my daughter sings!

majority of the functions at our colony are starting with an invocation by my daughter :) – just thought of sharing two of her songs

ಹಿಮನಾಡು

ice

ಯಾಕುಂದೇಂದು ತುಷಾರ ಹಾರ ಧವಳಾ
ಯಾ ಶುಭ್ರ ವಸ್ತ್ರಾನ್ವಿತಾ
ಯಾ ವೀಣಾ ವರದಂಡ ಮಂಡಿತ ಕರಾ
ಯಾ ಶ್ವೇತ ಪದ್ಮಾಸನಾ …

ಕಂಡಲ್ಲೆಲ್ಲಾ ಕಾಣುವುದು ಕಪ್ಪು ಬಿಳುಪು
ಕೆಳಗೆ ಜಾರುತಿಹುದು ಜಾರಿಸುತಿಹುದು ಹಿಮ
ಅಲ್ಲಲ್ಲಿ ಅದರಡಿ ಕಾಣುತಿಹುದು ಕರಿಕಲ್ಲು
ದಿಗಂತದಲಿ ಕಣ್ಮುಚ್ಚಾಲೆ ಆಡುತಿಹುದು ಕಾಮನಬಿಲ್ಲು

ಅಪ್ಪ ಅಮ್ಮ ಅಣ್ಣ ಅಕ್ಕ ತಮ್ಮ ತಂಗಿ
ಎಲ್ಲರೂ ಏರಿಸಿರುವುದು ಕಪ್ಪನೆಯ ಚೊಣ್ಣ ಷರಾಯಿ
ಇವಗೆ ಏರಿಸಿರುವುದು ಕೆಂಪನೆಯ ದಿರಿಸು
ಕೆಲವರಿಗೆ ಮಾತ್ರವಂತೆ ಕೈಗೆ ಗವಸು

ಅಲ್ಲಲ್ಲಿ ಅಬ್ಬೇಪಾರಿಯಾಗಿ ನಿಂತಿಹವು ಬೋಳು ಮರಗಳು
ಎಂದು ನೆಲಕಚ್ಚುವೆನೋ ಎಂಬ ಹೆದರಿಕೆ
ಕಾಲಿಟ್ಟ ಕಡೆ ಜೊರ್ರನೆ ಜಾರುವ ಜಾರಿಕೆ
ಮಜ ಮಾಡಲು ಏಕೆ ಹಿಂಜರಿಕೆ

ದೀಪವಿರದ ಕಂಬಗಳು
ಬೆಳಗಿನ ಹೊತ್ತಿನಲ್ಲೂ ಆವರಿಸಿರುವುದು ಕತ್ತಲು
ಅಲ್ಲಲ್ಲಿ ಕಾಂಬರುವ ನೆಲದಲಿನ ಹೊಂಡಗಳು
ಭೂ ತಾಯಿಯ ಮೊಗದಲಿ ಸಿಡುಬಿನ ಕಲೆಗಳು

ಕುಹಕರದೂ ತಲೆಯ ಕಾಯಲು
ಕುಹಕವರಿಯದ ಛತ್ರಿಗಳು
ಎಲ್ಲಿದ್ದರೇನ್ ಯಾರಾದರೇನ್
ತನು ಬಿಚ್ಚಿ ನಿಲ್ಲುವುದು ಕಾಯಕವಲ್ಲವೇನ್

ಅಲ್ಲಿ ನಿಂತಿರುವುದೊಂದು ಮುರುಕು ಮಂಟಪ
ಯಾರೂ ಹೇಳುವವರಿಲ್ಲ ಅಯ್ಯೋ ಪಾಪ!
ಕೈಯಿಲ್ಲ ತನುವಿಲ್ಲ
ರಕ್ಷಕನಾಗಿರಲು ಕಾಲು ತಲೆ ಎರಡೇ ಸಾಕಲ್ಲ

ಆರ್ತಸ್ವರದಲ್ಲಿ ಕೇಳಿಬರುತಿದೆ
’ಎಮ್ಮ ಪ್ರಾಣ ಸಂಕಟ
ನಿಮಗೆ ಮೋಜಿನ ಕೋಣೆಯಾ?’

ಒಂದು ಗಂಟೆಯ ಕಥೆ

gante

ಕಾಲದ ಪರಿವೆ ಇಲ್ಲದೇ ಮಲಗಿದವರ
ಬಡಿದೆಬ್ಬಿಸುವ ಗಂಟೆ
ತಾನೇ ಮಲಗಿದೆಯೇ?
ಕಾಲವೊಂದಿತ್ತು – ಊರಿಗೊಂದೇ ಗಂಟೆ
ಕೋಟೆ ಬಾಗಿಲಲಿ ಜೊತೆ ಇರುತ್ತಿತ್ತೊಂದು ಹೆಂಟೆ
ಬೋರಜ್ಜಿಯ ಕನಸಿನೊಂದಿಗೆ
ಮರೆಯಾಯಿತು ಆ ಹೆಂಟೆ
ಒಬ್ಬಂಟಿಗನಾಗಿ ಬಿಟ್ಟು ಹೋಗಿತ್ತು

ಮಾದೇಶನ ಮಾಲೀಶು ತಾಲೀಮಿನೊಂದಿಗೆ
ನಡೆದಿತ್ತು ನನ್ನ ಕೈಂಕರ್ಯ
ಅಲಾರಮ್ಮು ಪಟಾಲಮ್ಮುಗಳ ಹಾವಳಿ
ಎಲ್ಲರ ಕೈಗಳಲ್ಲಿ ಬಗೆ ಬಗೆಯ ಗಡಿಯಾರದ ಸರಪಳಿ
ಮಾದೇಶನಿಗೆ ವಯೋಧರ್ಮದ ಬವಳಿ
ಪಿಂಚಣಿ ಇಲ್ಲದ ನಿವೃತ್ತೊ ನನಗೆ ಬಂದ ಬಳುವಳಿ

ಮಾಲಿಕನಿಲ್ಲದೇ ಕಿಲುಬುಗಟ್ಟುತ್ತಿದೆ
ಕೇಳುವವರಿಲ್ಲವೆಂದು ಹಲುಬುತ್ತಿದೆ
ಒಂದು ಕಾಲಕೆ ಗಟ್ಟಿಯಾಗಿ ಹೊಸೆದಿದ್ದ
ಮಜಬೂತವಾಗಿದ್ದ ಹಗ್ಗ
ಉಸಿರಿಲ್ಲದ ಪುಗ್ಗದಂತೆ ಸುರುಟಿಹೋಗುತ್ತಿದೆ
ಎಳೆ ಮಗುವೂ ಕತ್ತರಿಸಬಹುದಂತಾಗುತ್ತಿದೆ

ಎನಗೀಗ ಉಳಿಗಾಲವಿಲ್ಲ
ಕಾಲಕಸಕ್ಕಿಂತ ಕಡೆಯಾಗಿಹೆನಲ್ಲ
ಎನ್ನತ್ತ ಒಂದು ದೃಷ್ಟಿಯೂ ಮೂಡುತ್ತಿಲ್ಲವಲ್ಲ

ಅಗ್ನಿಶಾಮಕ ದಳದಲಿ
ನನಗೂ ಉಂಟು ಭಾಗ
ದೇಗುಲ ಇಗರ್ಜಿ ಮಂದಿರಗಳಲ್ಲಿ
ದಾಸಯ್ಯನ ಜೋಳಿಗೆಯ ಬದಿಯಲ್ಲಿ
ಭಾಗಮ್ಮನ (ಹಸು) ಕೊರಳಿನಲ್ಲಿ
ವಿರಾಜಿಸುತಿಹೆ
ಅಲ್ಲೆಂದು ಬರುವುದೋ ಎನಗೆ
ಕೊನೆಗಾಲ!
ಸವಕಳಿಸುತ್ತಿಹ ನನಗೆಂದು
ದೊರೆವುದು ವಿಶ್ರಾಂತ ಜೀವನ
ಪಿಂಚಣಿ
ಮುಂದೊಮ್ಮೆ ನಾನೂ
ದರ್ಜಿಸುವೆ ಎನ್ನ ಪಳೆಯುಳಿಕೆ

ನಾ ಹೆಚ್ಚೋ ಇವ ಹೆಚ್ಚೋ?!

ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!

