ಈ ಲೇಖನವು ಇಲ್ಲಿ ಪ್ರಕಟವಾಗಿದೆ
(ವಿ.ಸೂ : ಚಿತ್ರಗಳನ್ನು ಒದಗಿಸಿದ ಕುಮಾರಿ ಯಾಮಿನಿ ಅವರಿಗೆ ಆಭಾರಿಯಾಗಿರುವೆ)
ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತಾಡು ಎಂಬುದೊಂದು ನಾಣ್ನುಡಿ.
ಉತ್ತರಾಯಣದಲ್ಲಿ ಪ್ರಾರಂಭವಾಗುವ ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಮಾಡುವುದು ಶ್ರೇಯಸ್ಕರ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿಯೆಂದು ಕರೆವರು. ಹೀಗೆ ವರುಷದಲ್ಲಿ ಹನ್ನೆರಡು ಸಂಕ್ರಾಂತಿಗಳು ಬಂದರೂ ಮಕರ ಸಂಕ್ರಾಂತಿಯು ಅತ್ಯಂತ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರದಿಕ್ಕಿಗೆ ಪ್ರಯಾಣ ಮಾಡುವುದರಿಂದ ಉತ್ತರಾಯಣ ಪುಣ್ಯಕಾಲವೆಂದು ಕರೆವರು. ಅಯನ ಎಂದರೆ ಮಾರ್ಗ. ಉತ್ತರಾಯಣ ಎಂದರೆ ಉತ್ತರದ ಮಾರ್ಗ. ಈ ಸಮಯದಲ್ಲಿ ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವನು. ಹಾಗಾಗಿ ಈ ಕಾಲ ವಿಶೇಷವನ್ನು ಉತ್ತರಾಯಣವೆಂದು ಕರೆವರು. ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವೂ ಇದೆ. ಈ ರೀತಿಯಾಗಿ ಇದನ್ನು ಶ್ರೇಷ್ಠವಾದ ಮಾರ್ಗವೆಂದೂ ಅರ್ಥೈಸಬಹುದು. ಮಾಗಿಯ ಛಳಿ ಕಳೆಯುವ ಸಮಯಕ್ಕೆ ಸರಿಯಾಗಿ ಬೆಳೆ ಕೈಗೆ ಬರುವ ಸಮಯ ಬರುವುದು. ಹಳ್ಳಿಗಳಲ್ಲಿ ಅದನ್ನೇ ಸುಗ್ಗಿ ಹಬ್ಬವೆಂದು ಆಚರಿಸುವರು. ಉತ್ತಮ ಬೆಳೆಯಿಂದಾಗಿ ಜನಜೀವನ ಉತ್ತಮ ಮಟ್ಟಕ್ಕೇರುವುದು. ಹೀಗಾಗಿ ಅದನ್ನು ಸಂಕ್ರಾಂತಿ ಎಂದು ಕರೆಯುವರು. ಈ ಹಬ್ಬವನ್ನು ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲವೆಂದೂ ಗುರುತಿಸುವರು. ಈ ದಿನದಂದು ಖಿಚಡಿಯನ್ನು ಮಾಡುವುದರಿಂದ ಖಿಚಡಿ ಸಂಕ್ರಾಂತಿಯೆಂದೂ ಕರೆಯುವರು. ಖಿಚಡಿ ಎಂಬುದು ತುಪ್ಪ, ಹೆಸರು ಬೇಳೆ, ಅಕ್ಕಿ, ಮೆಣಸು ಮತ್ತಿತರೇ ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಹುಗ್ಗಿ. ತಮಿಳುನಾಡಿನಲ್ಲಿ ಮನೆಮನೆಗಳಲ್ಲಿ ಹಾಲನ್ನು ಉಕ್ಕಿಸುವುದರಿಂದ ಪೊಂಗಲ್ ಎಂದು ಕರೆವರು. ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತರುಲಾಗುವುದರಿಂದ ಅವುಗಳನ್ನು ದಾನ ಮಾಡಿ, ನಂತರ ಸೇವಿಸುವರು. ಕರ್ನಾಟಕದಲ್ಲಿ ಎಳ್ಳು ಬೆಲ್ಲವನ್ನು ಸೇವಿಸಿದರೆ, ಮಹಾರಾಷ್ಟ್ರದಲ್ಲಿ ಎಳ್ಳಿನ ಉಂಡೆಯನ್ನು ದಾನ ಮಾಡಿ ಸೇವಿಸುವರು. ಅಲ್ಲಿ ಇದನ್ನು ತಿಲ್‌ಗೋಳ ಎಂದು ಕರೆವರು. ವಿಶೇಷವಾಗಿ ರಾಜಸ್ಥಾನ, ಗುಜರಾತ ಮತ್ತು ಮಹಾರಾಷ್ಟ್ರಗಳಲ್ಲಿ ಗಾಳಿಯ ಪಟವನ್ನು ಹಾರಿಬಿಡುವರು. ಈ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಸೂರ್ಯದೇವನನ್ನು ಪೂಜಿಸುವುದು ವಾಡಿಕೆಯಲ್ಲಿದೆ.
