ಪುಟ್ಟ ನಿಧಿಗೊಂದು ಉಡುಗೊರೆ

ಅಂದು ನೀ ಹುಟ್ಟಿದ ದಿನ ಮನೆಯಲ್ಲೆಲ್ಲ ನಲಿವ ದಿನ
ಇಂದು ವರುಷವಾಗುತ ನೀ ತುಂಬುತಿಹೆ ಎಲ್ಲರ ಮನ
ಭುವಿಗೆ ಬಂದಂದಿನಿಂದ ಮನೆಯಾಯಿತು ಪಾವನ
ನೀ ತುಂಬುತಿಹೆ ಅಜ್ಜ ಅಜ್ಜಿಯರ ಮನವನ್ನ
nidhi1.jpg
ಅಂದು ಮನಕಾನಂದ ನೀ ಬೋರಲು ಬೀಳಲು
ಮುಂಬರಲು ದೇಕಲಾಗದೇ ಅಮ್ಮನಿಗೂ ತರಿಸಿದೆ ಅಳಲು
ಇಂದು ನೀ ಹಿಡಿದಿಹೆ ಕರದಲಿ ಕೃಷ್ಣನಾ ಕೊಳಲು
ವಂಶದ ಆಲದ ಮರದಿ ಬೇರೂರುತಿದೆ ಇನ್ನೊಂದು ಬಿಳಲು

ಮನೆಯಲ್ಲೆಲ್ಲಾ ಇಡುತಿಹೆ ಪುಟ್ಟ ಪುಟ್ಟ ಹೆಜ್ಜೆ
ಇಂದು ತೆಗೆಯುವವರು ಅಂದು ಹಾಕಿದಾ ಗೆಜ್ಜೆ
ಇನ್ನು ತಡೆಯಲಾರರು ನಿನ್ನ ತುಂಟಾಟ
ಕೆಲವೊಮ್ಮೆ ನೀ ಬಾಯಿ ಬಿಟ್ಟರೆ ಎಲ್ಲರಿಗೂ ಪ್ರಾಣಸಂಕಟ

ಅಪ್ಪ ತಂದಿತ್ತಿಹ ಬಣ್ಣ ಬಣ್ಣದ ಚೊಣ್ಣ ಷರಾಯಿ
ನಿನ್ನಂದಕೆ ನೋಡುಗರೆಲ್ಲ ಬಿಡುತಿಹರು ಬಾಯಿ ಬಾಯಿ
ಕುಟುಂಬದಿ ನೀನೆಂದಿಗೂ ಆಗು ಬತ್ತದ ನಿಧಿ
ತನು ಮನ ತಣಿಸುವ ಬತ್ತದ ಜಲಧಿ

ಪರಶಿವನು ಎಂದಿಗೂ ನಿನ್ನ ಕಾಯುವ
ಉಚ್ಛ ಏಳಿಗೆಗಾಗಿ ನಾವೆಲ್ಲ ಇಂದು ಬೇಡುವ
ಆಯುರಾರೋಗ್ಯ ಅಭಿವೃದ್ಧಿ ಬರಲಿ ನಿನ್ನ ಪಾಲಿಗೆ
ನಿನ್ನಿಂದಾಗಲಿ ಎಲ್ಲರೂ ಹಾತೊರೆಯುವ ಏಳಿಗೆ

Advertisements

ಮುಂಬಯಿ


ಮುಂಬಯಿ ನಮ್ಮ ದೇಶದ ವಾಣಿಜ್ಯ ರಾಜಧಾನಿ. ಇದು ಮೊದಲು ಪ್ರತ್ಯೇಕ ಸಂಸ್ಥಾನವಾಗಿತ್ತು. ಆಗ ಗುಜರಾತಿನ ಕೆಲವು ಪ್ರದೇಶಗಳೂ ಇದರೊಡನೆ ಸೇರಿತ್ತು. ಆಗಿನ ಪ್ರಸಿದ್ಧ ಮುಖ್ಯಮಂತ್ರಿಗಳಾಗಿದ್ದವರಲ್ಲಿ ದಿವಂಗತ ಮೊರಾರ್ಜಿ ದೇಸಾಯಿಯವರೊಬ್ಬರು. ಮುಂಬಯಿಯ ಮತ್ತು ಕನ್ನಡಿಗರ ನಂಟು ತುಂಬಾ ಹಳೆಯದ್ದು. ಮುಂಬಯಿಗೆ ಮೊದಲು ಎಲ್ಲರೂ ಬಾಂಬೇ ಎಂದೇ ಕರೆಯುತ್ತಿದ್ದರು. ಆದರೆ ಕನ್ನಡದವರು ಮಾತ್ರವೇ ಮುಂಬಯಿ ಎಂದು ಕರೆಯುತ್ತಿದ್ದರು. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನ ಕೆಲಸ ಪ್ರಾರಂಭಿಸಿದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಮುಂಬಯಿನ ಜನಸಂಖ್ಯೆ ೧.೨೦ ಕೋಟಿ ಮತ್ತು ಅದರಲ್ಲಿ ಕನ್ನಡಿಗರ ಪಾಲು ಶೇಕಡ ೧೦ ಅಂದ್ರೆ ೧೨ ಲಕ್ಷ. ಆದರೂ ಹೊರಗಡೆ ಕನ್ನಡ ಮಾತನಾಡೋದು ಕಡಿಮೆ. ಇದಕ್ಕೆ ಕಾರಣ ಈ ಮುಂದೆ ಹೇಳುತ್ತಿದ್ದೀನಿ.

gateway.jpg
ಕರ್ನಾಟಕದಲ್ಲಿ ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗುವುದು – ಉಡುಪಿಯ ಅಷ್ಟ ಮಠಗಳು, ಶ್ರೀ ಕೃಷ್ಣ ದೇವಸ್ಥಾನ. ಆದರೆ ಮುಂಬಯಿಯಲ್ಲಿ ಉಡುಪಿ ಅಂದ್ರೆ ಜನಗಳಿಗೆ ಮೊದಲು ನೆನಪಾಗುವುದು ಮಸಾಲೆ ದೋಸೆ, ನಂತರ ರಾಮಾನಾಯಕರ ಉಡುಪಿ ಶ್ರೀ ಕೃಷ್ಣ ಭವನವಾದ ಊಟದ ಹೊಟೇಲು. ಇಲ್ಲಿಯ ಹೆಚ್ಚಿನ ಹೊಟೇಲುಗಳಲ್ಲಿ ನೀವು ಕಾಣಬರುವ ದೃಶ್ಯ ಅಂದ್ರೆ –
ಹೊಟೇಲಿನ ಮುಂಭಾಗದಲ್ಲಿ ಮೋಸಂಬಿ ಹಣ್ಣುಗಳ ತಳಿರು ತೋರಣ – ಬಲಭಾಗದಲ್ಲಿ ಗಲ್ಲದ ಮೇಲೆ ಕುಳಿತಿರೋ ಯಜಮಾನ – ಕೈಯಲ್ಲಿ ಉದಯವಾಣಿ ಅಥವಾ ಕರ್ನಾಟಕ ಮಲ್ಲ ವೃತ್ತಪತ್ರಿಕೆ – ಹಿಂದೆ ಯಜಮಾನರ ಊರಿನ ದೇವರ ಫೋಟೋ – ಅದರ ಮುಂದೆ ಸದಾ ಬೆಳಗುತ್ತಿರುವ ದೀಪ ಮತ್ತು ಎರಡು ಊದಿನಕಡ್ಡಿಗಳು. ಹೆಚ್ಚಿನವೆಲ್ಲಾ ಶಾಕಾಹಾರಿ ಉಪಹಾರಗೃಹಗಳು. ಮಾಂಸಾಹಾರಿ ಮತ್ತು ಡ್ಯಾನ್ಸ್ ಬಾರ್ ಗಳಿಗೇನೂ ಕಡಿಮೆ ಇಲ್ಲ – ಅಲ್ಲೂ ಇದೇ ತರಹದ ದೃಶ್ಯ. ಹೆಚ್ಚಿನ ಜನಗಳು ಇಲ್ಲಿಗೆ ಬರೋದು – ಇಡ್ಲಿ, ದೋಸೆ ಅಥವಾ ಉದ್ದಿನ ವಡೆ ತಿನ್ನಲು. ಇನ್ನೊಂದು ವಿಶೇಷತೆ ಏನಂದ್ರೆ – ನಮ್ಮ ಬೆಂಗಳೂರಿನಲ್ಲಿ ಕೊಡುವ ಹಾಗೆ ೧ ಪ್ಲೇಟ್ ಇಡ್ಲಿ ಅಂದ್ರೆ – ೨ ಇಡ್ಲಿ ಕೊಡೋದಿಲ್ಲ, ಕೊಡೋದು ಒಂದೇ. ಇಡ್ಲಿ ಜೊತೆ ವಡೆ ಇಲ್ಲ. ಕೇಳಿದ್ರೆ ಎರಡನ್ನೂ ಬೇರೆ ಬೇರೆ ತಾಟುಗಳಲ್ಲಿ ನೀಡುತ್ತಾರೆ. ಚೌಚೌ ಬಾತ್ ಅಂತೂ ಗೊತ್ತೇ ಇಲ್ಲ. ಅದೇ ಉಪ್ಮ ಅಂದ್ರೆ ಉಪ್ಪಿಟ್ಟು ಮತ್ತು ಶಿರಾ ಅಂದ್ರೆ ಸಜ್ಜಿಗೆ. ಕೇಸರಿಬಾತ್ ಮಾಡೋಲ್ಲ. ಇಲ್ಲಿ ದರ್ಶಿನಿಗಳಂಥ ಹೊಟೆಲ್ ಗಳಿಲ್ಲ. ಯಾರಾದ್ರೂ ಬಂದು ದರ್ಶಿನಿ ಶುರು ಮಾಡಿದ್ರೆ – ಬಹಳ ಬೇಗ ಶ್ರೀಮಂತರಾಗಬಹುದು. ಹಾಗೆ ಮಾಡೋದು ಕಷ್ಟ ಕೂಡಾ. ಈ ಹೊಟೆಲ್ ನವರು ರಕ್ಷಣೆಗಾಗಿ ( ಪೊಲೀಸರಿಂದ ಮತ್ತು ರೌಡಿಗಳಿಂದ ) ನಿಯಮಿತವಾಗಿ ಹಣ ನೀಡಬೇಕು. ಇದನ್ನು ಹಫ್ತಾ ಎನ್ನುತ್ತಾರೆ. ಹಿಂದಿಯಲ್ಲಿ ಹಫ್ತಾ ಅಂದ್ರೆ ವಾರ ಅಂತ. ಹಾಗೇ ಇದನ್ನು ವಾರಕ್ಕೊಮ್ಮೆ ಕೊಡಬೇಕು. ಇದೂ ಒಂದು ದೊಡ್ಡ ದಂಧೆಯೇ.

ಮುಂಬಯಿಯ ಚರಿತ್ರೆ ೧೬ನೇ ಶತಮಾನಕ್ಕೂ ಹಿಂದಿನದು. ೧೫೦೮ರಲ್ಲಿ ಫ್ರಾನ್ಸಿಸ್ ಆಲ್ಮೈಡ ಅನ್ನುವ ನಾವಿಕ ಈ ದ್ವೀಪಕ್ಕೆ ಬಂದದ್ದು. ಆಗ ಈ ಜಾಗಕ್ಕೆ ಬಾಮ್ ಬಹಿಯಾ (ಒಳ್ಳೆಯ ಬೇ ಅಥವಾ ಕೊಲ್ಲಿ) ಅಂದನಂತೆ. ಇಲ್ಲಿಯ ಮೂಲವಾಸಿಗಳಾದ ಬೆಸ್ತರರನ್ನು (ಮೀನುಗಾರರು) ಕೋಳಿಗಳು ಎಂದು ಕರೆಯುವರು. ಅವರುಗಳ ದೈವ ಮುಂಬಾದೇವಿ. ಮುಂದೆ ಇದೇ ಇಂಗ್ಲೀಷರ ಬಾಂಬೇ ಮತ್ತೆ ಮಹಾರಾಷ್ಟ್ರೀಯರ ಮುಂಬಾ ಆಯಿ (ಮುಂಬಾ ತಾಯಿ) – ಮುಂಬಯಿ ಆಯಿತು.