ಅಂತರಾಳದ ಅನಿಸಿಕೆ

ನಾ ಬಿರಿದ ಹೂ
ನೀ ಹಸಿದ ದುಂಬಿ
ಎಮ್ಮದೆಲ್ಲಿಗೆಲ್ಲಿಯ ನಂಟು?
ನಮ್ಮಿಬ್ಬರಲಿರುವುದು ವೈರತ್ವವೋ?
ಸ್ನೇಹವೋ?
ಎನ್ನ ರಸವ ಹೀರುವುದು ನಿನ್ನ ಕರ್ಮ
ನಿನ್ನ ಪಾದ ಸ್ಪರ್ಶಕೆ ಹಾತೊರೆವುದು ನನ್ನ ಧರ್ಮ
ಜಗಕೆ ಬೇಕಿಹುದು
ನಾವಿಬ್ಬರು ಕೂಡಿಡುವ ಗಂಟು

ಕಷ್ಟಕಾಲಕೆ ಕೂಡಿಡುವುದು
ನಮ್ಮ ಧರ್ಮ
ಸುಲಭದಲಿ ಅದ ಕಳೆದುಕೊಳ್ಳುವುದೂ
ನಮ್ಮ ಕರ್ಮ
ಪ್ರತಿ ಸಲವೂ ನನ್ನ ನಿನ್ನ
ಸಮುದಾಯವ ಮೋಸಿಸುವರೇ
ಈ ಮಹಾಜನರು
ನಮ್ಮ ಕುಡಿಕೆಯು ಅವರದೇ ಆಸ್ತಿ
ಎಂದು ತಿಳಿದವರು

ಎನ್ನ ಮಕರಂದವೇ ನಿನಗೆ ಆಸರೆ
ನೀ ಮಾಡುವ ಪರಾಗ ಸಂಚಲನೆಗೇ ಎನ್ನ ಕಾತರ
ಎನ್ನ ಸಂತತಿಯ ಬೆಳವಣಿಗೆಯ ನಿನ್ನ ಧರ್ಮ
ಜಗಕೆ ಆಸರೆಯ ನೀಡುವುದೇ ನಮ್ಮೀರ್ವರ ಕರ್ಮ

ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ
ಅಭಿಷೇಕಕೆ ನಿನ್ನದೇ ಮಧುವಿನ ಪರಿಕಾರ
ನಾವಿಬ್ಬರೂ ಕೂಡಿ ಸಾರಬಹುದೇ ಸಮರ
ಆಗಲಿ ಸರಿಯೇ ನಮ್ಮೀರ್ವರ ಹೆಸರು ಅಮರ

ಕೊಡು ನಿನ್ನ ಸಮ್ಮತಿ!
ಮಾಡುವೆ ಮಧುವ ವಿಷದ ಬಟ್ಟಲು
ಮೊನಚು ಕೊಂಡಿಯಿಂದ ಆತನಲಿ ಜಾರಲು
ಕಾಣುವನು ಹಂತಕನು ಕೊನೆ ಗತಿ

ಮಂತ್ರಕ್ಕೆ ಮಾವಿನಕಾಯಿ ಉದುರುವುದೇ?!

೨೪ವರ್ಷಗಳಿಂದ ನಮ್ಮ ಕಾಲೋನಿಯಲ್ಲಿ ೧೦ ದಿನಗಳ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಈಗ್ಯೆ ೫-೬ ವರ್ಷಗಳಿಂದ ಆ ಪೂಜೆಯಲ್ಲಿ ನಾನೂ ಭಾಗಿಯಾಗುತ್ತಿರುವೆ. ಅದೇ ರೀತಿ ಬಂಗಾಳೀ ಮಿತ್ರರು ಒಂದು ದಿನದ ದುರ್ಗಾ ಪೂಜೆಯನ್ನೂ ಮತ್ತು ೩ ದಿನಗಳ ಸರಸ್ವತೀ ಪೂಜೆಯನ್ನೂ (ಜನವರಿ – ಫೆಬ್ರವರಿ ತಿಂಗಳಿನಲ್ಲಿ) ಅದ್ದೂರಿಯಾಗಿ ನಡೆಸುವರು. ಉತ್ಸವದ ಉಲ್ಲಾಸ ಏನೆಂದರೆ, ಹಿರಿಯರಿಗೆ ಭಕ್ತಿಯನ್ನು ತೋರ್ಪಡಿಸುವ ಸಂಭ್ರಮ, ಹೆಂಗಸರಿಗೆ ತಮ್ಮ ಅಡುಗೆಯ ಕೈ ಚಳಕವನ್ನು ತೋರಿಸುವ ಅವಕಾಶ ಮತ್ತು ಮಕ್ಕಳಿಗೆ ಮನೋರಂಜನೆ ಮತ್ತು ರುಚಿಯಾದ ಪ್ರಸಾದವನ್ನು ಸವಿಯುವ ಕ್ಷಣ. ಆದರೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಮಿತ್ರರು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ, ಅವರಿಗೆ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಮನೋಭಾವ ಬಾರದೇ ಇಲ್ಲ. ಹಾಗಾಗಿ ನಾವು ಕೆಲವು ಮಿತ್ರರು, ಅವರುಗಳಿಗೂ ತಮ್ಮ ತಮ್ಮ ಹಬ್ಬ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವಂತೆ ಕೋರುತ್ತಿದ್ದೇವೆ. ಅದಕ್ಕಾಗಿ ಬೇಕಾದ ಎಲ್ಲ ಸಹಾಯವನ್ನೂ ನಾವುಗಳೇ ಮುಂದೆ ನಿಂತು ಮಾಡಿಕೊಡುವೆವು ಎಂದು ಹೇಳಿದರೂ ಅವರಿನ್ನು ಮುಂದೆ ಬಂದಿಲ್ಲ. ಅವರ ಮನಸ್ಸಿನಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಬಾರದಿರಲೆಂಬ, ಈ ದಿಸೆಯಿಂದಾಗಿ ಗಣಪತಿ ಉತ್ಸವ ಒಂದನ್ನು ಬಿಟ್ಟು ಮಿಕ್ಕಾವುದರಲ್ಲೂ ನಾನು ಪಾಲ್ಗೊಳ್ಳುತ್ತಿಲ್ಲ (ಇದು ಕೇವಲ ನನ್ನ ಅನಿಸಿಕೆಯಷ್ಟೆ – ಮುಕ್ತವಾಗಿ ಇದರ ಬಗ್ಗೆ ಯಾರೊಂದಿಗೂ ಹೇಳಿಕೊಂಡಿಲ್ಲ). ಆದರೂ ಅವರುಗಳ ಮನದಲ್ಲಿ ಅಳುಕು ಇದ್ದೇ ಇದೆ. ಅದೆಂದು ಹೋಗುವುದೋ ಏನೋ? ಅದೇ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ದಿನಗಳಂದು ಆ ಮಿತ್ರರುಗಳೂ ಮುಕ್ತವಾಗಿ ನಮ್ಮೊಡನೆ ಬೆರೆತು ಸಂಭ್ರಮದಲ್ಲಿ ಪಾಲ್ಗೊಳ್ಳುವರು.

ಗಣೇಶೋತ್ಸವದಲ್ಲಿ ೧೦ ದಿನಗಳ ಕಾಲ ಸಸ್ವರಯುಕ್ತ ಏಕವಾರ ಶ್ರೀ ರುದ್ರ ಅಭಿಷೇಕ ಮತ್ತು ಉಪನಿಷತ್ ಪಠಣ ಮಾಡುವೆವು. ಈ ಉತ್ಸವದ ರೂವಾರಿ ಎಂದರೆ ೨೦೦೧ರಲ್ಲಿ ಬ್ಯಾಂಕ್ ಸೇವೆಯಿಂದ ನಿವೃತ್ತರಾದ ಶ್ರೀ ಜಿಎಸ್ ಅಯ್ಯರ್ – ಅವರೊಂದಿಗೆ ಸಾಥಿ ನೀಡಲು ಕಾಲೋನಿಯಲ್ಲಿರುವ ಅಧಿಕಾರಿಯೊಬ್ಬರ ಮಾವ (ಪತ್ನಿಯ ತಂದೆ) ಶ್ರೀ ವೆಂಕಟರಾಮನ್ ಸರ್ ಮತ್ತು ಹತ್ತಿರದ ಗೋಕುಲಧಾಮ ದೇಗುಲದಿಂದ ಬರುವ ೩-೪ ವೃದ್ಧರುಗಳು. ೨೦೦೩ರಿಂದ ನಾನು ಇವರುಗಳೊಂದಿಗೆ ಸೇರಿರುವೆ. ಅಯ್ಯರ್ ಸರ್ ಒಬ್ಬರಿಗೆ ವೇದ ಪಾಠ ಚೆನ್ನಾಗಿ ಅಭ್ಯಾಸ ಆಗಿದೆಯೇ ಹೊರತು ಮಿಕ್ಕವರಿಗೆ ಅಷ್ಟಾಗಿ ಸ್ವರ ಜ್ಞಾನವಿಲ್ಲ. ಈ ಸಂದರ್ಭದಲ್ಲಿ ನಾನೇ ಅಯ್ಯರ್ ಅವರಿಗೆ ಸರಿಯಾದ ಜೋಡಿ – ಇದು ಅತಿಶಯೋಕ್ತಿಯಲ್ಲ, ವಸ್ತುಸ್ಥಿತಿಯಷ್ಟೇ. ಆದರೆ ಅವರುಗಳಲ್ಲಿ ಮಡಿವಂತಿಕೆ ತೋರುವುದರಲ್ಲಿ ಮತ್ತು ತಾವುಗಳು ಇತರ ಎಲ್ಲರಿಗಿಂತ ಹೆಚ್ಚಿನವರೆಂಬ ಭಾವನೆ ಮೂಡಿಬಿಟ್ಟಿದೆ.