ಈ ಹಬ್ಬವನ್ನು ಸಾಮಾನ್ಯವಾಗಿ ಆಂಗ್ಲ ಪಂಚಾಂಗದ ಜನವರಿ ತಿಂಗಳಿನ 14 ಅಥವಾ 15ನೆಯ ತಾರೀಖಿನಂದು ಆಚರಿಸುವರು. ಚಾಂದ್ರಮಾನ ಪಂಚಾಂಗ ರೀತ್ಯಾ ಒಂದು ವರ್ಷಕ್ಕೆ 354 ದಿನಗಳಾದರೆ, ಸೌರಮಾನ ಪಂಚಾಂಗದಂತೆ ಒಂದು ವರ್ಷಕ್ಕೆ 365 ¼ ದಿನಗಳಾಗಿರುವುವು. ಇದರಿಂದಾಗ 3ವರ್ಷಗಳಿಗೊಮ್ಮೆ ಅಧಿಕ ಮಾಸವನ್ನು ಚಾಂದ್ರಮಾನ ಪಂಚಾಂಗ ಕೊಡುವುದು.
ಈ ದಿನದಂದು ಶ್ರದ್ಧೆ, ಭಕ್ತಿಗಳಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ ಮತ್ತು ಶ್ರಾದ್ಧಗಳಿಗೆ ವಿಶೇಷ ಫಲವಿದೆಯೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಂದು ಗಂಗಾದಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡುವುದರಿಂದ, ಅದು ಬರಿಯ ಮಲಾಪಕರ್ಷಣ ಸ್ನಾನವಲ್ಲದೇ (ಶರೀರದ ಕೊಳೆಯನ್ನು ತೊಳೆಯುವುದು), ಮಾನಸಿಕ ದೋಷಗಳನ್ನು ತೊಳೆದಂತಾಗುವುದೆಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ.
ಕರ್ನಾಟಕದಲ್ಲಿ ಬಿಳಿ ಎಳ್ಳು, ಕಡಲೆಕಾಯಿಬೀಜ, ಹುರಿಗಡಲೆ, ಕುಸರಿಕಾಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ, ಬೆಲ್ಲ ಮತ್ತು ಇತರೆ ವಸ್ತುಗಳನ್ನು ಮಿಶ್ರಣ ಮಾಡಿ ಎಳ್ಳು ಎಂದು ಕರೆವರು. ಅದರೊಂದಿಗೆ ಹಾಲು ಮತ್ತು ಸಕ್ಕರೆ ಪಾಕದಲ್ಲಿ ಅಚ್ಚಿನಲ್ಲಿ ವಿಧ ವಿಧವಾದ ಆಕಾರಗಳಲ್ಲಿ ಸಕ್ಕರೆ ಅಚ್ಚುಗಳನ್ನೂ ಮಾಡುವರು. ಇದರೊಂದಿಗೆ ಕತ್ತರಿಸಿದ ಕಬ್ಬು, ಬಾಳೆಹಣ್ಣು, ಎಲಚಿಹಣ್ಣು ಮತ್ತು ಯಥಾಶಕ್ತಿ ಉಡುಗೊರೆಯಾಗಿ ಬೆಳ್ಳಿ ಅಥವಾ ಸ್ಟೀಲಿನ ಹರಿವಾಣ ಅಥವಾ ಪಾತ್ರೆಗಳನ್ನು ಮನೆ ಮನೆಗಳಿಗೆ ಹೋಗಿ ಕೊಡುವರು. ಇದನ್ನು ಬೀರುವುದು ಎಂದು ಕರೆವರು. ಸಾಮಾನ್ಯವಾಗಿ ಮನೆಯ ಹೆಣ್ಣುಮಕ್ಕಳು ಎಳ್ಳು ಬೀರಿದರೆ, ಹೆಣ್ಣುಮಕ್ಕಳಿಲ್ಲದ ಮನೆಗಳಲ್ಲಿ ಗಂಡು