ಈ ಲೇಖನ ಇಲ್ಲಿ ಪ್ರಕಟವಾಗಿದೆ
ಈ ಹೆಸರು ಕೇಳಿರುವಿರಾ? ಇದೊಂದು ಉತ್ಸವದ ದಿನ ಎಂದರೆ ಅಚ್ಚರಿಯಾ? ಈ ಆಚರಣೆಯು ಗುಜರಾತ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಹೆಚ್ಚಿನದಾಗಿ ಪ್ರಚಲಿತವಾಗಿದೆಯಂತೆ.
ನಿನ್ನೆಯ ದಿನ ಸಂಜೆ ೪ ಘಂಟೆಗೇ ನಮ್ಮಲ್ಲಿಯ ಮ್ಯಾನೇಜರ್ ಶಹಾ ಬೇಗ ಮನೆಗೆ ಹೋಗಬೇಕು ಎಂದು ನನ್ನ ಅನುಮತಿ ಕೇಳಿದ. ಅಲ್ಲಪ್ಪ, ಇವತ್ತು ಶುಕ್ರವಾರ – ನಾಳೆ ನಾಡದ್ದು ರಜೆಯಾದ್ದರಿಂದ, ಎಲ್ಲ ಕೆಲಸವನ್ನೂ ಇಂದೇ ಮುಗಿಸಬೇಕು. ಹಾಗೆ ಬೇಗ ಹೋಗಲು ಇವತ್ಯಾವ ಹಬ್ಬವಿದೆ. ಗೋಕುಲಾಷ್ಟಮಿ ನಾಡದ್ದು ಎಂದೆ. ಅದಕ್ಕವನು, ನಹಿಂ ಸಾಬ್, ಕಲ್ ಸಿತಲಾ ಸಪ್ತಮಿ, ಘರ್ ಮೆ ಚೂಲ್ಹಾ ನಹೀಂ ಜಲಾನ ಹೈ. ಕಲ್ ಕಾ ಖಾನಾ ಆಜ್ ಹೀ ಪಕಾನೇಕ ಹೈ – ಉಸ್ ಲಿಯೆ ಜಲ್ದಿ ಘರ್ ಜಾಕೆ ಮೈ ಮದದ್ ಕರನಾ ಹೈ, ಎಂದಿದ್ದ (ಇಲ್ಲ ಸಾಹೇಬ್ರ, ನಾಳೆ ಸಿತಲಾ ಸಪ್ತಮೀ, ಮನೆಯಲ್ಲಿ ಒಲೆ ಹಚ್ಚುವಂತಿಲ್ಲ, ನಾಳೆಯ ಊಟದ ತಯಾರಿ ಇಂದೇ ಮಾಡಬೇಕು – ಆದ್ದರಿಂದ ಬೇಗ ಮನೆಗೆ ಹೋಗಿ, ಸಹಾಯಿಸಬೇಕು). ಇದ್ಯಾವುದಪ್ಪ, ನಾನು ಕೇಳಿರದ ಹೊಸ ಹಬ್ಬ ಎಂದು ಅದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಲು ಅವನಿಗೆ ಕೇಳಿದೆ. ಅದಕ್ಕವನು, ನನಗೆ ಅದರ ಬಗ್ಗೆ ಹೆಚ್ಚಿನದಾಗಿ ಗೊತ್ತಿಲ್ಲ. ಆದರೆ, ಹಿಂದೆ ಸಿಡುಬು ರೋಗ ತಗುಲಿದಾಗ, ಅದನ್ನು ಗುಣಪಡಿಸಲು ಸಿತಲಾದೇವಿ ಅರ್ಥಾತ್ ಮಾರಮ್ಮನನ್ನು ಒಲಿಸಿಕೊಳ್ಳಲು ಮಾಡುತ್ತಿದ್ದ ವ್ರತವಿದು ಎಂದು ಬೇಗ ಹೊರಟು ಹೋದ. ಹೋದವನು ಸುಮ್ಮನೆ ಹೋದನಾ! ನನ್ನ ತಲೆಯಲ್ಲಿ ಸಿತಲಾದೇವಿಯ ಹುಳ ಬಿಟ್ಟು ಹೋಗಿದ್ದ. ಸಂಜೆ ಮನೆಗೆ ಬರುವವರೆವಿಗೂ ನನ್ನ ಎಲ್ಲ ಸ್ನೇಹಿತರನ್ನೂ (ಬೇರೆ ಬೇರೆ ಪ್ರದೇಶಗಳಿಂದ ಬಂದಿರುವವರು) ಕೇಳಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅದು ಹೀಗಿದೆ:
