http://thatskannada.oneindia.in/chowchow/festivals/ugadi/140307concept1.html
ಜೀವನವೆಲ್ಲಾ ಬೇವು ಬೆಲ್ಲ
ಅರಿತು ಬಾಳುವನೇ ಕಲಿಗಳ ಮಲ್ಲ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷದಿ ಹೊಸ ಹರುಷವ ಹೊಸತು ಹೊಸತು ತರುತಿದೆ
ಪ್ರತಿ ವರುಷ ಯುಗಾದಿ ಹಬ್ಬದ ದಿನ ರೇಡಿಯೋ ಮತ್ತು ಟಿವಿಗಳಲ್ಲಿ ಈ ಹಾಡು ಪ್ರಸಾರವಾಗುತ್ತದೆ. ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೇ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ. ದ.ರಾ.ಬೇಂದ್ರೆಯವರು ಬರೆದ ಈ ಗೀತೆಯನ್ನು ಕುಲವಧು ಚಲನಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಹಾಡಿರುವವರು ಎಸ್. ಜಾನಕಿ.
ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು. ಈ ದಿವಸದಲ್ಲಿ ಒಳ್ಳೆಯ ಅಥವಾ ಕೆಟ್ಟ ಘಟನೆ ಯಾವುದೇ ಆದರೂ ಮುಂದೆ ಇಡೀ ಒಂದು ವರ್ಷದಲ್ಲಿ ಅದರ ಪರಂಪರೆ ಮುಂದುವರಿಯುತ್ತದೆ ಎಂಬುದು ಕೆಲವರ ಅಭಿಪ್ರಾಯ. ಈ ದಿನದಂದು ಯಾವ ವಾರ ಇರುತ್ತದೆಯೋ ಅದನ್ನೇ ವರ್ಷದ ಅಧಿಪತಿ ಎಂದು ಕರೆಯುವರು. ಉದಾಹರಣೆಗೆ – ಈ ವರ್ಷದ ಯುಗಾದಿ ಹಬ್ಬವು ಸೋಮವಾರ ಬರುವುದರಿಂದ ಇಡೀ ವರ್ಷಕ್ಕ ಸೋಮನೇ (ಚಂದ್ರ) ಅಧಿಪತಿ ಎನುವರು.
ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ವಸಂತ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ನೋಟ್‍ಬುಕ್ಕಿನ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್‌ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ‘ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಅಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಮಿಳುನಾಡಿನಲ್ಲಿ ಯುಗಾದಿ ಪರ್ವವನ್ನು ಚಿತ್ರವಿಷು ಎಂದು ಕರೆಯುವರು. ಆದರೆ ಅಲ್ಲಿ ಸೌರಮಾನ ಲೆಕ್ಕದ ಪಂಚಾಂಗವನ್ನು ಕಾಲಗಣನೆಗೆ ಉಪಯೋಗಿಸುವರು. ಆದ್ದರಿಂದ ಅಲ್ಲಿನ ಯುಗಾದಿ ಹಬ್ಬ ಬೇರೆಯೇ ದಿನ ಬರುವುದು.
ಅಂದು ಬೆಳಗ್ಗೆ ಎಳ್ಳೆಣ್ಣೆಯಿಂದ ಅಭ್ಯಂಗ ಸ್ನಾನವನ್ನು ಮಾಡುವರು. ನಂತರ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಅಂದು ವಿಷ್ಣುವು ಮತ್ಸ್ಯಾವತಾರವನ್ನು ತಳೆದ ದಿನ ಮತ್ತು ಶ್ರೀರಾಮನು ವನವಾಸದಿಂದ ಮರಳಿದ ದಿನ. ಅಂದು ‘ಯವಿಷ್ಠ‘ ಎಂಬ ಅಗ್ನಿಯನ್ನು ಆವಾಹನೆ ಮಾಡಬೇಕು. ಗುರುಗಳಿಗೂ ಮತ್ತು ಅವರ ಕುಟುಂಬದವರಿಗೆ ವಸ್ತ್ರ ಅಲಂಕಾರ ಸಾಮಗ್ರಿಗಳನ್ನು ದಾನ ಮಾಡಬೇಕು. ಯೋಗ್ಯರಾದ ಜೋಯಿಸರಿಂದ ಹೊಸ ವರ್ಷದ ನಾಯಕರು ಮತ್ತು ಅವರ ಫಲಗಳನ್ನು ಪಂಚಾಂಗದ ಮೂಲಕ ತಿಳಿದು, ಅವರಿಗೆ ದಾನ ಮಾಡಬೇಕು. ಅಂದಿನ ದಾನದಲ್ಲಿನ ವಿಶೇಷ ವಸ್ತುಗಳೆಂದರೆ ಪಂಚಾಂಗ ಮತ್ತು ನೀರಿನ ಪಾತ್ರೆ. ಅದಲ್ಲದೇ ಬಡಬಗ್ಗರಿಗೆ ಯಥೋಚಿತವಾದ ದಾನವನ್ನು ಮಾಡಬೇಕು.
