ಸ್ವಹಿತದೆಡೆಗೇ ಮನ

kogile

ಮತ್ತೆ ವಸಂತನಾಗಮನ
ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ
ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ
ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ

ಮೇಲೇರುತಿದೆ ಉರಿ ಬಿಸಿಲು
ಕಾಲ್ಕೆಳಗೆ ಸುಡು ಕಲ್ನಾರು
ಮರ ಒಣಗಿದರೇನು
ಗಿಡ ಚಿಗುರಿದರೇನು

ಇಂದಿನ ಹಸಿವು ತಣಿಸಬೇಕು
ಮಕ್ಕಳ ನಾಳೆ ಸುಗಮವಾಗಿರಿಸಿರಬೇಕು
ಇದೇ ನನ್ನ ಹಂಬಲ
ಇದಕಾಗೇ ನನ್ನ ಚಿಂತನೆ

ಒಮ್ಮೆ ಕೂಗಿದೆ ನಾನು
ಮಗು ಬೀಳುತಿರಲು,
ಅದ ಹಾಡೆಂದರು
ತಾವು ನಲಿದರು 😦

ಹಸಿವಲಿ ನರಳಿದೆ
ಅದನರ್ಥ ಮಾಡಿಕೊಳ್ಳದವರು
ಅದನೂ ಹಾಡೆಂದರು
ಕಥೆ ಕವನ ಕಟ್ಟಿದರು

ಕವಿಯಂತೆ ಮನ ಓಡಿಸಿದರು
ಕಪಿಯಂತೆ ಮರದೆಡೆಗೆ ನೋಟವಿಟ್ಟರು
ನನ್ನಿಂದ ಇನ್ನೂ ಹೆಚ್ಚು ಅಪೇಕ್ಷಿಸಿದರು
ಎನ್ನ ತಿಳಿಯದಾದರು
ತಿಳಿಯಲು ಇಚ್ಛೆಯೂ ಇಲ್ಲದವರು
ತಮ್ಮ ಸಂತಸವೇ ಮಿಗಿಲೆಂದವರು

ನನ್ನಳಲು ನನಗೇ ಗೊತ್ತು
ಮೂಢರಿಗೇನು ತಿಳಿದೀತು!
ನನ್ನ ಸ್ನೇಹಿತೆ ಕಾಗೆಯ
ವೈರಿ ಎಂದರು, ಎನ್ನ ಹೊನ್ನಶೂಲಕೇರಿಸಿದರು

ನಿಮಗೇನು ಗೊತ್ತು? ಹೇಗೆ ತಾನೆ ಗೊತ್ತಾಗಬೇಕು
ನಾನೇನೇ ಉಲಿದರೂ ಹಾಡೆಂದು ಅರ್ಥೈಸುವಿರಿ

ಪ್ರತಿಕ್ರಿಯೆಗಳು ಬರಲಿ, ಬಾರದಿರಲಿ, ಮನ ಮುದುಡಿಸಿಕೊಳ್ಳದೆಯೇ, ವಾರಕ್ಕೊಂದರಂತೆ ಶತಕ ಚಿತ್ರಗಳನ್ನು ಇತ್ತು, ಅನಿಸಿಕೆಗಳನ್ನು ಮೂಡಿಸಲು ಹಲವು ಮನಗಳಿಗೆ ಅನುವು ಮಾಡಿ ಕೊಟ್ಟ ಅಮರ, ಶ್ರೀ ಮತ್ತು ಶ್ರೀನಿಧಿಯವರುಗಳಿಗೆ ಮನಃಪೂರ್ವಕ ಕೃತಜ್ಞತೆಗಳು

Advertisements

ದತ್ತಾತ್ರೇಯ ತವಶರಣಂ

ಗೆಳೆಯ ಶ್ರೀಯುತ ನಾರಾಯಣ ಶಾಸ್ತ್ರಿಗಳು ದತ್ತ ಭಜನೆಯನ್ನು ಬರೆದು ಕಳುಹಿದ್ದಾರೆ. ಅದನ್ನು ನನ್ನ ಬ್ಲಾಗಿನಲ್ಲಿ ಏರಿಸಿ, ಜೊತೆಗೆ ನನಗೆ ತಿಳಿದ ಒಂದೆರಡು ಮಾತುಗಳನ್ನು ಬರೆಯಲು ತಿಳಿಸಿದ್ದಾರೆ.

