ಅಮಾನವೀಯತೆ

boyarrest.JPG

ಮಾನವನಾಚರಿಸುತಿಹ ಹಬ್ಬ
ಅದಕಾಗೆ ಪಶು ಪ್ರಾಣಿಗಳಿಗೆ ತೋರಿಸಿಹ ಸ್ವರ್ಗ
ನಿರ್ದಾಕ್ಷಿಣ್ಯದಿ ಕತ್ತರಿಸಿಹ
ಬಡಪಾಯಿ ಕುರಿಯ ತಲೆಯ,
ಇವನ ಮಕ್ಕಳ ಚಿವುಟಲು ಸಾಕು
ಆಗುವುದಿವನಿಗೆ ನೋವು

ಪಕ್ಕದ ಮನೆಯ ದೀಪವ ತಂದ,
ಬೆಳಗಲು ಇವನ ಮನೆಯ
ಎಣ್ಣೆ ಕಡಿಮೆಯಾಗಿ ಬೆಳಕು ಕುಂದುತಿರಲು
ಸೀಮೆ ಎಣ್ಣೆಯ ಸುರಿದಿಹ ಆ ಬತ್ತಿಗೆ,
ಅದೇ ತನ್ನ ಕರುಳ ಕುಡಿಗೆ ಹೀಗಾಗಲು,
ನೋಡಿ ಅತ್ತು ಕರೆದು ಹೊರಳಾಡುವ ಇವನ ಪರಿಯ

ಬಲಹೀನನ ಮುಂದೆಯಷ್ಟೇ ತೋರಿಸಿಹ
ಇವನ ಉತ್ತರನ ಪೌರುಷ
ಹಸುಳೆಗಳ, ಮಹಿಳೆಯರ ಕತ್ತರಿಸಿಹ
ಮೊಂಡುಗತ್ತಿಯಲಿ ನಿರ್ದಾಕ್ಷಿಣ್ಯದಿ,
ಬಲಾಢ್ಯನು ತನ್ನ ಮೇಲೆ ನಿರ್ಬಂಧ ಹೇರಲು
ಮಿತ್ರರೆಲ್ಲರನು ಕೂಡಿಸಿ ಹೂಡುತಿಹ ವಿಶ್ವಯುದ್ಧ

ಯುದ್ಧ ಖೈದಿಗಳ ಕೈ ಕಾಲು ಕಟ್ಟಿ
ಬಾರಿಸುತಿಹ ಛಡಿಯೇಟು
ಬಾಸುಂಡೆ ಮೇಲೆ ಉಜ್ಜುತಿಹ ಕಲ್ಲು ಉಪ್ಪು
ಆರ್ತನಾದವ ಕೇಳುವವರಿಲ್ಲವೇ ಇಲ್ಲ
ತಾನು ಕಲ್ಲೊತ್ತಿ ಎಡವಲು
ಮಾಡುತಿಹ ದೊಡ್ಡ ರಾದ್ಧಾಂತ

ತನಗೊಂದು ಧರ್ಮ ಪರರಿಗೊಂದು ಧರ್ಮ
ಇದು ಸರಿಯೇ?  ಇದನು ನಾವು ಸಹಿಸಬೇಕೇ?

ಗಣಪತಿ ಆರತಿ

aarati.jpg

ಮಹಾರಾಷ್ಟ್ರದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮಂಗಳಾರತಿಯ ಸಮಯದಲ್ಲಿ
ಹಾಡುವ ಸುಂದರ ಭಜನೆ – ಕರ್ತೃ ಯಾರೆಂದು ತಿಳಿಯದು

ಸುಖಹರ್ತಾ ದು:ಖಹರ್ತಾ ವಾರ್ತಾ ವಿಘ್ನಾಚೀ
ನುರವೀ ಪುರವೀ ಪ್ರೇಮ ಕೃಪಾ ಜಯಾಚೀ
ಸರ್ವಾಂಗೀ ಸುಂದರ ಉಟಿ ಶೆಂಟೂರಾಚೀ
ಕಂಠೀ ಝಳಕೇ ಮಾಲ ಮುಕ್ತಾ ಫಳಾಚೀ

ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ ಜಯ ಮಂಗಲ ಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ

ರತ್ನಖಚಿತ ಫರಾ ತುಜ ಗೌರಿಕುಮರಾ
ಚಂದನಾಚೀ ಉಟೀ ಕುಂಕುಮಕೇಶರಾ
ಹಿರೆಜಡಿತ ಮುಕುಟ ಶೋಭತೊ ಬರಾ
ಋಣಝುಣಗೀ ನೂಪುರೇ ಚರಣೀ ಘಾಗರಿಯಾ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ಲಂಬೋದರ ಪೀತಾಂಬರ ಫಣಿವರಬಂಧನಾ
ಸರಲ ಸೋಂಡ ವಕ್ರತುಂಡ ತ್ರಿನಯನಾ
ದಾಸ ರಾಮಾಚಾ ವಾಟ ಪಾಹೆ ಸದನಾ
ಸಂಕಟೀ ಪಾವಾವೇಂ, ನಿರ್ವಾಣೀಂ ರಕ್ಷಾವೇಂ ಸುರವರ ವಂದನಾ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ಜಯದೇವ ಜಯದೇವ
ಜಯದೇವ ಜಯದೇವ ಜಯ ಮಂಗಲಮೂರ್ತೀ
ದರ್ಶನಮಾತ್ರೇ ಮನಕಾಮನಾ ಪೂರ್ತೀ
ಜಯದೇವ ಜಯದೇವ

ಜೋಡು

kolhapuri-chappals.jpg

ಇರಲಾರೆ ಒಬ್ಬಂಟಿಯಾಗಿ ನಾನೆಂದೂ
ಪಕ್ಕದಲ್ಲಿರಬೇಕು ಸಹಚರ ಎಂದೆಂದೂ
ಸಹವರ್ತಿ ಇಲ್ಲದೇ ಎನ್ನ ಬಾಳಿಲ್ಲ
ಯಜಮಾನರ ಸೇವಿಸುವುದೇ ಜೀವನವೆಲ್ಲ

ನಮ್ಮಲೂ ಉಂಟು ಹಲವು ಜಾತಿ ಧರ್ಮ
ಕೆಲವರು ಹೊಡೆತಕೆ ಉಪಯೋಗಿಸುವುದು ನನ ಕರ್ಮ
ನಮ್ಮ ಹೇಗೆ ಉಪಯೋಗಿಸುವರೋ ಅದೊಂದು ಮರ್ಮ
ಹಿಂದೆಲ್ಲಾ ನಮಗಾಧಾರ ಪ್ರಾಣಿಯ ಚರ್ಮ

ನಮ್ಮಲಿ ಕೆಲವರಿಗೆ ಪ್ರತಿದಿನ ಪಾಲೀಷಿನ ಮಾಲೀಷು
ಚಿನ್ನದ ರೇಕಿನಲಿ ಹುಟ್ಟುವುದು ಕೆಲವು ಶೂಸು
ಮಕ್ಕಳ ಮಾಲಿನಲಡಗಿದೆ ಸೈರನ್ನು
ಆಗಾಗ ನನಗೆ ಚುಚ್ಚುವುದು ಪಿನ್ನು

ಚರ್ಮದ ಕೆಳಗೆ ಹುಗಿದಿಹುದು ಕೆಲವರ ನೋಟು
ಮೆರೆವವರಿಗೆ ನನ್ನದೇ ಮುಂದಾದ ಸಾರೋಟು
ನಾನಿಲ್ಲದೇ ಗೌರವ ತರದು ಮಂದಿಯ ಕೋಟು
ನನ್ನ ಬಳಗದವರಿಂದಲೇ ಕೊಡುವುದು ಛಡಿ ಏಟು

ನನ್ನವರು ಕೆಲವರ ಸೇವೆ ಅಡುಗೆ ಮನೆ
ಹೆಚ್ಚಿನವರ ಡ್ಯೂಟಿ ಪಾಯಖಾನೆ
ಅರಮನೆಯಲೂ ನಾನಿಲ್ಲದ ಜೀವವಿಲ್ಲ
ಭಿಕಾರಿಗೂ ನಾನು ಬೇಕೇ ಬೇಕಲ್ಲ

