯೋಚಿಸಬಾರದು ಎನ್ನಲು, ನನ್ನ ತಂದೆ, ’ಅದೇಮೋ ಮಾವ, ನಾಕೇಮೀ ತೆಲೀದು, ನುವ್ವೇ ಏಮನ್ನಾ ಚೇವಲಾ’ ಅಂದರು.

ಆಗ ವೆಂಕಟರಾಮಪ್ಪನವರು, ಒಮ್ಮೆ ತಮ್ಮ ಶಿಷ್ಯರಾಗಿದ್ದ, ಆಗ ಕೇಂದ್ರ ಸರಕಾರದಲ್ಲಿ ರಾಜ್ಯ ಗೃಹ ಸಚಿವರಾಗಿದ್ದ ಎಫ್.ಎಚ್.ಮೊಹಿಸೀನ್ ಅವರಿಗೆ ಪತ್ರ ಬರೆದು, ತನ್ನ ಸೋದರಳಿಯನಿಗೆ ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡಲಾಗುವ ಪಿಂಚಣಿ ಕೊಡಿಸುವಂತೆ ಕೋರಿಕೊಂಡಿದ್ದರು.
ವೆಂಕಟರಾಮಪ್ಪನವರು ಪತ್ರ ಬರೆದ ಮೂರು-ನಾಲ್ಕು ತಿಂಗಳುಗಳಲ್ಲಿ ನಮ್ಮ ತಂದೆಗೆ ಸ್ವಾತಂತ್ರ್ಯ ಯೋಧರ ಪಿಂಚಣಿ ಮಂಜೂರಾಗಿತ್ತು. ಕೇಂದ್ರ ಸರಕಾರದ ಮಾಹೆಯಾನ 300 ರೂಪಾಯಿ ಪಿಂಚಣಿ ಆದರೆ, ಕರ್ನಾಟಕ ರಾಜ್ಯ ಸರ್ಕಾರದ 75 ರೂಪಾಯಿಗಳೂ ಬರುತ್ತಿತ್ತು. ಅದಲ್ಲದೇ ನನ್ನ ಹಾಸ್ಟೆಲ್ ವೆಚ್ಚ, ಪುಸ್ತಕಗಳ ವೆಚ್ಚ, ಕಾಲೇಜು ಫೀ ಮಾಫಿ ಇತ್ಯಾದಿಗಳೂ ಮಂಜೂರಾಗಿದ್ದವು. ನಮ್ಮೂರಿನ ಹತ್ತಿರದ ತಾಲೂಕಾದ ಚಳ್ಳಕೆರೆಯಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನವನ್ನೂ ಮಾಡಿದ್ದರು. ನೋಡಿ, ದೈವ ಲೀಲೆ ಅಂದ್ರೆ ಹಾಗೆ. ಸ್ವಲ್ಪ ತಿಂಗಳ ಹಿಂದೆ ಯಾರೂ ತಿಳಿಯರಿಯದ, ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಿದ್ದ ಜೀವಿಗೆ, ಅಂದು ರಾಜ ಸನ್ಮಾನ! ಅವರು ನಿಧನರಾದಾಗ, ಅಂತ್ಯಕ್ರಿಯೆಯ ಮುಂಚೆ ಪಾರ್ಥಿವ ಶರೀರದ ಮೇಲೆ ರಾಷ್ಟ್ರ ಧ್ವಜವನ್ನು ಇಟ್ಟಿದ್ದರು. ನನ್ನ ತಾಯಿ ನಿಧನರಾದಾಗಲೂ ಅದೇ ಮರ್ಯಾದೆ ಕೊಟ್ಟಿದ್ದರು.
