ನಾವು – ನಮ್ಮವರು

ಈ ಲೇಖನವು ಕನ್ನಡಧ್ವನಿಯಲ್ಲಿ   ಪ್ರಕಟವಾಗಿದೆ

ನಾವು ಯಾವ ರೀತಿ ವರ್ತಿಸಿದರೆ, ಅದಕ್ಕೆ ತಕ್ಕ ಹಾಗೆ ವಿರುದ್ಧ ವ್ಯಕ್ತಿಗಳ ವರ್ತನೆ ಪ್ರತಿವ್ಯಕ್ತವಾಗುವುದು. ಇದರ ಬಗ್ಗೆ ನನ್ನ ಒಂದೆರಡು ಅನುಭವಗಳನ್ನು ನಿಮ್ಮ ಮುಂದಿಡುತ್ತಿರುವೆ.

ಪ್ರತಿ ನಿತ್ಯವೂ ಬೆಳಗ್ಗೆ ೭.೪೦ ಅಥವಾ ೭.೪೫ಕ್ಕೆ ಚರ್ಚ್‍ಗೇಟಿನಿಂದ ಕಫೆಪೆರೇಡಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವೆನು. ಆ ಸಮಯದಲ್ಲಿ ಬೆಸ್ಟ್ ಬಸ್ಸುಗಳು ಸ್ವಲ್ಪ ಕಡಿಮೆ ಇರುವುದರಿಂದ ಮತ್ತು ಬಸ್ ದರ ಹಾಗೂ ಶೇರ್ ಟ್ಯಾಕ್ಸಿ ದರ ಎರಡೂ ಒಂದೇ ಆಗಿರುವುದರಿಂದ (೫ ರೂಪಾಯಿ), ಹೆಚ್ಚಿನವರು ಟ್ಯಾಕ್ಸಿಗಳಲ್ಲಿಯೇ ಪ್ರಯಾಣಿಸುವರು. ಆ ಸಮಯದಲ್ಲಿ ಪೊಲೀಸರು ಇರುವುದಿಲ್ಲವಾದ್ದರಿಂದ ಒಂದು ಟ್ಯಾಕ್ಸಿಯಲ್ಲಿ ೫ ಜನಗಳನ್ನು ತುಂಬಿಕೊಂಡು ಕಫೆಪೆರೇಡ್‍ವರೆಗಿನ ಹಾದಿಯಲ್ಲಿ ಮಧ್ಯೆ ಮಧ್ಯೆ ಅವರಿಳಿಯುವಲ್ಲಿಗೆ ಕರೆದೊಯ್ಯುವರು. ಆ ಹಾದಿಯಲ್ಲಿ ಕೊನೆ ಮುಟ್ಟುವವರೆವಿಗೆ ಎಲ್ಲಿಯೇ ಇಳಿದರೂ ೫ ರೂಪಾಯಿಗಳನ್ನು ಕೊಡಬೇಕು. ಆ ಸಮಯದಲ್ಲಿ ಚರ್ಚ್‍ಗೇಟ್ ಹತ್ತಿರ ಸಿಗುವ ೫-೬ ಟ್ಯಾಕ್ಸಿಗಳಲ್ಲೇ ನಾನು ಪ್ರಯಾಣಿಸುವುದರಿಂದ, ಚಾಲಕರುಗಳ ಮುಖ ಪರಿಚಯ ಚೆನ್ನಾಗಿಯೇ ಆಗಿದೆ. ಅದೊಂದು ದಿನ ಎಂದಿನಂತೆ ಟ್ಯಾಕ್ಸಿ ಏರಿದಾಗ, ಅದರಲ್ಲಿಯ ಚಾಲಕ ಹೊಸಬನಂತೆ ಕಂಡನು. ನೋಡಲು ಥೇಟ್ ಮುಲ್ಲಾ ನಸೀರುದ್ದಿನ್‍ನಂತೆ ಕಾಣುತ್ತಿದ್ದನು. ಅಂದೇಕೋ ಹಾದಿ ಮಧ್ಯದಲ್ಲಿಯೇ ೪ ಜನಗಳು ಇಳಿದರು. ನಾನೊಬ್ಬನೇ ಕೊನೆಯ ನಿಲುದಾಣಕ್ಕೆ ಪ್ರಯಾಣಿಸುತ್ತಿದ್ದೆ. ಆಗಾಗ್ಯೆ ನನ್ನ ಮುಖದ ಕಡೆಗೆ ಮುಲ್ಲಾ ಗುರ್ ಎಂದು ದುರುಗುಟ್ಟಿ ನೋಡುತ್ತಿದ್ದನು. ಏಕೆಂದು ನನಗೆ ತಿಳಿಯದಾಯ್ತು. ಇನ್ನೇನು ಅನತಿ ದೂರದಲ್ಲಿ ನಾನಿಳಿಯುವ ನಿಲುದಾಣ ಬರುವ ಹೊತ್ತಿಗೆ, ಕೆಳಗಿಳಿದು ಹೋಗಲು ತಿಳಿಸಿದನು. ನಾನಿನ್ನೂ ಮುಂದೆ ಹೋಗಬೇಕು ಎನ್ನಲು, ಸ್ವಲ್ಪ ದೂರ ನಡೆದರೆ ನಿನ್ನ ಕಾಲೇನು ಸವೆದುಹೋಗೋಲ್ಲ ಎಂದು ಘರ್ಜಿಸಿದನು. ಬೆಳಗ್ಗೆಯೇ ಅವನೊಂದಿಗೇಕೆ ನಾನು ಜಗಳ ಕಾಯುವುದೆಂದು ಸುಮ್ಮನೆ ಇಳಿದು ಹೋದೆ. ಕಚೇರಿಗೆ ಹೋಗಿ ಕನ್ನಡಿ ನೋಡಿದ ಕೂಡಲೇ ಚಾಲಕನ ಗುರುಗುಟ್ಟುವಿಕೆಗೆ ಕಾರಣ ತಿಳಿಯಿತು. ಸ್ವಲ್ಪ ದಿನಗಳ ಹಿಂದೆ ಆಗಿದ್ದ ಕೋಮು ಗಲಭೆಯಿಂದ ನೊಂದಿದ್ದ (ನಂತರ ತಿಳಿದದ್ದು) ಆತನಿಗೆ, ಢಾಳಾಗಿ ನನ್ನ ಹಣೆಯಲ್ಲಿದ್ದ ಕುಂಕುಮ ಮತ್ತು ವಿಭೂತಿಗಳು ಅಂದು ಅವನನ್ನು ಕೆಣಕಿದ್ದವು. ಅವನೊಂದಿಗೆ ನಾನು ಜಗಳ ಕಾಯದೇ ಇದ್ದದ್ದು ಒಳಿತೇ ಆಯಿತೆಂದುಕೊಂಡೆ.

ಅಂದು ಭಾನುವಾರ – ಬೆಳಿಗ್ಗೆ ೬ ಘಂಟೆಗೇ, ಮಗನನ್ನು ಕರಾಟೆ ಟೂರ್ನಿಮೆಂಟಿಗೆ ಕರೆದೊಯ್ಯಬೇಕಿತ್ತು. ದಿನವೂ ಆ ಸಮಯದಲ್ಲಿ ನಮ್ಮ ಕ್ವಾರ್ಟರ್ಸಿನ ಮುಂದೆ ೫-೬ ಆಟೋಗಳು ಸಾಲಾಗಿ ನಿಂತಿರುತ್ತಿದ್ದರೂ, ಅಂದೇಕೋ ಒಂದೂ ಆಟೋ ಕಾಣಿಸುತ್ತಿರಲಿಲ್ಲ. ಮಗನನ್ನು ಕರಾಟೆ ಟೂರ್ನಿಮೆಂಟಿನ ಸ್ಥಳಕ್ಕೆ ತಲುಪಿಸಲು ಸಮಯ ಬಹಳ ಕಡಿಮೆ ಇತ್ತು. ಅದಲ್ಲದೇ, ಬೆಳಗ್ಗೆಯೇ ಅತ್ತ ಕಡೆಗೆ ಯಾರೂ ಆಟೋದವರು ಬರಲು ತಯಾರಿರಲಿಲ್ಲ. ಅದೇ ರೈಲ್ವೇ ಸ್ಟೇಷನ್ ಕಡೆಗಾದರೆ ಯಾವ ಸಮಯದಲ್ಲಾದರೂ ಆಟೋಗಳು ಸುಲಭದಲ್ಲಿ ಸಿಗುವುವು. ಸ್ವಲ್ಪ ಮುಂದೆ ನಡೆಯಲು ಅಲ್ಲೊಂದು ಆಟೋ ನಿಂತಿರುವುದು ಕಂಡಿತು. ಅದರ ಚಾಲಕ ಅಂದಿನ ಈನಾಡು ತೆಲುಗು ದಿನಪತ್ರಿಕೆ ಓದುತ್ತಿದ್ದ. ರಾಮಮಂದಿರದೆಡೆಗೆ ಬರುವೆಯಾ ಎಂದು ತೆಲುಗುವಿನಲ್ಲಿ ಕೇಳಿದೆ.