ಸಾಮಾನ್ಯವಾಗಿ ಜನಗಳಿಗೆ ಮುಂಬಯಿ ಅಂದರೆ ಅದೊಂದು ಕನಸಿನ ಲೋಕ
ಚಿತ್ರನಗರಿ, ಐಷಾರಾಮಿ ಜೀವನದ ಆಗರ ಎಂಬುವ ಕಲ್ಪನೆ ಬರುವುದು ಸಹಜ. ಇಲ್ಲಿ ಜಿವನ ನಡೆಸುವುದು (ಹೊಟ್ಟೆ ಹೊರೆಯುವುದು) ಬಹು ಸುಲಭ. ಆದರೆ ವಸತಿ ಮಾತ್ರ ಸ್ವಲ್ಪ ಕಷ್ಟ ಮತ್ತು ದುಬಾರಿ.
ಎಲ್ಲ ಊರುಗಳಂತೆಯೇ ಇಲ್ಲೂ ಕೊಳೆಗೇರಿ, ಹೊಲಗೇರಿಗಳಿವೆ.
ನಮ್ಮ ಬೆಂಗಳೂರನ್ನು ಇತರರಿಗೆ ಚಿತ್ರಗಳಲ್ಲಿ ತೋರಿಸುವಾಗ ಹೇಗೆ ಬರೀ ಲಾಲ್ ಬಾಗ್ ಕಬ್ಬನ್ ಪಾರ್ಕ್ ತೊರಿಸುತ್ತೇವೆಯೋ ಹಾಗೆಯೇ ಇಲ್ಲಿಯೂ ಚಿತ್ರಗಳಲ್ಲಿ ನಾರಿಮನ್ ಪಾಯಿಂಟ್, ಸುಂದರ ಜುಹು ಬೀಚ್ ಗಳನ್ನು ತೋರಿಸುತ್ತಾರೆ. ಇಲ್ಲಿಯ ಧಾರಾವಿ ಕೊಳೆಗೇರಿ ವಿಶ್ವದಲ್ಲೇ ಅತಿ ದೊಡ್ಡದಂತೆ. ಒಂದು ಮುಖ್ಯ ಅಂಶವೆಂದರೆ ಈ ಧಾರಾವಿಯಲ್ಲಿರುವವರಲ್ಲಿ ತಮಿಳರೇ ಹೆಚ್ಚು. ಈ ಹಿಂದೆ ಇವರುಗಳ ಧುರೀಣ ವರದರಾಜ ಮುದಲಿಯಾರ್ ಅಂತ ಒಬ್ಬ ಖಳನಾಯಕ ಇದ್ದ. ಇಲ್ಲಿಯ ಕೊಳೆಗೇರಿಗಳ ಜನಗಳು ತಮ್ಮ ನಿತ್ಯಕರ್ಮಗಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿ ಮುಗಿಸಿಕೊಳ್ಳುವುದು ಎಲ್ಲರೂ ನೋಡಬಹುದು. ಅದಕ್ಕೇ ಇರಬೇಕು ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ತಕ್ಷಣದ ಸಾವು ಬೇಕೆನ್ನುವವರು ಕಷ್ಟಪಡಲೇ ಬೇಕಿಲ್ಲ. ಮೂರು ನಿಮಿಷಗಳಿಗೊಮ್ಮೆ ಯಮದೂತರಂತೆ ಸದ್ದಿಲ್ಲದೇ ಬರುವ ಲೋಕಲ್ ಟ್ರೈನ್ ಗಳಿಗೆ ತಲೆ ಮೈ ಒಡ್ಡುವುದು ತುಂಬಾ ಸುಲಭ. ಈಗಿದ್ದವನು ಇನ್ನೊಂದು ಕ್ಷಣದಲ್ಲಿ ಇಲ್ಲವಾಗುವನು. ರೇಲ್ವೇ ಹಳಿಗಳ ಪಕ್ಕದಲ್ಲೇ ವಾಸ ಇರುವ ಗುಡಿಸಲುವಾಸಿಗಳಲ್ಲಿ ಕುಡಿತ ಸರ್ವೇಸಾಮಾನ್ಯ. ಎಷ್ಟೋ ಬಾರಿ ಕುಡಿತ ಅಮಲಿನಲ್ಲಿ ಬಹಿರ್ದೆಶೆಗೆ ಹೋಗುವ ವೇಳೆಗಳಲ್ಲಿ ಟ್ರೈನಿಗೆ ಆಹುತಿಯಾಗುವುದುಂಟು. ಕೆಲವು ವೇಳೆ ಬೆಳಗ್ಗೆ ಬೇಗನೆ ಲೋಕಲ್ ನಲ್ಲಿ ಪ್ರಯಾಣಮಾಡುವಾಗ ತುಂಡರಿಸಿದ ಕೈ ಅಥವಾ ಕಾಲುಗಳನ್ನು ನೋಡುವುದೂ ಉಂಟು. ಇಲ್ಲಿ ಮನುಷ್ಯನಿಗೆ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ.

local3.JPG

ಈ ಹಳಿಯ ಪಕ್ಕದಲ್ಲಿ ವಾಸಿಸುವ ಜನಗಳ ಮೌಢ್ಯತನದ ಬಗ್ಗೆ ಒಂದು ಕಿರುಪರಿಚಯ. ಇವರು ಕಡು ಬಡವರು. ಓದಿಲ್ಲ, ಬರಹವಿಲ್ಲ. ಕಷ್ಟಪಟ್ಟು ಅಂದು ದುಡಿದದ್ದು ಅಂದಿಗೇ ಖಾಲಿ ಮಾಡುವವರು. ತಿಂದು ಕುಡಿದು ಮೋಜು ಮಾಡುವವರು. ಇಂತಹವರಲ್ಲಿ ಒಬ್ಬನಿಗೆ ಮಧುವೇಹ ರೋಗ ಉಲ್ಬಣಿಸಿ, ಕಾಲಿನಲ್ಲಿ ಗ್ಯಾಂಗ್ರೀನ್ ಆಗಿ ಕೊಳೆಯಲಾರಂಭಿಸಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದರು. ಇವನಿಗೆ ಶಸ್ತ್ರಚಿಕಿತ್ಸೆ ಅಂದರೆ ಕಾಲು ಕತ್ತರಿಸುವರು ಅನ್ನೋದು ಗೊತ್ತಿತ್ತು. ಅದಕ್ಕೆ ಹಣ ಬಹಳವಾಗಿ ಖರ್ಚಾಗುವುದೆಂದು ಎಣಿಸಿ, ಒಂದು ಲೋಕಲ್ ಟ್ರೈನ್ ಬರುತ್ತಿರುವಾಗ ಕಾಲು ಕೊಟ್ಟು ಯಾಕೆ ತಾನೇ ಖರ್ಚಿಲ್ಲದೇ ಕಾಲು ಕತ್ತರಿಸಿಕೊಳ್ಳಬಾರದು ಅಂದುಕೊಂಡು ಹಾಗೇ ಮಾಡಲು ಹೋದನು. ಅಷ್ಟು ಸುಲಭದಲ್ಲಿ ರೋಗಮುಕ್ತನಾಗುವಂತಿದ್ದರೆ ಇನ್ಯಾಕೆ ಹೇಳಿ. ಹೇಗೋ ಗಟ್ಟಿ ಮನಸ್ಸು ಮಾಡಿ ರಭಸದಿಂದ ಬರುವ ಟ್ರೈನಿಗೆ ಕಾಲು ಕೊಟ್ಟ. ಟ್ರೈನ್ ಹತ್ತಿರ ಬರುವಾಗಲೇ ಇವನಿಗೆ ಬವಳಿ ಬರುವ ಹಾಗಿತ್ತು. ಇನ್ನು ಕಾಲು ತುಂಡರಿಸಿದ ಶಾಕ್ ಗೆ ಪ್ರಜ್ಞೆ ತಪ್ಪಿ ಬಿದ್ದ. ಬಳಿಕ ವಿಪರೀತ ರಕ್ತಸ್ರಾವದಿಂದಾಗಿ ಅಲ್ಲೇ ಇಹಲೋಕ ತ್ಯಜಿಸಿದ. ಹೀಗೆ ಆಕಸ್ಮಿಕಕ್ಕೆ ತುತ್ತಾದವರು ಬದುಕುವುದು ಕಷ್ಟ. ಅದೂ ಅಲ್ಲದೇ ಹಳಿಯ ತುಕ್ಕಿನ ಅಂಶ ಕೂಡಾ ಮೈ ಸೇರಿರುವುದು ಬದುಕಲು ಬಿಡುವುದೇ?
ಇಲ್ಲಿಯ ಸಂಚಾರ ವ್ಯವಸ್ಥೆಯ ಬಗ್ಗೆ ಹೇಳಬೇಕೆಂದ್ರೆ – ಊರು ಉದ್ದುದ್ದ ಇರುವುದರಿಂದ ರೈಲ್ವೇ ಸಂಚಾರ ವ್ಯವಸ್ಥೆ ಈ ಊರಿಗೆ ನರಗಳಂತಿವೆ. ಬಸ್ಸು ಕಾರು ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವಾಗ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಬಹಳ ಹೆಚ್ಚು. ಹಾಗಾಗಿ ಜನಗಳು ದುಬಾರಿಯಲ್ಲದ ಲೋಕಲ್ ಟ್ರೈನನ್ನೇ ನಂಬುವುದು ಜಾಸ್ತಿ.

ಇನ್ನು ಇಲ್ಲಿಯ ಆಕರ್ಷಣೆ ಏನು? ಇಲ್ಲಿಗೆ ದೇಶದ ಎಲ್ಲೆಡೆಯಿಂದಲೂ ಜನಗಳು ಬರಲು ಕಾರಣವೇನು ಎಂಬುದನ್ನು ತಿಳಿಯೋಣ. ಜೀವನ ಮಾಡುವುದು ಇಲ್ಲಿ ಬಲು ಸುಳಭ. ಇಲ್ಲಿ ವಸತಿ ಹಿಡಿಯುವುದೊಂದೇ ಬಹಳ ಕಷ್ಟ. ಊಟ ತಿಂಡಿಗಳಿಗೇನೂ ತೊಂದರೆ ಇಲ್ಲ. ಕೆಲಸ ಸಿಗಲು ತೊಂದರೆಯೇ ಇಲ್ಲ. ಏನೇ ಮಾಡಿದರು ಹಣ ಗಳಿಸಬಹುದು.

ಅದೇಕೆ ಹೀಗೆ? ಮುಂಬೈ ಒಂದು ದ್ವೀಪ. ಮೊದಲಿಗೆ ಇಲ್ಲಿ ಒಟ್ಟು ಏಳು ನೆಲಗಡ್ಡೆಗಳಿದ್ದವು. ಚರಿತ್ರೆಯ ಪ್ರಕಾರ ೧೬೬೧ರಲ್ಲಿ ಅವುಗಳನ್ನು ಆಂಗ್ಲ ದೊರೆ ಚಾರ್ಲ್ಸ್ ೨ ಗೆ ಮದುವೆಯಲ್ಲಿ ವರದಕ್ಷಿಣೆಯಾಗಿ ಲಭಿಸಿತ್ತಂತೆ. ನಂತರ ನಡುಗಡ್ಡೆಯ ಮಧ್ಯದಲ್ಲಿದ್ದ ಸಮುದ್ರದ ಹಿನ್ನೀರನ್ನು ಮುಚ್ಚಿ ಅಲ್ಲಿ ಊರಿನ ನಿರ್ಮಾಣಾ ಆಯಿತು. ದಕ್ಷಿಣದಲ್ಲಿರುವ ಕೊಲಾಬಾದಿಂದ ಮಾಹಿಮ್ ವರೆಗೆ ಏಕ ಪ್ರಕಾರವಾಗಿ ನೆಲ. ಅಲ್ಲಿಂದ ಮುಂದೆ ಮಾಹಿಮ್ ಮತ್ತು ಬಾಂದ್ರಾ ನಡುವೆ ಸಮುದ್ರದ ಹಿನ್ನೀರನ್ನು ದಾಟಿ ಮುಂದೆ ಹೋಗಲು ಸೇತುವೆ ಕಟ್ಟಿಹರು. ಅದಕ್ಕಾಗಿ ಮುಂಬಯಿಯನ್ನು ಎರಡು ಭಾಗಗಳಾಗಿ ವಿಂಗಡಿಸಿಹರು. ಮುಂಬಯಿ ಮತ್ತು ಹಿರಿದಾದ ಮುಂಬಯಿ ಅಂತ. ಹೀಗೆ ಹಳೆಯ ಮುಂಬಯಿಯಲ್ಲಿ ಜಾಗದ ಕೊರತೆ ಇರುವುದರಿಂದ ಮನೆಗಳು ಇಲ್ಲಿಯ ಜನಗಳಿಗೆ ಸಾಕಾಗುವುದಿಲ್ಲ. ಇಲ್ಲಿರುವೆಲ್ಲಾ ಬಹು ಮಹಡಿ ಕಟ್ಟಾಡಗಳು. ಕಡಿಮೆ ಎಂದರೆ ಆರು ಮಹಡಿಗಳಿರುವ ಕಟ್ಟಡಗಳು. ಒಂದು ಕಟ್ಟದವಂತೂ ೪೫ ಮಹಡಿಗಳನ್ನು ಹೊಂದಿದೆ. ಅದರ ಹೆಸರು ಶ್ರೀಪತಿ ಆರ್ಕೇಡ್ ಅಂತ. ಅದರ ಎತ್ತರ ೧೫೩ ಮೀಟರ್ ಗಳು. ಅದರ ವಿಶೇಷತೆ ಏನೆಂದರೆ ಅದರಲ್ಲಿ ವಾಸಿಸುವರೆಲ್ಲರೂ ಸಸ್ಯಾಹಾರಿಗಳು ಮತ್ತು ಗುಜರಾತಿಗಳು. ಯಾರಾದರೂ

mumbaiatnight.jpg
ಫ್ಲಾಟ್ ಮಾರ್‍ಆಟ ಮಾಡಿದರೆ ಸೊಸೈಟಿಯವರ ಒಪ್ಪಿಗೆ ತೆಗೆದುಕೋಬೇಕು. ಆಗ ಮಾಂಸಾಹಾರಿಗಳಿಗೆ ಮಾರಲು ನಿರ್ಬಂಧನ ಹೇರುತ್ತಾರೆ.