ಪಿಂಚಣಿ ಮಂಜೂರಾತಿ ವಿಷಯದ ಬಗ್ಗೆ ಸ್ವಲ್ಪ ಮಾಹಿತಿ ಕೊಡುವೆ. ದಾಖಲೆಗಳು ಸರಿಯಾಗಿ ಇರದಿದ್ದ ಕಾರಣ ಪಿಂಚಣಿ ಮಂಜೂರಾತಿ ಸುಲಭವಾಗಿರಲಿಲ್ಲ. ಆದರೂ ಬಹಳ ಸುಲಭವೆನ್ನುವಂತೆ ಮಾಡಿದ್ದರು. ಅದು ಹೇಗಾಯ್ತು ಅಂದ್ರೆ, 1941-42ರ ಸಮಯವದು. ಆಗ ಸ್ವಾತಂತ್ರ್ಯ ಸಂಗ್ರಾಮದ ಉತ್ತುಂಗ ಸಮಯ. ದೇಶದಲ್ಲೆಲ್ಲಾ ದೇಶಭಕ್ತರು ಬ್ರಿಟಿಷ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದರು. ಆಂಧ್ರಪ್ರದೇಶದ ಪೆನುಕೊಂಡೆಯಲ್ಲಿ ಲಲಿತ ಮಹಲ್ ಎಂಬ ಬ್ರಿಟಿಷರ ಒಂದು ಕಟ್ಟಡವಿತ್ತು. ನನ್ನ ತಂದೆಯ ಜೊತೆ ಇನ್ನು ಮೂವರು ಸೇರಿ ರಾತ್ರಿಯ ಹೊತ್ತಿನಲ್ಲಿ ಅದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರು. ಆ ಕಾರಣ ಇವರು ನಾಲ್ವರನ್ನೂ ಪೊಲೀಸರು ದಸ್ತಗಿರಿ ಮಾಡಿ ಜೇಲಿನಲ್ಲಿಟ್ಟಿದ್ದರು. ಸುಮಾರು ಒಂದು ವರ್ಷದ ಅವಧಿಯಲ್ಲಿ, ಕೆಲವು ಕಾಲ ಅನಂತಪುರ, ಕೆಲವು ಕಾಲ ಕಡಪ, ಇನ್ನು ಕೆಲವು ಕಾಲ ಕರ್ನೂಲಿನ ಜೇಲಿಗಳಲಿಟ್ಟಿದ್ದರು. ಕೋರ್ಟಿನಲ್ಲೂ ಇದರ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಪೆನುಕೊಂಡೆಯ ಪೊಲೀಸ್ ಸ್ಟೇಷನ್ನಿಗೆ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹೊಸದಾಗಿ ಬಂದಿದ್ದರು. ಕೈದಿಗಳೆಲ್ಲರ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದರು. ನಮ್ಮ ತಂದೆಯ ಸರದಿ ಬಂದಾಗ, ’ಯಾರ ಮನೆಯವನು, ನೀನು?’ ಎಂದದ್ದಕ್ಕೆ ಇವರು ’ಕೋಟಗುಡ್ಡ ಸುಬ್ಬಾಶಾಸ್ತ್ರಿಗಳ ಮೊಮ್ಮಗ’ ಅಂದ್ರಂತೆ. ಅದಕ್ಕೆ ಪ್ರತ್ಯುತ್ತರವಾಗಿ, ’ಅಲ್ಲಯ್ಯಾ, ಅವರು ನನ್ನ ಗುರುಗಳು. ಅಂತಹವರ ಮನೆಯವನಾಗಿ ನೀನು ಜೈಲಿಗೆ ಬರೋದಾ! ನಡೆ ನಡೆ’ ಅಂತ ಜೈಲಿನಿಂದ ಮನೆಗೆ ಕಳುಹಿಸಿದ್ದರಂತೆ. ಆಗಿನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿತ್ತು. ಮುಂದಿನ ಕೋರ್ಟಿನ ವಿಚಾರಣೆ ಇವರು ಗೈರಾಗಿದ್ದರು. ಹಾಗಾಗಿ ಕೋರ್ಟಿನ ಮುಂದಿನ ವಿಚಾರಣೆಯ ದಾಖಲೆಗಳಲ್ಲಿ ಇವರ ಬಗ್ಗೆ ಉಕ್ತವಾಗಿರಲಿಲ್ಲ. ಇವರನ್ನು ಬಿಟ್ಟ ಸ್ವಲ್ಪವೇ ದಿನಗಳಲ್ಲಿ, ಕೋರ್ಟಿನ ವಿಚಾರಣೆಯೂ ಮುಗಿದು, ಇತರರನ್ನೂ ಜೈಲಿನಿಂದ ಮುಕ್ತಿಗೊಳಿಸಿದ್ದರಂತೆ. ಹಾಗಾಗಿ ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನೂ ಸ್ವಾತಂತ್ರ್ಯ ವೀರರೆಂದು ಪರಿಗಣಿಸಿದರೂ, ಇವರನ್ನು ಮಾತ್ರ ಹಾಗೆ ಪರಿಗಣಿಸಿರಲಿಲ್ಲ. ರಾಜ್ಯ ಗೃಹ ಮಂತ್ರಿಗಳ ಆದೇಶದ ಮೇರೆಗೆ, ಪಿಂಚಣಿ ಪಡೆಯುತ್ತಿದ್ದ ಆ ಇನ್ನು ಮೂವರ ದಾಖಲೆಗಳ ಆಧಾರದ ಮೇಲೆ ಇವರ ದಾಖಲೆಯನ್ನು ಸೃಷ್ಟಿಸಿದ್ದರು. ನಿಜಕ್ಕೂ ಇಷ್ಟೆಲ್ಲಾ ಕೆಲಸ ಆಗುತ್ತದೆ ಎಂಬ ನಿರೀಕ್ಷೆ ನಮಗಿರಲಿಲ್ಲ.