ಕೆಲವರಿಗೆ ಹಣೆಯ ಮೇಲೆ ಸುಂದರ ಉಂಗುರ
ಕೆಲವರದು ಕೊಲ್ಹಾಪುರಿಯ ಸದ್ದು ಚರಚರ
ಬೂತಯ್ಯನನ್ನೂ ಎಡಬಿಡದೆ ಸೇವಿಸಿದೆ
ಜಂಗಮಯ್ಯನನ್ನು ನಂಬಿ ನಾ ಎಡವಿದೆ

ನನಗೆ ಪೂರ್ಣ ದರದ ಕಟ್ಟದು ಬಾಟಾ
ಎಲ್ಲರ ಸಂರಕ್ಷಿಸುವುದು ನನಗೆ ಮಾತ್ರ ಕಾಟ
ಆಗಾಗ ನನಗೂ ಆಗುವುದು ಆಪರೇಷನ್ನು
ಯಾರಾದರೂ ನೆನೆವರೇ ನನ್ನ ಕಥೆಯನ್ನು

ಕಾಲೋನಿಯಲ್ಲಿ ಗಣಪತಿ

ಗಣಪತಿಗಣಾನಾಂ ತ್ವಾ ಗಣಪತಿಂ ಹವಾ ಮಹೇ ಕವಿಂ ಕವೀನಾಮುಪಮಶ್ರಮೇ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ನೂತಿಭಿ: ಸೀದ ಸಾದನಮ್

ಇದು ವೇದ ಮಂತ್ರವಾದರೆ, ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂಬುದು ಬೀಜಾಕ್ಷರ ಮಂತ್ರ.

ಮಹಾರಾಷ್ಟ್ರದಲ್ಲಿ ಗಣಪತಿಯನ್ನು ಮನೆಯವನೆಂದೇ ತಿಳಿದಿದ್ದಾರೆ. ಹತ್ತು ದಿನಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದ ನಂತರ ನೀರಿಗೆ ಬಿಡುವಾಗ, ಮನಸ್ಸಿಲ್ಲದ ಮನಸ್ಸಿನಲ್ಲಿ

ಗಣಪತಿ ಬಪ್ಪಾ ಮೋರಯಾ
ಪುಡ್‍ಚ್ಯಾ ವರ್ಷಾ ಲವ್‍ಕರ್ ಯಾ ಎನ್ನುವರು. ಅಂದರೆ, ನಮ್ಮೆಲ್ಲರ ತಂದೆ ಗಣಪತಿಯೇ ಮುಂದಿನ ವರ್ಷ ಬೇಗನೆ ಬಾ ಎಂದರ್ಥ. ಮಹಾರಾಷ್ಟ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರಸಿದ್ಧವಾದುದು. ಕರ್ನಾಟಕದಲ್ಲಿ ಮನೆಗಳಲ್ಲಿ ಗಣಪತಿಯನ್ನು ಕುಳ್ಳಿರಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕರನ್ನು ಒಟ್ಟಾಗಿರಿಸಲೋಸುಗ ತಿಲಕರ ಚಿಂತನೆಯಂತೆ ಮನೆಗಳಲ್ಲಿ ಪ್ರತ್ಯೇಕ ಗಣಪತಿಯನ್ನು ಕುಳ್ಳಿರಿಸುವುದರ ಜೊತೆ ಜೊತೆಗೆ ಸಾರ್ವಜನಿಕವಾಗಿ ಆಯಾ ಬಡಾವಣೆಗಳಲ್ಲಿ ಗಣಪತಿಯ ದೊಡ್ಡ ದೊಡ್ಡ ಮೂರ್ತಿಗಳನ್ನು ಕುಳ್ಳಿರಿಸಿ ಹತ್ತೂ ದಿನಗಳು ವಿಶೇಷ ಪೂಜೆಯನ್ನು ಕೈಗೊಳ್ಳುವರು.

ಅಂತೆಯೇ ನಮ್ಮ ಕ್ವಾರ್ಟರ್ಸಿನಲ್ಲಿಯೂ ದೊಡ್ಡದಾದ ಗಣಪತಿಯನ್ನು ಕುಳ್ಳಿರಿಸಿ ಪೂಜೆಗೈಯುವರು. ಈ ವರ್ಷ ನಮ್ಮ ಕಾಲೋನಿಗೆ ಮತ್ತೆ ಗಣಪತಿ ಬರುತ್ತಿದ್ದಾನೆ. ಅವನನ್ನು ಎದುರುಗೊಳ್ಳಲು ಎಷ್ಟೆಲ್ಲಾ ಸಿದ್ಧತೆಗಳು ನಡೆಯುತ್ತಿವೆ. ೨೫೦ಕ್ಕೂ ಹೆಚ್ಚಿನ ಮನೆಯವರೆಲ್ಲರೂ ಒಂದು ಕುಟುಂಬದವರಂತೆ ವರ್ತಿಸುತ್ತಾ ೧೦ ದಿನಗಳವರೆವಿಗೆ ಗಣಪತಿಯನ್ನು ಪೂಜಿಸುವರು. ೧೯೮೫ರಲ್ಲಿ ರಿಸರ್ವ್ ಬ್ಯಾಂಕ್ ಆಫೀಸರ್ ಕಾಲೋನಿಯು ಗೋರೆಗಾಂವಿನ ಗೋಕುಲಧಾಮದಲ್ಲಿ ಪ್ರಾರಂಭವಾಯಿತು. ಮೊದಲ ವರ್ಷದಿಂದಲೇ ಗಣಪತಿಯನ್ನು ಕುಳ್ಳಿರಿಸುತ್ತಿದ್ದಾರೆ. ಆಗ ಚೆನ್ನೈನಿಂದ ವರ್ಗವಾಗಿ ಬಂದಿದ್ದ ಕೆಲವು ಉತ್ಸಾಹ ವೈದಿಕ ಸಂಪ್ರದಾಯಸ್ಥ ಗೆಳೆಯರ ಬಳಗ ಈ ಉತ್ಸವವನ್ನು ಪ್ರಾರಂಭಿಸಿತು. ಈ ಸಲ ೨೧ನೆಯ ಗಣಪತಿಯು ಬರುತ್ತಿದ್ದಾನೆ. ಪ್ರತಿವರ್ಷವೂ ಹಬ್ಬಕ್ಕೆ ಒಂದು ತಿಂಗಳ ಮುಂಚಿತವಾಗಿ ದೇಣಿಗೆ ಸ್ವೀಕಾರ ಮತ್ತು ಉತ್ಸವದ ಆಚರಣೆಗೆ ಸಕಲ ಸಿದ್ಧತೆಗಳ ಕೆಲಸ ಪ್ರಾರಂಭಿಸುತ್ತಾರೆ. ಮೊದಲೇ ನಿಗದಿಸಿದಂತೆ ಒಂದು ವರ್ಷದ ಗಣಪತಿಯ ದರವನ್ನು ಒಬ್ಬರು ಭರಿಸುತ್ತಾರೆ. ೨೫ನೆಯ ವರ್ಷಕ್ಕೆ ವಿಜೃಂಭಣೆಯ ಉತ್ಸವ ಆಚರಿಸುವ ನೆವದಿಂದ ೨೪ ನೆಯ ವರ್ಷದ ಗಣಪತಿಯವರೆವಿಗೆ ಯಾರು ಯಾರು ದರವನ್ನು ಭರಿಸುವುದೆಂದು ಈಗಾಗಲೇ ನಿರ್ಧಾರಿತವಾಗಿದೆ. ಸಾಮಾನ್ಯವಾಗಿ ೫ ಅಡಿ ಎತ್ತರವಿರುವ ಈ ಗಣಪತಿಗೆ ಕೊಡಬೇಕಿರುವ ದರ ೫,೦೦೦ ರೂಪಾಯಿಗಳು (ವರ್ಷ ವರ್ಷಕ್ಕೆ ಅದರ ದರ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಿರುತ್ತದೆ). ಈ ವರ್ಷದ ದರ ೫,೦೧೧ ರೂಪಾಯಿಗಳಾಗಿದೆ. ಇಲ್ಲಿಯ ವಾಡಿಕೆಯ ಪ್ರಕಾರ ಗಣಪತಿಯನ್ನು ಹಬ್ಬದ ದಿನದಂದೇ ತಯಾರಕರಿಂದ ಕೊಂಡು ತರುವುದರಿಂದ ಮತ್ತು ಈ ವರ್ಷ ಗಣಪತಿಯ ಬೆಲೆ ತುಟ್ಟಿಯಾಗುವುದೆಂಬ ವದಂತಿಗಳ ಪ್ರಕಾರ ದರ ಸ್ವಲ್ಪ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹಬ್ಬದ ದಿನ ಬೆಳಗಿನ ಜಾವದಲ್ಲಿ ತಯಾರಕರಿಂದ ಗಣಪತಿಯ ಮೂರ್ತಿಯನ್ನು ಕೊಂಡು ಲಾರಿಯ ಮೂಲಕ ಕಾಲೋನಿಗೆ ತರುವರು. ಕಾಲೋನಿಯ ಮಧ್ಯ ಭಾಗದಲ್ಲಿರುವ ಪಾರ್ಕಿನ ಮುಂಭಾಗದ ಮುಕ್ತ ಸಭಾಂಗಣದಲ್ಲಿರುವ ಸ್ಟೇಜಿನ ಮೇಲೆ ಮೂರ್ತಿಯನ್ನಿರಿಸುವರು. ಹತ್ತೂ ದಿನಗಳ ಬೆಳಗ್ಗೆ ಮತ್ತು ಸಂಜೆಯ ಪೂಜೆ ಮತ್ತಿತರೇ ಕಾರ್ಯಕ್ರಮಗಳನ್ನು ವೀಕ್ಷಿಸಲು ದೊಡ್ಡ ಚಪ್ಪರವನ್ನು ಹಾಕಿ, ಕುರ್ಚಿಗಳನ್ನು ಹಾಕುವರು. ಮನೆಗಳಲ್ಲಿ ಗಣಪತಿಯನ್ನು ಇಡುವವರು ಪೂಜೆಯನ್ನು ಮುಗಿಸಿ ಈ ಬೃಹತ್ ಮೂರ್ತಿಯ ಪೂಜೆಗೆ ಎಲ್ಲರೂ ಸೇರುವರು. ಮನೆಗಳಿಂದ ಪ್ರಸಾದವನ್ನೂ ತಂದು ನೈವೇದ್ಯಕ್ಕರ್ಪಿಸುವರು. ಪೂಜೆ ನೈವೇದ್ಯಗಳಾದ ಬಳಿಕೆ ನೆರೆದ ಎಲ್ಲರಿಗೂ ಅದನ್ನು ವಿತರಿಸುವರು. ಸುತ್ತ ಮುತ್ತಲಿರುವ ಭಾರತ್ ಪೆಟ್ರೋಲಿಯಂ, ಓಎನ್‍ಜಿಸಿ, ಹಿಂದುಸ್ತಾನ್ ಪೆಟ್ರೋಲಿಯಂ ಕಾಲೋನಿಗಳ ನಿವಾಸಿಗಳಲ್ಲದೇ ಖಾಸಗೀ ನಿವಾಸ ಸಂಕುಲವಾದ ಲಕ್ಷಚಂಡಿಯ ನಿವಾಸಿಗಳೂ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವರು. ಈ ಪ್ರದೇಶದಲ್ಲಿ ಹಾಲಿನ ವಿತರಕರು, ನಿತ್ಯಬಳಕೆಯ ವಸ್ತುಗಳ ವಿತರಕರು, ಅಂಗಡಿಯವರು ಮತ್ತಿತರು ದೇಣಿಗೆಯನ್ನೂ ಕೊಡುವರು. ಕಾಲೋನಿಯಲ್ಲಿರುವ ನಿವಾಸಿಗಳೆಲ್ಲರೂ ದೇಣಿಗೆಯನ್ನು ಕೊಡುವುದಲ್ಲದೇ, ಪ್ರತಿನಿತ್ಯದ ಪೂಜೆಗೆ ಬೇಕಿರುವ ಹೂವು, ತೆಂಗಿನಕಾಯಿ ಮತ್ತು ಪ್ರಸಾದ ವಿತರಣೆಗೆ ತಿನಿಸುಗಳನ್ನೂ ತಂದಿಡುವರು. ಅವಶ್ಯಕತೆ ಇರುವ ಇನ್ನಿತರೇ ವಸ್ತುಗಳನ್ನು ಸಂಘಟಕರು ಖರೀದಿಸಿ ಪೂಜೆಯನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುವರು.