ಮೊದಲಿಗೆ ಅವರ ಬರಹವನ್ನು ನಿಮ್ಮ ಮುಂದಿರಿಸುವೆ.

ದತ್ತಾತ್ರೇಯ ತವಶರಣಂ


ದತ್ತಾತ್ರೇಯ ತವಶರಣಂ | ದತ್ತ ನಾಥ ತವಶರಣಂ ||

ತ್ರಿಗುಣಾತ್ಮಕ ತ್ರಿಗುಣಾತೀತ | ತ್ರಿಭುವನ ಪಾಲಕ ತವಶರಣಂ ||

ಶಾಶ್ವತಮೂರ್ತೇ ತವಶರಣಂ | ಶ್ಯಾಮಸುಂದರ ತವಶರಣಂ ||

ಶೇಷಾಭರಣ ಶೇಷಭೂಷಣ | ಶೇಷಶಾಯಿಯೇ ತವಶರಣಂ ||

ಷಡ್ಭುಜಮೂರ್ತೇ ತವಶರಣಂ | ಷಡ್ಭುಜಯತಿವರ ತವಶರಣಂ |

ದಂಡಕಮಂಡಲ ಗದಾ ಪದ್ಮ | ಶಂಖ ಚಕ್ರ ಧರ ತವಶರಣಂ ||

ಕರುಣಾನಿಧೇ ತವಶರಣಂ | ಕರುಣಾಸಾಗರ ತವಶರಣಂ ||

ಕೃಷ್ಣಾಸಂಗಮ ತರುವರವಾಸ | ಭಕ್ತವತ್ಸಲ ತವಶರಣಂ ||

ಶ್ರೀ ಗುರುನಾಥ ತವಶರಣಂ | ಸದ್ಗುರುನಾಥ ತವಶರಣಂ ||

ಶ್ರೀಪಾದ ಶ್ರೀ ವಲ್ಲಭ ಗುರುವರ | ನೃಸಿಂಹ ಸರಸ್ವತಿ ತವಶರಣಂ ||

ಕೃಪಾಮೂರ್ತೇ ತವಶರಣಂ | ಕೃಪಾಸಾಗರ ತವಶರಣಂ ||

ಕೃಪಾಕಟಾಕ್ಷ ಕೃಪಾವಲೋಕನ | ಕೃಪಾನಿಧೇ ತವಶರಣಂ ||

ಕಾಲಾಂತಕ ತವಶರಣಂ | ಕಾಲನಾಶಕ ತವಶರಣಂ ||

ಪೂರ್ಣಾನಂದ ಪೂರ್ಣಪರೇಶ | ಪುರಾಣಪುರುಷ ತವಶರಣಂ ||

ಜಗದೀಶ್ವರ ತವಶರಣಂ | ಜಗನ್ನಾಥ ತವಶರಣಂ ||

ಜಗತ್ಪಾಲಕ ಜಗದಾಧೀಶ | ಜಗದೋದ್ಧಾರಕ ತವಶರಣಂ ||

ಅಖಿಲಾಂತಕ ತವಶರಣಂ | ಅಖಿಲೈಶ್ವರ್ಯ ತವಶರಣಂ ||

ಭಕ್ತಜನಪ್ರಿಯ ಭವಭಯನಾಶಕ | ಪ್ರಸನ್ನವದನ ತವಶರಣಂ ||

ದಿಗಂಬರ ತವಶರಣಂ | ದೀನದಯಾಘನ ತವಶರಣಂ ||

ದೀನನಾಥ ದೀನದಯಾಲೊ | ದೀನೋದ್ಧಾರಕ ತವಶರಣಂ ||

ತಪೋಮೂರ್ತೇ ತವಶರಣಂ | ತೇಜೋರಾಶೇ ತವಶರಣಂ ||

ಬ್ರಹ್ಮಾನಂದ ಬ್ರಹ್ಮಸನಾತನ | ಬ್ರಹ್ಮಮೋಹನ ತವಶರಣಂ ||

ವಿಶ್ವಾತ್ಮಕ ತವಶರಣಂ | ವಿಶ್ವರಕ್ಷಕ ತವಶರಣಂ ||

ವಿಶ್ವಾಂಬರ ವಿಶ್ವಜೀವನ | ವಿಶ್ವಪರಾತ್ಪರ ತವಶರಣಂ ||

ವಿಘ್ನಾಂತಕ ತವಶರಣಂ | ವಿಘ್ನನಾಶಕ ತವಶರಣಂ ||

ಪ್ರಣವಾತೀತ ಪ್ರೇಮವರ್ಧನ | ಪ್ರಕಾಶಪುರುಷ ತವಶರಣಂ ||