ಬೆಳ್ಳಂಬೆಳಗ್ಗೆ ಅಲ್ಲಿಂದ ಮರಳಿ ಬರಲು ಗಿರಾಕಿಗಳು ಸಿಗೋದಿಲ್ಲ – ಆದರೂ ನೀವು ನಮ್ಮವರೆಂದು ತಿಳಿದು ಸಂತೋಷವಾಗಿ – ಬರುತ್ತಿರುವೆ. ಪರೀಕ್ಷಸಲೋಸುಗ – ಹೋಗ್ಲಿ ಬಿಡು – ನಿನಗ್ಯಾಕೆ ತೊಂದರೆ – ನಡೆದೇ ಹೊರಡುವೆ – ಅಯ್ಯೋ ಸಾರ್ – ತಪ್ಪು ತಿಳಿಯಬೇಡಿ. ನೀವು ಹಣ ಕೊಡದಿದ್ದರೂ ಪರವಾಗಿಲ್ಲ, ನಮ್ಮವರು ಎಂದ ಮೇಲೆ ನಾನು ಬಂದೇ ತೀರುವೆ. ನೀವು ವಾಪಸ್ಸು ಬರಲು ತಡವಾದರೂ ಪರವಾಗಿಲ್ಲ – ಕಾದು ಮತ್ತೆ ನಿಮ್ಮ ಇತ್ತ ಕಡೆಗೆ ಕರೆತರುವೆ ಎನ್ನುವುದೇ. ಆಗ ನಾನು, ಅಲ್ಲಪ್ಪ ನನ್ನ ಮಾತೃ ಭಾಷೆ ತೆಲುಗು ಅಲ್ಲ, ಕನ್ನಡ. ನೀನು ಪತ್ರಿಕೆ ಓದುತ್ತಿರುವುದನ್ನು ನೋಡಿ, ಪರೀಕ್ಷಸಲೋಸುಗ ಹರುಕು ಮುರುಕು ತೆಲುಗುವಿನಲ್ಲಿ ಮಾತನಾಡಿದೆನಷ್ಟೆ. ಆದರೂ ಬರುವಂತಿದ್ದರೆ ಬಾ, ಇಲ್ಲದಿದ್ದರೆ, ಇನ್ಯಾರಾದರೂ ಕನ್ನಡ ಭಾಷೆ ಬಲ್ಲ ಆಟೋ ಚಾಲಕನನ್ನು ಹುಡುಕುವೆ ಎಂದೆ. ಪರವಾಗಿಲ್ಲ ಸಾರ್, ನೀವು ನನ್ನ ಮಾತೃಭಾಷೆಯನ್ನು ಇಷ್ಟು ಚಂದವಾಗಿ ಆಡುವಿರಿ, ನೀವು ಕರೆದಲ್ಲಿಗೆ ನಾನು ಬರದಿದ್ದರೆ ಆ ದೇವನು ಮೆಚ್ಚುವನಾ? ಎಂದು ತೆಲುಗುವಿನಲ್ಲೇ ಉಸುರಿದ.

