ಕಾಲೋನಿಯಲ್ಲಿ ಗಣಪತಿ

ಗಣಪತಿಗಣಾನಾಂ ತ್ವಾ ಗಣಪತಿಂ ಹವಾ ಮಹೇ ಕವಿಂ ಕವೀನಾಮುಪಮಶ್ರಮೇ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: ಸೀದ ಸಾದನಮ್

ಇದು ವೇದ ಮಂತ್ರವಾದರೆ, ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂಬುದು ಬೀಜಾಕ್ಷರ ಮಂತ್ರ.

ಮಹಾರಾಷ್ಟ್ರದಲ್ಲಿ ಗಣಪತಿಯನ್ನು ಮನೆಯವನೆಂದೇ ತಿಳಿದಿದ್ದಾರೆ. ಹತ್ತು ದಿನಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದ ನಂತರ ನೀರಿಗೆ ಬಿಡುವಾಗ, ಮನಸ್ಸಿಲ್ಲದ ಮನಸ್ಸಿನಲ್ಲಿ

ಗಣಪತಿ ಬಪ್ಪಾ ಮೋರಯಾ
ಪುಡ್‍ಚ್ಯಾ ವರ್ಷಾ ಲವ್‍ಕರ್ ಯಾ ಎನ್ನುವರು. ಅಂದರೆ, ನಮ್ಮೆಲ್ಲರ ತಂದೆ ಗಣಪತಿಯೇ ಮುಂದಿನ ವರ್ಷ ಬೇಗನೆ ಬಾ ಎಂದರ್ಥ. ಮಹಾರಾಷ್ಟ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರಸಿದ್ಧವಾದುದು. ಕರ್ನಾಟಕದಲ್ಲಿ ಮನೆಗಳಲ್ಲಿ ಗಣಪತಿಯನ್ನು ಕುಳ್ಳಿರಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕರನ್ನು ಒಟ್ಟಾಗಿರಿಸಲೋಸುಗ ತಿಲಕರ ಚಿಂತನೆಯಂತೆ ಮನೆಗಳಲ್ಲಿ ಪ್ರತ್ಯೇಕ ಗಣಪತಿಯನ್ನು ಕುಳ್ಳಿರಿಸುವುದರ ಜೊತೆ ಜೊತೆಗೆ ಸಾರ್ವಜನಿಕವಾಗಿ ಆಯಾ ಬಡಾವಣೆಗಳಲ್ಲಿ ಗಣಪತಿಯ ದೊಡ್ಡ ದೊಡ್ಡ ಮೂರ್ತಿಗಳನ್ನು ಕುಳ್ಳಿರಿಸಿ ಹತ್ತೂ ದಿನಗಳು ವಿಶೇಷ ಪೂಜೆಯನ್ನು ಕೈಗೊಳ್ಳುವರು.