(ಪ್ರಾಪ್ತೇ ನೂತನ ಸಂವತ್ಸರೇ ಪ್ರತಿಗೃಹ್ಯಂ ಕುರ್ಯಾದ್ವಜಾರೋಪಣಂ
ಸ್ನಾನ ಮಂಗಲಮಾಚರೇದ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ|
ದೇವಾನಾಂ ಗುರುಯೋಷಿತಾಂ ಚ ಶಿಸವೋಲಂಕಾರವಸ್ತ್ರಾದಿಭಿಃ
ಸಂಪೂಜ್ಯಾ ಗಣಕಃ ಫಲಂ ಚ ಶೃಣುಯಾತ್ತಸ್ಮಾಚ್ಚ ಲಾಭಪ್ರದಂ||)
ಈ ಹಬ್ಬ ಬರುವುದು ವಸಂತ ಋತುವಿನಲ್ಲಿ. ವಸಂತ ಎಲ್ಲ ದೇವತೆಗಳಿಗೂ ಮತ್ತಿತರಿಗೂ ಪ್ರಿಯವಾದ ಋತು. ಆ ಸಮಯದಲ್ಲಿ ನಿಸರ್ಗವು ಹೊಸ ಚಿಗುರು ಮತ್ತು ಹೂಗಳಿಂದ ನಳನಳಿಸುವುದು. ಈ ಋತುವಿನ ಸಮಶೀತೋಷ್ಣವಾದ ವಾತಾವರಣವು ದೇವತಾಪೂಜೆಗೆ ಮತ್ತು ಇನ್ನೆಲ್ಲಾ ಶುಭಕಾರ್ಯಗಳಿಗೆ ಹಿತಕರವಾಗಿದೆ. ಬ್ರಹ್ಮಪುರಾಣದಲ್ಲಿ ಹೀಗಿ ಹೇಳಿದೆ
“ಅಹಮಗ್ನಿರ್ಮಹಾತೇಜಾಃ ಸೋಮಶ್ಚೈಷಾ ಮಮಾಂಬಿಕಾ|
ಅಹಮಗ್ನಿಶ್ಚ ಸೋಮಶ್ಚ ಪ್ರಕೃತ್ಯಾ ಪುರುಷಃ ಸ್ವಯಂ||”
ಈ ಶೈತ್ಯ ಉಷ್ಣತೆಗಳ ಸಂಗಮ ಕಾಲವನ್ನು ಸೃಷ್ಟಿಕರ್ತನು ಸೃಷ್ಟಿಯನ್ನು ಪ್ರಾರಂಭಿಸಿದ ದಿನ ಎಂದು ಭಾವಿಸಿರುವುದು ಸರ್ವಥಾ ಉಚಿತವಾಗಿದೆ. ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧ್. ಅಂತಹ ಸಮಾಧಿಯೋಗಕ್ಕೂ ಅದಕ್ಕನುಗುಣವಾದ ಲೋಕಯಾತ್ರೆಯ ಸಂವಿಧಾನಕ್ಕೂ ಸ್ಫೂರ್ತಿ ನೀಡುವ ಸಂಧಿಸಮಯ ಇದು. ತನ್ನ ಸೃಷ್ಟಿರಹಸ್ಯವಾದ ವೇದವಿದ್ಯೆಯನ್ನು ಸೃಷ್ಟಿಯ ಆದಿಯಲ್ಲಿ ಉಪದೇಶ ಮಾಡಿದ ಭಗವಂತನ ಮತ್ಸ್ಯಾವತಾರದ ಜಯಂತಿ ಎನಿಸುಕೊಳ್ಳುವ ಸುದಿವಸವಿದು.
ಅಂದಿನ ಹಬ್ಬದಾಚರಣೆಯ ಕ್ರಮ ಹೀಗಿದೆ :
1. ಮೊದಲು ಅಭ್ಯಂಜನ – ತೈಲ ಉಪಯೋಗದಿಂದ ಭೌತಿಕವಾಗಿ ತಲೆಯಿಂದ ಪಾದದವರೆವಿಗೆ ಸ್ನಾನ ಮಾಡುವುದರಿಂದ ಆಯಾಸ, ವಾತದ ದೋಷಗಳ ನಿವಾರಣೆಯಾಗುವುದು. ಪ್ರಸನ್ನತೆ, ಪುಷ್ಟಿ, ಆಯುರ್ವರ್ಧನೆ, ಸುಖ ನಿದ್ರೆಗಳು ಲಭಿಸುವುವು. ಅಲ್ಲದೇ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಯೂ ಆಗುವುದು.
2. ಗೃಹಾಲಂಕಾರ – ತಳಿರು ತೋರಣಗಳು, ಪತಾಕೆಗಳೂ ಮತ್ತು ರಂಗವಲ್ಲಿಯ ಸಹಾಯದಿಂದ ಮನೆಯ ಒಳಗೆ ಮತ್ತು ಹೊರಗೆ ಸಿಂಗಾರ
3. ಸಂಕಲ್ಪ – ಇಷ್ಟ ದೇವತಾ ಪೂಜೆ
4. ಹೋಮ – ಈ ಹಬ್ಬದಲ್ಲಿ ಹೋಮ ಮಾಡುವ ಅಗ್ನಿಗೆ ‘ಯವಿಷ್ಠ‘ ಎಂದು ಹೆಸರಿಸಿರುವರು. ‘ಯವಿಷ್ಠ‘ ಎಂದರೆ ಅತ್ಯಂತ ಕಿರಿಯವನು ಎಂದರ್ಥ. ಸೃಷ್ಟಿಯ ಪ್ರಾರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸನೆ ಮಾಡಲ್ಪಡುತ್ತದೆ. ಅದರ ಪ್ರತೀಕವಾಗಿರುವ ಅಗ್ನಿಗೆ ಅತ್ಯಂತ ಕಿರಿಯವರು ಎಂದು ಸೂಚಿಸುವರು.
5. ಪಂಚಾಂಗ ಶ್ರವಣ
6. ದಾನ
7. ವಿಶೇಷ ನೈವೇದ್ಯ – ಸಾಮಾನ್ಯವಾಗಿ ಬೇವು ಬೆಲ್ಲವನ್ನು ವಿಶೇಷವಾಗಿ ನೈವೇದ್ಯ ಮಾಡುವುದರ ಜೊತೆಗೆ ಹೋಳಿಗೆ ಅಥವಾ ಒಬ್ಬಟ್ಟನ್ನೂ ನೈವೇದ್ಯ ಮಾಡುವರು. ಕೆಲವು ಕಡೆ ಬೇವಿನೊಡನೆ ಕಲ್ಲು ಸಕ್ಕರೆ ಮತ್ತು ಮೆಣಸನ್ನೂ ಸೇರಿಸಿ, ಆ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೆಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಎಲ್ಲರ ಬಾಳಲ್ಲೂ ಸುಖ-ದುಃಖ, ಒಳ್ಳೆಯದು-ಕೆಟ್ಟದ್ದು, ಕರ್ಮ-ಫಲ ಇದ್ದೇ ಇರುವುದು. ಇದೊಂದು ಬ್ಯಾಲೆನ್ಸ್ ಶೀಟು ಇದ್ದ ಹಾಗೆ. ಎಷ್ಟು ಸ್ವೀಕರಿಸುವರೋ ಅಷ್ಟನ್ನೇ ಮರಳಿ ಕೊಡಬೇಕು, ಬರುವಾಗ ಏನೂ ತರದೆ ಬಂದಂತೆ ಕೊನೆಯಲ್ಲಿ ಹೋಗುವುದು. ಅದಕ್ಕೇ ಇಂದಿನ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ಬೇವಿನಲ್ಲಿ ಇರುವ ಶಕ್ತಿ ನಿಜವಾಗಿಯೂ ಬೆಲ್ಲದಲ್ಲಿಲ್ಲ. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿ ಅಥವಾ ಶಾಖವನ್ನು ಉಂಟು ಮಾಡಿದರೆ, ಅದೇ ನಾಲಗೆಗೆ ಕಹಿಯಾದ ಬೇವು ಆ ಉರಿಯನ್ನು ಶಮಿಸುವುದು.
ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯೆ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
2 replies on “ಜೀವನ ಬೇವು ಬೆಲ್ಲ”
ಯುಗಾದಿಯ ಬಗ್ಗೆ ಸಮಗ್ರ ಮಾಹಿತಿ ನೀಡಿತು ನಿಮ್ಮ ಲೇಖನ..
ನಮ್ಮ ಕಡೆ ಬಿದಿಗೆ ಚಂದ್ರನ ನೋಡುತ್ತಾರೆ..ಅದಕ್ಕೆ ಕಾರಣವೇನಿರಬಹುದು?
Ugadi bagge poorna mahiti odagisiddeeri. dhanyavaadagalu.
num amma heLtaare: bidige chandrama andre belavaNigeya sanketa.
(Huttidare saaldu-sariyaada dikkinalli beLayabeku-alva?)
idakkagi bidige chandrana darshana.