ಮಕ್ಕಳನ್ನು ಎಳ್ಳು ಬೀರಲು ಕಳುಹಿಸುವುದೂ ವಾಡಿಕೆಯಲ್ಲಿದೆ. ಇದಲ್ಲದೇ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು 5 ವರ್ಷಗಳವರೆವಿಗೆ ನೆಂಟರಿಷ್ಟರಿಗೆ ಎಳ್ಳನ್ನು ಬೀರುವರು. ಇದರಲ್ಲಿನ ವಿಶೇಷತೆ ಎಂದರೆ, ಮೊದಲ ವರ್ಷ ೫ ಬಾಳೆಯಹಣ್ಣುಗಳನ್ನು ದಾನ ಮಾಡಿದರೆ, ಎರಡನೆಯ ವರ್ಷ 10, ಮೂರನೆಯ ವರ್ಷ 15, ನಾಲ್ಕನೆಯ ವರ್ಷ 20 ಮತ್ತು ಐದನೆಯ ವರ್ಷ 25 ಬಾಳೆಯಹಣ್ಣುಗಳನ್ನು ದಾನ ಮಾಡುವರು (ಬೀರುವರು). ಅಂದಿನ ಸಂಜೆ ಚಿಕ್ಕ ಮಕ್ಕಳಿಗೆ ಆರತಿಯನ್ನು ಎತ್ತಿ ಎಲಚಿಹಣ್ಣುಗಳನ್ನು ತಲೆಯ ಸುರಿಯುವುದೂ ಪದ್ಧತಿಯಲ್ಲಿದೆ. ಹಳ್ಳಿಗಳಲ್ಲಿ ಎತ್ತು ಹಸು ಕರುಗಳಿಗೆ ಸ್ನಾನ ಮಾಡಿಸಿ, ಬಣ್ಣಗಳಿಂದ ಅಲಂಕರಿಸಿ, ಪೂಜಿಸಿ ತೆಂಗಿನಕಾಯಿ, ಬೆಲ್ಲ, ಹುಲ್ಲು ಮತ್ತು ಧಾನ್ಯಗಳನ್ನು ತಿನ್ನಿಸುವರು. ಸಂಜೆಯ ವೇಳೆಯಲ್ಲಿ ಉರಿಯುತ್ತಿರುವ ಬೆಂಕಿಯ ಮೇಲೆ ಹಾರಿಸುವರು. ಇದನ್ನು ಕಿಚ್ಚು ಹಾಯಿಸುವುದು ಎಂದು ಕರೆವರು. ಇದರಿಂದ ಅವುಗಳಲ್ಲಿ ತುಂಬಿ ಭಯ ಭೀತಿಗಳು ಪರಿಹಾರವಾಗುವುದು ಎಂಬ ಪ್ರತೀತಿ ಇದೆ. ತಮಿಳುನಾಡಿನಲ್ಲಿ ಇದಕ್ಕೆಂದೇ ಒಂದು ಪ್ರತ್ಯೇಕ ದಿನವನ್ನು ಆಚರಿಸುವರು. ಅದಕ್ಕೆ ಮಾಟ್ಟು ಪೊಂಗಲ್ ಎಂದು ಕರೆವರು. ಅಲ್ಲಿ ಮೂರುದಿನಗಳ ಹಬ್ಬವನ್ನಾಗಿ ಆಚರಿಸುವರು. ಭೋಗಿ, ಪೊಂಗಲ್ ಮತ್ತು ಕನೂ ಹಬ್ಬಗಳೆಂದು ಆಚರಿಸುವರು. ಸಂಕ್ರಾಂತಿಯ ನಂತರದ ದಿನದಂದು ಕನೂಹಬ್ಬವನ್ನು ಆಚರಿಸುವರು. ಸಂಕ್ರಾಂತಿ ಹಬ್ಬದಂದು ಮಾಡಿದ ಅಡುಗೆಯ ಉಳಿದ ಭಾಗವನ್ನು (ತಂಗಳು). ಕೆಂಪು, ಹಳದಿ ಮುಂತಾದ ಬೇರೆ ಬೇರೆ ಬಣ್ಣದ ಅನ್ನದ ಜೊತೆ, ಹಣ್ಣುಗಳು, ಕಬ್ಬಿನ ಚೂರು ಸೇರಿಸಿ, ಮನೆಯ ಹೊರಗೆ ಎಲೆಗಳ ಮೇಲೆ ಇರಿಸಿ ಭೂತಗಳಿಗೆ ಸಮರ್ಪಿಸುವರು. ಬೆಳಗಿನ ಕಾಲದಲ್ಲಿ ಇದನ್ನು ಸಮರ್ಪಿಸಿ ನಂತರ ಸ್ನಾನ ಮಾಡುವರು.