ಗಣೇಶ ಉತ್ಸವವನ್ನು ಕಾಲೋನಿಯ ಮಧ್ಯ ಭಾಗದಲ್ಲಿರುವ ದೊಡ್ಡ ಅಂಗಳದಲ್ಲಿ ನಡೆಸುವೆವು. ಅದೇ ಸ್ಥಳದಲ್ಲಿಯೇ ಮಕ್ಕಳು ಸಂಜೆಯ ಹೊತ್ತು ವರ್ಷ ಪೂರ್ತಿ ಆಟ ಆಡಿಕೊಳ್ಳುವುದು. ಈ ಉತ್ಸವದ ದೇವರ ಪೂಜೆ ನಡೆಯುತ್ತಿದ್ದಾಗ ಸಂಜೆಯ ಹೊತ್ತಿನಲ್ಲಿ ಗಲಾಟೆ ಮಾಡುತ್ತಾ ಆಟ ಆಡಿಕೊಳ್ಳುತ್ತಿರುವ ಮಕ್ಕಳನ್ನು ಗದರುವರು, ’ಇವರಪ್ಪ ಅಮ್ಮ ಏನು ನಿದ್ದ್ರೆ ಮಾಡ್ತಿದ್ದಾರಾ? ಸ್ವಲ್ಪ ನೋಡಿಕೊಳ್ಳಬಾರದಾ?’ ಎಲ್ಲಿದ್ದಾನೆ ಸ್ವಾಮಿ ದೇವ – ಆ ಮಕ್ಕಳ ಮುಖವನ್ನೊಮ್ಮೆ ನೋಡಿ – ಖಾಲಿ ಸ್ಲೇಟಿದ್ದ ಹಾಗಿದೆ – ಯಾವ ಭಾಷೆಯ ಯಾವ ಅಕ್ಷರವನ್ನು ಬರೆದರೂ ಮೂಡುವುದು – ಗದರಿದರೆ, ಕೇಳ್ತಾರಾ – ಸ್ವಲ್ಪ ಕಾಲ ನಿಮ್ಮ ಮಾತನ್ನು ಕೇಳಬಹುದೇನೋ – ನಂತರ ನಿಮ್ಮ ವಿರುದ್ಧ ರೊಚ್ಚಿಗೇಳೋಲ್ವಾ? ದ್ವೇಷಿಸೋಲ್ವಾ? ಅಷ್ಟಕ್ಕೂ ನಿಮ್ಮ ಮಂತ್ರ, ವಟ ವಟ ಪಠಣ ಅವರಿಗೇನು ಅರ್ಥ ಆಗ್ಬೇಕು. ಒಳ್ಳೆಯ ಮಾತಿನಿಂದ ಹೇಳಿದ್ರೆ ಕೇಳೋದಿಲ್ವೇ?

ಈಗ ನವರಾತ್ರಿಯ ಉತ್ಸವದ ಅಂಗವಾಗಿ (ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು) ಚಂಡೀ ಹೋಮವನ್ನು ನಮ್ಮ ಕಾಲೋನಿಯಲ್ಲಿ ಮಾಡಬೇಕೆಂಬ ಪ್ರಸ್ತಾಪ ಬಂದಿತು. ಈ ವಿಷಯವಾಗಿ ವೆಂಕಟ್ರಾಮನ್ ಸರ್ ಅವರು, ’ನೀವೂ ನಮ್ಮ ಜೊತೆ ಸೇರಿ, ಅಯ್ಯರ್ ಸರ್ ಅವರು ಟ್ರಿವೆಂಡ್ರಮ್‍ಗೆ ಹೋಗಿದ್ದಾರೆ, ಬೇರೆ ಇನ್ಯಾರೂ ಬರ್ತಿಲ್ಲ, ಹೋಮಕ್ಕೆ ಶ್ರೋತ್ರಿಯರು ಒಂದಿಬ್ಬರು ಬರ್ತಿದ್ದಾರೆ, ಆದರೆ ಬಹಳ ಕಾಸ್ಟ್ಲಿ. ಇದೇ ರೀತಿ ಇನ್ನೂ ಹೆಚ್ಚಿನ ಹಬ್ಬ ಉತ್ಸವಗಳನ್ನು ಮಾಡೋಣ. ಅದೂ ಅಲ್ಲದೇ, ಈಗೀಗ ಕಾಲೋನಿಯ ವಾಸ ಇರುವವರ ಮನೆಗಳಲ್ಲಿ ಅವಘಢಗಳು ಜಾಸ್ತಿಯಾಗ್ತಿವೆ (ಮೊನ್ನೆ ತಾನೆ ಪಟ್ನಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡದ್ದು ನಿಮಗೆಲ್ಲಾ ತಿಳಿದಿರಲೇಬೇಕು). ದೇವರನ್ನೂ ತೃಪ್ತಿಪಡಿಸಿದಂತಾಗುವುದು’, ಎಂದಿದ್ದರು. ನನಗೋ ರಜೆ ಬಂದರೆ ಸಾಕು, ಮನೆಯಲ್ಲಿ ಮಲಗೋಣ ಅಂತ ಅನ್ನಿಸಿಬಿಟ್ಟಿರುತ್ತದೆ. ಈಗೀಗ ವಿಪರೀತ ಜನಸಂದಣಿಯಾಗಿರುವ ಲೋಕಲ್ ಟ್ರೈನ್‍ನಲ್ಲಿ ಹೋಗಿ ಬರೋದು, ಆಫೀಸಿನಲ್ಲಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡೋದು, ಸುಸ್ತು ತರಿಸುತ್ತಿದೆ. (ಇನ್ನೂ ಚಿಕ್ಕವರಾ, ಹೇಳಿ ಕೇಳಿ ಮೂರನೆಯ ಕತ್ತೆಯ ವಯಸ್ಸೂ ಕಳೆಯುತ್ತಾ ಬಂತು, ಅಂತೀರಾ!). ಅದೂ ಅಲ್ಲದೇ, ಈ ಕಾಲೋನಿಯಲ್ಲಿ ದಕ್ಷಿಣ ಭಾರತದವರು ಕಾಲುಭಾಗವಾಗಿದ್ದರೆ, ಅಷ್ಟೇ ಸಂಖ್ಯೆಯ ಬಂಗಾಳಿಗಳೂ, ಮತ್ತು ಇತರರೂ ಇದ್ದು, ಅವರಿಗೆ ಅವರ ಉತ್ಸವವನ್ನು ಮಾಡಲು ಅನುಕೂಲ ಮಾಡಿಕೊಡಬೇಕಾದ್ದು ನಮ್ಮ ಕರ್ತವ್ಯವಲ್ಲವೇ? ನಮ್ಮಗಳದ್ದೇ ಕಾರುಬಾರಾದ್ದರೆ, ಅವರಿಗೆ ಮುಖ ಚಿಕ್ಕದಾಗುವುದು, ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಭಾವನೆ ಬರುವುದು, ಸರ್ವೇ ಸಾಮಾನ್ಯದ ವಿಷಯ. ಈ ರೀತಿಯ ಚಿಂತನೆಯ ದಿಕ್ಕಿನಲ್ಲಿ, ವೆಂಕಟ್ರಾಮನ್ ಅವರ ಉತ್ಸುಕತೆಗೆ ಸ್ವಲ್ಪ ತಣ್ಣೀರೆರೆಚಿ, ’ಬಿಡಿ ಸಾರ್, ೧೦ ದಿನಗಳ ಗಣಪತಿ ಉತ್ಸವ ಆಚರಿಸ್ತೀವಲ್ಲ, ಅದೊಂದೇ ಸಾಕು’, ಎಂದಿದ್ದೆ. ಮುಂದೆ ಅವರನ್ನು ನನ್ನನ್ನು ಕೇಳದೆಯೇ ಈ ಚಂಡೀ ಹೋಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಷ್ಟಕ್ಕೂ ಈ ಹವನ ಹೋಮ ನಡೆಸುವುದರಿಂದ ಇನ್ಯಾರೂ ಸಾಯೋಲ್ವಾ? ಅವಘಢಗಳು ಆಗೋದೇ ಇಲ್ವಾ?

ನನ್ನನ್ನು ಹತ್ತಿರದಿಂದ ಬಲ್ಲವರು ಕೇಳುವ ಪ್ರಶ್ನೆ: ’ಅದ್ಸರ್ಯಲೇ ಭಾಡ್‍ಕೋವ್, ನೀನ್ಯಾಕೆ ಅವರೊಡನೆ ಮಂತ್ರ ಹೇಳ್ತಾ ಕುಳ್ತಿರ್ತೀಯಾ? ನೀನೇನ್ ದೇವ್ರನ್ ಕಂಡೀಯೇನಲೇ? ನೀನೇನ್ ಅವನೇಜೆಂಟಾ?’ :) – ಅದಕ್ಕೆ ನನ್ನ ಉತ್ತರವೆಂದರೆ, ’ಯಾರಿಗಾದರೂ ಮನಸ್ಸಮಾಧಾನ ಆಗೋ ಹಾಗಿದ್ರೆ ಆ ಕೆಲಸ ಮಾಡೋದು ಉಚಿತ, ಸಸ್ವರವಾಗಿ ಮಂತ್ರ ಹೇಳುತ್ತಿರುವಾಗ ಕೇಳುಗರ ಮನಕ್ಕೆ ಆನಂದ ಉಂಟಾಗುವುದು, ಅದು ಕರ್ಣಾನಂದ ಸಂಗೀತದಂತೆ ತೋರುವುದು’ – ಅಲ್ವಾ? ಅದಕ್ಕವರು, ’ಅಲ್ಲಲೇ ಬದ್ಮಾಷ್, ನಂಗಿಷ್ಟ ಆತತೆ, ನೀ ಸಾಯಿ ಅಂದ್ರೆ ಸಾಯ್ತೀಯೇನಲೇ?’ – ’ಹೆ ಹೆ ಹೆ! ಹಾಗೇನಾದ್ರೂ ಯಾರಾದ್ರೂ ಸೀರಿಯಸ್ಸಾಗಿ ಹೇಳ್ತಾರಾ? ನನ್ನ ನಂಬಿದವರು ಸುಮ್ನೆ ಕುಳಿತಿರ್ತಾರಾ? ಹಾಗೇನಾದ್ರೂ ಸಮಾಜಕ್ಕೆ ಒಳಿತಾಗುವಂತಿದ್ರೆ ಹಾಗೆಯೂ ಮಾಡುವೆ. :) ಹಾಗೆ ಸಾಯುವಂತಿದ್ದರೆ, ನಿಮ್ಮದೂ ಸಜೆಷನ್ ಕೇಳುವೆ – ಗೊತ್ತಾಯ್ತಾ’ – ಕ್ಷಮಿಸಿ ಎಲ್ಲಿಂದ ಎಲ್ಲಿಗೋ ಹೋಗ್ಬಿಟ್ಟೆ.