ಸ್ವಾತಂತ್ರ್ಯಾ ಪೂರ್ವದ ದಿನಗಳಲ್ಲಿ ಜನಗಳು ಸಿಡುಬು ರೋಗ ತಗುಲಿ ಸಾಯುತ್ತಿದ್ದುದು ಸಾಮಾನ್ಯ ಎಂಬುದನ್ನು ಬಲ್ಲೆವು. ಅದಕ್ಕೆ ಲಸಿಕೆ ಲಭ್ಯವಾಗುವರೆವಿಗೂ, ಅದರ ಬಗ್ಗೆ ಮೂಢ ನಂಬಿಕೆ ಇರುವ ಜನಗಳು, ಅದು ಮಾರಿಯ ಕೋಪ ಎಂದೇ ಪರಿಗಣಿಸಿದ್ದರು. ಅದೂ ಅಲ್ಲದೇ ಈ ಸಾಂಕ್ರಾಮಿಕ ರೋಗ ತಗುಲಿದವರನ್ನು ಊರಿನಿಂದ ಹೊರಗೆ ಇಡುತ್ತಿದ್ದರು. ಹಾಗಾಗಿ ಮಾರಿಯ ದೇಗುಲವನ್ನು ಊರ ಹೊರಗೆ ಕಾಣಬಹುದು. ಈಕೆಯನ್ನು ಗ್ರಾಮದೇವತೆಯೆಂದೂ ಆರಾಧಿಸುವರು. ಮರಗಳ ಕೆಳಗೆ ಅಥವಾ ಸ್ಮಶಾನದ ಹತ್ತಿರ ಈ ದೇಗುಲವನ್ನು ಕಾಣುವುದು ಸಾಮಾನ್ಯ. ಗುಜರಾತ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಈ ದೇವಿಯ ಆರಾಧನೆ ಹೆಚ್ಚು. ಈ ಮಾರಮ್ಮ ದೇವಿಯನ್ನು ಒಲಿಸಿಕೊಂಡು, ರೋಗ ನಿವಾರಣೆ ಮಾಡಿಕೊಳ್ಳಲು ಶ್ರಾವಣ ಮಾಸದ ಸಪ್ತಮಿಯಂದು ಸಿತಲಾ ಸಪ್ತಮೀ ಎಂದು ಆಚರಿಸಲು ಆರಂಭಿಸಿದರು. ಸಿತಲಾ ಶೀತಲಾ ದೇವಿ ಎಂದರೆ ತಂಪಾಗಿರಿಸುವ ದೇವತೆ ಎಂದರ್ಥ. ಬಂಗಾಲ ಅಸ್ಸಾಮ ಪ್ರಾಂತದಲ್ಲಿ ಶೀತಲದೇವಿಯೆಂದೂ, ಮಹಾರಾಷ್ಟ್ರ ಗುಜರಾತ ಸಿಂಧ ಪ್ರಾಂತಗಳಲ್ಲಿ ಸಿತಲೆಯೆಂದೂ ಮತ್ತು ತಮಿಳುನಾಡಿನಲ್ಲಿ ಮಾರಮ್ಮನೆಂದೂ ಆರಾಧಿಸುವ ಶಕ್ತಿದೇವತೆ ಇವಳು. ಜನಗಳ ನಂಬಿಕೆಯಂತೆ ಈ ದೇವಿಯು ವಿಧವೆಯರು ಮತ್ತು ಮಕ್ಕಳಿರುವ ತಾಯಂದಿರ ಪ್ರಾರ್ಥನೆಯನ್ನು ಸ್ವೀಕರಿಸಿ ಅವರ ಮನದಿಂಗಿತವನ್ನು ಶೀಘ್ರವಾಗಿ ಪೂರೈಸುವಳಂತೆ. ಈಕೆಯ ಪ್ರತಿಮೆಯನ್ನು ಕಲ್ಲಿನ ರೂಪದಲ್ಲೂ ಮತ್ತು ಬೇವಿನ ವೃಕ್ಷದ ರೂಪದಲ್ಲೂ ಆರಾಧಿಸುವರು. ಬೇವು ತನುವನ್ನು ತಂಪಾಗಿರಿಸುವ ಶಕ್ತಿಯನ್ನು ಹೊಂದಿದೆ.
ಇಂದಿನ ವಿಶೇಷತೆ ಏನೆಂದರೆ, ಮನೆಯಲ್ಲಿ ಉರಿ ಹಚ್ಚಬಾರದು, ಅಡುಗೆ ಮಾಡಬಾರದು, ಬಿಸಿ ಪದಾರ್ಥಗಳನ್ನು ಸೇವಿಸಬಾರದು. ಹಿಂದಿನ ದಿನ ಎಂದರೆ ಷಷ್ಠಿಯಂದು ಅಡುಗೆ ಮಾಡಿ, ಸಪ್ತಮಿಯಂದು ಅದನ್ನೇ ಸೇವಿಸಬೇಕು. ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ತನುವೂ ತಣ್ಣಗಿರುವುದು, ಬಿಸಿ ಏರುವ ಜ್ವರವೂ ಕಡಿಮೆ ಆಗುವುದು ಎಂಬ ನಂಬಿಕೆ.