ಪೂಜೆಯಲ್ಲಿ ಗಣಪತಿಯೊಂದಿಗೆ ಲಲಿತಾ ದೇವಿ, ಅಯ್ಯಪ್ಪ ಸ್ವಾಮಿ, ನವಗ್ರಹ, ಲಕ್ಷ್ಮಿಯಲ್ಲದೇ ನಿವಾಸಿಗಳ ಇಷ್ಟ ದೈವಗಳ ಮೂರ್ತಿ ಅಥವಾ ಚಿತ್ರಪಟಗಳಿಗೂ ಪೂಜೆಯು ಸಲ್ಲುವುದು. ಪ್ರತಿನಿತ್ಯ ಬೆಳಗ್ಗೆ ೬ ಘಂಟೆಗೆ ಲಲಿತಾಸಹಸ್ರನಾಮದೊಂದಿಗೆ ಗಣಪತಿಯ ಪೂಜೆಯಾದರೆ, ಸಂಜೆ ೭ ಘಂಟೆಗೆ ವಿಷ್ಣುಸಹಸ್ರನಾಮ, ರುದ್ರ ನಮಕ ಚಮಕಗಳೊಂದಿಗೆ ಉಪನಿಷತ್ತುಗಳ ಪಾರಾಯಣವಾಗುವುದು. ಶನಿವಾರ ಭಾನುವಾರಗಳಂದು ವಿಶೇಷವಾಗಿ ಅಯ್ಯಪ್ಪ ಭಜನೆ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ, ನವಗ್ರಹ ಹೋಮ, ನಕ್ಷತ್ರ ಹೋಮಗಳನ್ನು ನಡೆಸುವರು. ಈ ಮಧ್ಯೆ ಒಂದು ಭಾನುವಾರ ಬೆಳಗ್ಗೆ ಗಣಹೋಮವನ್ನೂ ನಡೆಸುವರು. ಈ ಪೂಜೆಗಳೆಲ್ಲವೂ ಶ್ರೀ ಸುಬ್ರಹ್ಮಣ್ಯಂ ಅಯ್ಯರ್ ಅವರ ನೇತೃತ್ವದಲ್ಲಿ ನಡೆಯುವುದು. ಶ್ರೀ ಅಯ್ಯರ್ ಅವರು ೫ ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿ ತಿರುವನಂತಪುರಂನಲ್ಲಿ ನೆಲೆಸಿಹರು. ಆದರೂ ಪ್ರತಿ ವರ್ಷದ ಈ ಪೂಜೆಗಳಿಗಾಗಿ ಇಲ್ಲಿಗೆ ಬಂದು ಹತ್ತೂ ದಿನಗಳು ಇಲ್ಲಿಯೇ ಇರುವರು. ನಮ್ಮ ಕಾಲೋನಿಯಲ್ಲಿರುವ ಮಕ್ಕಳಿಗಂತೂ ಈ ಹತ್ತೂ ದಿನಗಳು ಹಬ್ಬವಿದ್ದಂತೆ. ದಿನ ಸಂಜೆ ವಿತರಿಸುವ ಕಾಲೋನಿಯಲ್ಲಿನ ಮನೆಗಳಿಂದ ನೈವೇದ್ಯಕ್ಕಿರಿಸುವ ೧೫-೨೦ ಬಗೆಯ ಪ್ರಸಾದದ ರುಚಿ, ಈ ಹತ್ತೂ ದಿನಗಳ ಅವರುಗಳ ಸಂಜೆಯಾಟಕ್ಕೆ ಕಡಿವಾಣ ಹಾಕಿದಂತಿದೆ.