ನಾನು ಕಲಿತದ್ದು ನಾಲ್ಕಕ್ಷರ ವೇದ ಮಂತ್ರ. ಅದನ್ನು ಸಸ್ವರವಾಗಿ ಹೇಳಬಲ್ಲೆನೆಂಬ ನಂಬಿಕೆ ನನ್ನಲ್ಲಿದೆ. ನನ್ನ ವೇದಘೋಷವನ್ನು ಕೇಳಿದವರು, ಮತ್ತೆ ಮತ್ತೆ ಕೇಳಬೇಕೆನ್ನುವರು. ವೇದಘೋಷ ಮಾಡುವಾಗ, ನನಗರಿವಿಲ್ಲದಂತೆಯೇ ಅನಿರ್ವಚನೀಯ ಅನುಭವ ಆಗುವುದು. ಆ ಕೆಲವು ಸಮಯ ನಾನೀ ಲೋಕದಲ್ಲೇ ಇರುವುದಿಲ್ಲ. ಮನಸ್ಸಿನಲ್ಲಿ ಯಾವ ಯೋಚನೆಗಳೂ ಮೂಡುವುದಿಲ್ಲ. ಹಾಗೆಯೇ ಕೆಲವೊಮ್ಮೆ ಆ ಮಂತ್ರಗಳ ಅರ್ಥವನ್ನೂ ತಿಳಿಯಲು ಪ್ರಯತ್ನಿಸಿರುವೆ. ವೇದ ಮಂತ್ರದಲ್ಲಿ ಯಾವ ಮಾಯ ಮಾಟವೂ ಇಲ್ಲ. ಹಿರಿಯರು ಜೀವನದ ಪರಿಯನ್ನು ಅನುಭವಿಸಿ, ಅರಿತು, ಅದನ್ನೇ ಮುಂದಿನ ಪೀಳಿಗೆಗೆ ತಿಳಿಯಪಡಿಸಲು ಯತ್ನಿಸಿರುವರಷ್ಟೆ. ಆದರೆ ಈಗ ಹೆಚ್ಚಿನ ಜನಗಳು ಅದರರ್ಥವನ್ನು ತಿಳಿಯುವ ಗೊಡವೆಗೇ ಹೋಗಿಲ್ಲ. ಅದರಲ್ಲಿ ಮಡಿವಂತಿಕೆಯನ್ನು ತುಂಬಿ, ಜನಗಳಲ್ಲಿ ಭಯ ಭಕ್ತಿಯನ್ನು ಮೂಡಿಸಲು ಹೊರಟಿರುವರು. ಕೆಲವರಂತೂ ಅದರಿಂದ ಹಣ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಲೂ ಇರುವರು. ಇದನ್ನೆಲ್ಲಾ ನೋಡಿದರೆ, ಬದುಕು ಅಸಹ್ಯವೆನಿಸುವುದು, ಹೊಟ್ಟೆ ತೊಳಸಿದಂತಾಗುವುದು. ಮುಗ್ಧ ಜನಗಳ ಮನದ ಮೇಲೆ ಮೋಡಿ ಮಾಡಿ, ನಾವು ಮೆರೆಯುವುದು ಥರವಲ್ಲ.

ಮಂತ್ರ, ಮಾಯ, ಪೂಜೆ, ಹವನ, ಹೋಮ, ಇತ್ಯಾದಿ ನಡೆಸಿ ಮಳೆಯನ್ನು ಬರಿಸೋಕ್ಕಾಗತ್ತಾ? ಸಾವೇ ಇಲ್ಲದಿರುವಂತೆ ಮಾಡಲಾದೀತೇ? ಸಾವಿಲ್ಲದ ಮನೆಯಿಂದ ಸಾಸುವೆ ತರಲಾದೀತೇ? ಎಲ್ಲ ಹುಚ್ಚು ಕಲ್ಪನೆಗಳು. ನಮಗೆ ಮನಸ್ಸಂತೋಷ ಆಗುವಂತಿದ್ದರೆ, ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ನಮಗನ್ನಿಸಿದಂತೆ ಪೂಜೆ ಪುನಸ್ಕಾರ ನಡೆಸಿ, ಇಹಲೋಕದ ಋಣ ತೀರಿದ ನಂತರ, ಯಾರಿಗೂ ಹೇಳದೇ ಕಾಣದಂತಹ ಸ್ಥಾನಕಕ್ಕೆ ಹೋಗಿಬಿಡೋದು – ಅದನ್ಯಾರೂ ತಡೆಯಲಾಗೋಲ್ಲ. ಏನಂತೀರಿ?

ಹೇಡಿ?!

ಈತನನ್ನು ಹೇಡಿ ಎನಲೇ?

ನಮ್ಮ ಅಧಿಕಾರಿಯೊಬ್ಬ (ನಮ್ಮದೇ ಬ್ಲಾಕಿನಲ್ಲಿ ವಾಸವಿದ್ದರೂ, ಆತನ ಮನೆಯವರೆಲ್ಲರೂ ನನ್ನ ಮನೆಯವರಿಗೆ ಚಿರಪರಿಚಿತರಾದವರಾಗಿದ್ದರೂ, ನನಗೆ ಅವನು ಅಷ್ಟೇನೂ ಹತ್ತಿರದವನಾಗಿರಲಿಲ್ಲ), ಎಸ್ ಕೆ ಪಟ್ನಾಯಕ್. ಆದರೆ ಅವನ ಕುಟುಂಬ, ನನ್ನ ಕುಟುಂಬಕ್ಕೆ ಬಹಳ ಪರಿಚಿತರು. ಅವರ ಮನೆಯ ಆಗು ಹೋಗುಗಳ ಬಗ್ಗೆ ಆಗಾಗ್ಯೆ ಹೇಳುತ್ತಿರುತ್ತಾಳೆ. ಅವನ ಮಗ ಎಂಜಿನಿಯರಿಂಗ್ ಸೀಟನ್ನು ಉತ್ತಮ ದರ್ಜೆಯಲ್ಲಿ ಪಡೆದದ್ದು, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿದ್ದು, ಇತ್ಯಾದಿ ಹೇಳುತ್ತಲೇ ಇರುತ್ತಾಳೆ.

ಸುಶಾಂತ ಪಟ್ನಾಯಕ್ ಮತ್ತು ರೀಟಾ ಅವರುಗಳಿಗೆ ಆದಿತ್ಯ ಮತ್ತು ಅಂಶುಮಾನ್ ಎಂಬಿಬ್ಬರು ಮಕ್ಕಳು. ನಾವುಗಳು ಮುಂಬಯಿಗೆ ಬರುವಾಗಾಗಲೇ ಅವನು ಮುಂಬಯಿಗೆ ವರ್ಗವಾಗಿ ಬಂದಿದ್ದನು. ಅವನಿಗಾಗಲೇ ಮದುವೆಯಾಗಿ ಒಬ್ಬ ಮಗನಿದ್ದನು (ಆದಿತ್ಯ). ಆ ಮಗ ನರ್ಸರಿ ಶಾಲೆಗೆ ಹೋಗುತ್ತಿದ್ದನು. ನಮ್ಮಿಬ್ಬರ ಕುಟುಂಬಗಳು ಒಂದೇ ವಸಾಹತು ಸಂಕೀರ್ಣದಲ್ಲಿ ವಾಸಿಸುತ್ತಿದ್ದೆವು. ೧೯೯೭ರಲ್ಲಿ ನಾವು ಬೆಂಗಳೂರಿಗೆ ವರ್ಗವಾಗಿ ಹೋದಾಗಲೂ ಅವರಿನ್ನೂ ಮುಂಬಯಿಯಲ್ಲಿಯೇ ಇದ್ದರು. ಪಟ್ನಾಯಕನಿಗೆ ವರ್ಗವಾಗಿ ಹೋಗಲೇ ಬೇಕೆಂಬ ಸಮಯ ಬಂದಾಗ, ಮಕ್ಕಳ ಓದಿಗೆ ತೊಂದರೆ ಆಗಬಾರದೆಂದು, ಗುವಾಹತಿಗೆ ವರ್ಗ ತೆಗೆದುಕೊಂಡು ಹೋಗಿದ್ದನು. ಹಾಗೆ ಗುವಾಹತಿಗೆ ವರ್ಗವಾಗಿ ಹೋಗುವವರಿಗೆ, ಹಿಂದಿನ ಸ್ಥಳದಲ್ಲಿ ವಸಾಹತು ಉಳಿಸಿಕೊಳ್ಳಲು ಅವಕಾಶವನ್ನೀಯುವರು. ಮತ್ತೆ ನಾವು ಮುಂಬಯಿಗೆ ಬಂದೆವು. ಮತ್ತೆ ಅವರ ಸ್ನೇಹ ಬೆಳೆಯಿತು.

ಹೀಗೊಮ್ಮೆ ಗುವಾಹತಿಯಲ್ಲಿರುವಾಗ ಒಂದು ಚಿಕ್ಕ ಆಕ್ಸಿಡೆಂಟಿನಲ್ಲಿ ಪಟ್ನಾಯಕನಿಗೆ ಕಾಲಿಗೆ ಪೆಟ್ಟು ಬಿದ್ದಿತ್ತಂತೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದವನಿಗೆ ಗುಣವಾಗಲು ತಡವಾಗುವುದೆಂದು ಗಾಯಕ್ಕೆ ಹೊಲಿಗೆ ಹಾಕಿದ್ದರಂತೆ. ಹಾಗೆ ಹಾಕಿದ ಹೊಲಿಗೆಯ ಗಾಯ ಮಾಯಲೇ ಇಲ್ಲ. ಸ್ವಲ್ಪ ಸಮಯದ ಕಾಲಕ್ಕೆ ಡೆಪ್ಯೂಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಹೊಂಡಿದವನು, ಮುಂಬಯಿಗ ಬಂದಿದ್ದನು. ಮರಳಿ ಮುಂಬಯಿಗೆ ಬಂದ ಮೇಲೂ ಗಾಯ ವಿಪರೀತಕ್ಕೆ ತಿರುಗಿಕೊಂಡು, ಗ್ಯಾಂಗ್ರೀನ್ ಆಗಿತ್ತು. ಒಂದು ವರ್ಷಗಳ ಕಾಲ ಬ್ಯಾಂಕಿಗೆ ಹೋಗುವುದೇ ದುಸ್ತರವಾಗಿತ್ತು. ರಜೆಯೂ ಖಾಲಿಯಾಗಿ ಸಂಬಳ ಬರುವುದು ಕಷ್ಟವಾಗುವ ಪರಿಸ್ಥಿತಿಗೆ ಬಂದಿತ್ತು. ಆದರೆ ಈ ವಿಷಯಗಳನ್ನೆಲ್ಲಾ ಅವರುಗಳು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ತಾವೇ ಅನುಭವಿಸುತ್ತಿದ್ದರು. ಇದೇ ವೇಳೆಗೆ, ಮೊದಲನೆಯ ಮಗನಿಗೆ ಇನ್ಫೋಸಿಸ್‍ನಲ್ಲಿ ಕೆಲಸ ದೊರಕಿತು. ಅವನಿನ್ನೂ ಕೊನೆಯ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಎರಡನೆಯ ಹುಡುಗ ೯ನೆಯ ತರಗತಿಯಲ್ಲಿ ಓದುತ್ತಿರುವನು. ಮುಖ್ಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಓಡಾಡಲು ಕಷ್ಟವಾಗುವುದೆಂದು ಹತ್ತಿರದಲ್ಲಿರುವ (೧೪-೧೫ ಕಿ.ಮೀ.ದೂರ) ಬಾಂದ್ರಾದ ಕಛೇರಿಗೆ ವರ್ಗ ಮಾಡಿದ್ದರು. ಅವನ ಕೆಲಸ ಮಾಡುವ ಸ್ಥಳ ೮ನೆಯ ಮಹಡಿಯಲ್ಲಿ ಇತ್ತು. ನಿನ್ನೆ ಬುಧವಾರದಂದು ಕಛೇರಿಗೆ ಹೋದವನಿಗೆ ಕಾಲಿನ ನೋವು ತಡೆಯಲಾಗಲಿಲ್ಲ. ಮನಸ್ಸಿನಲ್ಲಿ ಅದೇನು ಹೊಳೆಯಿತೋ ಏನೋ, ಮೂತ್ರಾಲಯದ ಕಿಟಕಿಯಿಂದ ಹಾರಿ ಕೆಳಗೆ ಬಿದ್ದವನಿಗೆ ಕ್ಷಣದಲ್ಲಿಯೇ ಪ್ರಾಣ ಹೋಗಿತ್ತು. ಆತ್ಮಹತ್ಯೆಯಂತೆ ತೋರಿದ್ದರಿಂದ ಪೋಲೀಸರು ಬಂದು ಕೇಸನ್ನು ದರ್ಜಿಸಿ, ಹತ್ತಿರದ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿಸಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿರುವ ಇತರರು ಮೃತ ಶರೀರವನ್ನು ಕಾಲೋನಿಗೆ ತಂದಿದ್ದರು. ಅವರ ಹತ್ತಿರದ ನೆಂಟರಿಷ್ಟರೆಲ್ಲರೂ ಸೇರಿ ಮೃತ ದೇಹಕ್ಕೆ ಅಂತ್ಯ ಕ್ರಿಯೆಯನ್ನು ಮಾಡಿದ್ದಾಯಿತು.

ಛೇ! ಪಡಬಾರದ ಕಷ್ಟಗಳನ್ನೆಲ್ಲಾ ಜೀವನದಲ್ಲಿ ಪಟ್ಟು, ಜೀವನದ ಏರಿನ ತುದಿಯನ್ನೇರಿ, ಇಳಿಜಾರಿನ ಮುಂದೆ ನಿಂತವನು, ಹಾಯಾಗಿ ಇಳಿದು ಹೋಗೋದು ಬಿಟ್ಟು, ಇದ್ದಕ್ಕಿದ್ದಂತೆ ತನ್ನ ನಂಬಿದವರನು ಮರೆತು ಕಾಣೆಯಾಗಿ ಹೋಗಿಬಿಡೋದಾ? ಅಲ್ಲ ಅದ್ಯಾಕೆ ಹೀಗೆ ಮಾಡಿದನಿವನು? ನಂಬಿದವರು ಕಂಗಾಲಾಗುವರೆಂಬ ಚಿಂತೆ ಕೂಡ ಬರ್ಲಿಲ್ವೇ?

ಅಲ್ಲ – ಇವರುಗಳ ಮನಸ್ಸಿನಲ್ಲಿ ಅದೇನು ಯೋಚನೆ ಇರತ್ತೇ ಅಂತ. ಇದೇ ತರಹ ೧೯೯೦ರಲ್ಲಿ ಗುರುಸಿದ್ದಪ್ಪ ಕೊಡಿಯಾಲಮಠ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಅವನು ನಮ್ಮೊಂದಿಗೆ ಯಾವ ತೊಂದರೆಯನ್ನು ತೋಡಿಕೊಳ್ತಿದ್ನೋ ಅದು ತೊಂದರೆಯೇ ಅಲ್ಲವೆಂದು ಈಗ ತಿಳಿಯುತ್ತಿದೆ. ಹುಂ! ವಿಧಿ ಬರಹ ಹೀಗೆ ಎಂದೆನಿಸುತ್ತದೆ. ಹಗ್ಗವೂ ಕೂಡಾ ಕೆಲವೊಮ್ಮೆ ಹಾವಿನಂತೆ ತೋರಬಹುದೇನೋ. ಕೆಲವೊಮ್ಮೆ ನನ್ನ ಮಗಳಿಗೆ ಹೊಳೆಯುವ ಚಿಂತನೆ ನನಗದೇಕೋ ಹೊಳೆಯುವುದೇ ಇಲ್ಲ. ಇವಳೆಂತಹ ಜೀನಿಯಸ್ ಅಂತ ಆ ತಕ್ಷಣಕ್ಕೆ ಅನ್ನಿಸಿದರೂ, ನಂತರ ನಾನೆಂತಹ ಪೆದ್ದ – ಅವಳು ನಾರ್ಮಲ್ ಎಂದು ತಿಳಿಯುವುದು.

ಕೊಡಿಯಾಲಮಠನ ಬಗ್ಗೆ ಮತ್ತೊಮ್ಮೆ ಬರೆಯುವೆ.

ಶೋಷಣೆ? ಪೋಷಣೆ?

ಚಿತ್ರಕವನದಲ್ಲಿ ಪ್ರಕಟಿಸಿರುವ ಒಂದು ಬರಹ

poshaNe

poshaNe


೨೪ ಲೋಹದ ಸಲಾಕೆಗಳ ಚೌಕದೊಳಗೆ
ಹಿಡಿದಿಟ್ಟ ಚೇತನದ ಮುಖವಾಡ
ಫಳಫಳಿಸುವ ಕಂಗಳು
ಎತ್ತಲೋ ಕಣ್ ನೋಟ
ಇನ್ನೆತ್ತಲೋ ಮನದೋಟ
ಚಂಚಲ ಚಿತ್ತವಾದರೂ ಅರಸುತಿಹುದೇನು?

ಅಮ್ಮನ ಎದುರು ನೋಡುವಿಕೆಯೇ?
ತಿನಿಸು ತರಹೋದ ಅಕ್ಕನ ನಿರೀಕ್ಷೆಯಾ?
ಹೊಸ ಪಾಟಿ ಪುಸ್ತಿಕೆ ತರುವ ಅಪ್ಪನಾ?
ಒಮ್ಮಿಂದೊಮ್ಮೆಲೇ ಕಾಣದಾದ ಜಗವಾ?

ಅದೆತ್ತಲಿಂದ ಬಂತದು ಗಾಳಿ ಮಳೆ?
ಬಿಡಲಾಗದ ಕಣ್ಣನೂ ಝಗ್ಗೆನಿಸಿದಾ ಪ್ರವಾಹ
ಎವೆ ಮುಚ್ಚಿ ಬಿಡಲು
ಕಂಡಿದ್ದೆಲ್ಲವೂ ಕಾಣದಾಯಿತಲ್ಲ!
ಏನಾಯಿತು?
ಎಲ್ಲಿ ಹೋಯಿತು?

ಯಾವ ವಸ್ತುವಿನ ಪರದೆಯಲಿ ಈ ಕಣ್ಮುಚ್ಚಿದರೇನು
ಪುಟ್ಟನ ನೋಟವ ಹಿಡಿಯಲಾದೀತೇ?
ಕಂಗಳ ನೋಟ ಬದಲಿಸಲಾದೀತೇ?
ಆಸೆ ಆಕಾಂಕ್ಷೆಗಳ ಹೊತ್ತಿರುವ,
ಸಾಧಿಸದಿರುವುದ ಸಾಧಿಸುವ
ಪಣ ತೊಟ್ಟಿರುವ ಮನವ ಸೆರೆಹಿಡಿಯಲಾದೀತೇ?

ನಿಸರ್ಗ ಘೋರತೆಗೆ ಬಲಿಯಾದ ಪುಟ್ಟ ಕಂದಮ್ಮನ
ಮರಳಿ ಬಾಳ್ವೆ ಪಥದಲಿ ಇರಿಸಲು
ಇಂತಹ ಮನಕೆ, ತನುವಿಗೆ ನೀರೆರೆದು ಉಣಿಸಿ ತಣಿಸಿ ಪೋಷಿಸುವುದು
ಎಮ್ಮ ಕರ್ತವ್ಯ ಅಲ್ವೇ?

ಪೋಷಿಸಿ! ಎಮ್ಮನು ನಿಲ್ಲಿಸಿರುವ
ಈ ಜಗಕೆ ಋಣ ಸಲ್ಲಿಸುವಿಕೆ
ಪೋಷಿಸಿದವರ ನೆನಪಲಿ
ನೀಡಬಹುದಾದ ತರ್ಪಣ,
ಮುಂದಿನ ಪೀಳಿಗೆಗೆ
ನಾವು ಕೊಡಬಹುದಾದ
ಕೊಡಬೇಕಾದ ನೆರವಿನ ಹಸ್ತ
ನಮ್ಮ ಕರ್ತವ್ಯ – ಅಲ್ವೇ?

ವಿರಾರ್ ಫಾಸ್ಟ್

ವಿರಾರ ಪಶ್ಚಿಮ ರೈಲ್ವೇಯ ಲೋಕಲ್ ಟ್ರೈನ್‍ಗಳ ಕೊನೆಯ ಸ್ಥಾನಕ. ಚರ್ಚ್‍ಗೆಟಿನಿಂದ ಸುಮಾರು ೬೦ ಕಿಲೋಮೀಟರುಗಳ ದೂರವಿರುವ ಈ ಸ್ಥಾನಕ ತಲುಪಲು ಕನಿಷ್ಠ ಒಂದೂವರೆ ತಾಸು ಆಗುವುದು. ಬೆಳಗ್ಗೆ ೭ರಿಂದ ರಾತ್ರಿ ೧೧ರವರೆವಿಗೆ ಮುಂಬಯಿಯ ಲೋಕಲ್ ಟ್ರೈನ್‍ಗಳು ಡುಮ್ಮ ಹೊಟ್ಟೆಯಂತೆಯೇ ಕಾಣುತ್ತಿರುತ್ತವೆ. ಮೊದಲ ಸ್ಥಾನದಿಂದಲೇ ಒಂದಡಿ ಜಾಗವೂ ಇಲ್ಲದಷ್ಟು ಜನನಿಬಿಡವಾಗುರಿತ್ತದೆ. ಅದೆಲ್ಲಿಂದ ಜನ ಬರ್ತಾರೋ ಅದೆಲ್ಲಿಗೆ ಹೋಗ್ತಾರೋ ಆ ದೇವರಿಗೇ ಗೊತ್ತಾಗಬೇಕು. ಅಷ್ಟು ಜನಗಳಲ್ಲಿ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುವವರು ಯಾರು ಎಂದು ಕಂಡು ಹಿಡಿಯುವುದೂ ಬಲು ಕಷ್ಟ.

ಪಶ್ಚಿಮ ರೈಲ್ವೇಯಲ್ಲಿ ಚರ್ಚ್‌ಗೇಟ್ ಮತ್ತು ಕೇಂದ್ರ ರೈಲ್ವೇಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್‍ನಿಂದ ಹೊರಡುವ ಗಾಡಿಗಳು ಅಲ್ಲಿಯೇ ತುಂಬಿರುತ್ತದೆ. ಮುಂದಿನ ಸ್ಟೇಷನ್‍ಗಳಲ್ಲಿ ಹೇಗೆ ಜನಗಳು ಹತ್ತಬಹುದು ಮತ್ತು ಇಳಿಯಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಉಹುಂ! ಮುಂಬಯಿ ನೋಡದವರು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟ ಆಗಬಹುದು. ಹತ್ತುವಾಗ, ಹಿಂದಿನವರು ’ಚಲೋ ಚಲೋ, ಆಗೇ ಪೂರಾ ಖಾಲಿ ಹೈ, ಇಧರ್ ಹೀ ಕ್ಯೋಂ ಖಡೆ ಹೋಗಯಾ’ ಎಂದು ಹೇಳುತ್ತಿದ್ದರೆ, ಇಳಿಯುವಾಗ ’ಪ್ಯಾರ್ ಸೆ ಔರ್ ಪ್ರೆಮ್ ಸೆ ಧಕ್ಕಾ ಮಾರೊ ಭಾಯಿ, ಹಮ್ ಸಬ್ ಲೋಗ್ ಏಕ್ ಸಾಥ್ ಉತರೇಂಗೆ’ ಎಂದು ಹೇಳುತ್ತಾ ಬಾಗಿಲ ಹತ್ತಿರ ನಿಂತಿರೋವ್ರನ್ನೆಲ್ಲಾ ತಳ್ಳಿ ಇಳಿಸಿಬಿಡುವರು. ಮುಂದೆ ಹೋಗುವವರು ಅಲ್ಲೇನಾದರೂ ನಿಂತಿದ್ದರೆ, ಅವರನ್ನೂ ತಳ್ಳಿ ಇಳಿಸಿಬಿಡುವರು. ಸ್ಟೇಷನ್‍ನ ಪ್ಲಾಟ್‍ಫಾರಂ ಬಂದಾಗ ಬಾಗಿಲ ಬಳಿ ಏನಾದರೂ ನಿಂತಿದ್ದರೆ, ಎಸ್ಕಲೇಟರ್ ಮೇಲೆ ನಿಂತಂತಿರುತ್ತದೆ. ನಿರಾಯಾಸವಾಗಿ ಕೆಳಗಿಳಿರುತ್ತೇವೆ. ಇವರೆಲ್ಲಾ ಇಳಿದು ಮತ್ತೆ ಹತ್ತಲು ಹೋಗುವಷ್ಟರಲ್ಲಿ ಗಾಡಿ ಮುಂದೆ ಹೋಗಿರುತ್ತದೆ. ಏಕೆಂದರೆ, ಗಾಡಿ ೨೦ ಸೆಕೆಂಡುಗಳಷ್ಟೇ ನಿಲ್ಲುವುದು. ಅಷ್ಟರೊಳಗೆ ನೂರಾರು ಜನಗಳು ಇಳಿಯಬೇಕು, ಅವರು ಇಳಿಯುವುದರೊಳಗೇ ಹತ್ತುವವರು ಹತ್ತಬೇಕು.

ಇಲ್ಲಿಯವರಿಗೇನಾದ್ರೂ ಕನ್ನಡ ಅರ್ಥ ಆಗೋ ಹಾಗಿದ್ರೆ, ನಾನು ಹೀಗೆ ಹೇಳಿ ಛೇಡಿಸಬೇಕೆಂದಿರುವೆ – ಆಪ್ ಸೆ ಜೋ ಲೇಗಾ ಪಂಗಾ ಹೋ ಜಾಯೆಗಾ ಮಂಗಾ :P – ನಾಲ್ಗೆ ಹೊರಚಾಚ್ಬೇಡ್ವೋ ಮಂಗ್ಯಾ – ಮಂಗ್ಯಾನ ಮೋರೆಯ ನೋಡು ನರಸಿಂಗಾನ ಕೋರೆಯ ನೋಡು

ಸುಮ್ಮನೆ ಕುಳಿತುಕೊಳ್ಳಲಾಗದ ಮಂದಿ ಪಕ್ಕದವನ ಕೂದಲು ಸವರುವುದು, ಆತನ ಬ್ಯಾಗಿನ ಜಿಪ್‍ ಎಳೆದು ಗಟ್ಟಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸುವುದು, ಅಕ್ಕ ಪಕ್ಕದಲ್ಲಿರುವವರ ಅಂಗಿಯ ಗುಂಡಿಯನ್ನು ತಿರುವುದು, ಉಗುರಿನಲ್ಲಿ ಬಟ್ಟೆ ತೀಡುವುದು, ಇತ್ಯಾದಿ ಕುಚೇಷ್ಟೆಗಳನ್ನು ಮಾಡುತ್ತಿರುತ್ತಾರೆ. ಒಬ್ಬನನ್ನು ಕೇಳಿದೆ, ಏಕೆ ಹೀಗೆ ಮಾಡುತ್ತಿರುವೆ? ಅದಕ್ಕವನ ಉತ್ತರ, ’ಕ್ಯಾ ಕರೇಂಗೆ, ಆಫೀಸ್ ಮೇ ತೊ ಕಾಮ್ ಹೀ ಕಾಮ್ – ಘರ್ ಗಯಾ ತೋ ಜಂಜಟ್ – ಥೋಡ ಸಾ ಮಜಾ ಚಾಹಿಯೇ ನ (ಏನ್ಮಾಡೋದು, ಕಛೇರಿಯಲ್ಲಿ ಕೆಲಸವೇ ಕೆಲಸ, ಮನೆಗೆ ಹೋದರೆ ತೊಂದರೆ, ಸ್ವಲ್ಪ ತಮಾಷೆ ಬೇಕಲ್ಲ’) – ಅಲ್ಲ ಇವರಿಗೆ ತಮಾಷೆ ಬೇಕಂತೆ, ಅದಕ್ಕೆ ಸುಸ್ತಾಗಿ, ವಿರಮಿಸುತ್ತಿರುವ ಸಹ ಪ್ರಯಾಣಿಕರೇ ಬಲಿಪಶುಗಳಾಗಬೇಕಾ? ಮತ್ತೆ ಜಗಳ ಕೂಗಾಟ ಶುರು. ಬಾಗಿಲ ಹತ್ತಿರ ನಿಂತಿದ್ದರೆ, ಕುಳಿತಿದ್ದವರ ಮೇಲಿರುವ ಕಿಂಡಿಯಿಂದ ಮೆತ್ತಗೆ ತಲೆಗೆ ಬಬ್ಬಲ್‍ಗಮ್ ಅಥವಾ ಇನ್ನೇನನ್ನೋ ಅಂಟಿಸಿಬಿಡುವರು, ಅಥವಾ ಗಾಡಿ ಏರುತ್ತಿದ್ದ ಹಾಗೆಯೇ, ಅದೆಲ್ಲಿಂದ ಇವರುಗಳಿಗೆ ನಿದ್ರೆ ಬರುವುದೋ ಏನೋ ನಾಕಾಣೆ. ಕುಳಿತಿದ್ದರಂತೂ ಪರವಾಗಿಲ್ಲ, ನಿಂತಿದ್ದರೂ ಕಣ್ಮುಚ್ಚಿ ಇಹ ಲೋಕ ಮರೆವರು, ಮರೆತು ಪಕ್ಕದಲ್ಲಿರುವವನ ಮೇಲೆ ಓಲುವರು. ನನ್ನಂತಹ ದ್ರಾಬೆಯಾದರೆ, ಸುಮ್ಮನಿರುತ್ತೇನೆ, ಮತ್ತಿತರು ಯಾರೇ ಆದರೂ, ಅವರಿಬ್ಬರಲ್ಲಿ ಯಾರೊಬ್ಬರು ಇಳಿಯುವವರೆವಿಗೆ ಜಗಳ ಇದ್ದೇ ಇರುತ್ತದೆ. ಜಗಳ ಅಂದ್ರೆ ಹೊಡೆದಾಟ ಆಡೋಕ್ಕೆ ಅವರಿಗೆ ಇಷ್ಟವಿಲ್ಲ, ಸುಮ್ನೆ ಬಾಯಿಗೆ ಬಂದಂತೆ ಬೈಯುವುದು, ಪರರಾಜ್ಯದವರಾಗಿದ್ದರೆ, ಇಲ್ಲಿನ ಲೋಕಲ್ ಜನಗಳು, ಅವರನ್ನ ಕಸಿಯೋದಕ್ಕೆ ಬಂದ ಕಳ್ಳರು ಎಂದು ಹೇಳಿಸಿಕೊಳ್ಳಬೇಕಾಗುವುದು. ಇವರೇನು ಸುಮ್ಮನಿರೋಲ್ಲ, ಮಾತಿಗೆ ತಕ್ಕ ಹಾಗೆ ಪ್ರತಿ ಮಾತು ಆಡುವರು, ಅಕ್ಕ ಪಕ್ಕದಲ್ಲಿರುವವರಿಗೆ ತೊಂದರೆ ಮಾಡುವರು. ಅವರ ಸ್ಥಳದವರೇ ಇನ್ಯಾರು ಅಕ್ಕ ಪಕ್ಕದಲ್ಲಿದ್ದರೂ, ಪರಿಚಯವಿಲ್ಲದಿದ್ದರೆ, ಏನೂ ಸಂಬಂಧವಿಲ್ಲದಂತೆ ನಿಂತಿರುತ್ತಾರೆ. ಸ್ನೇಹಿತರಾಗಿದ್ದರೆ ಮಾತ್ರ, ಅವರೂ ಈ ಜಗಳದಲ್ಲಿ ಭಾಗಿಯಾಗುವರು. ಅಷ್ಟಲ್ಲದೇ ಇಳಿಯುವಾಗ ಅಥವಾ ಹತ್ತುವಾಗ ಜಾಗವಿರಲಿ ಇಲ್ಲದಿರಲಿ, ಇತರರ ಕಾಲು ತುಳಿದುಕೊಂಡೇ ಹೋಗುವರು. ಮುಖ ನೋಡಿದ್ರೆ, ಸ್ಸಾರಿ ಎಂಬ ಪದ ಇದ್ದೇ ಇದೆಯಲ್ಲ. ಹೆಚ್ಚೇನಾದರೂ ಮಾತನಾಡಿದ್ರೆ, ಅಕ್ಕ ಪಕ್ಕದವರು, ’ಅರ್ರೇ! ವೊ ತೋ ಸ್ಸಾರಿ ಬೋಲಾನ – ತುಮ್ ಕಾಯ್ ಕೊ ಚಿಲ್ಲಾತೇ ಹೋ – ಕಿಧರ್ ಸೆ ಆಯಾ ರೇ?’ ಜಾಸ್ತಿ ಮಾತನಾಡೋದು ಥರವಲ್ಲ ಅಂತ ಸುಮ್ಮನಾಗುವುದು ಲೇಸು. ಮಾರನೆಯ ದಿನ ಮತ್ತೆ ಅದೇ ಮನುಷ್ಯ ಬರ್ತಾನೋ ಇಲ್ವೋ ಅಂತ ಕಾಯ್ತಿರ್ತಾರೆ. ಅಲ್ಲ! ಅವರಿಬ್ಬರಲ್ಲಿ ವೈಮನಸ್ಯವಿಲ್ಲ. ಜಗಳ ಆಡೋದ್ರಲ್ಲಿ ಅದೇನೋ ಅತೀವ ಪ್ರೇಮ ಉಂಟಾಗುವುದಂತೆ. ಲೋಕಲ್ ಟ್ರೈನ್‍ನಲ್ಲಿ ಒಮ್ಮೆ ಓಡಾಡಿದರೆ, ಅಲ್ಲಿ ಬರುವ ಹೋಗುವವರೆಲ್ಲರೂ ನಮ್ಮವರೇ ಎಂದೆನ್ನಿಸುತ್ತದೆ. ಏನಾದರೂ ತೊಂದರೆ ಆದರೆ, ಆಗ ಎಲ್ಲರೂ ಒಟ್ಟಾಗಿ ಸಹಾಯಿಸುವ ದೃಶ್ಯ ಮಾತ್ರ ಅವರ್ಣನೀಯ. ಹೀಗಿದೆ ಇಲ್ಲಿಯ ಮಾನವ ಸಂಬಂಧ, ಅತೀತ attachment.

ಈ ಲೋಕಲ್ ಬಗ್ಗೆ ನಾನು ಹಿಂದೆ ಬರೆದಿದ್ದ ಒಂದು ಕವನ ಮತ್ತೆ ನೆನಪಿಗೆ ತರುವೆ

ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ
ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ

ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ
ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ
ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ
ಅದರ ಅನುಭವ ನಿಮಗೇನು ಗೊತ್ತು ಬಿಡಿ

ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು
’ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ’
ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ
ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ

ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ
ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ
ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ
ಅವರ್ನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ

ನಿಯತಕಾಲದಂತೆ dutyಗೆ ಬರುವನು ಆ ಭಿಕ್ಷುಕ
ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ್)
ಹೊಸಬರಿಗೆ ಇಲ್ಲಿಯಾಗುವುದು ಪರದಾಟ
ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ

ಸಿತಲಾ ಸಪ್ತಮಿ

ಈ ಲೇಖನ ಇಲ್ಲಿ ಪ್ರಕಟವಾಗಿದೆ

ಈ ಹೆಸರು ಕೇಳಿರುವಿರಾ? ಇದೊಂದು ಉತ್ಸವದ ದಿನ ಎಂದರೆ ಅಚ್ಚರಿಯಾ? ಈ ಆಚರಣೆಯು ಗುಜರಾತ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಹೆಚ್ಚಿನದಾಗಿ ಪ್ರಚಲಿತವಾಗಿದೆಯಂತೆ.

ನಿನ್ನೆಯ ದಿನ ಸಂಜೆ ೪ ಘಂಟೆಗೇ ನಮ್ಮಲ್ಲಿಯ ಮ್ಯಾನೇಜರ್ ಶಹಾ ಬೇಗ ಮನೆಗೆ ಹೋಗಬೇಕು ಎಂದು ನನ್ನ ಅನುಮತಿ ಕೇಳಿದ. ಅಲ್ಲಪ್ಪ, ಇವತ್ತು ಶುಕ್ರವಾರ – ನಾಳೆ ನಾಡದ್ದು ರಜೆಯಾದ್ದರಿಂದ, ಎಲ್ಲ ಕೆಲಸವನ್ನೂ ಇಂದೇ ಮುಗಿಸಬೇಕು. ಹಾಗೆ ಬೇಗ ಹೋಗಲು ಇವತ್ಯಾವ ಹಬ್ಬವಿದೆ. ಗೋಕುಲಾಷ್ಟಮಿ ನಾಡದ್ದು ಎಂದೆ. ಅದಕ್ಕವನು, ನಹಿಂ ಸಾಬ್, ಕಲ್ ಸಿತಲಾ ಸಪ್ತಮಿ, ಘರ್ ಮೆ ಚೂಲ್ಹಾ ನಹೀಂ ಜಲಾನ ಹೈ. ಕಲ್ ಕಾ ಖಾನಾ ಆಜ್ ಹೀ ಪಕಾನೇಕ ಹೈ – ಉಸ್ ಲಿಯೆ ಜಲ್ದಿ ಘರ್ ಜಾಕೆ ಮೈ ಮದದ್ ಕರನಾ ಹೈ, ಎಂದಿದ್ದ (ಇಲ್ಲ ಸಾಹೇಬ್ರ, ನಾಳೆ ಸಿತಲಾ ಸಪ್ತಮೀ, ಮನೆಯಲ್ಲಿ ಒಲೆ ಹಚ್ಚುವಂತಿಲ್ಲ, ನಾಳೆಯ ಊಟದ ತಯಾರಿ ಇಂದೇ ಮಾಡಬೇಕು – ಆದ್ದರಿಂದ ಬೇಗ ಮನೆಗೆ ಹೋಗಿ, ಸಹಾಯಿಸಬೇಕು). ಇದ್ಯಾವುದಪ್ಪ, ನಾನು ಕೇಳಿರದ ಹೊಸ ಹಬ್ಬ ಎಂದು ಅದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಲು ಅವನಿಗೆ ಕೇಳಿದೆ. ಅದಕ್ಕವನು, ನನಗೆ ಅದರ ಬಗ್ಗೆ ಹೆಚ್ಚಿನದಾಗಿ ಗೊತ್ತಿಲ್ಲ. ಆದರೆ, ಹಿಂದೆ ಸಿಡುಬು ರೋಗ ತಗುಲಿದಾಗ, ಅದನ್ನು ಗುಣಪಡಿಸಲು ಸಿತಲಾದೇವಿ ಅರ್ಥಾತ್ ಮಾರಮ್ಮನನ್ನು ಒಲಿಸಿಕೊಳ್ಳಲು ಮಾಡುತ್ತಿದ್ದ ವ್ರತವಿದು ಎಂದು ಬೇಗ ಹೊರಟು ಹೋದ. ಹೋದವನು ಸುಮ್ಮನೆ ಹೋದನಾ! ನನ್ನ ತಲೆಯಲ್ಲಿ ಸಿತಲಾದೇವಿಯ ಹುಳ ಬಿಟ್ಟು ಹೋಗಿದ್ದ. ಸಂಜೆ ಮನೆಗೆ ಬರುವವರೆವಿಗೂ ನನ್ನ ಎಲ್ಲ ಸ್ನೇಹಿತರನ್ನೂ (ಬೇರೆ ಬೇರೆ ಪ್ರದೇಶಗಳಿಂದ ಬಂದಿರುವವರು) ಕೇಳಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅದು ಹೀಗಿದೆ:

