ಓಂ ನಮ: ಶಿವಾಯ
ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ವೇದ ಮಂತ್ರ :
ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ವೈಶ್ವದೇವ ಕಾಂಡದಲ್ಲಿ ಉಕ್ತವಾಗಿರುವ ಶ್ರೀ ರುದ್ರ ಪ್ರಶ್ನದ ಚಮಕದ ಮೂರನೆಯ ಅನುವಾಕ
ಓಂ ನಮೋ ಭಗವತೇ ರುದ್ರಾಯ
ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚ ಮ ಋತಂ ಚ ಮೇಮೃತಂ ಚ ಮೇಯಕ್ಷ್ಮಂಚ ಮೇನಾಮಯಚ್ಚ ಮೇ ಜೀವಾತುಶ್ಚ ಮೇ ದೀರ್ಘಾಯುತ್ವಂ ಚ ಮೇನಮಿತ್ರಂ ಚ ಮೇಭಯಂಅ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ||
ನಮಕದ ಮೊದಲನೆಯ ಅನುವಾಕದ ಒಂದು ಸಣ್ಣ ಭಾಗ
ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮ:| ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾ ಮುತ ತೇ ನಮ:| ಯಾ ತ ಇಷು: ಶಿವತಮಾ ಶಿವಂ ಬಭೂವ ತೇ ಧನು:| ಶಿವಾ ಶರ್ವ್ಯಾ ಯಾ ತವ ತಯಾ ನೋ ರುದ್ರ ಮೃಡಯ| ಯಾ ತೇ ರುದ್ರ ಶಿವಾ ತನೂರಘೋರಾ: ಪಾಪಕಶಿನೀ| ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ||
ಶಿವರಾತ್ರಿಯ ಅರ್ಥ
ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ. ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು. ಇದು ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವುದು. ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ. ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಜಗಳವಾಯಿತು. ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು. ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು. ಬೆಂಕಿಯ ತೀಕ್ಷಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು. ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು. ಸಾವಿರಾರು ಮೈಲುಗಳನ್ನು ಕ್ರಮಿಸಿದರೂ ಇದರ ಮೂಲ ತಿಳಿಯದಾಯಿತು. ಇವರಿಬ್ಬರ ಪರದಾಟವನ್ನು ಕಂಡು ಶಿವನು ಮುಗುಳ್ನಕ್ಕನು. ಆತನ ನಗುವಿನಿಂದ ಅಲ್ಲಿಯೇ ಇದ್ದ ಕೇತಕಿ ಪುಷ್ಪವು ಕೆಳಗಿಳಿದು ಬೀಳಹತ್ತಿತು. ಅಲ್ಲಿಯೇ ಬರುತ್ತಿದ್ದ ಬ್ರಹ್ಮನಿಗೆ ಇದು ಗೋಚರವಾಯಿತು. ಆತನು ಆ ಪುಷ್ಪವನ್ನು ಎಲ್ಲಿಂದ ಬಂದೆಯೆಂದು ಕೇಳಲು, ಅದು ಈ ಬೆಂಕಿಯ ಕಂಬದ ಮೇಲ್ಭಾಗದಿಂದ ಕೆಳಗಿಳಿದು ಬರುತ್ತಿದ್ದೇನೆಂದು ತಿಳಿಸಿತು. ಅಲ್ಲಿಯವರೆವಿಗೆ ಬೆಂಕಿಯ ಮೂಲವನ್ನು ತಿಳಿಯದ ಬ್ರಹ್ಮನು ಪುಷ್ಪವನ್ನೇ ಸಾಕ್ಷಿಯನ್ನಾಗಿ ತೆಗೆದುಕೊಂಡನು. ಆಗ ಕುಪಿತಗೊಂಡ ಶಿವನು ತನ್ನ ಮೂಲ ಸ್ವರೂಪವನ್ನು ತೋರಿದನು. ಮತ್ತು ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದೂ, ಕಪಟತನ ತೋರಿದ ಕೇತಕಿ ಪುಷ್ಪವನ್ನು ಯಾರೂ ಪೂಜೆಗೆ ಬಳಸಬಾರದೆಂದೂ ಶಾಪವನ್ನಿತ್ತನು. ಅಂದು ಅಂದರೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ೧೪ನೆಯ ದಿನ, ಶಿವನು ಲಿಂಗರೂಪವನ್ನು ಧರಿಸಿದನು. ಅವನನ್ನು ತೃಪ್ತಿಗೊಳಿಸಿ, ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಹೊಂದಲು ಪೂಜಿಸುವರು.
ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ
ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.
ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ.
ವೇದೋಕ್ತ ಪೂಜೆ ಮತ್ತು ಆಚರಣೆ
ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ.
ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.
ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.
ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು.
ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.
೧೨ ಜ್ಯೋತಿರ್ಲಿಂಗಗಳು
ನಮ್ಮ ದೇಶದಲ್ಲಿ ಒಟ್ಟು ೧೨ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಆ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾಗಿ ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಅಲ್ಲಿ ನಡೆಸುವರು. ಆ ಸ್ಥಳಗಳು ಯಾವುವೆಂದರೆ:
ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ
ಆಂಧ್ರಪ್ರದೇಶದ ಶ್ರಿ ಶೈಲದಲ್ಲಿರುವ ಮಲ್ಲಿಕಾರ್ಜುನ
ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ
ಮಹಾರಾಷ್ಟ್ರದ ಪಾರ್ಲಿ ವೈಜನಾಥ
ಮಹಾರಾಷ್ಟ್ರದ ಭೀಮಾಶಂಕರ
ಮಹಾರಾಷ್ಟ್ರದ ನಾಗನಾಥ
ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ
ತಮಿಳುನಾಡಿನ ರಾಮೇಶ್ವರ
ಉತ್ತರಪ್ರದೇಶದ ಘೃಶ್ನೇಶ್ವರ
ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ
ಉತ್ತರಪ್ರದೇಶದ ಓಂಕಾರನಾಥ
ಉತ್ತರಪ್ರದೇಶದ ಕೇದಾರನಾಥ
ಇದೆಲ್ಲವೂ ಲೌಕಿಕವಾಗಿ ಕಣ್ಣಿಗೆ ಕಾಣುವಂತೆ ಮಾಡುವ ಪೂಜೆಗಳಾದರೆ, ಅಧ್ಯಾತ್ಮಿಕವಾಗಿ ಈ ದೇಹವೇ ಒಂದು ದೇವಾಲಯ ಎಂದು ತಿಳಿದು ಆ ಪರ ಶಿವನನ್ನು ನಮ್ಮೊಳಗೇ ಕಾಣುವ ಪ್ರಯತ್ನ ಮಾಡೋಣ. ನಮ್ಮ ಹೃದಯವನ್ನೇ ಆತ್ಮಲಿಂಗವನ್ನಾಗಿ ಮಾಡಿ, ಲೋಕೋದ್ಧಾರಕ್ಕಾಗಿ ಒಳ್ಳೆಯ ಚಿಂತನೆಗೆಳೆಂಬ ನೀರ ಹನಿಗಳಿಂದ ಅಭಿಷೇಕ ಮಾಡೋಣ. ಎಲ್ಲರಿಗೂ ಈ ಲೋಕಕ್ಕೂ ಕಲ್ಯಾಣವಾಗಲೆಂದು ಬಯಸೋಣ.
ಓಂ ನಮ: ಶಿವಾಯ
13 replies on “ಮಹಾ ಶಿವರಾತ್ರಿ”
ತವಿಶ್ರೀಗಳೇ,
ಶಿವರಾತ್ರಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಕ್ಕೆ ವಂದನೆಗಳು..
ಶಿವಪೂಜೆಗೆ ಬಿಲ್ವಪತ್ರೆ ಉಪಯೋಗಿಸಿದರ ಹಿಂದೆ ಎನಾದರೂ ಕತೆ ಇದೆಯೇ?
ಅಂದಾಗೆ ದ್ವದಶ ಲಿಂಗಗಳಲ್ಲಿ ೩-೪ ಮಹಾರಾಷ್ಟ್ರದಲ್ಲೇ ಇವೆ..
ಅಲ್ಲಿಗೆ ಎನಾದರೂ ಹೋಗಿದ್ದಿರಾ ನೀವು?
Here with I am requesting you sir please posible send me a 12 jotirlingas original photos
thanks..,
I AM SHIVA PUJA INSERTED IN LIFE ,IAM LIKE IN SHIVA
I AM LIKE SHIVA
MY GOD SHIVA
sairam
Sir,
Thank you very much for your information about SHIVA.
Dear Sir,
Thank you very much for the information given by regarding the importance of maha shivarathri & rituals to be followed on that day.
Regards
G.Suresh
good
very informative, thank u
]
Thriveni said
om namah shivaga.
God blessing for all of us.
ಶಿವರಾತ್ರಿಯ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ . ವಂದನೆಗಳು
ಗಂಗಲಕ್ಷ್ಮಿ