ಹೀಗೆ ಮುಂಬಯಿಯಲ್ಲಿ ವಸತಿಗೆ ಜಾಗ ಕಡಿಮೆ ಆಗಿ, ಹಣ ಗಳಿಸಲು ಸುಲಭ ಸಾಧನಗಳಿರುವುದರಿಂದ ಜನಗಳ ಒಳ ಹರಿವು ಹೆಚ್ಚಾಗಿದ್ದು, ವಸತಿಯ ಸಮಸ್ಯೆ ಬಹಳವಾಗಿದೆ. ಇದನ್ನು ಜಾಸ್ತಿಯಾಗಿ ಕಾಡುವುದು ಮಧ್ಯಮ ವರ್ಗದವರನ್ನೇ. ಹನವಂತರು ಎಷ್ಟೇ ದುಬಾರಿಯಾದರೂ ಫ್ಲಾಟ್ ಕೊಂಡು ಕೊಳ್ಳುವರು. ಮತ್ತು ನಿರ್ಗತಿಕರು ರಸ್ತೆಯ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವಿಸುವರು. ಮಧ್ಯಮ ವರ್ಗದವರು ಆರಕ್ಕೆ ಏರೊಕ್ಕೆ ಆಗೋದಿಲ್ಲ ಮೂರಕ್ಕೆ ಇಳಿಯೋಕ್ಕಾಗೋದಿಲ್ಲ. ಬಲವಂತವಾಗಿ ಮುಂಬಯಿ ನಗರಿಯಿಂದ ದೂರವಿರುವ ಡೊಂಭಿವಿಲಿ, ಕಲ್ಯಾಣ, ವಿರಾರ್ ಮತ್ತಿತರೇ ಜಾಗದಲ್ಲಿ ವಾಸಿಸಬೇಕಾಗುವುದು. ಇನ್ನು ಸರಕಾರಿ ಅಥವಾ ಬ್ಯಾಂಕಿನಲ್ಲಿ ಕೆಲಸ ಮಾಡುವವರ ವಸತಿ ಗೃಹಗಳು ನಗರದ ತುದಿಯ ಗೋರೆಗಾಂವ್, ಮಲಾಡ್, ಬೊರಿವಿಲಿ, ಮುಲುಂದ, ಇತ್ತೀಚೆಗೆ ಆಗಿರುವ ಹೊಸ ಮುಂಬಯಿಯ ಬೇಲಾಪುರ, ವಾಶಿ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿಯ ಇನ್ನೊಂದು ವೈಶಿಷ್ಟ್ಯ ವೇನೆಂದರೆ ಜೀವನ ಯಾಂತ್ರಿಕ. ೧೦೦೦ ಜನಗಳನ್ನು ಹೊತ್ತೊಯ್ಯುವ ಲೋಕಲ್ ಟ್ರೈನ್ ನಲ್ಲಿ ೪೦೦೦ ರಿಂದ ೫೦೦೦ ಜನಗಳು ಪ್ರಯಾಣಿಸುತ್ತಾರೆ. ಇಲ್ಲಿಯ ಜನಸಂಖ್ಯೆಗೆ ೩ ನಿಮಿಷಗಳಿಗೆ ಒಂದು ಗಾಡಿಯಂತೆ ಇದ್ದರೂ ಇಷ್ಟು ಜನಸಂದಣಿ ಇದ್ದೇ ಇರುತ್ತದೆ. ಜನಸಂದಣಿ ಹೇಗೆ ಕಾಣುವುದು ಅಂದ್ರೆ ಚರ್ಚ್ ಗೇಟ್ ಅಥವಾ ವಿ.ಟಿ. (ವಿಕ್ಟೋರಿಯಾ ಟರ್ಮಿನಸ್ – ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಸ್ಟೇಷನ್ ಗಳನ್ನು ಮೇಲುಗಡೆಯಿಂದ ನೋಡಿದರೆ ನೆಲವೇ ಕಾಣುವುದಿಲ್ಲ. ಯಾವಾಗಲೂ ತಲೆಗಳೇ ಕಾಣುವುದು. ಕಪ್ಪು ತಲೆ, ಬಿಳಿ ತಲೆ, ಬೋಳು ತಲೆ, ಕೆಂಪು ತಲೆ ಇತ್ಯಾದಿ.

ಬೆಳಗ್ಗೆ ಎದ್ದು ಕೆಲಸಕ್ಕೆಂದು ಹೊರಟರೆ, ಎಲ್ಲಿಗೇ ಹೋದರೂ, ಅತಿ ಕಡಿಮೆ ಎಂದರೂ ಒಂದು ಘಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಹಾಗೇ ಸಂಜೆ ಒಂದು ಘಂಟೆಯ ಪ್ರಯಾಣ. ಮಧ್ಯೆ ತಮ್ಮ ತಮ್ಮ ಉದ್ಯಮದಲ್ಲಿ ವೃತ್ತಿ. ಸಂಜೆ ಮನೆಗೆ ಬಂದು ಸೇರುವುದರೊಳಗೆ ಏನೂ ಯೋಚಿಸಲಾಗದಷ್ಟು ಸೋತಿರುತ್ತಾರೆ. ಮತ್ತೆ ಮರುದಿನ ಇದೇ ತರಹದ ದಿನಚರಿ. ಹಾಗಾಗಿ ಇಲ್ಲಿ ವರ್ಷಗಳು ದಿನಗಳಾಗಿಯೂ ದಿನಗಳು ಕ್ಷಣಗಳಾಗಿಯೂ ಸರಿದು ಹೋಗುವುದು. ಒಬ್ಬ ವ್ಯಕ್ತಿಯನ್ನು ಕಾಣಬೇಕೆಂದರೆ ಅವನ ದಿನಚರಿಯ ನಿಯಮಿತ ವೇಳೆಯಲ್ಲಿ ಅದೇ ಸ್ಥಾನದಲ್ಲಿ ಕಾಣಬಹುದು. ದುಬಾರಿ ಜೀವನ ಪ್ರವೃತ್ತಿಯಿಂದಾಗೆ ಪತಿ ಪತ್ನಿ ಇಬ್ಬರೂ ದುಡಿಯ ಬೇಕಾದ ಪರಸ್ಥಿತಿ ಆವಶ್ಯಕ. ಇಲ್ಲಿ ಇವರ ಮುಖ್ಯ ಧ್ಯೇಯ ಒಂದು ಫ್ಲಾಟ್ ಮಾಡಿಕೊಳ್ಳುವುದು. ನಂತರ ಸಂಸಾರ ಮಾಡಿಕೊಳ್ಳುವುದು. ಇವರ ದುಡ್ಡು ಮಾಡುವ ಪರಿಯಿಂದಾಗಿ ಸಮಾಜಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುವುದೇ ಹೆಚ್ಚು. ಅದು ಹೇಗೆ ಎಂಬುದನ್ನು ಇಲ್ಲಿ ನೋಡಿ. ಇಬ್ಬರೂ ದುಡಿಯುವ ಕಡೆ ಗಮನ ಕೊಟ್ಟು ಬೆಳಗ್ಗೆ ಬೇಗ ಮನೆ ಬಿಡುವುದು ಮತ್ತು ಸಂಜೆ ಬರುವುದು ನಿಧಾನವಾಗಿ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುವುದು ಕಡಿಮೆ. ಮಕ್ಕಳಿಗೆ ತಂದೆ ತಾಯಿಗಳ ಅತ್ಯಾವಶ್ಯಕ ಪ್ರೀತೆ ಪ್ರೇಮ ಮಮತೆ ಸಿಗುವುದು ದುಸ್ಸರ. ಕೈಗೆ ದುಡ್ಡು ಸಿಗುವುದು ಸುಲಭ. ತಂದೆ ತಾಯಿಗಳು ಹೇಳುವುದೂ ಏನೆಂದರೆ ನಿನಗೆ ಎಷ್ಟು ದುಡ್ಡು ಬೇಕು ಕೇಳು ಆದರೆ ನಮ್ಮನ್ನು ಮನೆಯಲ್ಲೇ ಇರು ಎಮ್ದು ಹೇಳಬಾಡ. ಹೀಗಾಗಿ ಮಕ್ಕಳು ಜಾಸ್ತಿ ಸಮಯ ಮನೆಯಿಂದಾಚೆಗೇ ಉಳಿಯುವರು. ಊರಿನಲ್ಲಿ ವಸತಿಯ ಸಮಸ್ಯೆಯಿಂದಾಗಿ ಒಳಗೆ ನಡೆಯಬೇಕಾದ ಲಲ್ಲೆ ಮುದ್ದುಗಳೆಲ್ಲಾ ಬೀದಿಯಲ್ಲೇ ಆಗಿ ಈ ಮಕ್ಕಳೆಲ್ಲರಿಗೂ ಅವುಗಳ ರುಚಿ ಹತ್ತುವುದು. ಹಾಗಾಗಿ ಇಲ್ಲಿ ಬಹು ಮಕ್ಕಳು ಹಾಳಗುವುದು ಸಹಜ. ಪಾರ್ಕ್, ಬೀಚು, ಸಾರ್ವಜನಿಕ ವಾಹನಗಳು, ಸಾರ್ವಜನಿಕ ಕ್ಷೇತ್ರಗಳಲ್ಲೆಲ್ಲಾ ಇದೇ ದೃಶ್ಯ ಕಂಡುಬರುವುದು ಸಾಮಾನ್ಯ. ಕೇಳಿದರೆ ಇದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುವರು. ಅದೂ ಅಲ್ಲದೇ ಕಾಲೇಜು ಮೆಟ್ಟಿಲು ಹತ್ತಿದೊಡನೆ ಖಾಸಗಿ ಸಂಸ್ಥೆಗಳು ಹೊಸ ಹೊಸ ಪದಾರ್ಥಗಳ ಮಾರಾಟಕ್ಕೆ ದಿನಕ್ಕೆ ಒಂದು ಅಥವಾ ಎರಡು ಗಂಟೆಗಳಿಗೆ ಹುಡುಗ ಹುಡುಗಿಯರನ್ನು ಸೇಲ್ಸ್ ಪ್ರಮೋಷನ್ ಗೆಂದು ತೆಗೆದುಕೊಳ್ಳುವರು. ರಜೆ ದಿನಗಳಲ್ಲಿ ಮಾರಾಟ ಮಳಿಗೆಗಳಲ್ಲಿಯೂ ಇವರುಗಳಿಗೆ ಸುಲಭವಾಗಿ ಹಣ ಮಾಡುವ ಸಂದರ್ಭ ಸಿಗುವುದು.