ಮೊದಲು ಉತ್ಸವವನ್ನು ಪ್ರಾರಂಭಿಸಿದ ಎಷ್ಟೋ ಜನ ನಿವಾಸಿಗಳು ಈಗಾಗಲೇ ಬೇರೆ ಬೇರೆ ಕಡೆಗೆ ವರ್ಗವಾಗಿ ಅಥವಾ ನಿವೃತ್ತರಾಗಿ ಹೋಗಿ ನೆಲೆಸಿರುವರು. ಪ್ರತಿವರ್ಷದ ಗಣಪತಿಯ ಖರ್ಚನ್ನು ಭರಿಸಲು ೨೦೦೯ರವರೆವಿಗೆ ಈಗಾಗಲೇ ನಿವಾಸಿಗಳು ನಿಶ್ಚಿತರಾಗಿದ್ದಾರೆ. ೨೫ನೆಯ ವರ್ಷದ ಗಣಪತಿಗಾಗಿ ಖರ್ಚನ್ನು ಭರಿಸಲು ಸಾಕಷ್ಟು ಜನಗಳು ಮುಂದೆ ಬಂದಿದ್ದರೂ ಯಾರಿಂದಲೂ ಹಣವನ್ನು ಇನ್ನೂ ಸ್ವೀಕರಿಸಿಲ್ಲ. ೨೫ನೆಯ ವರ್ಷಕ್ಕಾಗಿ ವಿಶೇಷ ಉತ್ಸವವನ್ನು ನಡೆಸಲು ಆಯೋಜಿಸಲಾಗುತ್ತಿದೆ. ಕೆಲವರ ಪ್ರಕಾರ ೫ ದೊಡ್ಡ ಗಣಪತಿಗಳನ್ನು ಮತ್ತು ೨೦ ಸಣ್ಣ ಸಣ್ಣ ಗಣಪತಿಗಳನ್ನು ಇಡುವುದೆಂದು ಆಲೋಚನೆಯಾಗಿದ್ದರೆ, ಇನ್ನು ಕೆಲವರ ಪ್ರಕಾರ ೨೫ ದೊಡ್ಡ ದೊಡ್ಡ ಗಣಪತಿಗಳನ್ನು ಇಡುವುದೆಂದು ಯೋಚಿಸಲಾಗುತ್ತಿದೆ. ಇದಕ್ಕಾಗಿ ಒಂದು ಪ್ರತ್ಯೇಕ ಕಮಿಟಿಯನ್ನು ಮಾಡುವತ್ತ ಕಾರ್ಯಗಳು ನಡೆಯುತ್ತಿವೆ. ಆ ಸಮಯದಲ್ಲಿ ಇಲ್ಲಿಯವರೆವಿಗೆ ನಿವಾಸಿಗಳಾಗಿದ್ದ ಎಲ್ಲರನ್ನೂ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ವಿಶೇಷ ವ್ಯವಸ್ಥೆಯನ್ನೂ ಮಾಡಲು ಆಲೋಚಿಸಲಾಗುತ್ತಿದೆ.

ಮೊದಲ ಉತ್ಸವದಿಂದ ೨೧ ವರ್ಷಗಳವರೆವಿಗೆ ಅನೂಚಾನವಾಗಿ ಈ ಕೆಲಸಗಳೆಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವರೆಂದರೆ ಶ್ರೀ ತ್ಯಾಗಿ ಮತ್ತು ಶ್ರೀ ದೀಪತ್ ಮಾಥುರ್ ಅವರುಗಳು.

ಜೈ ಗಣೇಶ.

ಬಾಳಿನ ಪಯಣ

ಎಲ್ಲಿಯೋ ಹುಟ್ಟಿ ಬೆಳೆದು ಬಂದಿರುವೆ ನನ್ನ ಬಾಳ ದೋಣಿಯಲಿ
ದೀಪದಂತೆ ಬೆಳಗುತಿರುವೆ ನನ್ನ ಮನೆಯ ಹೊಸ್ತಿಲಲಿ
ಇಬ್ಬರೂ ಕೂಡಿ ಈ ಸಂಸಾರ ಸಾಗರದಲಿ ಈಸುವಾ
ಜೊತೆ ಜೊತೆಯಾಗಿ ಕೈ ಹಿಡಿದು ಬಾಳಿನಲಿ ಜೈಸುವಾ

ನಾನಾಗುವೆ ನಿನಗಾಸರೆಯ ಮಾವಿನ ಮರ
ನೀನಾಗಿರು ನನ್ನ ಜೊತೆಗೂಡುವ ಬೇವಿನ ಮರ
ಮಾವು ಬೇವುಗಳೆರಡನ್ನೂ ಸಮನಾಗಿ ಸೇವಿಸುವಾ
ಸುಖ ದು:ಖ ಸಮನಾಗಿ ಹಂಚಿ ಬಾಳ ದೋಣಿ ಸಾಗಿಸುವಾ

ಈ ಸಂಸಾರವೆಂಬ ಸಾಗರದಲಿ ನಮ್ಮ ದೋಣಿ ತೇಲಲಿ
ಎಷ್ಟೇ ಕಷ್ಟ ನಷ್ಟಗಳು ಎದುರಾದರೂ ಮುಳುಗದಿರಲಿ

ನೂರೆಂಟು ಅಲೆಗಳ ಭೋರ್ಗರೆತ ತಡೆದು ಮುನ್ನುಗ್ಗೋಣ
ಎದುರಾಗುವ ಕಾರ್ಪಣ್ಯಗಳ ಬಗ್ಗು ಬಡಿಯೋಣ

ಈ ನನ್ನ ಜೀವನಸಾಗರದ ಪಯಣದಲಿ ನೀನಾಗು ಸಾಥಿ
ನಾ ನಿನ್ನೊಡನೆ ಎದುರಿಸುವೆ ಎಲ್ಲ ತರಹದ ಭೀತಿ
ಮುಂದೆ ಈ ಸಾಗರಕೆ ಎರೆಯೋಣ ಮಕ್ಕಳೆಮ್ಬ ಹನಿಯ ಋಣ
ಪುನರಾವರ್ತಿತವಾಗಿ ಅವರಿಂದ ಸಾಗಲಿ ಈ ಬಾಳಿನ ಪಯಣ

ಸುರೇಖಾ ಹು.ಹ

ಚಿರಂಜೀವಿ ಸುರೇಖಾಗೆ ಹುಟ್ಟಿದ ಹಬ್ಬದ ಶುಭಾಶಯಗಳು.  ನೂರ್ಕಾಲ ಬಾಳು ತಾಯಿ, ನಿನ್ನನ್ನು ನಂಬಿದವರೆಲ್ಲರನ್ನೂ ಬದುಕಿಸು.ಈ ಶುಭ ಸಂದರ್ಭದಲ್ಲಿ ನನ್ನ ಕಡೆಯಿಂದೊಂದು ಪುಟ್ಟ ಕಾಣಿಕೆ

ದುರ್ನಾತ ಬೀರುವವರಿಗಿವಳು ಜ್ವಾಲಾಮುಖಿ
ಬಂಧು ಬಾಂಧವರಿಗೆಲ್ಲರಿಗೂ ಹಸನ್ಮುಖಿ
ಲೋಕ ಕಲ್ಯಾಣಕೆ ಹುಟ್ಟಿರುವ ಸುಮಂಗಲಿ
ಕನ್ನಡ ಶತ್ರುಗಳ ಜನ್ಮ ಜಾಲಾಡಲಿ

ಪಕ್ಕದ ಮನೆಯಲಿ ಹುಟ್ಟಿದೀ ಕೂಸು
ಎಲ್ಲರನೂ ತನ್ನವರೆಂದು ತಿಳಿಯುವ ಮುಗ್ಧೆ
ಕನ್ನಡಕಾಗಿ ದುಡಿಯುವಳು ಅಹರ್ನಿಶಿ

ನಂಬಿದವರ ಮಗುವಿನಂತೆ ಕಾಪಾಡುವ ಮಾನುಷೀ

ಅಪ್ಪ ಅಮ್ಮರಿಗೆ ಮುದ್ದಿನ ಸುಕುಮಾರಿ
ವಕ್ರ ದೃಷ್ಟಿಯವರುಗಳಿಗೆ ಹೆಮ್ಮಾರಿ
ವಿದ್ಯಾಮಾತೆಯ ಕರುಣೆ ಹೊಂದಿದ ಅಭಿಯಂತೆ
ಕನ್ನಡ ನಾಡಿಗೆ ಕಿರೀಟವಾಗುವ ಸಿರಿವಂತೆ

ಹಾಡಿ ಹಾಡಿ ಎಲ್ಲರ ಮನ ತಣಿಸುವಳು
ಸ್ನೇಹ ಬೆಳೆಸಿ ಎಲ್ಲರ ಮನದಲಿ ನೆಲಸುವಳು
ಕಾಲಿಡುವ ಮನೆಯೆಂದೂ ಕಾಣುವುದು ಸಮೃದ್ಧಿ
ನಿಸ್ಸಂದೇಹ ಇವಳು ಹೊಂದುವಳು ಅಭಿವೃದ್ಧಿ

ಸುರೇಖಾ ಅನನ್ಯ ಕನ್ನಡ ಅಭಿಮಾನ,
ಎಲ್ಲ ತರಹದವರನ್ನೂ ಸಲಹುವ
ಸಮಾಧಾನಿಸುವ ಶಕ್ತಿ ಹೊಂದಿದ್ದು
ಇನ್ನೂ ದುಪ್ಪಟ್ಟು ಮುಪ್ಪಟ್ಟು ಉಲ್ಬಣಿಸಲಿ.

