ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ
ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ
ಕದರು ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮ
ಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ
ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮ
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ
ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮ
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ
ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ
ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ
ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ
ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ
ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ
ಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ
ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ
ತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