ಬಾಯಿ ಇದ್ದವನಿಗೆ ಬರಗಾಲವಿಲ್ಲ

ಇದೊಂದು ನಾಡುನುಡಿ (ನಾಣ್ನುಡಿ).  ಇಂದು ಬೆಳಗ್ಗೆ ನನ್ನ ಬಾಸು ನನ್ನನ್ನು ಕರೆದು ಹಳೆಯ ಕೆಲಸವೊಂದು ಬಾಕಿ ಇದ್ದು ಇಂದೇ ಮುಗಿಸಬೇಕೆಂದು ಅಣತಿ ಇತ್ತರು.  ೫ ನಕ್ಷತ್ರಗಳ ಹೊಟೆಲ್ ಒಂದರ ಪಾವತಿಯಲ್ಲಿ ಸ್ವಲ್ಪ ತೊಂದರೆ ಇದ್ದು, ಅಲ್ಲಿಗೆ ಹೋಗಿಯೇ ಇತ್ಯರ್ಥಗೊಳಿಸಬೇಕಿತ್ತು.  ಅದಕ್ಕಾಗಿ ಸಹಾಯಕ ಅಧಿಕಾರಿಗಯನ್ನು ಕಳುಹಿಸಿದ್ದೆವು.  ಅವರಿಂದ ಕೆಲಸ ಆಗಿರಲಿಲ್ಲ.  ನನಗೇ ಹೋಗಲು ನನ್ನ ಮೇಲಧಿಕಾರಿಗಳು ಅಣತಿ ಇತ್ತರು.  ನಾನೇ ಯಾಕೆ ಹೋಗಬೇಕು, ವಯಸ್ಸಿನಲ್ಲಿ ಹಿರಿಯರಾದ ಸಹಾಯಕ ಅಧಿಕಾರಿಗಳಿಗೇ ಈ ಕೆಲಸ ಆಗ್ಲಿಲ್ಲ ಅಂದ ಮೇಲೆ ನಾನು ಹೋಗಿ ಏನು ಪ್ರಯೋಜನ ಎನ್ನಲು, ಅವರು – ನೀನು ಹೋಗಿ ಬಾ.  ಆಮೇಲೆ ನಿನಗೇ ಗೊತ್ತಾಗುತ್ತದೆ, ನಿನ್ನಿಂದ ಈ ಕೆಲಸ ಆಗುವುದೋ ಇಲ್ಲವೋ ಎಂದು, ಎಂದು ಹೇಳಿದರು.  ಆ ಹೊಟೆಲ್ ಬಗ್ಗೆ ನನಗೆ ಪರಿಚಯವಿರದ ಕಾರಣ ಸಹಾಯಕ ಅಧಿಕಾರಿಯನ್ನೂ ಜೊತೆಗೆ ಕರೆದೊಯ್ದೆ. 

ಒಬೆರಾಯ್ ಹೊಟೆಲ್‍ನವರ ಸಹೋದರ ಸಂಸ್ಥೆ ಹಿಲ್ಟನ್ ಹೊಟೆಲ್.  ವೈಭವವಾದ ಕಟ್ಟಡದೊಳಗೆ ಕಾಲಿಡುತ್ತಿದ್ದಂತೆಯೇ, ಯಾವುದೋ ಯಕ್ಷ ಲೋಕಕ್ಕೆ ಬಂದಂತಹ ಅನುಭಾವವಾಯಿತು.   ಆ ಹೊಟೆಲ್ ಒಳಗೆ ಹೋಗುತ್ತಿದ್ದಂತೆಯೇ, ಮೊದಲು ಎದುರಾದದ್ದು ಆತಿಥೇಯ ವಿಭಾಗ.  ನಮ್ಮ ಕೆಲಸ ಆಗಬೇಕಿದ್ದ ಲೆಕ್ಕಪತ್ರದ ವಿಭಾಗ ಎಲ್ಲಿದೆಯೆಂದು ಹುಡುಕುವುದೇ ಒಂದು ದೊಡ್ಡ ಕಷ್ಟವಾಯಿತು. ಹೊಟೆಲ್‍ನ ಹಿಂಭಾಗದಲ್ಲಿರುವ ಗೋಡೌನ್ ತರಹದ ಪ್ರದೇಶದಲ್ಲಿ ಲೆಕ್ಕ ಪತ್ರ ವಿಭಾಗವಿದೆ. ನಮ್ಮ ಕೆಲಸವನ್ನು ನೋಡಿಕೊಳ್ಳುವವರ ಹತ್ತಿರ ಹೋದೆವು.  ನನ್ನ ಸ್ನೇಹಿತರು ನನ್ನನ್ನು ಅವರಿಗೆ ಪರಿಚಯಿಸಿದ ಕೂಡಲೇ, ಅವರು ಎದ್ದು ನಿಂತು ಕುಳಿತುಕೊಳ್ಳಲು ತಿಳಿಸಿ, ತಾವೇನು ಸಹಾಯ ಮಾಡಬಹುದೆಂದು ಕೇಳಿದರು.  ಇಷ್ಟು ಮರ್ಯಾದೆ ಕೊಟ್ಟದ್ದೇ ಸಾಕೆಂದು, ನಾನು ಬಂದ ಕೆಲಸದ ಬಗ್ಗೆ ಉಪನ್ಯಾಸ ಕೊಡಲಾರಂಭಿಸಿದೆ.  ನನ್ನ ಭೈರಿಗೆಯ ಕೊರೆತ ಕೇಳಿಯೇ ಏನೋ, ತಕ್ಷಣ ನಮ್ಮೆಲ್ಲಾ ಮಾತುಗಳಿಗೂ ಒಪ್ಪಿಗೆಯನ್ನು ನೀಡಿದರು.  ನನ್ನ ಕೆಲಸ ಬಹಳ ಸುಲಭದಲ್ಲಿ ಮಿಂಚಿನಂತೆ ಮುಗಿದುಹೋಗಿದ್ದಿತು.  ನಂತರ ನನ್ನ ಸ್ನೇಹಿತರು ತಿಳಿಸಿದ್ದೇನೆಂದರೆ, ನಿರರ್ಗಳವಾಗಿ ನಾನು ಆ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾಗ, ಹೊಟೆಲ್‍ನ ಆತನಿಗೆ ತಮ್ಮ ತಪ್ಪು ಹಾದಿಯ ಬಗ್ಗೆ ತಿಳುವಳಿಗೆ ಆಯಿತಂತೆ.  ಹಾಗಾಗಿ ಅವರು ನಮ್ಮ ಮಾತುಗಳಿಗೆ ಮಣಿದು, ನಮ್ಮ ನಿಲುವನ್ನು ಸರಿ ಎಂದು ಒಪ್ಪಿಕೊಂಡರಂತೆ.  ಆ ತಕ್ಷಣದಲ್ಲಿ ನನಗೆ ಇದರ ಅನುಭವವೇ ಆಗಿರಲಿಲ್ಲ.  ಅವರಿಂದ ಬೀಳ್ಕೊಂಡು ಹೊರಡುವ ಸಮಯಕ್ಕೆ ಸರಿಯಾಗಿ, ಅವರ ಮೇಲಧಿಕಾರಿಗಳು ಅಲ್ಲಿಗೆ ಬಂದು ನಮ್ಮನ್ನು ಪರಿಚಯಿಸಿಕೊಂಡು ತಮ್ಮಲ್ಲಿಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದರು.  ನಾನು ಹೊರಗಡೆ ಎಲ್ಲಿಯೂ ಏನನ್ನೂ ತಿನ್ನುವುದಿಲ್ಲವೆಂದು ಹೇಳಲು, ಅವರಿಗೆ ಅತಿಯಾದ ಆಶ್ಚರ್ಯವಾಯಿತು.  ಅದೇ ನನ್ನ ಸ್ನೇಹಿತರು, ಅವರೊಂದಿಗೆ ಹೊರಟು ನಿಂತರು.  ಬಹಳ ಒಳ್ಳೆಯ ಊಟ ನೀಡಿದ್ದರಂತೆ.  ನಂತರ ನಾನು ಬ್ಯಾಂಕಿಗೆ ಬಂದು ಕೆಲಸವಾದುದರ ಬಗ್ಗೆ ಹೇಳಿದ ಕೂಡಲೇ ನನ್ನ ಮೇಲಧಿಕಾರಿ ಹೇಳಿದರು, ನಾನು ಮೊದಲೇ ಹೇಳಿರಲಿಲ್ವೇ?  ನೀನು ಹೋದರೆ ಕೆಲಸ ಖಂಡಿತವಾಗಿ ಆಗುವುದು ಎಂದು.   ತಕ್ಷಣ ನನಗೆ ನೆನಪಾದದ್ದು ‘ಬಾಯಿಯಿದ್ದವನು ಬರಗಾಲದಲ್ಲಿಯೂ ಬದುಕಿಯಾನು’ ಎಂದ ಕನ್ನಡದ ನಾಣ್ನುಡಿ. 

ಇದೇ ಸಂದರ್ಭದಲ್ಲಿ ನನ್ನ ಹಳೆಯ ಒಂದು ನೆನಪನ್ನು ಕೆದಕಿ ನಿಮ್ಮ ಮುಂದಿಡುತ್ತಿರುವೆ.  ೧೯೭೯-೮೦ರಲ್ಲಿ ಬಿ.ಕಾಂ ಕೊನೆಯ ವರ್ಷದಲ್ಲಿ ಓದುತ್ತಿದ್ದ ಸಮಯ.  ಆಗಿನ ದಿನಗಳಲ್ಲಿ ನನಗೆ ಕೇಂದ್ರ ಸರಕಾರದ ವತಿಯಿಂದ ಸ್ಕಾಲರ್‌ಶಿಪ್ ದೊರೆಯುತ್ತಿತ್ತು.  ಎರಡನೆಯ ವರ್ಷದಲ್ಲಿ ಅರ್ಜಿ ಸಲ್ಲಿಸಿದ ಹಣ ಯಾಕೋ ಇನ್ನೂ ಬಂದಿರಲಿಲ್ಲ.  ಮೂರನೆಯ ಮತ್ತು ಕಡೆಯ ವರ್ಷದ ಅರ್ಜಿಯನ್ನು ಸಲ್ಲಿಸಿದ ಸ್ವಲ್ಪ ದಿನಗಳಲ್ಲಿಯೇ ಹಣ ಬಂದಿತ್ತು.  ಎರಡನೆಯ ವರ್ಷದ ಹಣ ಏಕೆ ಬಂದಿಲ್ಲ ಎಂದು ಕಾಲೇಜಿನ ಸಿಬ್ಬಂದಿಗಳಲ್ಲಿ ವಿಚಾರಿಸಲು, ಸರ್ಕಾರದ ವಿಭಾಗಕ್ಕೇ ಹೋಗಿ ವಿಚಾರಿಸು ಎಂದಿದ್ದರು.  ಒಂದು ದಿನ ಆ ವಿಭಾಗಕ್ಕೆ ಹೋಗಿ ವಿಚಾರಿಸಲು, ಕಿರಿಯ ಅಧಿಕಾರಿಗಳು ತಮಗೇನೂ ಗೊತ್ತಿಲ್ಲ,  ನಿನಗೆ ಎಷ್ಟು ಬಂದಿದೆಯೋ ಅದರಲ್ಲೇ ಸಂತೋಷಪಟ್ಟುಕೋ ಎಂದಿದ್ದರು.  ಸುಮ್ಮನಿರದ ನಾನು ಪಕ್ಕದಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿದ್ದ ಹಿರಿಯ ಅಧಿಕಾರಿಗಳ ಬಳಿ ಹೋಗಿ ನನ್ನ ಅಳಲನ್ನು ತೋಡಿಕೊಂಡೆ.  ನನ್ನ ತಂದೆ ಸ್ವಾತಂತ್ರ್ಯ ಯೋಧರು.  ಈಗ ಅವರು ಕೆಲಸದಿಂದ ನಿವೃತ್ತರಾಗಿರುವುದರಿಂದ ಮತ್ತು ನಾನೆ ವಸತಿನಿಲಯದಲ್ಲಿದ್ದು ಓದುತ್ತಿದ್ದೇನೆ. ಜೀವನ ನಡೆಸುವುದು ಸ್ವಲ್ಪ ದುಸ್ತರವಾಗಿದೆ ಎಂದಿದ್ದೆ.  ಅಷ್ಟಲ್ಲದೇ ನಾನು ಕೊಂಡು ಹೋಗಿದ್ದ ನನ್ನ ಹಳೆಯ ಅಂಕಪಟ್ಟಿಗಳೆಲ್ಲವನ್ನೂ ಅವರ ಮುಂದಿಟ್ಟೆ.  ಅದನ್ನು ನೋಡಿಯೋ ಏನೋ, ಆ ಹಿರಿಯ ಅಧಿಕಾರಿಗಳು, ಅರ್ಜಿ ತಮಗೆ ಬಂದಿಲ್ಲವೆಂದೂ ಮತ್ತೊಂದು ಅರ್ಜಿ ಸಲ್ಲಿಸಿದರೆ ತಕ್ಷಣವೇ ಮಂಜೂರು ಮಾಡಿ ಹಣ ಸಂದಾಯಿಸುವುದಾಗಿ ಹೇಳಿದ್ದರು.  ಅಲ್ಲಿಯೇ ಕುಳಿತು ಇನ್ನೊಂದು ಸ್ಕಾಲರ್‌ಶಿಪ್‍ಗಾಗಿ ಇನ್ನೊಂದು ಅರ್ಜಿಯನ್ನು ಸಲ್ಲಿಸಿದೆ.  ಮತ್ತೆ ಆ ವಿಷಯವೇ ಮರೆತು ಹೋಗಿತ್ತು. ಬಿ.ಕಾಂ ಪದವಿ ದೊರೆತ ಸ್ವಲ್ಪ ದಿನಗಳ ಮೇಲೆ, ಒಮ್ಮೆ ಕಾಲೇಜಿನಿಂದ ಕರೆ ಬಂದಿತು.  ಅಲ್ಲಿಗೆ ಹೋಗುತ್ತಿದ್ದಂತೆಯೇ ಕಾಲೇಜಿನ ಲೆಕ್ಕಾಧಿಕಾರಿಗಳು, ನಿನಗೆ ಚೆಕ್ ಕೊಡಬೇಕೋ ಅಥವಾ ನಗದು ಹಣ ಕೊಡಬೇಕೋ ಎಂದು ಕೇಳಿದರು.  ವಿಷಯವೇನೆಂದು ತಿಳಿಯದ ನಾನು, ಯಾವುದರ ಬಗ್ಗೆ ಕೇಳ್ತಿದ್ದೀರಿ, ನನಗೆ ನಗದು ಹಣ ಕೊಟ್ಟರೇ ಒಳ್ಳೆಯದು ಎಂದು ಹೇಳಿದೆ.  ಒಟ್ಟಿಗೆ ಎರಡು ವರ್ಷಗಳ ಸ್ಕಾಲರ್‌ಶಿಪ್ ಹಣವನ್ನು ನಗದಾಗಿ ಕೊಟ್ಟರು.  ನನಗೆ ಸಖೇದಾಶ್ಚರ್ಯವಾಯಿತು.  ಒಂದು ವರ್ಷದ್ದೇ ಸರಿಯಾಗಿ ಬರದಿದ್ದ ಸಮಯದಲ್ಲಿ ಎರಡು ವರ್ಷಗಳ ಹಣ ಅದು ಹೇಗೆ ಬಂದಿತು ಎಂದು.  ಲೆಕ್ಕಾಧಿಕಾರಿಗಳು ವಯಸ್ಸಿನಲ್ಲಿ ಬಹಳ ಹಿರಿಯರಾಗಿದ್ದರು.  ಅವರನ್ನು ಈ ಬಗ್ಗೆ ಕೇಳಿದೆ. ಅದಕ್ಕವರು, ನೀನು ಸರ್ಕಾರದ ಕಛೇರಿಗೆ ಹೋಗಿದ್ದೆಯಾ?  ಅಲ್ಲಿ ಏನು ನಡೆಯಿತು ಹೇಳು?  ಎಂದು ಹೇಳಿದರು.  ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ಚಾಚೂ ತಪ್ಪದೇ ಅವರ ಮುಂದೆ ಹರಿದುಬಿಟ್ಟೆ.  ಅದಕ್ಕವರು, ‘ನೋಡಿದೆಯಾ, ಇದಕ್ಕೇ ಹೇಳುವುದು, ಬಾಯಿ ಇದ್ದವನಿಗೆ ಬರಗಾಲವಿಲ್ಲ’.  ನೀನು ಹಿರಿಯ ಅಧಿಕಾರಿಗಳನ್ನು ಕಂಡುದುದು, ಅಂಕ ಪಟ್ಟಿಯನ್ನು ತೋರಿಸಿದುದು, ಇನ್ನೊಂದು ಅರ್ಜಿಯನ್ನು ಸಲ್ಲಿಸಿದುದು ಒಳ್ಳೆಯದೇ ಆಯಿತು.  ನೋಡು ಅವರೀಗ ಹಳೆಯ ಅರ್ಜಿಯನ್ನೂ ತೆಗೆಸಿ, ಎರಡನ್ನೂ ಮಂಜೂರು ಮಾಡಿ ಕಳುಹಿಸಿದ್ದಾರೆ.  ಒಂದು ವರ್ಷದ ಹಣ ಜಾಸ್ತಿಯಾಗಿ ಬಂದಿದೆ ಎಂದು ಯಾರಲ್ಲಿಯೂ ಹೇಳಬೆಡ.  ದೇವರು ಕೊಟ್ಟ ವರವೆಂದು ಕಣ್ಣಿಗೊತ್ತಿಕೊಂಡು ತೆಗೆದುಕೋ.  ನಿನಗೆ ಬದುಕಿನಲ್ಲಿ ಒಳ್ಳೆಯದೇ ಆಗುವುದು ಎಂದು ಹರಸಿದರು. ಆ ಹಿರಿಯರಿಗೆ ಅಲ್ಲಿಯೇ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದೆ.  ಈಗವರು ಎಲ್ಲಿಹರೋ ಏನೋ ತಿಳಿಯದು. ಆದರೆ ಅವರ ಆತ್ಮ ಮಾತ್ರ ನನ್ನನ್ನು ಹರಸುತ್ತಲೇ ಇದೆ.  ಅವರ ಇಂತಹ ಮಾತುಗಳನ್ನು ಮರೆಯಲಾಗುವುದೇ?

ಹೀಗೂ ಬದುಕೇ?

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ|
ತ್ರೈತಸ್ತುನಪೂಜ್ಯಂತೇ ಸರ್ವಸ್ತತ್ರಫಲಃ ಕ್ರಿಯಾಃ||
ಎಲ್ಲಿ ಹೆಂಗಸರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ಸುಪ್ರಸನ್ನರಾಗಿರುವರು
ಎಲ್ಲಿ ಅವರನ್ನು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಯಾವ ಧರ್ಮ ಕಾರ್ಯಗಳೂ ಫಲಿಸದು
(ಮನುಸ್ಮೃತಿ 3.56)

ನಮ್ಮ ಜೀವನದಲ್ಲಿ ನಮ್ಮೊಂದಿಗೆ ಒಡನಾಟಕ್ಕೆ ಬಂದು ಹೋಗುವವರು ಹಲವಾರು ಮಂದಿ.  ಕೆಲವು ಜನರುಗಳ ಜೀವನ ಚರ್ಯೆ, ವ್ಯವಹಾರ ನೋಡಲು ಮನಸ್ಸು ಅಲ್ಲೋಲ ಕಲ್ಲೋಲವಾಗುವುದು.  ಅದು ಏಕೆ ಹಾಗಾಗುವುದು?  ಇದರ ಬಗ್ಗೆ ನನ್ನ ಮನವನ್ನು ನಾನು ಮಥಿಸಿದಾಗ ಹೊರಬಂದ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತಿರುವೆ.  ನಿಮ್ಮ ಪ್ರತಿಕ್ರಿಯೆ ಏನೇ ಇರಲಿ,  ನನ್ನ ಮನಸ್ಸಿನಲ್ಲಿರುವ ತಾಕಲಾಟವನ್ನಂತೂ ಹೊರಹಾಕಲೇಬೇಕಿದೆ, ಹಾಕುತ್ತಿರುವೆ.

ಮೊದಲಿನಿಂದಲೂ ನಾನೊಬ್ಬ ಸೂಕ್ಷ್ಮಜೀವಿ.  ನನ್ನ ಸುತ್ತ ಮುತ್ತಲಿನಲಿರುವವರ  ಕೆಲವು ವಿಷಯ / ವರ್ತನೆಗಳನ್ನು ಗಮನಿಸಿರಿದ ಕಾರಣ (ಹಾಗೆ ಈಗನ್ನಿಸುತ್ತಿದೆ) ಮತು ಈಗ ಕಣ್ಣಿಗೆ ಕಂಡ ತಕ್ಷಣ ನನ್ನ ಮನಸ್ಸು ಬಹಳವಾಗಿ ವಿಚಲಿತವಾಗಿದೆ.  ಇಂತಹ ವಿಷಯಗಳು ಸರ್ವೇಸಾಮಾನ್ಯ ಎಂದು ನೀವನುವಿರಾ?  ಏನೋ ನಿಮಗೆ ಹಾಗನ್ನಿಸಿರಬಹುದು, ಆದರೆ ನಾನು ಕಾಣುತ್ತಿರುವುದೇ ಈಗ.  ನನಗೆ ಹಾಗನ್ನಿಸುತ್ತಿಲ್ಲ.  ಇಂತಹದ್ದನ್ನೆಲ್ಲಾ ಈ ಪಾಪಿ ಕಣ್ಣುಗಳು ಇನ್ನೂ ನೋಡಬೇಕೇ?  ಅಲ್ರೀ ಏನಾಯ್ತೂಂತ ಹೀಗಾಡ್ತಿದ್ದೀರ ಅಂತೀರಾ?  ನೋಡಿ, ಕೇಳಿ ಹೇಳುವೆ.

ಕೆಲವು ದಿನಗಳ ಹಿಂದೆ ನನ್ನ ಮಿತ್ರರೊಬ್ಬರ ಬ್ಲಾಗು ನೋಡಿ, ಅವರ ಲೇಖನದ ಬಗ್ಗೆ ಪ್ರತಿಕ್ರಿಯಿಸಿದೆ.  ಅಲ್ಲಿಯೇ ಇನ್ನೊಬ್ಬರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು.  ಕುತೂಹಲ ತಾಳಲಾರದೇ ಅವರ ಬ್ಲಾಗಿಗೆ ಭೇಟಿ ನೀಡಿದೆ.  ಅದೊಂದು ಹೆಣ್ಣುಮಗಳು ಬರೆಯುತ್ತಿರುವ ಬ್ಲಾಗು.  ಕಣ್ಣಿಗೆ ಕಂಡ ಮೊದಲ ಲೇಖನ ಹೀಗಿತ್ತು.  ಆಕೆ ಒಮ್ಮೆ ಟಿವಿ ಶೋಗೆ ಯಾವುದೋ ಊರಿಗೆ ಹೋಗಿದ್ದಳಂತೆ.  ಜೊತೆಯಲ್ಲಿ ಯಾರೂ ಇರಲಿಲ್ಲ.  ಆ ಸ್ಥಳವನ್ನು ಸೇರಿದಾಗ ರಾತ್ರಿಯಾಗಿತ್ತು.  ಅಲ್ಲಿಯೇ ಒಂದು ದೊಡ್ಡ ಕೊಠಡಿಯಲ್ಲಿ ಮಲಗಲು ಅವಕಾಶ ಮಾಡಿಕೊಟ್ಟಿದ್ದರು.  ಮಧ್ಯ ರಾತ್ರಿ ಎಚ್ಚರವಾದಾಗ ಇನ್ನೊಬ್ಬ ಗಂಡು ಹುಡುಗ ಅದೇ ಸ್ಥಳಕ್ಕೆ ಮಲಗಲು ಬಂದನಂತೆ … ಹೀಗೆ ಒಂದು ರಾತ್ರಿ ಮತ್ತು ಒಂದು ದಿನದ ಅನುಭವವನ್ನು ತೋಡಿಕೊಂಡು, ಈಗ ಮದುವೆಯಾಗಿರುವುದರಿಂದ ಮತ್ತೆ ಆ ಹುಡುಗನ ಬಗ್ಗೆ ಯೋಚಿಸಲಾಗುತ್ತಿಲ್ಲ, ಎಂದೆಲ್ಲಾ ಬರೆದಿದ್ದರು.    ಆದರೆ ಇನ್ನಿತರ ಪ್ರತಿಕ್ರಿಯೆಗಳಲ್ಲಿ ಕೆಲವರು ನೀನು ಮತ್ತೆ ಆ ಹುಡುಗನನ್ನು ಹುಡುಕು.  ಒಂದೇ ದಿನದಲ್ಲಿ ಅಷ್ಟು ಅನ್ಯೋನ್ಯವಾದವನು ಎಂದ ಮೇಲೆ, ನಿನ್ನ ಗಂಡನಿಗಿಂತ ಅವನಿಂದಲೇ ನಿನಗೆ ಹೆಚ್ಚಿನ ಪ್ರೀತಿ ಸಿಗುವುದು, ಎಂದೂ ಬರೆದಿದ್ದರು.  ಅದಕ್ಕವಳು ನನಗೆ ಅವನ ಬಗ್ಗೆ ಮತ್ತೆ ವಿಷಯಗಳು ತಿಳಿಯಲಿಲ್ಲ ಎಂದು ಹೇಳಿಕೊಂಡಿದ್ದಳು.   ನಾನು ಪ್ರತಿಕ್ರಿಯಿಸಲಿಲ್ಲ.   ಇವರು ಯಾರೋ ನನಗೆ ತಿಳಿಯದವರಾದ್ದರಿಂದ, ಈ ಲೇಖನವನ್ನು ಒಂದು ಚಿತ್ರವನ್ನು ನೋಡಿದಂತೆ ಎಂದು ಸುಮ್ಮನಾಗಿದ್ದೆ. 

ಮೊದಲೊಮ್ಮೆ ನನ್ನ ಹಿರಿಯ ಸ್ನೇಹಿತರೊಬ್ಬರು ತಮ್ಮ ಮಗಳ ಮದುವೆ ನಿಷ್ಕರ್ಷೆ ಆದುದರ ಬಗ್ಗೆ ಹೇಳಿದ್ದರು.  ಒಳ್ಳೆಯದಾಗಲಿ ಎಂದಷ್ಟೇ ಹೇಳಿದ್ದೆ.  ಒಂದು ವಾರದ ಬಳಿಕ ಅವರು ಬಹಳ ಚಿಂತೆಯಲ್ಲಿರುವಂತೆ ಕಾಣಿಸಿತು.  ಏಕೆ, ಏನಾಯ್ತು ಎಂದು ಕೇಳಿದ್ದೆ.  ಅದಕ್ಕವರು ಹೇಳಿದ್ದು ಹೀಗಿದೆ. 
ಅವರ ಮಗಳು ತಂತ್ರಾಂಶ ಅಭಿಯಂತೆಯಾಗಿ ಒಂದು ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಮೆರಿಕೆಯಲ್ಲಿ ವಾಸವಾಗಿದ್ದಳು.  ಆಕೆಯ ಜೊತೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೋರ್ವ ತರುಣ ಸ್ವಲ್ಪ ದಿನಗಳಲ್ಲಿಯೇ ಅವಳ ಮನೆಯಲ್ಲಿಯೇ ಇರಲಾರಂಭಿಸಿದನು.  ಮುಂದೆ ಅವರೀರ್ವರಲ್ಲಿ ಪ್ರೇಮಾಂಕುರಿಸಿ, ಮದುವೆಯಾಗುವುವೆಂದು ತಮ್ಮ ತಮ್ಮ ತಂದೆ ತಾಯಿಯರುಗಳಿಗೆ ಹೇಳಿದ್ದರು.  ಅದಕ್ಕೆ ಒಪ್ಪಿಗೆಯನ್ನೂ ಪಡೆದಿದ್ದರು.   ಆ ಹುಡುಗ ಉತ್ತಮ ಸಂಸ್ಕೃತಿಯುಳ್ಳ ಮನೆತನದಿಂದ ಬಂದವನು.  ಅವರ ಮೂಲ ಸ್ಥಳ ತಿರುಪತಿ.   ನನ್ನ ಹಿರಿಯ ಸ್ನೇಹಿತರು ಪಶ್ಚಿಮ ಬಂಗಾಳದವರು.  ಅವರೂ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂತಹವರು.  ಒಳ್ಳೆಯ ಮನೆಯ ಹುಡುಗಿಗೆ ಅಂತಹದ್ದೇ ಮನೆತನದ ಹುಡುಗ ಸಿಕ್ಕಿದ್ದು ಮತ್ತು ಇಬ್ಬರೂ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದುದು ಎಲ್ಲರಿಗೂ ಸಂತೋಷವನ್ನಿತ್ತಿತ್ತು.  ನನ್ನ ಸ್ನೇಹಿತರು ಮದುವೆ ಸಮಾರಂಭವನ್ನು ಪೂರೈಸಲು ದೂರದ ಕಲ್ಕತ್ತೆಯಲ್ಲಿ ಎಲ್ಲ ಸಿದ್ಧತೆಗಳನ್ನು ನಡೆಸಲುದ್ಯುಕ್ತವಾಗಿದ್ದರು.  ಮದುವೆಗೆ ಒಂದು ವಾರ ಇರುವಾಗ ಹುಡುಗಿ ಅಮೆರಿಕೆಯಿಂದ ಫೋನಾಯಿಸಿ, ಹುಡುಗನ ತಂದೆ ತಾಯಿಗಳ ಹೇಳಿಕೆಯಂತೆ ಮದುವೆಯನ್ನು ತಿರುಪತಿಯಲ್ಲಿಯೇ ಮಾಡಬೇಕೆಂದೂ, ಅದಕ್ಕೆ ಎಲ್ಲ ಸಿದ್ಧತೆಗಳನ್ನೂ ಅವರೇ ಮಾಡುವರೆಂದೂ ತಿಳಿಸಿದ್ದಳು.  ಅದಕ್ಕೂ ನನ್ನ ಸ್ನೇಹಿತರು ಒಮ್ಮತವನ್ನು ಸೂಚಿಸಿದ್ದರು.  ಮದುವೆಗೆ ಮೂರು ದಿನಗಳಿರುವಾಗ ಆಕೆ ಮುಂಬಯಿಗೆ ಬಂದು ತನ್ನ ತಂದೆಯ ಮುಂದೆ ಹೇಳುತ್ತಾಳಂತೆ, ‘ಹುಡುಗ ಪ್ರತಿದಿನವೂ ಬೆಳಗ್ಗೆ ದೇವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾನೆ, ಶುದ್ಧ ಶಾಕಾಹಾರಿ, ಮೊಸರನ್ನವನ್ನಂತೂ ಪ್ರತಿನಿತ್ಯ ತಿನ್ನಲೇಬೇಕು, ನನಗಾದರೋ ಪ್ರತಿದಿನವೂ ಮಾಂಸಾಹಾರವನ್ನು ತಿನ್ನಲೇಬೇಕು,  ಜೊತೆಗೆ ವಾರಕ್ಕೊಮ್ಮೆಯಾದರೂ ಕುಡಿತ ಇರಲೇಬೇಕು.  ಈ ವಿಷಯದಲ್ಲಿ ಅವನು ಹೊಂದಿಕೆಯಾಗುತ್ತಿಲ್ಲ.  ಹೀಗೇ ಮುಂದುವರೆದರೆ, ನಾನು ಅವನನ್ನು ವಿಚ್ಚೇದಿಸಬೇಕಾಗಬಹುದು.  ಮುಂಚಿತವಾಗಿಯೇ ಈ ವಿಷಯವನ್ನು ನಿಮ್ಮ ಮುಂದೆ ಅರುಹುತ್ತಿರುವೆ’. 
ಈ ವಿಷಯವಾಗಿ ನನ್ನ ಸ್ನೇಹಿತರು ಬಹಳ ಚಿಂತಿತರಾಗಿ, ಮಗಳ ಮುಂದಿನ ಗತಿಯೇನು ಎಂದು ನನ್ನನ್ನು ಕೇಳಿದರು.  ನಾನೇನು ತಾನೆ ಹೇಳಬಲ್ಲೆ.  ಗುರುದೇವರಲ್ಲಿ ನಂಬಿಕೆ ಇಡಿ, ಯಾರೂ ತನ್ನವರಲ್ಲ, ಈ ಆತ್ಮಕ್ಕೂ ಈ ದೇಹಕ್ಕೂ ಸಂಬಂಧವನ್ನು ದೂರ ಮಾಡುವ ನಿಟ್ಟಿನಲ್ಲಿ ಯೋಚಿಸೋಣವೆಂದು ಹೇಳಿದ್ದು, ಅವರಿಗೆ ಗೊಡ್ಡು ಒಣ ವೇದಾಂತ ಎಂದೆನಿಸಿತು.  ಅದು ಹೇಗೋ ಮದುವೆಯಾಯಿತು.   ಅಲ್ಲ, ಆ ಹುಡುಗಿಗೆ ಮದುವೆಗೆ ಮುಂಚೆಯೇ ವಿಚ್ಛೇದನದ ಬಗ್ಗೆ ಯೋಚನೆಯೇ?   ಸ್ವಲ್ಪ ದಿನಗಳಲ್ಲಿ ಆ ಹುಡುಗ ಅಮೆರಿಕೆಯಲ್ಲಿಯೇ ತಳ ಊರಿದ, ಆ ಹುಡುಗಿ ಅದೇ ಕಂಪನಿಯಲ್ಲಿದ್ದು ಬೆಂಗಳೂರಿಗೆ ವರ್ಗವಾಗಿ ಬಂದು ಒಬ್ಬಳೇ ವಾಸಿಸುತ್ತಿದ್ದಾಳೆ.  ಈಗ ನನ್ನ ಸ್ನೇಹಿತರು ಬೇರೆ ಊರಿಗೆ ವರ್ಗವಾಗಿ ಹೋಗಿರುವುದರಿಂದ, ಮಗಳ ಸಂಸಾರ ಹೇಗಿರುವದೋ ತಿಳಿಯದು.  ಈತ ನನಗೆ ತಿಳಿದವರಾದ್ದರಿಂದ, ಅವರ ಮಗಳ ಭವಿಷ್ಯದ ಬಗ್ಗೆ ಮತ್ತೆ ಮುಂದೆ ಅವಳಿಂದ ಅವಳ ಮಕ್ಕಳಿಗೆ ಎಂತಹ ಸಂಸ್ಕೃತಿಯನ್ನು ಒದಗಿಸಬಹುದು ಎಂದು ಯೋಚಿಸಿ ಸ್ವಲ್ಪ ತಳಮಳಕ್ಕೊಳಗಾಗಿದ್ದೆ.

ಅದೇ ಸಮಯದಲ್ಲಿ, ಒಂದು ಸಮುದಾಯದಲ್ಲಿ ಕಾಲಹರಣಕ್ಕಾಗಿ ಅದು ಇದು ಬರೆಯುತ್ತಿದ್ದೆ.  ಅಂತಹ ಒಂದು ಸಮಯದಲ್ಲಿ ನನಗೊಬ್ಬಾಕೆ ಪರಿಚಯವಾಯಿತು.  ಅವರೂ ಅಮೆರಿಕೆಯಲ್ಲಿ ಓದುತ್ತಿದ್ದು, ಅವರ ಪತಿ ಅಲ್ಲಿ ಕೆಲಸ ಮಾಡುತ್ತಿದ್ದರು.    ಆಗೀಗ ಪತ್ರ ವಿನಿಮಯವೂ ಆಗುತ್ತಿತ್ತು.  ಒಮ್ಮೆ ಆಕೆಯ ಪತ್ರದಲ್ಲಿನ ಧಾಟಿ ಸ್ವಲ್ಪ ವಿಚಿತ್ರವೆನ್ನಿಸುವಂತಿತ್ತು.  ಅವರು ಚಾಟು ಡಬ್ಬಿಗೆ ಬಂದಾಗ ತಿಳಿದದ್ದೇನೆಂದರೆ, ಅಂದು ಆಕೆ ಮದ್ಯಪಾನ ಮಾಡಿ ಯಾವುದೋ ಜ್ಞಾನದಲ್ಲಿ ನನಗೆ ಪತ್ರ ಬರೆದಿದ್ದರಂತೆ.  ಇದರ ಬಗ್ಗೆ ಕ್ಷಮಾಪಣೆ ಕೇಳಿದ್ದರು.  ಅದೇ ಊರಿನಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಕನ್ನಡಿಗರ ಮಿತ್ರರದ್ದೂ ಪರಿಚಯವಾಗಿತ್ತು.  ಅವರಿಗೆ ನಾನು ಕೇಳಿದ್ದೆ.  ಅಮೆರಿಕೆ ಅಥವಾ ಪರದೇಶದಲ್ಲಿ ಮದ್ಯಪಾನದ ಅವಶ್ಯಕತೆ ಇದೆಯೇ?  ಅಲ್ಲೆಲ್ಲಾ ಹವಾಮಾನ ವ್ಯತಿರೇಕಕ್ಕೆ ಹೋಗುವುದರಿಂದ, ಮದ್ಯಪಾನದ ಸೇವನೆ ಅವಶ್ಯವೆನ್ನುವರಲ್ಲಾ?  ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?  ಎಂದು ಕೇಳಿದ್ದಕ್ಕೆ, ಉತ್ತರವಾಗಿ ಅವರು ಹೇಳಿದುದಿಷ್ಟೇ.  ಇದೆಲ್ಲಾ ಕುಂಟು ನೆಪಗಳು.  ಎಲ್ಲಿಯೂ ಮದ್ಯಪಾನದ ಅವಶ್ಯಕತೆ ಇಲ್ಲ.  ಇಲ್ಲೆಲ್ಲಾ ಮನೆಗಳು ಹವಾನಿಯಂತ್ರಿತವಾಗಿರುತ್ತವೆ.   ಮತ್ತೆ ಆಕೆಯೊಂದಿಗೆ ಈ ವಿಷಯವನ್ನು ಚರ್ಚಿಸಲುದ್ಯುಕ್ತನಾದಾಗ, ಅವಳು ತನ್ನ ನಿಲುವೇ ಸರಿ ಎಂಬ ಧಾಟಿಯಲ್ಲಿದ್ದಳು.  ಅವಳಿನ್ನೂ ಚಿಕ್ಕವಳು, ಬದುಕನ್ನು ಇನ್ನೂ ಸರಿಯಾಗಿ ಅರಿಯದವಳು, ಎಂದು ಎರಡು ಮಾತು ಹೇಳ ಹೋದವನಿಗೆ ಮುಖದ ಮೇಲೆ ಹೊಡೆದಂತಾಗಿತ್ತು.   ಅಂದೇ ಕೊನೆಯಾಯಿತು, ಆಕೆಯೊಂದಿಗೆ ನಾನು ಮತ್ತೆ ಸಂಪರ್ಕವಿರಿಸಿಕೊಳ್ಳಲೇ ಇಲ್ಲ.  ಆಕೆಯಿಂದ ಬಂದ ಪತ್ರಗಳೆಲ್ಲವನ್ನೂ ಕ.ಬು.ಗೆ ಎಸೆದಿರುವೆ.  