ನಿಜಾನಂದ ತವಶರಣಂ | ನಿಜಪದದಾಯಕ ತವಶರಣಂ ||

ನಿತ್ಯ ನಿರಂಜನ ನಿರಾಕಾರ | ನಿರಾಧಾರ ತವಶರಣಂ ||

ಚಿದ್ಘನಮೂರ್ತೇ ತವಶರಣಂ | ಚಿದಾಕಾರ ತವಶರಣಂ ||

ಚಿದಾತ್ಮರೂಪ ಚಿದಾನಂದ | ಚಿತ್ಸುಖಕಂದ ತವಶರಣಂ ||

ಅನಾದಿಮೂರ್ತೇ ತವಶರಣಂ | ಅಖಿಲವತಾರ ತವಶರಣಂ ||

ಅನಂತಕೋಟಿ ಬ್ರಹ್ಮಾಂಡನಾಯಕ | ಅಘಟಿತಘಟನಾ ತವಶರಣಂ ||

ಭಕ್ತೋದ್ಧಾರ ತವಶರಣಂ | ಭಕ್ತರಕ್ಷಕ ತವಶರಣಂ ||

ಭಕ್ತಾನುಗ್ರಹ ಭಕ್ತಜನಪ್ರಿಯ | ಪತಿತೋದ್ಧಾರಕ ತವಶರಣಂ ||

ಮಾರ್ಗಶೀರ್ಷ ಮಾಸದ ಹುಣ್ಣಿಮೆಯ ದಿನ ದತ್ತ ಜಯಂತಿ. ಅದಕ್ಕೆ ಹತ್ತು ದಿನಗಳ ಮೊದಲು ವ್ರತದ ಆಚರಣೆ ಪ್ರಾರಂಭವಾಗುವುದು. ಈ ಸಮಯದಲ್ಲಿ ‘ಗುರುಚರಿತ್ರೆ’ ಎಂಬ ಗ್ರಂಥದ ಪಾರಾಯಣೆ ಮಾಡುವರು. ದಿನಕ್ಕೆ ಇಂತಿಷ್ಟೇ ಅಧ್ಯಾಯವನ್ನು ಓದಬೇಕೆಂಬ ನಿಯಮವಿದೆ. ದಿನ ಪೂರ್ತಿ ಏನನ್ನೂ ತಿನ್ನಬಾರದು. ಪಾರಾಯಣೆ ಮತ್ತು ದೇವರ ನಾಮ ಸ್ಮರಣೆ ಮಾಡುತ್ತಿರಬೇಕು (ಓಂ ದ್ರಾಂ ಮೋಂ ಗುರು ದತ್ತಾಯ ನಮ:). ರಾತ್ರಿ ಎರಡು ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ತೆಗೆದುಕೊಳ್ಳಬಹುದಷ್ಟೆ. ಮಲಗಲು ಹಾಸುಗೆ ಬಳಸಬಾರದು. ಅದರ ಬದಲಿಗೆ ಚಾಪೆಯ ಮೇಲೆ ಮಲಗಬೇಕು. ಹತ್ತನೆಯ ದಿನ ಪಾರಾಯಣ ಮಾಡಿ ನೆಂಟರಿಷ್ಟರಿಗೆ ಮತ್ತು ಬಡವರಿಗೆ ಅನ್ನ ಸಂತರ್ಪಣೆಯನ್ನು ಮಾಡಬೇಕು.
ಇದೇ ಸಮಯದಲ್ಲಿ ದತ್ತ ಪಾದುಕೆ ಇರುವ ಗಾಣಗಾಪುರ ಕ್ಷೇತ್ರ ದರ್ಶನವನ್ನೂ ಮಾಡುವುದು ಪದ್ಧತಿಯಲ್ಲಿದೆ. ಗುಲ್ಬರ್ಗಾ ಜಿಲ್ಲೆಯಲ್ಲಿರುವ ಗಾಣಗಾಪುರ ಕ್ಷೇತ್ರ ಬಹಳ ಮಹಿಮೆಯಿಂದ ಕೂಡಿದ್ದೆಂದು ಹೇಳುವರು. ಗುರುದತ್ತ ಸ್ವರೂಪ ಶ್ರೀ ನರಸಿಂಹ ಸರಸ್ವತಿಗಳ ಪಾದುಕೆಯನ್ನು ಇಲ್ಲಿ ಪೂಜಿಸುವರು. ಅದಲ್ಲದೇ ಭಕ್ತಾದಿಗಳು ಪ್ರತಿ ನಿತ್ಯವೂ ಶ್ರೀ ರುದ್ರಾಭಿಷೇಕವನ್ನೂ ಮಾಡುವರು. ಇನ್ನೂ ಹೆಚ್ಚಿನ ವಿಷಯವನ್ನು ಮುಂದೊಂದು ಬಾರಿ ಬರೆಯುವೆ.