ಅಂತೆಯೇ ನಮ್ಮ ಕ್ವಾರ್ಟರ್ಸಿನಲ್ಲಿಯೂ ದೊಡ್ಡದಾದ ಗಣಪತಿಯನ್ನು ಕುಳ್ಳಿರಿಸಿ ಪೂಜೆಗೈಯುವರು. ಈ ವರ್ಷ ನಮ್ಮ ಕಾಲೋನಿಗೆ ಮತ್ತೆ ಗಣಪತಿ ಬರುತ್ತಿದ್ದಾನೆ. ಅವನನ್ನು ಎದುರುಗೊಳ್ಳಲು ಎಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿವೆ. ೨೫೦ಕ್ಕೂ ಹೆಚ್ಚಿನ ಮನೆಯವರೆಲ್ಲರೂ ಒಂದು ಕುಟುಂಬದವರಂತೆ ವರ್ತಿಸುತ್ತಾ ೧೦ ದಿನಗಳವರೆವಿಗೆ ಗಣಪತಿಯನ್ನು ಪೂಜಿಸುವರು. ೧೯೮೫ರಲ್ಲಿ ರಿಸರ್ವ್ ಬ್ಯಾಂಕ್ ಆಫೀಸರ್ ಕಾಲೋನಿಯು ಗೋರೆಗಾಂವಿನ ಗೋಕುಲಧಾಮದಲ್ಲಿ ಪ್ರಾರಂಭವಾಯಿತು. ಮೊದಲ ವರ್ಷದಿಂದಲೇ ಗಣಪತಿಯನ್ನು ಕುಳ್ಳಿರಿಸುತ್ತಿದ್ದಾರೆ. ಆಗ ಚೆನ್ನೈನಿಂದ ವರ್ಗವಾಗಿ ಬಂದಿದ್ದ ಕೆಲವು ಉತ್ಸಾಹ ವೈದಿಕ ಸಂಪ್ರದಾಯಸ್ಥ ಗೆಳೆಯರ ಬಳಗ ಈ ಉತ್ಸವವನ್ನು ಪ್ರಾರಂಭಿಸಿತು. ಈ ಸಲ ೨೧ನೆಯ ಗಣಪತಿಯು ಬರುತ್ತಿದ್ದಾನೆ. ಪ್ರತಿವರ್ಷವೂ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ದೇಣಿಗೆ ಸ್ವೀಕಾರ ಮತ್ತು ಉತ್ಸವದ ಆಚರಣೆಗೆ ಸಕಲ ಸಿದ್ಧತೆಗಳ ಕೆಲಸ ಪ್ರಾರಂಭಿಸುತ್ತಾರೆ. ಮೊದಲೇ ನಿಗದಿಸಿದಂತೆ ಒಂದು ವರ್ಷದ ಗಣಪತಿಯ ದರವನ್ನು ಒಬ್ಬರು ಭರಿಸುತ್ತಾರೆ. ೨೫ನೆಯ ವರ್ಷಕ್ಕೆ ವಿಜೃಂಭಣೆಯ ಉತ್ಸವ ಆಚರಿಸುವ ನೆವದಿಂದ ೨೪ ನೆಯ ವರ್ಷದ ಗಣಪತಿಯವರೆವಿಗೆ ಯಾರು ಯಾರು ದರವನ್ನು ಭರಿಸುವುದೆಂದು ಈಗಾಗಲೇ ನಿರ್ಧಾರಿತವಾಗಿದೆ. ಸಾಮಾನ್ಯವಾಗಿ ೫ ಅಡಿ ಎತ್ತರವಿರುವ ಈ ಗಣಪತಿಗೆ ಕೊಡಬೇಕಿರುವ ದರ ೫,೦೦೦ ರೂಪಾಯಿಗಳು (ವರ್ಷ ವರ್ಷಕ್ಕೆ ಅದರ ದರ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಿರುತ್ತದೆ). ಈ ವರ್ಷದ ದರ ೫,೦೧೧ ರೂಪಾಯಿಗಳಾಗಿದೆ. ಇಲ್ಲಿಯ ವಾಡಿಕೆಯ ಪ್ರಕಾರ ಗಣಪತಿಯನ್ನು ಹಬ್ಬದ ದಿನದಂದೇ ತಯಾರಕರಿಂದ ಕೊಂಡು ತರುವುದರಿಂದ ಮತ್ತು ಈ ವರ್ಷ ಗಣಪತಿಯ ಬೆಲೆ ತುಟ್ಟಿಯಾಗುವುದೆಂಬ ವದಂತಿಗಳ ಪ್ರಕಾರ ದರ ಸ್ವಲ್ಪ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹಬ್ಬದ ದಿನ ಬೆಳಗಿನ ಜಾವದಲ್ಲಿ ತಯಾರಕರಿಂದ ಗಣಪತಿಯ ಮೂರ್ತಿಯನ್ನು ಕೊಂಡು ಲಾರಿಯ ಮೂಲಕ ಕಾಲೋನಿಗೆ ತರುವರು. ಕಾಲೋನಿಯ ಮಧ್ಯ ಭಾಗದಲ್ಲಿರುವ ಪಾರ್ಕಿನ ಮುಂಭಾಗದ ಮುಕ್ತ ಸಭಾಂಗಣದಲ್ಲಿರುವ ಸ್ಟೇಜಿನ ಮೇಲೆ ಮೂರ್ತಿಯನ್ನಿರಿಸುವರು. ಹತ್ತೂ ದಿನಗಳ ಬೆಳಗ್ಗೆ ಮತ್ತು ಸಂಜೆಯ ಪೂಜೆ ಮತ್ತಿತರೇ ಕಾರ್ಯಕ್ರಮಗಳನ್ನು ವೀಕ್ಷಿಸಲು ದೊಡ್ಡ ಚಪ್ಪರವನ್ನು ಹಾಕಿ, ಕುರ್ಚಿಗಳನ್ನು ಹಾಕುವರು. ಮನೆಗಳಲ್ಲಿ ಗಣಪತಿಯನ್ನು ಇಡುವವರು ಪೂಜೆಯನ್ನು ಮುಗಿಸಿ ಈ ಬೃಹತ್ ಮೂರ್ತಿಯ ಪೂಜೆಗೆ ಎಲ್ಲರೂ ಸೇರುವರು. ಮನೆಗಳಿಂದ ಪ್ರಸಾದವನ್ನೂ ತಂದು ನೈವೇದ್ಯಕ್ಕರ್ಪಿಸುವರು. ಪೂಜೆ ನೈವೇದ್ಯಗಳಾದ ಬಳಿಕೆ ನೆರೆದ ಎಲ್ಲರಿಗೂ ಅದನ್ನು ವಿತರಿಸುವರು. ಸುತ್ತ ಮುತ್ತಲಿರುವ ಭಾರತ್ ಪೆಟ್ರೋಲಿಯಂ, ಓಎನ್‍ಜಿಸಿ, ಹಿಂದುಸ್ತಾನ್ ಪೆಟ್ರೋಲಿಯಂ ಕಾಲೋನಿಗಳ ನಿವಾಸಿಗಳಲ್ಲದೇ ಖಾಸಗೀ ನಿವಾಸ ಸಂಕುಲವಾದ ಲಕ್ಷಚಂಡಿಯ ನಿವಾಸಿಗಳೂ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವರು. ಈ ಪ್ರದೇಶದಲ್ಲಿ ಹಾಲಿನ ವಿತರಕರು, ನಿತ್ಯಬಳಕೆಯ ವಸ್ತುಗಳ ವಿತರಕರು, ಅಂಗಡಿಯವರು ಮತ್ತಿತರು ದೇಣಿಗೆಯನ್ನೂ ಕೊಡುವರು. ಕಾಲೋನಿಯಲ್ಲಿರುವ ನಿವಾಸಿಗಳೆಲ್ಲರೂ ದೇಣಿಗೆಯನ್ನು ಕೊಡುವುದಲ್ಲದೇ, ಪ್ರತಿನಿತ್ಯದ ಪೂಜೆಗೆ ಬೇಕಿರುವ ಹೂವು, ತೆಂಗಿನಕಾಯಿ ಮತ್ತು ಪ್ರಸಾದ ವಿತರಣೆಗೆ ತಿನಿಸುಗಳನ್ನೂ ತಂದಿಡುವರು. ಅವಶ್ಯಕತೆ ಇರುವ ಇನ್ನಿತರೇ ವಸ್ತುಗಳನ್ನು ಸಂಘಟಕರು ಖರೀದಿಸಿ ಪೂಜೆಯನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುವರು.