ಸ್ವಲ್ಪ ದಿನಗಳ ಬಳಿಕ  ಇನ್ನೊಂದು ಸಮುದಾಯದಲ್ಲಿ ಅವರಿವರುಗಳ ಮಾಹಿತಿಯ ಬಗ್ಗೆ ಕಣ್ಣಾಡಿಸುತ್ತಿದ್ದಾಗ, ನನಗೆ ಆಗ ತಾನೆ ಪರಿಚಯವಾಗಿದ್ದ ಒಬ್ಬರ ಬಗ್ಗೆ ನೋಡಿದೆ.  ಅಲ್ಲಿಂದ ಮುಂದಕ್ಕೆ ಅವರ ಸ್ನೇಹಿತರುಗಳ ಬಗ್ಗೆ ನೋಡುತ್ತಿದ್ದಾಗ ಒಬ್ಬ ಹೆಣ್ಣುಮಗಳ ಮಾಹಿತಿಯೂ ಕಣ್ಣಿಗೆ ಬಿದ್ದಿತು.  ಆಗೀಗ ಅವರೆಲ್ಲರೂ ಒಟ್ಟಿಗೇ ಕುಳಿತು ಕುಡಿಯುವರಂತೆ.  ಹಾಗೆಯೇ ಮುಂದೆ ಅವರ ಬ್ಲಾಗಿನ ಬಗ್ಗೆ ಕಣ್ಣಾಡಿಸಿದೆ.  ಅದರಲ್ಲಿಯೂ ಧೂಮ್ರಪಾನ, ಕುಡಿತ, ಅಶ್ಲೀಲದ ಬಗ್ಗೆ ಬರೆದಿದ್ದರು.    ಮದುವೆ ಆದರೂ ಗಂಡ ತನಗೆ ಬಾಳಿನಲ್ಲಿ ಹಿತ ಬಯಸಲು ಮಾತ್ರ ಬೇಕು, ತಾನೇನೇ ಮಾಡಿದರೂ ಸಹಿಸಿಕೊಂಡಿರಬೇಕು ಎಂದು ಬರೆದಿದ್ದರು.  ಅವರ ಸ್ನೇಹಿತರು ಸ್ನೇಹಿತೆಯರ ಬಗ್ಗೆಯೂ ಇರುವ ಮಾಹಿತಿಯನ್ನು ನೋಡಿದೆ.   ಅದರಲ್ಲಿ ಕೆಲವರು ಮದುವೆಯಾದವರೂ ಆಗಿದ್ದರು.  ಅವರೂ ಮುಕ್ತ ಜೀವನದ ಬಗ್ಗೆ, ಕುಡಿತ, ಧೂಮ್ರಪಾನದ ಚಟವಿರುವುದಾಗಿ ಬರೆದುಕೊಂಡಿದ್ದಾರೆ. 
ಹೀಗೆ ಜೀವನ ಮಾಡುವ ಹಾಗಿದ್ದರೆ ಮಾನವನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವಾದರೂ ಏನು?  ಮಾನವ ಸಂಯಮದಿಂದ ವರ್ತಿಸುವವದರಿಂದಲೇ ಅವನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಸ್ಥಾನ ಸಿಕ್ಕಿರಬಹುದಲ್ಲವೇ?  ಇದರ ಅವಶ್ಯಕತೆ ಮಾನವನಿಗೆ ಇದೆಯೇ?  ಹೀಗೆ ಜೀವಿಸುವವರು ತಮ್ಮ ಮಕ್ಕಳಿಗೆ ಯಾವ ತರಹ ಸಂಸ್ಕೃತಿಯನ್ನು ಧಾರೆ ಎರೆಯಬಲ್ಲರು.  ಹಣ ಕೈನಲ್ಲಿದ್ದು ಮಾಡಲು ಕೆಲಸವಿಲ್ಲದೇ ಇದ್ದಾಗ ಹೀಗೆ ದುಶ್ಚಟಗಳಿಗೆ ದಾಸರಾಗುವರೇ?  ಜೀವಿತಕ್ಕೆ ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿನ ಹಣ ಕೈಗೆ ಬಂದರೆ ಹೀಗೆ ಮಾಡಬೇಕೆಂದು ನಿಯಮವಿದೆಯೇ?  ಮುಂದಿನ ಹತ್ತು ವರ್ಷಗಳಲ್ಲಿ ಅವರ ಜೀವನ ಶೈಲಿ ಹೇಗಿರಬಹುದೆಂದು ಅವರು ಚಿಂತಿಸಿಹರೇ?   ಈ ಜಗತ್ತಿನಲ್ಲಿ ನಮ್ಮ ಧ್ಯೇಯವಾದರೂ ಏನು?  ಬದುಕನ್ನು ಒಂದೆಡೆ ನಿಲ್ಲಿಸಬಾರದೆಂದು ಬರುವೆವು, ಬಂದು ಇನ್ನೊಂದು ಜೀವಕ್ಕೆ ಬದುಕನ್ನು ನೀಡುವೆವು, ಕಾಣದಂತೆ ಮಾಯವಾಗುವೆವು.  ಹಾಗೆ ಇನ್ನೊಂದು ಜೀವಕ್ಕೆ ಬದುಕನ್ನು ನೀಡುವಾಗ, ಅದರಲ್ಲಿ ಒಳಿತು ಕೆಡುಕಗಳ ಬಗ್ಗೆ ತಿಳಿವು ಮೂಡಿಸುವುದು ಕರ್ತವ್ಯವಲ್ಲವೇ?  ಮುಂದೆ ಮಗು ಅಡ್ಡ ಹಾದಿ ಹಿಡಿದಾಗ ನೊಂದು ಬೆಂದರೇನು ಪ್ರಯೋಜನ.

ಹುಹ್!  ಇದೆಲ್ಲಾ ನನಗೇತಕೆ.  ನನ್ನ ಕೈನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.  ಪಕ್ಕದವನು ಧೂಮ್ರಪಾನ ಮಾಡಿದರೂ ಸಹಿಸಲಾರದವನು ನಾನೊಬ್ಬ ನಿರುಪಯೋಗಿ ಎಂದು ಸುಮ್ಮನೆ ಮೂಲೆಯಲ್ಲಿ ಕುಳಿತುಕೊಳ್ಳುವುದೇ ಲೇಸು.  ಆದರೆ ನಮಗೆ ಹತ್ತಿರವಾದವರು ಹೀಗೆ ಮಾಡಿದರೆ ಹೇಗೆ ಪ್ರತಿಕ್ರಿಯಿಸಬೇಕು.   ನನಗೆ ಹತ್ತಿರವಾಗುತ್ತಿರುವ ಸ್ನೇಹಿತರೆಲ್ಲರೂ ಹೀಗೇ ನನಗೆ ದೂರವಾಗುತ್ತಿರುವರೇ?  ಮುಂದೊಂದು ದಿನ ನನ್ನ ಮಕ್ಕಳೂ ಇಂತಹ ಸ್ಥಿತಿಯಲ್ಲಿರುವುದನ್ನು ನಾನು ನೋಡಬೇಕೇ?  ಇದೊಂದು ವಿಷಯ ನನ್ನ ತಲೆಯೊಳಗೆ ಕೊರೆಯುತ್ತಿದೆ.  ಯಾರಾದರೂ ಉಪಾಯ ತಿಳಿಸುವಿರಾ?   ಆಗದವನು ಮಡಗಿದಂತಿರು ಎಂದು ಸುಮ್ಮನಿರುವುದು ಲೇಸಲ್ಲವೇ? ಈ ಜಗತ್ತನ್ನು ತಿದ್ದಲಾಗುವುದೇ?  ಬೇಕಿದ್ದರೆ ನಾನು ಅವರಂತಾಗಬಹುದು ಇಲ್ಲದಿದ್ದರೆ ನನಗೆ ಬೇಕಿದ್ದಂತೆ ನಾನಿರಬಹುದು.  ಇದೊಂದೇ ಸಮಜಾಯಿಷಿ ಹೇಳಿಕೊಂಡು ಜೀವಿತವನ್ನು ಕಳೆಯಬೇಕು.  ನೀವೇನಂತೀರಿ?

ಗುರುದೇವ

ಗುರುದೇವ

gurudev1.JPG
ಶ್ರೀ ದೇವೇಂದ್ರನಾಥ ಮಜುಮ್ದಾರ ವಿರಚಿತ ಶ್ರೀ ಗುರು: ತವಾಷ್ಟಕ

ಭವ ಸಾಗರ ತಾರಣ ಕಾರಣ ಹೇ ರವಿ ನಂದನ ಬಂಧನ ಖಂಡನ ಹೇ
ಶರಣಾಗತ ಕಿಂಕರ ಭೀತಮನೆ ಗುರುದೇವ ದಯಾಕರ ದೀನಜನೆ

ಹೃದಿಕಂದರ-ತಾಮಸ-ಭಾಸ್ಕರ ಹೇ, ತುಮಿ ವಿಷ್ಟು ಪ್ರಜಾಪತಿ ಶಂಕರ ಹೇ
ಪರಬ್ರಹ್ಮ ಪರಾತ್ಪರ ವೇದ ಭಣೇ, ಗುರುದೇವ ದಯಾಕರ ದೀನಜನೆ

ಮನ-ವಾರಣ-ಶಾಸನ-ಅಂಕುಶ ಹೇ, ನರತ್ರಾಣ ತರೇ ಹರಿ ಚಾಕ್ಷುಷ ಹೇ
ಗುಣಗಾನ-ಪರಾಯಣ ದೇವಗಣೇ, ಗುರುದೇವ ದಯಾಕರ ದೀನಜನೆ

ಕುಲಕುಂಡಲಿನೀ-ಘುಮ-ಭಂಜಕ ಹೇ ಹೃದಿ-ಗ್ರಂಥಿ-ವಿದಾರಣ-ಕಾರಕ ಹೇ
ಮಮ ಮಾನಸ ಚಂಚಲ ರಾತ್ರ ದಿನೇ, ಗುರುದೇವ ದಯಾಕರ ದೀನಜನೆ

ರಿಪು-ಸೂದನ ಮಂಗಲ ನಾಯಕ ಹೇ ಸುಖಶಾಂತಿ ವರಾಭಯ-ದಾಯಕ ಹೇ
ತ್ರಯ ತಾಪ ಹರೇ ತವ ನಾಮಗುಣೇ, ಗುರುದೇವ ದಯಾಕರ ದೀನಜನೆ

ಅಭಿಮಾನ-ಪ್ರಭಾವ-ವಿಮರ್ಧಕ ಹೇ ಗತಿಹೀನ ಜನೇ ತುಮಿ ರಕ್ಷಕ ಹೇ
ಚಿತಶಂಕಿತ ವಂಚಿತ ಭಕ್ತಿಧನೇ, ಗುರುದೇವ ದಯಾಕರ ದೀನಜನೆ

ತವನಾಮ ಸದಾ ಶುಭ-ಸಾಧಕ ಹೇ ಪತಿತಾಧಮ-ಮಾನವ-ಪಾವಕ ಹೇ
ಮಹಿಮಾ ತವ ಗೋಚರ ಶುದ್ಧಮನೇ, ಗುರುದೇವ ದಯಾಕರ ದೀನಜನೆ

ಜಯ ಸದ್ಗುರು ಈಶ್ವರ-ಪ್ರಾಪಕ ಹೇ ಭವ-ರೋಗ-ವಿಕಾರ ವಿನಾಶಕ ಹೇ
ಮನ ಯೇನ ರಹೇ ತವ ಶ್ರೀಚರಣೇ, ಗುರುದೇವ ದಯಾಕರ ದೀನಜನೆ

ಗುರುವಿನ ಅವಶ್ಯಕತೆ (ವಿನೋಬಾಜೀ ಚಿಂತನೆಗಳು)

ನಿಸ್ಸಂದೇಹವಾಗಿಯೂ ಮಕ್ಕಳಿಗೆ ಯಾವ ಭೌತವಿಜ್ಞಾನವೂ ಗುರುವಿನ ಸಹಾಯವಿಲ್ಲದೇ ದೊರಕಲಾರದು. ತಾಯಿ, ತಂದೆ, ಗುರು ತಿಳಿಸಿ ಹೇಳಿದರೆ ಮಕ್ಕಳು ಜ್ಞಾನ ಪಡೆಯುತ್ತಾರೆ. ಈ ಬಗೆಯ ಗುರು ಸಿಕ್ಕದೆಯೇ ಜ್ಞಾನ ಬೆಳೆಯಿತೆಂಬ ಅನುಭವ ಮಾತ್ರ ಬಂದುದಿಲ್ಲ. ಪ್ರಾಣಿಗಳಿಗೂ ಗುರು ಇರುತ್ತಾರೆ. ಅವುಗಳಿಗೆ ಮಾರ್ಗದರ್ಶನ ಮಾಡುತ್ತವೆ. ತಾಯಿ ತಂದೆಯರು ಪ್ರತ್ಯಕ್ಷ ಆಚರಣೆಯಿಂದ ಮಕ್ಕಳಿಗೆ ಕಲಿಸುತ್ತಾರೆ. ಅದರಿಂದ ಕೆಲವು ಪರಂಪರೆಗಳು ಬೆಳೆಯುತ್ತವೆ ಮತ್ತು ನಡೆದುಕೊಂಡು ಹೋಗುತ್ತಿರುತ್ತವೆ.