ಈ ದಿಸೆಯಲ್ಲಿ ಆ ಸರ್ವಶಕ್ತನಲಿ ನನ್ನ
ಇಂದಿನ ಪ್ರಾರ್ಥನೆ – ಸುಖ ದು:ಖಗಳನು ಸಮನಾಗಿ ಸ್ವೀಕರಿಸುವ ಶಕ್ತಿ ಕೊಡು ತಂದೆ

ಪವಾಡಗಳು

ಜನಮರುಳೋ ಜಾತ್ರೆ ಮರುಳೋ!  ಸಮುದ್ರದ ನೀರು ಸಿಹಿ!  ಕಲ್ಲಿನ ಗಣಪತಿ ಹಾಲು ಕುಡಿಯುತ್ತಿದ್ದಾನೆ!  ಕಲಿಯುಗ ಸ್ವಾಮಿ, ಕಲಿಯುಗ.  ಇಲ್ಲಿ ಏನು ಬೇಕಾದರೂ ನಡೆಯುವುದು.  ನಡೆಯಲಾಗದ್ದನ್ನು ನಡೆಸುವರು.  ಕೆಳಗೆ ನೋಡೆಂದು ಕೈಲಾಸ ತೋರುವರು.  ಮೇಲೆ ಪಾತಾಳ ನೋಡೆಂಬುವರು.  ಮರೀಚಿಕೆಯಲ್ಲಿ ಮೀನು ಹಿಡಿಯುವರು.  ಎಲ್ಲ ಕೃತ್ರಿಮತೆಯನ್ನೂ ಒಳಿತು ಕೆಡಕುಗಳನ್ನು ವಿವೇಚಿಸದೇ ಸುಲಭದಲ್ಲಿ ಕೈಗೊಳ್ಳುವರು. 

ಹಿಂದೊಮ್ಮೆ ದೇಶದಲ್ಲೆಲ್ಲಾ ಗಣಪತಿ ವಿಗ್ರಹ ಹಾಲು ಕುಡಿಯಲು ತೊಡಗಿತು.  ಬೆಳೆಯುವ ಮಕ್ಕಳಿಗೆಂದು ಮೀಸಲಾದ ಹಾಲನ್ನೂ ನಿರಾತ್ಮಕ ಕಲ್ಲು, ಲೋಹದ ವಿಗ್ರಹಗಳಿಗೆ ಸುರಿದರು.   ಈ ಲೋಕದಲ್ಲಿ ಎಲ್ಲರೂ ಬುದ್ಧಿವಂತರೇ.  ಅವರ ಕೆಲಸಗಳಿಗೆ ಪ್ರತಿಕ್ರಿಯಿಸಿದರೆ, ಅದು ಅವರಿಗೆ ಕೆಡುಕೆನಿಸಿದರೆ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಿಬಿಡುವರು.  ಅಲ್ಲ ಎಲ್ಲಾದರೂ ಕಲ್ಲು ಬಂಡೆ ಹಾಲು ಕುಡಿಯಬಲ್ಲದೇ.  ಮಂತ್ರದಿಂದ ಮಾವಿನಕಾಯಿ ಉದುರಬಲ್ಲುದೇ?  ಈ ಸಮಯವನ್ನು ಉಪಯೋಗಿಸಿಕೊಂಡು ರಾತ್ರೋರಾತ್ರಿ ಹಣ ಮಾಡಿದ ಧೀರರು ಬಹಳ.  ಎಷ್ಟೋ ಜನಗಳು ಧರ್ಮಭೀರುಗಳೂ, ದೇವರ ಏಜೆಂಟರುಗಳೂ ಆದರು.  ವಿಜ್ಞಾನ ತಿಳಿದವರು ಈ ವಿಷಯವನ್ನು ಪರಾಮರ್ಶಿಸಿ, ಜಗತ್ತಿಗೆ ಕನ್ನಡಿ ತೋರಿದ ಮೇಲೆ, ವಿಗ್ರಹ ಹಾಲು ಕುಡಿಯುವಂತೆ ಮಾಡಿದವರೂ ಮತ್ತು ಹಾಲು ಕುಡಿಸಿದವರು ನಾಪತ್ತೆ. 

ಇಂತಹದ್ದೇ ಇನ್ನೊಂದು ಪವಾಡವನ್ನು ಈಗ ಜನಗಳ ಮುಂದಿಟ್ಟಿದ್ದಾರೆ.  ಮೊನ್ನೆ ಶುಕ್ರವಾರ ಮಧ್ಯರಾತ್ರಿಯಲ್ಲಿ (೧೮/೦೮/೨೦೦೬) ಮುಂಬಯಿಯ ಒಂದು ಬಡಾವಣೆಯಾದ ಮಾಹಿಮ್ ಪ್ರದೇಶದ ಸಮುದ್ರದಲ್ಲಿಯ ನೀರು ಉಪ್ಪಾಗಿರದೇ ಸಿಹಿಯಾಗಿದೆ ಎಂದು ಸುದ್ದಿ ಹಬ್ಬಿತು.  ಆ ಪ್ರದೇಶದ ಹತ್ತಿರದಲ್ಲೇ ಇದ್ದ ಒಂದು ಧರ್ಮ ಸ್ಥಳದವರು ಇದನ್ನು ಭಗವಂತನ ಪವಾಡವೆಂದು ಘೋಷಿಸಹತ್ತಿದರು.  ಸುತ್ತ ಮುತ್ತಲಿನ ಪ್ರದೇಶದ ಜನಗಳೆಲ್ಲರೂ ಕೈಗೆ ಸಿಕ್ಕಿದ ಪಾತ್ರೆ, ಖಾಲಿ ಬಾಟಲು, ಕ್ಯಾನ್, ಟಿನ್‍ಗಳನ್ನು ತಂದು ನೀರು ತುಂಬಿಕೊಂಡು ಹೋಗುತ್ತಿದ್ದರು.  ಕೆಲವರಂತೂ ಬಿಸ್ಲೇರಿ ಬಾಟಲನ್ನು ಕೊಂಡು ತಂದು ಅದರಲ್ಲಿಯ ನೀರನ್ನು ಹೊರ ಸುರಿದು, ಈ ಸಮುದ್ರದ ನೀರನ್ನು ತುಂಬಿಕೊಳ್ಳುತ್ತಿದ್ದರು.  ನೆರೆದ ಸಾವಿರಾರು ಮಂದಿ ಜನಗಳು ಅಲ್ಲಿಯೇ ನೀರು ಕುಡಿದರು, ಪವಿತ್ರ ಜಲಸ್ಥಾನವೆಂದು ಸ್ನಾನವನ್ನೂ ಮಾಡಿದರು.  ಅಲ್ಲಿಯೇ ವಿಶೇಷ ನಮಾಜನ್ನೂ ಮಾಡಿದರು.  ಸುದ್ದಿ ಹಬ್ಬಿ ಆ ಸ್ಥಳವೊಂದು ವಿಶೇಷ ಪವಿತ್ರಾ ಸ್ಥಳವಾಗಹತ್ತಿತು.  ಜನಗಳನ್ನು ನಿಯಂತ್ರಿಸಲು ಪೊಲೀಸರು ಬರಬೇಕಾಯಿತು.  ಲಕ್ಷಾಂತರ ಜನಗಳು ಜಮಾಯಿಸಿದ ಕಡೆ ನೀರು ತುಂಬಲು ಸಾಧ್ಯವಾಗದವರು, ಈ ಮೊದಲೇ ನೀರನ್ನು ತಂದವರ ಹತ್ತಿರ ಪವಿತ್ರ ತೀರ್ಥವೆಂದು ಸ್ವಲ್ಪ ಪಡೆದು, ಆ ನೀರು ಸಿಹಿಯೆಂದು ನಿಷ್ಕರ್ಶಿಸಿ, ಅವರಿಂದಲೇ ಬಾಟಲು, ಪಾತ್ರೆಗಟ್ಟಲೆ ನೀರನ್ನು ಕೊಂಡರು.  ಬೆಳಗಾಗುವವರೆವಿಗೆ ನಿದ್ರೆ ಮಾಡುತ್ತಿದ್ದ (ಯಥಾಪ್ರಕಾರದ ಸನ್ನಿವೇಶ) ಮುನಿಸಿಪಾಲಿಟಿಯವರು ತದನಂತರ ಬಂದು, ‘ಈ ನೀರನ್ನು ಪರೀಕ್ಷೆಗೆ ಒಳಪಡಿಸುತ್ತಿರುವೆವು, ಅಲ್ಲಿಯವರೆವಿಗೆ ಯಾರೂ ಕುಡಿಯಬಾರದು’ ಎಂದು ಎಚ್ಚರಿಕೆಯನ್ನು ಘೋಷಿಸಿದರು.  ಆರೋಗ್ಯ ಇಲಾಖೆಯವರೂ ಬಂದು ಅಲ್ಲಿ ಮೊಕ್ಕಾಂ ಹೂಡಿದರು.  (ಅವರಲ್ಲಿಯೂ ಕೆಲವರು ನೀರು ತುಂಬಿಕೊಂಡರೆಂಬುದು ಬೇರೆ ಮಾತು).  ಸುದ್ದಿ ಮಾಧ್ಯಮಗಳು ಅನವರತ ಈ ಸುದ್ದಿಯನ್ನು ಬೀರುತ್ತಿದ್ದರು. ನಂತರ ಪರೀಕ್ಷಿಸಿದ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿತು.  ಅಷ್ಟು ಹೊತ್ತಿಗಾಗಲೇ ಧರ್ಮಭೀರುಗಳು ಕೆಲಸ ಮಾಡಿಯಾಗಿತ್ತು.  ಸರಕಾರದ ಈ ಕಿವಿಮಾತು ಯಾರ ಕಿವಿಯನ್ನೂ  ಮುಟ್ಟಲಿಲ್ಲ ಅನಾರೋಗ್ಯದ ಭೀತಿ ಅವರಿಗೆ ತಟ್ಟಲಿಲ್ಲ.  ವಿಜ್ಞಾನಿಗಳೂ ಕೂಡ ಈ ನೀರು ಕಲುಷಿತವಾಗಿದೆ, ಕುಡಿಯಬಾರದೆಂದು ಹೇಳಿದರು.  ಇದಾಗಿದ್ದಿಷ್ಟೇ.  ಈ ವರ್ಷ ಎಲ್ಲೆಡೆ ಮಳೆ ಹೆಚ್ಚಾಗಿ, ಮಳೆಯ ನೀರು ಸಮುದ್ರಕ್ಕೆ ಹೊಕ್ಕಿ, ಸಮುದ್ರದ ನೀರಿನ ಲವಣಾಂಶ ಸ್ವಲ್ಪ ಕಡಿಮೆಯಾಗಿತ್ತು.  ಅದೂ ಅಲ್ಲದೇ ಸಮುದ್ರಕ್ಕೆ ಸೇರಿದ ಮುಂಬಯಿ ಮಹಾನಗರಿಯ ಗಲೀಜು ನೀರು ಇದರೊಂದಿಗೆ ಮಿಲಿತವಾಗಿ, ಸಮುದ್ರದ ಉಪ್ಪುನೀರಿಗೆ ವಿಭಿನ್ನ ರುಚಿಯನ್ನು ಒದಗಿಸಿತು.  ಇನ್ನು ಸ್ವಲ್ಪ ಹೊತ್ತು, ಸರಕಾರದವರು (ಮುನಿಸಿಪಾಲಿಟಿ) ಅಥವಾ ವಿಜ್ಞಾನಿಗಳು ಸುಮ್ಮನಿದ್ದರೆ, ತೀರ್ಥ ಜೊತೆಗೆ ಪ್ರಸಾದವನ್ನೂ ಈ ಧರ್ಮಭೀರುಗಳು ಕರುಣಿಸಿ, ಅಸಂಖ್ಯ ಮುಗ್ಧ ಜನಗಳಿಗೆ ಪರಮಾತ್ಮನ ಸ್ವರೂಪವನ್ನು ತೋರಿಸಿಬಿಡುತ್ತಿದ್ದರೇನೋ? 

ವಿಷಯವನ್ನು ವಿವೇಚಿಸಿದೇ, ಈ ಅಂಧಶ್ರದ್ಧೆಯನ್ನು ಜಗಜ್ಜಾಹೀರು ಮಾಡಿಸುವುದೇ ಈ ದೇಶದ ವಿಶೇಷತೆಯಲ್ಲವೇ?  ಸ್ವಾಮೀಜಿಗಳು ಗ್ಯಾರಂಟಿ ಕಾರ್ಡ್ ಇಲ್ಲದ ಹೆಚ್.ಎಮ್.ಟಿ ವಾಚನ್ನು ಕರುಣಿಸಬಲ್ಲರು, ಬರಿಗೈನಿಂದ ವಿಭೂತಿಯನ್ನು ತರಿಸಿ ಮುಗ್ದಜನಗಳಿಗೆ ಮಂಕು ಬೂದಿ ಚೆಲ್ಲಬಲ್ಲರು.  ಇವರ ಹಿಂದೆ ಅಸಂಖ್ಯಾತ ಶಕ್ತಿಗಳು ಸೇರಿ, ತಮ್ಮ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳಬಲ್ಲರು.  ಇಂತಹ ಕೃತ್ಯವನ್ನು ಪ್ರಶ್ನಿಸಿದ, ಡಾ|| ಕೊವೂರ್ ಅಥವಾ ನರಸಿಂಹಯ್ಯನವರಂತಹ ವಿಜ್ಞಾನಿಗಳನ್ನು ಬಲಿಪಶುವನ್ನಾಗಿ ಮಾಡುವರು.

ಹೇಳೋರು ಹೆಡ್ಡರಾದರೆ ಕೇಳೋರು ಕಿವುಡರೇ!  ಇನ್ನೂ ಅಂಧ ಶ್ರದ್ಧೆಯಲ್ಲಿಯೇ ಮುಳುಗಿದ್ದಾರಾ?  ರಾಜಕೀಯ ಶಕ್ತಿಗಳು, ಧಾರ್ಮಿಕ ಸಂಸ್ಥೆಗಳು ಜನಗಳಲ್ಲಿ ಸತ್ಯರೂಪವನ್ನು ತೋರಿಸುವುದರ ಬದಲಾಗಿ, ಇಂತಹ ಊಹಾಪೋಹಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸರಿಯೇ?  ಅದೇನು ಒಳ್ಳೆಯ ನೀರೇ?  ಮೋರಿ ನೀರು, ಮಹಾನಗರದ ಗಲೀಜನ್ನೆಲ್ಲಾ ತುಂಬಿರುವ ನೀರು ಕುಡಿಯಲು ಯೋಗ್ಯವಾದ ಸಿಹಿನೀರಾಗಲು ಸಾಧ್ಯವೇ?  ಜನಗಳಿಗೆ ಇದನ್ನು ತಿಳಿಯಲು ಸ್ವಲ್ಪವೂ ವಿವೇಚನೆ ಬರಬಾರದೇ?

ಮೇರಾ ಭಾರತ್ ಮಹಾನ್.

ಆತ್ಮ ಚಿರಾಯು

ಆತ್ಮ ಚಿರಾಯು
ಅದಕಿಲ್ಲ ಸಾವು ನೋವಿನ ಅಂಟು
ಆತ್ಮ ಅಪರಂಜಿ
ಲವಲೇಶ ಕಲುಷಿತವಲ್ಲದ ಚಿನ್ನ

ಕಬ್ಬಿಣಕ್ಕೆ ತಗುಲುವುದು ತುಕ್ಕು
ದೇಹಕೆ ಬರುವುದು ಸುಕ್ಕು
ಜಡ ವಸ್ತುಗಳೂ ಕುಗ್ಗುವುದು
ಹಿಗ್ಗು ಕುಗ್ಗು ಅಗೋಚರವಿದು

ಪಂಚಭೂತಗಳಿಗಿಲ್ಲ ರೂಪ
ಆದರೂ ತೋರಿಸುವುದು ಪ್ರತಾಪ
ಗಿಂಡಿ ಹೇಗಿದ್ದರೇನಂತೆ
ಉಳಿಯುವುದು ಆಕಾರದಂತೆ

ಪಂಚಭೂತಗಳಲ್ಲೂ ಆತ್ಮ
ತಿಳಿ ಅದರಲಿರುವುದೇ ಪರಮಾತ್ಮ
ಈ ಜೀವಾತ್ಮಕೆ ಹೊರತಾದುದೆಲ್ಲವೂ ಪರಮಾತ್ಮ
ಅದನು ಅರಿಯುವವನೇ ಮಹಾತ್ಮ