ಕತ್ತೆಯು ಸಿತಲಾ ದೇವಿಯ ವಾಹನವಂತೆ. ಆ ದೇವಿಯ ಆರಾಧನೆಯಿಂದ ಕುರುಡರಿಗೆ ದೃಷ್ಟಿಯನ್ನೂ, ಅಂಗವೈಕಲ್ಯರಿಗೆ ಸುಂದರ ದೇಹವನ್ನೂ, ಬಡವರಿಗೆ ಸಿರಿ ಸಂಪತ್ತನ್ನೂ ಮತ್ತು ಬಂಜೆಗೆ ಮಕ್ಕಳನ್ನೂ ದಯಪಾಲಿಸುವಳೆಂದು ನಂಬುವರು. ಈ ದೇವಿಗೆ ಕೋಳಿ, ಕುರಿಯ ರಕ್ತವನ್ನೂ ಅರ್ಪಿಸುವುದು ವಾಡಿಕೆಯಲ್ಲಿದೆ. ಕೆಂಪು ಸೀರೆಯನ್ನುಟ್ಟು ಕೈಗಳಲ್ಲಿ ಪೊರಕೆಯನ್ನೂ, ಬೀಸಣಿಕೆಯನ್ನೂ, ತ್ರಿಶೂಲವನ್ನೂ ಮತ್ತು ಕಪಾಲವನ್ನೂ ಹಿಡಿದಿರುವ ಚಿತ್ರದಂತೆ ರೂಪಿಸುವರು. ಈ ದೇವತೆಯ ಒಂದು ಚಿತ್ರ ಹೀಗಿದೆ.
ಸಿಡುಬಿನ ಪಿಡುಗು ಈಗ ಕಡಿಮೆಯಾಗಿದ್ದರೂ ಸಿತಲಾ ದೇವಿಯ ಆರಾಧನೆ ಮಾತ್ರ ಕಡಿಮೆ ಆಗಿಲ್ಲ. ವಿವಿಧ ಭಾಷೆ, ಜೀವನ ಸ್ವರೂಪವನ್ನು ಹೊಂದಿರುವ ಪ್ರಾಂತ್ಯಾರು ಜನಗಳನ್ನು ಒಂದೆಡೆ ಸೇರಿಸುವ ರಾಷ್ಟ್ರೀಯ ದೇವತೆಯನ್ನು ಆರಾಧಿಸುವ ಸ್ವರೂಪದಲ್ಲಿ ಒಗ್ಗಟ್ಟನ್ನು ಮೂಡಿಸುವ ಪ್ರಯತ್ನ ಇರುವುದು ಒಳ್ಳೆಯದೇ ಅಲ್ಲವೇ?
2 replies on “ಸಿತಲಾ ಸಪ್ತಮಿ”
ಟಿ.ವಿ.ಸ್. ಅವರೆ,
ಈ ಆಚರಣೆ ಬಗ್ಗೆ ನನಗೂ ಗೊತ್ತಿರಲಿಲ್ಲ. ಧನ್ಯವಾದಗಳು.. ಈ ಲೇಖನದ ಮೂಲಕ ಇದನ್ನು ತಿಳಿಸಿದ್ದಕ್ಕೆ..
interesting! ರಾಮಕೃಷ್ಣ ಪರಮಹಂಸರ ಬಗ್ಗೆ ಇರೋ ಮಕ್ಕಳ ಪುಸ್ತಕದಲ್ಲಿ ಅವ್ರು/ಅವರ ಕುಟುಂಬದವ್ರು ಚಿಕ್ಕವರಿದ್ದಾಗ ಶೀತಲಾ ದೇವಿಯ ಆರಾಧನೆ ಮಾಡ್ತಿದ್ರು ಅಂತ ಓದಿದ ನೆನಪು. ಒಂದ್ಸಲ ಅವರಿಗೆ ಶೀತಲಾ ದೇವಿಯ ದರ್ಶನ ಆಯ್ತು ಅಂತ ಏನೋ ಕಥೆ…ಚಿತ್ರ ನೆನಪಿದೆ… ಅದಕ್ಕೂ ಸಿಡುಬಿಗೂ ಸಂಬಂಧ ಇದೆ ಅಂತ ಗೊತ್ತಿರಲಿಲ್ಲ. ಸೀತಾಳ ಸಿಡುಬು ಅಂತ ನಮ್ಮ ಕಡೇನೂ(ಮೈಸೂರು) ಕರೀತಾರೆ ಚಿಕನ್ ಪಾಕ್ಸ್‌ಗೆ…