ಆದರೆ ಆತ್ಮಜ್ಞಾನದ ಸಂಬಂಧದಲ್ಲಿ ಹೇಳಬೇಕಾದರೆ ಗುರುವಿಲ್ಲದೆ ಅದು ದೊರೆಯದು ಎಂದು ತಿಳಿಯುವುದು ತಪ್ಪು. ಕಾರಣ ಆತ್ಮ ಎನ್ನುವ ವಸ್ತುವೇ ಹಾಗಿದೆ. ಅದು ನಮ್ಮೊಳಗಿನದೇ ಹೊರತು ಹೊರಗಿನದಲ್ಲ. ಯೋಗ್ಯ ಗುರು ದೊರಕಿದರೆ ಆತನ ಮಾರ್ಗದರ್ಶನದಿಂದ ಆತ್ಮದರ್ಶನ ಸರಳವಾಗುವುದು. ಆದರೆ ಇದರೆಲ್ಲಿ ‘ರೆ’ಯೇ ದೊಡ್ಡದು. ಅಂತಹ ಗುರುವಿನ ನೆರವಿಲ್ಲದೆಯೇ ಮಾರ್ಗ ದೂರವಾಗಬಹುದು ಮತ್ತು ಹೆಚ್ಚು ಕಷ್ಟವೂ ಆಗಬಹುದು. ಆದರೂ ಗುರುವಿಲ್ಲದೆ ಆತ್ಮ ಜ್ಞಾನ ದೊರಕದು ಎಂದು ಮಾತ್ರ ಹೇಳಬರುವುದಿಲ್ಲ. ಆತ್ಮ ಆಂತರಿಕ ವಸ್ತುವಾದುದರಿಂದ ಅದರ ಪ್ರಾಪ್ತಿಗೆ ಹೊರಗಣ ಗುರು ಬೇಕು ಎಂದು ತಿಳಿಯುವುದು ತಪ್ಪಾಗುವುದು. ಆದುದರಿಂದ ಆತ್ಮಜ್ಞಾನಕ್ಕೆ ಗುರು ಅನಿವಾರ್ಯವೆಂದು ಭಾವಿಸಬಾರದು.

ಗುರುವಿನ ಬಗ್ಗೆ

ದೃಷ್ಟಿದಾತನೇ ಎಲ್ಲಕ್ಕಿಂತ ಶ್ರೇಷ್ಠಗುರು. ದೃಷ್ಟಿಮಾತ್ರ, ಸ್ಪರ್ಶಮಾತ್ರ, ಆಲಿಂಗನ ಮಾತ್ರ ಮತ್ತು ಕಥನ ಮಾತ್ರದಿಂದಲೇ ಶಿಷ್ಯ ಬ್ರಹ್ಮನಾಗುವಂತಹ ಗುರುಗಳು ಇದ್ದಾರೆ. ಯಾಜ್ಞವಲ್ಕ್ಯರು ಜನಕನಿಗೆ ಜ್ಞಾನವನ್ನು ಕೊಟ್ಟರು ಮತ್ತು ಕೊನೆಯಲ್ಲಿ ಆತನ ಮುಖವು ತೇಜಸ್ಸಿನಿಂದ ಹೊಳೆಯುತ್ತಿದ್ದುದನ್ನು ಕಂಡರು. ಅವನು ಹೇಳಿದನು – ‘ಎಲೈ ಜನಕನೇ, ನೀನು ನಿರ್ಭೀತನಾದೆ. ಹೀಗೆ ಶ್ರವಣ ಮಾತ್ರದಿಂದ ಆತನಿಗೆ ಜ್ಞಾನ ದೊರಕಿತು. ಇದರಲ್ಲಿ ಶಿಷ್ಯನ ಗ್ರಹಣ ಸಾಮರ್ಥ್ಯವಂತೂ ಎದ್ದು ಕಾಣುತ್ತದೆ. ಆದರೆ ತನ್ನ ಶಬ್ದದಿಂದಲೇ ಅಷ್ಟೊಂದು ದೊಡ್ಡ ಕಾರ್ಯವನ್ನು ಸಾಧಿಸಿದ ಗುರುವಿನ ಶಕ್ತಿಯೂ ಸ್ಪಷ್ಟವಾಗಿ ತೋರುತ್ತದೆ. ಇಂತಹ ಗುರು ಇರುವುದು ಸಾಧ್ಯ.

ಗುರು ಮತ್ತು ಗುರು ಶಿಷ್ಯರ ಜೊತೆಗಳು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾರ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು. ಯಾರ ಶಿಷ್ಯರು ಗುರುವಿಗಿಂತ ದುರ್ಬಲರಾದಾರೋ ಅವರು ದುರ್ಬಲ ಗುರು. ಅದೇ ರೀತಿ ತಂದೆಯ ಲಕ್ಷಣವೆಂದರೆ ತನಗಿಂತ ತನ್ನ ಮಗ ಮುಂದೆ ಹೋಗುವಂತಾಗಬೇಕು. ದಶರಥನಿಗಿಂತ ರಾಮ ಮುಂದೆ ಹೋದನಾದ್ದರಿಂದ ದಶರಥ ಉತ್ತಮ ತಂದೆಯಾದನು. ರಾಮನು ಉತ್ತಮ ತಂದೆಯಾಗಲಿಲ್ಲ. ಏಕೆಂದರೆ ಅವನ ಮಕ್ಕಳು ಅವನಿಗಿಂತ ಮುಂದೆ ಹೋಗಲಿಲ್ಲ. ಹಿಂದೂಸ್ಥಾನದಲ್ಲಿ ಇಂತಹ ಗುರುಶಿಷ್ಯರ ಜೊತೆಗಳು ಎಲ್ಲೆಲ್ಲೂ ನೋಡಲು ಸಿಗುತ್ತವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಶಂಕರದೇವ – ಮಾಧವದೇವ. ಮಾಧವದೇವ ಶಂಕರದೇವರಿಗಿಂತ ಮುಂದೆ ಹೋದರು. ಅಸ್ಸಾಮಿನಲ್ಲೆಲ್ಲಾ ಭಕ್ತಿಮಾರ್ಗ ಬಹಳವಾಗಿ ವ್ಯಾಪಿಸಿದುದು ಮಾಧವದೇವರಿಂದಲೇ. ಇತ್ತ ಬಂಗಾಲದಲ್ಲಿ ರಾಮಕೃಷ್ಣ – ವಿವೇಕಾನಂದರಂತಹ ಗುರು ಶಿಷ್ಯರ ಆದರ್ಶ ಜೋಡಿ ಇತ್ತು. ಮಾಧವದೇವರು ತಾವು ಶಂಕರದೇವರಿಗಿಂತ ಮುಂದೆ ಹೋದೆನೆಂದು ಖಂಡಿತ ಒಪ್ಪುತ್ತಿರಲಿಲ್ಲ. ವಿವೇಕಾನಂದರೂ ತಾವು ರಾಮಕೃಷ್ಣರಿಗಿಂದ ಮುಂದೆ ಹೋದೆನೆಂದು ಒಪ್ಪುತ್ತಿರಲಿಲ್ಲ. ಆದರೂ ವಿವೇಕಾನಂದರಿಲ್ಲದೇ ಇದ್ದಿದ್ದರೆ ರಾಮಕೃಷ್ಣರ ಪರಿಚಯ ಜಗತ್ತಿಗೆ ಆಗುತ್ತಿರಲಿಲ್ಲ. ಮಚ್ಛೀಂದ್ರನಾಥ – ಗೋರಖನಾಥರ ಜೊತೆಯೂ ಅಂತಹದ್ದೇ. ‘ಮಗುವನ್ನು ತೊಳೆದುಕೊಂಡು ಬಾ’ ಎಂದು ಮಚ್ಛೀಂದ್ರನಾಥರು ಹೇಳಿದಾಗ, ಗೋರಖನಾಥರು ಮಗುವಿನ ಕಾಲುಗಳನ್ನು ಹಿಡಿದು ಬಟ್ಟೆಯನ್ನು ಒಗೆಯುವಂತೆ ಎತ್ತೆತ್ತಿ ಒಗೆದರು. ಮಚ್ಛೀಂದ್ರನಾಥರಿಗೆ ವಿಷಯ ತಿಳಿದಾಗ – ‘ಏನಯ್ಯಾ! ಬಟ್ಟೆಯನ್ನು ಒಗೆಯುವ ಬಗೆ ಬೇರೆ. ಹುಡುಗನನ್ನು ತೊಳೆಯುವ ಬಗೆ ಬೇರೆ ಎಂದು ತಿಳಿಯದೇ?’ ಎನ್ನಲು, ಗೋರಖನಾಥರು ‘ನೀವು ಎರಡು ಬಗೆಗಳನ್ನು ತೋರಿಸಿದ್ದೀರ’, ಎಂದರು ಗುರುವು ಚೇತನ ಅಚೇತನಗಳ ನಡುವಿನ ಭೇದವನ್ನು ಇಟ್ಟಿದ್ದರೂ, ಶಿಷ್ಯನು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದನು.

ಅದೇ ರೀತಿ ಶಂಕರಾಚಾರ್ಯರನ್ನು ತೆಗೆದುಕೊಳ್ಳಿ. ಯಾರೂ ಅವರ ಗುರುವನ್ನು ತಿಳಿಯರು. ಆದರ ಅವರು ಕುಶಲತೆಯಿಂದ ತನ್ನ ಗುರುವಿನ ಹೆಸರನ್ನು ಜನರಿಂದ ಹಾಡಿಸಿದರು. ‘ಭಜ ಗೋವಿಂದ’ ಇದು ಅವರ ಗುರುವಿನ ಹೆಸರೆಂದು ತಿಳಿಯುವುದಿಲ್ಲ. ಭಗವಂತನ ಹೆಸರೆಂದೇ ತಿಳಿಯುವರು. ಆದರೆ ಶಂಕರಾಚಾರ್ಯರ ನಾಲ್ಕು ಶಿಷ್ಯರೂ ಅವರಿಗಿಂತ ಮುಂದೆ ಹೋಗಲಿಲ್ಲ. ಹೀಗೆ ಶಂಕರಾಚಾರ್ಯರು ಉತ್ತಮ ಶಿಷ್ಯರೂ ಮತ್ತು ದುರ್ಬಲ ಗುರುವೂ ಆಗಿ ಕಾಣಬರುತ್ತಾರೆ.

ಮಹಾರಾಷ್ಟ್ರದಲ್ಲಿ ಮೂರು ಜೊತೆಗಳ ಗುರು ಶಿಷ್ಯರು ನೆನಪಾಗುವರು. ಮೊದಲನೆಯದು – ನಿವೃತ್ತಿನಾಥ – ಜ್ಞಾನದೇವರು. ಅವರಿಬ್ಬರೂ ಅಣ್ಣತಮ್ಮಂದಿರು. ಜ್ಞಾನೇಶ್ವರಿಯನ್ನು ಬರೆದವರು ಜ್ಞಾನದೇವರು. ಎರಡನೆಯ ಜೊತೆ – ಏಕನಾಥ ಮತ್ತು ಜನಾರ್ಧನರದ್ದು. ಮೂರನೆಯ ಜೋಡಿ ರಾನಡೆ ಮತ್ತು ಗೋಖಲೆಯವರದ್ದು. ಇವರೆಲ್ಲರಲ್ಲೂ ಗುರುವಿಗಿಂತ ಶಿಷ್ಯ ಮುಂದೆ ಹೋದಂತಹ ಉದಾಹರಣೆಗಳು.