ಶ್ರೀ ಕೃಷ್ಣ ಜನ್ಮಾಷ್ಟಮಿ

ಚಾಂದ್ರಮಾನ ಪಂಚಾಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು.  ಸೌರಮಾನ ಪಂಚಾಗ ರೀತ್ಯಾ ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು.  ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು.    ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು.  ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ.  ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು, ಪೂಜಿಸುವರು.  ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು.   ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು.  ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ.  ‘ತಿಥಿತತ್ವ’ ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ – “ಜಯಂತಿ ಯೋಗವು ಒಂದು ದಿವನ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು.  ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು.  ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು.  ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು.  ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ ಆಚರಿಸಬೇಕು.   ಎರಡು ದಿನಗಳಲ್ಲಿಯೂ ಅಷ್ಟಮಿಯಿದ್ದರೆ ಅಥವಾ ಅಷ್ಟಮಿಯು ಎರಡು ದಿನಗಳಲ್ಲಿಯೂ ಅರ್ಧರಾತ್ರಿಯಲ್ಲಿ ಇಲ್ಲದಿದ್ದರೆ ಆಗ ಎರಡನೆಯ ದಿನದಲ್ಲಿ ವ್ರತವನ್ನಾಚರಿಸಬೇಕು.  ತಿಥಿಯೋಗವಿಲ್ಲದಿದ್ದರೂ ಕೇವಲ ರೋಹಿಣೀ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು.   ರೋಹಿಣೀ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೇ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧಾನ್ಯ ಕೊಟ್ಟು ವ್ರತವನ್ನಾಚರಿಸಬೇಕು.

ಅಂದು ಶುದ್ಧವಾಗಿದ್ದು ಬೆಳಗಿನಿಂದ ಸಂಜೆಯವರೆವಿಗೆ ಉಪವಾಸವಿದ್ದು, ಭಕ್ತಿ ಶ್ರದ್ಧೆಗಳಿಂದ ಷೋಡಶಾಂಗ ಪೂಜೆಯನ್ನು ಶ್ರಿ ಕೃಷ್ಣ ಪರಮಾತ್ಮನಿಗೆ ಮಾಡಬೇಕು.  ಇಲ್ಲಿ ಉಪವಾಸವು ಮುಖ್ಯವಾದುದು.  ಉಪವಾಸವೆಂಬುದು ಶರೀರ ಶೋಷಣೆ ಮತ್ತು ಆತ್ಮಪೋಷಣೆಯಾಗಿರುತ್ತದೆ.  ಅಂದು ಸಂಯಮದ ದಿವಸ.  ಪರಮಾತ್ಮನ ಸಹವಾಸದಲ್ಲಿಯೇ ಇದ್ದು, ಅದಕ್ಕೆ ಸಹಾಯಕವಾಗುವಂತೆ ಇಂದ್ರಿಯಗಳಿಗೆ ಭೌತಿಕವಾಗಿ ಆಹಾರವನ್ನು ಕೊಡದೇ, ಪೂಜೆ ಮುಗಿಯುವವರೆವಿಗೆ ಉಪವಾಸವಿದ್ದು, ತದನಂತರ ಮಹಾಪ್ರಸಾದವನ್ನು ಸ್ವೀಕರಿಸಬೇಕು.   ಪೂರ್ಣವಾಗಿ ಉಪವಾಸವನ್ನು ಮಾಡಲಾಗದ ಅಶಕ್ತರು ಲಘು ಆಹಾರವನ್ನು ಸೇವಿಸಬಹುದು.  ರಾತ್ರಿಯೆಲ್ಲಾ ಜಾಗರಣೆ ಮಾದಿ ಪರಮಾತ್ಮ ಸ್ಮರಣೆಯನ್ನು ಮಾಡಬೇಕು.  ಜಾಗರಣೆಯ ಸಮಯವನ್ನು ಭಗವಂತನ ಧ್ಯಾನ, ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು.  ದಾನದಕ್ಷಿಣೆಗಳನ್ನು ಯಥಾಶಕ್ತಿ ಸತ್ಪಾತ್ರರಿಗೆ ಕೊಡಬೇಕು.  ಭಗವಂತನ ಪ್ರೀತ್ಯರ್ಥವಾಗಿ ದಾನ ಮಾಡುವುದು ಉತ್ತಮ ಕಲ್ಪವಾದರೆ ಕಾಮ್ಯವಾಗಿ (ಪ್ರತಿಫಲಾರ್ಥವಾಗಿ) ದಾನ ಮಾಡುವುದು ಸಾಮಾನ್ಯಕಲ್ಪ.

ಅಂದು ಭಗವಂತನ ಪೂಜಾಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು.  ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸುವರು.   ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು.  ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುವರು.  ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸುವರು.  ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋದೆ, ಗೋಪಿಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸುವರು.  ಮಂಟಪದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಷೋಡಶಾಂಗ ಪೂಜಾವಿಧಾನದಲ್ಲಿ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು.  ೮ ಬಗೆಯ ಖಾರ ಮತ್ತು ೮ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುವುದು ವಾಡಿಕೆ.  ಈ ಹದಿನಾರು ಬಗೆಯ ತಿನಿಸುಗಳಲ್ಲಿ ಅವಲಕ್ಕಿಯಿಂದ ಮಾಡಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯ.    ಈ ಸಂದರ್ಭದಲ್ಲಿ ವಿಷ್ಣು ಪುರಾಣ,  ಶ್ರೀ ಮದ್ಭಾಗವತವನ್ನು ಪಾರಾಯಣ ಮಾಡುವರು.  ಮಥುರೆಯ ದೇಗುಲದಲ್ಲಿ ಅಂದು ಉತ್ಸವವನ್ನಾಚರಿಸುವರು.  ಇಲ್ಲಿ ನೈವೇದ್ಯಕ್ಕಾಗಿ  ೬೪ ಬಗೆಯ ತಿನಿಸುಗಳನ್ನು ಅರ್ಪಿಸುವರು.  ಇದರಲ್ಲಿ ವಿಶೇಷವಾದ ಒಂದು ತಿನಿಸೆಂದರೆ ಖೋವಾಪೂರಿ.   ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು – ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು.  ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು. 

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ  ಜನ್ಮಾಷ್ಟಮಿ ಎಂದಾಚರಿಸಿ, ಬೀದಿ ಬೀದಿಗಳಲ್ಲಿ ಆಲಾರೇ ಗೋವಿಂದ ಎಂದು ಹಾಡಿಕೊಂಡು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು.  ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು.  ಇದನ್ನು ದಹಿಹಂಡಿ ಎನ್ನುವರು.  ಇದರ ಬಗ್ಗೆಯೇ ಒಂದು ವಿಶೇಷ ಲೇಖನವನ್ನು ಬರೆದು ಪ್ರಕಟವಾಗಿತ್ತು.

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ.  ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ.  ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ.  ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ.  

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ.  ಮಥುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ-ದೇವಕಿ ಕುಟುಂಬದ ಎಂಟನೆಯ ಮಗು ಶ್ರೀ ವಾಸುದೇವ.  ಗೋಕುಲದಲ್ಲಿ ಯಶೋದೆಯ ಮುದ್ದು ಪೋರನಾಗಿ ಬೆಳೆದು, ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ.  ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ.  ಜಾಂಬವಂತನಿಂದ ಸ್ಯಮಂತಕಮಣಿಯನ್ನು ಪಡೆದ ದೈವರೂಪಿ.   ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು.  ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ.  ಇವನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು.  ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ.  ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನೂ, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ. 

ಕೆಲವರ ಪ್ರಕಾರ ಶ್ರೀ ಕೃಷ್ಣನೂ ಮತ್ತು ಏಸು ಕ್ರಿಸ್ತನೂ ಒಬ್ಬನೇ.  ಆದರೆ ಏಸುಕ್ರಿಸ್ತನು ಹುಟ್ಟುವ ಮುನ್ನೂರು ವರ್ಷಗಳ ಮೊದಲೇ ಭಾರತಕ್ಕೆ ಬಂದಿದ್ದ ಮೆಗಸ್ತಾನಿಸ್ ಎಂಬ ಗ್ರೀಕ್ ಚರಿತ್ರೆಕಾರ ಶ್ರೀ ಕೃಷ್ಣನ ಪೂಜೆಯ ಬಗ್ಗೆ ಉಲ್ಲೇಖಿಸಿದ್ದಾನೆ. 