ಸಾಮ್ಯತೆ

ಕುಟ್ಟಣಿ ’ಕೊಟ್ಟ ಕೊಟ್ಟ ಕೊಟ್ಟವನು ಕೆಟ್ಟ’ ಅನ್ನುತ್ತಿರಲು
ಬಾಯಲ್ಲಿ ನಿನ್ನೆಯಿಂದ ಅಡಕೆ ನವಲುತ್ತಿರಲು
ಗಾಳಿಗೆ ಹೊಯ್ದಾಡುವಂತಿರುವ ಹೂವಿನಂತಹ ತಲೆ
ಬೆಳ್ಳಿಯಂತೆ ಫಳಫಳಿಸುವ ತಲೆಗೂದಲು

ಇಲ್ಲಿ ನೋಡಿ ಇನ್ನೊಂದು ಅಂತಹದೇ ನಡುಗುವ ತಲೆ
ಕಡಗದಿ ನೆಲ ಕುಟ್ಟುವ ಗಡ ಗಡ ಸದ್ದು
ಬಾಯಲಿ ನವಲುತಿರುವ ಪೇಪರಿನ ಚೂರು
ತಲೆ ತುಂಬಾ ಮಿರಮಿರ ಹೊಳೆಯುತಿರುವ ಕಪ್ಪನೆ ಕೇಶರಾಶಿ

ಕೈ ಬಾಯಿ ಸನ್ನೆಯಲೇ ಇಬ್ಬರದೂ ಸಂವಾದ
ಇಬ್ಬರಿಗೂ ಅಕ್ಕ ಪಕ್ಕದವರ ಅರಿವೇ ಇಲ್ಲ
ಅರೆಮನಸ್ಕರಾಗಿ ಒಂದೆಡೆ ನಿಲ್ಲದ ಮನ
ಇವರ ಮನ ಹಿಡಿದಿಡುವುದೊಂದೇ ಆದ ಗಾನ

ಅರುವತ್ತರ ಅರುಳು ಮರುಳಿನ ಅಜ್ಜಿಯದು ಮಗುವಿನ ಮನಸು
ಇಬ್ಬರಿಗೂ ಈಗ ಹೇಳಿದ್ದು ಮರುಘಳಿಗೆಯಲಿ ಮರೆವು
ಒಬ್ಬರದು ಸುಕ್ಕುಗಟ್ಟಿಹ ಚರ್ಮ, ಉಡುಗುತ್ತಿರುವ ಚೈತನ್ಯ
ಇನ್ನೊಂದರದು ಕೋಮಲ ತೊಗಲು, ಪುಟಿದೇಳುತಿಹದು ಅನನ್ಯ

ಇಬ್ಬರಲೂ ಕಾಣುವಿರಿ ಬೊಚ್ಚು ಬಾಯಿ
ಇಬ್ಬರೂ ತೂಗುವರೇ ತಕ್ಕಡಿಯಲಿ ಒಂದೇ ಸಮ
ಬದುಕಿನ ಇಳಿಜಾರಿನಲಿ ಕಾಣುತಿಹಳು ಕಂದನಲಿ ಶ್ರೀಹರಿಯ ಸ್ವರೂಪ
ಜೀವಪಥದೇರಿನಲಿಹ ಕೂಸಿಗೆ ಹಾಲು ಸಿಗಲಿಲ್ಲವೆಂಬ ಕೋಪ