ಸ್ವಾತಂತ್ರ್ಯಾ ಪೂರ್ವದ ದಿನಗಳಲ್ಲಿ ಜನಗಳು ಸಿಡುಬು ರೋಗ ತಗುಲಿ ಸಾಯುತ್ತಿದ್ದುದು ಸಾಮಾನ್ಯ ಎಂಬುದನ್ನು ಬಲ್ಲೆವು. ಅದಕ್ಕೆ ಲಸಿಕೆ ಲಭ್ಯವಾಗುವರೆವಿಗೂ, ಅದರ ಬಗ್ಗೆ ಮೂಢ ನಂಬಿಕೆ ಇರುವ ಜನಗಳು, ಅದು ಮಾರಿಯ ಕೋಪ ಎಂದೇ ಪರಿಗಣಿಸಿದ್ದರು. ಅದೂ ಅಲ್ಲದೇ ಈ ಸಾಂಕ್ರಾಮಿಕ ರೋಗ ತಗುಲಿದವರನ್ನು ಊರಿನಿಂದ ಹೊರಗೆ ಇಡುತ್ತಿದ್ದರು. ಹಾಗಾಗಿ ಮಾರಿಯ ದೇಗುಲವನ್ನು ಊರ ಹೊರಗೆ ಕಾಣಬಹುದು. ಈಕೆಯನ್ನು ಗ್ರಾಮದೇವತೆಯೆಂದೂ ಆರಾಧಿಸುವರು. ಮರಗಳ ಕೆಳಗೆ ಅಥವಾ ಸ್ಮಶಾನದ ಹತ್ತಿರ ಈ ದೇಗುಲವನ್ನು ಕಾಣುವುದು ಸಾಮಾನ್ಯ. ಗುಜರಾತ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಈ ದೇವಿಯ ಆರಾಧನೆ ಹೆಚ್ಚು. ಈ ಮಾರಮ್ಮ ದೇವಿಯನ್ನು ಒಲಿಸಿಕೊಂಡು, ರೋಗ ನಿವಾರಣೆ ಮಾಡಿಕೊಳ್ಳಲು ಶ್ರಾವಣ ಮಾಸದ ಸಪ್ತಮಿಯಂದು ಸಿತಲಾ ಸಪ್ತಮೀ ಎಂದು ಆಚರಿಸಲು ಆರಂಭಿಸಿದರು. ಸಿತಲಾ ಶೀತಲಾ ದೇವಿ ಎಂದರೆ ತಂಪಾಗಿರಿಸುವ ದೇವತೆ ಎಂದರ್ಥ. ಬಂಗಾಲ ಅಸ್ಸಾಮ ಪ್ರಾಂತದಲ್ಲಿ ಶೀತಲದೇವಿಯೆಂದೂ, ಮಹಾರಾಷ್ಟ್ರ ಗುಜರಾತ ಸಿಂಧ ಪ್ರಾಂತಗಳಲ್ಲಿ ಸಿತಲೆಯೆಂದೂ ಮತ್ತು ತಮಿಳುನಾಡಿನಲ್ಲಿ ಮಾರಮ್ಮನೆಂದೂ ಆರಾಧಿಸುವ ಶಕ್ತಿದೇವತೆ ಇವಳು. ಜನಗಳ ನಂಬಿಕೆಯಂತೆ ಈ ದೇವಿಯು ವಿಧವೆಯರು ಮತ್ತು ಮಕ್ಕಳಿರುವ ತಾಯಂದಿರ ಪ್ರಾರ್ಥನೆಯನ್ನು ಸ್ವೀಕರಿಸಿ ಅವರ ಮನದಿಂಗಿತವನ್ನು ಶೀಘ್ರವಾಗಿ ಪೂರೈಸುವಳಂತೆ. ಈಕೆಯ ಪ್ರತಿಮೆಯನ್ನು ಕಲ್ಲಿನ ರೂಪದಲ್ಲೂ ಮತ್ತು ಬೇವಿನ ವೃಕ್ಷದ ರೂಪದಲ್ಲೂ ಆರಾಧಿಸುವರು. ಬೇವು ತನುವನ್ನು ತಂಪಾಗಿರಿಸುವ ಶಕ್ತಿಯನ್ನು ಹೊಂದಿದೆ.

ಇಂದಿನ ವಿಶೇಷತೆ ಏನೆಂದರೆ, ಮನೆಯಲ್ಲಿ ಉರಿ ಹಚ್ಚಬಾರದು, ಅಡುಗೆ ಮಾಡಬಾರದು, ಬಿಸಿ ಪದಾರ್ಥಗಳನ್ನು ಸೇವಿಸಬಾರದು. ಹಿಂದಿನ ದಿನ ಎಂದರೆ ಷಷ್ಠಿಯಂದು ಅಡುಗೆ ಮಾಡಿ, ಸಪ್ತಮಿಯಂದು ಅದನ್ನೇ ಸೇವಿಸಬೇಕು. ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ತನುವೂ ತಣ್ಣಗಿರುವುದು, ಬಿಸಿ ಏರುವ ಜ್ವರವೂ ಕಡಿಮೆ ಆಗುವುದು ಎಂಬ ನಂಬಿಕೆ.

ಕತ್ತೆಯು ಸಿತಲಾ ದೇವಿಯ ವಾಹನವಂತೆ. ಆ ದೇವಿಯ ಆರಾಧನೆಯಿಂದ ಕುರುಡರಿಗೆ ದೃಷ್ಟಿಯನ್ನೂ, ಅಂಗವೈಕಲ್ಯರಿಗೆ ಸುಂದರ ದೇಹವನ್ನೂ, ಬಡವರಿಗೆ ಸಿರಿ ಸಂಪತ್ತನ್ನೂ ಮತ್ತು ಬಂಜೆಗೆ ಮಕ್ಕಳನ್ನೂ ದಯಪಾಲಿಸುವಳೆಂದು ನಂಬುವರು. ಈ ದೇವಿಗೆ ಕೋಳಿ, ಕುರಿಯ ರಕ್ತವನ್ನೂ ಅರ್ಪಿಸುವುದು ವಾಡಿಕೆಯಲ್ಲಿದೆ. ಕೆಂಪು ಸೀರೆಯನ್ನುಟ್ಟು ಕೈಗಳಲ್ಲಿ ಪೊರಕೆಯನ್ನೂ, ಬೀಸಣಿಕೆಯನ್ನೂ, ತ್ರಿಶೂಲವನ್ನೂ ಮತ್ತು ಕಪಾಲವನ್ನೂ ಹಿಡಿದಿರುವ ಚಿತ್ರದಂತೆ ರೂಪಿಸುವರು. ಈ ದೇವತೆಯ ಒಂದು ಚಿತ್ರ ಹೀಗಿದೆ.

ಸಿಡುಬಿನ ಪಿಡುಗು ಈಗ ಕಡಿಮೆಯಾಗಿದ್ದರೂ ಸಿತಲಾ ದೇವಿಯ ಆರಾಧನೆ ಮಾತ್ರ ಕಡಿಮೆ ಆಗಿಲ್ಲ. ವಿವಿಧ ಭಾಷೆ, ಜೀವನ ಸ್ವರೂಪವನ್ನು ಹೊಂದಿರುವ ಪ್ರಾಂತ್ಯಾರು ಜನಗಳನ್ನು ಒಂದೆಡೆ ಸೇರಿಸುವ ರಾಷ್ಟ್ರೀಯ ದೇವತೆಯನ್ನು ಆರಾಧಿಸುವ ಸ್ವರೂಪದಲ್ಲಿ ಒಗ್ಗಟ್ಟನ್ನು ಮೂಡಿಸುವ ಪ್ರಯತ್ನ ಇರುವುದು ಒಳ್ಳೆಯದೇ ಅಲ್ಲವೇ?

« Older entries Newer entries »