ಬೆಸ್ಟಾದ ಬೀಸ್ಟೀ ಬೆಸ್ಟ್

ಮುಂಬಯಿ ನಗರಿಗೆ ಬೇಕಿರುವ ಎರಡು ಅತ್ಯಾವಶ್ಯಕ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯ ಹೆಸರು ಬೆಸ್ಟ್, ಎಂದರೆ ಬಾಂಬೇ ಎಲೆಕ್ಟ್ರಿಕಲ್ ಸಪ್ಲೈ ಅಂಡ್ ಟ್ರಾನ್ಸ್‍ಪೋರ್ಟ್.   ಇದರಲ್ಲಿ ಎರಡು ವಿಭಾಗಗಳಿವೆ.  ಒಂದು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ನೋಡಿಕೊಂಡರೆ ಇನ್ನೊಂದು ನಗರ ಸಂಚಾರಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದು.  ಎರಡೂ ವ್ಯವಸ್ಥೆಗಳನ್ನು ಸುವ್ಯವಸ್ಥೆಯಾಗಿಟ್ಟಿರುವುದಕ್ಕೆ ಸರಿಯಾಗಿ ಆಂಗ್ಲದಲ್ಲಿ ಇದನ್ನು ಬೆಸ್ಟ್ ಎಂದು ಕರೆಯುವರೇನೋ ತಿಳಿಯದು.

ಈ ನಗರ ಸಂಚಾರದ ಬಸ್ಸುಗಳ ವಿಭಾಗದ ಬಗ್ಗೆ ನನ್ನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬಯಸುವೆ. 

ಒಟ್ಟು ೨೫ ಬಸ್ ಡಿಪೋಗಳಿರುವ ಈ ಸಂಸ್ಥೆಯು ೩೩೫ ರೂಟ್‍ಗಳಲ್ಲಿ ೩,೩೮೦ ಬಸ್ಸುಗಳನ್ನು ಓಡಿಸುತ್ತಿದೆ. 

ತಮಾಷೆಯಾದ ಒಂದು ವಿಷಯವೆಂದರೆ – ಇಲ್ಲಿ ಓಡುವ ರೂಟ್ ನಂ ೧೬೬ ನೇ ಬಸ್ಸು ಹೆಚ್ಚಿನ ಆಸ್ಪತ್ರೆಗಳನ್ನು ಹಾದು ಹೋದರೆ, ರೂಟ್ ನಂ ೧೬೧ ತೈಲಾಗಾರಗಳು ಮತ್ತು ಮುಂಬಯಿ ಜನನಿಬಿಡ ಪೂರ್ವಪ್ರದೇಶದಲ್ಲಿ ಹಾದು ಹೋಗುವುದು.  ಇದೇ ತರಹ ರೂಟ್ ನಂ ೯ ಹೆಚ್ಚಿನ ಶಾಲಾಕಾಲೇಜುಗಳನ್ನು ಹಾಯ್ದುಹೋದರೆ, ರೂಟ್ ನಂ ೧, ೬೬, ಮತ್ತು ೨೦೨ ದಿನದ ೨೪ ಘಂಟೆಗಳೂ ಸೇವಾನಿರತವಾಗಿರುವುದು. 

ಇಂತಹ ಬೆಸ್ಟ್ ಬಸ್ಸುಗಳಲ್ಲಿ ಬಹಳ ಮಹಡಿ ಬಸ್ಸುಗಳಿದ್ದವು (ಡಬಲ್ ಡೆಕರ್).  ಆದರೆ ಈಗ್ಯೆ ೫-೬ ತಿಂಗಳುಗಳಿಂದ ಡಬಲ್ ಡೆಕರ್‍ಗಳು ಮಾಯವಾಗುತ್ತಿವೆ.  ಅದರ ಬದಲಿಗೆ ಹೊಸ ಹೊಸ ಬಸ್ಸುಗಳು ಬಂದಿವೆ.  ಅಂಗವಿಕಲರೂ ಬಹಳ ಸುಲಭದಲ್ಲಿ ಹತ್ತುವಂತೆ ಕೆಳಮಟ್ಟದಲ್ಲಿವೆ.  ಇವುಗಳಲ್ಲಿ ಎಫ್‍ಎಮ್ ಚಾನೆಲ್ ಸಂಗೀತವನ್ನು ಹಾಕುವರು.  ಅದಲ್ಲದೇ ಬಸ್ಸಿನಿಂದಲೇ ದೂರವಾಣಿ ಕರೆಯನ್ನೂ ಮಾಡಬಹುದು.  ಈ ಬಸ್ಸುಗಳಿಗೆ ಇಂಜಿನ್ ಹಿಂಭಾಗದಲ್ಲಿರುವುದು.  ಗ್ಯಾಸ್ ಮೂಲಕ ಓಡಿಸುವ ಬಸ್ಸುಗಳೂ ಬಹಳ ಇವೆ. 

ಕೆಲವು ಬಸ್ಸುಗಳ ನಂಬರ್ ಕೆಂಪು ಬಣ್ಣದ್ದಿದ್ದರೆ ಇನ್ನು ಕೆಲವದ್ದು ಬಿಳಿ ಬಣ್ಣದ್ದಿರುವುದು.  ಬಿಳಿ ಬಣ್ಣದ ಸಂಖ್ಯೆ ಸಾಧಾರಣ ಬಸ್ಸುಗಳದ್ದಾದರೆ, ಕೆಂಪು ಬಣ್ಣಗಳದ್ದು, ವಿಶೇಷ, ನಿಯಮಿತ ಮತ್ತು ಪಾಯಿಂಟ್ ಟು ಪಾಯಿಂಟ್ ಓಡುವ ಬಸ್ಸುಗಳು.    ಕೆಲವು ರೂಟ್‍ಗಳಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನೂ ಓಡಿಸುವರು. 

ಬೇರೆಯ ಊರುಗಳಿಗೆ ಹೋಲಿಸಿದರೆ ಇಲ್ಲಿಯ ಬಸ್ಸುಗಳ ದರ ಬಹಳ ಹೆಚ್ಚಿರುವುದು.  ಅತಿ ಕಡಿಮೆ ದರ ರೂಪಾಯಿ ೪ ಆದರೆ, ದೂರಕ್ಕೆ ತಕ್ಕಂತೆ ೧೬ ರಿಂದ ಇಪ್ಪತ್ತು ರೂಪಾಯಿಗಳವರೆವಿಗೂ ದರವಿರುವುದು.  ಹವಾ ನಿಯಂತ್ರಿತ ಬಸ್ಸುಗಳಲ್ಲಿ ರೂಪಾಯಿ ೩೫ ರಿಂದ ೬೫-೭೦ ರೂಪಾಯಿಗಳವರೆವಿಗೆ ದರವಿರುವುದು. 

ಇತ್ತೀಚೆಗೆ ಬಿಂಡಿ ಬಜಾರಿನಲ್ಲಿ ಒಂದು ಬಸ್ಸು ಒಬ್ಬ ಮುದುಕಿಗೆ ಡಿಕ್ಕಿ ಹೊಡೆದು ಅವಳು ಸಾವನ್ನಪ್ಪಿದಳು.  ಕೆಲವು ದಿನಗಳ ಹಿಂದೆ ಕೊಲಾಬಾದ ಬದ್‍ವಾರ್ ಪಾರ್ಕಿನ ಬಳಿ ಬೆಳಗಿನ ಜಾವ ಹೋಗುತ್ತಿದ್ದ ಬಸ್ಸೊಂದು ಹಾದಿ ತಪ್ಪಿ ಫುಟ್‍ಪಾತ್ ಹತ್ತಿ ರಸ್ತೆಯಲ್ಲಿ ಮಲಗಿದ್ದ ೪ ಜನಗಳ ಕಾಲುಗಳ ಮೇಲೆ ಹಾದು ಹೋಗಿತ್ತು.  ಈ ಸುದ್ದಿಯನ್ನು ಕೇಳಿದ ಕೂಡಲೇ ನನಗೆ ನೆನಪಾದದ್ದು ಶಂಕರನಾಗ್ ಅವರ ಆಕ್ಸಿಡೆಂಟ್ ಚಿತ್ರ. 

ಬಿಟಿಎಸ್‍ಗೂ ಮತ್ತು ಬೆಸ್ಟ್‍ಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆ

« Older entries