ನಾನು ಇನ್ನೊಮ್ಮೆ ಆಟೋವಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅದರ ಚಾಲಕನ ಬಗಲಿನಲ್ಲಿ ಕರ್ನಾಟಕ ಮಲ್ಲ ಪತ್ರಿಕೆಯನ್ನು ನೋಡಿ, ಕನ್ನಡದಲ್ಲಿ ಮಾತನಾಡಿದೆ. ಆತ ಮೊದಲಿಗೆ ತುಳುವಿನಲ್ಲಿ ಉತ್ತರಿಸಿದ. ನನಗೆ ತುಳು ಅರ್ಥವಾಗುವುದಿಲ್ಲ, ಕನ್ನಡದಲ್ಲಿ ತಾವು ಮಾತನಾಡುವಿರಾ ಎಂದು ಕೇಳಿದ್ದಕ್ಕೆ, ಸಂತೋಷದಿಂದ ಆತ ಉತ್ತರಿಸಿದ. ಹಾಗಲ್ಲ ಸಾರ್, ತಪ್ಪು ತಿಳಿಯಬೇಡಿ, ನೀವು ನಮ್ಮೂರಿನವರಾ ಎಂದು ತಿಳಿದುಕೊಳ್ಳಲು ಹಾಗೆ ಕೇಳಿದೆನಷ್ಟೆ, ಎಂದ. ಆಟೋ ಅನತಿ ದೂರ ಸಾಗುವಲ್ಲಿ, ರಸ್ತೆಯಲ್ಲಿ ವಿಪರೀತವಾಗಿ ಟ್ರಾಫಿಕ್ ಜಂಗುಳಿ ಇರುವುದನ್ನು ಕಂಡೆ. ಇನ್ನು ಅರ್ಧ ಘಂಟೆಯಾದರೂ ನಾನು ಮನೆ ಸೇರಲಾಗುವುದಿಲ್ಲ ಎಂದು ಯೋಚಿಸುತ್ತಿದ್ದೆ. ಮುಂಬಯಿಯಲ್ಲಿ ಆಟೋ ಮೀಟರುಗಳು ಗಡಿಯಾರದಂತೆ ಓಡುತ್ತಿರುತ್ತವೆ. ಟ್ರಾಫಿಕ್‍ನಲ್ಲಿ ವಾಹನ ನಿಂತಿದ್ದರೂ ಮೀಟರು ತನ್ನ ಪಾಡಿಗೆ ಟಿಕ್ ಟಿಕಾಯಿಸುತ್ತಿರುತ್ತದೆ. ಇದರಿಂದ ಚಾಲಕರಿಗೇ ಒಳಿತು. ಆದುದರಿಂದ ಜಂಗುಳಿ ಇದ್ದರೂ ಬರುವುದಿಲ್ಲವೆಂಬ ನೆವ ಹೇಳುವುದಿಲ್ಲ. ಆದರೆ ಅಂದು ಆ ಕನ್ನಡದ ಆಟೋ ಚಾಲಕ (ದಿನೇಶ ಎಂಬುದು ಆತನ ಹೆಸರು), ವಾಹನವನ್ನು ಗಲ್ಲಿ ಗಲ್ಲಿಗಳಲ್ಲಿ ಸುತ್ತಿಸಿ, ಮಾಮೂಲಿಯ ಸಮಯಕ್ಕೆ ಸರಿಯಾಗಿ ಮನೆಗೆ ಕರೆದೊಯ್ದಿದ್ದ. ಇದರಿಂದ ನಾನು ತಿಳಿದ ಒಂದು ಅಂಶವೆಂದರೆ, ನಮ್ಮ ಭಾಷೆ ಮತ್ತು ಜನಗಳ ಬಗ್ಗೆ ನಮ್ಮ ಊರುಗಳಿಗಿಂತ, ಹೊರನಾಡಿನಲ್ಲಿ ಇನ್ನೂ ನಮಗೆ ಹೆಚ್ಚಿನ ಅಭಿಮಾನ ಬರುವುದು. ಸಮಾಜದಲ್ಲಿ ಹುಟ್ಟಿ ಬೆಳೆದು ಮಣ್ಣಾಗುವವ ನಮಗೆ ಇದಕ್ಕಿಂತ ಇನ್ಯಾವುದು ಹೆಗ್ಗಳಿಕೆಯ ಅಂಶ ಅಲ್ಲವೇ?

Advertisements