ಪೂಜೆಯಲ್ಲಿ ಗಣಪತಿಯೊಂದಿಗೆ ಲಲಿತಾ ದೇವಿ, ಅಯ್ಯಪ್ಪ ಸ್ವಾಮಿ, ನವಗ್ರಹ, ಲಕ್ಷ್ಮಿಯಲ್ಲದೇ ನಿವಾಸಿಗಳ ಇಷ್ಟ ದೈವಗಳ ಮೂರ್ತಿ ಅಥವಾ ಚಿತ್ರಪಟಗಳಿಗೂ ಪೂಜೆಯು ಸಲ್ಲುವುದು. ಪ್ರತಿನಿತ್ಯ ಬೆಳಗ್ಗೆ ೬ ಘಂಟೆಗೆ ಲಲಿತಾಸಹಸ್ರನಾಮದೊಂದಿಗೆ ಗಣಪತಿಯ ಪೂಜೆಯಾದರೆ, ಸಂಜೆ ೭ ಘಂಟೆಗೆ ವಿಷ್ಣುಸಹಸ್ರನಾಮ, ರುದ್ರ ನಮಕ ಚಮಕಗಳೊಂದಿಗೆ ಉಪನಿಷತ್ತುಗಳ ಪಾರಾಯಣವಾಗುವುದು. ಶನಿವಾರ ಭಾನುವಾರಗಳಂದು ವಿಶೇಷವಾಗಿ ಅಯ್ಯಪ್ಪ ಭಜನೆ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ, ನವಗ್ರಹ ಹೋಮ, ನಕ್ಷತ್ರ ಹೋಮಗಳನ್ನು ನಡೆಸುವರು. ಈ ಮಧ್ಯೆ ಒಂದು ಭಾನುವಾರ ಬೆಳಗ್ಗೆ ಗಣಹೋಮವನ್ನೂ ನಡೆಸುವರು. ಈ ಪೂಜೆಗಳೆಲ್ಲವೂ ಶ್ರೀ ಸುಬ್ರಹ್ಮಣ್ಯಂ ಅಯ್ಯರ್ ಅವರ ನೇತೃತ್ವದಲ್ಲಿ ನಡೆಯುವುದು. ಶ್ರೀ ಅಯ್ಯರ್ ಅವರು ೫ ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿ ತಿರುವನಂತಪುರಂನಲ್ಲಿ ನೆಲೆಸಿಹರು. ಆದರೂ ಪ್ರತಿ ವರ್ಷದ ಈ ಪೂಜೆಗಳಿಗಾಗಿ ಇಲ್ಲಿಗೆ ಬಂದು ಹತ್ತೂ ದಿನಗಳು ಇಲ್ಲಿಯೇ ಇರುವರು. ನಮ್ಮ ಕಾಲೋನಿಯಲ್ಲಿರುವ ಮಕ್ಕಳಿಗಂತೂ ಈ ಹತ್ತೂ ದಿನಗಳು ಹಬ್ಬವಿದ್ದಂತೆ. ದಿನ ಸಂಜೆ ವಿತರಿಸುವ ಕಾಲೋನಿಯಲ್ಲಿನ ಮನೆಗಳಿಂದ ನೈವೇದ್ಯಕ್ಕಿರಿಸುವ ೧೫-೨೦ ಬಗೆಯ ಪ್ರಸಾದದ ರುಚಿ, ಈ ಹತ್ತೂ ದಿನಗಳ ಅವರುಗಳ ಸಂಜೆಯಾಟಕ್ಕೆ ಕಡಿವಾಣ ಹಾಕಿದಂತಿದೆ.