ಕೇರಳದ ಮಕರ ವಿಳಕ್ಕು ಬಗ್ಗೆ ತಿಳಿಯದವರು ಯಾರಿದ್ದಾರೆ? ಪ್ರತಿ ವರ್ಷವೂ ಟೆಲಿವಿಷನ್‍ಗಳಲ್ಲಿ ದೂರದ ಬೆಟ್ಟದಲ್ಲಿ ಸಂಜೆಯ ನಿಖರವಾದ ಸಮಯದಲ್ಲಿ ದೀಪ ಬೆಳಗುವುದನ್ನು ತೋರಿಸುವರು. ಇದನ್ನು ಎಲ್ಲರೂ ನೋಡಿರಬೇಕು ಅಲ್ಲವೇ? ಇಡೀ ದೇಶವಲ್ಲದೇ ವಿದೇಶಗಳಿಂದ ಕೂಡಾ ಲಕ್ಷಾಂತರ ಜನಗಳು ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೈಗೆ ಹೋಗುವರು. ಹಾಗೆ ಹೋಗುವವರಲ್ಲಿ ಬಹಳಷ್ಟು ಜನರು ವ್ರತವನ್ನು ಪಾಲಿಸುವರು. ಈ ಸಮಯದಲ್ಲಿ ಅವರಲ್ಲಿ ಸಂಯಮತೆ, ಭ್ರಾತೃತ್ವ, ಮಾನವೀಯತೆ ಇತ್ಯಾದಿ ಗುಣಗಳನ್ನು ಕಂಡುಬರುವುದು ಸಂತೋಷದಾಯಕ ಸಂಗತಿ. ವ್ರತದ ಪ್ರಕಾರ ಪ್ರತಿ ದಿನ ಬೆಳಗ್ಗೆ ತಣ್ಣೀರಿನಲ್ಲಿ ಮಿಂದು ದೇವರ ಪೂಜೆಯನ್ನು ಮುಗಿಸಿ, ಅಲ್ಲಲ್ಲಿ ಆಯೋಜಿಸುವ ಭಜನೆಗಳಲ್ಲಿ ಪಾಲ್ಗೊಳ್ಳುವರು. ಅಲ್ಲಿ ನಡೆಯುವ ಮಂಡಲ ಪೂಜೆಯಲ್ಲಿ ಭಾಗವಹಿಸುವರು. ಕಪ್ಪು ಬಟ್ಟೆಯನ್ನು ಧರಿಸಿ, ಬರಿಗಾಲಿನಲ್ಲಿ ನಡೆಯುವ, ಸದಾ ದೇವರ ಧ್ಯಾನವನ್ನು ಮಾಡುತ್ತಿರುವ ಜನಗಳನ್ನು ಕಂಡಿರುವೆವು. ವ್ರತಾಚರಣೆಗೆ ಮೊದಲು ಗುರುವಿನಿಂದ ದೀಕ್ಷೆಯನ್ನು ಪಡೆಯಬೇಕು. ವ್ರತ ಪಾಲಿಸುವವರು ಹೆಂಗಸರು ಮಾಡಿದ ಅಡುಗೆಯನ್ನು ಊಟ ಮಾಡಬಾರದು. ಯಾವ ದುಶ್ಚಟಗಳಿಗೂ ಮೊರೆ ಹೋಗಬಾರದು. ನಿಖರವಾದ ದಿನದಲ್ಲಿ ಗುಂಪು ಗುಂಪಾಗಿ ಶಬರಿಮಲೈಗೆ ಹೋಗುವರು. ಹೋಗುವಾಗ ತೆಂಗಿನಕಾಯಿ ಮತ್ತು ತುಪ್ಪವನ್ನು ದೇವರಿಗೆ ಅರ್ಪಿಸಲು ತೆಗೆದುಕೊಂಡು ಹೋಗುವರು. ಇದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಇರುಮುಡಿ ಎಂದು ಕರೆದು ತಲೆಯ ಮೇಲಿಟ್ಟುಕೊಂಡು ಹೋಗುವರು. ಅಲ್ಲಿ ಹರಿಹರ ಪುತ್ರ ಶ್ರೀ ಅಯ್ಯಪ್ಪನ ದರ್ಶನಕ್ಕಾಗಿ ದೇಗುಲದ ೧೮ ಮೆಟ್ಟಿಲುಗಳನ್ನು ಏರಿ ಹೋಗುವರು. ಈ ೧೮ ಮೆಟ್ಟಿಲುಗಳು ಪಂಚೇಂದ್ರಿಯಗಳು, ಅಷ್ಟ ಲಕ್ಷಣಗಳು (ಕಾಮ ಕ್ರೋಧ ಮದ ಮೋಹ ಇತ್ಯಾದಿ), ತ್ರಿಗುಣ (ಸತ್ವ, ತಮಸ್ಸು, ರಜಸ್ಸು), ವಿದ್ಯೆ ಮತ್ತು ಅವಿದ್ಯೆಗಳ ಸಂಕೇತ. ಇವೆಲ್ಲವನ್ನೂ ಮೆಟ್ಟಿ ಮೇಲೇರಿ ದೇವರ ದರ್ಶನವನ್ನು ಮಾಡಬೇಕು. ನಂತರ ಸಂಜೆಯ ಸಮಯದಲ್ಲಿ ಮಕರವಿಳಕ್ಕು ದೀಪ ದರ್ಶನವನ್ನು ಮಾಡುವರು. ಕಟ್ಟುನಿಟ್ಟಾಗಿ ೧೬ ವರ್ಷಗಳ ಕಾಲ ವ್ರತವನ್ನು ಮಾಡಿದ ನಂತರ ಗುರುವಿನ ಸ್ಥಾನವನ್ನು ಪಡೆಯುವರು. ಈ ರೀತಿ ವರ್ಷದಲ್ಲಿ ವ್ರತಾಚರಣೆಯನ್ನು ಮಾಡುವವನು ಜೀವನದ ಮರ್ಮವನ್ನು ಅರಿಯುವನು ಎಂಬುದರಲ್ಲಿ ಸಂದೇಹವಿಲ್ಲ.
ಸಂಕ್ರಾಂತಿಯ ಹಬ್ಬದ ದಿವಸ ರಾತ್ರಿಯ ವೇಳೆಯಲ್ಲಿ ದೇವರ ಪೂಜೆಯ ನಂತರ ಜ್ಯೋತಿಷಿಗಳಿಂದ ಸಂಕ್ರಾಂತಿ ಮೂರ್ತಿಯ ಸ್ವರೂಪ ಮತ್ತು ಆ ವರ್ಷದ ಸಂಕ್ರಾಂತಿ ಫಲವನ್ನು ಓದಿಸಿ ತಿಳಿಯುವ ಪದ್ಧತಿಯೂ ಇದೆ. ಸಂಕ್ರಾಂತಿ ಪುರುಷನಿಗೆ ಮೂರು ತಲೆಗಳು, ಎರಡು ಮುಖಗಳು, ಐದು ಬಾಯಿಗಳು, ಮೂರು ಕಣ್ಣುಗಳು, ಜೋಲಾಡುವ ಕಿವಿ ಮತ್ತು ಹುಬ್ಬುಗಳು, ಕೆಂಪು ಹಲ್ಲು, ಉದ್ದವಾದ ಮೂಗು, ಎಂಟು ತೋಳುಗಳು, ಎರಡು ಕಾಲುಗಳು, ಕಪ್ಪುಬಣ್ಣದ ಅರ್ಧ ಗಂಡು ಅರ್ಧ ಹೆಣ್ಣಿನ ರೂಪ ಇರುವುದು. ಅದು ಬಂದಿರುವ ವಾರದ ಫಲ, ಪಕ್ಷದ ಫಲ, ತಿಥಿಯ ಫಲ, ನಕ್ಷತ್ರದ ಫಲ, ಯೋಗಕರಣಗಳ ಫಲ, ಅದರ ದೃಷ್ಟಿ ಮತ್ತು ಪ್ರಯಾಣದ ದಿಕ್ಕು, ಕಾಲ, ಅದರ ಸ್ನಾನ ತೀರ್ಥದ ಫಲ, ವಸ್ತ್ರಲೇಪನ, ಧರಿಸಿರುವ ಹೂ, ಅಲಂಕಾರ, ಆಹಾರ, ಏರಿರುವ ವಾಹನ, ಹೊಂದಿರುವ ಆಯುಧಗಳು, ಇತ್ಯಾದಿಗಳ ಫಲಗಳೇನೆಂಬುದನ್ನು ಜ್ಯೋತಿಷಿಗಳು ಅರ್ಥೈಸುತ್ತಾರೆ.
ಈ ಶುಭಸಂದರ್ಭಕ್ಕೆ ನನ್ನದೊಂದು ಪುಟ್ಟ ಕವನವನ್ನೂ ಇಲ್ಲಿ ಇರಿಸುತ್ತಿರುವೆ.
ನೇಸರನು ತನ್ನ ಪಥವ ಬದಲಿಸುತಿರಲು
ಮಾಗಿಯ ಛಳಿ ಮಾಯವಾಗುತಿರಲು
ಹೊಸ ಚೈತನ್ಯ ಲವಲವಿಕೆ ಮೂಡುತಿದೆ
ಹೊಸ ಬೆಳೆ ಹೊಸ ಕ್ರಾಂತಿ ಹರಡುತಿದೆ
ಹಸನಾದ ದವಸವು ಒಲೆಯ ಮೇಲೇರುತಿದೆ
ಹುಗ್ಗಿ ಹಾಲುಗಳು ಉಕ್ಕಿ ಹರಿಯುತ್ತಿದೆ
ಪುಟ್ಟಕ್ಕ ಪುಟ್ಟಣ್ಣರ ಸಂಭ್ರಮ ಹೇಳುತಿದೆ
ಸಂಕ್ರಾಂತಿ ಹಬ್ಬವು ಮನೆಯೊಳಗೆ ಕಾಲಿಟ್ಟಿದೆ
ಕೈಯಲಿ ಹಿಡಿದಿಹೆ ಪುಟ್ಟ ಬೆಳ್ಳಿಯ ಹರಿವಾಣ
ಎಳ್ಳು ಬೀರಲು ಹೊರಟಿಹಳ ಪುಟ್ಟಿಗಿಲ್ಲ ಕಡಿವಾಣ
ಹದವಾಗಿ ಮಿಶ್ರಿತ ಎಳ್ಳು ಬೆಲ್ಲ ಕುಸುರಿ ಕಾಳು
ಬಾಳೆಯಹಣ್ಣಿನೊಂದಿಗಿಹುದು ಕಬ್ಬಿನ ಹೋಳು
ಅಕ್ಕಾ ತಂಗೇರು ಬಂದು ಎಲಚಿ ಆರತಿಯ ಎತ್ತಿ
ಕಬ್ಬಿನ ಚೂರು, ಕಾಸು ಕೂಸಿನ ಮೇಲೆರೆಯಿರೇ
ಬಣ್ಣ ಬಣ್ಣದ ಜರತಾರಿ ಕುಪ್ಪಸ ತೊಟ್ಟ ತಂಗಿ
ಜರಿ ಅಂಚಿನ ಲಂಗದಿ ಕುಣಿವ ಚೈತನ್ಯದ ಭಂಗಿ
ಇನ್ನೊಂದು ಕವನ
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ
ಬೆಳ್ಳಿಯ ಹರಿವಾಣದಲಿ ಕಸೂತಿಯ ಕರವಸ್ತ್ರ
ಬೆಳ್ಳಿಯ ಬಟ್ಟಲಲಿ ಎಳ್ಳು ಬೆಲ್ಲ ಸಮ್ಮಿಶ್ರ
ಜೊತೆಯಲಿ ಬೆಳ್ಳನೆಯ ಮೃದು ಸಕ್ಕರೆಯ ಅಚ್ಚು
ಅರಿಶಿನ ಕುಂಕುಮ ಬಾಳೆಹಣ್ಣು ಎಲಚಿಯ ಗುಚ್ಚು
ಈ ಕಡೆ ಮನೆಯವರೀವರು ಪೊಂಗಲ್ ತಿಂಡಿ
ಆ ಕಡೆ ಮನೆಯವರೀವರು ತಿಲ್‍ಗೋಳ್ ಉಂಡಿ
ಅವರ ಮನೆಯ ಗಂಗೆ ಗೌರಿಗಳ ಪೂಜಿಸೋಣ
ಗೆಳೆಯರೊಡಗೂಡಿ ಗಾಳಿಪಟ ಹಾರಿಸೋಣ
ಕೊಬ್ಬರಿ ಕಡಲೆ ಬಾಯ್ತುಂಬ ತಿನ್ನೋಣ
ಕಬ್ಬನು ಸಿಗಿದು ರಸ ಹೀರೋಣ
ಸಂಜೆ ಬೆಂಕಿಯ ಕೊಂಡವ ಹಾಯೋಣ
ಹೊಸ ಧಾನ್ಯವ ಗಾಡಿಯ ಮೇಲೆ ಹೊತ್ತು ತರೋಣ
ಎಲ್ಲರಿಗೂ ಹಂಚೋಣ ನಮ್ಮನೆಯ ಎಳ್ಳು ಬೆಲ್ಲ
ಸ್ನೇಹ ಸಂಪಾದಿಸಿ ಒಂದಾಗಿ ಬಾಳುವ ನಾವೆಲ್ಲಾ
ಸಂಕ್ರಾಂತಿಯಿಂದ ಶುಭಕ್ರಾಂತಿಯ ತರೋಣ
ನಾಡ ಕಟ್ಟೋಣ, ಎಲ್ಲರ ಕೈ ಜೋಡಿಸೋಣ
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳು ಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ
4 replies on “ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡು”
ತವಿಶ್ರೀ,
ಸಂಕ್ರಾಂತಿಯ ಶುಭಾಶಯಗಳು !
ನಿಮ್ಮ ಹ್ಯಾಟ್ರಿಕ್‍ಗೆ ಅಭಿನಂದನೆಗಳು !!!
ಎಲ್ಲಾ ೩ ಲೇಖನಗಳು ಒಟ್ಟಿಗೆ ಇಲ್ಲಿ ಹಾಕಿದ ಹಾಗಿದೆ..
Thanks for the beautifull “KAVANA”
how it is possible to type in kannada language if it is oossible can u guide me how to type in our computer
Ones again thanks for the kavana
ಕ್ಷಮಿಸಿ, ಸಂಕ್ರಾಂತಿ ಎಳ್ಳುಬೆಲ್ಲ ಮುಗಿದಿದೆಯೇ? ತಡವಾಗಿ ಶುಭಾಶಯ ಕೋರುತ್ತಿದ್ದೇನೆ. ಶುಭಾಶಯ ತಡವಾಗಿ ಕೋರಿದವರಿಗೆ ಎಳ್ಳುಬೆಲ್ಲ ಇಲ್ಲವೇ?
मे कन्नड पढ़ना तो नहीं जानता लेकिन आपके प्रयास सरहनीय है,
मात्रभाषा का सम्मान आवश्यक है ! जय हिन्द वंदे मातरम !
यशपाल सोलंकी, राजस्थान !
Yashpal Solanki, Rajasthan
VANDE MATARAM,
VANDE BHARAT