ನನ್ನ ತಂದೆ ಆಗಾಗ್ಯೆ ಹೇಳುತ್ತಿದ್ದ ಒಂದು ಘಟನೆ ನೆನಪಾಗುತ್ತಿದೆ. ನನ್ನ ತಂದೆ ಜೈಲಿನಲ್ಲಿದ್ದಾಗಲೇ, ಒಬ್ಬ ಪಂಜಾಬಿಯನ್ನೂ ಸೆರೆಹಿಡಿದಿದ್ದರಂತೆ. ಆತ ಸೇನೆಯಲ್ಲಿ ಯೋಧನೆಂಬುದು ಪೊಲೀಸರಿಗೆ ಆಗ ತಿಳಿಯದು. ಆತ ಯೋಧನೆಂದು ಹೇಳಿದ್ದರೂ ನಂಬದೇ, ಕಿಡಿಗೇಡಿಯೆಂದೂ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬನೆಂದೂ ಸೆರೆಮನೆಯಲ್ಲಿ ಇಟ್ಟಿದ್ದರಂತೆ. ಆತನ ಹಿರಿಯ ಅಧಿಕಾರಿಗಳಿಂದ ಆತನ ಬಗ್ಗೆ ಸಮಜಾಯಿಶಿ ಬರುವುದು ಸ್ವಲ್ಪ ದಿನಗಳೇ ಹಿಡಿದುವು. ಅದಾದ ನಂತರ ಆತನ ಕ್ಷಮೆ ಕೇಳಿ ಪೊಲೀಸರು ಬಿಟ್ಟಿದ್ದರಂತೆ. ಆತ ಸೆರೆಯಲ್ಲಿದ್ದಾಗ ಪ್ರತಿ ನಿತ್ಯವೂ ಆತನಿಗೆ ಪೂರಿ ಮತ್ತು ಶ್ರೀಖಂಡ ಬೇಕಿತ್ತಂತೆ. ಅಲ್ಲಿಯ ಜೇಲಧಿಕಾರಿಗಳು ಎಲ್ಲರಿಗೂ ಕೊಡುವಂತೆ ಅವನಿಗೂ ಚಪಾತಿ, ಅನ್ನ ಕೊಡುತ್ತಿದ್ದರಂತೆ. ಸ್ವಲ್ಪ ದಿನಗಳಲ್ಲಿ ಆತನ ಕೋರಿಕೆಯಂತೆ ಪೂರಿ ಶ್ರೀಖಂಡ ತರಿಸಿಕೊಟ್ಟಿದ್ದರಂತೆ. ಆತ ಇವರುಗಳೊಂದಿಗೆ ಹಂಚಿ ತಿಂದಾಗ, ಅಲ್ಲಿಯವರೆವಿಗೂ ಜೀವನದಲ್ಲಿ ಪೂರಿ ಶ್ರೀಖಂಡ ತಿನ್ನದಿದ್ದವರಿಗೆ ಇವರಲ್ಲಿ ಆಗ ಹಬ್ಬದ ವಾತಾವರಣವಂತೆ. ಆತನ ದಿರಿಸಿನಲ್ಲಿ ನಾಲ್ಕೈದು ಕಡೆ ಪಾಕಿಟುಗಳಿದ್ದು, ಎಲ್ಲದರಲ್ಲೂ ಹತ್ತರ, ನೂರರ ನೋಟುಗಳಿದ್ದುವಂತೆ.
One reply on “ಸ್ವಾತಂತ್ರ್ಯ ಸೇನಾನಿಗಳಿಗೊಂದು ನಮನ”
🙏