ಮೊದಲು ಉತ್ಸವವನ್ನು ಪ್ರಾರಂಭಿಸಿದ ಎಷ್ಟೋ ಜನ ನಿವಾಸಿಗಳು ಈಗಾಗಲೇ ಬೇರೆ ಬೇರೆ ಕಡೆಗೆ ವರ್ಗವಾಗಿ ಅಥವಾ ನಿವೃತ್ತರಾಗಿ ಹೋಗಿ ನೆಲೆಸಿರುವರು. ಪ್ರತಿವರ್ಷದ ಗಣಪತಿಯ ಖರ್ಚನ್ನು ಭರಿಸಲು ೨೦೦೯ರವರೆವಿಗೆ ಈಗಾಗಲೇ ನಿವಾಸಿಗಳು ನಿಶ್ಚಿತರಾಗಿದ್ದಾರೆ. ೨೫ನೆಯ ವರ್ಷದ ಗಣಪತಿಗಾಗಿ ಖರ್ಚನ್ನು ಭರಿಸಲು ಸಾಕಷ್ಟು ಜನಗಳು ಮುಂದೆ ಬಂದಿದ್ದರೂ ಯಾರಿಂದಲೂ ಹಣವನ್ನು ಇನ್ನೂ ಸ್ವೀಕರಿಸಿಲ್ಲ. ೨೫ನೆಯ ವರ್ಷಕ್ಕಾಗಿ ವಿಶೇಷ ಉತ್ಸವವನ್ನು ನಡೆಸಲು ಆಯೋಜಿಸಲಾಗುತ್ತಿದೆ. ಕೆಲವರ ಪ್ರಕಾರ ೫ ದೊಡ್ಡ ಗಣಪತಿಗಳನ್ನು ಮತ್ತು ೨೦ ಸಣ್ಣ ಸಣ್ಣ ಗಣಪತಿಗಳನ್ನು ಇಡುವುದೆಂದು ಆಲೋಚನೆಯಾಗಿದ್ದರೆ, ಇನ್ನು ಕೆಲವರ ಪ್ರಕಾರ ೨೫ ದೊಡ್ಡ ದೊಡ್ಡ ಗಣಪತಿಗಳನ್ನು ಇಡುವುದೆಂದು ಯೋಚಿಸಲಾಗುತ್ತಿದೆ. ಇದಕ್ಕಾಗಿ ಒಂದು ಪ್ರತ್ಯೇಕ ಕಮಿಟಿಯನ್ನು ಮಾಡುವತ್ತ ಕಾರ್ಯಗಳು ನಡೆಯುತ್ತಿವೆ. ಆ ಸಮಯದಲ್ಲಿ ಇಲ್ಲಿಯವರೆವಿಗೆ ನಿವಾಸಿಗಳಾಗಿದ್ದ ಎಲ್ಲರನ್ನೂ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ವಿಶೇಷ ವ್ಯವಸ್ಥೆಯನ್ನೂ ಮಾಡಲು ಆಲೋಚಿಸಲಾಗುತ್ತಿದೆ.

ಮೊದಲ ಉತ್ಸವದಿಂದ ೨೧ ವರ್ಷಗಳವರೆವಿಗೆ ಅನೂಚಾನವಾಗಿ ಈ ಕೆಲಸಗಳೆಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವರೆಂದರೆ ಶ್ರೀ ತ್ಯಾಗಿ ಮತ್ತು ಶ್ರೀ ದೀಪತ್ ಮಾಥುರ್ ಅವರುಗಳು.

ಜೈ ಗಣೇಶ.

Advertisements

2 ಟಿಪ್ಪಣಿಗಳು

  1. TSSM said,

    ಏಪ್ರಿಲ್ 30, 2007 at 5:17 ಅಪರಾಹ್ನ

    Dhanyaru

  2. ಸೆಪ್ಟೆಂಬರ್ 15, 2007 at 11:11 ಫೂರ್ವಾಹ್ನ

    […] ಹಾಗೆಯೇ ಮುಂದುವರೆಯುತ್ತಿದೆ. ನಮ್ಮ ಕಾಲೋನಿಯಲ್ಲಿಯೂ ಗಣಪತಿ ಪೂಜೆಯನ್ನು ವಿಶೇಷವಾಗಿ […]


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: